ಸರಕಾರಿ ಅಂಕಿ ಅಂಶಗಳನ್ನು ನಂಬಬಹುದಾದರೆ ಇದು ಸ್ವಾಗತಾರ್ಹ ಬೆಳವಣಿಗೆ. ಯಾವುದೇ ದೃಷ್ಟಿಯಿಂದ ನೋಡಿದರೂ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370ನೇ ವಿಧಿ ರದ್ದಾಗಿದ್ದು ಬಹಳ ದೊಡ್ಡ ಘಟನೆ. ಇದರಿಂದಾಗಿ ಕಾಶ್ಮೀರ ಕಣಿವೆಯಲ್ಲಿ ಮಹತ್ತರ ಬದಲಾವಣೆ ಆಗುವ ನಿರೀಕ್ಷೆಯಂತೂ ಇತ್ತು.
ಆರ್ಟಿಕಲ್ 370 ಮತ್ತು 35(ಎ) ರದ್ದಾಗಿ ಇಂದಿಗೆ (2019, ಆಗಸ್ಟ್ 5ಕ್ಕೆ)ಸರಿಯಾಗಿ ಮೂರು ವರ್ಷ. ಈಗ ಮೂರು ವರ್ಷದಲ್ಲಿ ಕಣಿವೆ ರಾಜ್ಯ ದಲ್ಲಿ ಎಷ್ಟು ಬದಲಾಗಿದೆ ಎಂಬ ಬಗೆಗೆ ಸಹಜ ಕುತೂಹಲವಂತೂ ಇದೆ. ಭಯೋತ್ಪಾದನೆ ಚಟುವಟಿಕೆ ಬಹುತೇಕ ನಿಂತಿದೆ ಎಂದು ಸರಕಾರ ಹೇಳಿಕೊಳ್ಳುತ್ತಿದೆಯಾದರೂ ಇತ್ತೀಚೆಗೆ ಕಾಶ್ಮೀರೇತರರ ಮೇಲೆ ಉಗ್ರರ ದಾಳಿ ಪ್ರಕರಣ ಹೆಚ್ಚುತ್ತಿರುವುದಂತೂ ಸತ್ಯ. ಜಮ್ಮು ಮತ್ತು ಕಾಶ್ಮೀರದ ಪ್ರಮುಖ ಆದಾಯ ಮೂಲವಂತೂ ಪ್ರವಾಸೋದ್ಯಮವೊಂದೇ.
ಇಂಥ ಬೆಳವಣಿಗೆಗಳ ನಡುವೆಯೂ ಜನರು ಕಣಿವೆ ರಾಜ್ಯದತ್ತ ಪ್ರವಾಸ ಹೋಗುತ್ತಿದ್ದೀರಾ ಎಂಬ ಪ್ರರ್ಶನೆಗೆ ಜಿ ಕಿಶನ್ ರೆಡ್ಡಿ, ಹೌದು ಎನ್ನುತ್ತಾರೆ ಮಾತ್ರವಲ್ಲ, ಆರ್ಟಿಕಲ್ 370 ರದ್ದು ಸೇರಿದಂತೆ ನರೇಂದ್ರ ಮೋದಿ ಸರಕಾರ ಕೈಗೊಂಡ ಪರಿವರ್ತನ ಶೀಲ ಯೋಜನೆಗಳಿಂದಾಗಿ ಕಳೆದ ಹಲವಾರು ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಪ್ರವಾಸೀ ತಾಣಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ಪ್ರವಾಸಿಗ ಸಂಖ್ಯೆ ದಾಖಲೆ ಮಟ್ಟದಲ್ಲಿ ಇದೆ ಎಂಬ ವಿವರವನ್ನೂ ನೀಡುತ್ತಾರೆ. ಅವರ ಟ್ವೀಟ್ ಪ್ರಕಾರ79 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಕಣಿವೆ ರಾಜ್ಯಕ್ಕೆ ತೆರಳಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಅಲ್ಲಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಬಿಡುಗಡೆಯಾದ ಹಣದಲ್ಲೂ ಶೇ.184ರಷ್ಟು ಹೆಚ್ಚಳ ವಾಗಿದೆ. ಶ್ರೀನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏಪ್ರಿಲ್ ಒಂದೇ ತಿಂಗಳಲ್ಲಿ 102 ವಿಮಾನ ಸಂಚಾರ ಆಗಿದೆ, 15 ಸಾವಿರಕ್ಕೂ ಹೆಚ್ಚು ವಿಮಾನ ಪ್ರಯಾಣಿಕರು ಬಂದು ಹೋಗಿದ್ದಾರೆ. ಪ್ರತಿಕೂಲ ಹವಾಮಾನ ಇಲ್ಲದಿದ್ದರೆ ಅಮರನಾಥ ಮಂದಿರಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆ ಈ ಬಾರಿ ದಾಖಲೆ ಮಟ್ಟಕ್ಕೆ ಏರುತ್ತಿತ್ತು ಎಂಬುದು ಅಽಕಾರಿಗಳ ಅನಿಸಿಕೆ.
ಕೇವಲ ಆರು ತಿಂಗಳ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ 79 ಲಕ್ಷ ಪ್ರವಾಸಿಗರು ಭೇಟಿ ನೀಡಿರುವುದು ಸಣ್ಣ ವಿಷಯವೇ ನಲ್ಲ. ಕಣಿವೆ ರಾಜ್ಯ ವಿಶೇಷ ಸ್ಥಾನಮಾನ ಕಳೆದುಕೊಂಡ ಬಳಿಕ ಬೆಳವಣಿಗೆಯಲ್ಲಿ ಮುಂದಡಿ ಇಡುತ್ತಿರುವುದು,
ಎಲ್ಲರೊಳಗೊಂದಾಗುತ್ತಿರುವುದು ಸ್ವಾಗತಾರ್ಹ.