Friday, 13th December 2024

ವಿಮಾನಯಾನ ಕಂಪನಿಗಳ ಸರ್ಕಸ್‌ !

ವಿಶ್ಲೇಷಣೆ

ರಾಜೀವ್ ಪ್ರತಾಪ್‌ ರೂಡಿ

ವಿಮಾನಯಾನಕ್ಕೆ ಬೇಕಾದ ಟೈಟಾನಿಯಂ ಪೂರೈಕೆಯಲ್ಲಿ ದೊಡ್ಡ ವ್ಯತ್ಯಯ ಉಂಟಾಗಿದೆ. ಅದು ಶೇ.೬೦ರಷ್ಟು ಪೂರೈಕೆ ಯಾಗುತ್ತಿದ್ದುದು ರಷಿಯಾದಿಂದಲೇ ಎಂಬುದು ಗಮನಿಸಬೇಕಾದ ಸಂಗತಿ. ಏರುತ್ತಿರುವ ತೈಲಬೆಲೆಯ ಕಾರಣದಿಂದಾಗಿ ವಿಮಾನಯಾನ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿ ಹದಗೆಡುತ್ತಲೇ ಬಂದಿದೆ.

ಇತ್ತೀಚಿನ ದಿನಗಳಲ್ಲಿ ವಿಮಾನಗಳಲ್ಲಿ ಕಾಣಿಸಿಕೊಳ್ಳುತ್ತಿರುವ ತಾಂತ್ರಿಕ ದೋಷಗಳು ಹೆಚ್ಚಾಗಿದ್ದು ಸಾರ್ವಜನಿಕವಾಗಿ ತಪಾ ಸಣೆ ಬಹಳ ಅಗತ್ಯವೆನಿಸಿದೆ. ಜತೆಗೆ ಭಾರತೀಯ ವೈಮಾನಿಕ ಉದ್ಯಮದ ವಿಚಾರದಲ್ಲಿ ಹಲವು ಆತಂಕಗಳಿಗೂ ಇದು ದಾರಿ ಮಾಡಿಕೊಟ್ಟಿದೆ.

ಭಾರತೀಯ ವಿಮಾನಯಾನ ಉದ್ಯಮ ಮಾರುಕಟ್ಟೆಯ ಹೊಡೆತದ ವಿರುದ್ಧ ಮತ್ತು ಪ್ರಯಾಣಿಕರ ಆದ್ಯತೆಗಳಲ್ಲಿರುವ ವೈರುಧ್ಯದ ವಿರುದ್ಧ ಸತತವಾಗಿ ತನ್ನ ಪ್ರಚಂಡ ಸ್ಥಿರತೆಯನ್ನು ಪ್ರದರ್ಶಿಸುತ್ತಲೇ ಬಂದಿದೆ. ಈ ನಿರಂತರ ಹೋರಾಟದಲ್ಲಿ ಅನೇಕ ವಿಮಾನಯಾನ ಕಂಪನಿಗಳು ಬಂದುಹೋಗಿವೆ. ಈ ಉದ್ಯಮದಲ್ಲಿ ಆತ್ಮತೃಪ್ತಿಯೆಂಬುದು ಸಾಧಿಸಲಸಾಧ್ಯ ಸಂಗತಿ ಎಂಬುದನ್ನು ವಿಮಾನಯಾನ ಕಂಪನಿಗಳು ಮತ್ತು ಅವುಗಳ ನಿಯಂತ್ರಕರು ಇಷ್ಟುವರ್ಷ ಗಳಲ್ಲಿ ಕಂಡುಕೊಂಡಿದ್ದಾರೆ.

ವಿಮಾನಯಾನ ಕಂಪನಿಗಳ ಸುರಕ್ಷತೆ ವಿಚಾರವನ್ನು ಗಮನಿಸುವುದಾದರೆ ಅಂಕಿ-ಅಂಶಗಳ ಅವುಗಳನ್ನು ನಿರ್ಣಾಯಕ ಉತ್ತರಗಳ ನೆಲೆಯಲ್ಲಿ ಪರಿ ಗಣಿಸಬೇಕೆಂಬುದು ಸದ್ಯದ ಆಶಯ. ಐಎಟಿಎ ದಾಖಲೆಗಳ ಪ್ರಕಾರ 2021ರಲ್ಲಿ 9.9 ಲಕ್ಷ ವಿಮಾನಯಾನಗಳಲ್ಲಿ ಕೇವಲ ಒಂದು ಅವಗಢ ಸಂಭವಿಸಿದೆ. ಅದನ್ನು ಜಾಗತಿಕ ಮಟ್ಟದಲ್ಲಿ ಹೇಳುವು ದಾದರೆ 2020ರಲ್ಲಿ 6.3 ಲಕ್ಷ ವಿಮಾನಯಾನಗಳ ಪೈಕಿ ಒಂದರಲ್ಲಿ ಮಾತ್ರ ಅಪಘಾತ ಸಂಭವಿಸಿತ್ತು.

ಜಾಗತಿಕವಾಗಿ ವೈಮಾನಿಕ ಅಪಘಾತಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. 2019ರಲ್ಲಿ ಹತ್ತು ಲಕ್ಷ ವಿಮಾನ ಯಾನಗಳ ತುಲನೆಯಲ್ಲಿ ಅಪಘಾತದ ಪ್ರಮಾನ 0.82 ರಷ್ಟಿತ್ತು. ಇದು ಭಾರತದ ಮಟ್ಟಿಗಿನ ಲೆಕ್ಕಾಚಾರವಾದರೆ
ಜಾಗತಿಕವಾಗಿ ಈ ಪ್ರಮಾಣ 3.02 ರಷ್ಟಿತ್ತು. ಭಾರತದ ಮಟ್ಟಿಗೆ ಇದೊಂದು ಅಪೂರ್ವವೆನ್ನಬಹುದಾದ ದಾಖಲೆ. ಹಲವಾರು
ತಾಂತ್ರಿಕ ಸಂಗತಿಗಳ ನಡುವೆಯೂ ವೈಮಾನಿಕ ಪ್ರಯಾಣ ಸುರಕ್ಷಿತ ಎಂಬುದು ಸಾಬೀತಾಗಿರುವ ಅಂಶ.

ವಿಮಾನಯಾನದಲ್ಲಿನ ಸುರಕ್ಷತೆಯ ಪ್ರಮುಖ ಅಂಶವೆಂದರೆ ಮಾನವ ಸಂಪನ್ಮೂಲದಲ್ಲಿರುವ ಗುಣಮಟ್ಟ. ಪೈಲಟ್ ಗಳಿಗೆ ಕೊಡಲಾಗುತ್ತಿರುವ ತರಬೇತಿ, ತಾಂತ್ರಿಕ ಸಿಬ್ಬಂದಿಗೆ ಇರುವ ಅಪೂರ್ವ ಕ್ಷಮತೆ ಒಟ್ಟಾರೆಯಾಗಿ ವೈಮಾನಿಕ ಕ್ಷೇತ್ರದ ಸುರಕ್ಷತೆಗೆ ಬಹುಮುಖ್ಯ ಕಾರಣವಾಗಿದೆ. ವೈಮಾನಿಕ ಉಪಕರಣಗಳ ನಿರ್ವಹಣೆಯಲ್ಲಿ ಸಾಧಿಸಲಾಗಿರುವ ಔನ್ನತ್ಯ ಕೂಡ ಸುರಕ್ಷತೆಗೆ ಮತ್ತೊಂದು ಕಾರಣ ಎನ್ನಬಹುದಾಗಿದೆ.

ಈ ಎಲ್ಲ ದಾಖಲೆಗಳ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟು ಹೇಳುವುದಾದರೆ, ದಿನವಹಿ ಅವಧಿಯಲ್ಲಿ ಹದಿನೈದು ನಿಮಿಷಕ್ಕಿಂತ ಹೆಚ್ಚಿನ ವಿಳಂಬಕ್ಕೆ ಕಾರಣವಾದ ವಿಮಾನ ಯಾನದ ಕುರಿತು ದೂರುಗಳನ್ನು ಅದರ ನಿರ್ವಾಹಕ ಮತ್ತು ವಿಮಾನದ ಉಪಾದಕರಿಗೆ ರವಾನೆ ಮಾಡುವ ಪರಿಪಾಠವಿದೆ. ಜಾಗತಿಕವಾಗಿ ವಿಮಾನಯಾನದ ಕಾರ್ಯನಿರ್ವಹಣಾ ವೈಖರಿಯನ್ನು ತುಲನೆ ಮಾಡುವುದಕ್ಕೆ ಇದನ್ನು ಮಾನದಂಡವಾಗಿಯೂ ಪರಿಗಣಿಸಲಾಗುತ್ತಿದೆ.

ವೈಮಾನಿಕ ಸಂಸ್ಥೆಗಳ ಕನಿಷ್ಠ ಉಪಕರಣ ಪಟ್ಟಿಯನ್ನು ಭಾರತೀಯ ವಿಮಾನಯಾನ ಸಂಸ್ಥೆಗಳು ಕೂಡ ಮತ್ತೆ ಮತ್ತೆ
ದಾಖಲಿಸುತ್ತಲೇ ಇವೆ. ಸುರಕ್ಷತೆಯ ಮಾನದಂಡದ ವಿಚಾರ ಬಂದಾಗ ಇದಿಷ್ಟೇ ಪ್ರಮುಖವೆನಿಸುವುದಿಲ್ಲ. ಇಲ್ಲಿ ಡಿಜಿಸಿಎ.
ಪಾತ್ರವೂ ಪ್ರಮುಖವೆನಿಸುತ್ತದೆ. ಜತೆಜತೆಗೆ ಐಎಟಿಎ ಸೇರಿದಂತೆ ಹಲವಾರು ನಿಯಂತ್ರಣ ಪ್ರಾಧಿಕಾರಗಳು ಎಚ್ಚರಿಕೆಯ
ಕ್ರಮಗಳನ್ನು ನಿರ್ವಹಿಸುತ್ತಲೇ ಇರುತ್ತವೆ. ಗಮನಿಸಬೇಕಾದ ಇನ್ನೂ ಒಂದು ಸಂಗತಿಯೆಂದರೆ ವಿಂಡ್ ಶೀಲ್ಡ್ ಬಿರುಕುಗಳು. ಇವನ್ನು ವಿಮರ್ಶಾತ್ಮಕವಾಗಿ ಪರಿಗಣಿಸಲಾಗುತ್ತದೆ. ವಾತಾವರಣದ ಪ್ರತಿಕೂಲತೆಯ ಕಾರಣದಿಂದಾಗಿ ಇದು ಸ್ವಾಭಾವಿಕ ಎಂಬುದನ್ನು ವೈಮಾನಿಕ ಸಂಸ್ಥೆಗಳು ಪರಿಗಣಿಸುತ್ತಲೇ ಇರುತ್ತವೆ.

ವಿಮಾನಯಾನದ ಅವಧಿಯ 1000 ದಿಂದ 10000 ಗಂಟೆಗಳ ಅವಧಿಯ ನಡುವಿನಲ್ಲಿ ಇಂತಹ ವಿಂಡ್ ಶೀಲ್ಡ್ ಸಮಸ್ಯೆ ಎಷ್ಟುಬಾರಿ ಸಂಭವಿಸುತ್ತದೆ ಎಂಬುದರ ಆಧಾರದ ಮೇಲೆ ಅದರ ನಿರ್ವಹಣೆಯ ಬಗ್ಗೆ ಗಮನ ಹರಿಸಲಾಗುತ್ತದೆ. ಹಾರುತ್ತಿರುವ ವಿಮಾನಕ್ಕೆ ಹಕ್ಕಿಯೊಂದು ಬಡಿದಾಗಲೂ ಅವಘಡ ಸಂಭವಿಸಬಹುದು, ಆದರೆ ಇದು ನಿಯಂತ್ರಣದಿಂದ ಹೊರತಾಗಿರುವ ಪ್ರಕ್ರಿಯೆ. ಆದರೆ ವಿಮಾನಗಳು ಇಂತಹ ಸಾಮಾನ್ಯ ಅವಘಢಗಳನ್ನು ಎದುರಿಸುವ ಸಕ್ರಿಯ ಕ್ಷಮತೆಯನ್ನು ಹೊಂದಿರುತ್ತವೆ
ಎಂಬುದು ಗಮನಿಸಬೇಕಾದ ಸಂಗತಿ ಇನ್ನೊಂದು ಪ್ರಮುಖ ಸಂಗತಿಯೆಂದರೆ ಪೈಲಟ್‌ಗಳ ಕ್ಷಮತೆ.

ವಿಮಾನ ಹಾರಾಟ ಪ್ರಾರಂಭಿಸಿದ ನಂತರದಲ್ಲಿ ಅಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಳ್ಳಬಹುದು. ಆದರೆ ನುರಿತ
ಪೈಲಟ್‌ಗಳಿಗೆ ಇದನ್ನೆಲ್ಲ ನಿರ್ವಹಿಸುವ ಕ್ಷಮತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ಸಮೀಪದ ವಿಮಾನ ನಿಲ್ದಾಣದಲ್ಲಿ
ಎರಡುಗಂಟೆಗಳ ಅವಧಿಯೊಳಗಡೆ ಲ್ಯಾಂಡ್ ಮಾಡಬಹುದಾದ ಸಾಧ್ಯತೆ ಮತ್ತು ನೈಪುಣ್ಯ ಪೈಲಟ್ ಗಳಿಗೆ ಇರುತ್ತದೆ.
ವಿಮಾನಯಾನ ಸಂಸ್ಥೆಗಳ ಪ್ರಕಾರ ಗಾಳಿಯಲ್ಲಿ ಹಾರಾಡುವ ವಿಮಾನಗಳು ಹಾಗೆ ಸುಮ್ಮನೆ ಪತನವಾಗುವುದಿಲ್ಲ.

ಆದರೆ, ವಿಮಾನಯಾನ ಸಂಸ್ಥೆಗಳ ಆರ್ಥಿಕ ಆರೋಗ್ಯದ ಬಗ್ಗೆ ಆತಂಕ ಸದಾ ಇದ್ದೇ ಇದೆ. ಜಾಗತಿಕವಾಗಿ ಎಲ್ಲ ವಿಮಾನ ಯಾನ ಸಂಸ್ಥೆಗಳು ಆರ್ಥಿಕವಾಗಿ ಹಲವು ಅಡೆತಡೆಗಳನ್ನು ಎದುರಿಸುತ್ತಿರುವ ಕುರಿತು ವರದಿಗಳು ಬರುತ್ತಲೇ ಇವೆ. ವಿಶೇಷತಃ ಉಕ್ರೇನ್-ರಷ್ಯಾ ಯುದ್ಧದ ನಂತರದಲ್ಲಿ. ವಿಮಾನಯಾನಕ್ಕೆ ಬೇಕಾದ ಟೈಟಾನಿಯಂ ಪೂರೈಕೆಯಲ್ಲಿ ದೊಡ್ಡ ವ್ಯತ್ಯಯ ಉಂಟಾಗಿದೆ. ಅದು ಶೇ.೬೦ರಷ್ಟು ಪೂರೈಕೆಯಾಗುತ್ತಿದ್ದುದು ರಷಿಯಾದಿಂದಲೇ ಎಂಬುದು ಗಮನಿಸ ಬೇಕಾದ ಸಂಗತಿ.

ಏರುತ್ತಿರುವ ತೈಲಬೆಲೆಯ ಕಾರಣದಿಂದಾಗಿ ವಿಮಾನಯಾನ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿ ಹದಗೆಡುತ್ತಲೇ ಬಂದಿದೆ. ಹೀಗಾಗಿ ಪ್ರತಿಯೊಂದು ವಿಮಾನಯಾನವೂ ದೊಡ್ಡ ಖರ್ಚಿನ ಬಾಬತ್ತಾ ಗಿದೆ. ಏರುತ್ತಿರುವ ಪೈಪೋಟಿಯ ನಡುವೆ ವಿಮಾನಯಾನ ಸಂಸ್ಥೆಗಳನ್ನು ನಿರ್ವಹಿಸುವುದೇ ದುಸ್ತರ ಎಂಬಂತಹ ಭಾವನೆ ಬಲವಾಗಿದೆ. ಬೆಲೆ ಏರಿಕೆ ಮತ್ತು ಗಗನಮುಖಿಯಾಗಿರುವ ನಿರ್ವಹಣಾ ವೆಚ್ಚಗಳ ನಡುವೆ ವಿಮಾನಯಾನ ಸಂಸ್ಥೆ ಗಳು ಏದುಸಿರುಬಿಡುವಂತಾಗಿದೆ.

ಇದೆಲ್ಲದರ ನಡುವೆ ತೆರಿಗೆ ಹೇರಿಕೆಗಳು ಕೂಡ ವೈಮಾನಿಕ ಸಂಸ್ಥೆಗಳನ್ನು ಇನ್ನಷ್ಟು ಹೈರಾಣಾಗಿಸಿವೆ. ಭಾರತದ ವೈಮಾನಿಕ ಸಂಸ್ಥೆಗಳು ಜಾಗತಿಕವಾಗಿ ಸ್ಪರ್ಧೆಗಿಳಿಯಬೇಕಾದ ಅನಿವಾರ್ಯ ಎದುರಾಗಿದೆ. ಸಣ್ಣಮಟ್ಟದ ಮತ್ತು ಕಡಿಮೆ ಬೆಲೆಯ ವೈಮಾನಿಕ ಸಂಸ್ಥೆಗಳು ಈ ಸ್ಪರ್ಧಾತ್ಮಕ ಯುಗದಲ್ಲಿ ಸಾಕಷ್ಟು ಹೊಡೆತ ತಿನ್ನುವಂತಾಗಿದೆ.

ಕಡಿಮೆ ಟಿಕೆಟ್ ಬೆಲೆಯ ಮೇಲೆ ಹಾರಾಡುತ್ತಿರುವ ವೈಮಾನಿಕ ಸಂಸ್ಥೆಗಳು ತಮ್ಮ ಗ್ರಾಹಕರನ್ನು ಸಂಪ್ರೀತರಾಗಿಸುವ ನಿಟ್ಟಿ ನಲ್ಲಿ, ಮತ್ತು ತಮ್ಮ ಉದ್ಯೋಗಿಗಳಿಗೆ ಸಂಬಳ ಕೊಟ್ಟು ಕಂಪನಿ ನಿರ್ವಹಣೆ ಮಾಡುವಲ್ಲಿ ಸಾಕಷ್ಟು ಹೋರಾಟಗಳನ್ನು ಮಾಡಬೇಕಾದ ಪರಿಸ್ಥಿತಿ ಇದೆ. ಕಡಿಮೆ ಟಿಕೆಟ್ ಬೆಲೆಗೆ ವಿಮಾನಯಾನಗಳನ್ನು ನಿರ್ವಹಿಸುವ ಕಂಪನಿಗಳು ಹಗ್ಗದ ಮೇಲಿನ ನಡಿಗೆಯಂತೆ ಖರ್ಚುಗಳನ್ನು ಸರಿದೂಗಿಸುವಲ್ಲಿ ಹೆಣಗಾಡುತ್ತಿವೆ. ವೈಮಾನಿಕ ಸಂಸ್ಥೆಗಳ ಆರ್ಥಿಕ ಆರೋಗ್ಯದ ವಿಚಾರಕ್ಕೆ ಬರುವುದಾದರೆ ಇದೊಂದು ಬಹುದೊಡ್ಡ ಸವಾಲು.