ಶಶಾಂಕಣ
shashidhara.halady@gmail.com
ಹನ್ನೆರಡನೆಯ ಶತಮಾನದಲ್ಲಿ ಮೈಥಿಲಿ ಭಾಷೆಯ ಶಾಸನಗಳನ್ನು ಆ ಭಾಷೆಗೆಂದೇ ಬಳಕೆಯಾಗುತ್ತಿದ್ದ ತಿರಹುತಾ ಲಿಪಿಯಲ್ಲಿ ಬರೆಯಲಾಗುತ್ತಿತ್ತು. ಆದರೆ, ಈಚಿನ ನೂರು ವರ್ಷಗಳಲ್ಲಿ ಮೈಥಿಲಿ ವಿನಾಶದ ದಾರಿ ಹಿಡಿದಿದೆ. ಅಡುಗೆ ಮನೆಯ ಭಾಷೆಯಾಗಿಬಿಟ್ಟಿದೆ. ಹಿಂದಿಯ ಪ್ರವಾಹದೆದುರು ಮೈಥಿಲಿ ಕೊಚ್ಚಿ ಹೋಗಿದೆ.
ನಮ್ಮ ಮನೆಯ ಹತ್ತಿರ ಬಟ್ಟೆ ಇಸ್ತ್ರಿ ಮಾಡುವ ವ್ಯಕ್ತಿಯೊಬ್ಬನಿದ್ದಾನೆ. ಇನ್ನೂ ಹುಡುಗುಪ್ರಾಯ. ಚಿಗುರು ಮೀಸೆ. ಅವನಿಗೆ ಮೊದಲ ಬಾರಿ ಬಟ್ಟೆ ಇಸ್ತ್ರಿ ಮಾಡಲು ಕೊಡುತ್ತಿದ್ದುದರಿಂದ, ಟೆಸ್ಟ್ ಮಾಡೋಣ ಎಂದು ಐದು ಬಟ್ಟೆ ಕೊಟ್ಟೆ. ಇನ್ನೂ ತರಬೇತಿಯ ಹಂತದಲ್ಲಿದ್ದಅಂತ ಕಾಣುತ್ತೆ, ಇನ್ನೊಬ್ಬ ಯುವಕ ಬಂದು ಅವನಿಗೆ ಸರಿಯಾಗಿ ಇಸಿ ಮಾಡಲು ಹೇಳಿಕೊಡುತ್ತಿದ್ದ.
ಇಬ್ಬರೂ ಉತ್ತರ ಭಾರತದವರು. ಬೆಂಗಳೂರಿನಲ್ಲಿ ನಾಲ್ಕು ಫ್ಲಾಟ್ಗಳಲ್ಲಿದ್ದ ಬ್ರಹ್ಮಚಾರಿ ವೈದ್ಯರಿಗೆ ಅಡುಗೆ ಮಾಡಿಕೊಡುವ ಮುಖ್ಯ ಕೆಲಸ; ಬಿಡುವಿನ ವೇಳೆಯಲ್ಲಿ ಇಸ್ತ್ರಿ ಮಾಡುತ್ತಾರೆ. ನಿಧಾನವಾಗಿ ಮಾತಿಗೆಳೆದೆ. ಅವರಿಬ್ಬರೂ ಬಿಹಾರದ ಉತ್ತರ
ಭಾಗದವರಂತೆ. ಇಸ್ತ್ರಿ ಮಾಡಿಕೊಡಲು ಹೇಳಿಕೊಡುವಾಗ, ಅವರ ಭಾಷೆಯಲ್ಲಿ ಮಾತನಾಡಿಕೊಳ್ಳುತ್ತಿದ್ದರು. ‘ನಿಮ್ಮದು ಯಾವ ಭಾಷೆ?’ ಎಂದು ಕೇಳಿದೆ.
‘ಮೈಥಿಲಿ’ ಎಂದು ಹೆಮ್ಮೆಯಿಂದ ಹೇಳಿಕೊಂಡ, ಇಸ್ತ್ರಿ ತರಬೇತಿ ನೀಡುತ್ತಿದ್ದ ವ್ಯಕ್ತಿ. ಅವರಿಬ್ಬರೂ ಅಣ್ಣತಮ್ಮಂದಿರು. ತಮ್ಮ ಭಾಷೆಯು ರಾಮಾಯಣದ ಸೀತಾಮಾತೆಯ ಭಾಷೆ ಎಂಬ ಹೆಮ್ಮೆಯನ್ನು ಆ ಅಣ್ಣ ವ್ಯಕ್ತಪಡಿಸಿದ. ಇಬ್ಬರಿಗೂ ‘ಕನ್ನಡ್ ಗೊತ್ತಿಲ್ಲ!’ ನನ್ನ ಅರ್ಧಂಬರ್ಧ ಹಿಂದಿಯಲ್ಲಿ ಸಂಭಾಷಣೆ ಸಾಗಿತು. ‘ಮೈಥಿಲಿಗೂ ಹಿಂದಿಗೂ ಏನು ವ್ಯತ್ಯಾಸ?’ ಎಂದು ಕೇಳಿದೆ.
‘ಹೆಚ್ಚು ಕಡಿಮೆ ಒಂದೇ ರೀತಿ ಇದೆ, ಶೇ. 70ರಷ್ಟು ಪರಸ್ಪರ ಅರ್ಥವಾಗುತ್ತದೆ’ ಎಂದ ಆ ಅಣ್ಣ. ಬಿಹಾರದ ಉತ್ತರ ಭಾಗದಲ್ಲಿ ಮತ್ತು ನೇಪಾಳದ ವಿಶಾಲ ಪ್ರದೇಶದಲ್ಲಿ ಮೈಥಿಯಯನ್ನು ಮಾತನಾಡುತ್ತಾರೆ. ಒಂದು ಕಾಲದಲ್ಲಿ ರಾಜಾಶ್ರಯವಿದ್ದ ಭಾಷೆ ಅದು. ‘ಬಿಹಾರದ ಶಾಲೆಗಳಲ್ಲಿ ಮೈಥಿಲಿ ಭಾಷೆಯನ್ನು ಕಲಿಸುತ್ತಾರಾ?’ ಎಂದು ಕೇಳಿದೆ. ‘ಒಂದು ಸಬ್ಜೆಕ್ಟ್ ರೀತಿಯಲ್ಲಿ ಸ್ವಲ್ಪ ಸ್ವಲ್ಪ ಹೇಳಿಕೊಡುತ್ತಾರೆ. ಅದು ಬಿಟ್ಟರೆ ಬೇರೆ ಹಿಂದಿಯಲ್ಲಿ ಪಾಠ’ ಎಂದ ಅಣ್ಣ. ಗಣಿತ, ಸಮಾಜ ವಿಜ್ಞಾನ ಎಲ್ಲವನ್ನೂ ಹಿಂದಿಯ ಹೇಳಿಕೊಡುತ್ತಾರೆ ಎಂದನಾತ.
ಅವರ ಮಾತೃಭಾಷೆ ಮೈಥಿಲಿ, ಹತ್ತನೆಯ ಶತಮಾನದಿಂದಲೂ ಸಾಹಿತ್ಯ ರಚನೆಗೊಂಡ ಪುರಾತನ ಭಾಷೆ. ಆ ಭಾಷೆಗೆ ಅದಕ್ಕೂ ಮುಂಚಿನ ಇತಿಹಾಸವೂ ಸಾಕಷ್ಟಿದೆ. ರಾಮಾಯಣದ ಕಾಲದಲ್ಲೇ ಇದೆ ಎಂಬ ಹೆಮ್ಮೆಯನ್ನು ಆ ಜನರು ವ್ಯಕ್ತಪಡಿಸಬೇಕಾದರೆ, ಅದು ಪುರಾತನ ಭಾಷೆಯೇ ಆಗಿರಬೇಕಲ್ಲವೆ!
ಆದರೆ, ಅವರು ವಾಸಿಸುವ ಪ್ರದೇಶದ ಶಾಲೆಗಳಲ್ಲಿ ಬೋಧನಾ ಮಾಧ್ಯಮ ಹಿಂದಿ. ಗಣಿತ, ಸಮಾಜ, ವಿಜ್ಞಾನ ಮತ್ತಿತರ ವಿಷಯಗಳನ್ನು ಹಿಂದಿಯ ಬೋಧಿಸುತ್ತಾರೆ. ಈ ಸಹೋದರರು ತಮ್ಮ ಊರಿಗೆ ಪತ್ರ ಬರೆಯುವುದಾದರೆ ಹಿಂದಿಯ ಬರೆಯು ತ್ತಾರೆ. ನಾನೇ ಕೇಳಿದೆ ‘ಅಲ್ಲಪ್ಪಾ, ಸೀತಾಮಾತೆಯ ಭಾಷೆ ನಿಮ್ಮದು ಎಂದು ಹೇಳ್ತೀಯ, ಅದನ್ನು ಬರೆಯುವುದಾದರೆ ಬೇರೆ ಲಿಪಿ ಇದೆಯಾ? ಈಗಿನ ಪರಿಸ್ಥಿತಿ ಹೇಗಿದೆ?’ ‘ನಾವು ಮನೆಯಲ್ಲಿ ಮಾತ್ರ ಮೈಥಿಲಿ ಮಾತನಾಡುವುದು. ಹಳ್ಳಿಯ ಜನರು ಕೆಲವರು ಮೈಥಿಯಲ್ಲಿ ಮಾತನಾಡುವುದುಂಟು.
ಹೊರಗಿನವರು ಬಂದರೆ ಹಿಂದಿಯೇ ಮುಖ್ಯ ಭಾಷೆ. ಮೈಥಿಲಿ ಭಾಷೆಯನ್ನು ಬರೆಯುವುದಾದರೆ, ಹಿಂದಿ (ದೇವ ನಾಗರಿ)ಯಲ್ಲಿ ಬರೆಯುತ್ತೇವೆ’ ಎಂದನಾತ. ಅಷ್ಟರಲ್ಲಿ ಇಸಿ ಮಾಡಿದ್ದು ಮುಗಿಯಿತು. ನಾನು ಬಟ್ಟೆ ಪಡೆದು ಮನೆಗೆ ಬಂದೆ. ಮೈಥಿಲಿ ಭಾಷೆಯ ಇಂದಿನ ಸ್ಥಿತಿ ಹೇಗಿದೆಯೆಂದರೆ, ಅದೊಂದು ಸ್ವತಂತ್ರ ಭಾಷೆ, ಪುರಾತನ ಭಾಷೆ ಮತ್ತು ಅದರ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕು
ಎಂಬ ಅಭಿಲಾಷೆ ಅಲ್ಲಿನ ಜನಸಾಮಾನ್ಯರಲ್ಲಿ ಇಲ್ಲ.
ಅಲ್ಲಿನ ಸರಕಾರಿ ಶಾಲೆಗಳಲ್ಲೂ ಬಹುಕಾಲದಿಂದ ಹಿಂದಿ ಮಾಧ್ಯಮದಲ್ಲಿ ಬೋಧನೆ ನಡೆಯುತ್ತಿರುವುದರಿಂದ, ಮೈಥಿಲಿಯ ಇಂದು ಅಡುಗೆ ಮನೆ ಭಾಷೆಯಾಗಿ ಪರಿವರ್ತನೆಗೊಮಡಿದೆ. ತಮ್ಮ ಭಾಷೆಯು ಅಧಿಕೃತ ವ್ಯವಹಾರಕ್ಕೆ ಅಲ್ಲ, ಅಡುಗೆ ಮನೆ ಯಲ್ಲಿ ಮಾತನಾಡಲು, ಮನೆಯವರು ಮಾತನಾಡಲು ಮಾತ್ರ ಅಲ್ಲಿನ ಜನಸಾಮಾನ್ಯರು ಅಂದುಕೊಂಡು, ಅದಕ್ಕೇ ಒಗ್ಗಿಕೊಂಡಿದ್ದಾರೆ.
ಅಚ್ಚರಿಯೆಂದರೆ, ಮೈಥಿಲಿ ಭಾಷೆಗೆ ಪ್ರತ್ಯೇಕ ಲಿಪಿಯಿದೆ ಮತ್ತು ಉನ್ನತ ಇತಿಹಾಸವಿದೆ. ಬಂಗಾಳಿ ಲಿಪಿಯನ್ನು ಹೋಲುವ ಮೈಥಿಲಿ (ಮಿಥಿಲಾಕ್ಷರ ಅಥವಾ ತಿರ್ಹುತಾ) ಲಿಪಿಯಲ್ಲಿ ಸಾಕಷ್ಟು ಸಾಹಿತ್ಯ ರಚನೆಯಾಗಿದೆ. ಮೈಥಿಲಿ ಭಾಷೆಯ ಮೊದಲ ಗದ್ಯಕೃತಿಯು ಜ್ಯೋತಿರೀಶ್ವರ ಠಾಕೂರ್ ರಚಿಸಿದ ‘ವರ್ಣ ರತ್ನಾಕರ’ ಕೃತಿ. ಇದರ ಕಾಲ ಸುಮಾರು ಸಾ.ಶ.13.24. (ಇದು ವಡ್ಡಾರಾ ಧನೆಗಿಂತ ಈಚಿನದು) ಆದರೆ ಬ್ರಿಟಿಷರ ಆಳ್ವಿಕೆ ಬಂದ ನಂತರದ ಕಾಲಘಟ್ಟದಲ್ಲಿ, ಅವರು ರೂಢಿಗೆ ತಂದ ಜಮೀಂದಾರಿಕೆಯ ಆಳ್ವಿಕೆಯಲ್ಲಿ, ಮೈಥಿಲಿ ನಿಧಾನವಾಗಿ ಮೂಲೆಗುಂಪಾಯಿತು.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ, ಶಿಕ್ಷಣ ಮಾಧ್ಯವಾಗಿ ಹಿಂದಿಯೇ ಪ್ರಧಾನವಾಗಿ ಮುನ್ನೆಲೆಗೆ ಬಂದಿದ್ದರಿಂದ, ಮೈಥಿಲಿಯು ಇಂದು ಜನಸಾಮಾನ್ಯ ಅಡುಗೆ ಮನೆ ಭಾಷೆಯಾಗಿ ರೂಪಾಂತರಗೊಂಡಿದೆ. ಇದನ್ನು ಬಿಹಾರದ ಜನರು ಹಿಂದೆ ಹೇರಿಕೆ ಎಂದು ತಿಳಿದಿಲ್ಲ, ಆ ರೀತಿ ಯೋಚಿಸಲು ಅವರಿಗೆ ಅವಕಾಶವೇ ದೊರೆತಿಲ್ಲ ಎನ್ನಬಹುದು.
1965ರಲ್ಲಿ ಮೈಥಿಲಿ ಭಾಷೆಯಲ್ಲಿ ರಚನೆಗೊಂಡ ಸಾಹಿತ್ಯಕ್ಕೆ ಸಾಹಿತ್ಯ ಅಕಾಡೆಮಿ ಮಾನ್ಯತೆ ನೀಡಿದೆ. 2003ರಲ್ಲಿ ಸಂವಿಧಾನದ ಎಂಟನೆಯ ಪರಿಚ್ಛೇದದಲ್ಲಿ ಮೈಥಿಲಿಯನ್ನು ಸೇರಿಸಲಾಗಿದ್ದು, ಅಧಿಕೃತ ಭಾಷೆಯ ಸ್ಥಾನಮಾನ ನೀಡಲಾಗಿದೆ. ಆದರೆ, ಮೈಥಿಲಿಯ ಬಳಕೆಗೆ ತಿರುಹುತಾ ಲಿಪಿಯ ಬಳಕೆಗೆ ಮಾನ್ಯತೆಯಿಲ್ಲ! ಹನ್ನೆರಡನೆಯ ಶತಮಾನದಲ್ಲಿ ತಿರುಹುತಾ ಲಿಪಿಯನ್ನು ಬಳಸಿ, ಮೈತಿಲಿ ಭಾಷೆಯಲ್ಲಿ ನೂರಾರು ಶಾಸನಗಳನ್ನು ಬರೆಯಿಸಲಾಗಿದೆ. (ಚಿತ್ರ ನೋಡಿ: ಹನ್ನೆರಡನೆಯ ಶತಮಾನದ ತಿರ್ಹುತಾ (ಮೈಥಿಲಿ) ಲಿಪಿಯ ಶಾಸನ).
ಆ ಶಾಸನಗಳು ಇಂದು ಪ್ರದರ್ಶನದ ವಸ್ತುಗಳಾಗಿವೆ! ಬಹು ಹಿಂದಿನಿಂದಲೂ ಮೈತಥಿಲಿಯನ್ನ ಬರೆಯಲು ತಿರುಹುತಾ ಲಿಪಿಯನ್ನು ಬಳಸಿದ್ದರೂ ಇಂದು ಅದರಲ್ಲಿ ಬರೆಯಲು ಹಿಂದೇಟು ಹಾಕುತ್ತಾರೆ. ಏಕೆಂದರೆ ಹಿಂದಿ (ದೇವನಾಗರಿ) ಲಿಪಿಯಲ್ಲಿ ಬರೆದ ಮೈಥಿಲಿಗೆ ಮಾತ್ರ ಅಧಿಕೃತ ಮಾನ್ಯತೆಯಿದೆ. ಅದೇನೇ ಇದ್ದರೂ, ಅಲ್ಲಿನ ಶಾಲೆಗಳಲ್ಲಿ ದಶಕಗಳಿಂದ ಹಿಂದಿ ಮಾಧ್ಯಮದ
ಬೋಧನೆ ನಡೆಯುತ್ತಿರುವುದರಿಂದಾಗಿ, ಮೈಥಿಲಿ ಭಾಷೆಯ ಸದ್ಯದ ಭವಿಷ್ಯ ಉನ್ನತವಾಗಿಲ್ಲ ಎಂಬುದಂತೂ ಸತ್ಯ.
ಆ ಇಸ್ತ್ರಿ ಸಹೋರರ ಬಳಿ ನಾನು ಹೇಳಿದೆ ‘ನಮ್ಮ ರಾಜ್ಯದ ಶಾಲೆಗಳಲ್ಲಿ ಗಣಿತ, ಸಮಾಜ ವಿಜ್ಞಾನ ಎಲ್ಲವನ್ನೂ ಕನ್ನಡದ ಹೇಳಿಕೊಡುತ್ತಾರೆ. ಆದ್ದರಿಂದ ಕನ್ನಡ ನಮ್ಮಲ್ಲಿ ಉಳಿದಿದೆ, ನಾವು ಕನ್ನಡವನ್ನು ನಮ್ಮದೇ ಸ್ವಂತ ಕನ್ನಡ ಲಿಪಿಯಲ್ಲಿ
ಬರೆಯುತ್ತೇವೆ.’ ಅವರಿಬ್ಬರೂ, ನನ್ನ ಮುಖ ನೋಡಿ, ಸರಿಯಾಗಿ ಅರ್ಥವಾಗದವರಂತೆ ಮುಖಮಾಡಿ, ಹಿಂದಿಯಲ್ಲಿ ‘ಓಕೆ ಸಾಬ್’ ಎಂದರು! ಅಂದ ಹಾಗೆ, ನಾನು ಹೇಳಿದ ಈ ಕೊನೆಯ ವಾಕ್ಯ ಎಷ್ಟು ಸತ್ಯ? ಹಾಲಾಡಿಯಲ್ಲಿ ಕಂಡ ಅಪರೂಪದ ಸಸ್ಯ
ನಮ್ಮೂರಲ್ಲಿ ಅದೇಕೋ ಮೇ ತಿಂಗಳ ಈ ವರ್ಷ ಜಡಿಮಳೆ ಸುರಿದಿತ್ತು.
ಜೂನ್ ಮೊದಲ ವಾರ ಹಾಲಾಡಿಯಲ್ಲಿರುವ ನಮ್ಮ ಮನೆಯ ಹತ್ತಿರ ಹೋಗಿ ನೋಡಿದರೆ, ಎಲ್ಲೂ ಹಸಿರು! ಮನೆ ಹಿಂಭಾಗದಲ್ಲಿ ಸ್ವಲ್ಪ ಜಾಗದಲ್ಲಿದ್ದ ಯಾವ್ಯಾವುದೋ ಗಿಡಗಳು ಚಿಗುರಿ ಬೆಳೆದಿದ್ದವು. ಒಂದೆರಡು ಬಳ್ಳಿಗಳು ಕಿಟಿಕಿಯುದ್ದಕ್ಕೂ ಹಬ್ಬಿ, ಮನೆಯೊಳಗೂ ಬಂದಿದ್ದವು! ನಮ್ಮ ಮನೆ ಮುಂದಿನ ಪುಟ್ಟ ತೋಟದಲ್ಲಿ ಹತ್ತು ತೆಂಗಿನ ಮರಗಳು, ನಾಲ್ಕಾರು ಬಾಳೆ ಗಿಡಗಳು, ಅಡಕೆ ಮರಗಳಿವೆ.
ಎಲ್ಲವೂ ಹಸಿರಾಗಿದ್ದವು. ಆ ಭಾಗದಲ್ಲಿ ನೆಲದ ತುಂಬಾ ನಾನಾ ಗಿಡಗಳು, ಬಳ್ಳಿಗಳು, ಹುಲ್ಲು, ಅಣಬೆಗಳು. ನಮ್ಮ ಆ ಪುಟಾಣಿ ತೋಟದ ನೆಲವನ್ನು ಬೇಕೆಂದೇ ಅದರಷ್ಟಕ್ಕೆ ಬಿಡಲಾಗಿದೆ – ಅಂದರೆ, ಆಗಾಗ ನೆಲವನ್ನು ಅಗೆದಿರಲಿಲ್ಲ, ಚೊಕ್ಕಟ ಮಾಡಿರಲಿಲ್ಲ. ಆದ್ದರಿಂದ ಅಲ್ಲಿ ಕುರುಚಲು ಗಿಡಗಳು, ಬೇರೆ ಬೇರೆ ಪ್ರಭೇದದ ಸಸ್ಸಯಗಳು ಮಳೆಯಲ್ಲಿ ನಳನಳಿಸುತ್ತಿವೆ. ಅವುಗಳ ಮಧ್ಯೆ, ತಕ್ಷಣ ಗಮನ ಸೆಳೆಯಿತು ಹಸಿರೆಲೆಯ ಪುಟ್ಟ ಗಿಡ. ಅದರ ತುದಿಯಲ್ಲಿ ಬಿಳಿ ಹೂವುಗಳ ಪುಟ್ಟ ಗುಚ್ಛ. ಬಹು ಹಿಂದೆ ಕಾಡುಪ್ರದೇಶದಲ್ಲಿ ಅದನ್ನು ನೋಡಿದ ನೆನಪು; ಆದರೆ ತಕ್ಷಣ ಆ ಚಂದದ ಗಿಡದ ಹೆಸರು ನೆನಪಾಗವಲ್ಲದು.
ಮೊಬೈಲ್ ನಲ್ಲಿ ಕ್ಲಿಕ್ ಮಾಡಿ, ಫೇಸ್ಬುಕ್ ನಲ್ಲಿ ಅಪ್ ಲೋಡ್ ಮಾಡಿ, ‘ಇದರ ಹೆಸರು ಗೊತ್ತಿದ್ದರೆ ದಯವಿಟ್ಟು ತಿಳಿಸಿ’ ಎಂಬ ಒಕ್ಕಣೆ ಟೈಪಿಸಿದೆ. ‘ರಾವೋಲಿಯಾ ಸರ್ಪೆಂಟೈನಾ – ಸರ್ಪಗಂಧಿ’ ಎಂಬ ಉತ್ತರ ತಕ್ಷಣ ದೊರಕಿತು. ಪಶ್ಚಿಮ ಘಟ್ಟಗಳ ಸಸ್ಯಗಳ ಕುರಿತಾಗಿ ಇರುವ ಆ ಫೇಸ್ ಬುಕ್ ಗುಂಪಿನಲ್ಲಿ ದೊರೆಯುವ ಉತ್ತರಗಳು ಸಾಮಾನ್ಯವಾಗಿ ನಿಖರವಾಗಿರುತ್ತವೆ.
ಓಹ್, ಸರ್ಪಗಂಧಿ ಗಿಡ ನಮ್ಮ ಮನೆಯ ಎದುರೇ ಬೆಳೆದಿದೆ! ಎಂದು ಹೆಮ್ಮೆಯಿಂದ ಉದ್ಗರಿಸಿದೆ. ಆ ಪುಟ್ಟ ಜಾಗಕ್ಕೆ ಹೊರಗಿನ ಮಣ್ಣನ್ನು ಆಗಾಗ ತಂದು ಹಾಕಿ ನೆಲವನ್ನು ಕ್ಷಿಟ್ಟಸ ಮಾಡಿ, ಹಸನು ಮಾಡಿದ್ದರೆ, ಕಳೆ ಕಸಗಳನ್ನು ಕತ್ತರಿಸಿ ಚೊಕ್ಕಟ ಮಾಡಿಸಿದ್ದರೆ, ಪ್ರತಿವರ್ಷ ತೆಂಗಿನ ಮರದ ಬುಡ ಮಾಡಿಸಿದ್ದರೆ, ಅಲ್ಲಿ ಅಶ್ವಗಂಧದಂತಹ ಅಪರೂಪದ ಸಸ್ಯ ಬೆಳೆಯುವ ಅವಕಾಶ ದೊರೆಯುತ್ತಿರಲಿಲ್ಲ. ಏಕೆಂದರೆ ಅದನ್ನು ಕಳೆ ಗಿಡ ಎಂದೇ ಕೆಲಸಗಾರರು ತಿಳಿಯುತ್ತಾರೆ. ನೆಲ ಚೊಕ್ಕಟ ಮಾಡುವ ಕೆಲಸಗಾರರು ಎಲ್ಲವನ್ನೂ ಕತ್ತರಿಸಿ, ಮಣ್ಣು ತುಂಬಿಸಿ ಹಸನು ಮಾಡುವುದರಿಂದ, ಬೇರಾವುದೇ ಗಿಡಗಳನ್ನೂ ಬೆಳೆಯಲು
ಅವಕಾಶ ನೀಡುತ್ತಿರಲಿಲ್ಲ.
ಆ ಭಾಗದಲ್ಲಿ ಕುರುಚಲು ಗಿಡಗಳನ್ನು ಬೆಳೆಯಗೊಟ್ಟಿದ್ದು ಒಳ್ಳೆಯದಾಯಿತು ಎಂದು ಬೀಗಿದೆ. ಆದರೆ, ನನ್ನ ಉತ್ಸಾಹವನ್ನು ಮತ್ತು ಆ ಗಿಡವನ್ನು ಕಂಡ ನನ್ನ ಅರ್ಧಾಂಗಿ ‘ಇದರನಿದೆ ವಿಶೇಷ? ಈ ಗಿಡವನ್ನು ಪಾತಾಳಗರುಡ ಅಥವಾ ಸರ್ಪಗಂಧಿ ಎಂದು ಕರೆಯುತ್ತಾರೆ. ಗುಡ್ಡೆ, ಹಾಡಿಯಲ್ಲಿ ಅಲ್ಲಲ್ಲಿ ಬೆಳೆಯುತ್ತದೆ. ನನ್ನ ತವರುಮನೆಯಲ್ಲಿ ನಮ್ಮಪ್ಪ ಇದನ್ನು ತುಳಸಿಕಟ್ಟೆಯಲ್ಲಿ
ಬೆಳೆಸಿದ್ದರು!’ ಎಂದಳು. ಅಂದರೆ, ಈ ಗಿಡ ನಮ್ಮ ಪ್ರದೇಶದಲ್ಲಿ, ಪಶ್ಚಿಮಘಟ್ಟಗಳ ಸೆರಗಿನಲ್ಲಿ ಅಷ್ಟೊಂದು ಅಪರೂಪವೇನಲ್ಲ. ಈಗಲೂ ನಮ್ಮ ಮಲೆನಾಡು, ಕರಾವಳಿ ಪ್ರದೇಶದ ಗುಡ್ಡಗಾಡು ಜಾಗದಲ್ಲಿ ಅಲ್ಲಲ್ಲಿ ಸಾಕಷ್ಟು ಕಾಣಸಿಗುತ್ತದೆ.
ಆದರೆ ಫೇಸ್ ಬುಕ್ ನಲ್ಲಿ ನಾನು ಅಪ್ ಲೋಡ್ ಮಾಡಿದ್ದ ಫೋಟೋವನ್ನು ನೋಡಿದ್ದ ಗೆಳೆಯ ಹರಿಪ್ರಸಾದ್ ನಾಡಿಗ್ ಒಂದು ಮೆಸೇಜ್ ಕಳಿಸಿದರು. ‘ಇದೊಂದು ಅಪರೂಪದ ಸಸ್ಯ, ಅಳಿವಿನಂಚಿನಲ್ಲಿರುವ ಸಸ್ಯ. ಇದು ನಿಮ್ಮ ಮನೆಯ ಎದುರಿನ ಬೆಳೆದಿದ್ದು ನಿಮ್ಮ ಮತ್ತು ನಿಮ್ಮ ಹಿರಿಯರು ಮಾಡಿದ ಪುಣ್ಯ’ ಎಂದು ಹೇಳಿದ್ದಲ್ಲದೇ, ‘ಸಾಧ್ಯವಾದರೆ ನನಗೊಂದು ಗಿಡ ತಂದುಕೊಡಿ, ನಮ್ಮ ಮನೆ ಹತ್ತಿರದಲ್ಲಿರುವ ಔಷಧಿಯ ಸಸ್ಯಗಳ ವನದಲ್ಲಿ ನೆಟ್ಟು ಬೆಳೆಸುತ್ತೇನೆ’ ಎಂಬ ಮನವಿ ಮಾಡಿದರು.
ಹೌದೆ? ಇದು ಅಳಿವಿನಂಚಿನಲ್ಲಿರುವ ಸಸ್ಯವೆ? ಇಂಟರ್ನೆಟ್ನಲ್ಲಿ ಹುಡುಕಿದಾಗ, ಹೌದು ಎಂದೇ ಉತ್ತರ ಸಿಕ್ಕಿತು. ದಕ್ಷಿಣ ಭಾರತದಲ್ಲಿ ಇದು ಅಳಿವಿನಂಚಿನಲ್ಲಿರುವ ಸಸ್ಯ ಎಂದು ಗುರುತಿಸಲಾಗಿದೆ. ಸರ್ಪಗಂಧಿ ಅಥವಾ ರಾವೋಲಿಯಾ ಸರ್ಪೆಂಟೈನಾ ಸಸ್ಯವು ಇಂದು ಅಪಾಯದಂಚಿನಲ್ಲಿದೆ! ರಕ್ತದೊತ್ತಡ ಕಡಿಮೆ ಮಾಡುವ ರೆಸರ್ಪಿನ್ ಮಾತ್ರೆಯನ್ನು ೧೯೫೦ರ ದಶಕದಲ್ಲಿ ಮೊದಲ ಬಾರಿಗೆ ಇದೇ ಗಿಡದ ಬೇರಿನಿಂದ ತಯಾರಿಸಲಾಗಿತ್ತು.
ನಮ್ಮ ದೇಶದ ಕಾಡು ಮೇಡುಗಳಲ್ಲಿ ಬೆಳೆದಿದ್ದ ಈ ಗಿಡದ ಬೇರುಗಳನ್ನು ಕಿತ್ತು, ಪಾಶ್ಚಾತ್ಯ ದೇಶಗಳ ಪ್ರಯೋಗಾಲಯಗಳಿಗೆ ಕಳಿಸಲಾಗಿತ್ತು. (ಈ ಬೇರು ಮೂಟೆಗಟ್ಟಲೆ ರಫ್ತಾಗಿದ್ದ ಕಥನವೇ ಒಂದು ರೋಚಕ ಅಧ್ಯಾಯ). ಇಂದು ದಕ್ಷಿಣ ಭಾರತದಲ್ಲಿ ಅಽಕೃತವಾಗಿ ಅಳಿವಿನಂಚಿನಲ್ಲಿರುವ ಸಸ್ಯ. ಆದರೆ ಉತ್ತರಭಾರತದ ಗುಡ್ಡಗಳಲ್ಲಿ ಇದು ಸಾಕಷ್ಟು ಇರುವುದರಿಂದ, ಅಲ್ಲಿ ಅಳಿವಿನಂಚಿನ ಸಸ್ಯ ಎಂಬ ಹಣೆಪಟ್ಟಿ ಇಲ್ಲ.
ಇಂತಹ ಅಪರೂಪದ ಗಿಡ ನಮ್ಮ ಮನೆಯ ಎದುರಿನ ಬೆಳೆದದ್ದು, ಅದು ಹೂ ಬಿಟ್ಟಾಗಲೇ ನಾನು ಊರಿಗೆ ಹೋಗಿದ್ದು, ಅದನ್ನು ನಾನು ಗುರುತಿಸಿದ್ದು, ಎಲ್ಲವೂ ನನ್ನ ಪಾಲಿಗೆ ವಿಶೇಷ.