ಗೋಕರ್ಣ: ಪರಮಾತ್ಮನ ಮೇಲಿನ ಪರಮ ವಿಶ್ವಾಸವೇ ಧೈರ್ಯದ ಮೂಲ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು.
ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಭಾನುವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ನಮ್ಮ ಆತ್ಮವಿಶ್ವಾಸಕ್ಕೆ ಮಿತಿ ಇದೆ. ಆದರೆ ಪರಮಾತ್ಮನ ಮೇಲಿನ ವಿಶ್ವಾಸಕ್ಕೆ ಮಿತಿ ಇಲ್ಲ. ಆತನ ದಯೆಗೂ ಮಿತಿ ಇಲ್ಲ. ಆತನ ಕಾರುಣ್ಯಕ್ಕೆ ನಾವು ಪಾತ್ರರಾಗುವುದರಿಂದ ಜೀವನ ಸಾರ್ಥಕವಾಗುತ್ತದೆ ಎಂದರು.
ಧೈರ್ಯವಿದ್ದಾಗ ಇಲ್ಲದ ಶಕ್ತಿಯೂ ಬರುತ್ತದೆ. ಧೈರ್ಯ ಇಲ್ಲದಿದ್ದರೆ ಇರುವ ಶಕ್ತಿಯೂ ಉಡುಗುತ್ತದೆ. ಧೈರ್ಯ ಎಲ್ಲವನ್ನೂ ಸಂಪಾದನೆ ಮಾಡಿಕೊಡುತ್ತದೆ. ಆದರೆ ಧೈರ್ಯವನ್ನು ಸಂಪಾದನೆ ಮಾಡುವುದು ಹೇಗೆ ಎನ್ನುವುದೇ ಯಕ್ಷಪ್ರಶ್ನೆ. ಧ್ಯೇಯ ನಿಷ್ಠೆಯಿಂದ ಧೈರ್ಯ ಬರುತ್ತದೆ. ಉದಾತ್ತ ಕಾರ್ಯವೊಂದಕ್ಕೆ ಬದ್ಧತೆ ನಮ್ಮಲ್ಲಿದ್ದರೆ ಧೈರ್ಯ ಸಹಜವಾಗಿಯೇ ಬರುತ್ತದೆ. ಉದಾಹರಣೆಗೆ ವೀರ ಅಭಿಮನ್ಯುವಿಗೆ ಬೃಹತ್ ಕುರುಸೇನೆಯ ವಿರುದ್ಧ ಹೋರಾಡಲು ಸ್ಫೂರ್ತಿ ಸಿಕ್ಕಿದ್ದು ಧೈರ್ಯ ದಿಂದ. ಅಂತೆಯೇ ಹನುಮಂತ ಲಂಕೆಯಲ್ಲಿ ರಾಕ್ಷಸರ ವಿರುದ್ಧ ಹೋರಾಡಿದ್ದು ಕೂಡಾ ಧೈರ್ಯಕ್ಕೆ ನಿದರ್ಶನ ಎಂದು ಬಣ್ಣಿಸಿದರು.
ಹಿರಣ್ಯಕಶುಪು ಮತ್ತು ಪ್ರಹ್ಲಾದನ ದೃಷ್ಟಾಂತ ಇದಕ್ಕ ಉತ್ತಮ ಉದಾಹರಣೆ. ಪರಮಾತ್ಮನ ಮೇಲೆ ಪ್ರಹ್ಲಾದ ವಿಶ್ವಾಸ ಇಟ್ಟದ್ದು ಕೊನೆಗೂ ಫಲ ನೀಡಿತು. ಆದರೆ ದೇವರ ಅವಕೃಪೆಗೆ ಪಾತ್ರನಾದ ಹಿರಣ್ಯಕಶುಪು ಅವಸಾನ ಹೊಂದು ತ್ತಾನೆ ಎಂದು ವಿವರಿಸಿದರು.
ತಾಯಿಯ ಕೈಯಲ್ಲೇ ಪ್ರಹ್ಲಾದನಿಗೆ ವಿಷ ನೀಡಲಾಯಿತು. ತಂದೆಯೇ ಮಗ ನನ್ನು ಕೊಲ್ಲಿಸಲು ಮುಂದಾದ. ಬಗೆ ಬಗೆಯಲ್ಲಿ ಚಿತ್ರಹಿಂಸೆ ನೀಡಲಾಯಿತು. ಆದರೂ ದೇವರ ಮೇಲೆ ಆತ ಇರಿಸಿದ ಅತೀವ ಆತ್ಮವಿಶ್ವಾಸ ಆತನನ್ನು ಕಾಪಾಡಿತು. ಆದರೂ ಪ್ರಹ್ಲಾದ ಆಹ್ಲಾದಕ್ಕೆ ಯಾವ ಭಂಗವೂ ಬರಲಿಲ್ಲ ಎಂದು ಹೇಳಿದರು.
ಧಾರ್ಮಿಕ ಕಾರ್ಯಕ್ರಮದಲ್ಲಿ ಚಾತುರ್ಮಾಸ್ಯ ಅಂಗವಾಗಿ ರುದ್ರಹವನ, ಚಂಡಿ ಪಾರಾಯಣ, ರಾಮತಾರಕ ಹವನ, ಘನ ಪಾರಾಯಣ, ಚಂಡಿಹವನ, ಮಾತೆಯರಿಂದ ಕುಂಕುಮಾರ್ಚನೆ ನಡೆದವು. ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಶ್ರುತಿ ಭಟ್ ಕರ್ಕಿ ಮತ್ತು ಸಂಗಡಿಗರಿಂದ ಹಿಂದೂಸ್ತಾನಿ ಗಾಯನ ನಡೆಯಿತು.
ಚಾತುರ್ಮಾಸ್ಯ ಅಂಗವಾಗಿ ಸೋಮವಾರದಿಂದ (ಸೆ. 5) ಸಹಸ್ರ ಚಂಡಿಯಾಗ ನಡೆಯಲಿದ್ದು, ಈ ತಿಂಗಳ 9ರಂದು ಸಮಾಪ್ತಿ ಯಾಗಲಿದೆ. ಈ ತಿಂಗಳ 10ರಂದು ಸೀಮೋಲ್ಲಂಘನೆಯೊಂದಿಗೆ ಚಾತುರ್ಮಾಸ್ಯ ಮಂಗಲಗೊಳ್ಳಲಿದೆ.