Saturday, 14th December 2024

ವಿಶ್ವಸಂಸ್ಥೆ ವರದಿ ನಿರ್ಲಕ್ಷಿಸುವಂತಿಲ್ಲ

ಭಾರತದ ಜನಸಂಖ್ಯೆಯು ಮುಂದಿನ ವರ್ಷ 142.9 ಕೋಟಿ ಆಗಲಿದ್ದು, ಚೀನಾದ ಜನಸಂಖ್ಯೆಯು 142.6 ಕೋಟಿ ಇರಲಿದೆ ಎಂದು ಇತ್ತೀಚೆಗೆ ವಿಶ್ವಸಂಸ್ಥೆಯ ವರದಿಯೊಂದು ತಿಳಿಸಿದೆ.

2023ರಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಿ ಅತಿ ಹೆಚ್ಚು ಜನಸಂಖ್ಯೆ ಇರುವ ದೇಶವಾಗಿ ಹೊರಹೊಮ್ಮಲಿದೆ. ಜನಸಂಖ್ಯೆ ಯಲ್ಲಿ ಚೀನಾವನ್ನು ಭಾರತವು ಹಿಂದಿಕ್ಕಲು ಭಾರತದ ಜನಸಂಖ್ಯೆಯಲ್ಲಿ ಆಗಲಿರುವ ಭಾರೀ ಏರಿಕೆಯೇನೂ ಕಾರಣವಲ್ಲ. ಚೀನಾದ ಜನಸಂಖ್ಯೆ ಗಣನೀಯವಾಗಿ ಇಳಿಕೆ ಆಗಿರುವುದು ಅದಕ್ಕೆ ಕಾರಣ. ಅಲ್ಲಿ ಜನರ ಮೇಲೆ ಬಲವಂತದ ಹಲವು ಕ್ರಮ ಗಳನ್ನು ಹೇರುವ ಮೂಲಕ ಜನಸಂಖ್ಯೆ ನಿಯಂತ್ರಣ ತರಲಾಗಿದೆ.

ಆದರೆ ಭಾರತದಲ್ಲಿ ಮಕ್ಕಳನ್ನು ಹೆರುವುದು ಆಯಾ ಕುಟುಂಬಗಳಿಗೆ ಕೊಟ್ಟ ಸ್ವಾತಂತ್ರ್ಯ ಎಂದು ಭಾವಿಸಿಕೊಂಡು ಬರಲಾಗಿದೆ. ಮತ ಬ್ಯಾಂಕ್‌ನ ಆಸೆಗಾಗಿ ಈ ವಿಷಯದಲ್ಲಿ ಸರಕಾರಗಳೂ ಹಸ್ತಕ್ಷೇಪ ಮಾಡಲು ಇಚ್ಛೆ ಪಡುವುದಿಲ್ಲ. ಇದರ ಪರಿಣಾಮವಾಗಿ 2050ರವರೆಗೂ ಭಾರತದ ಜನಸಂಖ್ಯೆ ಏರುಗತಿಯ ಇರಲಿದೆ ಎನ್ನಲಾಗಿದೆ.

ಆ ಹೊತ್ತಿಗೆ ಭಾರತದ ಜನಸಂಖ್ಯೆಯು 166.8 ಕೋಟಿಗೆ ತಲುಪಲಿದೆ. ಆ ಸಂದರ್ಭದಲ್ಲಿ ಚೀನಾದ ಜನಸಂಖ್ಯೆಯು 131.7 ಕೋಟಿಯಷ್ಟು ಇರಲಿದೆ ಎಂದು ಅಂದಾಜಿಸ ಲಾಗಿದೆ. ಜನಸಂಖ್ಯೆ ಹೆಚ್ಚಳವು ಆರ್ಥಿಕ ಪ್ರಗತಿ ಮತ್ತು ಸಾಮಾಜಿಕ ಪ್ರಗತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ಭಾರತದಲ್ಲಿ ಹೀಗೇ ಜನಸಂಖ್ಯೆ ಏರುಗತಿಯಲ್ಲಿ ಹೊರಟರೆ ಜನಸಂಖ್ಯಾ ಅಸಮತೋಲನ ಉಂಟಾಗುವ ದಿನಗಳು ಬರುತ್ತವೆ. ಜನಸಂಖ್ಯೆ ಬೆಳವಣಿಗೆಯನ್ನು ಸಮಾಜದ ಕೆಲವು ವರ್ಗಗಳ ವಿರುದ್ಧ ರಾಜಕೀಯ ಅಸವಾಗಿ ಬಳಸಲು ಯತ್ನಿಸುತ್ತಿದ್ದು, ಅದರಿಂದಲೇ ಅನೇಕರಿಗೆ ಜನಸಂಖ್ಯೆಯಿಂದಾಗುವ ಅಪಾಯಗಳು ಗಮನಕ್ಕೆ ಬರುತ್ತಿಲ್ಲ.

ಹೀಗಾಗಿ ಭಾರತದಲ್ಲೂ ಜನಸಂಖ್ಯೆ ನಿಯಂತ್ರಣಕ್ಕೆ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ. ಈಗಿನಿಂದಲೇ ಜನಸಂಖ್ಯಾ ಸ್ಫೋಟಕ್ಕೆ ಪರಿಹಾರ ಕಂಡುಕೊಂಡರೆ ಅದರ ಫಲ ಮುಂದಿನ ಹತ್ತು ವರ್ಷಗಳಲ್ಲಿ ತಿಳಿಯಲಿದೆ. ಇಲ್ಲವಾದರೆ ಅನ್ನ, ನೀರು, ಆರೋಗ್ಯ, ಶಿಕ್ಷಣ, ಅಭಿವೃದ್ಧಿಯಿಂದ ಪ್ರತಿಯೊಬ್ಬರೂ ವಂಚಿತರಾಗಬೇಕಾಗುತ್ತದೆ.