ವೀಕೆಂಡ್ ವಿತ್ ಮೋಹನ್
camohanbn@gmail.com
ಸಂವಿಧಾನದ ವಿಧಿ 370ನ್ನು ರದ್ದುಮಾಡಿದಾಗ ಮೊದಲು ವಿರೋಧಿಸಿ ಟ್ವೀಟ್ ಮಾಡಿದ್ದು ಪಾಕಿಸ್ತಾನ. ನಂತರ ವಿರೋಧಿಸಿ, ತಾನು ಅಧಿಕಾರಕ್ಕೆ ಬಂದರೆ ಇದನ್ನು ಪುನಃ ತರುವುದಾಗಿ ಹೇಳಿದ್ದು ಕಾಂಗ್ರೆಸ್ ಪಕ್ಷ. ಹಿಜಾಬ್ ಗಲಾಟೆಯ ವಿಷಯದಲ್ಲೂ ಅಷ್ಟೇ, ಮೊದಲು ವಿರೋಧಿಸಿ ಭಾರತದ ಅಲ್ಪ ಸಂಖ್ಯಾತರ ಮೇಲೆ ದಾಳಿಯಾಗುತ್ತಿದೆಯೆಂದು ಹೇಳಿದ್ದು ಪಾಕಿಸ್ತಾನ, ನಂತರ ಕಾಂಗ್ರೆಸ್. ಬಾಲಕೋಟ್ ವೈಮಾನಿಕ ದಾಳಿಯಾದಾಗ, ಹಾಗೊಂದು ದಾಳಿಯೇ ನಡೆದಿಲ್ಲವೆಂದು ಹೇಳಿ ಮೊದಲು ಸಾಕ್ಷ್ಯ ಕೇಳಿದ್ದು ಪಾಕಿಸ್ತಾನ, ನಂತರ ಹೀಗೆ ಸಾಕ್ಷ್ಯ ಕೇಳಿ ಭಾರತೀಯ ಸೈನಿಕರಿಗೆ ಅವಮಾನ ಮಾಡಿದ್ದು ಕಾಂಗ್ರೆಸ್.
ಒಟ್ಟಾರೆಯಾಗಿ, ಭಾರತದ ವಿಚಾರದಲ್ಲಿ ಪಾಕಿಸ್ತಾನಕ್ಕೆ ಬೇಕಿರುವುದು ಕಾಂಗ್ರೆಸ್‌ಗೂ ಬೇಕಿರುತ್ತದೆ. ಮಗ್ಗುಲ ಮುಳ್ಳು ಪಾಕಿಸ್ತಾನವನ್ನು ಸೃಷ್ಟಿ ಮಾಡಿದ ಕಾಂಗ್ರೆಸ್, ಸ್ವಾತಂತ್ರ್ಯಾನಂತರ ಭಾರತದಲ್ಲಿ ಅಲ್ಪ ಸಂಖ್ಯಾತರ ಹೆಸರಿನಲ್ಲಿ ದೊಡ್ಡಮಟ್ಟದ ರಾಜಕೀಯವನ್ನೇ ಮಾಡಿಕೊಂಡು ಬಂದಿದೆ. ಹೀಗಾಗಿ, ಭಾರತದಲ್ಲಿನ ಮುಸಲ್ಮಾನ ರನ್ನು ಓಲೈಸಲೆಂದೇ ಪಾಕಿಸ್ತಾನವನ್ನು ಕಾಂಗ್ರೆಸ್ ಸೃಷ್ಟಿಸಿರಬೇಕು ಎಂಬ ಅನುಮಾನ ಮೂಡಿದರೆ ಅಚ್ಚರಿಯೇ ನಿಲ್ಲ.
ಅಲ್ಪಸಂಖ್ಯಾತರ ಓಲೈಕೆಯ ಪರಮಾವಧಿಯಾಗಿ ಕಾಂಗ್ರೆಸ್ ದೇಶದ ಆಂತರಿಕ ಮತ್ತು ಬಾಹ್ಯ ಭದ್ರತೆಯ ವಿಷಯದಲ್ಲಿ ಹೊಂದಾಣಿಕೆಯ ರಾಜಕೀಯ ವನ್ನೇ ಮಾಡಿಕೊಂಡು ಬಂದಿದೆ. 2004-2014ರ ಅವಧಿಯಲ್ಲಿ ದೇಶದ ವಿವಿಧೆಡೆ ಬಹಳಷ್ಟು ಸಲ ಉಗ್ರರ ದಾಳಿಗಳಾದ ನಿದರ್ಶನಗಳಿವೆ. ಮುಂಬೈ ನಗರದ ರಸ್ತೆಗಳಲ್ಲಿ ಸಾರ್ವಜನಿಕರ ಮೇಲೆ ಗುಂಡಿನ ದಾಳಿ ನಡೆಸಿದ ಪಾಕ್-ಪ್ರಚೋದಿತ ಉಗ್ರ ಸಂಘಟನೆಗಳ ಮೇಲೆ ಒಂದೇ ಒಂದು ದಿಟ್ಟಕ್ರಮ ಕೈಗೊಳ್ಳದ ಸೈಲೆಂಟ್ ಪ್ರೇಕ್ಷಕ ಪ್ರಧಾನಿಯನ್ನು ನೀಡಿದ್ದು ಕಾಂಗ್ರೆಸ್.
ಅತ್ತ ತನ್ನ ತಂದೆಯನ್ನು ಕೊಂದಂಥ ಎಲ್‌ಟಿಟಿಇ ಉಗ್ರರನ್ನು ಕ್ಷಮಿಸುವ ಮೂಲಕ ರಾಹುಲ್ ಗಾಂಧಿ ಮತ್ತೊಂದು ಓಲೈಕೆಯ ಪರಮಾವಧಿಯನ್ನು ಅನಾವರಣಗೊಳಿಸಿದ್ದರು. ಪಿಎಫ್ಐ ನಿಷೇಧದ ವಿಚಾರದಲ್ಲೂ ಮತ್ತೊಮ್ಮೆ ಓಲೈಕೆ ರಾಜಕಾರಣದ ಪರಮಾವಧಿ ತಲುಪಿರುವ ಕಾಂಗ್ರೆಸ್, ಈ
ನಿಷೇಧವನ್ನು ಒಲ್ಲದ ಮನಸ್ಸಿನಿಂದ ಸ್ವಾಗತಿಸುತ್ತ ಆರೆಸ್ಸೆಸ್ ಹೆಸರನ್ನು ತನ್ನ ಓಲೈಕೆ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ. ತಾನು ಕಳೆದುಕೊಳ್ಳುತ್ತಿದ್ದಂಥ ಮುಸಲ್ಮಾನರ ಮತಗಳನ್ನು ಪಿಎಫ್ಐ ನಿಷೇಧದ ಬಳಿಕ ವಾಪಸ್ ಪಡೆಯಲು ಶತಾಯಗತಾಯ ಯತ್ನಿಸುತ್ತಿರುವ ಕಾಂಗ್ರೆಸ್ ಈ ಅಸವನ್ನು ಬಳಸಿ ಕೊಳ್ಳುತ್ತಿದೆ.
ಇದೇ ಸಂಘಟನೆಯ ಗೂಂಡಾಗಳನ್ನು ಜೈಲಿನಿಂದ ಬಿಡಿಸಿ ಅವರಿಗೆ ನೋಟಿನ ಕಂತೆಗಳನ್ನು ಹಂಚುವ ಮೂಲಕ ಕಾಂಗ್ರೆಸ್ಸಿನ ಶಾಸಕರೊಬ್ಬರು ತೀರಾ ಕೆಳಮಟ್ಟದ ರಾಜಕಾರಣವನ್ನು ಪ್ರದರ್ಶಿಸಿದ್ದರು. ದೇಶವಿರೋಧಿ ಕೃತ್ಯದಲ್ಲೇ ತೊಡಗಿಸಿಕೊಂಡಿರುವ ಪಿಎಫ್ಐ ಸಂಘಟನೆಯನ್ನು, ಆರೆಸ್ಸೆಸ್‌ನಂಥ ಅಪ್ಪಟ ದೇಶಭಕ್ತ ಸಂಘಟನೆಯ ಜತೆ ಹೋಲಿಸುವುದೇ ದೊಡ್ಡ ಅಪರಾಧ. ಹಿಂದೂ ಸಮಾಜದಲ್ಲಿದ್ದಂಥ ಮೇಲು-ಕೀಳೆಂಬ ಅಸಮಾನತೆಯನ್ನು ಹೋಗಲಾಡಿಸಿ ಸಮಸ್ತ ಹಿಂದೂಗಳನ್ನು ಒಂದೆಡೆ ಸೇರಿಸಿ, ಬ್ರಿಟಿಷರ ವಿರುದ್ಧ ಹೋರಾಡಲು ಸ್ಥಾಪಿತವಾದ ಸಂಸ್ಥೆ ಆರೆಸ್ಸೆಸ್.
ಸ್ವತಃ ಅಂಬೇಡ್ಕರ್ ಹಾಗೂ ಗಾಂಧೀಜಿಯವರು ಸಂಘದಲ್ಲಿನ ಶಿಸ್ತನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಂಘದ ಶಾಖೆಗಳಲ್ಲಿ ಇಂದಿಗೂ ಜಾತಿಯ ವಿಷಯ ಚರ್ಚೆಗೇ ಬರುವುದಿಲ್ಲ. ಸಮಾಜಸೇವೆ ಮತ್ತು ಸದೃಢ ರಾಷ್ಟ್ರನಿರ್ಮಾಣ ಕಾರ್ಯದಲ್ಲಷ್ಟೇ ತೊಡಗಿರುವ ಸಂಘಟನೆಯಿದು. ಚೆನ್ನೈನಲ್ಲಿ ಭಾರಿ ಜಲಪ್ರವಾಹ ಉಂಟಾದಾಗ ಜನಸೇವೆಗೆಂದು ರಸ್ತೆಗಿಳಿದಿದ್ದು, ಉತ್ತರ ಕರ್ನಾಟಕ ಮತ್ತು ಕೊಡಗಿನಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯ ನಿಭಾವಣೆಗೆ ಸರಕಾರಕ್ಕಿಂತಲೂ ಮೊದಲು ಜನರ ಬಳಿ ತಲುಪಿದ್ದು, ಕರೋನಾ ಸಂದರ್ಭದಲ್ಲಿ ಮನೆಮನೆಗೂ ಊಟ-ಪಡಿತರ-ಔಷಧಿಗಳನ್ನು ತಲುಪಿಸುವ ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದು ‘ಆರೆಸ್ಸೆಸ್’.
ಅಷ್ಟೇಕೆ, 1975ರಲ್ಲಿ ಇಂದಿರಾ ಗಾಂಧಿ ತುರ್ತುಸ್ಥಿತಿ ಹೇರುವ ಮೂಲಕ ವಿನಾಶಗೊಳಿಸಿದ್ದ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುವಲ್ಲಿ ಬಹುದೊಡ್ಡ ಪಾತ್ರ ವಹಿಸಿದ್ದು ಕೂಡ ‘ಆರೆಸ್ಸೆಸ್’ ಸಂಘಟನೆಯೇ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇಂದಿರೆಯ ಅಟ್ಟಹಾಸವನ್ನು ಪ್ರಶ್ನಿಸಿ ದೇಶಾದ್ಯಂತ ಪ್ರಜಾ ಪ್ರಭುತ್ವವನ್ನು ಉಳಿಸಿಕೊಳ್ಳಲು ಹೋರಾಟ ನಡೆಸಿದ್ದಕ್ಕಾಗಿ ಆರೆಸ್ಸೆಸ್ ಸಂಘಟನೆಯನ್ನು ನಿಷೇಧಿಸಲಾಗಿತ್ತೇ ಹೊರತು, ಅದು ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿತ್ತು ಎಂಬ ಕಾರಣಕ್ಕಲ್ಲ.
1992ರ ಬಾಬ್ರಿ ಮಸೀದಿ ಧ್ವಂಸದ ಸಮಯದಲ್ಲಿ ಆರೆಸ್ಸೆಸ್ ನಿಷೇಧವಾಗಿತ್ತು, ನಂತರ ನ್ಯಾಯಾಲಯ ನೀಡಿದ ತೀರ್ಪಿನನ್ವಯ ಈಗ ಅದೇ ಜಾಗದಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿಲ್ಲವೇ? ೧೯೪೮ರಲ್ಲಿ ಗಾಂಧೀಜಿಯವರ ಹತ್ಯೆಯ ನಂತರ ಆರೆಸ್ಸೆಸ್ ನಿಷೇಧವಾಗಿತ್ತು, ನಂತರ ನಡೆದ ವಿಚಾರಣೆ ಗಳಲ್ಲಿ ಈ ಹತ್ಯೆಗೂ ಸಂಘಕ್ಕೂ ಯಾವ ಸಂಬಂಧವಿಲ್ಲವೆಂಬ ತೀರ್ಪು ಬಂದಿತ್ತು. ಪಿಎಫ್ಐ ರೀತಿಯಲ್ಲಿ ಸಂಘವು ಎಂದೂ ದೇಶವಿರೋಧಿ ಚಟು ವಟಿಕೆಯಲ್ಲಿ ತೊಡಗಿಸಿಕೊಂಡು ನಿಷೇಧಕ್ಕೊಳಗಾಗಲಿಲ್ಲ. ಕಾಂಗ್ರೆಸ್ ತನ್ನ ಸ್ವಾರ್ಥಕ್ಕಾಗಿ ದೇಶದ ಭದ್ರತೆಯೊಂದಿಗೆ ರಾಜಿಮಾಡಿಕೊಂಡಿದ್ದನ್ನು
ಪ್ರಶ್ನಿಸಿದ್ದರ ಪರಿಣಾಮ ಹಾಗೂ ತನ್ನ ಬುಡ ಅಲ್ಲಾಡುವ ಭಯದಿಂದ ಸಂಘವನ್ನು ನಿಷೇಧಿಸಿತ್ತು.
ಸಂಘವೆಂಬುದು ಆನೆಯಿದ್ದಂತೆ, ತನ್ನಪಾಡಿಗೆ ತಾನು ಸಮಾಜಮುಖಿ ಕೆಲಸ ಮಾಡಿಕೊಂಡು ಅದು ಗಾಂಭೀರ್ಯದಿಂದ ಹೆಜ್ಜೆಹಾಕುತ್ತಿರುತ್ತದೆ. ಆದರೆ ಕಾಂಗ್ರೆಸ್ ಎಂದಿನಂತೆ ಮುಸಲ್ಮಾನರನ್ನು ಓಲೈಸುವ ಯತ್ನವಾಗಿ ಸಂಘವನ್ನು ಪಿಎಫ್ಐ ಜತೆಗೆ ಹೋಲಿಸುವ ಕೆಲಸ ಮಾಡುತ್ತಿದೆ. ಸಂಘವನ್ನು ಬೈದರೆ ಮುಸಲ್ಮಾನರು ಕಾಂಗ್ರೆಸ್‌ಗೆ ಹೆಚ್ಚು ಮತ ಹಾಕುತ್ತಾರೆಂಬ ದೇಶವಿರೋಧಿ ಚುನಾವಣಾ ತಂತ್ರಗಾರಿಕೆಯಿದು. ಅಧಿಕಾರಕ್ಕಾಗಿ ಯಾವ ಮಟ್ಟಕ್ಕೂ ಇಳಿಯಲು ಸಿದ್ಧವಿರುವ ಕಾಂಗ್ರೆಸ್, ದೇಶವಿರೋಧಿಗಳ ಜತೆ ಕೈಜೋಡಿಸಲು ಸಿದ್ಧವಾಗಿದೆ. ಆರೆಸ್ಸೆಸ್ ಮತ್ತು ಬಿಜೆಪಿ ನಡುವಿನ ಸೈದ್ಧಾಂತಿಕ ಸಂಬಂಧ ದೇಶಕ್ಕೇ ತಿಳಿದಿರುವ ವಿಷಯ.
ಸಂಘದ ಅನೇಕ ಕಾರ್ಯಕರ್ತರು ಇಂದು ಶಾಸಕರು, ಸಂಸದರು, ಮಂತ್ರಿಗಳಾಗಿದ್ದಾರೆ. ಭಾರತದ ೪ ದಿಕ್ಕುಗಳನ್ನು ಸೇರಿಸುವ ‘ಸುವರ್ಣ ಚತುಷ್ಪಥ’ ರಸ್ತೆ ನಿರ್ಮಿಸಿ ದೇಶದ ಆರ್ಥಿಕತೆಯ ದಿಕ್ಕನ್ನೇ ಬದಲಿಸಿದ ಅಟಲ್ ಬಿಹಾರಿ ವಾಜಪೇಯಿಯವರು ಸಂಘದ ಕಾರ್ಯಕರ್ತರಾಗಿದ್ದವರು. ಜಗತ್ತೇ ಮೆಚ್ಚಿರುವ ನಾಯಕ ನರೇಂದ್ರ ಮೋದಿಯವರೂ ಸಂಘದ ಕಾರ್ಯಕರ್ತರಾಗಿದ್ದವರೇ. ಇವರೆಲ್ಲ ಹಗಲು-ರಾತ್ರಿಯೆನ್ನದೆ ದೇಶಕ್ಕಾಗಿ ತಮ್ಮ ಜೀವನವನ್ನು ಮುಡು ಪಿಟ್ಟಿರುವವರು. ದೇಶ ಕಟ್ಟುವ ಕೆಲಸ ಮಾಡುವ ಚಿಂತನೆಯ ಸಂಘವೆಲ್ಲಿ, ದೇಶವಿರೋಧಿ ಚಟುವಟಿಕೆಯಲ್ಲೇ ತೊಡಗಿಸಿಕೊಂಡು ದೇಶ ಒಡೆಯಲು ಸಂಚು ರೂಪಿಸುವ ಪಿಎಫ್ಐ ಎಲ್ಲಿ?! ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತಾಡುವ ಮತ್ತೊಬ್ಬ ಮುಸಲ್ಮಾನ್ ಓಲೈಕೆಯ ಜಾತ್ಯತೀತ
ರಾಜಕಾರಣಿಯ ಪ್ರಕಾರ, ಪಿಎಫ್ಐ ಸಂಘಟನೆಯನ್ನೇ ನಿಷೇಧಿಸುವ ಬದಲು ತಪ್ಪು ಮಾಡಿದವನಿಗಷ್ಟೇ ಶಿಕ್ಷೆ ನೀಡಬೇಕಂತೆ.
ಇವರ ಮಾತು ಹೇಗಿದೆಯೆಂದರೆ, ಅಮೆರಿಕದ ಅವಳಿ ಗೋಪುರಗಳಿಗೆ ವಿಮಾನ ನುಗ್ಗಿಸಲು ಕಾರಣನಾದ ಒಸಾಮ ಬಿನ್ ಲಾಡೆನ್‌ನನ್ನು ಮಾತ್ರ
ಶಿಕ್ಷಿಸಬೇಕು, ಅಲ್‌ಖೈದಾ ಸಂಘಟನೆಯನ್ನು ನಿಷೇಧಿಸಬಾರದು. ಅಲ್ ಜವಾರಿಯನ್ನು ಶಿಕ್ಷಿಸಬೇಕು, ಆತನ ಐಸಿಸ್ ಸಂಘಟನೆಯನ್ನು ನಿಷೇಧಿಸ ಬಾರದು! ದೇಶಸೇವಾ ಚಟುವಟಿಕೆಗಳಿಗೆ ನಿರಂತರ ಒಡ್ಡಿಕೊಂಡಿರುವ ಆರೆಸ್ಸೆಸ್ ಇನ್ನು ೩ ವರ್ಷಗಳಲ್ಲಿ 100 ವರ್ಷಗಳನ್ನು ಪೂರೈಸುತ್ತದೆ. ಇಷ್ಟು ಸುದೀರ್ಘ ಅವಧಿಯ ಪಯಣದಲ್ಲಿ ಅದು ಎಲ್ಲಿಯೂ ದೇಶವಿರೋಧಿ ಕೃತ್ಯಗಳಲ್ಲಿ ಭಾಗಿಯಾದ ಒಂದೇ ಒಂದು ಉದಾಹರಣೆಯಿಲ್ಲ.
ಸಂಘದಲ್ಲಿ ಆತ್ಮರಕ್ಷಣೆಯ ಉದ್ದೇಶಕ್ಕಾಗಿ ದಂಡಗಳನ್ನು ಬಳಸುವ ತರಬೇತಿಯನ್ನು ಬ್ರಿಟಿಷರ ಕಾಲದಿಂದಲೂ ಹೇಳಿಕೊಡಲಾಗುತ್ತಿದೆ. ಇದನ್ನೇ ಅಸವಾಗಿಟ್ಟುಕೊಂಡು ಅಸಂಬದ್ಧ ಪ್ರಶ್ನೆಗಳನ್ನು ಕೇಳುವ ಮೂಲಕ ಕಾಂಗ್ರೆಸ್ ತನ್ನ ಅಲ್ಪಸಂಖ್ಯಾತರ ಓಲೈಕೆಯನ್ನು ಸಮರ್ಥಿಸಿಕೊಳ್ಳುವಲ್ಲಿ
ನಿರತವಾಗಿದೆ. ಹಾಗಾದರೆ, ಎಲ್ಲೆಡೆ ನಡೆಯುವ ಕರಾಟೆ ತರಬೇತಿಯನ್ನೂ ಪ್ರಶ್ನೆಮಾಡಿ, ಅದೂ ದೇಶವಿರೋಧಿ ಚಟುವಟಿಕೆಗಳಿಗೆ ಬಳಕೆಯಾಗುತ್ತದೆಂದು ಹೇಳಲಾದೀತೇ? ಆಯುಧಪೂಜೆ ಹಬ್ಬದಂದು ಮನೆಯಲ್ಲಿರುವ ಆಯುಧಗಳನ್ನು ಪೂಜಿಸುವ ಸಂಪ್ರದಾಯ ನಮ್ಮಲ್ಲಿದೆ.
ಮೈಸೂರು ಮಹಾರಾಜರೇ ಇಂಥ ಪೂಜೆಯಲ್ಲಿ ತೊಡಗುತ್ತಾರೆ. ಆದರೆ ಕತ್ತಿ-ಗುರಾಣಿ-ಚೂರಿಯಂಥ ಆಯುಧಗಳ ಪೂಜೆಯನ್ನೂ ಪ್ರಶ್ನಿಸುವ ಮೂಲಕ
ಕಾಂಗ್ರೆಸ್ ಜನಸಾಮಾನ್ಯರ ಆಚರಣೆಯನ್ನೂ ಭಯೋತ್ಪಾದನೆಗೆ ಹೋಲಿಸುತ್ತಿದೆ 1977ರಲ್ಲಿ ‘ಸಿಮಿ’ ಎಂಬ ಉಗ್ರಸಂಘಟನೆ ಹುಟ್ಟಿಕೊಂಡಿತ್ತು. 2001ರಲ್ಲಿ ವಾಜಪೇಯಿ ಸರಕಾರದ ಗೃಹ ಇಲಾಖೆಯ ಆದೇಶದ ಮೇರೆಗೆ ಈ ಸಂಘಟನೆಯನ್ನು ನಿಷೇಧಿಸಲಾಗಿತ್ತು. ಆದರೆ ಸುದೀರ್ಘ ಅವಽಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ತನ್ನ ಆಡಳಿತಾವಧಿಯಲ್ಲಿ ಈ ಸಂಘಟನೆಯನ್ನು ನಿಷೇಧಿಸಲು ನಿರ್ಧರಿಸಲಿಲ್ಲ.
2006ರಲ್ಲಿ ಬೇರೆ ಬೇರೆ ಸಂಘಟನೆಗಳ ರೂಪದಲ್ಲಿ ಮರುಹುಟ್ಟು ಪಡೆದ ನಿಷೇಧಿತ ‘ಸಿಮಿ’ಯ ಕಾರ್ಯಕರ್ತರು ಆ ಎಲ್ಲವನ್ನೂ ಒಗ್ಗೂಡಿಸಿ ಪಿಎಫ್ಐ ಸಂಘಟನೆಯನ್ನು ಸ್ಥಾಪಿಸಿದ್ದರು. ಪಿಎಫ್ಐ ಅನ್ನು ಅಂದೇ ನಿಷೇಧಿಸುವಂತೆ ವಿವಿಧ ಸಂಘಟನೆಗಳು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್
ಸರಕಾರಕ್ಕೆ ಒತ್ತಡ ಹೇರಿದ್ದರೂ ಅಂಥ ಕ್ರಮಕ್ಕೆ ಕಾಂಗ್ರೆಸ್ ಮುಂದಾಗಲಿಲ್ಲ. ಮೋದಿಯವರು ಅಧಿಕಾರಕ್ಕೆ ಬಂದ ನಂತರ ದೇಶದ ಭದ್ರತೆಯ ವಿಚಾರದಲ್ಲಿ ಎಂದೂ ರಾಜಿಮಾಡಿಕೊಂಡಿಲ್ಲ. ಪಿಎಫ್ಐ ಸಂಘಟನೆಯ ನಿಷೇಧಕ್ಕೂ ಮುನ್ನ, ಅದರ ಚಟುವಟಿಕೆಗಳು, ಉಗ್ರರ ಜತೆಗಿನ ಅದೆ ಕಾರ್ಯಕರ್ತರ ಸಂಬಂಧವನ್ನು ಹಾಗೂ ಸಂಘಟನೆಯ ಮೂಲಕ ತರಬೇತಿ ಪಡೆದು ಐಸಿಸ್ ಉಗ್ರಸಂಘಟನೆ ಸೇರಿದ್ದವರ ಪುರಾವೆಗಳನ್ನು ಸಂಪೂರ್ಣ
ಪರಿಶೀಲಿಸಲಾಗಿತ್ತು.
ಸಮಾಜದಲ್ಲಿ ಸಾಮರಸ್ಯ ಸಾಧಿಸುವ ಪ್ರಮುಖ ಉದ್ದೇಶದಿಂದ ಆರೆಸ್ಸೆಸ್ ಹಿಂದೂ ಧರ್ಮದ ಎಲ್ಲ ಜಾತಿಗಳನ್ನೂ ಒಗ್ಗೂಡಿಸುವ ಕೆಲಸ ಮಾಡುತ್ತ ಬಂದಿದೆ. ಸಂಘದ ಕಾರ್ಯಕರ್ತರು ಎಂದೂ ಪ್ರಚಾರ ಬಯಸುವುದಿಲ್ಲ. ಕರ್ನಾಟಕದಲ್ಲಿಯೇ ಸಂಘದ ಸಾಮರಸ್ಯ ವೇದಿಕೆಯ ಮೂಲಕ ದಲಿತರ ಪರವಾಗಿ ಹಲವು ಕೆಲಸಗಳನ್ನು ಮಾಡುತ್ತಿರುವ ನೂರಾರು ಕಾರ್ಯಕರ್ತರಿದ್ದಾರೆ. ತಮ್ಮ ಕುಟುಂಬಗಳನ್ನು ತ್ಯಾಗಮಾಡಿ, ತಮ್ಮ ಜೀವನವನ್ನೇ ದೇಶಕ್ಕಾಗಿ ಸಮರ್ಪಿಸಿಕೊಂಡಿರುವ ಪೂರ್ಣಪ್ರಮಾಣದ ಪ್ರಚಾರಕರು ಸಾವಿರ ಸಂಖ್ಯೆಯಲ್ಲಿದ್ದಾರೆ.
ಇಂಥ ಸಂಘಟನೆಯ ಜತೆಗೆ ಪಿಎಫ್ಐನಂಥ ಸಂಘಟನೆಯನ್ನು ಯಾರಾದರೂ ಹೋಲಿಸಿದಲ್ಲಿ ಅದು ನಗೆಪಾಟಲಿನ ವರ್ತನೆಯಾಗುತ್ತದೆ ಅಷ್ಟೇ.