ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೀಡಾದ ಪ್ರದೇಶಗಳನ್ನು ವೀಕ್ಷಿಸಲು ಗುರುವಾರ ಭೇಟಿ ನೀಡಿದ್ದ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಕಾರ್ಯಕರ್ತರು ಘೇರಾವ್ ಹಾಕಿ, ಕಪ್ಪು ಬಾವುಟ ಪ್ರದರ್ಶಿಸಿ, ಅವರು ಪ್ರಯಾಣಿ ಸುತ್ತಿದ್ದ ಕಾರಿನ ಮೇಲೆ ಕೋಳಿಮೊಟ್ಟೆ ಎಸೆದ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಕಲವನ್ನೇ ಸೃಷ್ಟಿಸಿದೆ.
ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕರೊಬ್ಬರಿಗೆ ರಕ್ಷಣೆ ನೀಡುವುದು ಸರಕಾರದ ಮುಖ್ಯ ಜವಾಬ್ದಾರಿಗಳಲ್ಲಿ ಒಂದು. ಅವರಿಗೇ ರಕ್ಷಣೆ ಇಲ್ಲ ಎಂದಾದರೆ ಜನಸಾಮಾನ್ಯರ ರಕ್ಷಣೆ ಈ ಸರಕಾರದಿಂದ ಸಾಧ್ಯವೇ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಸಿದ್ದರಾಮಯ್ಯ ಅವರದ್ದು ಪೂರ್ವ ನಿಗದಿತ ಪ್ರವಾಸವಾದರೂ ಪೊಲೀಸ್ ಇಲಾಖೆ ಏಕೆ ಎಚ್ಚೆತ್ತುಕೊಳ್ಳಲಿಲ್ಲ? ರಕ್ಷಣಾ ಕ್ರಮ ವನ್ನು ಏಕೆ ಬಿಗಿಗೊಳಿಸಲಿಲ್ಲ? ಸಿದ್ದರಾಮಯ್ಯ ಸಾಗುವ ದಾರಿಯಲ್ಲಿ ಹಾಗೂ ಅವರು ಆಗಮಿಸುವ ಸ್ಥಳದ ಪ್ರತಿಭಟನಾಕಾರರು ಇದ್ದರು ಎಂಬ ಮುನ್ಸೂಚನೆ ಇದ್ದರೂ ಪೊಲೀಸರು ಅವರನ್ನು ವಶಕ್ಕೆ ಏಕೆ ಪಡೆಯಲಿಲ್ಲ? ಈ ಘಟನೆಯಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ತಮ್ಮ ವಿಚಾರಗಳನ್ನು ಹಂಚಿಕೊಳ್ಳುವ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇದೆ. ಭಿನ್ನಾಭಿ ಪ್ರಾಯಗಳಿದ್ದರೆ ಅವುಗಳನ್ನು ಬಲವಾದ ಅಭಿಪ್ರಾಯಗಳೊಂದಿಗೆ ವಿರೋಧಿಸಬೇಕೇ ವಿನಃ ಈ ರೀತಿ ಕಾನೂನು ಕೈಗೆ ತೆಗೆದು ಕೊಳ್ಳುವ ಪ್ರಯತ್ನವನ್ನು ಮಾಡುವುದು ಸರಿಯಲ್ಲ. ವಿಧಾನಸಭೆ ಪ್ರತಿಪಕ್ಷದ ಸ್ಥಾನವೆಂಬುದು ಮುಖ್ಯಮಂತ್ರಿಗೆ ಸಮನಾದ ಸ್ಥಾನ. ಆ ಸ್ಥಾನಕ್ಕೆ ತನ್ನದೇ ಆದ ಗೌರವ ಇದೆ. ಆ ಸ್ಥಾನವನ್ನು ಈ ನಾಡಿನ ಪ್ರತಿಯೊಬ್ಬರೂ ಗೌರವಿಸಬೇಕು. ಆದರೆ ಇದನ್ನು ಅರಿಯದ ಕೆಲವು ಕಡಿಗೇಡಿಗಳು ಕೊಡಗಿನಲ್ಲಿ ಸಿದ್ದರಾಮಯ್ಯ ಅವರಿಗೆ ಅವಮಾನ ಮಾಡಿದ್ದಾರೆ.
ಇದು ಸಿದ್ದರಾಮಯ್ಯ ಅವರಿಗೆ ಮಾತ್ರವಲ್ಲ ಇಡೀ ರಾಜ್ಯವನ್ನು ಅವಮಾನಿಸಿದಂತಾಗಿದೆ. ರಾಜ್ಯ ಸರಕಾರ ಮತ್ತು ಪೊಲೀಸ್ ಇಲಾಖೆ ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಸರ್ವ ಜನಾಗಂದ ಶಾಂತಿಯ ತೋಟ ಎಂಬ ಹೆಸರು ಪಡೆದಿರುವ ಕರ್ನಾಟಕದಲ್ಲಿ ಮುಂದೆಂದೂ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು.