Saturday, 23rd November 2024

ಬೇಕಿರುವುದು ಕಾಂಗ್ರೆಸ್ ಜೋಡೊ ಅಭಿಯಾನ !

#GhulamNabiAzad

ಅಶ್ವತ್ಥಕಟ್ಟೆ

ranjith.hoskere@gmail.com

ಒಂದೆಡೆ ರಾಜ್ಯದಿಂದ ರಾಜ್ಯದಲ್ಲಿ ಅಧಿಕಾರ ಸ್ಥಾಪಿಸುತ್ತಾ, ನಾಯಕರನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುತ್ತಿರುವ ಬಿಜೆಪಿಯಾದರೆ,
ಇನ್ನೊಂದೆಡೆ ಸ್ವಾತಂತ್ರ್ಯ ಪೂರ್ವ ಪಕ್ಷ, ದೇಶವನ್ನು ದೀರ್ಘಕಾಲ ಆಡಳಿತ ನಡೆಸಿರುವ ಕಾಂಗ್ರೆಸ್ ಅಸ್ತಿತ್ವಕ್ಕಾಗಿ ಹುಡುಕಾಟ ನಡೆಸುವ ಸ್ಥಿತಿಯಲ್ಲಿದೆ. ಇದರೊಂದಿಗೆ, ಸಾಲು ಸಾಲು ನಾಯಕರು ಪಕ್ಷ ತೊರೆಯುತ್ತಿರುವುದು ಮತ್ತೊಂದು ಬಹುದೊಡ್ಡ ಸಮಸ್ಯೆಯಾಗಿದೆ.

ರಾಹುಲ್ ಗಾಂಧಿ ಅವರಿಗೆ ಎಐಸಿಸಿ ಸಾರಥ್ಯ ಸಿಕ್ಕ ಬಳಿಕ ಸದಾ ಒಂದಿಲ್ಲೊಂದು ಸಮಸ್ಯೆಯಲ್ಲಿಯೇ ದಿನದೂಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ರಾಹುಲ್ ಗಾಂಧಿ ನಾಯಕತ್ವದ ವಿರುದ್ಧ ಸಿಡಿದೆದ್ದು ಕಾಂಗ್ರೆಸ್‌ನಲ್ಲಿ ಜಿ-23 ಎನ್ನುವ ಬಂಡಾಯ ಬಣವೂ ಸೃಷ್ಟಿಯಾಗುವ ಮೂಲಕ, ‘ಕಾಂಗ್ರೆಸ್‌ನಲ್ಲಿ ಗಾಂಧಿ ಕುಟುಂಬದ ವಿರುದ್ಧವೂ ಮಾತನಾಡುವ ನಾಯಕರಿದ್ದಾರೆ’ ಎನ್ನು ವುದು ದೇಶಕ್ಕೆ ತೋರಿಸಿದರು. ಆದರೀಗ ಕೇವಲ ಬಂಡಾಯವಾಗಿ ಉಳಿಯದೇ, ‘ರಾಜೀನಾಮೆ ಪರ್ವ’ ಕಾಂಗ್ರೆಸ್‌ನಲ್ಲಿ ಆರಂಭವಾಗಿರುವುದು ಪಕ್ಷಕ್ಕೆ ಬಹುದೊಡ್ಡ ತಲೆನೋವಾಗಿದೆ.

ರಾಜಕೀಯ ಪಕ್ಷವೆಂದ ಮೇಲೆ ನಾಯಕರು ಪಕ್ಷಕ್ಕೆ ಸೇರುವುದು, ಬಿಡುವುದು, ಬಂಡಾಯವೇಳುವುದು ಸರ್ವೇ ಸಾಮಾನ್ಯ. ಕಾಂಗ್ರೆಸ್ ಇತಿಹಾಸದಲ್ಲಿ ಈ ರೀತಿಯ ಘಟನೆಗಳು ನಡೆದಿವೆ. ಇದನ್ನು ನಿಭಾಯಿಸುವುದು ಬಹುದೊಡ್ಡ ವಿಷಯವೇನಾ ಗಿರಲಿಲ್ಲ. ಆದರೆ ಈಗೀಗ ಬಂಡಾಯವನ್ನು ಎದುರಿಸುವ ಶಕ್ತಿಯನ್ನೇ ಕಾಂಗ್ರೆಸ್ ಕಳೆದುಕೊಂಡಿದೆ ಎನ್ನುವ ಅನುಮಾನಗಳು ಶುರುವಾಗುತ್ತಿವೆ. ಅದರಲ್ಲಿಯೂ ಕೆಲವೇ ದಿನಗಳ ಹಿಂದಷ್ಟೇ ಗುಲಾಂ ನಬಿ ಆಜಾದ್ ರಾಜೀನಾಮೆ ನೀಡಿದಾಗ ಇದು ಇನ್ನಷ್ಟು
ಸ್ಪಷ್ಟವಾಗಿತ್ತು.

ಗುಲಾಂ ನಬಿ ಹಲವು ತಿಂಗಳಿನಿಂದ, ರಾಹುಲ್, ಮತ್ತವರ ಗುಂಪಿನ ವಿರುದ್ಧ ಆಗಾಗ್ಗೆ ಟೀಕಿಸುತ್ತಲೇ ಬಂದಿದ್ದರು. ಆದರೆ ಸೋನಿಯಾ ಗಾಂಧಿ ಅವರೊಂದಿಗೆ ಇದ್ದ ಆಪ್ತತೆಯಿಂದ ಅವರ ವಿರುದ್ಧ ಯಾವುದೇ ಕ್ರಮವಹಿಸಲಾಗಿರಲಿಲ್ಲ. ಅದಕ್ಕೂ ಮುಖ್ಯವಾಗಿ ದಶಕಗಳ ಕಾಲ ಕಾಂಗ್ರೆಸ್‌ನ ‘ಕಣ್ಣು-ಕಿವಿ’ಯಾಗಿ ಕಾರ್ಯನಿರ್ವಹಿಸಿದ್ದ ಆಜಾದ್ ಅವರಿಂದ ರಾಜೀನಾಮೆಯನ್ನು ಅನೇಕರು ನಿರೀಕ್ಷೆ ಮಾಡಿರಲಿಲ್ಲ.

ರಾಜೀನಾಮೆ ನೀಡುವಾಗಲೂ, ರಾಹುಲ್ ಗಾಂಧಿ ಹಾಗೂ ಸಂಘಟನೆಯ ವಿರುದ್ಧ ಬಹಿರಂಗ ಆರೋಪ ಮಾಡಿ ಪಕ್ಷ ಬಿಟ್ಟಿರುವುದು ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ. ಅದರಲ್ಲಿಯೂ ರಾಹುಲ್ ಗಾಂಧಿ ನೇತೃತ್ವದಲ್ಲಿ ಇಡೀ ದೇಶದಲ್ಲಿ ಪಕ್ಷ ಸಂಘಟಿಸುವ ಮಹತ್ವಾಕಾಂಕ್ಷೆಯೊಂದಿಗೆ ಹಾಗೂ ಮುಂದಿನ ಲೋಕಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ ಆರಂಭಿಸುತ್ತಿರುವ ‘ಭಾರತ್ ಜೋಡೋ’ ಯಾತ್ರೆ ಸಮಯದಲ್ಲಿ ಗುಲಾಂ ನಬಿ ಆಜಾದ್ ಅವರ ಈ ತೀರ್ಮಾನ ಪಕ್ಷಕ್ಕೆ ಭಾರಿ ‘ಡ್ಯಾಮೇಜ್’ ಮಾಡಿದೆ.

ಗುಲಾಂ ನಬಿ ಆಜಾದ್ ಅವರೊಂದಿಗೆ ಇನ್ನು ಅನೇಕರು ಇಂತಹ ನಿರ್ಧಾರವನ್ನು ತಗೆದುಕೊಳ್ಳುವ ಮನಸ್ಥಿತಿಯಲ್ಲಿರುವುದು ಕಾಂಗ್ರೆಸ್ ವರಿಷ್ಠರ ಇನ್ನಷ್ಟು ಚಿಂತೆಗೆ ಕಾರಣವಾಗಿದೆ ಎಂದರೆ ತಪ್ಪಾಗುವುದಿಲ್ಲ. ಹಾಗೇ ನೋಡಿದರೆ ಈ ರೀತಿ ರಾಜೀನಾಮೆ
ನೀಡುತ್ತಿರುವುದು ಗುಲಾಂ ನಬಿ ಆಜಾದ್ ಅವರೊಬ್ಬರೇ ಅಲ್ಲ. ಕಳೆದ ಒಂದು ವರ್ಷದ ಅವಽಯಲ್ಲಿ ಅನೇಕ ಕಾಂಗ್ರೆಸ್ ನಾಯಕರು ರಾಜೀನಾಮೆ ನೀಡಿದ್ದಾರೆ.

ಪ್ರಮುಖವಾಗಿ ಕಪಿಲ್ ಸಿಬಲ್, ಅಶ್ವಿನಿ ಕುಮಾರ್, ಆರ್ ಪಿಎನ್ ಸಿಂಗ್, ಸುನೀಲ್ ಝಕ್ಕರ್, ಜೈವೀರ್ ಶೇರ್ ಲ್, ಹಾರ್ದಿಕ್ ಪಾಟೇಲ್, ಅಮರೀಂದರ್ ಸಿಂಗ್… ಹೀಗೆ ಸಾಲು ಸಾಲು ಮಂದಿ ಪಕ್ಷದಿಂದ ಹೊರಬಂದಿದ್ದಾರೆ. ಬಂದವರಲ್ಲಿ ಅನೇಕರು ಬಿಜೆಪಿಯತ್ತ ವಾಲಿದ್ದರೆ, ಇನ್ನು ಕೆಲವರು ಸ್ಥಳೀಯವಾಗಿ ಕಾಂಗ್ರೆಸ್‌ಗೆ ವಿರುದ್ಧ ಪಕ್ಷಗಳತ್ತ ಮುಖ ಮಾಡುತ್ತಿದ್ದಾರೆ. ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಈ ರೀತಿಯ ನಿರ್ಗಮನಗಳು ಪಕ್ಷಕ್ಕೆ ಇರಸು- ಮುರುಸು ಉಂಟು ಮಾಡುತ್ತಿರುವುದು
ಸುಳ್ಳಲ್ಲ.

ಹಾಗೇ ನೋಡಿದರೆ ಈ ರೀತಿ ಪಕ್ಷದಿಂದ ಹೊರ ನಡೆಯುತ್ತಿರುವ ಬಹುತೇಕರು, ಒಂದು ಕಾಲದಲ್ಲಿ ಕಾಂಗ್ರೆಸ್‌ನ ಅವಿಭಾಜ್ಯ ಅಂಗವಾಗಿದ್ದರು, ಪಕ್ಷಕ್ಕೊಂದು ‘ಫೇಸ್’ ಆಗಿದ್ದರು. ಸೋನಿಯಾ ಗಾಂಽ ಅವರ ‘ಥಿಂಕ್ ಟ್ಯಾಂಕ್’ನ ಸದಸ್ಯರಾಗಿ, ಅವರ ಅತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಅದರಲ್ಲಿಯೂ ಗುಲಾಂ ನಬಿ ಆಜಾದ್, ಕಪಿಲ್ ಸಿಬಲ್ ಅವರೆಲ್ಲ ಸೋನಿಯಾ ಗಾಂಽ ಅವರ ಪ್ರತಿ ಹೆಜ್ಜೆಯಲ್ಲಿ ಇರುತ್ತಿದ್ದರು. ಈ ಎಲ್ಲರೂ ಕಾಂಗ್ರೆಸ್‌ನಿಂದ ಚುನಾವಣೆಗೆ ಸ್ಪರ್ಧಿಸದಿದ್ದರೂ, ಕಾಯಂ
ಸ್ಥಾನವನ್ನು ಮಾತ್ರ ಪಕ್ಕಾ ಪಡೆಯುತ್ತಿದ್ದರು.

ಗುಲಾಂ ನಬಿಗೆ ಸೋನಿಯಾ ಗಾಂಧಿ ಅವರೊಂದಿಗೆ ಇದ್ದ ಒಡನಾಟದಿಂದಲೇ, ಅವರು ಪಡೆಯಬೇಕಾದ ಎಲ್ಲ ಪದವಿಗಳನ್ನು ಸುಲಲಿತವಾಗಿ ಪಡೆದರು. 2009ರಿಂದ 2021ರವರೆಗೆ ರಾಜ್ಯಸಭಾ ಸದಸ್ಯರಾಗಿ, 2005ರಲ್ಲಿ ಜಮ್ಮು ಕಾಶ್ಮೀರದ ಮುಖ್ಯಮಂತ್ರಿಯಾಗಿ, ಯುಪಿಎ ಅವಧಿಯಲ್ಲಿ ಕೇಂದ್ರದ ಸಚಿವರಾಗಿ, ಬಳಿಕ 2014ರಿಂದ 21ರ ತನಕ ರಾಜ್ಯಸಭಾ ಪ್ರತಿಪಕ್ಷ ನಾಯಕರಾಗಿ ಕಾರ್ಯನಿರ್ವಹಿಸಿದ್ದರು. ಈ ಎಲ್ಲ ಪದವಿಗಳು ಬಂದಿದ್ದು, ಗುಲಾಂ ನಬಿ ಆಜಾದ್ ಅವರಿಗೆ ಎನ್ನುವುದಕ್ಕಿಂತ, ಸೋನಿಯಾ ಗಾಂಧಿ ಅವರೊಂದಿಗೆ ಆಜಾದ್ ಅವರಿಗಿದ್ದ ಆಪ್ತತೆಯಿಂದ ಎಂದರೆ ತಪ್ಪಾಗುವುದಿಲ್ಲ.

ಹಾಗೇ ನೋಡಿದರೆ, ಗುಲಾಂ ನಬಿ ಅಲ್ಪಸಂಖ್ಯಾತ ನಾಯಕರಾಗಿದ್ದರೂ, ತಮ್ಮ ರಾಜ್ಯವಾಗಿರುವ ಜಮ್ಮು ಕಾಶ್ಮೀರದಲ್ಲಿಯೇ ಹೇಳಿಕೊಳ್ಳುವಂತ ಸಂಘಟನೆಯನ್ನು ಮಾಡಲಿಲ್ಲ. ಇನ್ನು ರಾಷ್ಟ್ರ ಮಟ್ಟದಲ್ಲಿ ಪ್ರಮುಖ ನಾಯಕರಾಗಿ ಗುರುತಿಸಿಕೊಂಡ ಬಳಿಕವೂ, ‘ಪಕ್ಷಕ್ಕೆ ಕೊಟ್ಟಿದ್ದಕ್ಕಿಂತ, ಪಕ್ಷದಿಂದ ಗಳಿಸಿಕೊಂಡಿದ್ದೇ’ ಹೆಚ್ಚು ಎನ್ನುವ ಸತ್ಯ. ಸೋನಿಯಾ ಗಾಂಧಿ ಅವರೊಂದಿಗೆ ಇದ್ದ ಆಪ್ತತೆಯನ್ನು ಬಳಸಿಕೊಂಡು ತಮಗೆ ಬೇಕಾದ ಹುದ್ದೆಗಳಲ್ಲಿ ಇದ್ದು, ಇದೀಗ ಮೂಲೆಗುಂಪು ಮಾಡುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತಿದ್ದಂತೆ ಗಾಂಧಿ ಕುಟುಂಬದ ವಿರುದ್ಧವೇ ಹಾರಾಡಿ, ಚೀರಾಡಿ ದೂರಾಗುತ್ತಿರುವುದು ಹಲವು ನಿಷ್ಠಾವಂತ
ಕಾರ್ಯಕರ್ತರಿಗೆ ಬೇಸರವನ್ನು ತರಿಸಿರುವುದಂತೂ ಸುಳ್ಳಲ್ಲ.

ಗುಲಾಂ ನಬಿ ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್‌ನ ಅಲ್ಪಸಂಖ್ಯಾತ ನಾಯಕರೊಂದಿಗೆ ‘ಆಫ್ ದಿ ರೆಕಾರ್ಡ್’
ಮಾತನಾಡುವಾಗಲೂ ಅವರು ಹೇಳಿದ್ದು ಇದೇ ಮಾತನ್ನು. ಹಿರಿಯರಾಗಿ, ಐಕಾನ್ ನಾಯಕರಾಗಿದ್ದ ಗುಲಾಂ ಅವರಿಂದ ಎಂದಿಗೂ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಏಕೆಂದರೆ ಬಹುತೇಕ ಐದು ದಶಕಗಳ ಕಾಲ ಕಾಂಗ್ರೆಸ್‌ನಲ್ಲಿ ಆಯಕಟ್ಟಿನ ಸ್ಥಳದಲ್ಲಿಯೇ ರಾಜಕೀಯ ಮಾಡಿರುವ ಅವರಿಗೆ, ಅನ್ಯಾಯವಾಗಿದೆ ಎಂದು ಹೇಳಲು ಹೇಗೆ ಸಾಧ್ಯ? ಕೇವಲ ಅವರು ಮಾತ್ರವಲ್ಲ, ಕಾಂಗ್ರೆಸ್ ತೊರೆದ ಕಪಿಲ್ ಸಿಬಲ್, ಆರ್‌ಪಿಎನ್ ಸಿಂಗ್ ಸೇರಿದಂತೆ ಬಹುತೇಕರು ತಮಗೆ ಅಧಿಕಾರ ಸಿಗುವ ತನಕ ಪಕ್ಷದೊಂದಿಗೆ ಇದ್ದು, ಪಕ್ಷ ಸುಭಿಕ್ಷದಲ್ಲಿದ್ದಾಗ ಪಕ್ಷದೊಂದಿಗೆ ಇದ್ದುಕೊಂಡು ಇದೀಗ ಸಂಕಷ್ಟ ಸಮಯದಲ್ಲಿ ಕೈಬಿಡುವುದು ಸರಿಯಿರಲಿಲ್ಲ ಎನ್ನುವ ಮಾತನ್ನು ಹೇಳಿದರು.

ಇನ್ನು ಕರ್ನಾಟಕದ ವಿಷಯಕ್ಕೆ ಬಂದರೆ ರಾಜ್ಯದಲ್ಲಿಯೂ ಮುನಿಯಪ್ಪ ಅವರ ಇತ್ತೀಚಿಗೆ ಕಾಂಗ್ರೆಸ್ ವಿರುದ್ಧ ಮಾತನಾಡು ತ್ತಿದ್ದಾರೆ. ಅವರಿಗೂ ವಯಸ್ಸಿದ್ದ ಸಮಯದಲ್ಲಿ, ದೆಹಲಿ ಮಟ್ಟದಲ್ಲಿ ಸಿಗಬೇಕಾದ ಗೌರವವೆಲ್ಲ ಸಿಕ್ಕಿದೆ. ಇದೀಗ ಮುಂದಿನ ಪೀಳಿಗೆ, ತಮ್ಮ ಸ್ಥಾನವನ್ನು ಪಡೆಯುತ್ತಿದ್ದಾರೆ ಎನ್ನುತ್ತಿದ್ದಂತೆ ಪಕ್ಷ ಬಿಡುವ ಮಾತನ್ನು ಆಡುತ್ತಿದ್ದಾರೆ. ಆದರೆ ಇಷ್ಟು ವರ್ಷ
ಅವರು ಅನುಭವಿಸಿದ ಅಽಕಾರದ ಬಗ್ಗೆ ಮಾತನಾಡಲು ಸಿದ್ಧರಿಲ್ಲ.

ಕಾಂಗ್ರೆಸ್‌ನ ಹಲವು ಹಿರಿ ತಲೆಗಳು, ಇಂದಿರಾ, ರಾಜೀವ್ ಹಾಗೂ ಸೋನಿಯಾ ಗಾಂಽ ಅವರೊಂದಿಗೆ ಕಾಣಿಸಿಕೊಂಡು ‘ಬಹುದೊಡ್ಡ ಸ್ಟಾರ್’ಗಳಾಗಿದ್ದು ಸುಳ್ಳಲ್ಲ. ಆದರೀಗ ಪಕ್ಷ ಸಂಕಷ್ಟದಲ್ಲಿರುವಾಗ, ಅವರನ್ನೇ ದೂರುವ, ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಮಾಡುತ್ತಿರುವುದು ಪಕ್ಷದ ವರ್ಚಸ್ಸಿಗೆ ಧಕ್ಕೆ ತರುತ್ತಿದೆ ಎಂದರೆ ತಪ್ಪಾಗುವುದಿಲ್ಲ.

ದೇಶದ ಮೂಲೆಮೂಲೆಯಲ್ಲಿ ಅಧಿಕಾರ ನಡೆಸಿದ್ದಕಾಂಗ್ರೆಸ್ ಇಂದು, ಯಾವ ರಾಜ್ಯದಲ್ಲಿ ಅಧಿಕಾರ ಹಿಡಿಯಬಹುದು ಎಂದು ಲೆಕ್ಕಹಾಕುವ ಪರಿಸ್ಥಿತಿಗೆ ಬಂದು ನಿಂತಿದೆ. ಪಕ್ಷ ಉತ್ತಮ ಸ್ಥಿತಿಯಲ್ಲಿದ್ದಾಗ, ಪಕ್ಷದ ನಾಯಕರೊಂದಿಗೆ ಗುರುತಿಸಿಕೊಂಡು ಎಡ-ಬಲಕ್ಕಿದ್ದ ಅನೇಕರು ಇಂದು ಅವರೊಂದಿಗೆ ನಿಲ್ಲಲು ಸಿದ್ಧರಿಲ್ಲ. ಗುಲಾಂ ನಬಿ ಆಜಾದ್, ಕಬಿಲ್ ಸಿಬಲ್ ಸೇರಿದಂತೆ ಜಿ-23 ಎನ್ನುವ ತಂಡ ಕಟ್ಟಿಕೊಂಡಿರುವ ನಾಯಕರು ತ್ತಂಗದಲ್ಲಿದ್ದಾಗ ಜತೆಯಲ್ಲಿದ್ದು, ಈಗ ರಾಹುಲ್ ಗಾಂಧಿ ತಮ್ಮ ಮಾತು ಕೇಳುತ್ತಿಲ್ಲವೆಂದು ದೂರಾಗುವ ಅಥವಾ ಟೀಕಿಸುತ್ತಿದ್ದಾರೆ.

‘ಕುರಿ ಹಳ್ಳಕ್ಕೆ ಬಿದ್ದಾಗ ಆಳಿಗೊಂದು ಕಲ್ಲು’ ಎನ್ನುವ ಗಾದೆಯಂತೆ ಬೇರೆಯವರು ನಡೆದುಕೊಂಡರೆ ಒಪ್ಪಬಹುದು. ಆದರೆ ದಶಕಗಳ ಕಾಲ ಅಧಿಕಾರದಲ್ಲಿಯೇ ತೇಲಿದ್ದ ನಾಯಕರು ಇದೀಗ ಈ ಸಮಯದಲ್ಲಿ ದೂರಾಗುತ್ತಿರುವುದು ನಿಜಕ್ಕೂ ಕಾಂಗ್ರೆಸ್
ಪಾಲಿಗೆ ನುಂಗಲಾರದ ಸ್ಥಿತಿ ಎಂದರೆ ತಪ್ಪಾಗುವುದಿಲ್ಲ.