Saturday, 14th December 2024

ಮಾನವೀಯತೆಯನ್ನು ಮರೆಯತೆ ತಂತ್ರಜ್ಞಾನ ?

ಟೆಕ್ ನೋಟ

ಶಶಿಧರ ಹಾಲಾಡಿ

ತಂತ್ರಜ್ಞಾನಕ್ಕೆ ಕಣ್ಣಿಲ್ಲ, ನಿಜ. ಆದರೆ, ಕರಾಳ ಘಟನೆಗಳ ಛಾಯಾಚಿತ್ರಗಳನ್ನಾಧರಿಸಿ, ಬ್ಲಾಕ್‌ಚೈನ್ ತಂತ್ರಜ್ಞಾನದ ಮೂಲಕ ಎನ್‌ಎಫ್ಟಿ ಕಲಾಕೃತಿಗಳನ್ನು ತಯಾರಿಸಿ, ಹರಾಜು ಮಾಡಿ ಲಾಭಗಳಿಸುವುದು ಎಷ್ಟು ಸರಿ? ಬ್ಲಾಕ್‌ಚೈನ್ ತಂತ್ರಜ್ಞಾನದ ಇಂತಹ ಬಳಕೆಯು ನೈತಿಕವೆ? ಮಾನವೀಯತೆಗೆ ಬೆಲೆ ಇಲ್ಲವೆ? ಹೊಸ ಎನ್‌ಎಫ್ಟಿ ಕಲಾಕೃತಿ ಇಂತಹ ಪ್ರಶ್ನೆಗಳಿಗೆ ದಾರಿಮಾಡಿಕೊಟ್ಟಿದೆ.

ಅಮೆರಿಕದ ಪಾಲಿಗೆ ಅದೊಂದು ಘೋರ ಮತ್ತು ಕರಾಳ ದಿನ. 11 ಸೆಪ್ಟೆಂಬರ್ 2001. ಅಮೆರಿಕದ ಹೆಮ್ಮೆ ಎನಿಸಿದ್ದ ವಿಶ್ವ ವಾಣಿಜ್ಯ ಕಟ್ಟಡದ ಜೋಡಿ ಗೋಪುರಗಳ ಮೇಲೆ, ಪ್ರಯಾಣಿಕರಿದ್ದ ವಿಮಾನಗಳನ್ನು ಢಿಕ್ಕಿ ಹೊಡೆಸಿ, ಬೆಂಕಿ ಹಚ್ಚಿಸಿ, ಆ ಎರಡೂ ಗೋಪುರ ಗಳನ್ನು ಭಯೋತ್ಪಾದಕರು ಕೆಡವಿದ್ದರು. ಇಡೀ ಜಗತ್ತಿನ ಜನರು ಆ ಬಹುಮಹಡಿ ಕಟ್ಟಡವು ಉರಿದು, ಕುಸಿದು ಬೀಳುವುದನ್ನು ಟಿವಿಯಲ್ಲಿ ನೋಡಿ ಬೆಚ್ಚಿ ಬಿದ್ದಿದ್ದರು!

ಆಧುನಿಕ ಮಾನವನು ಇಂತಹದೊಂದು ಘೋರ ಕೃತ್ಯವನ್ನು ಮಾಡಲು ಸಾಧ್ಯವೆ ಎಂದು ಪಶ್ಚಾತ್ತಾಪ ಪಟ್ಟರು. ವರ್ಲ್ಡ್ ಟ್ರೇಡ್ ಸೆಂಟರ್‌ನ್ನು ಎಲ್ಲರ ಕಣ್ಣೆದುರೇ ಬೀಳಿಸಿದ ಭಯೋತ್ಪಾದಕರ ಆ ಕೃತ್ಯವು, ಇಪ್ಪತ್ತೊಂದನೆಯ ಶತಮಾನದ ಆರಂಭದಲ್ಲೇ ನಡೆದು, ಮುಂದಿನ ದಿನಗಳಲ್ಲಿ ಮನುಷ್ಯನ ಕ್ರೂರ ಯೋಚನೆಗಳು ಯಾವ ದಿಕ್ಕಿಗೆ ಹೊರಟಿವೆ ಎಂಬುದರ ಮುನ್ಸೂಚನೆ ನೀಡಿದೆ ಎಂದು ಕೆಲವು ಭದ್ರತಾ ತಜ್ಞರು ವಿಶ್ಲೇಷಿಸಿದರು.

ಆ ಕರಾಳ ದಿನದಂದು, ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದಲ್ಲಿ ಸಾವಿರಾರು ಜನರಿದ್ದರು. ಅವರ ಪೈಕಿ, ಸುಮಾರು 2753 ಜನರು ಮೃತರಾದರು. ಒಂದೇ ಭಯೋತ್ಪಾದಕ ದಾಳಿಯಲ್ಲಿ ಇಂತಹ ದೊಡ್ಡ ಸಂಖ್ಯೆಯ ಜನರು ಮೃತಪಟ್ಟದ್ದು ಒಂದು ಕರಾಳ ಅಂಕಿಸಂಕಿ. ಇಡೀ ಮಾನವ ಕುಲವೇ ತಲೆತಗ್ಗಿಸುವಂತೆ ಮಾಡಿದ ಆ ದಾಳಿಯಲ್ಲಿ, ಸುಮಾರು 110 ಮಹಡಿಯ ಎರಡು ಕಟ್ಟಡ ಗಳು ಕುಸಿದವು, 2753 ಜನ ಸತ್ತರು, ಇನ್ನಷ್ಟು ಜನ ಗಾಯಗೊಂಡರು, ಅದೆಷ್ಟೋ ಕಚೇರಿಗಳು ನಾಶವಾದವು, ಎರಡು ವಿಮಾನಗಳು ಮತ್ತು ಅದರಲ್ಲಿರುವ ಪ್ರಯಾಣಿಕರು ಸಹ ಬೆಂಕಿಗೆ ಆಹುತಿಯಾದರು.

ಈ ರೀತಿ ಸತ್ತವರ ಪೈಕಿ, ಸುಮಾರು 100 ಜನರು ಆ ಬಹು ಮಹಡಿ ಕಟ್ಟಡದಿಂದ ಕೆಳಗೆ ಬಿದ್ದು ಸತ್ತರು ಎಂದು ಅಂದಾಜಿಸ ಲಾಗಿದೆ. ಕೆಲವರು ಭಯದಿಂದ ನೆಗೆದರು, ಇನ್ನು ಕೆಲವರು ಆಕಸ್ಮಿಕವಾಗಿಯೂ ಬಿದ್ದಿದ್ದರು, ಸುರಕ್ಷಿತ ಜಾಗವನ್ನು ಹುಡುಕುವ ವಿಫಲ ಯತ್ನದಲ್ಲಿ ಜಾರಿ ಬಿದ್ದಿದ್ದರು. ಆ ದೃಶ್ಯಗಳನ್ನು ನೇರ ಪ್ರಸಾರದಲ್ಲಿ ನೋಡುತ್ತಿದ್ದ ಹಲವರು ಮಾನಸಿಕವಾಗಿ ಅಸ್ವಸ್ಥರಾದರು.

ಹೊತ್ತಿ ಉರಿಯುತ್ತಿರುವ ಆ ಬಹುಮಹಡಿ ಕಟ್ಟಡದಿಂದ ನೆಗೆಯುತ್ತಿದ್ದ ಆ ಮನುಷ್ಯರ ಮನಸ್ಥಿತಿ ಹೇಗಿರಬಹುದು? ಜೀವ
ಉಳಿಯುವ ಯಾವುದೇ ಭರವಸೆಯೂ ಇಲ್ಲದೇ, ಬೆಂಕಿಯಿಂದ ತಪ್ಪಿಸಿಕೊಳ್ಳಲು ಅವರು ಕೊನೆಯ ದಾರಿಯಾಗಿ ನೆಗೆಯುವ ಆಯ್ಕೆ ಮಾಡಿಕೊಂಡಿದ್ದು ಸರಿಯೆ ತಪ್ಪೇ ಎಂದು ಚರ್ಚಿಸಲೂ ಆಗದಂತಹ ಸ್ಥಿತಿ. ಆ ಕರಾಳ ದಿನದಂದು, ಮೇಲಿನಿಂದ ಕೆಳಕ್ಕೆ
ಬೀಳುತ್ತಿರುವ ಮನುಷ್ಯನ ಚಿತ್ರವನ್ನು ಆಧರಿಸಿ, ಕಲಾಕೃತಿ ರಚಿಸಿ, ಹಣ ಮಾಡುವುದು ಸರಿಯೆ ತಪ್ಪೆ? ಇದೊಂದು ಪ್ರಶ್ನೆ ಈಗ ಎದುರಾಗಿದೆ.

ಇದರಲ್ಲಿ ತಂತ್ರಜ್ಞಾನವೂ ತನ್ನ ಕೈಚಳಕ ತೋರಿಸಿದ್ದು, ಈ ಪ್ರಶ್ನೆಗೆ ಬಹು ಆಯಾಮವಿದೆ. ಬ್ಲಾಕ್‌ಚೈನ್ ತಂತ್ರಜ್ಞಾನ ಉಪಯೋ ಗಿಸಿ, ಎನ್ ಎಫ್ಟಿಯಲ್ಲಿ, ‘ಬೀಳುತ್ತಿರುವ ಮನುಷ್ಯ’ (ಫಾಲಿಂಗ್ ಮ್ಯಾನ್) ಎಂಬ ಕಲಾಕೃತಿಯನ್ನು ರಚಿಸಿ, ಹರಾಜಿಗೆ ಇಡಲಾಗಿದೆ. 11/9ರಂದು ಬಹುಮಹಡಿ ಕಟ್ಟಡದಿಂದ ಬೀಳುತ್ತಿರುವ ಮನುಷ್ಯನ ಫೋಟೋಗಳನ್ನು ಆಧರಿಸಿ, ಅದನ್ನೇ ಹೋಲುವಂತೆ ಡಿಜಿಟಲ್ ಕೃತಿ ರಚಿಸಿ, ಎನ್ ಎಫ್ಟಿ ಮಾರುಕಟ್ಟೆಯಲ್ಲಿ ಅದನ್ನು ಮಾರಾಟಕ್ಕೆ ಇಡಲಾಗಿದೆ.

ತಂತ್ರಜ್ಞಾನ ಉಪಯೋಗಿಸಿ ಅದನ್ನು ರಚಿಸಿದ ಕಲಾವಿದನು, ಅದರ ಎರಡು ಅವತರಣಿಕೆಯನ್ನು ರೂಪಿಸಿದ್ದು, ಕಡಿಮೆ
ಬೆಲೆಯ ಕಲಾಕೃತಿಯು 0.65 ಇಥರಿಯಂಗೆ (ಸುಮಾರು 990 ಡಾಲರ್) ಲಿಸ್ಟ್ ಆಗಿದೆ. ‘ಗೇಮ್‌ಸ್ಟಾಪ್’ ಎಂಬ ಸಂಸ್ಥೆಯು ಈ ಎನ್
ಎ-ಟಿ ಮಾರುಕಟ್ಟೆಯನ್ನು ನಿಯಂತ್ರಿಸುತ್ತದೆ. ಕಲಾವಿದರು, ತಾವು ಬ್ಲಾಕ್‌ಚೈನ್ ತಂತ್ರಜ್ಞಾನದಲ್ಲಿ ರಚಿಸಿದ ಕಲಾಕೃತಿಯನ್ನು ಇಲ್ಲಿ ಮಾರಾಟಕ್ಕೆ ಇಡಬಹುದು. ಮಾರಾಟಗೊಂಡ ಕಲಾಕೃತಿಯ ಬೆಲೆಯ ಶೇ.2.25ರಷ್ಟನ್ನು ಗೇಮ್‌ಸ್ಟಾಪ್ ಕಮಿಷನ್ ರೂಪದಲ್ಲಿ ಪಡೆಯುತ್ತದೆ.

‘ಬೀಳುತ್ತಿರುವ ಮನುಷ್ಯ’ ಅಥವಾ ‘ಫಾಲಿಂಗ್ ಮ್ಯಾನ್’ ಛಾಯಾಚಿತ್ರವು ಮನುಕುಲದ ಒಂದು ಕರಾಳ ಕೃತ್ಯವನ್ನು ರೂಪಕ ರೂಪದಲ್ಲಿ ತೋರಿಸುತ್ತದೆ ಎಂದೇ ಹಲವರ ಅಭಿಪ್ರಾಯ. ಆ ಎರಡು ಬಹುಮಹಡಿ ಕಟ್ಟಡಗಳು ಹೊತ್ತಿ ಉರಿಯುತ್ತಿರುವಾಗ, ಸುದ್ದಿಸಂಸ್ಥೆಗಳ ಛಾಯಾಚಿತ್ರಗ್ರಾಹಕರು ಸೆರೆಹಿಡಿದ, ಬೀಳುತ್ತಿರುವ ಮನುಷ್ಯರ ಛಾಯಾಚಿತ್ರಗಳನ್ನು ಕಂಡ ಕೂಡಲೇ, ದುರಂತದ ನೆನಪಾಗುತ್ತದೆ. ಬೀಳುತ್ತಿರುವ ಮನುಷ್ಯನ ಹಲವು ಚಿತ್ರಗಳು ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಅಸೋಸಿಯೇಟ್ ಪ್ರೆಸ್‌ನ ರಿಚರ್ಡ್ ಡ್ರ್ಯೂ ಎಂಬಾತ ತೆಗೆದ ಚಿತ್ರ ಹೆಚ್ಚು ಪ್ರಸಿದ್ಧಿ ಪಡೆದಿದೆ.

ಈ ಛಾಯಾಚಿತ್ರವನ್ನು ಆಧರಿಸಿ, ಎನ್‌ಎಫ್ಟಿ ಕಲಾಕೃತಿಯನ್ನು ಬೇರೆ ಕಲಾವಿದರು ರೂಪಿಸಬಹುದೆ? ಮನುಷ್ಯನ ವಿಧಿಯನ್ನು
ಅಣಕವಾಡುವ ಕೃತ್ಯ ಇದಲ್ಲವೆ? ಈ ಕರಾಳ ಮತ್ತು ಮನಸ್ಸಿಗೆ ಆಘಾತ ನೀಡುವ ದೃಶ್ಯವನ್ನು ಎನ್‌ಎಫ್ಟಿ ಕಲಾಕೃತಿಯನ್ನಾಗಿ ರೂಪಿಸಿ, ಹಣಮಾಡುವುದು ಎಷ್ಟು ಸರಿ? ಇಂತಹ ನೈತಿಕ ಪ್ರಶ್ನೆಗಳು ಕಲಾವಲಯದಲ್ಲಿ ಎದ್ದಿವೆ. ತಂತ್ರಜ್ಞಾನಕ್ಕೆ ಹೃದಯವಿಲ್ಲ, ಅದೇ ರೀತಿ ಎನ್ ಎಫ್ಟಿ ಕಲಾಕೃತಿಗಳಿಗೂ ಹೃದಯವಿಲ್ಲ ಎಂದು ವಾದಿಸಿ, ಇದು ಕಲಾವಿದನ ಅಭಿವ್ಯಕ್ತಿ ಸ್ವಾತಂತ್ರ್ಯ
ಎನ್ನುವವರಿದ್ದಾರೆ. ಅಂದರೆ, ಮಾನವೀಯತೆ ಯನ್ನೇ ಮರೆತು, ಕೇವಲ ಹಣ ಮಾಡುವ ಮಾಧ್ಯಮವಾಗುತ್ತಿದೆಯೆ ಎನ್‌ಎಫ್ಟಿ?

ಎನ್‌ಎಫ್ಟಿ ಎಂದರೇನು?
ನಾನ್ ಫಂಜಿಬಲ್ ಟೋಕನ್ ಅಥವಾ ಎನ್‌ಎಫ್ಟಿ – ಇದು ಬ್ಲಾಕ್ ಚೈನ್ ತಂತ್ರಜ್ಞಾನದಲ್ಲಿ ಸಂಗ್ರಹಗೊಂಡ ‘ಫೈನಾನ್ಶಿಯಲ್ ಸೆಕ್ಯುರಿಟಿ’. ಎನ್ ಎಫ್ಟಿಯ ಮಾಲಕತ್ವವನ್ನು ಬ್ಲಾಕ್ ಚೈನ್‌ನಲ್ಲಿ ದಾಖಲಿಸುವುದರಿಂದಾಗಿ, ಅದನ್ನು ಮಾರಲು, ವರ್ಗಾಯಿಸಲು
ಸಾಧ್ಯ. ಜತೆಗೆ, ಶೇರುಗಳ ರೀತಿ ಅವುಗಳನ್ನು ಟ್ರೇಡ್ ಸಹ ಮಾಡುತ್ತಾರೆ! ತಂತ್ರಜ್ಞಾನದ ಪ್ರಾಥಮಿಕ ಅರಿವಿದ್ದವರು ಎನ್‌ಎಫ್ಟಿ
ಗಳನ್ನು ತಯಾರಿಸಬಹುದು.

ಫೋಟೋ, ವಿಡಿಯೋ, ಪೈಂಟಿಂಗ್ ಮತ್ತು ಭಾಷಣಗಳನ್ನು ಡಿಜಿಟಲ್ ಫೈಲ್ ಸ್ವರೂಪದಲ್ಲಿ ಎನ್‌ಎಫ್ಟಿಯನ್ನಾಗಿಸಿ,
ಮಾರಾಟ ಮಾಡಬಹುದು, ಹರಾಜು ಮಾಡಲೂಬಹುದು. ಹಲವು ಕಲಾವಿದರು, ಛಾಯಾಚಿತ್ರಗ್ರಾಹಕರು ಇಂದು ಎನ್‌ಎಫ್ಟಿ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ.