ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಕೇರಳ ಮತ್ತು ಕರ್ನಾಟಕಕ್ಕೆ ತಮ್ಮ ಎರಡು ದಿನಗಳ ಪ್ರವಾಸ ವನ್ನು ಕೈಗೊಳ್ಳಲಿದ್ದಾರೆ.
ದಕ್ಷಿಣ ರಾಜ್ಯಗಳ ಭೇಟಿಯ ಸಂದರ್ಭದಲ್ಲಿ, ಮೋದಿ ಅವರು ಕೊಚ್ಚಿಯ ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ನಲ್ಲಿ ಮೊದಲ ಸ್ವದೇಶಿ ವಿಮಾನವಾಹಕ ನೌಕೆ INS ವಿಕ್ರಾಂತ್ಗೆ ಚಾಲನೆ ಮತ್ತು ಮಂಗಳೂರಿನಲ್ಲಿ ಸುಮಾರು 3,800 ಕೋಟಿ ರೂಪಾಯಿ ಗಳ ಯೋಜನೆಗಳ ಉದ್ಘಾಟನೆ ಮತ್ತು ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ.
ಸೆಪ್ಟೆಂಬರ್ 1 ರಂದು ಮೋದಿ ಅವರು ಶ್ರೀ ಆದಿಶಂಕರ ಜನ್ಮ ಭೂಮಿ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಇದು ಕೊಚ್ಚಿನ್ ವಿಮಾನ ನಿಲ್ದಾಣದ ಬಳಿಯ ಕಾಲಡಿ ಗ್ರಾಮದಲ್ಲಿ ಆದಿ ಶಂಕರಾಚಾರ್ಯರ ಪವಿತ್ರ ಜನ್ಮಸ್ಥಳವಾಗಿದೆ.
ಸೆಪ್ಟೆಂಬರ್ 2 ರಂದು ಕೊಚ್ಚಿಯ ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ನಲ್ಲಿ ಪ್ರಧಾನಿ ಮೋದಿ ಅವರು ಮೊದಲ ಸ್ವದೇಶಿ ವಿಮಾನ ವಾಹಕ ನೌಕೆ ಐಎನ್ಎಸ್ ವಿಕ್ರಾಂತ್ಗೆ ಚಾಲನೆ ನೀಡಲಿದ್ದಾರೆ. ವಸಾಹತುಶಾಹಿ ಭೂತಕಾಲವನ್ನು ತೊಡೆದು ಹಾಕುವ ಹೊಸ ನೌಕಾ ಧ್ವಜವನ್ನು ಸಹ ಅನಾವರಣಗೊಳಿಸಲಿದ್ದಾರೆ.
ಕರ್ನಾಟಕದ ಮಂಗಳೂರಿನಲ್ಲಿ ಸುಮಾರು 3800 ಕೋಟಿ ರೂ.ಗಳ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಮೋದಿ ಅವರು ನೆರವೇರಿಸಲಿದ್ದಾರೆ. ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ನಲ್ಲಿ ಇಂಟಿಗ್ರೇಟೆಡ್ ಲಿಕ್ವಿಡ್ ಪೆಟ್ರೋಲಿಯಂ ಗ್ಯಾಸ್ ಮತ್ತು ಬಲ್ಕ್ ಲಿಕ್ವಿಡ್ ಪೆಟ್ರೋಲಿಯಂ, ತೈಲ ಮತ್ತು ಲೂಬ್ರಿಕಂಟ್ ಸೌಲಭ್ಯಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಸುಮಾರು 1000 ಕೋಟಿ ರೂ. ಮೌಲ್ಯದ ಶೇಖರಣಾ ಟ್ಯಾಂಕ್ಗಳು ಮತ್ತು ಖಾದ್ಯ ತೈಲ ಸಂಸ್ಕರಣಾಗಾರ, ಬಿಟುಮೆನ್ ಸಂಗ್ರಹಣೆ ಮತ್ತು ಸಂಬಂಧಿತ ಸೌಲಭ್ಯಗಳು ಸೇರಿದಂತೆ ಐದು ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.