Saturday, 23rd November 2024

ಭಾರತ ವಿಭಜನೆಯ ದುರಂತದ ನೆನಪು

ವೀಕೆಂಡ್ ವಿತ್‌ ಮೋಹನ್

camohanbn@gmail.com

ಸರ್ವರಿಗೂ 75 ನೆಯ ಸ್ವಾತಂತ್ರೋತ್ಸವದ ಶುಭಾಶಯಗಳು, ಬ್ರಿಟೀಷರ ಸಂಕೋಲೆಗಳಿಂದ ಭಾರತ ಮಾತೆಗೆ ಮುಕ್ತಿ ಸಿಕ್ಕು ಏಳುವರೆ ದಶಕಗಳು ಕಳೆದಿವೆ. ಮುನ್ನೂರು ವರ್ಷಗಳ ಕಾಲದ ಬ್ರಿಟೀಷರ ಶೋಷಣೆಯಿಂದ ಮರುಗಿದ್ದಂತಹ ಭಾರತ ಮಾತೆ ಯನ್ನು ಸ್ವತಂತ್ರಗೊಳಿಸಲು ಪ್ರಾಣ ತೆತ್ತವರ ಸಂಖ್ಯೆ ಲೆಕ್ಕಕ್ಕಿಲ್ಲ, ಜೈಲಿಗೆ ಹೋದವರ ಸಂಖ್ಯೆಯಂತೂ ಎಣಿಸಲು ಸಾಧ್ಯವಿಲ್ಲ.

ಮುನ್ನೆಲೆಯಲ್ಲಿ ಕಾಣಿಸಿಕೊಂಡನಂತಹ ಕೆಲವೇ ಕೆಲವರನ್ನು ಮಾತ್ರ ಸ್ವಾತಂತ್ರ್ಯ ಹೋರಾಟಗಾರರರೆಂದು ಬಿಂಬಿಸುವ ಕೆಲಸವೂ ನಡೆಯಿತು. ಇತಿಹಾಸದ ಪುಸ್ತಕಗಳಲ್ಲಿ ಕ್ರಾಂತಿಕಾರರ ವಿಚಾರಧಾರೆಗಳನ್ನು ಮರೆ ಮಾಚಲಾಯಿತು, ಕರಿನೀರ ಶಿಕ್ಷೆ ಅನುಭವಿಸಿದ ಸಾವರ್ಕರ್‌ರನ್ನು ಹೇಡಿಯೆಂದು ಬಿಂಬಿಸಲಾಯಿತು, ಒಂದೇ ಕುಟುಂಬಕ್ಕೆ ಕಾಂಗ್ರೆಸ್ ಪಕ್ಷ ಜೋತುಬಿದ್ದು 75 ವರ್ಷಗಳ ಕಾಲ ಅಧಿಕಾರ ಅನುಭವಿಸುವಂತಾಯಿತು. 75 ನೆಯ ಸ್ವಾತಂತ್ರ್ಯ ಮಹೋತ್ಸವದ ಸಂಭ್ರಮದಲ್ಲಿ ಇತಿಹಾಸ ಕಂಡಂತಹ ರಕ್ತಸಿತ್ತ ‘ಅಖಂಡ ಭಾರತ ವಿಭಜನೆ’ಯ ಚಿತ್ರಗಳನ್ನು ನೆನೆದರೆ ಕಣ್ಣು ಒದ್ದೆಯಾಗುತ್ತದೆ.

ಬ್ರಿಟೀಷರ ಅಡಿಯಲ್ಲಿದ್ದಂತಹ ಜಗತ್ತಿನ ದೇಶಗಳಲ್ಲಿ ಬಹುದೊಡ್ಡ ಭೂಭಾಗವೊಂದು ವಿಭಜನೆಯಾದಂತಹ ಉದಾಹರಣೆ ಕೇವಲ ಭಾರತದಲ್ಲಿ ಮಾತ್ರ ಕಾಣಬಹುದು. ಬ್ರಿಟೀಷರ ಒಡೆದು ಅಳುವ ನೀತಿ ಸ್ವಾತಂತ್ರಾ ನಂತರವೂ ಮುಂದುವರೆದದ್ದು ನಮ್ಮ ದೇಶ ಕಂಡಂತಹ ಬಹುದೊಡ್ಡ ದುರಂತ. ತಾವು ಭಾರತವನ್ನು ಬಿಟ್ಟು ತೊಲಗಿದ ನಂತರವೂ ದೇಶದಲ್ಲಿ ಅರಾಜಕತೆ ಕಾಡುತ್ತಿರಬೇಕೆಂಬುದು ಬ್ರಿಟೀಷರ ಸ್ಪಷ್ಟ ಉದ್ದೇಶವಾಗಿತ್ತು.

ಭಾರತವನ್ನು ವಿಭಜನೆಗೊಳಿಸಿ, ಪಕ್ಕದಲ್ಲಿ ಮಗ್ಗುಲ ಮುಳ್ಳಿನ ರೀತಿಯದು ದೇಶವನ್ನು ಹುಟ್ಟುಹಾಕಿ ಎರಡೂ ದೇಶಗಳ ನಡುವೆ ಉಂಟಾಗುವ ಸಮಸ್ಯೆಯನ್ನು ಭವಿಷ್ಯದಲ್ಲಿ ಸರಿಪಡಿಸಲು ಬ್ರಿಟೀಷರು ಮಧ್ಯಸ್ಥಿಕೆ ವಹಿಸಬೇಕಾಗುತ್ತದೆ, ಹಾಗಾಗಿ ತಾವು ದೇಶ ಬಿಟ್ಟ ನಂತರವೂ ಭಾರತ ತಮ್ಮ ಅಧೀನದಲ್ಲಿರಬೇಕಾಗುತ್ತದೆಂಬುದು ಬ್ರಿಟೀಷರ ಬಹುದೊಡ್ಡ ಹುನ್ನಾರವಾಗಿತ್ತು. ಅಂದಿನ ಕಾಲಘಟ್ಟದಲ್ಲಿ ಜಗತ್ತಿನ ಸೂಪರ್ ಪವರ್ ಆಗಿದ್ದಂತಹ ಬ್ರಿಟೀಷರು ನೂರಾರು ವರ್ಷಗಳ ಕಾಲ ತಮ್ಮ ಸೂಪರ್ ಪವರ್ ಹುದ್ದೆಯನ್ನು ಉಳಿಸಿಕೊಂಡಿರುತ್ತೇವೆಂದು ಕನಸು ಕಂಡಿದ್ದರು,ಆದರೆ ಅವರ ಕನಸು ನನಸಾಗಲಿಲ್ಲ.

1925 ರಲ್ಲಿ ಬ್ರಿಟೀಷರ ಕಾರ್ಯದರ್ಶಿಯಾಗಿದ್ದಂತಹ ‘ಬರ್ಕನ್ ಹೆಡ್’ ತನ್ನ ಭಾಷಣದಲ್ಲಿ ‘ಭಾರತವನ್ನು ಒಂದೇ ಅಖಂಡ ಸಮುದಾಯ ಎಂದು ಪರಿಗಣಿಸುವುದು, ಯುರೋಪನ್ನು ಒಂದೇ ಘಟಕವೆಂದು ಕರೆದಷ್ಟೇ ಅರ್ಥಹೀನವಾಗಿದ್ದು, ಭಾರೀ ಸಂಖ್ಯೆಯಲ್ಲಿರುವ ಭಾರತವಾಸಿಗಳು ಎಲ್ಲರೂ ಒಪ್ಪುವಂತಹ ಸಂವಿಧಾನವನ್ನು ರಚಿಸಿ ತೋರಿಸಲಿ’ಎಂದು ಹೇಳಿದ್ದ. ಇದಾದ ನಂತರ 1927 ರ ಮಾರ್ಚ್ ತಿಂಗಳಲ್ಲಿ ಜಿನ್ನಾ ಅಧ್ಯಕ್ಷತೆಯಲ್ಲಿ 30 ಮುಸ್ಲಿಂ ಮುಖಂಡರು ಸಭೆ ಸೇರಿದರು. ಈ ಹಿಂದೆ ತಾವುಗಳು ಬೇಡಿಕೆ ಇಟ್ಟಿದ್ದಂತಹ ಪ್ರತ್ಯೇಕ ಮುಸ್ಲಿಂ ಕ್ಷೇತ್ರದ ಸವಲತ್ತುಗಳನ್ನು ಕೆಳಕಂಡ ಶರತ್ತುಗಳೊಡನೆ ಬಿಟ್ಟುಕೊಡಲು ಸಿದ್ಧವಿರುವುದಾಗಿ ಘೋಷಿಸಿದರು.

ಅದರ ಶರತ್ತುಗಳು (1) ಸಿಂಧ್ ಭಾಗವನ್ನು ಬೊಂಬಾಯಿಯಿಂದ ಪ್ರತ್ಯೇಕಿಸಿ ಅದನ್ನು ಪ್ರತ್ಯೇಕ ಪ್ರಾಂತ್ಯವನ್ನಾಗಿಸಬೇಕು
(2) ಬಲೂಚಿಸ್ತಾನದ ಸ್ಥಾನಮಾನವನ್ನು ಮೇಲೇರಿಸಿ ಪೂರ್ಣಮಟ್ಟದ ಗವರ್ನರ್ ಆಡಳಿತದ ಪ್ರಾಂತ್ಯಗಳನ್ನಾಗಿ ಪರಿವರ್ತಿಸ ಬೇಕು (3) ಪಂಜಾಬ್ ಹಾಗೂ ಬಂಗಾಳದಲ್ಲಿ ಜನಸಂಖ್ಯೆಯ ಅನುಗುಣವಾಗಿ ಮುಸ್ಲಿಮರಿಗೆ ಸಂವಿಧಾನಬದ್ಧ ಬಹುಮತದ ಸ್ಥಾನಮಾನ ನೀಡಬೇಕು (4) ಕೇಂದ್ರ ಶಾಸನಸಭೆಯಲ್ಲಿ ಒಟ್ಟು ಸ್ಥಾನಗಳ ಮೂರನೇ ಒಂದು ಭಾಗವನ್ನು ಮುಸಲ್ಮಾನ ರಿಗೆ ನೀಡಬೇಕು. ಭಾರತವನ್ನು ಧರ್ಮದ ಆಧಾರದ ಮೇಲೆ ವಿಭಜಿಸುವ ಜಿನ್ನಾನ ದೊಡ್ಡದೊಂದು ಹುನ್ನಾರ ಈ ಮೂಲಕ ಬಹಿರಂಗವಾಗಿತ್ತು.

ವಿಪರ್ಯಾಸವೆಂದರೆ ಆತನ ಹುನ್ನಾರವನ್ನು ಸೂಕ್ಷ್ಮವಾಗಿ ಗ್ರಹಿಸದ ಕಾಂಗ್ರೆಸ್ ‘ಮುಸ್ಲಿಂ ಕಾನರೆ’ ವಿಧಿಸಿದ ನಾಲ್ಕೂ ಷರತ್ತುಗಳನ್ನು ತುಂಬುಮನಸ್ಸಿನಿಂದ ಒಪ್ಪಿಕೊಂಡಿತ್ತು. ಕಾಂಗ್ರೆಸ್ಸಿನ ಕೆಲವು ನಾಯಕರ ವಿರೋಧದ ಭಾಗವಾಗಿ ನಾಲ್ಕನೇ ಷರತ್ತಾಗಿದ್ದಂತಹ ಶಾಸನ ಸಭೆಯಲ್ಲಿ ಒಟ್ಟು ಸ್ಥಾನಗಳ ಮೂರನೇ ಒಂದು ಭಾಗವನ್ನು ಮುಸಲ್ಮಾನರಿಗೆ ನೀಡುವುದನ್ನು ತಿರಸ್ಕರಿಸಿತು.

ಕಾಂಗ್ರೆಸ್ಸಿನ ಈ ಪ್ರಯತ್ನವೂ ಮತ್ತೆ ಬಿಸಿಲು ಕುದುರೆಯನ್ನು ಬೆನ್ನತ್ತಿದಂತೆಯೇ ಆಗಿತ್ತು. ಸಿಂಧ್ ಭಾಗವು ಬೊಂಬಾಯಿಯಲ್ಲಿ ಇರುವವರೆಗೂ ಹಿಂದೂಗಳು ಅಲ್ಲಿ ಬಹುಸಂಖ್ಯಾತರಾಗಿಯೇ ಇರುತ್ತಿದ್ದರು. ಬ್ರಿಟೀಷರು ಭಾರತದಿಂದ ಕಾಲು ತೆಗೆದಾ ಗಲೂ ಸಹ ಸಿಂಧ್ ಪ್ರಾಂತ್ಯ ಹಿಂದೂ ಬಹುಸಂಖ್ಯಾತ ಪ್ರಾಂತದ ಅಂಗವಾಗಿಯೇ ಉಳಿದುಕೊಳ್ಳುತ್ತಿತ್ತು, ಆಗ ಮುಸ್ಲಿಮರು ಅದನ್ನು ಪ್ರತ್ಯೇಕ ಮುಸ್ಲಿಂ ಪ್ರಾಂತ್ಯವಾಗಿ ಮಾಡಲು ಕೇಳಲು ಅಸಾಧ್ಯವಾಗುತ್ತಿತ್ತು.

ಅದೇ ರೀತಿಯಲ್ಲಿ ಬಲೂಚಿಸ್ಥಾನಗಳಲ್ಲಿ ಚುನಾಯಿತ ಮಂತ್ರಿಮಂಡಲಗಳನ್ನೊಳಗೊಂಡ ಗವರ್ನರ್ ಆಡಳಿತದ ಮಟ್ಟಕ್ಕೆ ಆ ಪ್ರಾಂತ್ಯಗಳನ್ನು ಏರಿಸಿದ್ದು ಪೂರ್ಣರೂಪದಲ್ಲಿ ಆ ಪ್ರಾಂತ್ಯಗಳನ್ನು ಮುಸ್ಲಿಂ ಬಹುಮತ ಪ್ರಾಂತ್ಯಗಳಾಗಿ ಮಾಡುವ ಉದ್ದೇಶ ದಿಂದ ಮಾತ್ರ. ಈ ಸೂಕ್ಷ್ಮವನ್ನು ಗಮನಿಸದ ಕಾಂಗ್ರೆಸ್ ಪಕ್ಷ ಯಾವುದೇ ತಕರಾರಿಲ್ಲದೆ ‘ಮುಸ್ಲಿಂ ಕಾನರೆ’ನ ಷರತ್ತುಗಳಿಗೆ ಒಪ್ಪಿಗೆ ಯನ್ನು ಸೂಚಿಸಿತ್ತು. ‘ಸಿಂಧ್’ ಒಂದನ್ನೇ ಪ್ರತ್ಯೇಕ ಪ್ರಾಂತ್ಯವನ್ನಾಗಿ ರಚಿಸುವ ತನ್ನ ಅಂಗೀಕಾರ ನೀಡುವ ಮೂಲಕ ಕಾಂಗ್ರೆಸ್ ದೊಡ್ಡ ಪ್ರಮಾಧವನ್ನು ಮಾಡಿತ್ತು.

ಕಾಂಗ್ರೆಸ್ಸಿಗರು ಪ್ರಾಂತ್ಯಗಳನ್ನು ಆಡಳಿತಾತ್ಮಕ ತತ್ವದ ಆಧಾರದ ಮೇಲೆಯೇ ವಿಂಗಡಣೆಯಾಗಬೇಕೆಂದು ಕಾಂಗ್ರೆಸ್ ಒತ್ತಾಯಿಸಬಹುದಿತ್ತು, ಜಾತಿ ಹಾಗೂ ಧರ್ಮದ ಆಧಾರದ ಮೇಲೆ ಪ್ರಾಂತ ರಚನೆಗೆ ಕಾಂಗ್ರೆಸ್ ತನ್ನ ತೀವ್ರ ವಿರೋಧವನ್ನು ಎತ್ತಬೇಕಿತ್ತು. ಪ್ರತ್ಯೇಕ ಸಿಂಧ್ ಪ್ರಾಂತದ ರಚನೆಗೆ ಕಾಂಗ್ರೆಸ್ ಒಪ್ಪಿಗೆ ಸೂಚಿಸಿದಾಗ ಮುಂದಾಗುವ ಅಪಾಯವನ್ನು ಹಿಂದೂ ಮಹಾಸಭಾ ಗುರುತಿಸಿತ್ತು, ಕಾಂಗ್ರೆಸ್ಸಿಗೆ ಅಂದೇ ಎಚ್ಚರಿಸಿದ್ದಂತಹ ಮಹಾಸಭಾ ಮುಂಬರುವ ದಿನಗಳಲ್ಲಿ ರಾಷ್ಟ್ರೀಯತೆಯ ಬೆಳವಣಿಗೆಗೆ ಅದು ಮಾರಕವಾಗುತ್ತದೆಯೆಂದು ಸ್ಪಷ್ಟವಾಗಿ ಹೇಳಿತ್ತು.

ಸರಕಾರಿ ಸೇವೆಗಳಲ್ಲಿ ಕೋಮುವಾರು ಪ್ರಾತಿನಿಧ್ಯ ರದ್ದಾಗಬೇಕು ಎಲ್ಲರಿಗೂ ತೆರೆದಿಟ್ಟ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ
ದಕ್ಷತೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆರಿಸಬೇಕೆಂದು ಹಿಂದೂ ಮಹಾಸಭಾ ಅಭಿಪ್ರಾಯಪಟ್ಟಿತ್ತು. ಪ್ರತ್ಯೇಕ ಮುಸ್ಲಿಂ ರಾಷ್ಟ್ರದ ಕನಸು ಹೊಂದಿದ್ದ ಜಿನ್ನಾನಿಗೆ ಕಾಂಗ್ರೆಸ್ ಒಪ್ಪಿಗೆ ಸೂಚಿಸಿದಂತಹ ನಿರ್ಣಯ ಲಡ್ಡು ಬಂದು ಬಾಯಿಗೆ ಬಿದ್ದಂತಾಗಿತ್ತು. ಕಾಂಗ್ರೆಸ್ ಒಪ್ಪಿಗೆ ಸೂಚಿಸಿದಂತಹ ನಿರ್ಣಯಗಳೇ ಪಾಕಿಸ್ತಾನ ರಚನೆಯ ಭದ್ರ ಅಡಿಪಾಯವಾಯಿತು.

ತಾನು ಏನು ಕೇಳಿದರು ಕಾಂಗ್ರೆಸ್ಸಿಗರು ಇಲ್ಲವೆನ್ನುವುದಿಲ್ಲವೆಂಬ ಆತ್ಮವಿಶ್ವಾಸ ಜಿನ್ನಾನಿಗೆ ಬಂದಿತ್ತು. ಒಂದಾದ ನಂತರ ಒಂದರಂತೆ ಮುಸ್ಲಿಂ ಲೀಗ್ ತನ್ನ ಬೇಡಿಕೆಗಳನ್ನು ಇಡುತ್ತಾ ಹೋಯಿತು, ಈ ಹಿಂದೆ ವಿಧಿಸಿದ ಷರತ್ತುಗಳ ಜೊತೆಗೆ ಮತ್ತಷ್ಟು ಷರತ್ತುಗಳನ್ನು ವಿಽಸಿತ್ತು. ಜಿನ್ನಾ ನೇತೃತ್ವದಲ್ಲಿ 14 ಷರತ್ತುಗಳನ್ನು ವಿದಿಡುವ ಮೂಲಕ ಸಿಂಧ್, ಬಲೂಚಿಸ್ತಾನ, ಬಂಗಾಳ ಪ್ರಾಂತ್ಯಗಳ ಮೇಲೆ ರಾಜಕೀಯವಾಗಿ ಹಾಗೂ ಆಡಳಿತಾತ್ಮಕವಾಗಿ ಯಶಸ್ಸು ಸಾಧಿಸುವತ್ತ ಜಿನ್ನಾನ ಪಟಾಲಂ ಸಾಗಿತ್ತು. ಕಾಂಗ್ರೆಸ್ ವಿಧಿಸಿದ ಷರತ್ತುಗಳನ್ನು ಜಿನ್ನಾ ಎಂದೂ ಸಹ ಒಪ್ಪಲಿಲ್ಲ, ಬ್ರಿಟೀಷರು ಸ್ವಾತಂತ್ರ್ಯ ನೀಡುವ ಸಂಧರ್ಭದಲ್ಲಿಯೂ ಸಹ ತನ್ನ ಹಠ ಬಿಡದೆ ಪ್ರತ್ಯೇಕ ರಾಷ್ಟ್ರದ ಕೂಗನ್ನೇ ಹೇಳುತ್ತಿದ್ದಂತಹ ಜಿನ್ನಾನನ್ನು ಮೊದಲಿನಿಂದಲೇ ಕಟ್ಟಿಹಾಕುವ ಪ್ರಯತ್ನದಲ್ಲಿ
ಕಾಂಗ್ರೆಸ್ ವಿಫಲವಾಗಿತ್ತು.

ಮುಸಲ್ಮಾನರ ಓಲೈಕೆಯಲ್ಲಿ ತೊಡಗಿದ್ದಂತಹ ಕಾಂಗ್ರೆಸ್ ಭಾರತ ವಿಭಜನೆಯ ವಿಚಾರದಲ್ಲಿ ಒಂದೇ ಒಂದು ಗಟ್ಟಿ ನಿರ್ಣಯ ವನ್ನು ಕೈಗೊಳ್ಳಲಿಲ್ಲ. ತಮ್ಮನ್ನು ತಾವು ಸ್ವಾತಂತ್ರ್ಯ ಹೋರಾಟಗಾರರೆಂದು ಹೇಳಿಕೊಂಡು ತಿರುಗುವ ಇಂದಿನ ಕಾಂಗ್ರೆಸ್ ನಾಯಕರು ಭಾರತ ವಿಭಜನೆಯ ದುರಂತ ಕಥೆಯ ಹಿಂದಿರುವ ತಮ್ಮ ಅಸರ್ಮಥೆತೆಯನ್ನು ನೆನಪಿಸಿಕೊಳ್ಳಬೇಕು. ‘ಮುಸ್ಲಿಂ ಲೀಗ್’ನ ಕೆಂಡ ಕಾರುವ ಭಾಷಣಗಳಿಗೆ ಕೊನೆಯಿರಲಿಲ್ಲ, ಕಾಂಗ್ರೆಸ್ ತನ್ನ ನಿರಪಾದಿತ್ವವನ್ನು ಸಾಧಿಸುತ್ತ ವಿವರಿಸುತ್ತಾ ಹೋದಷ್ಟು ಲೀಗಿನ ಖಂಡನೆ ಹೆಚ್ಚಾಗುತ್ತಲೇ ಇತ್ತು.

ಲೀಗಿನ ಭಾಷೆ, ಧೋರಣೆ ಭೀಕರವಾದಷ್ಟೂ ಕಾಂಗ್ರೆಸ್ ಅದಕ್ಕೆ ತಕ್ಕ ಉತ್ತರ ನೀಡದೆ ತಲೆಬಾಗಿಸಿ ಜಿನ್ನಾ ಹಾಕಿದ ತಾಳಕ್ಕೆ
ಕುಣಿಯುತ್ತಲೇ ಇತ್ತು. ನೆಹರು 1938 ರ ಏಪ್ರಿಲ್ ತಿಂಗಳಲ್ಲಿ ಜಿನ್ನಾನಿಗೆ ಪತ್ರ ಬರೆದು ಮುಸಲ್ಮಾನರ 14 ಬೇಡಿಕೆಗಳ
ಬಹುತೇಕ ಅಂಶಗಳನ್ನು ಕಾಂಗ್ರೆಸ್ ಒಪ್ಪಿಕೊಂಡಿದೆ, ಆದರೆ ಬೇಡಿಕೆಯ ಕೆಲವೊಂದು ಸಣ್ಣಪುಟ್ಟ ಅಂಶಗಳು ಸಂವಿಧಾ
ನಾತ್ಮಕವಾಗಿಯೇ ಆಗಬೇಕಾಗಿರುವುದರಿಂದ ಅನುಷ್ಠಾನಗೊಳಿಸಲು ಅಸಾಧ್ಯವೆಂದು ಹೇಳಿದ್ದರು.

23-03-1940 ರಲ್ಲಿ ಲಾಹೋರಿನಲ್ಲಿ ಜಿನ್ನಾ ಪಾಕಿಸ್ತಾನದ ಬಗ್ಗೆ ಮಾಡಿದ ಭಾಷಣವೇ ಕೊನೆಗೆ ‘ಪಾಕಿಸ್ತಾನ ನಿರ್ಣಯ’ ವಾಗಿ ಮುಸ್ಲಿಂ ಲೀಗಿನಲ್ಲಿ ಅಂಗೀಕಾರವಾಯಿತು. ಇದಾದ ನಂತರ ಮುಂದಿನ ನಾಲ್ಕು ವರ್ಷ ಜಿನ್ನಾ ಎಸೆದ ಗಾಳಗಳಿಗೆ ಪ್ರತಿಗಾಳ ಹೂಡಲಾಗದ ಕಾಂಗ್ರೆಸ್ ಅಸಹಾಯಕ ಸ್ಥಿತಿಗೆ ತಲುಪಿತ್ತು. 1944 ರ ಮೇ ತಿಂಗಳಲ್ಲಿ ಅನಾರೋಗ್ಯದ ಕಾರಣ ಮಹಾತ್ಮಗಾಂಧಿಯವರು ಸೆರೆಮನೆಯಿಂದ ಬಿಡುಗಡೆಗೊಂಡರು. ನಂತರ ಅವರು ಜಿನ್ನಾರಿಗೆ ‘ಸಹೋದರ’ನೆಂದು ಸಂಬೋಧಿಸಿ ನಿಮ್ಮನ್ನು ಭೇಟಿ ಮಾಡಬೇಕು, ನನ್ನನ್ನು ಇಸ್ಲಾಮಿನ ಶತ್ರುವೆಂದು ಭಾವಿಸಬೇಡಿ ಎಂದು ಪತ್ರ ಬರೆದರು.

ಮುಂದಿನ ದಿನಗಳಲ್ಲಿ ಗಾಂಧಿಯವರು ಜಿನ್ನಾ ನಿವಾಸಕ್ಕೆ ಸತತವಾಗಿ 19 ದಿನಗಳ ಕಾಲ ಮಾತುಕತೆಗಾಗಿ ಹೋಗಿ ಬಂದಿದ್ದರು. ಮಹಾತ್ಮ ಗಾಂಧಿಯವರು ‘ಸಿ.ಆರ್’ ಸೂತ್ರದಡಿ ಮಾತುಕತೆಯಾಡುತ್ತಿದ್ದರು, ಆದರೆ ಜಿನ್ನಾ ಅದನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತಲೇ ಬಂದಿದ್ದ. ಪಂಜಾಬಿನ ನಾಯಕರಾಗಿದ್ದ ‘ಛೋಟುರಾಂ’ರವರು ಪಾಕಿಸ್ತಾನದ ಬಗ್ಗೆ ಜಿನ್ನಾರನ್ನು ಓಲೈಸುತ್ತಿರುವ ನೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಇದರಿಂದ ಮುಂದಾಗುವ ಪರಿಣಾಮಗಳ ಬಗ್ಗೆ ಸುಽರ್ಘವಾದ ಪತ್ರವನ್ನು ಗಾಂಽಯವರಿಗೆ ಬರೆದಿದ್ದರು.

1945-46 ರಲ್ಲಿ ನಡೆದ ಚುನಾವಣೆಗಳಲ್ಲಿ ಮುಸ್ಲಿಂ ಲೀಗ್ ಪಾಕಿಸ್ತಾನಕ್ಕೆ ಸೇರಬೇಕೆಂದಿದ್ದ ಐದು ಪ್ರಾಂತ್ಯಗಳಲ್ಲಿ ಕೇವಲ ಎರಡರಲ್ಲಿ ಮಾತ್ರ ಗೆಲುವನ್ನು ಸಾಽಸಿತ್ತು, ಕೇವಲ ಪಂಜಾಬ್ ಹಾಗೂ ಸಿಂಗ್ ಪ್ರಾಂತ್ಯಗಳಲ್ಲಿ ಮಾತ್ರ ಅಧಿಕಾರಕ್ಕೆ ಬಂದಿತ್ತು. 1946 ರಲ್ಲಿ ಬ್ರಿಟೀಷರು ಭಾರತ ಬಿಟ್ಟು ಹೊರಡಲು ಗಂಭೀರವಾಗಿ ನಿರ್ಧರಿಸಿದಾಗ ಹತ್ಯಾಕಾಂಡಗಳು ಶುರುವಾದವು.
ಕೋಲ್ಕೊತ್ತಾ ಹಾಗೂ ಬಿಹಾರ್ ರಾಜ್ಯಗಳಲ್ಲಿ ಹಿಂದುಗಳನ್ನು ಸಿಕ್ಕ ಸಿಕ್ಕಲ್ಲಿ ಕೊಲ್ಲಲಾಯಿತು, ಗಲಭೆಗಳಾದವು, ಹಿಂದೂ
ಹೆಣ್ಣುಮಕ್ಕಳ ಅತ್ಯಾಚಾರಗಳಾದವು.

ಅಂದಿನ ಕಾಲದಲ್ಲಿ ಕೋಲ್ಕೊತ್ತಾ ನಗರದಲ್ಲಿ ಬಿದ್ದಿದ್ದ ಹೆಣಗಳ ಸಂಖ್ಯೆ 10000 ಎಂದು ಅಂದಾಜಿಸಲಾಗಿದೆ, ತೀವ್ರವಾಗಿ ಗಾಯಗೊಂಡವರು ಸುಮಾರು 15000 ಮಂದಿ, ಮನೆಯನ್ನು ಕಳೆದುಕೊಂಡವರ ಸಂಖ್ಯೆ 100000 ದಾಟಿತ್ತು. ‘ಮೌಂಟ್ ಬ್ಯಾಟನ್’ ಮಾರ್ಚ್ 1947 ರಂದು ಭಾರತಕ್ಕೆ ಬಂದಿಳಿದಾಗ ದೇಶ ವಿಭಜನೆಗೆ ಮತ್ತಷ್ಟು ವೇಗ ಸಿಕ್ಕಿತ್ತು, ಅಷ್ಟು ಹೊತ್ತಿಗಾಗಲೇ ಕಾಂಗ್ರೆಸ್ ಅಸಹಾಯಕ ಪರಿಸ್ಥಿತಿ ತಲುಪಿತ್ತು. ಮೌಂಟ್ ಬ್ಯಾಟನ್ ಭಾರತ ವಿಭಜನೆಯ ಯೋಜನೆಗಳು ಹಾಗೂ ಷರತ್ತು ಗಳನ್ನು ಅಂತಿಮಗೊಳಿಸಿದ, ಈತನು ರಚಿಸಿದ ಅಂತಿಮ ಯೋಜನೆಯನ್ನು ಜಿನ್ನಾ ಒಪ್ಪಿಯಾಗಿತ್ತು.

ಒಂದೆಡೆ ಸ್ವಾತಂತ್ರ್ಯ ಸಿಕ್ಕ ಖುಷಿಯಲ್ಲಿದ್ದರೆ, ಮತ್ತೊಂದೆಡೆ ಅಖಂಡ ಭಾರತ ವಿಭಜನೆಯಾಗಿತ್ತು. ವಿಭಜನೆಯ ಸಂದರ್ಭ
ದಲ್ಲಿ ಲಕ್ಷಾಂತರ ಜನರ ಮಹಾವಲಸೆ ಶುರುವಾಗಿತ್ತು. ದಿನನಿತ್ಯ ಜನರು ರೈಲುಗಳಲ್ಲಿ, ಎತ್ತಿನಗಾಡಿಗಳಲ್ಲಿ, ಬರಿಗಾಲಿನಲ್ಲಿ ಭಾರತದಿಂದ ಪಾಕಿಸ್ತಾನಕ್ಕೆ, ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದರು. ಈ ವಲಸೆಯ ಸಂದರ್ಭದಲ್ಲಿ ನಡೆದ
ಗಲಭೆಗಳಲ್ಲಿ ಲಕ್ಷಾಂತರ ಜನರ ಮಾರಣಹೋಮವಾಯಿತು.

ಉಟ್ಟ ಬಟ್ಟೆಯಲ್ಲಿ ತಮ್ಮ ಮನೆಗಳನ್ನು ಬಿಟ್ಟು ಬಂದಂತಹ ವಲಸಿಗರು ಅರ್ಧ ದಾರಿಯಲ್ಲಿ ಊಟ, ನೀರಿಲ್ಲದೆ ಸಾವಿಗೀಡಾ ಗಿದ್ದರು. ಸಾವಿರಾರು ಹೆಣ್ಣುಮಕ್ಕಳ ಅತ್ಯಾಚಾರವಾಯಿತು, ಬಲವಂತದ ಮತಾಂತರವಾದವು ಭಾರತವು ಹಿಂದೆಂದೂ ಕಾಣದ ರಕ್ತಸಿತ್ತ ಘಟನೆಗಳನ್ನು ನೋಡಬೇಕಾಯಿತು. ಇಂತಹ ಸಂದರ್ಭದಲ್ಲಿ ಅಪಾಯದಲ್ಲಿದ್ದಂತಹ ಹಿಂದೂ ಹಾಗೂ ಸಿಖ್ಖರ ನೆರವಿಗೆ ಧಾವಿಸಿದ್ದು ‘ರಾಷ್ಟ್ರೀಯವೆಯಂ ಸೇವಕ ಸಂಘ’ದ ಕಾರ್ಯಕರ್ತರು. ರಾಕ್ಷಸರಿಂದ ಹೆಣ್ಣುಮಕ್ಕಳನ್ನು ಕಾಪಾಡಿದರು, ಹಸಿವಿನಿಂದ ಬಳಲುತ್ತಿರುವವರಿಗೆ ಅನ್ನ ನೀರು ನೀಡಿದರು, ವಲಸೆಯಲ್ಲಿದ್ದವರಿಗೆ ಆಶ್ರಯ ನೀಡಿದರು, ಮಕ್ಕಳು ಕಳ್ಳರಿಂದ ತಪ್ಪಿಸಿಕೊಳ್ಳುವಲ್ಲಿ ಸಹಾಯ ಮಾಡಿದರು.

75 ನೆಯ ಸ್ವಾತಂತ್ರ್ಯ ಸಂಭ್ರಮದ ಖುಷಿಯಲ್ಲಿರುವ ನಾವು, ಭಾರತದ ಇತಿಹಾಸದಲ್ಲಿ ನಡೆದ ದೇಶ ವಿಭಜನೆಯ ಬಹುದೊಡ್ಡ ದುರಂತವನ್ನು ನೆನಪಿಸಿಕೊಳ್ಳುವುದೂ ಸಹ ನಮ್ಮ ಕರ್ತವ್ಯ.