Saturday, 23rd November 2024

’ಕಾಮಾಲೆ’ ಕಣ್ಣಿನ ’ಆರ್ಥಿಕ ತಜ್ಞರು’

ವೀಕೆಂಡ್ ವಿತ್ ಮೋಹನ್‌

camohanbn@gmail.com

ಮದ್ದು-ಗುಂಡುಗಳಿಲ್ಲದೆ ಕೇವಲ ಒಂದು ವೈರಸ್ ಮೂಲಕ ಜಗತ್ತಿನ ವಿರುದ್ಧ ಯುದ್ಧ ಸಾರಿದ ಚೀನಾದ ಹೊಡೆತಕ್ಕೆ ಸಿಕ್ಕಿ ಕಳೆದ 3 ವರ್ಷಗಳಿಂದ ಹಲವು ರಾಷ್ಟ್ರಗಳು ವಿಲ ವಿಲನೆ ಒದ್ದಾಡುತ್ತಿವೆ.

ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ರಷ್ಯಾ ಮತ್ತು ಉಕ್ರೇನ್ ನಡುವಣ ಯುದ್ಧ ಮತ್ತಷ್ಟು ಅರಾಜಕತೆಯನ್ನು ಸೃಷ್ಟಿ ಮಾಡಿತ್ತು. 33 ಕೋಟಿ ಜನಸಂಖ್ಯೆಯ ಅಮೆರಿಕ ದೇಶದ ಕೋವಿಡ್ ಸೋಂಕಿತರ ಸಂಖ್ಯೆ 9 ಕೋಟಿ ದಾಟಿದೆ, ಸತ್ತವರ ಸಂಖ್ಯೆ 10 ಲಕ್ಷ ದಾಟಿದೆ. ಅತ್ಯಾಧುನಿಕ ವೈಜ್ಞಾನಿಕ ತಂತ್ರಜ್ಞಾನಗಳನ್ನು ಹೊಂದಿರುವ ಅಮೆರಿಕದ ಪರಿಸ್ಥಿತಿಯೇ ಹೀಗಿರುವಾಗ, ಹಿಂದುಳಿದ ದೇಶಗಳ ಪರಿಸ್ಥಿತಿ ನಿಯಂತ್ರಣಕ್ಕೆ ಸಿಗಲಿಲ್ಲ.

ಬೃಹತ್ ವೈದ್ಯಕೀಯ ಉದ್ಯಮಿಗಳು ಕೋವಿಡ್ ವೈರಾಣುವನ್ನೇ ಬಳಸಿಕೊಂಡು ಲಸಿಕೆಯ ಮೂಲಕ ಬಿಲಿಯನ್‌ಗಟ್ಟಲೆ ಹಣಮಾಡಲು ಮುಂದಾಗಿದ್ದರು. ಭಾರತೀಯ ರಿಗೆ ಲಸಿಕೆ ಸಿಗುವುದಿಲ್ಲ, ಸಿಕ್ಕರೂ ಒಂದು ಲಸಿಕೆಗೆ ಕನಿಷ್ಠವೆಂದರೂ 100 ಡಾಲರ್ ನೀಡಬೇಕಾಗುತ್ತದೆಯೆಂದು ಹೇಳಲಾಗುತ್ತಿತ್ತು; ಆದರೆ ಇತ್ತ ಭಾರತ ೨೦೦ ಕೋಟಿಗೂ ಅಧಿಕ ಲಸಿಕೆ ನೀಡುವಲ್ಲಿ ಯಶಸ್ವಿ ಯಾಗಿತ್ತು.

140 ಕೋಟಿ ಜನಸಂಖ್ಯೆಯ ರಾಷ್ಟ್ರವನ್ನು 21 ದಿನ ಸಂಪೂರ್ಣ ಲಾಕ್ ಡೌನ್ ಮಾಡುವುದು ಸುಲಭದ ಮಾತಲ್ಲ, ಪರಿಣಾಮ
ಇಡೀ ದೇಶದ ಆರ್ಥಿಕತೆಯೇ ತತ್ತರಿಸಿಹೋಗಿತ್ತು. ‘ಅತ್ತ ಪುಲಿ ಇತ್ತ ದರಿ’ ಎಂಬಂತೆ ಒಂದೆಡೆ ಕೋವಿಡ್ ಮತ್ತೊಂದೆಡೆ ಆರ್ಥಿಕ ನಷ್ಟ, ಎರಡನ್ನೂ ಸರಿದೂಗಿಸಿಕೊಂಡು ದೇಶ ನಡೆಸುವುದರಲ್ಲಿ ಜಗತ್ತಿನ ದೊಡ್ಡಣ್ಣ ಅಮೆರಿಕವೇ ಸೋತಿದೆ. ಅಮೆರಿಕದ ಆರ್ಥಿಕ ವ್ಯವಸ್ಥೆ ಇಂದಿಗೂ ಚೇತರಿಸಿಕೊಂಡಿಲ್ಲ, 4 ದಶಕದಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಹಣದುಬ್ಬರ ದರ ಏರಿಕೆ ಯಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ದರ ಪ್ರತಿ ಲೀಟರಿಗೆ 124 ರು. ಮುಟ್ಟಿದೆ, ಅಮೆರಿಕದ ‘ಫೆಡರಲ್ ಬ್ಯಾಂಕ್’ ತನ್ನ ಬಡ್ಡಿದರವನ್ನು ಏರಿಸುತ್ತಲೇ ಇದೆ, ದಿನನಿತ್ಯದ ವಸ್ತುಗಳ ಬೆಲೆ ಗಗನಕ್ಕೇರಿದೆ. 2022-23ರ ಮೊದಲ ತ್ರೈಮಾಸಿಕದ ‘ಜಿ.ಡಿ.ಪಿ’ ದರ ಮೈನಸ್‌ ನಲ್ಲಿದೆ. ಅತ್ತ ರಷ್ಯಾ- ಉಕ್ರೇನ್ ಯುದ್ಧದ ಪರಿಣಾಮ,‘ನ್ಯಾಟೋ’ ರಾಷ್ಟ್ರಗಳು ಉಕ್ರೇನ್ ಬೆಂಬಲಕ್ಕೆ ನಿಂತಿದ್ದಕ್ಕೆ ಯೂರೋಪಿನ ಹಲವು ರಾಷ್ಟ್ರಗಳಿಗೆ ರಷ್ಯಾ ತನ್ನ ‘ಅಡುಗೆ ಅನಿಲ’ ಪೂರೈಕೆಯನ್ನು ನಿಲ್ಲಿಸಿದೆ.

ಜರ್ಮನಿಯ ಶೇ. 58ರಷ್ಟು ಅಡುಗೆ ಅನಿಲದ ಪೂರೈಕೆ ರಷ್ಯಾದಿಂದಲೇ ಆಗುತ್ತಿತ್ತು; ಆದರೀಗ ರಷ್ಯಾ ಉತ್ಪಾದನಾ ಕಾರ್ಖಾನೆಗಳ ನಿರ್ವಹಣೆ ನೆಪದಲ್ಲಿ ಜರ್ಮನಿಗೆ ಈ ಪೂರೈಕೆಯನ್ನು ಸ್ಥಗಿತಗೊಳಿಸಿದೆ. ರಷ್ಯಾ-ಉಕ್ರೇನ್ ಯುದ್ಧದ ವಿಚಾರದಲ್ಲಿ ತಟಸ್ಥ ನಿಲುವು ತಳೆದ ಭಾರತ, ಯುದ್ಧ ಒಂದು ಮಟ್ಟಕ್ಕೆ ತಲುಪುವವರೆಗೂ ಸುಮ್ಮನಿತ್ತು. ನ್ಯಾಟೋ ದೇಶಗಳು ರಷ್ಯಾ ವಿರುದ್ಧ ನಿಂತಿದ್ದರ ಋಣಾತ್ಮಕ ಪರಿಣಾಮಗಳನ್ನು ಕಂಡ ನಂತರ, ಇತ್ತೀಚಿಗೆ ರಷ್ಯಾ ವಿರುದ್ಧ ಮತ ಚಲಾಯಿಸಿತು. ಪರಿಣಾಮ ರಷ್ಯಾ ಮತ್ತು ಅಮೆರಿಕಗಳ ಜತೆಗಿನ ಸಂಬಂಧವನ್ನು ಉತ್ತಮವಾಗಿ ನಿರ್ವಹಿಸುವಲ್ಲಿ ಭಾರತದ ರಾಜತಾಂತ್ರಿಕ ವ್ಯವಸ್ಥೆ ಯಶಸ್ವಿ ಯಾಗಿದೆ.

ಕೋವಿಡ್ ಮತ್ತು ರಷ್ಯಾ ಯುದ್ಧದ ಪ್ರಭಾವ ಜಗತ್ತಿನ ಹಲವು ಮುಂದುವರಿದ ದೇಶಗಳ ಆರ್ಥಿಕತೆಯನ್ನು ಮಕಾಡೆ ಮಲಗಿಸಿ ದರೆ, ಭಾರತ ಮಾತ್ರ ಎರಡೂ ಕ್ಲಿಷ್ಟಕರ ಸಮಸ್ಯೆಯಿಂದ ಬಹುಬೇಗ ಹೊರಬಂದಿದೆ. 2022-23ರ ಮೊದಲ ತ್ರೈಮಾಸಿಕದಲ್ಲಿ ಕೋವಿಡ್‌ಪೂರ್ವದ ಹಿಂದಿನ ದಿನಗಳ ‘ಜಿ.ಡಿ.ಪಿ’ ಯನ್ನು ಭಾರತ ತಲುಪಿದೆ. 2019-20ರ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿ.ಡಿ.ಪಿ ಸುಮಾರು 32 ಲಕ್ಷ ಕೋಟಿಯಷ್ಟಿದ್ದರೆ, 2022-23ರ ಇದೇ ಅವಧಿಯಲ್ಲಿ ಅದು ಸುಮಾರು 36 ಲಕ್ಷ ಕೋಟಿಯಷ್ಟಿದೆ.

ವಿಪರ್ಯಾಸವೆಂದರೆ ಮಾಧ್ಯಮಗಳು ಇದನ್ನು ದೊಡ್ಡದಾಗಿ ಬಿಂಬಿಸಲು ಯತ್ನಿಸಲೇ ಇಲ್ಲ. ಅಭಿವೃದ್ಧಿಯ ವಿಷಯದ ಬಗ್ಗೆ ಚರ್ಚಿಸಲು ಸಿದ್ಧರಿದ್ದರೂ ಭಾರತದ ಆರ್ಥಿಕತೆಯ ಚೇತರಿಕೆಯು ಯಾರಿಗೂ ದೊಡ್ಡದಾಗಿ ಕಾಣುತ್ತಿಲ್ಲ. ಅತ್ತ ಚೀನಾದ ದೊಡ್ಡ
ಬ್ಯಾಂಕೊಂದು ದಿವಾಳಿಯಾಗುವ ಸಾಧ್ಯತೆಯಿದೆಯೆಂದು ವರದಿಗಳು ಹೇಳುತ್ತಿವೆ; ಆದರೆ ಚೀನಿ ಮಾಧ್ಯಮಗಳ ಮೇಲಿನ ಸರ್ಕಾರದ ಹಿಡಿತದಿಂದಾಗಿ ಈ ವಿಷಯ ದೊಡ್ಡ ಸುದ್ದಿಯಾಗುತ್ತಿಲ್ಲ.

‘ರಿಯಲ್ ಎಸ್ಟೇಟ್’ ಉದ್ಯಮ ಚೀನಾದಲ್ಲಿ ದಯನೀಯ ಸ್ಥಿತಿಯಲ್ಲಿದ್ದರೆ, ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಚೇತರಿಕೆ
ಕಂಡಿದೆ. ಭಾರತದಲ್ಲಿ ‘ಮನೆಸಾಲ’ ವಿಭಾಗದಲ್ಲಿ ಅತಿದೊಡ್ಡ ಪಾಲು ಹೊಂದಿರುವ ಎಚ್‌ಡಿಎ-ಸಿ ಬ್ಯಾಂಕಿನ ಮುಖ್ಯಸ್ಥ
‘ದೀಪಕ್ ಪಾರೇಖ್’ ಭಾರತದ ಚೇತರಿಕೆಯನ್ನು ಪ್ರಶಂಸಿಸಿದದ್ದಾರೆ. ಕಳೆದ ೮ ವರ್ಷಗಳಲ್ಲಿ ನರೇಂದ್ರ ಮೋದಿಯವರು
ದೇಶದ ಆರ್ಥಿಕತೆಯನ್ನು ಸಮರ್ಥವಾಗಿ ನಿಭಾಯಿಸಿರುವುದನ್ನು ಕೊಂಡಾಡಿ, ಮೋದಿಯವರು ಮುಂದಿನ 2 ಅವಧಿಗೆ ಪ್ರಧಾನಿಯಾಗಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಮಧ್ಯಮ ವರ್ಗದ ವ್ಯವಹಾರವನ್ನು ಪಾರೇಖ್ ರಂತೆ ಬೇರಾರೂ ಅರ್ಥಮಾಡಿಕೊಂಡಿರಲು ಸಾಧ್ಯವಿಲ್ಲ; ಅಂಥವರೇ ಮೋದಿಯವರನ್ನು ಪ್ರಶಂಸಿಸುತ್ತಿರುವಾಗ ಕೆಲ ಅಡಕಸಬಿಗಳು ಹಳೆಯ ಸುಳ್ಳುಗಳನ್ನೇ ಹರಿಯಬಿಡುತ್ತಿದ್ದಾರೆ. ಡಾಲರ್ ಎದುರು ರುಪಾಯಿ ಪಾತಾಳ ಕಂಡಿದ್ದು ನಿಜ. ಭಾರತದ ಆಮದಿನಲ್ಲಿ ಕಚ್ಚಾತೈಲ ಮತ್ತು ಚಿನ್ನದ್ದು ಸಿಂಹ ಪಾಲು. ಆಮದು ಹೆಚ್ಚಾದಂತೆ ರುಪಾಯಿ ದುರ್ಬಲವಾಗುವುದು ಸಹಜ ಆರ್ಥಿಕ ಪ್ರಕ್ರಿಯೆ. ಬಹುತೇಕ ದೇಶಗಳ ಕರೆನ್ಸಿಗಳು ರಷ್ಯಾ-ಉಕ್ರೇನ್ ಯುದ್ಧದ
ಪರಿಣಾಮ ಪಾತಾಳಕ್ಕಿಳಿದಿವೆ.

ಭಾರತದ ಸೇವಾವಲಯದಲ್ಲಿನ ರಫ್ತಿನ ಪ್ರಮಾಣ ಹೆಚ್ಚಿರುವುದರಿಂದ, ಇನೋಸಿಸ್, ವಿಪ್ರೋ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ ನಂಥ ತಂತ್ರಜ್ಞಾನ ಕಂಪನಿಗಳಿಗೆ ರುಪಾಯಿ ದುರ್ಬಲವಾದದ್ದು ಅನುಕೂಲವಾಯಿತು. ಹಿಂದೆ ಒಂದು ಡಾಲರಿಗೆ 70 ರು. ಗಳಿಸುತ್ತಿದ್ದಂಥ ಕಂಪನಿಗಳು ಈಗ 79 ರು. ಗಳಿಸುತ್ತಿವೆ. ಇದನ್ನು ಓದಿ ಕಾಮಾಲೆ ಕಣ್ಣಿನ ಕೆಲವು ಆರ್ಥಿಕ ತಜ್ಞರು, ‘ಮೋದಿ ಕಾರ್ಪೊರೇಟ್ ಕಂಪನಿಗಳಿಗೆ ಸಹಾಯಮಾಡುತ್ತಿದ್ದಾರೆ’ ಎಂದು ಬೊಬ್ಬೆ ಹೊಡೆಯುತ್ತಾರೆ.

ಆದರೆ ಈ ಕಂಪನಿಗಳ ಆದಾಯ ಹೆಚ್ಚಾದಷ್ಟೂ ಸರಕಾರಕ್ಕೆ ಆದಾಯ ತೆರಿಗೆ ಹೆಚ್ಚು ಸಂಗ್ರಹವಾಗುತ್ತದೆ, ಈ ಕಂಪನಿಗಳಲ್ಲಿ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗುತ್ತವೆಯೆಂಬ ವಿಷಯದ ಜ್ಞಾನವೇ ಇರುವುದಿಲ್ಲ. 2022-23ರ ಅವಧಿಯಲ್ಲಿ ಒಟ್ಟಾರೆ ಸೇವಾ ವಲಯದ ರಫ್ತು ಮೌಲ್ಯ ಸುಮಾರು 300 ಬಿಲಿಯನ್ ಅಮೆರಿಕನ್ ಡಾಲರ್‌ಗೆ ಮುಟ್ಟುತ್ತದೆ ಎನ್ನಲಾಗುತ್ತಿದೆ.

ಕೋವಿಡ್ ಅವಧಿಯಲ್ಲಿ ಕಚೇರಿಗಳು ಮುಚ್ಚಿದರೂ ಸೇವಾವಲಯದ ಕಂಪನಿಗಳು ಮನೆಯಿಂದಲೇ ಕೆಲಸ ಮಾಡಿಸಿದ್ದವು; ‘ಡಿಜಿಟಲ ಇಂಡಿಯಾ’ ಅಡಿಯಲ್ಲಿ ಮನೆಮನೆಗೂ ಇಂಟರ್ನೆಟ್ ಸೌಲಭ್ಯ ತಲುಪಿಸಿದ್ದರ ಪರಿಣಾಮ ದೂರದ ಊರುಗಳಲ್ಲಿನ ಯುವಕರು ತಮ್ಮ ಮನೆಯಲ್ಲಿದ್ದುಕೊಂಡೇ ಕೆಲಸ ಮಾಡುವಂತಾಯಿತು. ಕೋವಿಡ್ ಮತ್ತು ರಷ್ಯಾ ಯುದ್ಧದ ನಡುವೆಯೂ ಕಳೆದ ವರ್ಷ ಭಾರತಕ್ಕೆ ಸುಮಾರು ೮೩ ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟು ವಿದೇಶಿ ನೇರ ಬಂಡವಾಳ ಹರಿದುಬಂದಿದೆ.

ಷೇರು ಮಾರುಕಟ್ಟೆಯ ನಾಗಾಲೋಟ ಮುಂದುವರೆದು, ಭಾರತದಲ್ಲಿನ ‘ಯೂನಿಕಾರ್ನ್’ (ಒಂದು ಬಿಲಿಯನ್ ಅಮೆರಿಕನ್ ಡಾಲರ್‌ಗಿಂತಲೂ ಹೆಚ್ಚಿನ ಮೌಲ್ಯದ ಕಂಪನಿ) ಗಳ ಸಂಖ್ಯೆ ನೂರರ ಗಡಿ ದಾಟಿದೆ. ಕೊಲ್ಲಿ ರಾಷ್ಟ್ರಗಳಲ್ಲಿದ್ದ ಅನೇಕ ದಕ್ಷಿಣ ಭಾರತೀಯರು ಕೋವಿಡ್ ಅವಧಿಯಲ್ಲಿ ಕೆಲಸ ಕಳೆದುಕೊಂಡು ಭಾರತಕ್ಕೆ ವಾಪಸಾದರು, ಪ್ರತಿ ತಿಂಗಳೂ ಕೊಲ್ಲಿ ರಾಷ್ಟ್ರಗಳಿಂದ ಭಾರತಕ್ಕೆ ಜಮಾವಣೆಯಾಗುತ್ತಿದ್ದ ಹಣದ ಪ್ರಮಾಣ ಕಡಿಮೆಯಾಗಿತ್ತು.

ಅದೇ ವೇಳೆಗೆ, ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ ಅನಿವಾಸಿ ಭಾರತೀಯರ ಹಣ ಜಮಾವಣೆ ಹೆಚ್ಚಾಗಿತ್ತು. ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಬಹುತೇಕ ಅನಿವಾಸಿ ಭಾರತೀಯರು ಮಾಹಿತಿ- ತಂತ್ರಜ್ಞಾನ ವಲಯದಲ್ಲಿದ್ದಾರೆ. ಭಾರತದ ಸೇವಾವಲಯದ
ರಫ್ತು ಹೆಚ್ಚಿರುವ ಕಾರಣ, ಕೊಲ್ಲಿ ರಾಷ್ಟ್ರಗಳಲ್ಲಿದ್ದವರ ಹಣ ಜಮಾವಣೆ ಕಡಿಮೆಯಾದರೂ, ಇತರ ರಾಷ್ಟ್ರಗಳ ಅನಿವಾಸಿ
ಭಾರತೀಯರದ್ದು ಕಡಿಮೆಯಾಗಲಿಲ್ಲ. ಮುಂದಿನ ವರ್ಷ ಸೇವಾವಲಯದ ರಫ್ತಿನ ಪ್ರಮಾಣ ಮತ್ತು ವಿದೇಶಿ ನೇರ ಬಂಡವಾಳ ಸುಮಾರು ೩೨೦ ಬಿಲಿಯನ್ ಅಮೆರಿಕನ್ ಡಾಲರ್‌ನ ಆಸುಪಾಸಿನಲ್ಲಿರಲಿದೆಯೆಂಬ ಅಂದಾಜಿದ್ದರೆ, ಕಚ್ಚಾತೈಲ ಮತ್ತು ಇತರ ವಸ್ತುಗಳ ಆಮದಿನ ಪ್ರಮಾಣ ಸುಮಾರು 300 ಬಿಲಿಯನ್ ಅಮೆರಿಕನ್ ಡಾಲರ್‌ನ ಸನಿಹದಲ್ಲಿರಲಿದೆಯೆಂದು ಅಂದಾಜಿಸಲಾಗಿದೆ.

ಆಮದು- ರಫ್ತಿನ ಮಧ್ಯದ ವ್ಯತ್ಯಾಸ ಅತಿಕಡಿಮೆ ಅಥವಾ ಸಣ್ಣಮಟ್ಟದ ರಫ್ತಿನ ಮೌಲ್ಯ ಹೆಚ್ಚಾಗುತ್ತದೆ ಎನ್ನಬಹುದು. ಪ್ರತಿಷ್ಠಿತ ‘ವಿಪ್ರೋ’ ಕಂಪನಿಯ ಅಧ್ಯಕ್ಷ ರಿಷಾದ್ ಪ್ರೇಮ್ ಜಿಲ್ಲೆವರು ಕಂಪನಿಯ ವಾರ್ಷಿಕ ಷೇರುದಾರರ ಸಭೆಯಲ್ಲಿ, ‘ಸದೃಢ ಆರ್ಥಿಕತೆಯ ವೇಳೆ ವಿದೇಶಿ ಕಂಪನಿಗಳು ನೂತನ ಅವಿಷ್ಕಾರದೆಡೆಗೆ ಹಣ ವ್ಯಯಿಸುತ್ತವೆ, ಆರ್ಥಿಕ ಹಿಂಜರಿಕೆಯ ವೇಳೆ ಖರ್ಚು ತಗ್ಗಿಸುವೆಡೆಗೆ ಆಲೋಚಿಸುತ್ತವೆ. ಆದರೆ ಎಲ್ಲಿಯೂ ವ್ಯವಹಾರ ನಿಲ್ಲಿಸುವ ಯೋಚನೆ ಮಾಡುವುದಿಲ್ಲ.

ಹಾಗಾಗಿ ಭಾರತದ ಮಾಹಿತಿ-ತಂತ್ರಜ್ಞಾನ ವಲಯವು ಆರ್ಥಿಕ ಹಿಂಜರಿಕೆಯ ಒಂದು ತಡೆಗೋಡೆಯಾಗಿದೆ’ ಎಂದಿದ್ದಾರೆ. ಇಷ್ಟು ಸರಳವಾಗಿ ಹೇಳಿದರೂ ಸಾಮಾಜಿಕ ಜಾಲತಾಣದ ಕೆಲವು ಆರ್ಥಿಕ ತಜ್ಞರಿಗೆ ‘ಕಾಮಾಲೆ ಕಣ್ಣಿಗೆ ಕಂಡಿದ್ದೇ ಹಳದಿ’ ಎಂಬಂತಾಗಿದೆ!
ತನ್ನ ದೇಶದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಬೇಕಿರುವ ಉತ್ತಮ ಆರ್ಥಿಕ ನೀತಿಯನ್ನು ಜಾರಿಗೆ ತರುವಲ್ಲಿ ವಿಫಲವಾದ ಶ್ರೀಲಂಕಾ ವಿದೇಶಿ ಸಾಲದಲ್ಲೇ ದೇಶವನ್ನು ನಡೆಸುತ್ತಿತ್ತು; ಜತೆಗೆ ಮಿತಿಮೀರಿದ ಭ್ರಷ್ಟಾಚಾರ, ಕುಟುಂಬ ರಾಜಕಾರಣ ಅಲ್ಲಿನ ರಾಜಕೀಯ ವ್ಯವಸ್ಥೆಯನ್ನು ಹಾಳುಗೆಡವಿತ್ತು.

ಪರಿಣಾಮ ದೇಶವೇ ದಿವಾಳಿಯಾಯಿತು. 2004-2014ರ ನಡುವೆ ಭಾರತದಲ್ಲೂ ಇದೇ ಪರಿಸ್ಥಿತಿಯಿತ್ತು, ವಿದೇಶಿ ಬಂಡವಾಳ ಕ್ಕಿಂತಲೂ ಹೆಚ್ಚಾಗಿ ವಿದೇಶಿ ಭಯೋತ್ಪಾದಕರು ನಮ್ಮ ನಗರಗಳಲ್ಲಿ ಕಾಣುತ್ತಿದ್ದರು, ಪ್ರತಿ ಇಲಾಖೆಯಲ್ಲೂ ಹಗರಣಗಳ ಸುರಿಮಳೆಯಿತ್ತು. ಕುಟುಂಬ ರಾಜಕಾರಣವಂತೂ ಕಾಂಗ್ರೆಸ್ ಪಕ್ಷಕ್ಕೆ ಸ್ವಾತಂತ್ರ್ಯಪೂರ್ವದಿಂದಲೂ ಕರಗತವಾಗಿತ್ತು. ಆದರೆ, ಕಳೆದ 8 ವರ್ಷಗಳಿಂದ ಮೋದಿಯವರ ವಿದೇಶಿ ನೀತಿ ಹೆಚ್ಚು ಬಂಡವಾಳ ಹರಿದುಬರುವಂತೆ ಮಾಡಿದೆ, ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿದೆ.

ಬಿಜೆಪಿಯಲ್ಲಿ ಕುಟುಂಬ ರಾಜಕಾರಣವಂತೂ ಬಹುತೇಕ ಕಡೆ ಮರೀಚಿಕೆಯಾಗಿದೆ. ಇಷ್ಟಾದರೂ, ‘ಶ್ರೀಲಂಕಾದಂತೆ ಭಾರತವೂ ದಿವಾಳಿಯಾಗುತ್ತದೆ’ ಎಂದು ಕೆಲವು ಪಡಪೋಶಿಗಳು ಅರಚುತ್ತಿರುತ್ತಾರೆ. 1980ರ ದಶಕದಲ್ಲಿ ಭಾರತದಲ್ಲಿ ಕಚ್ಚಾತೈಲದ ಅವಶ್ಯಕತೆ ಹೆಚ್ಚಿತ್ತು, ಶೇ.60ರಷ್ಟು ಕಚ್ಚಾತೈಲವನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ನಂತರ ಆಡಳಿತ ನಡೆಸಿದ ಕಾಂಗ್ರೆಸ್
ಸರಕಾರ ಆಮದನ್ನು ತಗ್ಗಿಸುವ ಯಾವುದೇ ಯೋಜನೆಯನ್ನು ಜಾರಿಗೆ ತರದ ಪರಿಣಾಮ ಕಚ್ಚಾತೈಲದ ಆಮದು ಹೆಚ್ಚುತ್ತಲೇ ಹೋಯಿತು.

ದೂರದೃಷ್ಟಿಯ ಕೊರತೆ ಕಾಂಗ್ರೆಸ್ ನ ಬಹುದೊಡ್ಡ ವೈಫಲ್ಯ; ಭಾರತದಲ್ಲಿನ ಕಚ್ಚಾತೈಲ ನಿಕ್ಷೇಪಗಳ ಬಗ್ಗೆ ಅದು ಆಲೋಚಿಸ ಲಿಲ್ಲ, ವಿದ್ಯುಚ್ಚಾಲಿತ ವಾಹನಗಳ ಉತ್ಪಾದನೆಗೆ ಪ್ರೋತ್ಸಾಹಿಸಲಿಲ್ಲ, ವಿದೇಶಿ ಕಂಪನಿಗಳ ಜತೆ ರುಪಾಯಿಯಲ್ಲಿ ವ್ಯವಹರಿಸಲು ಮುಂದಾಗಲಿಲ್ಲ. ಕಳೆದ ೮ ವರ್ಷಗಳಲ್ಲಿ ವಿದ್ಯುಚ್ಚಾಲಿತ ವಾಹನಗಳ ಬಳಕೆಯಲ್ಲಿ ಗಣನೀಯ ಏರಿಕೆಯಾಗಿದ್ದು, ಹಲವು
ಕಂಪನಿಗಳು ಇವುಗಳ ಉತ್ಪಾದನೆ ಭಾರತದಲ್ಲಿ ಬಿಲಿಯನ್ ಗಟ್ಟಲೆ ಹಣ ಹೂಡಿವೆ. ಪೆಟ್ರೋಲ್-ಡೀಸಲ್‌ನಲ್ಲಿ ಎಥೆನಾಲ್ ಮಿಶ್ರಣ ಮಾಡಿ ಶೇ. ೨೦ರಷ್ಟು ದರ ತಗ್ಗಿಸುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ.

2022-23ರ ಮೊದಲ ತ್ರೈಮಾಸಿಕದಲ್ಲಿ ಸುಮಾರು 47 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆಯೆಂದು ‘ಕಾರ್ಮಿಕ ಭವಿಷ್ಯನಿಧಿ’ಯ ಅಂಕಿ-ಅಂಶಗಳು ಹೇಳುತ್ತಿವೆ. ಜಗತ್ತಿನ ಮುಂದುವರಿದ ರಾಷ್ಟ್ರಗಳು ಕೋವಿಡ್ ಮತ್ತು ರಷ್ಯಾ ಯುದ್ಧದ ಪರಿಣಾಮ ದಿಂದಾಗಿ ತಮ್ಮ ಆರ್ಥಿಕತೆಯಲ್ಲಿ ಚೇತರಿಕೆ ಕಾಣದ ಸಮಯದಲ್ಲೂ ಭಾರತದ ಆರ್ಥಿಕತೆ ಪುಟಿದೇಳುತ್ತಿದೆ. ಆದರೆ ಕಾಮಾಲೆ ಕಣ್ಣಿನವರು ಹಳದಿ ಪರದೆಯಿಂದ ಇನ್ನೂ ಹೊರಬರದೆ ಅರಚಾಡುತ್ತಲೇ ಇದ್ದಾರೆ!