Saturday, 14th December 2024

ಜಾಗತಿಕ ಬದಲಾವಣೆ: ಹಳೆಯದು ಹೊಸದಕ್ಕೆ ದಾರಿಬಿಡುತ್ತಿದೆ

ವಿಶ್ವ ವಿಹಾರ

ಪ್ರೊ.ಆರ್‌.ಜಿ.ಹೆಗಡೆ

ಎರಡನೆಯ ಮಹಾಯುದ್ಧದ ಮುಕ್ತಾಯದ, ಅಣುಬಾಂಬ್ ಬಿದ್ದ ವರ್ಷದಿಂದ ಹಿಡಿದು 1990ರ ವರೆಗಿನ ಅವಧಿ, ‘ಶೀತಲ ಯುದ್ಧದ’ ವ್ಯವಸ್ಥೆಯ ಸಮಯ. ಇಲ್ಲಿ ಜಗತ್ತು ರಷ್ಯಾ-ಅಮೆರಿಕಗಳ ನಡುವೆ ವಿಭಾಗವಾಗಿ ಹೋಯಿತು. ಜಗತ್ತಿನಲ್ಲಿ ಆರ್ಮ್ಸ ರೇಸ್ (ಮಿಲಿಟರಿ ಶಕ್ತಿಯ ಸ್ಪರ್ಧೆ) ನಡೆದದ್ದು ಈಗ. ಆದರೆ ತೊಂಬತ್ತರ ದಶಕದಲ್ಲಿ ರಷ್ಯಾ ಕುಸಿದು ಬಿದ್ದು ಅಮೆರಿಕ ಕೇಂದ್ರಿತ ವ್ಯವಸ್ಥೆಗೆ ದಾರಿಮಾಡಿಕೊಟ್ಟಿತು.

’’T he old order changeth, Yielding place to the new’ – Alfred Lord Tennyson ಇಂಗ್ಲಿಷ್ ಕವಿ ಟೆನಿಸನ್ ‘ಸೂರ್ಯ ಮುಳುಗದ ಸಾಮ್ರಾಜ್ಯ’ ಇಂಗ್ಲೆಂಡ್ ಕುಸಿದು ಹೋಗಿದ್ದನ್ನು ಕಣ್ಣ ಮುಂದೆಯೇ ನೋಡಿದ. ಬ್ರಿಟಿಷ್ ಕೇಂದ್ರಿತವಾಗಿದ್ದ ಜಾಗತಿಕ ವ್ಯವಸ್ಥೆ ಹೋಗಿ ಇನ್ನೊಂದು ಹುಟ್ಟುವು ದನ್ನು ಕಂಡ.

ಜಗತ್ತು ಆಯಾ ಕಾಲದ ರಾಜಕೀಯ, ಸಮಾಜ, ಆರ್ಥಿಕತೆ, ಘಟನೆಗಳು, ವಿಚಾರಗಳು, ವ್ಯಕ್ತಿಗಳನ್ನು ಅವಲಂಬಿಸಿ ಬದಲಾಗುತ್ತಲೇ ಹೋಗುತ್ತದೆ ಎಂಬುದು ಆಗ ಆತನಿಗೆ ಅರ್ಥವಾಯಿತು. ಜಾಗತಿಕ ವ್ಯವಸ್ಥೆಯನ್ನು ಮೊಟ್ಟ ಮೊದಲ ಬಾರಿಗೆ ಕಂಡವನು, ಹೆಸರಿಸಿದವನು ಟೆನಿಸನ್. ವ್ಯವಸ್ಥೆ ಈಗ ಮತ್ತೊಂದು ಬದಲಾವಣೆಯ ಹೊಸ್ತಿಲಲ್ಲಿದೆ.

ಹಿಂದೆ ತನ್ನದೇ ಭಾಗವಾಗಿದ್ದ ಉಕ್ರೇನಿನ ಮೇಲೆ ರಷ್ಯಾ ಬಾಂಬುಗಳನ್ನು ಸುರಿಸುತ್ತಿದೆ. ನಾಲ್ಕೈದು ವರ್ಷಗಳ ಹಿಂದೆ ವೈರವನ್ನು ಮರೆತು ಒಂದಾ ದಂತಿದ್ದ ರಷ್ಯಾ ಮತ್ತು ಅಮೆರಿಕ ಈಗ ಪರಸ್ಪರ ವಿರುದ್ಧ ನಿಂತಿವೆ. ಮುಖ ಕಂಡರಾಗದ ಚೀನಾ, ಪಾಕಿಸ್ತಾನ ಕೂಡ ಭಾರತ ಇರುವ ಗುಂಪಿನಲ್ಲಿಯೇ ಇವೆ. ವಿಶ್ವಸಂಸ್ಥೆ ಪರದಾಡುತ್ತಿದೆ. ಅರ್ಥವೆಂದರೆ ಜಗತ್ತು ಹಿಂದಿನಂತೆ ಇಲ್ಲ. ಹಳೆಯದು ಹೊಸದಕ್ಕೆ ದಾರಿಬಿಡುತ್ತಿದೆ. ರಷ್ಯಾ ಉಕ್ರೇನ್ ಯುದ್ಧ ಹೇಳುತ್ತಿರುವುದು ಇದು.

ಜಾಗತಿಕ ವ್ಯವಸ್ಥೆಯ ಇತಿಹಾಸವನ್ನು ಗಮನಿಸಿಕೊಳ್ಳಬೇಕು. ಮೊದಲು ಪ್ರತ್ಯೇಕ ಖಂಡಗಳಾಗಿ, ದೇಶಗಳಾಗಿ, ಇದ್ದ ಜಗತ್ತು
ತಂತ್ರಜ್ಞಾನದಿಂದಾಗಿ ಹತ್ತಿರ ಬರುತ್ತ ಹೋಯಿತು. ಹಾಗಾಗುತ್ತ ದೇಶಗಳ ನಡುವೆ ರಾಜಕೀಯಗಳು ಹುಟ್ಟಿಕೊಂಡವು. ದೊಡ್ಡ
ದೇಶಗಳು ಸಣ್ಣವನ್ನು ನುಂಗಿ ಹಾಕಲು ಪ್ರಯತ್ನಿಸಿದವು. ದೇಶಗಳು ಗುಂಪು ಕಟ್ಟಲು ಆರಂಭಿಸಿದವು. ಇಂತಹ ಸಂಗತಿಗಳು ದೇಶಗಳ ನಡುವೆ ಶಕ್ತಿ ಹಂಚಿಕೊಳ್ಳುವ ಸಿಸ್ಟಮ್ ಅನ್ನೇ ಬೇರೆ ಬೇರೆ ಕಾಲಘಟ್ಟದಲ್ಲಿ ಬೇರೆ ಬೇರೆ ರೀತಿಯಾಗಿಯೇ ಸೃಷ್ಟಿಸಿ ದವು. ಇದು ಜಾಗತಿಕ ವ್ಯವಸ್ಥೆ.

ಅದು ಆಯಾ ಕಾಲದ ಸಾಂಸ್ಕೃತಿಕ, ಆರ್ಥಿಕ, ಸಾಮಾಜಿಕ ವಾತಾವರಣಗಳ ಮೇಲೆ ಪ್ರಭಾವ ಬೀರಿತು ಮತ್ತು ಅವುಗಳನ್ನು ತೀವ್ರವಾಗಿ ಬದಲಾಯಿಸಿತು. ಆಯಾ ಸಮಯಗಳ ಇತಿಹಾಸವನ್ನು ನಿರ್ಮಿಸಿದ್ದು ಅಂದು ಚಾಲ್ತಿಯಲ್ಲಿದ್ದ ವ್ಯವಸ್ಥೆಯೇ.
ಮೊದಲ ಹಂತದಲ್ಲಿ ಒಂದು ವ್ಯವಸ್ಥೆ ಇರಲೇ ಇಲ್ಲ. ಏಕೆಂದರೆ ಜಗತ್ತು ಒಂದು ಯುನಿಟ್ ಆಗಿರಲೇ ಇಲ್ಲ. ಅದು ಒಂದಾಗಲು ಆರಂಭಿಸಿದ್ದು ಹದಿನೈದನೆಯ ಶತಮಾನದ ನಂತರ. ಭೌಗೋಳಿಕ ಅನ್ವೇಷಣೆ ಆರಂಭವಾದ ಬಳಿಕ.

ಮೊದಲು ದೇಶಗಳು ಪ್ರತ್ಯೇಕ ಜಗತ್ತುಗಳಲ್ಲಿಯೇ ಬದುಕುತ್ತಿದ್ದವು. ಅಲೆಕ್ಸಾಂಡರ್, ಜೂಲಿಯಸ್ ಸೀಸರ್ ಅಂಥವನ್ನು ಇತಿ
ಹಾಸ ಜಗತ್ತಿನ ದೊರೆಗಳು ಎಂದು ಕರೆದರೂ ನಿಜವಾಗಿ ಅವರು ಇದ್ದುದು ಅವರ ಜಗತ್ತಿನ ದೊರೆಗಳಾಗಿ ಮಾತ್ರ. ಹೀಗೆ ವ್ಯವಸ್ಥೆಯೇ ಇಲ್ಲದ ವ್ಯವಸ್ಥೆ ಆಗ ಜಾರಿಯಲ್ಲಿತ್ತು. ಬಹುತ್ವಗಳು, ಪ್ರಾದೇಶಿಕ ಸಂಸ್ಕೃತಿಗಳು ಸ್ವತಂತ್ರವಾಗಿ ಮೆರೆದ ಕಾಲ ಅದು. ನಂತರ ಬಂದ ಜಾಗತಿಕ ವ್ಯವಸ್ಥೆ ಯುರೋಪ್ ಕೇಂದ್ರಿತವಾದುದು. ಅದು ಹುಟ್ಟಿಕೊಂಡಿದ್ದು ಕೈಗಾರಿಕಾ ಕ್ರಾಂತಿಯ ನಂತರ.

ಸ್ಟೀಮ್ ಎಂಜಿನ್ ಶೋಧನೆಯಿಂದಾಗಿ ರೈಲ್ವೆಗಳು, ವೇಗದ ಹಡಗುಗಳು, ಮರೀನರ್ಸ ಕಂಪಾಸ್, ಉತ್ತಮ ಬಂದೂಕುಗಳು
ಇತ್ಯಾದಿ ಬಂದ ನಂತರ. ತಂತ್ರಜ್ಞಾನದ ಮೂಲವಾಗಿದ್ದ ಯುರೋಪು ಹೊಸ ಶಕ್ತಿವ್ಯವಸ್ಥೆಯ ಕೇಂದ್ರವಾಗಿ ಹೊರಹೊಮ್ಮಿತು. ಈ ವ್ಯವಸ್ಥೆಯ ಸ್ವರೂಪ ನಿರ್ಧರಿಸಿದ್ದು ಯರೋಪ್(ಪಶ್ಚಿಮ). ಮುಖ್ಯವಾಗಿ ರೋಮ್, ಫ್ರಾನ್ಸ್ ಮತ್ತು ಇಂಗ್ಲೆಂಡ್. ಹೊಸ ತಂತ್ರಜ್ಞಾನದ ಕೇಂದ್ರಗಳಾಗಿದ್ದ ಅವು ತಮಗೆ ಲಭ್ಯ ವೈಜ್ಞಾನಿಕ ಶಕ್ತಿಯನ್ನು, ಬಳಸಿಕೊಂಡು ಜಗತ್ತನ್ನು ಆಳಿದವು.

ದೇಶಗಳನ್ನು ವಸಾಹತುಗಳನ್ನಾಗಿಸಿದವು. ಪೂರ್ವ ದೇಶಗಳ ಸಂಪತ್ತನ್ನು ಕೊಳ್ಳೆಹೊಡೆದವು. ಆ ಸಂದರ್ಭದಲ್ಲಿ ಜಗತ್ತನ್ನು ಆಳಲು ಪಶ್ಚಿಮ ಬಳಸಿದ ಪರಿಕರಗಳಲ್ಲಿ ಸಂಸ್ಕೃತಿ ಕೂಡ ಒಂದು. ವಿಶೇಷವಾಗಿ ಹದಿನೆಂಟು ಮತ್ತು ಹತ್ತೊಂಬತ್ತನೆಯ ಶತಮಾನದಲ್ಲಿ. ಪಶ್ಚಿಮ ಬೇರೆ ಸಂಸ್ಕೃತಿಗಳ ಮನಸ್ಸುಗಳೊಳಗೆ ಕೀಳರಿಮೆ ಹುಟ್ಟಿಸಿತು. ಅವು ಅನಾಗರಿಕತೆಗಳೆಂಬಂತೆ ಬಿಂಬಿಸಿತು. ಆ ಸಂಸ್ಕೃತಿಗಳನ್ನು ಸುಧಾರಿಸುವುದು ‘ಬಿಳಿ ಮನುಷ್ಯನ ಭಾರ’ ಎಂದು ತನಗೆ ತಾನೇ ಜವಾಬ್ದಾರಿ ತೆಗೆದು ಕೊಂಡು ಅವುಗಳನ್ನು ಆಧುನಿಕಗೊಳಿಸುವ ಹೆಸರಿನಲ್ಲಿ ವಿರೂಪಗೊಳಿಸಿಬಿಟ್ಟಿತು.

ಆ ಸಂಸ್ಕೃತಿಗಳ ಬೇರುಗಳನ್ನು ಕಿತ್ತು ಹಾಕಿ ತನ್ನ ಸಂಸ್ಕೃತಿಗಳನ್ನು ಆ ದೇಶಗಳ ಮೇಲೆ ಹೇರಿತು. ತನ್ನ ಪ್ರಭುತ್ವ (ಹೆಜೆಮನಿ) ಸ್ಥಾಪಿಸಿದ ಅದು ಹತ್ತೊಂಬತ್ತನೆಯ ಶತಮಾನದ ಕೊನೆಯ ತನಕವೂ ಜಗತ್ತನ್ನು ಆಳಿಬಿಟ್ಟಿತು. ಅಷ್ಟೇ ಅಲ್ಲ, ಆ ಸಮಯದಲ್ಲಿ ಹುಟ್ಟಿ ಬೆಳೆದ ಬೌದ್ಧಿಕ ಪರಂಪರೆಗಳು ಮತ್ತು ಸೌಂದರ್ಯವನ್ನು ಗ್ರಹಿಸುವ (ಈಸ್ಥೆಟಿಕ್ಸ) ದೃಷ್ಟಿಕೋನಗಳೆಲ್ಲವನ್ನೂ ಈ ವ್ಯವಸ್ಥೆ ಸೃಷ್ಟಿಸಿತು. ಉದಾಹರಣೆಗೆ ಬಿಳಿ ಬಣ್ಣ ಸುಂದರ ಎನ್ನುವ ಕಲ್ಪನೆಯನ್ನು ನಮ್ಮಲ್ಲಿ ಮೂಡಿಸಿದ್ದು ಪಶ್ಚಿಮ.(ನಮ್ಮ ಸುಂದರ ಪುರುಷ ಶ್ರೀಕೃಷ್ಣ ಬಿಳಿಬಣ್ಣದವನಲ್ಲ. ದ್ರೌಪದಿಯೂ ಬಿಳಿ ಬಣ್ಣದವಳಲ್ಲ) ಆದರೂ ಕ್ರಮೇಣ ಬಿಳಿ ಬಣ್ಣ ಸುಂದರ ಎಂಬ ವಿಚಾರವನ್ನು ನಾವೂ ಒಪ್ಪಿಬಿಟ್ಟೆವು.

‘ಪೂರ್ವದ’ ‘ಜನಪದೀಯ’ ವ್ಯವಸ್ಥೆಗಳು ನಾಶವಾಗಿದ್ದು ಹೀಗೆಯೇ. ಈ ಯುರೋ- ಕೇಂದ್ರಿತ ವ್ಯವಸ್ಥೆಯಡಿಯಲ್ಲಿಯೇ.
ಮುಂದಿನ ಮಹತ್ವದ ಜಾಗತಿಕ ವ್ವವಸ್ಥೆ ಮಾರ್ಕ್ಸ್‌ವಾದದ ಮತ್ತು ಗಾಂಧಿವಾದದ ಉತ್ಥಾನದ ವ್ಯವಸ್ಥೆ. ಇಪ್ಪತ್ತನೆಯ
ಶತಮಾನದಲ್ಲಿ ಹುಟ್ಟಿಕೊಂಡ ಅದು ಹೆಚ್ಚು ಕಡಿಮೆ ಹಿಂದಿನ ವ್ಯವಸ್ಥೆಯನ್ನೇ ತಲೆಕೆಳಗೆ ಮಾಡಿತು. ಇದು ಹಲವು ದೇಶಗಳು ಮಾನಸಿಕವಾಗಿ ಮತ್ತು ಭೌತಿಕವಾಗಿ ತಮ್ಮನ್ನು ‘ಪಶ್ಚಿಮದಿಂದ’ ಬಿಡುಗಡೆಗೊಳಿಸಿಕೊಂಡ ಹಂತ.

ಸ್ಥೂಲವಾಗಿ ಶತಮಾನದ ಮಧ್ಯಭಾಗದವರೆಗೂ ವಿಸ್ತರಿಸಿಕೊಂಡ ವ್ಯವಸ್ಥೆ ಇದು. ಇದನ್ನು ನಿರೂಪಿಸಿದವು ಮಾರ್ಕ್ಸವಾದ ಮತ್ತು ಗಾಂಽವಾದ, ತಂತ್ರಜ್ಞಾನದ ಬೆಳವಣಿಗೆ ಮತ್ತು ಎರಡು ಯುದ್ಧಗಳು. ಮಾರ್ಕ್ಸವಾದ ಜಗತ್ತನ್ನು ಅಲ್ಲೋಲ ಕಲ್ಲೋಲ ಗೊಳಿಸಿತು. ಅದು ಹಲವು ದೇಶಗಳನ್ನು ಪಶ್ಚಿಮದ ಕ್ಯಾಪಿಟಲಿಸಂನಿಂದ ಬಿಡುಗಡೆಗೊಳಿಸಿ ಅವುಗಳನ್ನು ‘ಕಮ್ಯೂನಿಸ್ಟ್’ ರಾಷ್ಟ್ರಗಳನ್ನಾಗಿಸಿತು.

‘ಸಮಾಜವಾದಿ’ ದೇಶಗಳು ಈಗ ಹುಟ್ಟಿಕೊಂಡು ಪಶ್ಚಿಮಕ್ಕಿಂತ ಸಂಪೂರ್ಣ ಬೇರೆಯೇ ಆದ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ವ್ಯವಸ್ಥೆಯನ್ನು ಸೃಷ್ಟಿಸಿದವು. ಆದರೆ ಕ್ರಮೇಣ ಈ ದೇಶಗಳು ಆಳುವವರ ‘ಸರ್ವಾಧಿಕಾರ’ ಕ್ಕೆ ಮಾರ್ಗ ಮಾಡಿಕೊಟ್ಟು
ರಕ್ತಸಿಕ್ತ ಇತಿಹಾಸಗಳನ್ನು ಬರೆದವು. ಉದಾಹರಣೆಗೆ ಚೀನಾ ಮತ್ತು ರಷ್ಯಾ. ಮತ್ತೆ ಈ ಹಂತದಲ್ಲಿ ಕೆಲ ಪ್ರದೇಶಗಳಲ್ಲಿ
ಪ್ರಜಾಪ್ರಭುತ್ವ ಮಾರ್ಗದ ಹೋರಾಟಗಳೂ ನಡೆದು ಯಶಸ್ವಿಯಾದವು. ಉದಾ: ಗಾಂಽ ಚಳವಳಿಯಲ್ಲಿ ಜನ್ಮ ತಳೆದ ಭಾರತ. ಇದು ಪ್ರಜಾಪ್ರಭುತ್ವಗಳು ಜನಪ್ರಿಯವಾದ ಕಾಲ ಕೂಡ ಹೌದು.

ಹಾಗೆಯೇ ಈ ಅವಧಿಯಲ್ಲಿ ವಿಮಾನಗಳ, ವೇಗದ ರೈಲುಗಳ ಹಾಗೂ ಟೆಲಿಪೋನ್‌ಗಳ ಬೆಳವಣಿಗೆಯಿಂದಾಗಿ ಭೂಖಂಡಗಳು ಹತ್ತಿರ ಬರುತ್ತ, ಜನ ತಮ್ಮ ವೈಷಮ್ಯಗಳನ್ನು ಕಂಡುಕೊಂಡರು. ಅವುಗಳನ್ನು ಬಗೆಹರಿಸಿಕೊಳ್ಳಲಾರದ ಅವರು ಯುದ್ಧಕ್ಕೆ ಇಳಿದರು. ಮೊದಲ ವಿಶ್ವಯುದ್ಧದ ಹುಟ್ಟಿಗೆ ತಂತ್ರಜ್ಞಾನದ ಬೆಳವಣಿಗೆಯೇ ಕಾರಣ. ಯುದ್ಧಗಳು ಇಂಗ್ಲೆಂಡ್‌ನ ಶಕ್ತಿಯನ್ನು ಕುಂದಿಸಿ ಬಿಟ್ಟವು. ಅದು ಕುಸಿದಂತೆ ‘ಪಶ್ಚಿಮ ಕೇಂದ್ರಿತ’ ವ್ಯವಸ್ಥೆಯೂ ಹೊರಟುಹೋಯಿತು.

ಇಲ್ಲಿ ಯಾವುದೇ ಒಂದು ದೇಶ (ಹಿಟ್ಲರನ ಜರ್ಮನಿ ಕೂಡ)ಜಗತ್ತನ್ನು ಆಳುವ ಶಕ್ತಿಯನ್ನು ಹೊಂದಿರಲಿಲ್ಲ. ಹಾಗಾಗಿಯೇ ದೇಶಗಳು ಬಣಗಳಲ್ಲಿ ಕೂಡಿಕೊಂಡಿದ್ದು. ಎರಡನೆಯ ಮಹಾಯುದ್ಧದ ಮುಕ್ತಾಯದ, ಅಣು ಬಾಂಬ್ ಬಿದ್ದ ವರ್ಷದಿಂದ ಹಿಡಿದು 1990ರ ವರೆಗಿನ ಅವಧಿ, ‘ಶೀತಲ ಯುದ್ಧದ’ ವ್ಯವಸ್ಥೆಯ ಸಮಯ. ಇಲ್ಲಿ ಜಗತ್ತು ರಷ್ಯಾ-ಅಮೆರಿಕಗಳ ನಡುವೆ ವಿಭಾಗವಾಗಿ ಹೋಯಿತು.

ಜಗತ್ತಿನಲ್ಲಿ ಆರ್ಮ್ಸ ರೇಸ್ (ಮಿಲಿಟರಿ ಶಕ್ತಿಯ ಸ್ಪರ್ಧೆ) ನಡೆದದ್ದು ಈಗ. ಆದರೆ ತೊಂಬತ್ತರ ದಶಕದಲ್ಲಿ ರಷ್ಯಾ ಕುಸಿದು
ಬಿದ್ದು ಅಮೆರಿಕ ಕೇಂದ್ರಿತ ವ್ಯವಸ್ಥೆಗೆ ದಾರಿಮಾಡಿಕೊಟ್ಟಿತು. ಎದ್ದುನಿಂತ ಅಮೆರಿಕ ಮುಂದಿನ ಮೂವತ್ತು ವರ್ಷ ನಿರಂಕುಶ
ದೊರೆಯಾಗಿ ಆಳಿಬಿಟ್ಟಿತು. ಹಲವು ದೇಶಗಳ ಮೇಲೆ ಆಕ್ರಮಣ ನಡೆಸಿತು. ಮುಜಾಹಿದೀನ್‌ಗಳನ್ನು ಪೋಷಿಸಿತು. ತನ್ನ ಶಸಾಸಗಳನ್ನು ಜಗತ್ತಿಗೆ ಮಾರಿತು. ಆದರೆ ತನ್ನ ಗರ್ವದಿಂದಾಗಿ ವಿಪರೀತಕ್ಕೆ ಹೋದ ಅದು ಪತನದ ಕಾರಣಗಳನ್ನೂ ಇಲ್ಲಿಯೇ ಹುಟ್ಟಿಸಿಕೊಂಡಿತು.

ರಷ್ಯಾಉಕ್ರೇನ್ ಯುದ್ಧ ಹೊಸ ಜಾಗತಿಕ ವ್ಯವಸ್ಥೆಯನ್ನು ತಂದಿಟ್ಟಿದೆ. ಅದರ ಕೆಲವು ಸ್ವರೂಪಗಳು ಎದ್ದು ಕಾಣುತ್ತಿವೆ.
ಅವೆಂದರೆ:

1.ಅಮೆರಿಕದ ಇಂಪೀರಿಯಲ್ ಸಾಮ್ರಾಜ್ಯ ತನ್ನ ಹಿಂದಿನ ಶಕ್ತಿ ಕಳೆದುಕೊಂಡಿದೆ. ಅಸಹಾಯಕತೆಯಿಂದ ಮೈಪರಚಿ ಕೊಳ್ಳುತ್ತಿದೆ. ಪಾಕಿಸ್ತಾನದಂತಹ, ಅಫ್ಘಾನಿಸ್ತಾನದಂತಹ ದೇಶಗಳೂ ಅಮೆರಿಕಕ್ಕೆ ಅಂಜುತ್ತಿಲ್ಲ. ದೇಶ ಈಗ ಸೂಪರ್ ಪವರ್ ಸ್ಥಾನದಿಂದ ಕೆಳಗಿಳಿದಿದೆ. ಇದು ಮುಂದಿನ ವರ್ಷಗಳಲ್ಲಿ ಜಗತ್ತನ್ನು ಭಾರೀ ಪ್ರಭಾವಿಸಬಹುದಾದ ವಿಷಯ. ಸಹಜವಾಗಿ ಇಂತಹ ನಿರ್ವಾತ ಸೃಷ್ಟಿಯಾದಾಗ ಬೇರೆ ದೇಶಗಳು ಹೊಸ ಶಕ್ತಿಗಳಾಗಿ ಹುಟ್ಟಿಕೊಳ್ಳುತ್ತವೆ.

2 ಏಷ್ಯಾದ ಮೂರು ದೇಶಗಳು ಜಾಗತಿಕ ಸೂಪರ್ ಪವರ್ ಸ್ಥಾನಕ್ಕೆ ಸ್ಪಽಸುತ್ತಿವೆ. ರಷ್ಯಾ, ಚೀನಾ ಮತ್ತು ಭಾರತ. ಇವು ಪ್ರತಿಯೊಂದೂ ತುಂಬ ಶಕ್ತಿಯುತ ದೇಶಗಳು. ಜತೆಗೆ ಅವು ಮೂರೂ ಇಂದು ಒಂದೇ ಕಡೆ ಇವೆ. ಪ್ರಶ್ನೆ ಇರುವುದು ಇವು ತಮ್ಮ ತಮ್ಮೊಳಗಿನ ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಂಡು ದೀರ್ಘಾವಽಯಲ್ಲಿ ಜತೆಯಾಗಿ ನಿಲ್ಲುತ್ತವೆಯೇ ಎನ್ನುವುದು. ಒಮ್ಮೆ ಹಾಗಾಗಿ ಹೋದರೆ ‘ಪಶ್ಚಿಮದ’ ಕಾಲ ಮುಗಿದು ಮುಂದಿನ ವರ್ಷಗಳಲ್ಲಿ ಏಷ್ಯಾ ಜಗತ್ತಿನ ಶಕ್ತಿಕೇಂದ್ರವಾಗುತ್ತದೆ. ಅಷ್ಟೇ ಅಲ್ಲ ಇಂದಿನ ತನಕ ಬಂದಿರುವ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ವ್ಯವಸ್ಥೆ ತಲೆಕೆಳಗಾಗಿ ಹೋಗಬಹುದು.

3.ಜಾಗತಿಕವಾಗಿ ಪ್ರಜಾಪ್ರಭುತ್ವಗಳು ಕುಸಿಯುತ್ತಿರುವಂತೆ ಕಾಣಿಸುತ್ತಿವೆ. ಉದಾಹರಣೆಗೆ ಅಮೆರಿಕದಲ್ಲಿ ಅತಿ ಪ್ರಜಾ ಪ್ರಭುತ್ವ ಸೃಷ್ಟಿಯಾದಂತಿದೆ. ಕರೋನಾ ಕಾನೂನುಗಳನ್ನು ಜನ ಅಲ್ಲಿ ದೊಡ್ಡ ಪ್ರಮಾಣದಲ್ಲಿ ಧಿಕ್ಕರಿಸಿಬಿಟ್ಟರು.

ಅಧ್ಯಕ್ಷೀಯ ಚುನಾವಣೆಯಲ್ಲಿ ಜನರು ವಿಶೇಷ. ಆಸಕ್ತಿ ವಹಿಸಲೇ ಇಲ್ಲ. ಚುನಾವಣೆಗಳು ಅಸ್ತವ್ಯಸ್ತವಾಗಿ ಹೋದವು.
ಟ್ರಂಪ್ ಸೋತಿದ್ದರೂ ಆತ ಆರಂಭಿಸಿದ ರಾಷ್ಟ್ರೀಯತೆಯ ಚಳವಳಿ ಮುಂದಿನ ವರ್ಷಗಳಲ್ಲಿ ವಿಶಾಲವಾಗಿ ಹರಡಿಕೊಳ್ಳುವ ಸಾಧ್ಯತೆ ಇದೆ. ಮತ್ತೆ ಕೆಲವು ದೇಶಗಳು ಈ ಮನಃ ಸ್ಥಿತಿ ಹೊಂದಿದ ಭಾರೀ ದೊಡ್ಡ ನಾಯಕತ್ವಗಳನ್ನು ಬೆಂಬಲಿಸಿವೆ. ಪುಟಿನ್, ಶಿ ಜಿನ್ ಪಿಂಗ್, ನರೇಂದ್ರ ಮೋದಿ ಇವರೆಲ್ಲರೂ ಅಗಾಧ ವ್ಯಕ್ತಿತ್ವದ ನಾಯಕರು. ಭಾರತದಲ್ಲಿ ಪ್ರಜಾಪ್ರಭುತ್ವ ಬೇರೂರಿದೆ. ಇಲ್ಲಿ ಸಮಸ್ಯೆಗಳಿದ್ದಂತೆ ಅನಿ ಸುವುದಿಲ್ಲ. ಆದರೂ ಒಟ್ಟಾರೆಯಾಗಿ ರಾಷ್ಟ್ರೀಯತೆಯ ಭಾವನೆ ಮುಂದಿನ ಜಗತ್ತಿನಲ್ಲಿ ಎದ್ದು ನಿಲ್ಲುವ ಸಾಧ್ಯತೆ ಇದೆ. ಅದು ದೇಶಗಳನ್ನು ಯುದ್ಧಗಳಿಗೆ ಕರೆದುಕೊಂಡು ಹೋಗುವ ಸಾಧ್ಯತೆ ಇರುತ್ತದೆ.

4. ಎಲ್ಲ ದೇಶಗಳಲ್ಲಿ ಭಾರೀ ದೊಡ್ಡ ಪ್ರಮಾಣದ ಬಿಸಿನೆಸ್ ಹೌಸ್‌ಗಳಿವೆ. ರಷ್ಯಾದಲ್ಲಿ, ಪಾಕಿಸ್ತಾನದಲ್ಲಿ ಆಗಿರುವಂತೆ ಇಡೀ
ದೇಶದ ಆಡಳಿತ ವ್ಯವಸ್ಥೆಯ ಮೇಲೆ ಪ್ರಭಾವ ಬೀರುವಷ್ಟು ಶಕ್ತಿ ಹೊಂದಿರುವವು ಅವು. ಹಲವು ಜಾಗತಿಕವಾಗಿಯೂ ಹರಡಿಕೊಂಡಿವೆ. ಈಗ ಅವು ಒಂದು ಬಾರ್ಡರ್‌ಲೆಸ್ ಆದ, ರಾಜಕೀಯೇತರ ವ್ಯವಸ್ಥೆಯ ಸ್ವರೂಪದಲ್ಲಿ ಇವೆ. ಕ್ರಮೇಣ
ಅವು ಜಾಗತಿಕ ರಾಜಕೀಯದ ಮೇಲೆಯೂ ಪ್ರಭಾವ ಬೀರಿಬಿಡಬಹುದು. ದೇಶಗಳ ನಡುವೆ ಯುಧ್ದ ಬೇಕೇ ಅಥವಾ
ಬೇಡವೇ ಇಂತಹ ನಿರ್ಧಾರಗಳನ್ನು ಅವು ಪ್ರಭಾವಿಸಿಬಿಡುವ ಸಾಧ್ಯತೆ ಇದೆ. ಅಂತಹ ಶಕ್ತಿ ಅವಕ್ಕೆ ಇದೆ. ಇಂತಹ ಹೊಸ ಮನ್ವಂತರದ ಹೊಸ್ತಿಲಲ್ಲಿ ನಾವು ಇದ್ದೇವೆ.