ತಿಳಿರು ತೋರಣ
srivathsajoshi@yahoo.com
ಪತಂಗಗಳು ಬೆಂಕಿಯೆಡೆಗೆ, ಬೆಳಕಿನ ಮೂಲದೆಡೆಗೆ ಆಕರ್ಷಿತವಾಗುವುದನ್ನು ನಾವೆಲ್ಲ ಗಮನಿಸಿಯೇ ಇರುತ್ತೇವೆ. ಪತಂಗಗಳು ತಮಗೆ ಸಾವು ಕಾದಿದೆ ಎಂದು ಗೊತ್ತಿದ್ದೂ ಹಾರಿಬರುತ್ತವೆಯೋ ಅಥವಾ ದೀಪಜ್ವಾಲೆಯ ಅಂದಕ್ಕೆ ಮರುಳಾಗಿ ಬರುತ್ತವೆಯೋ ಗೊತ್ತಿಲ್ಲ. ಅಂತೂ ದೀಪಜ್ವಾಲೆ ಮತ್ತು ಪತಂಗ ಎನ್ನುವುದೊಂದು ಸಾಹಿತ್ಯಿಕ ಪ್ರತಿಮೆ ಅಥವಾ ಮೆಟಫರ್ ಆಗಿರುವುದು ಹೌದು. ಅಷ್ಟು ಸರ್ವೇಸಾಮಾನ್ಯ ಈ ಪತಂಗಗಳ ಬೆಂಕಿಹುಚ್ಚು.
ಅರ್ಜುನನಿಗೆ ಹಾಗೆ ಕಾಣಿಸುತ್ತಿತ್ತಂತೆ! ಕುರುಕ್ಷೇತ್ರ ಸಮರಾಂಗಣದಲ್ಲಿ ಕೃಷ್ಣ ಪರಮಾತ್ಮನು ತೋರಿದ ವಿಶ್ವರೂಪವು ಭವ್ಯವೂ ದಿವ್ಯವೂ ಆಗಿದ್ದಿರಬಹುದು, ನೋಡುವವರಿಗೆ ಮಹದಾ ನಂದ ಕೊಡುತ್ತಿದ್ದಿರಬಹುದು- ಎಂದು ನಾವಂದುಕೊಳ್ಳುತ್ತೇವೆ.
ಅದು ಅರ್ಧಸತ್ಯ. ಆ ವಿಶ್ವರೂಪವು ಭವ್ಯ-ದಿವ್ಯ ಆಗಿದ್ದಂತೆಯೇ ಕರಾಳವೂ ಕ್ರೂರವೂ ಭಯಾನಕವೂ ಆಗಿತ್ತೆನ್ನುವುದು ಭಗವದ್ಗೀತೆಯ ಶ್ಲೋಕಗಳಿಂದ ನಮಗೆ ತಿಳಿಯುತ್ತದೆ. ‘ನಿನ್ನ ವಿಕರಾಳ ಕೋರೆ ದಾಡೆಗಳನ್ನು, ಪ್ರಳಯಾಗ್ನಿಯಂತೆ ಪ್ರಜ್ವಲಿಸುವ ಮುಖಗಳನ್ನು ನೋಡಿ ದಿಕ್ಕು ಕಾಣದಾಗಿದ್ದೇನೆ. ಮನಸ್ಸಿನ ನೆಮ್ಮದಿಯನ್ನು ಕಳೆದುಕೊಂಡಿದ್ದೇನೆ…’ ಎಂದು ಅರ್ಜುನನೇ ಕೃಷ್ಣನಲ್ಲಿ ಅಲವತ್ತುಕೊಳ್ಳುತ್ತಾನೆ.
ವೈರಿ ಪಾಳೆಯದವರೂ, ತನ್ನ ಕಡೆಯವರೂ ಆ ವಿಕರಾಳ ಭಯಂಕರ ಮುಖಗಳಲ್ಲಿ ಬಹುವೇಗವಾಗಿ ತಾವಾಗಿಯೇ ಪ್ರವೇಶಿಸು ತ್ತಿದ್ದಾರೇನೋ, ಕೆಲವರಂತೂ ಚೂರುಚೂರಾದ ತಲೆಗಳ ಸಹಿತ ಆ ಕೋರೆದಾಡೆಗಳ ಸಂದುಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೇನೋ ಅಂತನಿ ಸುತ್ತದೆಂದು ಅರ್ಜುನ ವಿಹ್ವಲನಾಗುತ್ತಾನೆ. ಆ ಸನ್ನಿವೇಶದಲ್ಲೇ ದೃಷ್ಟಾಂತ ಅಥವಾ ಉಪಮೆ ರೀತಿಯ ಬಣ್ಣನೆಯ ಎರಡು ಶ್ಲೋಕಗಳು ಬರುತ್ತವೆ.
‘ಯಥಾ ನದೀನಾಂ ಬಹವೋಧಿ ಮ್ಬುವೇಗಾಃ ಸಮುದ್ರಮೇವಾಭಿಮುಖಾಃ ದ್ರವಂತಿ| ತಥಾ ತವಾಮೀ ನರಲೋಕವೀರಾ ವಿಶಂತಿ ವಕ್ತ್ರಾಣ್ಯಭಿವಿಜ್ವಲಂತಿ||’ ಮತ್ತು ‘ಯಥಾ ಪ್ರದೀಪ್ತಂ ಜ್ವಲನಂ ಪತಂಗಾ ವಿಶಂತಿ ನಾಶಾಯ ಸಮೃದ್ಧವೇಗಾಃ| ತಥೈವ ನಾಶಾಯ ವಿಶಂತಿ ಲೋಕಾಸ್ತವಾಪಿ ವಕ್ತ್ರಾಣಿ ಸಮೃದ್ಧವೇಗಾಃ||’- ಇವು ಭಗವದ್ಗೀತೆಯ ಹನ್ನೊಂದನೆಯ, ಅಂದರೆ ವಿಶ್ವರೂಪದರ್ಶನ ಯೋಗ ಅಧ್ಯಾಯದಲ್ಲಿ ಅನುಕ್ರಮವಾಗಿ 28 ಮತ್ತು 29 ನೆಯ ಶ್ಲೋಕಗಳು.
‘ಹೇಗೆ ನದಿಗಳಲ್ಲಿ ಜಲಪ್ರವಾಹಗಳು ಸಮುದ್ರಕ್ಕೆ ಅಭಿಮುಖವಾಗಿ ಓಡಿ ಸಮುದ್ರದಲ್ಲಿ ಪ್ರವೇಶ ಮಾಡುತ್ತವೆಯೋ ಹಾಗೆಯೇ
ನರಲೋಕದ ಶ್ರೇಷ್ಠ ವೀರರುಗಳೆಲ್ಲ ಪ್ರಜ್ವಲಿಸುತ್ತಿರುವ ನಿನ್ನ ಮುಖಗಳಲ್ಲಿ ಪ್ರವೇಶಿಸುತ್ತ ಇದ್ದಾರೆ. ಹೇಗೆ ಪತಂಗಗಳು ಮೋಹ ವಶದಿಂದ ನಾಶಹೊಂದುವುದಕ್ಕಾಗಿಯೇ ಅತ್ಯಂತ ವೇಗದಿಂದ ಪ್ರಜ್ವಲಿಸುವ ಅಗ್ನಿಯಲ್ಲಿ ಪ್ರವೇಶಿಸುತ್ತವೆಯೋ ಹಾಗೆಯೇ ಈ ಜನರೆಲ್ಲರೂ ಸಹ ತಮ್ಮ ನಾಶಕ್ಕಾಗಿಯೇ ನಿನ್ನ ಮುಖಗಳಲ್ಲಿ ಅತಿವೇಗವಾಗಿ ಪ್ರವೇಶಿಸುತ್ತಿದ್ದಾರೆ’ ಎಂದು ಭಾವಾರ್ಥ.
ಇದರಲ್ಲಿ, ಪತಂಗಗಳು ತಾವಾಗಿಯೇ ಅಗ್ನಿಜ್ವಾಲೆಯತ್ತ ಆಕರ್ಷಿತವಾಗುವ ದೃಷ್ಟಾಂತ ವಿಶೇಷವಾದುದು. ಸಂಸ್ಕೃತ ವಾಙ್ಮಯ ದಿಂದ ಆರಿಸಿದ ಇನ್ನೊಂದು ಸುಭಾಷಿತದಲ್ಲೂ ಇದೇ ದೃಷ್ಟಾಂತ ಬಳಕೆಯಾದದ್ದಿದೆ. ‘ಮಹತಸ್ತರಸಾ ವಿಲಂಘಯನ್ನಿ ಜದೋ ಷೇಣ ಕುಧಿರ್ವಿನಶ್ಯತಿ| ಕುರುತೇ ನ ಖಲು ಸ್ವೇಚ್ಛಯಾ ಶಲಭಾನಿಂಧನಮಿದ್ಧದೀಧಿತಿಃ||’ – ಇದು ಸುಭಾಷಿತರತ್ನ ಭಾಂಡಾ ಗಾರಂ ಪುಸ್ತಕದಲ್ಲಿದೆ, ಮೂಲತಃ ಮಾಘ ಕವಿಯ ಶಿಶು ಪಾಲವಧ ಕಾವ್ಯದ್ದಂತೆ.
‘ದೀಪವು ತಾನಾಗಿಯೇ ಪತಂಗಗಳನ್ನು ಸುಡುವುದಿಲ್ಲ. ದೀಪವಿದ್ದಲ್ಲಿಗೆ ಪತಂಗಗಳು ತಾವಾಗಿಯೇ ಹಾರುತ್ತವೆ, ಮತ್ತು ಹಾಗೆ ಮಾಡುವಾಗ ಸುಟ್ಟುಹೋಗುತ್ತವೆ. ಅದೇರೀತಿ, ದೊಡ್ಡ ವ್ಯಕ್ತಿಗಳೆದುರು ಮೂರ್ಖನು ತಾನಾಗಿಯೇ ಕಾಲು ಕೆರೆದುಕೊಂಡು ಹೋಗುತ್ತಾನೆ, ತನ್ನದೇ ತಪ್ಪಿನಿಂದ ಮುಖಭಂಗ ಮಾಡಿಕೊಳ್ಳುತ್ತಾನೆ, ಮತ್ತೂ ಮುಂದುವರಿಸಿದರೆ ಕೊನೆಗೆ ಮಣ್ಣುಮುಕ್ಕಿ ನೆಲಸಮವಾಗುತ್ತಾನೆ.’ ಎಂದು ಈ ಸುಭಾಷಿತದ ಭಾವಾರ್ಥ.
ಇಲ್ಲಿ ದೀಪ-ಪತಂಗ ದೃಷ್ಟಾಂತ ಬಳಕೆಯಾಗಿರುವುದು ನೀತಿಬೋಧೆಗೆ. ನಿನ್ನದಲ್ಲದ ವಸ್ತುವಿನ ಆಸೆ ನಿನಗೆ ಬೇಡ, ನಿನ್ನ ಸಾಮರ್ಥ್ಯಕ್ಕೆ ಮೀರಿದ ಮಹತ್ವಾಕಾಂಕ್ಷೆ ಇಟ್ಟುಕೊಳ್ಳಬೇಡ, ವಿವೇಕದ ಲಕ್ಷ್ಮಣರೇಖೆಯನ್ನು ದಾಟಿ ಹೋಗಬೇಡ ಮುಂತಾದ ಬೋಧನೆಗೂ ಇದು ಸೂಕ್ತವಾಗುತ್ತದೆ. ಎಡಕಲ್ಲು ಗುಡ್ಡದ ಮೇಲೆ ಚಿತ್ರದ ಆ ಅತಿಜನಪ್ರಿಯ ಗೀತೆಯಲ್ಲೂ ಅದೇ ರೀತಿಯ ಬೋಧನೆ ತಾನೆ ಇರುವುದು? ‘ವಿಲಾಸದ ಸುಳಿಗೆ ಸಿಲುಕಬೇಡ. ವಿಷಾದದ ಕೂಪಕ್ಕೆ ಜಾರಬೇಡ.
ವಿವೇಕದ ಗಡಿಯನ್ನು ಮೀರಬೇಡ. ಕ್ಷಣಿಕದ ಚಪಲಕೆ ಬಲಿಯಾಗಬೇಡ…’ ಅಂತೆಲ್ಲ ತಂಗಿಯಿಂದ ಅಕ್ಕಳಿಗೆ ಉಪದೇಶದ ಮಾತು. ಅದಕ್ಕೆ ‘ನಿಲ್ಲು ನಿಲ್ಲೇ ಪತಂಗ… ಬೇಡ ಬೇಡ ಬೆಂಕಿಯ ಸಂಗ!’ ದೃಷ್ಟಾಂತಕ್ಕಿಂತ ಹೆಚ್ಚು ಸೂಕ್ತವಾದುದು ಬೇರೇನಿದೆ ಹೇಳಿ! ಅಂದಹಾಗೆ ಆ ಹಾಡು ಹುಟ್ಟಿದ ಸಮಯದ ಬಗ್ಗೆ ಮಣಿಕಾಂತ್ ತನ್ನ ಅಂಕಣದಲ್ಲಿ ಬರೆದಿದ್ದಾರೋ ಇಲ್ಲವೋ ನೆನಪಿಲ್ಲ.
ಒಂದು ವೇಳೆ ಬರೆದಿದ್ದರೆ/ಬರೆಯುತ್ತಿದ್ದರೆ ಹೀಗಿರುತ್ತಿತ್ತೋ ಏನೊ- ‘ಎಡಕಲ್ಲು ಗುಡ್ಡದ ಮೇಲೆ ಚಿತ್ರಕ್ಕಾಗಿ, ಕಾಮನೆಗಳ ತೀವ್ರತೆ ಯಿಂದ ತೊಳಲಾಡುವ ಹೆಣ್ಣಿಗೆ ಉಪದೇಶ ಹೇಳುವುದನ್ನು ಪರಿಣಾಮಕಾರಿಯಾಗಿ ಬಿಂಬಿಸುವ ಹಾಡು ಬೇಕೆಂದು ಪುಟ್ಟಣ್ಣ ಬಯಸಿದ್ದರು… ಚಿತ್ರಸಾಹಿತಿ ವಿಜಯ ನಾರಸಿಂಹ ಅವರೊಂದಿಗೆ ಒಂದು ಸಂಜೆ ಆಳವಾದ ಚಿಂತನೆಯ ಮಾತುಕತೆ ನಡೆದಿತ್ತು… ಆಗಲೇ ಕರೆಂಟ್ ಹೋಯ್ತು… ಎದುರುಗಡೆ ಮೇಜಿನ ಮೇಲೆ ಮೇಣದಬತ್ತಿ ಹಚ್ಚಿಟ್ಟು ಮಾತು ಮುಂದುವರಿಸಿದರು ಪುಟ್ಟಣ್ಣ.
ಒಂದೆರಡು ನಿಮಿಷ ಆಗಿತ್ತೇನೋ ಎಲ್ಲಿಂದಲೋ ಹಾರಿಕೊಂಡು ಬಂದೇ ಬಿಟ್ಟಿತು ಒಂದು ಪತಂಗ… ಎಂತಹ ಆಕರ್ಷಕ ಬಣ್ಣದ್ದಂತೀರಾ… ಆದರೆ ನೋಡನೋಡುತ್ತಿದ್ದಂತೆಯೇ ಮೇಣದಬತ್ತಿಯ ಜ್ವಾಲೆಯತ್ತ ನುಗ್ಗಿದ ಪತಂಗ ಸುಟ್ಟು ಭಸ್ಮವಾಗಿ ಹೋಯ್ತು… ಪುಟ್ಟಣ್ಣನವರಿಗೂ ವಿಜಯನಾರಸಿಂಹರಿಗೂ ಅದು ಯುರೇಕಾ! ಕ್ಷಣ. ಇಬ್ಬರಿಗೂ ಏಕಕಾಲಕ್ಕೇ ಹಾಡಿನ ಮೊದಲ ಸಾಲು ಹೊಳೆಯಿತು!’ ಹೀಗೆ ಸಾಗುತ್ತಿತ್ತು ರಸವತ್ತಾದ ವ್ಯಾಖ್ಯಾನ.
ಈಗ ಪುಟ್ಟಣ್ಣ ಕಣಗಾಲರೂ ಇಲ್ಲ, ವಿಜಯನಾರಸಿಂಹರೂ ನಮ್ಮೊಂದಿಗಿಲ್ಲ. ಆದರೆ ಊಹಿಸಲಿಕ್ಕೇನಡ್ಡಿ? ಏಕೆಂದರೆ, ಭಕ್ತ ಕುಂಬಾರ ಚಿತ್ರದ ‘ಮಾನವ ದೇಹವು ಮೂಳೆ ಮಾಂಸದ ತಡಿಕೆ ಇದರ ಮೇಲಿದೆ ತೊಗಲಿನ ಹೊದಿಕೆ ತುಂಬಿದೆ ಒಳಗೆ ಕಾಮಾದಿ ಬಯಕೆ…’ ಹಾಡು ಹುಣಸೂರು ಕೃಷ್ಣಮೂರ್ತಿಯವರಿಗೆ ಸಿಗರೇಟ್‌ನ ಬೆಂಕಿಯಿಂದ ಸ್ವತಃ ಕೈಬೆರಳು ಸುಟ್ಟುಕೊಂಡಾಗ ಹೊಳೆದದ್ದಂತೆ! ಹಾಗೆಂದು ಮಣಿಕಾಂತ್ ಅಂಕಣದಲ್ಲಿಯೇ ಓದಿದ ನೆನಪಿದೆ ನನಗೆ.
ಇರಲಿ, ವಿಷಯಾಂತರ ಬೇಡ, ಮತ್ತು ಮುಖ್ಯವಿಷಯಕ್ಕೆ ಪ್ರವೇಶಿಸದೆ ಕೊಂಕಣ ಸುತ್ತುವುದೂ ಬೇಡ. ಪತಂಗಗಳು ಬೆಂಕಿಯೆಡೆಗೆ, ಬೆಳಕಿನ ಮೂಲದೆಡೆಗೆ ಆಕರ್ಷಿತವಾಗುವುದನ್ನು ನಾವೆಲ್ಲ ಗಮನಿಸಿಯೇ ಇರುತ್ತೇವೆ. ಪತಂಗಗಳು ತಮಗೆ ಸಾವು ಕಾದಿದೆ ಎಂದು ಗೊತ್ತಿದ್ದೂ ಹಾರಿಬರುತ್ತವೆಯೋ ಅಥವಾ ದೀಪಜ್ವಾಲೆಯ ಅಂದಕ್ಕೆ ಮರುಳಾಗಿ ಬರುತ್ತವೆಯೋ ಗೊತ್ತಿಲ್ಲ.
ಅಂತೂ ದೀಪಜ್ವಾಲೆ ಮತ್ತು ಪತಂಗ ಎನ್ನುವುದೊಂದು ಸಾಹಿತ್ಯಿಕ ಪ್ರತಿಮೆ ಅಥವಾ ಮೆಟಫರ್ ಆಗಿರುವುದು ಹೌದು. ಅಷ್ಟು
ಸರ್ವೇಸಾಮಾನ್ಯ ಈ ಪತಂಗಗಳ ಬೆಂಕಿಹುಚ್ಚು. ಸಂಜೆಹೊತ್ತು ವೆರಾಂಡಾದಲ್ಲಿ ಟ್ಯೂಬ್‌ಲೈಟ್ ಸ್ವಿಚ್ ಆನ್ ಮಾಡಿದಾಗ ಆ
ಬೆಳಕಿಗೆ ಬರುತ್ತವೆ. ಕಾಡಿನ ಮಾರ್ಗದಲ್ಲಿ ರಾತ್ರಿ ಹೊತ್ತು ವಾಹನ ಚಲಾಯಿಸುವಾಗ ಹೆಡ್‌ಲೈಟ್‌ಗಳಿಗೆ ಬಂದು ಅಪ್ಪಳಿಸುತ್ತವೆ.
ಎನ್‌ಸಿಸಿ ಅಥವಾ ಎನ್ನೆಸ್ಸೆಸ್‌ನಂಥ ಶಿಬಿರಗಳಲ್ಲಿ ರಾತ್ರಿಯ ಮೋಜಿಗೆ, ಚಳಿ ಕಾಯಿಸಲಿಕ್ಕೆ ಕ್ಯಾಂಪ್ ಫಾರ್ ಹಾಕಿದರೆ ಅಲ್ಲಿಗೂ
ಠಳಾಯಿಸುತ್ತವೆ!
ಬೆಂಕಿ ಅಥವಾ ಬೆಳಕು ಅಂದರೆ ಅಷ್ಟೂ ಆಕರ್ಷಣೆಯೆ ಪತಂಗಗಳಿಗೆ? ಇಲ್ಲವೆನ್ನುತ್ತದೆ ವಿeನ. ಆಕರ್ಷಣೆ ಎಂದು ನಾವು ತಪ್ಪಾಗಿ ತಿಳಿದುಕೊಂಡಿರುತ್ತೇವೆ. ಪತಂಗಗಳು ಬೆಂಕಿ ಜ್ವಾಲೆಯತ್ತ ಬರುವುದು ಆಕರ್ಷಿತವಾಗಿ ಅಲ್ಲ, ತಮ್ಮ ಹಾರಾಟಕ್ಕೆ ಮಾರ್ಗದರ್ಶಿ ದಿಕ್ಸೂಚಿ ಯಾವುದೆಂದು ತಿಳಿಯದೆ ಗೊಂದಲಕ್ಕೊಳಗಾಗಿ! ಇದನ್ನು ಅರ್ಥಮಾಡಿಕೊಳ್ಳುವುದಕ್ಕೆ ಕಡಲಾಮೆಗಳ ಉದಾಹರಣೆ ಯನ್ನು ತೆಗೆದುಕೊಳ್ಳಬಹುದು. ಆಮೆಗಳು ಉಭಯವಾಸಿಗಳು- ನೀರಿನಲ್ಲಿಯೂ ಬದುಕಬಲ್ಲವು ನೆಲದ ಮೇಲೂ ಬದುಕಬಲ್ಲವು. ಹುಣ್ಣಿಮೆಯ ಆಸುಪಾಸಿನಲ್ಲಿ ಬೆಳದಿಂಗಳ ರಾತ್ರಿಗಳಲ್ಲಿ ನೀರಿನಿಂದ ಸಮುದ್ರತೀರಕ್ಕೆ ಬರುತ್ತವೆ, ಮರಳಲ್ಲಿ ಹೂತಿಟ್ಟ ಮೊಟ್ಟೆ ಗಳಿಗೆ ಕಾವು ಕೊಟ್ಟು ಮರಿಗಳನ್ನಾಗಿಸುವುದಕ್ಕೆ.
ಈ ಕ್ರಿಯೆಗೆ ಅವುಗಳಿಗೆ ಆಗಸದಲ್ಲಿನ ಚಂದ್ರನೇ ಮಾರ್ಗದರ್ಶಿ. ಆದರೆ ಮನುಷ್ಯನೆಂಬ ಮೇಧಾವಿ ಪ್ರಾಣಿ ಏನು ಮಾಡಿದ್ದಾನೆಂದರೆ ಸಮುದ್ರತೀರದಲ್ಲಿ ಬೀಚ್ ರೆಸಾರ್ಟ್‌ಗಳನ್ನೆಲ್ಲ ಕಟ್ಟಿ ಅಲ್ಲಿ ರಾತ್ರೆಯ ಹೊತ್ತು ಜಗಮಗಿಸುವ ದೀಪಗಳನ್ನು ಉರಿಸುತ್ತಾನೆ. ಅದು ಚಂದ್ರನ ಬೆಳಕೆಂದೇ ಭಾವಿಸಿದ ಆಮೆಗಳು ತೀರಕ್ಕೆ ಬರುತ್ತವೆ, ಪ್ರಕೃತಿನಿಯಮವನ್ನು ಮೀರಿ ಬಂದ ತಪ್ಪಿಗೆ ಶಿಕ್ಷೆಯಾಗಿ ಸತ್ತೇ ಹೋಗುತ್ತವೆ. ಅವುಗಳ ಚಿಪ್ಪುಗಳು ಧನದಾಹಿ ವಿಲಾಸಜೀವಿ ಮನುಷ್ಯನ ಪಾಲಾಗುತ್ತವೆ.
ಪತಂಗಗಳ ಸಂಗತಿಯೂ ಅದೇ, ಗತಿಯೂ ಅದೇ. ಮನುಷ್ಯ ನಿರ್ಮಿಸಿದ ಮಾಯಾಲೋಕದಲ್ಲಿ ದಾರಿತಪ್ಪಿಯೇ ಅವು ಮೃತ್ಯು ಪಾಶಕ್ಕೆ ಈಡಾಗುವುದು. ಪತಂಗಗಳು (ಹಾಗೆ ನೋಡಿದರೆ ಹಾರುವ ಜೀವಿಗಳೆಲ್ಲವೂ) ತಮ್ಮ ಪಥದುದ್ದಕ್ಕೂ ನೇರವಾಗಿ ಹಾರುವು ದಿಲ್ಲ. ಅವುಗಳ ಪಥ ಸಾಮಾನ್ಯವಾಗಿ ಕಮಾನಿನ ಆಕಾರದಂತಿರುತ್ತದೆ. ಅದಲ್ಲದೇ ಅವೆಲ್ಲ ಬಹುಮಟ್ಟಿಗೆ ನಿಶಾಚರಗಳಾದ್ದರಿಂದ ತಮ್ಮದೇ ಆದ ಒಂದು ನ್ಯಾವಿಗೇಷನ್ ಸಿಸ್ಟಮ್ ಅಳವಡಿಸಿಕೊಂಡಿರುತ್ತವೆ. ಅದು ತುಂಬ ಕರಾರು ವಾಕ್ಕಾದ ದಿಕ್ಸೂಚಿ ವ್ಯವಸ್ಥೆ.
ಭೌತವಿಜ್ಞಾನದಲ್ಲಿ ಅದಕ್ಕೆ ಟ್ರಾನ್ಸ್‌ವರ್ಸ್ ಓರಿಯೆಂಟೇಷನ್ ಎಂದು ಹೆಸರು. ಸರಳವಾಗಿ ಹೇಳುವುದಾದರೆ- ತುಂಬ ದೂರ ದಲ್ಲಿರುವ ಒಂದು ಬೆಳಕಿನ ಮೂಲಕ್ಕೆ ನಿರ್ದಿಷ್ಟ ಕೋನವನ್ನು ಇಟ್ಟುಕೊಂಡು ಮುಂದೆ ಸಾಗುವುದು. ಪತಂಗಗಳೇ ಅಂತಲ್ಲ, ನಾವು ಮನುಷ್ಯರೂ ಈ ಟ್ರಾನ್ ವರ್ಸ್ ಓರಿಯೆಂಟೇಷನ್ ವ್ಯವಸ್ಥೆಯನ್ನು ಬಳಸಿಕೊಳ್ಳಬಹುದು. ಹೇಗಂತೀರಾ? ಹುಣ್ಣಿಮೆಯ ರಾತ್ರಿಯಂದು ಕತ್ತೆತ್ತಿ ನೋಡಿದರೆ ಆಕಾಶದಲ್ಲಿ ಉತ್ತರ ಭಾಗದಲ್ಲಿ ಚಂದ್ರ ಇದ್ದಾನೆ ಎಂದಿರಲಿ.
ನಿಂತಲ್ಲಿಂದ ಪಶ್ಚಿಮ ದಿಕ್ಕಿನಲ್ಲಿರುವ ಒಂದು ಸ್ಥಳಕ್ಕೆ ನಾವು ಸಾಗಬೇಕಾಗಿದೆ ಎಂದಿರಲಿ. ಆಗೇನು ಮಾಡಬೇಕು? ತುಂಬ ಸುಲಭ. ಚಂದ್ರ ನಮ್ಮ ಬಲಭಾಗಕ್ಕೇ ಇರುವಂತೆ ನಾವು ಸೀದಾ ನಡೆಯುತ್ತಿದ್ದರೆ ಪಶ್ಚಿಮಕ್ಕೇ ತಾನೆ ಸಾಗುತ್ತೇವೆ? ಚಂದ್ರ ನಮಗಿಂತ ತುಂಬ
ದೂರದಲ್ಲಿರುವುದರಿಂದ ಈ ವಿಧಾನವನ್ನು ಅಳವಡಿಸಿಕೊಳ್ಳುವುದು ಸುಲಭವಾಗುತ್ತದೆ. ಚಂದ್ರನ ಬದಲಿಗೆ, ಭೂಮಿಯ ಮೇಲೆಯೇ ನಾವು ನಿಂತಲ್ಲಿಂದ ಕೆಲವೇ ಮೀಟರ್ ಗಳಷ್ಟು ದೂರದಲ್ಲಿರುವ ಒಂದು ದೀಪಸ್ತಂಭ ನಮ್ಮ ದಿಕ್ಸೂಚಿ ಕೇಂದ್ರಬಿಂದು ಅಂತಿಟ್ಟುಕೊಳ್ಳೋಣ.
ಈಗ ಅದು ನಮ್ಮ ಬಲಭಾಗಕ್ಕೇ ಇರುವಂತೆ ನಾವು ನಡೆಯುತ್ತಿದ್ದರೆ ಏನಾಗುತ್ತದೆ? ಕ್ರಮೇಣ ನಾವು ಆ ದೀಪಸ್ತಂಭಕ್ಕೆ ಪ್ರದಕ್ಷಿಣೆ ಬಂದಂತಾಗುತ್ತದೆ ಅಲ್ಲವೆ? ಒಂದುವೇಳೆ ಆ ದೀಪಸ್ತಂಭ ನಮ್ಮ ಬಲಭಾಗಕ್ಕೂ ಅಲ್ಲ, ಮುಖಕ್ಕೆ ನೇರವಾಗೂ ಅಲ್ಲ, ಸುಮಾರು 45 ಡಿಗ್ರಿ ಕೋನದಲ್ಲಿ ಇರುವಂತೆ ನಾವು ನಡೆಯುತ್ತ ಹೋದರೆ? ಆಗ ನಮ್ಮ ಪಥ ಸುರುಳಿ ಆಕಾರದ್ದಾಗಿ ಹೋಗಿ ಕೊನೆಗೆ ನಾವು ಆ ದೀಪಸ್ತಂಭಕ್ಕೇ ಢಿಕ್ಕಿ ಹೊಡೆಯಬೇಕಾಗುತ್ತದೆ!
ಪತಂಗಗಳು ಮನುಷ್ಯ ನಿರ್ಮಿತ ಬೆಳಕಿನ ಮೂಲಗಳತ್ತ ಬರುವುದೂ, ಬಂದು ಸುಟ್ಟುಕೊಂಡು ಸತ್ತು ಹೋಗುವುದೂ ಇದೇ ರೀತಿಯಲ್ಲಿ! ಆಶ್ಚರ್ಯವೆಂದರೆ ಪತಂಗವೆಂಬ ಜೀವಪ್ರಭೇದವು ಮಿಲಿಯಗಟ್ಟಲೆ ವರ್ಷಗಳಿಂದ ಈ ಭೂಮಿಯಲ್ಲಿದೆ. ಹಾಗೆಯೇ
ಸಾವಿರಾರು ವರ್ಷಗಳ ಹಿಂದಿನಿಂದಲೇ ಮನುಷ್ಯನು ಬೆಂಕಿ ಮತ್ತು ಇತರ ಕೃತಕ ಬೆಳಕಿನ ಮೂಲಗಳನ್ನು ಉಪಯೋಗಿಸುತ್ತ
ಬಂದಿದ್ದಾನೆ. ಆದರೂ ಆ ಕೃತಕ ಮೂಲಗಳನ್ನು ಅರಿತುಕೊಳ್ಳುವ, ಅದಕ್ಕೆ ಹೊಂದಿಕೊಂಡು ಬದುಕುವ ಪ್ರೌಢಿಮೆ ಪತಂಗಗಳಿಗೆ
ಬಂದೇ ಇಲ್ಲ! ಆ ಮಟ್ಟಿಗೆ ಅವುಗಳ ಜೀವವಿಕಸನ ಆಗಿಲ್ಲ.
ಅಥವಾ ಪ್ರಕೃತಿ ನಿಯಮವೇ ಹಾಗೆ ಇದೆಯೋ ಏನೋ ಯಾರಿಗೆ ಗೊತ್ತು. ಮಿಲಿಯಗಟ್ಟಲೆ ವರ್ಷಗಳು ಸಂದರೂ ಪತಂಗ ಗಳಿನ್ನೂ ಮುಗ್ಧ ಜೀವಿಗಳಾಗಿಯೇ ಇವೆ. ಮುಗ್ಧ ಆಗಿರುತ್ತಲೇ ಕೊನೆಗೆ ದಗ್ಧ ಆಗಿ ಅವಸಾನಗೊಳ್ಳುವುದು ಅವುಗಳ ಹಣೆಬರಹ ಆಗಿದೆ. ಸೃಷ್ಟಿಯ ಸೋಜಿಗಗಳಿಗೆ ಎಣೆಯೇ ಇಲ್ಲ ಅಂತನಿಸುವುದು ಈ ರೀತಿಯ ವಿಚಾರಗಳನ್ನು ತಿಳಿದುಕೊಂಡಾಗ.
ಆಸ್ಟ್ರೇಲಿಯಾದಲ್ಲಿ ‘ಬೊಗೊಂಗ್’ ಎಂಬ ಜಾತಿಯ ಪತಂಗಗಳು ಪ್ರತಿವರ್ಷವೂ ರಾಜಧಾನಿ ಕ್ಯಾನ್‌ಬೆರ್ರಾದ ವಿದ್ಯುದ್ದೀಪಗಳಿಗೆ ಹೇಗೆ ಮಾರಣಹೋಮವಾಗುತ್ತವೆ ಎಂಬುದನ್ನು ತಿಳಿದರೆ ಪತಂಗಗಳ ಈ ಮುಗ್ಧತೆ ಅಥವಾ ದೌರ್ಬಲ್ಯ ನಮಗೆ ಅರ್ಥವಾಗುತ್ತದೆ.
ಅವು ಮೊಟ್ಟೆಗಳಾಗಿರುವಾಗ ಆಗ್ನೇಯ ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ಪ್ರದೇಶದ ಕಪ್ಪುಮಣ್ಣಿನಲ್ಲಿ ಗಿಡಗಳ ಬುಡಭಾಗದಲ್ಲಿ ಇರುತ್ತವಂತೆ. ಆಸ್ಟ್ರೇಲಿಯಾದಲ್ಲಿ ವಸಂತ ಋತು ಬರುವ ಹೊತ್ತಿಗೆ ಅವು ಹೊಟ್ಟೆಬಾಕ ಹುಳಗಳಾಗಿ ಮಾರ್ಪಾಡಾಗಿರುತ್ತವೆ. ದಿನವಿಡೀ ಮಣ್ಣಿನಲ್ಲಿ ಮಲಗಿದ್ದು ರಾತ್ರೆಯ ಹೊತ್ತಿಗೆ ಹೊರಬಂದು ಗಿಡಗಳ ಎಲೆಗಳನ್ನು ಮುಕ್ಕುತ್ತವೆ. ಹುಳ ಸುಮಾರು
ಐದು ಸೆಂಟಿಮೀಟರ್‌ನಷ್ಟು ಬೆಳೆದಾಗ ಮತ್ತೆ ಕೋಶಾವಸ್ಥೆ ತಲುಪಿ ಮೂರ್ನಾಲ್ಕು ವಾರಗಳಲ್ಲಿ ಪತಂಗಗಳಾಗುತ್ತವೆ.
ಇದು ಶತಮಾನಗಳಿಂದಲೂ ನಡೆದುಕೊಂಡು ಬಂದಿರುವ ಪತಂಗಜೀವವೃತ್ತ. ಬೇಸಗೆಯಲ್ಲಿ ಕಪ್ಪುಮಣ್ಣಿನ ಪ್ರದೇಶದಲ್ಲಿ ಸೆಕೆ ತಾಳಲಾರದೆ ಪತಂಗಗಳು ತಂಪಾದ ಪ್ರದೇಶಗಳಿಗೆ- ಅದು ನೂರಾರು ಕಿಲೋಮೀಟರ್ ದೂರದಲ್ಲಿದ್ದರೂ- ವಲಸೆ ಹೋಗುತ್ತವೆ.
ಮುಖ್ಯವಾಗಿ ಆಸ್ಟ್ರೇಲಿಯಾದ ಪೂರ್ವ ಕರಾವಳಿಯಲ್ಲಿನ ತಂಪು ಪ್ರದೇಶಗಳೇ ಅವುಗಳ ಆಯ್ಕೆ. ಸೆಕೆಗಾಲ ಮುಗಿದ ಮೇಲೆ ಮತ್ತೆ
ಸಂತಾನೋತ್ಪತ್ತಿಗಾಗಿ ಕ್ವೀನ್ಸ್‌ಲ್ಯಾಂಡ್ ಕಪ್ಪುಮಣ್ಣಿನ ಪ್ರದೇಶಕ್ಕೆ ಮರುಪ್ರಯಾಣ. ಇದೂ ಅಷ್ಟೇ, ಶತಮಾನಗಳಿಂದಲೂ ನಡೆದುಕೊಂಡು ಬಂದಿರುವ ಕ್ರಮ. ಚಳಿಗಾಲ ಆರಂಭವಾದೊಡನೆ ಕೆನಡಾದಿಂದ ಸಾವಿರಾರು ಮೈಲಿಗಳಷ್ಟು ದಕ್ಷಿಣಕ್ಕೆ ಹಾರಿ
ಮೆಕ್ಸಿಕೊದಲ್ಲಿ ಸಂತಾನೋತ್ಪತ್ತಿ ಮಾಡಿಕೊಂಡು ಬೇಸಗೆಯೆನ್ನುವಾಗ ಮರಳಿ ಕೆನಡಾಕ್ಕೆ ಹಾರುವುದರೊಳಗೆ ನಾಲ್ಕು ತಲೆಮಾರುಗಳನ್ನು ಕಳೆಯುವ ಮೊನಾರ್ಕ್ ಚಿಟ್ಟೆಗಳ ವಲಸೆಯಂತೆಯೇ ಇದು ಕೂಡ.
ಆದರೆ ಈಗೇನಾಗಿದೆಯೆಂದರೆ ಬೊಗೊಂಗ್ ಪತಂಗಗಳ ವಲಸೆ ಮಾರ್ಗದ ಮಧ್ಯದಲ್ಲಿಯೇ ಆಸ್ಟ್ರೇಲಿಯಾ ರಾಜಧಾನಿ ಕೆನ್‌ಬೆರ್ರಾ ಪಟ್ಟಣ ತಲೆಯೆತ್ತಿದೆ. ಅಲ್ಲಿನ ಜಗಮಗಿಸುವ ವಿದ್ಯುದ್ದೀಪಗಳು ನಿಶಾಚರ ಪತಂಗಗಳಿಗೆ ತೀವ್ರ ಗೊಂದಲ ಉಂಟುಮಾಡುತ್ತವೆ. ತಮ್ಮ ಪ್ರಯಾಣಕ್ಕೆ ಬೆಳಕಿನ ದಿಕ್ಸೂಚಿ ಯಾವುದು ಎಂಬ ಗೊಂದಲದಲ್ಲಿ ಆ ಬೆಳಕಿನ ಮೂಲಕ್ಕೇ ಬಂದು ಡಿಕ್ಕಿ ಹೊಡೆದು ಸಾಯುತ್ತವೆ. ಕೆನ್‌ಬೆರ್ರಾ ಪಟ್ಟಣದ ಜನತೆ ದೀಪಗಳಿಗೆ ಮುಗಿಬೀಳುವ ಪತಂಗಗಳ ಬಗ್ಗೆ ಹಿಡಿಶಾಪ ಹಾಕುವ ಅಗತ್ಯವೂ ಇರುವುದಿಲ್ಲ, ತಾವಾಗಿಯೇ ಅವು ಸಾವನ್ನಪ್ಪುತ್ತವೆ.
ಅಳಿದುಳಿದುವು ಮತ್ತೆ ತವರೂರಿಗೆ ಮರಳುತ್ತವಾದರೂ ಅಷ್ಟು ದೀರ್ಘ ಪ್ರಯಾಣವಾದ ಮೇಲೆ ಅವುಗಳಿಗೆ ಶಕ್ತಿಯಿರುವುದಿಲ್ಲ.
ಸಂತಾನೋತ್ಪತ್ತಿಯನ್ನಷ್ಟೇ ಮಾಡಿ ಅವೂ ಸತ್ತುಹೋಗುತ್ತವೆ. ಹೊಸ ತಲೆಮಾರಿನ ಪತಂಗಗಳು ಹುಟ್ಟಿಕೊಳ್ಳುತ್ತವೆ, ಮುಂದಿನ
ಋತುವಿನಲ್ಲಿ ವಿದ್ಯುದ್ದೀಪಗಳಿಗೆ ಬಲಿಯಾಗುವುದಕ್ಕೆ. ಹಾಗೆ ಅವು ಹಿಂಡುಗಟ್ಟಲೆ ಆತ್ಮಹತ್ಯೆ ಮಾಡಿಕೊಂಡಾಗೆಲ್ಲ ಆಸ್ಟ್ರೇಲಿ ಯಾದ ಜನರು- ಅಂದರೆ ಅಲ್ಲಿಯ ಅರ್ಜುನರು- ‘ಯಥಾ ಪ್ರದೀಪ್ತಂ ಜ್ವಲನಂ ಪತಂಗಾ ವಿಶಂತಿ ನಾಶಾಯ ಸಮೃದ್ಧವೇಗಾಃ’ ಎಂದು ಹೇಳಿದರೆ ಅರ್ಥಬದ್ಧವಾಗುತ್ತದೆ.
ಬಹುಶಃ ಪ್ರಕೃತಿಯ ಸಮತೋಲನ ಅಂದರೆ ಇದೇ ಇರಬಹುದೇ? ಅದು ಆಸ್ಟ್ರೇಲಿಯಾದ ಪತಂಗಗಳ ಕಥೆಯಾದರೆ ಒಟ್ಟಾರೆ ಯಾಗಿಯೂ ಪತಂಗ ಎಂಬ ಜೀವಪ್ರಭೇದಕ್ಕೆ ಎಲ್ಲಿಲ್ಲದ ಗರ್ವ ಇದೆಯಂತೆ! ಬೆಳಕು ಕಂಡಾಗ ಭಯದಿಂದ ಕತ್ತಲೆ ಯೊಳಕ್ಕೋಡುವ ಜಿರಳೆ ಒಮ್ಮೆ ಪತಂಗವನ್ನು ಕೇಳಿತಂತೆ, ‘ಸಾಯುತ್ತೀ ಎಂದು ಗೊತ್ತಿದ್ದೂ ಯಾಕೆ ಆ ಬೆಳಕಿನೆಡೆಗೆ ಸಾಯ್ತೀ?’ ಅದಕ್ಕೆ ಪತಂಗ ಹೇಳಿತಂತೆ- ‘ಸತ್ತರೂ ಚಿಂತೆಯಿಲ್ಲ, ಬೆಂಕಿಯ ಜ್ವಾಲೆಯಲ್ಲಿ ದೇದೀಪ್ಯಮಾನವಾಗಿ ವೀರಮರಣವನ್ನಪ್ಪುವುದೇ ನಮ್ಮ ಶ್ರೇಷ್ಠತೆ! ಆಲಸ್ಯದಲ್ಲಿ ಬದುಕಿ ಅಮರರಾಗುವುದಕ್ಕಿಂತ ಇದೇ ಒಳ್ಳೆಯದು’ ಎಂದು.
ಡಾನ್ ಮಾರ್ಕ್ವಿಸ್ ಎಂಬ ಅಮೆರಿಕನ್ ಕವಿಯೊಬ್ಬ (ವೃತ್ತಿಯಲ್ಲಿ ಪತ್ರಕರ್ತ, ಪ್ರವೃತ್ತಿಯಲ್ಲಿ ಕವಿ, ಕಾದಂಬರಿಕಾರ, ನಾಟಕಕಾರ, ಹಾಸ್ಯಗಾರ) ಬರೆದ The lesson of the moth ಕವಿತೆಯಲ್ಲಿ ಈ ಕಲ್ಪನೆ ಬರುತ್ತದೆ. ಡಾನ್ ಮಾರ್ಕ್ವಿಸ್ 1927ರಲ್ಲಿ ಬರೆದ ಈ ಕವಿತೆಯಲ್ಲಿ ಆರ್ಚಿ ಎಂಬ ಹೆಸರಿನ ಜಿರಳೆಯು ಕವಿಯ ಪರವಾಗಿ ಪತಂಗದೊಡನೆ ಸಂಭಾಷಣೆ ನಡೆಸುತ್ತದೆ. ಪತಂಗದ ಹೇಳಿಕೆ ಇಂಗ್ಲಿಷ್‌ನಲ್ಲಿ ಇನ್ನೂ ಚಂದವಾಗಿ, ಮಾರ್ಮಿಕವಾಗಿ ಕೇಳಿಸುತ್ತದೆ: It is better to be happy for a moment and be burned up with beauty than to live a long time and be bored all the while! ಹಾಗಾಗಿ, ನಾವು ‘ನಿಲ್ಲು ನಿಲ್ಲೇ ಪತಂಗ, ಬೇಡ ಬೇಡ ಬೆಂಕಿಯ ಸಂಗ!’ ಎಂದು ಎಷ್ಟು ಹೇಳಿದರೂ ಪತಂಗಗಳು ಬೆಂಕಿಯೆಡೆಗೆ ಬರುವುದನ್ನು, ಬಂದು ಬೆಂದು ಬೂದಿಯಾಗುವುದನ್ನು, ನಿಲ್ಲಿಸುವುದಿಲ್ಲ.