ಅಭಿಮತ
ಸಿದ್ದಾರ್ಥ ವಾಡೆನ್ನವರ
ಕಾಲ ಸರಿದಂತೆ ಚುನಾಯಿತ ನಾಯಕನೊಬ್ಬನ ವರ್ಚಸ್ಸು ಕಡಿಮೆಯಾಗುತ್ತವೆ ಎನ್ನುತ್ತಾರೆ ಬಲ್ಲವರು. ಆದರೆ ಮೋದಿಯವರ ವಿಷಯದಲ್ಲಿ ಈ ಮಾತು ಸುಳ್ಳು. ದೇಶವಾಸಿಗಳಲ್ಲಿ ಹೊಸ ಭರವಸೆ ಹುಟ್ಟಿಸಿರುವ ಮೋದಿ, ಸಮರ್ಥವಾಗಿ ಕಾರ್ಯನಿರ್ವಹಿಸಿ ಭಾರತೀಯರ ಹೃದಯ ಗೆದ್ದಿದ್ದಾರೆ. ಕಠಿಣ ನಿರ್ಣಯಗಳ ಮೂಲಕ ದಿಟ್ಟತನ ಪ್ರದರ್ಶಿಸಿದ್ದಾರೆ.
ವಿದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದವರು ‘ನಾವು ಭಾರತೀಯರು’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂಥ ಕಾಲವೀಗ ಬಂದಿದೆ. ಜಗತ್ತು ಪ್ರಸ್ತುತ ಎದುರಿಸುತ್ತಿರುವ ಬಿಕ್ಕಟ್ಟಿನ ನಿವಾರಣೆಗೆ ಮತ್ತು ಶಾಂತಿ ಸ್ಥಾಪನೆಗೆ ಭಾರತದ ನಾಯಕತ್ವವೇ ಸೂಕ್ತ ಆಯ್ಕೆ ಎನ್ನುತ್ತಿವೆ ಹಲವು ರಾಷ್ಟ್ರಗಳು.
ಅರಬ್ ನಾಡಿನಲ್ಲಿ ಮೊಟ್ಟಮೊದಲ ಭವ್ಯ ಹಿಂದೂ ದೇವಾಲಯ ರೂಪುಗೊಂಡು ಉದ್ಘಾಟಿಸ ಲ್ಪಟ್ಟಿದೆ. ಇವೆಲ್ಲ ಪವಾಡಗಳಲ್ಲ, ಬದಲಿಗೆ ಅಸಾಮಾನ್ಯ ರಾಜತಾಂತ್ರಿಕ ಸಾಮರ್ಥ್ಯದ ಫಲಗಳು, ಪ್ರತೀಕಗಳು. ಇದರ ಹಿಂದಿರುವ ಕರ್ತೃತ್ವಶಕ್ತಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು. ಅವರನ್ನು ಪ್ರಜಾಪ್ರಭುತ್ವದ ಅತ್ಯುತ್ತಮ ಸಂಯೋಜಕ ಎಂದರೆ ತಪ್ಪಾಗಲಾರದು. ಏಕೆಂದರೆ, ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಸಾರ್ವಜನಿಕ ಹಿತಾಸಕ್ತಿಯ ಕಾರ್ಯಗಳನ್ನು ನಿರ್ವಹಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ.
ಭಯೋತ್ಪಾದನೆಯ ನಿಗ್ರಹವನ್ನು ಆದ್ಯತೆಯ ವಿಷಯವಾಗಿ ಪರಿಗಣಿಸಿರುವ ಭಾರತ, ವಿದೇಶಾಂಗ ನೀತಿಯ ವಿಷಯದಲ್ಲೂ ಉತ್ತಮಿಕೆ ಮೆರೆದಿದೆ. ಇರಾಕ್, ಯೆಮನ್, ಅಫ್ಘಾನಿಸ್ತಾನದಿಂದ ಮೊದಲ್ಗೊಂಡು ಉಕ್ರೇನ್ ವರೆಗಿನ ಬಹುತೇಕ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧ ಪರಿಣಾಮಕಾರಿ ಯಾಗಿದೆ. ಯೋಗ ಮತ್ತು ಆಯುರ್ವೇದ ದಂಥ ಮಹತ್ತರ ಸಂಗತಿಗಳೆಡೆಗೆ ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿರುವ ಭಾರತ, ವಾರಾಣಸಿ ಮತ್ತು ಕೇದಾರನಾಥದಂಥ ಯಾತ್ರಾ ಸ್ಥಳಗಳನ್ನು ಗಮನಾರ್ಹವಾಗಿ ರೂಪಾಂತರಿಸಿ ಚಿತ್ತಾಕರ್ಷಕವಾಗಿಸಿದೆ, ಸದ್ಯದಲ್ಲೇ ಅಯೋಧ್ಯೆಯು ಜಗತ್ಪ್ರಸಿದ್ಧ ತಾಣವಾಗಲಿದೆ.
ಕಾಲ ಸರಿದಂತೆ ಚುನಾಯಿತ ನಾಯಕನೊಬ್ಬನ ಜನಪ್ರಿಯತೆ, ವರ್ಚಸ್ಸು ಕಡಿಮೆಯಾಗುತ್ತವೆ ಎನ್ನುತ್ತಾರೆ ಬಲ್ಲವರು. ಆದರೆ ನರೇಂದ್ರ ಮೋದಿ ಯವರ ವಿಷಯದಲ್ಲಿ ಈ ಮಾತು ಸುಳ್ಳು. ದೇಶವಾಸಿಗಳಲ್ಲಿ ಹೊಸತೊಂದು ಭರವಸೆ ಹುಟ್ಟಿಸಿರುವ ಮೋದಿ, ಹಲವಾರು ಸಂಸ್ಕೃತಿಗಳು
ಮತ್ತು ನೂರಾರು ಭಾಷೆಗಳಿರುವ ಭಾರತದಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿ, ಕಠಿಣ ನಿರ್ಣಯಗಳ ಮೂಲಕ ದಿಟ್ಟತನ ಪ್ರದರ್ಶಿಸಿ ಭಾರತೀಯರ ಹೃದಯ ಗೆದ್ದಿದ್ದಾರೆ.
ಹಾಗಂತ ಅವರ ಈ ಸಾಧನೆ ಸುಲಭದ ಗುಕ್ಕಾಗಿರಲಿಲ್ಲ. ಮೋದಿಯವರು ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ನವದೆಹಲಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗ, ಗುಜರಾತ್ನ ಕಛ್ ಮತ್ತು ಭುಜ್ ಪ್ರದೇಶಗಳಲ್ಲಿ ಘನಘೋರ ಭೂಕಂಪ ಸಂಭವಿಸಿತು. ಅವರು ರಾಜಕೀಯದ ಮುಖ್ಯ ವಾಹಿನಿಗೆ ಬರುವುದಕ್ಕೆ ಈ ಸಂದರ್ಭವೇ ನಾಂದಿ ಹಾಡಿತು ಎನ್ನಬೇಕು. ಹೈಕಮಾಂಡ್ನ ಆಣತಿಯಂತೆ ಭೂಕಂಪ ಪೀಡಿತ ಪ್ರದೇಶಗಳಿಗೆ ಬಂದು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡ ಮೋದಿಯವರು, ಸರಕಾರಿ ಹಣ ವ್ಯರ್ಥವಾಗದ ರೀತಿಯಲ್ಲಿ ಅಚ್ಚುಕಟ್ಟಾಗಿ ಈ ಹೊಣೆಗಾರಿಕೆ ನಿರ್ವಹಿಸಿ ತನ್ಮೂಲಕ ಮಾಧ್ಯಮಗಳಿಂದ ಗುರುತಿಸಲ್ಪಟ್ಟರು, ಹೈಕಮಾಂಡ್ನ ಮೆಚ್ಚುಗೆಗೂ ಪಾತ್ರರಾದರು.
ತರುವಾಯದಲ್ಲಿ ಗುಜರಾತ್ನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ರಾಜ್ಯದ ಅಭಿವೃದ್ಧಿಗೆ ಪಣ ತೊಟ್ಟರು. ಮೂಲಸೌಕರ್ಯ, ಸಾರಿಗೆ, ಕೈಗಾರಿಕೆ, ಜಲಸಂಪನ್ಮೂಲದಂಥ ಅನೇಕ ಕ್ಷೇತಗಳಲ್ಲಿ ಗಣನೀಯ ಅಭಿವೃದ್ಧಿ ಸಾಧಿಸಿ ಗುಜರಾತನ್ನು ಮಾದರಿ ರಾಜ್ಯವನ್ನಾಗಿ ಮಾಡಿ
ದರು. ಹೀಗೆ ಅಚಾನಕ್ಕಾಗಿ ರಾಜಕೀಯದ ಮುಖ್ಯವಾಹಿನಿಗೆ ಬಂದು, ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿ ಯಾರೂ ಊಹಿಸದ ರೀತಿಯಲ್ಲಿ ಮಹಾನ್ ನಾಯಕರಾಗಿ ಬೆಳೆದುಬಿಟ್ಟ ಮೋದಿಯವರ ವರ್ಚಸ್ಸನ್ನು ತಗ್ಗಿಸಲು ವಿರೋಧಪಕ್ಷಗಳು ವೈವಿಧ್ಯಮಯ ತಂತ್ರಗಾರಿಕೆಗಳ ಮೊರೆ ಹೋಗಿದ್ದುಂಟು. ಆದರೆ ಅವ್ಯಾವುದೂ ಫಲ ಕೊಡಲಿಲ್ಲ.
ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿದಿದ್ದ ಯುಪಿಎ ಸರಕಾರದ ಹಲವು ಹಗರಣಗಳು ಕಾಂಗ್ರೆಸ್ನ ಇಮೇಜಿಗೆ ಧಕ್ಕೆ ತಂದಿದ್ದವು. ಜತೆಗೆ, ಈ ಸರಕಾರದ ವಿರುದ್ಧ ಜನರ ಅಸಮಾಧಾನ ಹೆಚ್ಚಾಗುತ್ತಲೇ ಹೋಗಿ, ‘ದೇಶಕ್ಕೊಬ್ಬ ಶಕ್ತಿಶಾಲಿ ನಾಯಕ ಬೇಕು; ಅವನು ಶುದ್ಧಹಸ್ತನೂ ಅಭಿವೃದ್ಧಿ ಪರನೂ ಆಗಿರಬೇಕು’ ಎಂಬ ಅಭಿಪ್ರಾಯ ಜನಮಾನಸದಲ್ಲಿ ದಟ್ಟವಾಗತೊಡಗಿತು. ಆಗ ಎಲ್ಲರ ಚಿತ್ತವೂ ಮೋದಿಯವರತ್ತ ತಿರುಗಿ, 2014ರ ಚುನಾವಣೆಯಲ್ಲಿ ಅವರನ್ನು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಯಿತು. ಮೋದಿಯವರು ತಮ್ಮ ವರ್ಚಸ್ಸಿನಿಂದ ಬಿಜೆಪಿಗೆ ಭರ್ಜರಿ ಗೆಲುವು ತಂದುಕೊಟ್ಟಿದ್ದರ ಫಲವಾಗಿ ಪಕ್ಷವು ಕೇಂದ್ರದಲ್ಲಿ ಮೊದಲ ಬಾರಿಗೆ ಸ್ವಂತ ಬಲದ ಮೇಲೆ ಅಧಕಾರಕ್ಕೇರು ವಂತಾಯಿತು.
2019ರಲ್ಲಿ ಕೇಂದ್ರದಲ್ಲಿ ಎರಡನೇ ಬಾರಿಗೆ ಅಽಕಾರಕ್ಕೆ ಬಂದ ಮೋದಿ, ತಾವು ಹಿಂದೆ ನೀಡಿದ್ದ ವಾಗ್ದಾನಗಳನ್ನು ಪೂರೈಸುವತ್ತ ಗಮನಹರಿಸಿದರು.
ಮೋದಿಯವರು ದೇಶದ ಹಿತದೃಷ್ಟಿಯಿಂದ ಕೈಗೊಂಡ ನಿರ್ಧಾರಗಳು ಬಲಿಷ್ಠ ಭಾರತದ ನಿರ್ಮಾಣಕ್ಕೆ ಮುನ್ನುಡಿ ಬರೆದಿವೆ ಎನ್ನಲಡ್ಡಿಯಿಲ್ಲ.
2014ರ ನಂತರ ದೇಶದ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಾಗಿರುವ ಕ್ರಾಂತಿಕಾರಕ ಬದಲಾವಣೆಗಳೇ ಈ ಮಾತಿಗೆ ಪುಷ್ಟಿ ನೀಡುತ್ತವೆ. ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಂಗತಿಗಳಿಗೆ, ಪ್ರಖರ ರಾಷ್ಟ್ರೀಯತೆಗೆ ಯಥೋಚಿತ ಸ್ಥಾನ ದಕ್ಕಿರುವುದಕ್ಕೆ, ತನ್ಮೂಲಕ ಇಡೀ ಜಗತ್ತು ಭಾರತದತ್ತ ಅಭಿಮಾನದಿಂದ ನೋಡುವಂತಾಗಿರುವುದಕ್ಕೆ ಮೋದಿಯವರ ನಾಯಕತ್ವವೇ ಕಾರಣ.
2014ರ ಆಸುಪಾಸಿನಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ೭ರಾಜ್ಯಗಳಲ್ಲಿ ಅಽಕಾರದಲ್ಲಿದ್ದವು. ಆದರಿಂದು ೧೭ ರಾಜ್ಯಗಳಲ್ಲಿ ಬಿಜೆಪಿಯ ಬಾವುಟ ಹಾರುವಂತಾಗಿದೆ. ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್’ ಎಂಬ ಮಂತ್ರದೊಂದಿಗೆ ನವಭಾರತದ ನಿರ್ಮಾಣಕ್ಕೆ ಮೋದಿ ಯವರು ಸಂಕಲ್ಪಿಸಿದ್ದೇ ಇದಕ್ಕೆ ಕಾರಣವೆನ್ನಬೇಕು. ದೇಶದ ಕಲ್ಯಾಣಕ್ಕಾಗಿ ಹಗಲಿರುಳೂ ದುಡಿಯುತ್ತಿರುವ ಮೋದಿಯವರು, ಜಾಗತಿಕ ವೇದಿಕೆಗಳನ್ನು ನಮ್ಮ ದೇಶಕ್ಕೆ ಅನುಕೂಲಕರವಾಗುವಂತೆ ಬಳಸಿಕೊಂಡು ನಮ್ಮ ಸಂಸ್ಕೃತಿಯ ಶ್ರೇಷ್ಠತೆ, ಶ್ರೀಮಂತಿಕೆ ಮತ್ತು ವೈವಿಧ್ಯವನ್ನು
ಜಗತ್ತಿಗೇ ತೋರಿಸುತ್ತಿರುವುದನ್ನು ಬಿಡಿಸಿ ಹೇಳಬೇಕಿಲ್ಲ.
ಸ್ಪಷ್ಟ ಮತ್ತು ಗಟ್ಟಿ ನಿರ್ಧಾರಗಳಿಗೆ ಹೆಸರಾಗಿರುವ ಮೋದಿ, ತಮ್ಮ ಇಚ್ಛಾಶಕ್ತಿಯನ್ನು ವಿಶಿಷ್ಟವಾಗಿ ಅನಾವರಣ ಗೊಳಿಸುವಲ್ಲಿ ಪರಿಣತರು. ಸ್ವಾತಂತ್ರ್ಯದ ಅಮೃತ ಮಹೋತ್ಸವವು ಕೇವಲ ಆಳುಗರ ಅಧಿಕಾರದ ನೆಲೆಗಳಲ್ಲಿ ಆಚರಿಸಲ್ಪಡುವ ಆಚರಣೆಯಾಗದೆ, ಪ್ರತಿಯೊಬ್ಬ ಭಾರತೀ
ಯನ ದೇಶಾಭಿಮಾನ ಮತ್ತು ಸಂಭ್ರಮದ ದ್ಯೋತಕವಾಗಬೇಕು ಎಂಬ ಆಶಯವನ್ನು ಅವರು ವ್ಯಕ್ತಪಡಿಸುತ್ತಿದ್ದಂತೆ, ಒಂದಿಡೀ ದೇಶದ ನಿವಾಸಿಗಳು ಇದನ್ನು ಮನೆಯ ಹಬ್ಬದಂತೆ ಆಚರಿಸಿ ನಲಿದಿದ್ದು ಈಗ ಜಗಜ್ಜಾಹೀರು.
ಇದು ಮೋದಿಯವರ ಇಚ್ಛಾಶಕ್ತಿಗೊಂದು ಉದಾಹರಣೆ. ಸ್ವಚ್ಛ ಭಾರತ ಅಭಿಯಾನ, ಎಲ್ಪಿಜಿ ಸಿಲಿಂಡರ್ ಸಬ್ಸಿಡಿಗೆ ವಿದಾಯ ಹೇಳುವಿಕೆ ಇವೇ ಮೊದಲಾದ ಅಭಿಯಾನಗಳಲ್ಲಿ ಭಾರತೀಯರು ಸ್ವಯಂಪ್ರೇರಣೆಯಿಂದ ತೊಡಗಿಸಿಕೊಳ್ಳುವಂತಾಗುವುದಕ್ಕೆ ಸೂರ್ತಿ ನೀಡಿದ್ದು ಮೋದಿಯವರೇ. ೮ ವರ್ಷಗಳ ಮೋದಿಯವರ ಆಡಳಿತವು ಬಲಿಷ್ಠ ಭಾರತದ ಪರಿಕಲ್ಪನೆಗೆ ಗಟ್ಟಿಯಾದ ತಳಹದಿ ಹಾಕಿದ್ದು ಮುಂದಿನ ೨೫ ವರ್ಷಗಳಲ್ಲಿ ಭಾರತ ಅಭಿವೃದ್ಧಿ ಹೊಂದಿದ ದೇಶ ಎನಿಸಿಕೊಳ್ಳಲಿದೆ.
ದೇಶಾದ್ಯಂತ ‘ಮೋದಿ ಪರಿಕಲ್ಪನೆ’ ವ್ಯಾಪಿಸಿದ್ದು, ಅದು ಭಾರತವನ್ನು ಮರುವ್ಯಾಖ್ಯಾನಿಸುವ ಏಕೀಕರಣ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ. ಎಲ್ಲವನ್ನೂ ಒಳಗೊಂಡಿರುವ ಬೆಳವಣಿಗೆ ಆಧರಿತ ‘ನವಭಾರತದ ಪರಿಕಲ್ಪನೆ’ ಯನ್ನು ಮೋದಿ ೨೦೧೪ರಲ್ಲೇ ಪ್ರಸ್ತುತಪಡಿಸಿದ್ದರು. ಅದು ಇಂದು ನಿಜವಾಗಿದೆ. ತನಗಿರುವ ಸಮಾನತೆ ಮತ್ತು ಬೆಳವಣಿಗೆಯ ಸೈದ್ಧಾಂತಿಕ ಚೌಕಟ್ಟಿನಿಂದಾಗಿ ಈ ಪರಿಕಲ್ಪನೆ ಪ್ರಜ್ವಲಿಸುತ್ತಿದೆ. ಸ್ವಾತಂತ್ರ್ಯಾನಂತರ ದಲ್ಲಿ, ಮಹಾತ್ಮ ಗಾಂಧೀಜಿ, ಸುಭಾಷ್ಚಂದ್ರ ಬೋಸ್, ಲೋಕಮಾನ್ಯ ತಿಲಕ್, ಭಗತ್ ಸಿಂಗ್, ರವೀಂದ್ರನಾಥ ಟ್ಯಾಗೋರ್, ಬಿ.ಆರ್.
ಅಂಬೇಡ್ಕರ್, ಸರ್ದಾರ್ ವಲ್ಲಭಭಾಯಿ ಪಟೇಲ್ರಂಥ ಮಹಾರಥಿಗಳ ಸಿದ್ಧಾಂತವನ್ನು ಕಾಂಗ್ರೆಸ್ ಪಕ್ಷ ದೂರವಿಟ್ಟಿತ್ತು. ಆದರೆ ಮೋದಿಯವರು ಈ ಎಲ್ಲ ಮಹಾನ್ ನಾಯಕರ ವಿಚಾರಗಳಿಗೆ ಪ್ರಚಾರ ನೀಡುತ್ತಿದ್ದಾರೆ.
ಜಾತಿವಾದ, ತುಷ್ಟೀಕರಣ, ಸ್ವಜನ ಪಕ್ಷಪಾತ ಮತ್ತು ಕೋಮುವಾದದ ರಾಜಕೀಯವನ್ನು ಮೂಲೋತ್ಪಾಟನಗೊಳಿಸುವ ನಿಟ್ಟಿನಲ್ಲಿ ದೃಢಹೆಜ್ಜೆಗಳನ್ನು ಇಟ್ಟಿದ್ದಾರೆ. ‘ಭಾರತ್ ಮಾತಾ ಕೀ ಜೈ’ ಮತ್ತು ‘ವಂದೇ ಮಾತರಂ’ನಂಥ ರಾಷ್ಟ್ರೀಯವಾದಿ ಘೋಷಣೆಗಳು ಪ್ರತಿಯೊಬ್ಬ ಭಾರತೀಯನ ಮನದಲ್ಲಿ ಬೇರೂರುವಂತೆ ಮಾಡುತ್ತಿದ್ದಾರೆ.
ಪ್ರತಿಯೊಂದು ಗ್ರಾಮಕ್ಕೂ ವಿದ್ಯುತ್ ಸಂಪರ್ಕ, ಯೋಜನಾ ಆಯೋಗಕ್ಕೆ ಹೊಸರೂಪ, ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನದ ರದ್ದತಿ, ತ್ರಿವಳಿ ತಲಾಕ್ ರದ್ಧತಿ, ವಿದೇಶಗಳ ಜತೆಗಿನ ಸುಮಧುರ ಬಾಂಧವ್ಯ, ಮೇಕ್ ಇನ್ ಇಂಡಿಯಾ ಅಭಿಯಾನ, ಆಯುಷ್ಮಾನ್ ಭಾರತ ಮತ್ತು ಜನಧನ್ ಯೋಜನೆ, ಬಡವರಿಗೆ ಉಚಿತ ಅಡುಗೆ ಅನಿಲದ ಸಂಪರ್ಕ, ಜಿಎಸ್ಟಿ ಅನುಷ್ಠಾನ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಶಂಕುಸ್ಥಾಪನೆ, ವಿಶ್ವದ ಅತಿಎತ್ತರದ ಪ್ರತಿಮೆಯ ನಿರ್ಮಾಣ, ರೈತರ ಬ್ಯಾಂಕ್ ಖಾತೆಗಳಿಗೆ ವರ್ಷಕ್ಕೆ ೬,೦೦೦ ರುಪಾಯಿ ವರ್ಗಾವಣೆ, ಆತ್ಮನಿರ್ಭರದ ಮೂಲಕ ಸ್ವದೇಶಿ ಉತ್ಪಾದನೆಗೆ ಒತ್ತುನೀಡುವಿಕೆ ಹೀಗೆ ಹಲವಾರು ಉಪಕ್ರಮಗಳನ್ನು ಜಾರಿಗೆ ತಂದ ಮೋದಿಯವರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮಹಾನ್ ಕ್ರಾಂತಿಯನ್ನೇ ಮಾಡಿದ್ದಾರೆನ್ನಬೇಕು.
ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರ ವಿಚಾರಧಾರೆಗಳನ್ನು ಮತ್ತು ಮಾನವೀಯ ಗುಣಗಳನ್ನು ಅಳವಡಿಸಿಕೊಂಡು, ಜೀವನದ ಧ್ಯೇಯವಾಗಿ ಜನಸೇವೆ ಯಲ್ಲಿ ತೊಡಗಿಸಿಕೊಂಡಿರುವ ಮೋದಿ, ‘ತನಗಾಗಿ ಬದುಕುವುದು ಸಹಜಗುಣ, ಇತರರಿಗಾಗಿ ಬದುಕುವುದು ದೊಡ್ಡಗುಣ’ ಎಂಬ ಮಾತಿಗೆ ಸಾಕ್ಷಿಯಾಗಿ ನಿಂತಿದ್ದಾರೆ.
ಗಟ್ಟಿ ನಿರ್ಧಾರಕ್ಕೆ, ಶ್ರೇಷ್ಠ ನಾಯಕತ್ವಕ್ಕೆ ಮತ್ತೊಂದು ಹೆಸರೇ ಆಗಿರುವ ಮೋದಿಯವರು 2024ರಲ್ಲಿಯೂ ಪ್ರಧಾನಿಯಾಗಿ ಮುಂದುವರಿಯಲಿ ಎಂಬುದೇ ಭಾರತೀಯರೆಲ್ಲರ ನಿರೀಕ್ಷೆ ಮತ್ತು ಆಶಯ.