ನವದೆಹಲಿ: ಲಕ್ನೋದಲ್ಲಿನ ಸುದ್ದಿ ವಾಹಿನಿಯಿಂದ ಇತ್ತೀಚೆಗೆ ರಾಜೀನಾಮೆ ನೀಡಿರುವ ಅನಿಲ್ ಯಾದವ್ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವೀಡಿಯೋವೊಂದರಲ್ಲಿ ಹಲವು ಮಾಹಿತಿಗಳನ್ನು ಹೊರಗೆಡಹಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿ ಸರಕಾರಗಳು ಅಥವಾ ಯಾವುದೇ ಬಿಜೆಪಿ ನಾಯಕನ ವಿರುದ್ಧ ಟೀಕಾತ್ಮಕ ಪದಗಳನ್ನು ವರದಿಗಾರರು ಪ್ರಯೋಗಿಸಬಾರದು ಎಂಬ ಸೂಚನೆಗಳನ್ನು ಸುದ್ದಿ ವಾಹಿನಿ ಪಡೆದಿದೆ ಎಂದು ಆರೋಪಿಸಿದ್ದಾರೆ.
‘ನ್ಯೂಸ್ ನೇಷನ್’ ಸೇವೆಗೆ 2012ರಲ್ಲಿ ಸೇರಿದ್ದ ಹಾಗೂ ಇತ್ತೀಚೆಗೆ ರಾಜೀನಾಮೆ ನೀಡಿರುವ ಅನಿಲ್ ಯಾದವ್ “ಕಳೆದ ಐದು ವರ್ಷಗಳಲ್ಲಿ ಪರಿಸ್ಥಿತಿ ಭೀತಿಯಿಂದ ಕೂಡಿದೆ. ನಾನು ಪತ್ರಕರ್ತ ಎಂದು ಹೇಳಿಕೊಳ್ಳಲು ನಾಚಿಕೆ ಪಟ್ಟುಕೊಳ್ಳುತ್ತೇನೆ. ನಾನೊಬ್ಬ ಸೇವಕನಾಗಿ ದ್ದೇನೆ,” ಎಂದು ಹೇಳಿದ್ದಾರೆ.
“ನೀವು ಯಾವುದಾದರೂ ನಾಯಕ ಅಥವಾ ಅವರ ನೀತಿಯನ್ನು ಟೀಕಿಸಬೇಕೆಂದಿದ್ದರೆ ಅದಕ್ಕೆ ರಾಹುಲ್ ಗಾಂಧಿ, ಪ್ರಿಯಾಂಕ್ ಗಾಂಧಿ, ಮಾಯಾವತಿ ಮತ್ತು ಅಖಿಲೇಶ್ ಯಾದವ್ ಇದ್ದಾರೆ,” ಎಂದು ಅವರು ಹೇಳುತ್ತಾರೆ.
“ನ್ಯೂಸ್ ನೇಷನ್ ಪ್ರತಿ ವರ್ಷ ಬಿಜೆಪಿ ಸರಕಾರದ ಜಾಹೀರಾತುಗಳಿಂದ ರೂ. 17 ರಿಂದ ರೂ. 18 ಕೋಟಿ ಆದಾಯ ಗಳಿಸುತ್ತಿದೆ, ಇದೇ ಕಾರಣಕ್ಕೆ ನ್ಯೂಸ್ ನೇಷನ್ ಹಾಗೂ ಅದರ ಪ್ರಾದೇಶಿಕ ವಾಹಿನಿ ನ್ಯೂಸ್ ಸ್ಟೇಟ್ ಬಿಜೆಪಿ ವಿರುದ್ಧ ಏನೂ ಹೇಳುವಂತಿಲ್ಲ, ಟೀಕಿಸಿದ್ದೇ ಆದಲ್ಲಿ ಇಮೇಲ್ ದೊರೆಯುತ್ತದೆ ಅಥವಾ ನಮ್ಮ ಉದ್ಯೋಗಗಳು ಅಪಾಯ ದಲ್ಲಿರುತ್ತವೆ,” ಎಂದು ಹೇಳಿದ್ದಾರೆ.