Wednesday, 11th December 2024

ಅಪಾಯದ ಅಂಚಿನಲ್ಲಿ ಜಾಗತಿಕ ಆರ್ಥಿಕತೆ

ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

sachidanandashettyc@gmail.com

ಕೂಲಂಕುಶವಾಗಿ ವಿಶ್ಲೇಷಿಸಿದರೆ, ಜಾಗತಿಕ ಆರ್ಥಿಕ ಪರಿಸ್ಥಿತಿಯನ್ವಯ ಜಗತ್ತು ಸಾಲದ ಸುಳಿಗೆ ಸಿಲುಕಿದಂತಹ ಪರಿಸ್ಥಿತಿಯಲ್ಲಿದೆ.

ಆರ್ಥಿಕ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ದೇಶಗಳು ಮತ್ತು ಕೇಂದ್ರ ಬ್ಯಾಂಕ್‌ಗಳು ಸೆಣಸಾಡುತ್ತಿವೆ. ಸಾಲ ಹೆಚ್ಚಾಗಿ ಅದಕ್ಕೆ ಪಾವತಿಸ ಬೇಕಾದ ಬಡ್ಡಿಯ ಹೊರೆ ಹೆಚ್ಚಾದುದರಿಂದ ಹಲವಾರು ದೇಶಗಳ ವಿದೇಶೀ ವಿನಿಮಯ ಕರಗಿದೆ. ಕೋವಿಡ್ ಸಾಂಕ್ರಾಮಿಕ ಹಾಗೂ ರಷ್ಯಾ-ಉಕ್ರೇನ್ ಸಂಘರ್ಷ ಸೇರಿದಂತೆ ಅನೇಕ ಕಾರಣಗಳಿಂದ ಜಾಗತಿಕ ಮಾರುಕಟ್ಟೆಯು ವ್ಯಾಪಕ ಮತ್ತು ಕ್ಷಿಪ್ರ ಬದಲಾವಣೆಗೆ ಗುರಿಯಾಗಿದೆ.

ಪ್ರಸ್ತುತ ವರ್ಷದಲ್ಲೇ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿವೆ. ಈ ದೇಶಗಳ ಕರೆನ್ಸಿ ಮೌಲ್ಯಗಳು ಕುಸಿತ ಕಂಡಿವೆ. ಸಾಲದ ಪ್ರಮಾಣ ವ್ಯಾಪಕವಾಗಿ ಹೆಚ್ಚಿದೆ. ಜಗತ್ತಿನ ಎಲ್ಲ ದೇಶಗಳ ಸರಕಾರಗಳು, ಉದ್ಯಮ ಸಂಸ್ಥೆಗಳು ಮತ್ತು ವ್ಯಕ್ತಿಗಳು ಪಡೆದ ಒಟ್ಟು ಸಾಲವನ್ನು ಜಾಗತಿಕ ಸಾಲದ ಮೊತ್ತ ಎಂದು ಕರೆಯಲಾಗುತ್ತದೆ. ಈ ಸಾಲದ ಮೊತ್ತವು ಅಪಾಯಕಾರಿ ಹಂತಕ್ಕೆ ತಲುಪಿದೆ ಎಂದು ಐಎಂಎಫ್ ಎಚ್ಚರಿಸಿದೆ.

ಒಂದೇ ವರ್ಷದೊಳಗಾಗಿ ಜಾಗತಿಕ ಸಾಲವು 226 ಟ್ರಿಲಿಯನ್ ಡಾಲರ್‌ನಿಂದ 300 ಟ್ರಿಲಿಯನ್ ಡಾಲರ್ ತಲುಪಿದೆ.
ಈಗ ಜಗತ್ತಿನ ಮಾರುಕಟ್ಟೆಯಲ್ಲಿ ಯಾವುದೇ ಖರೀದಿ ಮತ್ತು ಮಾರಾಟಕ್ಕೆ ಬಳಕೆ ಮಾಡುತ್ತಿರುವ ಕರೆನ್ಸಿಯೆಂದರೆ ಡಾಲರ್. ಜಗತ್ತಿನ ಶೇ. 90ರಷ್ಟು ವಹಿವಾಟು ಡಾಲರ್‌ನಿಂದಲೇ ನಡೆಯುತ್ತದೆ. ಕರೆನ್ಸಿ ಮೌಲ್ಯಗಳನ್ನು ಕಾಪಿಟ್ಟುಕೊಳ್ಳಲು ಆಯಾ
ದೇಶಗಳು ಬಡ್ಡಿದರವನ್ನು ಏರಿಕೆ ಮಾಡುತ್ತಾ ಹೋಗುತ್ತವೆ.

ಆದರೆ ಇದು ಪ್ರಗತಿಯ ಮೇಲೆ ಅಡ್ಡಪರಿಣಾಮ ಬೀರುವ ಸಾಧ್ಯತೆಗಳೇ ಹೆಚ್ಚು. ಅಮೆರಿಕದಲ್ಲಿ ಹಣದುಬ್ಬರ ಆಕಾಶುಮುಖಿ ಯಾಗಿದೆ. ಫೆಡರಲ್ ರೇಟ್‌ನ್ನು ಅಲ್ಲಿನ ಕೇಂದ್ರ ಬ್ಯಾಂಕ್ ಏರಿಸಿದೆ. 41 ವರ್ಷದಲ್ಲಿ ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ಈ ಪರಿಸ್ಥಿತಿ ಉದ್ಭವವಾಗಿದೆ. ಇದರರ್ಥ ಆರ್ಥಿಕ ಹಿಂಜರಿಕೆಯ ಭೀತಿ ಹೆಚ್ಚಿದೆ. ಭಾರತದಲ್ಲೂ ಹಣದುಬ್ಬರವೂ ನಿಯಂತ್ರಣಕ್ಕೆ ಬಂದಿಲ್ಲ. ರುಪಾಯಿ ಮೌಲ್ಯವೂ ರು.೮೦ರ ಗಡಿ ದಾಟಿದೆ.

ಅಮೆರಿಕದಲ್ಲಿ ಬಡ್ಡಿದರ ಹೆಚ್ಚಿರುವುದರಿಂದ ಬಹಳಷ್ಟು ಹೂಡಿಕೆದಾರರು ಭಾರತದ ಮಾರುಕಟ್ಟೆಯಿಂದ ಹಣ ವಾಪಸು ಪಡೆ
ಯುತ್ತಿರುವುದು ನಮ್ಮ ಆರ್ಥಿಕತೆಗೆ ಧಕ್ಕೆಯಾಗುತ್ತಿದೆ. ಡಾಲರ್ ಎದುರು ರುಪಾಯಿ ಕುಸಿಯುತ್ತಿದೆ. ಇದೇ ಸಂದರ್ಭದಲ್ಲಿ
ರುಪಾಯಿಯನ್ನು ಸ್ಥಿರಗೊಳಿಸಲು ಆರ್‌ಬಿಐ ಸೂಚನೆ ನೀಡಿದೆ. ಅದಲ್ಲದೆ ಹಣದ ಹರಿವಿನ ಸಮರ್ಪಕ ನಿರ್ವಹಣೆಯನ್ನು
ಕೇಂದ್ರ ಬ್ಯಾಂಕ್ ಮಾಡಲಿದೆ ಎಂಬ ಆರ್‌ಬಿಐ ಗವರ್ನರ್ ಹೇಳಿಕೆ ಆರ್ಥಿಕ ವಲಯದಲ್ಲಿ ಸಂಚಲನ ಮೂಡಿದೆ.

ಅಮೆರಿಕದ ಡಾಲರ್ ಜಾಗತಿಕ ಮಟ್ಟದಲ್ಲಿ ಮೀಸಲು ಕರೆನ್ಸಿ ಇದ್ದಂತೆ. ದೇಶದ ಆರ್ಥಿಕ ಶಕ್ತಿಯು ಡಾಲರ್ ಎದುರು ಆ ದೇಶದ ಕರೆನ್ಸಿಯ ಮೌಲ್ಯದ ಮೇಲೆ ನಿರ್ಧಾರವಾಗುತ್ತದೆ. ಡಾಲರ್ ಎದುರು ರುಪಾಯಿಯ ಮೌಲ್ಯ ಶೇ. 7.05ರಷ್ಟು ಕುಸಿದರೆ ಯೂರೋ ಶೇ. 11.86, ಪೌಂಡ್ ಶೇ. 12.14 ಮತ್ತು ಯೆನ್ ಶೇ. 18.8 ರಷ್ಟು ಕುಸಿದಿದೆ. ಡಾಲರ್ ಎದುರು ರುಪಾಯಿ ಯುರೊ, ಪೌಂಡ್ ಮತ್ತು ಯೆನ್‌ಗಿಂತ ಉತ್ತಮ ಸ್ಥಿತಿಯಲ್ಲಿದೆ.

ಪ್ರಸಕ್ತ ಸನ್ನಿವೇಶದಲ್ಲಿ ಅಂತಾರಾಷ್ಟ್ರೀಯ ವಿನಿಮಯ ಮಾರುಕಟ್ಟೆಯಲ್ಲಿ ರುಪಾಯಿಯನ್ನು ಬಲಪಡಿಸುವುದರ ಜತೆಗೆ ಡಾಲರ್ ಎದುರು ರುಪಾಯಿಯ ಅಸ್ಥಿರತೆ ಕಡಿಮೆ ಮಾಡುವುದು ಆರ್ಥಿಕ ವ್ಯವಸ್ಥೆ ಬಲಪಡಿಸಲು ಕೈಗೊಳ್ಳಬೇಕಾದುದು ಪ್ರಥಮ ಆದ್ಯತೆ ಗಳಲ್ಲೊಂದಾಗಿದೆ. ರುಪಾಯಿ ಮೌಲ್ಯ ಕುಸಿತವು ಪಾವತಿ ಸಮತೋಲನ ಸ್ಥಿತಿಯನ್ನು ಬಾಧಿಸಬಹುದು.

ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ತೊಡಕು ಉಂಟು ಮಾಡಬಹುದು. ಜೀವನ ವೆಚ್ಚವನ್ನು ಹೆಚ್ಚಿಸಬಹುದು. ವಿದೇಶೀ ಸಾಲಕ್ಕೆ ನೀಡಬೇಕಾದ ಬಡ್ಡಿಯು ಹೆಚ್ಚಿಸಬಹುದು. ಸೆಪ್ಟೆಂಬರ್ ವೇಳೆಗೆ ರಿಪೋ ದರವು ಶೇ.5.5ಕ್ಕೆ ತಲುಪಬಹುದು. ನಿರುದ್ಯೋಗ ದರ ಹೆಚ್ಚಬಹುದು. ನೇರ ಹೂಡಿಕೆ ಕಡಿಮೆಯಾಗಿ ಅಂತಾರಾಷ್ಟ್ರೀಯ ಹಣಕಾಸು ವರ್ಗಾವಣೆ ದುರ್ಬಲಗೊಳ್ಳಬಹುದು. ರುಪಾಯಿ ಮೌಲ್ಯ ಕುಸಿಯುತ್ತ ಇರುವ ಕಾರಣ ಆಮದು ಮಾಡಿಕೊಳ್ಳುವ ಸರಕುಗಳ ಬೆಲೆ ಜಾಸ್ತಿಯಾಗುವ ಸಾಧ್ಯತೆ ಹೆಚ್ಚಿದೆ.

ಆದುದರಿಂದ ಹಣದುಬ್ಬರವನ್ನು ನಿಯಂತ್ರಿಸಲು ಆರ್‌ಬಿಐ ಆಗಸ್ಟ್‌ನ ಹಣಕಾಸು ನೀತಿ ಸಭೆಯಲ್ಲಿ ರಿಪೋ ದರವನ್ನು ಶೇ. 0.4ರಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ಮುಂದಿನ ಎರಡು ಹಂತಗಳಲ್ಲಿ ಶೇ. 0.60ರ ರಷ್ಟು ಹೆಚ್ಚಿಸಬಹುದು. ಸೆಪ್ಟೆಂಬರ್ ವೇಳೆಗೆ ರಿಪೋ ದರವು ಶೇ. 5.5ಕ್ಕೆ ತಲುಪಬಹುದು. ಉಕ್ರೇನ್ ಮೇಲಿನ ರಷ್ಯಾ ಯುದ್ಧ ಇನ್ನಷ್ಟು ಮುಂದುವರಿದರೆ ಹಣದುಬ್ಬರ ಕಡಿಮೆಯಾಗದು. ಆಹಾರ ವಸ್ತುಗಳ ಬೆಲೆ ದುಬಾರಿಯಾಗುತ್ತಿದೆ ಮತ್ತು ಇದು ಸತತ 15 ತಿಂಗಳುಗಳಿಂದ
ಎರಡಂಕಿ ದಾಟಿ ನಿಂತಿದೆ. ಆಹಾರ ಪದಾರ್ಥಗಳ ಹೊಸ ತೆರಿಗೆಯಿಂದ ಹಣದುಬ್ಬರ ಹೆಚ್ಚಳವಾಗಬಹುದು.

ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಹಣದುಬ್ಬರ, ಬಡ್ಡಿದರ ಹೆಚ್ಚಾಗುತ್ತಿರುವುದು, ರಷ್ಯಾದ ಮೇಲಿನ ನಿರ್ಬಂಧಗಳು ಜಾಸ್ತಿ ಯಾಗಿರುವುದು, ರಷ್ಯಾದ ತೈಲದ ಮೇಲೆ ಹೇರಿರುವ ಆರ್ಥಿಕ ನಿರ್ಬಂಧಗಳ ಪರಿಣಾಮವಾಗಿಯೂ ಮತ್ತು ರಷ್ಯಾ ದೇಶವು ಯುರೋಪಿನ ಕೆಲವು ದೇಶಗಳಿಗೆ ಅನಿಲ ಪೂರೈಕೆ ತಡೆಹಿಡಿದುದರ ಪರಿಣಾಮದಿಂದ ಯುರೋಪಿನಲ್ಲಿ ಇಂಧನ ಕೊರತೆ ತೀವ್ರವಾಗಿ ಯುರೋಪಿನಲ್ಲಿ ಆರ್ಥಿಕ ಹಿಂಜರಿತವಾಗುವ ಸಾಧ್ಯತೆಗಳು ಗೋಚರವಾಗುತ್ತಿದೆ.

ಸರಕುಗಳ ಬೆಲೆ ಹೆಚ್ಚಳವೇ ಜಗತ್ತಿನ ಎಲ್ಲೆಡೆ ಹಣದುಬ್ಬರದ ಪ್ರಮಾಣ ತೀವ್ರ ಹೆಚ್ಚಳಕ್ಕೆ ಕಾರಣವಾಗಿದೆ. ಡಾಲರ್ ಮತ್ತು
ರೂಪಾಯಿ ವಿನಿಮಯ ದರವು ಬೇಡಿಕೆ ಮತ್ತು ಪೂರೈಕೆಯನ್ನು ಅವಲಂಬಿಸಿದೆ. ಬೇಡಿಕೆ ಹೆಚ್ಚಿದ್ದು ಪೂರೈಕೆ ಕಡಿಮೆಯಿದ್ದರೆ
ಸಹಜವಾಗಿ ಬೆಲೆಯೇರಿಕೆಯಾಗುತ್ತದೆ. ಡಾಲರ್‌ಗೆ ಬೇಡಿಕೆ ಹೆಚ್ಚಿರುವುದರಿಂದ ಅದರ ಮೌಲ್ಯ ಹೆಚ್ಚಾಗಿದೆ. ಹೀಗಾಗಿ
ರುಪಾಯಿ ಎದುರು ಡಾಲರ್ ದುಬಾರಿಯಾಗಿ ಪರಿಣಮಿಸಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲವನ್ನು ಡಾಲರ್ ನಲ್ಲಿ ಮಾರಾಟ ಮಾಡ ಲಾಗುತ್ತದೆ. ಭಾರತವು ಕಚ್ಚಾ ತೈಲಕ್ಕಾಗಿ ಆಮದನ್ನೇ ನೆಚ್ಚಿ ಕೊಂಡಿರುವುದು ರುಪಾಯಿ ಮೌಲ್ಯ ಕುಸಿಯಲು ಪ್ರಮುಖ ಕಾರಣಗಳಲ್ಲೊಂದಾಗಿದೆ. ಭಾರತವು ಕಚ್ಚಾತೈಲದ ಶೇ. 85ನ್ನು ಆಮದು ಮಾಡಿಕೊಳ್ಳುತ್ತದೆ. ಕಚ್ಚಾತೈಲ ಬೆಲೆ ೧೦೦ ಡಾಲರ್ ಗಡಿಯನ್ನು ದಾಟಿ 140  ಡಾಲರ್‌ಗೂ ತಲುಪಿತ್ತು. ರುಪಾಯಿ ಮೌಲ್ಯ ಕಡಿಮೆಯಾಗಿ ಆಮದು ವೆಚ್ಚ ಹೆಚ್ಚಾಗತ್ತಿದ್ದು ಬೆಲೆ ಏರಿಕೆಯಾಗುತ್ತಿವೆ.

ಸಾಗರೋತ್ತರ ಶಿಕ್ಷಣ ವಿದೇಶಿ ಪ್ರವಾಸ ದುಬಾರಿಯಾಗಿದೆ. ರಫ್ತುದಾರರಿಗೆ ಲಾಭವಾಗುತ್ತಿದೆ. ರಷ್ಯಾದಿಂದ ರಿಯಾಯಿತಿ ದರದಲ್ಲಿ ಸ್ವಲ್ಪ ಪ್ರಮಾಣದ ಕಚ್ಚಾತೈಲ ಖರೀದಿಸಿದೆ. ಆರ್‌ಬಿಐ ಮತ್ತು ಕೇಂದ್ರ ಸರಕಾರಗಳು ರುಪಾಯಿ ಮೌಲ್ಯದ ಕುಸಿತದ ವೇಗಕ್ಕೆ ಕಡಿವಾಣ ಹಾಕಲು ತೆಗೆದುಕೊಂಡಿರುವ ಕೆಲವು ಕ್ರಮಗಳಿಂದ ರುಪಾಯಿ ಮೌಲ್ಯವು ತೀರಾ ಕುಸಿಯಲಿಕ್ಕಿಲ್ಲ. ಅಂತಾರಾಷ್ಟ್ರೀಯ ವಹಿವಾಟುಗಳನ್ನು ರುಪಾಯಿ ಮೂಲಕ ನಡೆಸಲು ಬೇಕಿರುವ ವ್ಯವಸ್ಥೆಯನ್ನು ಆರ್‌ಬಿಐ ಇತ್ತೀಚೆಗೆ ರೂಪಿಸಿದೆ. ಚಿನ್ನದ ಆಮದಿನಿಂದ ಡಾಲರ್ ಬೇಡಿಕೆ ಹೆಚ್ಚಿದ ಕಾರಣ ಚಿನ್ನದ ಆಮದಿನ ಮೇಲೆ ಸುಂಕ ಹೆಚ್ಚಿಸಿದೆ.

ಜಾಗತಿಕ ಮಟ್ಟದಲ್ಲಿ ಇಂಧನ, ಸರಕು ಮತ್ತು ಆಹಾರ ಪದಾರ್ಥಗಳ ಮಾರುಕಟ್ಟೆಗೆ ಧಕ್ಕೆಯಾಗಿದೆ. ಯುದ್ಧದ ಬೆನ್ನಲ್ಲೇ ಕೆಲವು ದೇಶಗಳು ಆರ್ಥಿಕ ದಿಗ್ಬಂಧನದಂತಹ ಪ್ರಬಲ ಅಸ್ತ್ರವನ್ನು ಪ್ರಯೋಗಿಸಿವೆಯಾದುದರಿಂದ ಬಹುತೇಕ ದೇಶಗಳಲ್ಲಿ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಮತ್ತು ಕೊರತೆ ಉಂಟಾಗಿದೆ. ಇದರಿಂದಾಗಿ ಹಣಕಾಸು ಸಂಸ್ಥೆಗಳು ಮತ್ತು ಅವುಗಳ ವಹಿವಾಟುಗಳನ್ನು ಸ್ಥಗಿತಗೊಳಿಸಿವೆ. ಜಾಗತಿಕ ಮಾರುಕಟ್ಟೆ ಅಲ್ಲೋಲ ಕಲ್ಲೋಲವಾಗಿದೆ. ಇದರ ಪರಿಣಾಮವು ನೂರಕ್ಕೂ ಹೆಚ್ಚು ದೇಶಗಳನ್ನು ಭಾದಿಸಬಹುದು ಮತ್ತು ಜಾಗತಿಕ ವಹಿವಾಟು ನಡೆಸಲು ಅಗತ್ಯವಿರುವ ನಿಧಿ  ಹೊಂದಿಸಿ ಕೊಳ್ಳಲು ಆ ದೇಶಗಳಿಗೆ ತೊಡಕಾಗಬಹುದು ಎಂದು ಐಎಂಎಫ್ ಕಳವಳ ವ್ಯಕ್ತಪಡಿಸಿದೆ. ಈ ಸ್ವರೂಪದ ಪ್ರತಿಕ್ರಿಯೆ ಕಂಡು ಬಂದಿದ್ದು ಎರಡನೇ ವಿಶ್ವಯುದ್ಧದ ನಂತರ ಇದೇ ಮೊದಲು.

ಭಾರತದಲ್ಲಿ ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ ಜೂನ್‌ನಲ್ಲಿ ಶೇ.7.01 ಆಗಿದೆ. ಆದರೆ ಇತರೆ ಪ್ರಬಲ
ರಾಷ್ಟ್ರಗಳಿಗಿಂತ ಉತ್ತಮ ಸ್ಥಿತಿಯಲ್ಲಿದೆ. ಅಮೆರಿಕ ಮತ್ತು ಮತ್ತು ಬ್ರಿಟನ್‌ನಲ್ಲಿ ಹಣದುಬ್ಬರ ಪ್ರಮಾಣವು ನಾಲ್ಕು ದಶಕಗಳ
ಗರಿಷ್ಠ ಮಟ್ಟವನ್ನು ತಲುಪಿದೆ. ಚೀನಾದ ಅರ್ಥ ವ್ಯವಸ್ಥೆ ಕಂಗಲಾಗಿದೆ. ಮತ್ತು ಅದರ ಚಿಲ್ಲರೆ ಕ್ಷೇತ್ರದ ವಹಿವಾಟಲು ಶೇ.
೧೧ಕ್ಕೆ ಕುಸಿದಿದೆ. ಹಣದುಬ್ಬರವು ಕೆನಡಾದಲ್ಲಿ ಶೇ. 7.7, ಅಮೆರಿಕದಲ್ಲಿ ಶೇ. 9.1, ಟರ್ಕಿಯಲ್ಲಿ ಶೇ. 78.62 ಜಿಗಿದಿದೆ.

ಯು.ಕೆ.ಯಲ್ಲಿ 9.1 ಇದ್ದು ರಾಜಕೀಯ ಬಿಕ್ಕಟ್ಟಿನಿಂದ ಶೇ. 11 ದಾಟಬಹುದು ಎಂದು ಊಹಿಸಲಾಗಿದೆ. ಕೊರಿಯಾ ಶೇ. 6ಕ್ಕೆ
ಏರಿಕೆಯಾಗಿ 24 ವರ್ಷಗಳಲ್ಲಿಯೇ ಅತ್ಯಽಕ ಸ್ಥಿತಿ ತಲುಪಿದೆ. ಆಸ್ಟ್ರೇಲಿಯಾ ಶೇ. 6; ಇದು 22 ವರ್ಷಗಳಲ್ಲಿಯೇ ಅತ್ಯಧಿಕ,
ಜಗತ್ತಿನ ೩ನೇ ಅತಿದೊಡ್ಡ ಅರ್ಥವ್ಯವಸ್ಥೆಯಾದ ಜಪಾನ್‌ನ ಹಣದುಬ್ಬರ ಒಂದೇ ವರ್ಷದಲ್ಲಿ ಶೇ. 3ರಷ್ಟು ಏರಿಕೆಯಾಗಿದೆ.

ಶ್ರೀಲಂಕಾದ ರೀತಿಯಲ್ಲಿಯೇ ಇನ್ನೂ ಕೆಲ ದೇಶಗಳು ತೀವ್ರ ಆರ್ಥಿಕ ಬಿಕ್ಕಟ್ಟಿನ ಅಪಾಯದಲ್ಲಿವೆ. ಪ್ರಮುಖವಾಗಿ ಲೆಬನನ್,
ರಷ್ಯಾ, ಸುರಿನಾಮ್ ಮತ್ತು ಜಾಂಬಿಯಾ ಈಗಾಗಲೇ ಸುಸ್ತಿ ದೇಶಗಳಾಗಿವೆ. ಬೆಲಾರಸ್ ಮುಳುಗುತ್ತಿದೆ. ಸಾಲದ ವೆಚ್ಚ ಮತ್ತು
ಹಣದುಬ್ಬರದಿಂದಾಗಿ ಸುಮಾರು 12 ರಾಷ್ಟ್ರಗಳು ಆರ್ಥಿಕ ಕುಸಿತದ ಭೀತಿಯ ಅಪಾಯದಲ್ಲಿವೆ. ಉಕ್ರೇನ್, ಟುನೇಶಿಯಾ,
ಘಾನಾ, ಈಜಿಪ್ಟ್, ಈಕ್ವೆಡಾರ್, ನೈಜೀರಿಯಾ, ಅರ್ಜೆಂಟಿನಾ, ಕಿನ್ಯಾ, ಪಾಕಿಸ್ಥಾನ, ಇಥಿಯೋಪಿಯಾ, ಎಲ್ ಸಲ್ವಾದಾರ್
ಮುಂತಾದ ದೇಶಗಳು ಅಪಾಯದ ಅಂಚಿನಲ್ಲಿವೆ.

ಜಾಗತಿಕ ಮಾರುಕಟ್ಟೆಗಳು ಶಾಂತವಾಗಿದ್ದರೆ ಐಎಂಎಫ್ ಬೆಂಬಲ ದೊರೆತರೆ ಕೆಲವು ದೇಶಗಳು ಈಗಲೂ ಅಪಾಯದಿಂದ ಪಾರಾಗಿ ಡಿಪಾಲ್ಟರ್ ದೇಶಗಳಾಗುವುದನ್ನು ತಪ್ಪಿಸಿಕೊಳ್ಳಬಹುದು. ಭಾರತದ ಆರ್ಥಿಕತೆಯ ಅಡಿಪಾಯಗಳು ಭದ್ರವಾಗಿವೆ.
ಸ್ಥಗಿತದ ಅಪಾಯವನ್ನು ಎದುರಿಸಬಲ್ಲದು. ಆದರೆ ಜಾಗತಿಕ ಆರ್ಥಿಕತೆಯಲ್ಲಿ ಅಸ್ಥಿರತೆ ಮುಂದುವರಿದರೆ ಅದರ ಪ್ರತಿಕೂಲ
ಪರಿಣಾಮಗಳನ್ನು ಊಹಿಸಲು ಸಾಧ್ಯವಿಲ್ಲ. ರುಪಾಯಿಯನ್ನು ರಕ್ಷಿಸಲು ವಿದೇಶಿ ವಿನಿಮಯ ಮೀಸಲಿನ ಪ್ರಮಾಣ ಬಳಸಬಹುದು.

ಆದರೆ ಅಪಾಯಕ್ಕೆ ದಾರಿಯಾಗಬಾರದು ಮತ್ತು ಧಾವಂತಕ್ಕೆ ಮುನ್ನುಗಿ ಪಶ್ಚಾತ್ತಾಪ ಮಾಡಬೇಕಾದೀತು ಎಂಬ ನಿಟ್ಟಿನಲ್ಲಿ ರುಪಾಯಿ ಮೂಲಕವೇ ವಹಿವಾಟು ನಡೆಸುವ ಅತ್ಯಂತ ದಿಟ್ಟವಾದ ಕ್ರಮವನ್ನು ಆರ್‌ಬಿಐ ತೆಗೆದುಕೊಂಡದ್ದು ಶ್ಲಾಘನೀಯ. ಇದರಿಂದ ರೂಪಾಯಿಯನ್ನು ಬಲಗೊಳಿಸಲು ಸಾಧ್ಯವಾಗುತ್ತದೆ. ಸರಕಾರ ಮತ್ತು ಆರ್‌ಬಿಐ ವಿವೇಕಯುತವಾಗಿ ನಡೆಯುತ್ತಿವೆ ಅವು ಅಜಾಗೂರಕವಾಗಿಲ್ಲ.

ಇದೀಗ ವಿದೇಶೀ ವಿನಿಮಯ ಮಾರುಕಟ್ಟೆಯಲ್ಲಿ ರುಪಾಯಿಯನ್ನು ಸ್ಥಿರಗೊಳಿಸಿ ಮೌಲ್ಯ ಹೆಚ್ಚಿಸಲು ಸರಕಾರ ಮತ್ತು ಆರ್
ಬಿಐ ಗಂಭೀರ ಪ್ರಯತ್ನ ಮಾಡುತ್ತಿವೆ. ಆರ್ಥಿಕ ಸ್ಥಿಮಿತತೆಯ ಸ್ಥಾಪನೆಯಾಗಬೇಕಾಗಿದೆ. ಆರ್ಥಿಕ ಮುಗ್ಗಟ್ಟಿನ ಸಮಯದಲ್ಲಿ
ತೆರಿಗೆ ಕಡಿಮೆ ಮಾಡುವ ಮತ್ತು ಸಾರ್ವಜನಿಕ ವೆಚ್ಚವನ್ನು ಹೆಚ್ಚಿಸುವ ಹಾಗೂ ಶೃಂಗದ ಸಮಯದಲ್ಲಿ ತೆರಿಗೆಗಳನ್ನು ಹೆಚ್ಚಿಸುವ
ಮತ್ತು ಸಾರ್ವಜನಿಕ ವೆಚ್ಚವನ್ನು ತಗ್ಗಿಸುವಿಕೆಗೆ ರಾಜ್ಯ ಕೋಶ ನೀತಿಯಲ್ಲಿ ಪುರಸ್ಕಾರವಿದೆ.

ಇದನ್ನು ಪಾಲಿಸಿ ವಿದೇಶೀ ಹೂಡಿಕೆಯ ಹೆಚ್ಚಳದ ಮೂಲಕ ಬಂಡವಳಾದ ಕೊರತೆಯನ್ನು ತುಂಬಲು ವಿದೇಶಿ ಉದ್ಯಮಶೀಲ ರನ್ನು ಆಕರ್ಷಿಸಲು ಅನುಕೂಲವಾಗುವಂತಹ ಕೆಲವು ವಿನಾಯತಿಯನ್ನು ತೋರಬಹುದು. ಇದು ಆರ್ಥಿಕ ನೀತಿ. ಆರ್‌ಬಿಐ ವಿದೇಶೀ ಸಾಂಸ್ಥಿಕ ಹೂಡಿಕೆದಾರರು ಮತ್ತು ಅನಿವಾಸಿ ಭಾರತೀಯರ ಆತ್ಮವಿಶ್ವಾಸ ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಅದಲ್ಲದೆ ಭಾರತದಿಂದಾಗುವ ರಫ್ತಿಗೆ ಒತ್ತು ನೀಡಿ ಜಾಗತಿಕ ಮಟ್ಟದಲ್ಲಿ ವಹಿವಾಟು ಹೆಚ್ಚಿಸುವ ಉದ್ದೇಶ ಆರ್‌ಬಿಐಗೆ ಇದೆ.