Wednesday, 11th December 2024

ಸೊಗಸುಗಾರ, ಸಂಗೀತಗಾರ ಈ ಬಂಗಾರ…

ನಿಲುವುಗನ್ನಡಿ

ಯಗಟಿ ರಘು ನಾಡಿಗ್

ಅದು 1980ರ ಆಸುಪಾಸು. ಹಳ್ಳಿಯಲ್ಲಿ ಓದುತ್ತಿದ್ದ ನಾನು ರಜೆ ಕಳೆಯಲೆಂದು ಬೆಂಗಳೂರಿಗೆ ಬಂದವನು, ಆಗ HMV ಧ್ವನಿಮುದ್ರಣ ಸಂಸ್ಥೆಯಲ್ಲಿದ್ದ ಅಣ್ಣನನ್ನು ನೋಡಲು ಬ್ರಿಗೇಡ್ ರಸ್ತೆಯ ಷೋರೂಮ್‌ಗೆ ಹೋಗಿದ್ದೆ. ಕೆಲಕ್ಷಣದ ‘ಭರ್’ ಎಂದು ಬಂದ ಕಾರಿನಿಂದಿಳಿದ ಠೀಕುಠಾಕಿನ ವಸಧಾರಿ, ಕಪ್ಪು ಕನ್ನಡಕಧಾರಿ ಷೋ ರೂಮ್ ಪ್ರವೇಶಿಸುತ್ತಿದ್ದಂತೆ ಅಕ್ಷರಶಃ ಮಿಂಚಿನ ಸಂಚಾರ.

ಹಾಗೆ ಬಂದವರು ಕೌಂಟರ್‌ಗೆ ತೆರಳಿ, ‘ಮಲ್ಲಿಕಾರ್ಜುನ ಮನ್ಸೂರ್ ಅವರ ಹೊಸ ಕ್ಯಾಸೆಟ್ ಬಂದಿದೆಯಂತಲ್ಲ ಕೊಡಿ’ ಎಂದರು. ‘ಜತೆಗೆ, ಭೀಮಸೇನ ಜೋಷಿಯವರದ್ದೂ ಕೊಡಿ’ ಎಂಬ ಹೆಚ್ಚುವರಿ ಬೇಡಿಕೆ. ಸೇಲ್ಸಗರ್ಲ್ ಅವನ್ನು ಹೆಕ್ಕಿಕೊಟ್ಟರು. ನಂತರ ಸಿದ್ದರಾಮ ಜಂಬಲದಿನ್ನಿಯವರ ಅದ್ಯಾವುದೋ ಹೊಸ ಕ್ಯಾಸೆಟ್ ಕೇಳಿದರು. ಕೌಂಟರ್ ಹುಡುಗಿ ತಡಬಡಾಯಿಸಿ ದಾಗ, ಆ ಕ್ಯಾಸೆಟ್‌ನ ಗೀತೆಯೊಂದನ್ನು ಆಲಾಪಿಸಿ ತೋರಿಸಿ, ‘ಈ ಹಾಡು ಇರುವ ಕ್ಯಾಸೆಟ್ ಬೇಕು’ ಎಂದು ಆಗ್ರಹಿಸಿದರು. ಹುಡುಗಿಯ ಹಣೆಯಲ್ಲಿ ಪ್ರಶ್ನಾರ್ಥಕ ಚಿಹ್ನೆ ಮೂಡಿದಾಗ, ‘ಏನಮ್ಮಾ ನೀನು, ಅಷ್ಟೂ ಗೊತ್ತಿಲ್ಲವಾ?’ ಎಂದು ರ‍್ಯಾಕ್‌ನಲ್ಲಿ ತಾವೇ ತಡಕಾಡಿ ಹೆಕ್ಕಿ ಅದನ್ನು ಅ ಪ್ಲೇ ಮಾಡಿಸಿ, ಜಂಬಲದಿನ್ನಿ ಯವರ ದನಿಗೆ ತಮ್ಮ ದನಿಯನ್ನೂ ಸೇರಿಸಿ ಉಲ್ಲಸಿತರಾಗಿ ಗುನುಗುತ್ತ, ಅಷ್ಟಕ್ಕೂ ಹಣ ಪಾವತಿಸಿ ಬಂದಷ್ಟೇ ಬಿರುಸಾಗಿ ಅಲ್ಲಿಂದ ತೆರಳಿದರು.

‘ಯಾವ ಹೊಸ ಕ್ಯಾಸೆಟ್ ಬಂದಿದೆ ಅಂತ ನಮ್ಮ ಪ್ರತಿಷ್ಠಿತ ಗ್ರಾಹಕರಿಗೆ ಗೊತ್ತಿದೆ, ನಿನಗಿನ್ನೂ ಗೊತ್ತಾಗಿಲ್ವೇ ನಮ್ಮಾ?’ ಎಂದು ಷೋರೂಮ್‌ನ ಬಾಸ್ ಆ ಸೇಲ್ಸ ಗರ್ಲ್‌ಗೆ ಲೈಟಾಗಿ ಗದರಿದರು. ಹಾಗೆ ಬಿರುಗಾಳಿಯಂತೆ ಬಂದು ಇದ್ದ ಅಲ್ಪಾವಧಿಯ ತಮ್ಮ ಸಂಗೀತದ ಖಯಾಲಿ ಪ್ರದರ್ಶಿಸಿ ಕ್ಯಾಸೆಟ್ ಖರೀದಿಸಿ ತೆರಳಿದವರು ಕರ್ನಾಟಕದ ವರ್ಣರಂಜಿತ ರಾಜಕಾರಣಿ ಎಂದೇ ಹೆಸರಾಗಿದ್ದ ಎಸ್. ಬಂಗಾರಪ್ಪ!

ಬಂಗಾರಪ್ಪನವರನ್ನು ‘ಹಠಮಾರಿ’, ‘ಹಿಡಿದ ಪಟ್ಟು ಬಿಡದ ಉಡ’, ‘ಹೈಕಮಾಂಡ್‌ಗೇ ಸಡ್ಡುಹೊಡೆದ ಪೈಲ್ವಾನ್’ ಎಂದೆಲ್ಲ ಬಣ್ಣಿಸುವವರಿದ್ದಾರೆ. ಅವರ ರಾಜಕಾರಣದ ನೆಲೆ ಮತ್ತು ಪ್ರಭಾವಳಿಯಲ್ಲಿ ಇದು ನಿಜವೂ ಅನಿವಾರ್ಯವೂ ಆಗಿತ್ತು. ಆದರೆ ಅವರು ೨೪೭ ರಾಜಕಾರಣಿಯಾಗಿರಲಿಲ್ಲ; ಅದಕ್ಕೆ ಹೊರತಾದ ಸೃಜನಶೀಲ ಬಾಬತ್ತುಗಳಲ್ಲೂ ಅವರಿಗೆ ರುಚಿ-ಅಭಿರುಚಿ ಯಿತ್ತು. ದೇವರ ಮೇಲಿನ ಹೂವು ತಪ್ಪಿದರೂ ಪ್ರತಿದಿನ ಮುಂಜಾನೆಯ ಷಟ್ಲ್ ಬ್ಯಾಡ್ಮಿಂಟನ್, ಯೋಗಾಭ್ಯಾಸ ತಪ್ಪಿಸದ ಅವರು ಟಿ ಶರ್ಟ್-ಷಾರ್ಟ್ಸ್ ಧರಿಸಿ ರ‍್ಯಾಕೆಟ್ ಹಿಡಿದು ಬಂದರೆಂದರೆ ಕ್ರೀಡಾಕ್ಲಬ್ ಆವರಣದ ತುಂಬ ಬೆಳದಿಂಗಳ ರಂಗೋಲಿ.

ಯಾವುದಾದರೂ ರಾಜಕೀಯ/ಸಾಂಸ್ಕೃತಿಕ ಕಾರ್ಯಕ್ರಮಗಳ ವೇಳೆ ‘ಡೊಳ್ಳುವಾದ್ಯ’ ಕಂಡರಂತೂ ಪುಟ್ಟಮಗುವಿನಂತೆ ಹಟಮಾಡಿ ವಾದಕರಿಂದ ಅದನ್ನು ಪಡೆದು ನುಡಿಸಿ ತೃಪ್ತರಾಗುತ್ತಿದ್ದರು ಬಂಗಾರಪ್ಪ. ಪದವಿ ವ್ಯಾಸಂಗದ ವೇಳೆ ಸಾಹಿತ್ಯದ ಕಂಪನ್ನೂ ಮೈಗೂಡಿಸಿಕೊಂಡು ಕುಮಾರವ್ಯಾಸ, ಬೇಂದ್ರೆ, ಕುವೆಂಪು, ಅಡಿಗರ ಸಾಲುಗಳು, ಶರಣರ ವಚನಗಳನ್ನು ಬಿಡುಬೀಸಾಗಿ ಹರಿಯಬಿಡುತ್ತಿದ್ದ ಬಂಗಾರಪ್ಪರ ನಾಲಿಗೆಯಲ್ಲಿ ಡಿವಿಜಿಯವರ ‘ಮಂಕುತಿಮ್ಮನ ಕಗ್ಗ’ ನಿರರ್ಗಳವಾಗಿ ನಲಿಯುತ್ತಿದ್ದುದನ್ನೂ, ಷೇಕ್ಸ್‌ಪಿಯರ್, ಕೀಟ್ಸ್, ಷೆಲ್ಲಿಯವರ ಇಂಗ್ಲಿಷ್ ಸಾಹಿತ್ಯ ಬಾಯಿಪಾಠದಂತೆ ಬಳುಕುತ್ತಿದ್ದುದನ್ನೂ ಕಂಡವರಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸೊರಬದ ವಿನಾಯಕ ದೇಗುಲದ ಬಳಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯಕೃಷಿ-ವ್ಯಕ್ತಿತ್ವದ ಕುರಿತಾಗಿ ಬಂಗಾರಪ್ಪನವರು ಮಾಡಿದ ಭಾಷಣ ಯಾವುದೇ ವಿದ್ವತ್‌ಪೂರ್ಣ ಉಪನ್ಯಾಸಕ್ಕಿಂತ ಕಮ್ಮಿಯಿರಲಿಲ್ಲ ಮತ್ತು ಈ ವೇಳೆ ಅವರು ಕುವೆಂಪು ಕವನಗಳನ್ನು ಪ್ರಾಸಂಗಿಕವಾಗಿ ಉಲ್ಲೇಖಿಸಿದ್ದು ಸ್ವಾರಸ್ಯಕರವಾಗಿತ್ತು ಎನ್ನುತ್ತಾರೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಾಹಿತ್ಯಪ್ರೇಮಿಯೊಬ್ಬರು.

ಬಂಗಾರಪ್ಪನವರಿಗೆ ಜಾನಪದ ಕಲೆ, ನಾಟಕಗಳಲ್ಲಿ ಅದೆಷ್ಟು ತೀವ್ರಾಸಕ್ತಿಯೆಂದರೆ, ಬಾಲ್ಯದಲ್ಲಿ ಶುರುವಾದ ನಾಟಕ-
ಯಕ್ಷಗಾನದ ಹುಚ್ಚು ಮುಂದೆ ಅವರು ವಕೀಲಿಕೆ ನಡೆಸುವಾಗಲೂ ಅಬಾಧಿತವಾಗಿತ್ತು. ಬದುಕಿನ ವಿವಿಧ ಅವಸ್ಥಾಂತರ
ಗಳಲ್ಲಿ ಸುಧನ್ವ ಕಾಳಗ, ಕೃಷ್ಣಾರ್ಜುನ ಕಾಳಗ, ಕೃಷ್ಣ ಸಂಧಾನ ದಂಥ ನಾಟಕಗಳಲ್ಲಿ ಅವರು ಅಭಿನಯಿಸಿ ಹಾಡಿ ಕುಣಿದಿ
ದ್ದನ್ನು ಕಂಡವರಿದ್ದಾರೆ.

ಅದು ೧೯೬೭ರ ಕಾಲಘಟ್ಟ. ಬಂಗಾರಪ್ಪನವರಿಗೆ ಮೊದಲ ಬಾರಿಗೆ ಶಾಸಕ ಪಟ್ಟ ದೊರಕಿದ ಸಂದರ್ಭವದು. ಆಗವರು ಪಕ್ಷಕ್ಕಾಗಿ ನಿದ್ದಾ ಸಂಗ್ರಹಿಸಲೆಂದು ‘ಜಗಜ್ಯೋತಿ ಬಸವೇಶ್ವರ’ ನಾಟಕವನ್ನು ಆಯೋಜಿಸಿದ್ದರ ಜತೆಗೆ ಸ್ವತಃ ಬಸವಣ್ಣನ ಪಾತ್ರವನ್ನು ಅಭಿನಯಿಸಿ ವಚನಗಳನ್ನು ಸೊಗಸಾಗಿ ಹಾಡಿದ್ದನ್ನು ನಮ್ಮೂರು ಯಗಟಿಯ ಕೆಲ ಹಿರಿಯಜ್ಜರು ಇಂದಿಗೂ ನೆನಪಿಸಿಕೊಳ್ಳುತ್ತಾರೆ.

ಹಿಂದೂಸ್ತಾನಿ ಸಂಗೀತವೆಂದರೆ ಬಂಗಾರಪ್ಪನವರಿಗೆ ಪಂಚ ಪ್ರಾಣ. ಗುರುಮುಖೇನ ಅದನ್ನು ಕಲಿತ ಬಂಗಾರಪ್ಪ, ಗುರುಗಳ ಹಾರ್ಮೋನಿಯಂ ವಾದನದ ವೇಳೆ ಅದರ ತಿದಿ ಒತ್ತುತ್ತಿದ್ದುದೂ ಉಂಟಂತೆ! ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ ಬೆಂಗಳೂರಿನ ಗಾಯನ ಸಮಾಜದಲ್ಲಿ ನಡೆಯುತ್ತಿರಲಿ, ಪುಣೆಯ ಸವಾಯಿ ಗಂಧರ್ವ ಸಭಾಂಗಣದಲ್ಲೇ ಆಯೋಜನೆ ಗೊಂಡಿರಲಿ ಅಲ್ಲಿ ಬಂಗಾರಪ್ಪ ಹಾಜರಿಯಿರುತ್ತಿತ್ತು. ಅವರಲ್ಲಿದ್ದ ಸಂಗೀತದ ಧ್ವನಿಮುದ್ರಿಕೆಗಳ ಸಂಗ್ರಹವೂ ಕಣ್ಣಿಗೆ ಹಬ್ಬ
ದಂತಿತ್ತು ಎನ್ನುತ್ತಾರೆ ಕಂಡವರು. ಸೊರಬದಲ್ಲಿ ಪ್ರತಿವರ್ಷ ತಮ್ಮ ಸಂಗೀತ ಗುರುಗಳ ಪುಣ್ಯತಿಥಿ ಕಾರ್ಯಕ್ರಮ ಆಯೋಜಿಸಿ, ಹಿರಿಯ ಮತ್ತು ಉದಯೋನ್ಮುಖ ಗಾಯಕರಿಬ್ಬರನ್ನೂ ಈ ವೇಳೆ ಸನ್ಮಾನಿಸುವ ಪರಿಪಾಠ ಇಟ್ಟುಕೊಂಡಿದ್ದರು ಬಂಗಾರಪ್ಪ.

ಮುಂದೊಂದು ದಿನ ಅವರ ಮಗ ಮಧು ಬಂಗಾರಪ್ಪ ಅವರು ‘ಆಕಾಶ್ ಆಡಿಯೋ’ ಕಂಪನಿ ಹುಟ್ಟುಹಾಕಿದಾಗ ಬಂಗಾರಪ್ಪ ಗಾಯನದ ‘ಕರುನಾಡ ಕಂಪು’ ಎಂಬ ಪ್ರಪ್ರಥಮ ಗೀತಸಂಪುಟ (ಸಂಗೀತ: ಜಿ.ವಿ. ಅತ್ರಿ) ಹೊರಬಂತು. ಬಸವೇಶ್ವರರ ವಚನ ಮಾತ್ರವಲ್ಲದೆ ಪು.ತಿ. ನರಸಿಂಹಾಚಾರ್, ದೊಡ್ಡರಂಗೇಗೌಡ, ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಮತ್ತು ಜಿ.ವಿ. ಅತ್ರಿಯವರ ರಚನೆಗಳಿಗೆ ಇಲ್ಲಿ ದನಿಯಾಗಿರುವ ಬಂಗಾರಪ್ಪ, ಒಂದೊಂದು ಗೀತೆಯ ಗಾಯನದಲ್ಲೂ ತೋರಿರುವ ಶ್ರದ್ಧೆ ಶ್ಲಾಘನೀಯ. ಅದರಲ್ಲೂ ‘ಸದಾ ಮಂಗಲಾಯತನಕೆ’ ಎಂಬ ಗೀತೆಗೂ ಮುಂಚಿನ ಆಲಾಪನೆ ಆಸ್ವಾದಿಸಿದರೆ, ಹಿಂದೂಸ್ತಾನಿ ಸಂಗೀತದಲ್ಲಿನ ಅವರ ಪ್ರತಿಭೆ- ಪರಿಶ್ರಮ ಅರಿವಾಗುತ್ತವೆ. ಈ ಗೀತಸಂಪುಟದಲ್ಲಿ ‘ಮರ ಚೆಂದ ಮರ ಚೆಂದವೋ ತೆಂಗಿನಮರ ಚೆಂದವೋ’ ಎಂಬ ಮತ್ತೊಂದು ಗೀತೆಯೂ ಇದೆ.

ಕಲ್ಪವೃಕ್ಷ ಎಂದೇ ಹೆಸರಾದ ತೆಂಗಿನಮರದ ವೈವಿಧ್ಯಮಯ ಪ್ರಯೋಜನಗಳನ್ನು ಬಣ್ಣಿಸುವ ಗೀತೆಯಿದು ಎಂದು ಮೇಲ್ನೋಟಕ್ಕೆ ಅನ್ನಿಸಿದರೂ ಆ ಹಾಡಿನ ರಚನೆ ಮತ್ತು ಗೀತಸಂಪುಟದಲ್ಲಿ ಅದನ್ನು ಸೇರಿಸಿದ್ದರ ಹಿಂದಿನ ಉದ್ದೇಶ ಗಮ್ಮತ್ತಾಗಿದೆ. ಅದು ಬಂಗಾರಪ್ಪನವರು ಕಾಂಗ್ರೆಸ್ ಹೈಕಮಾಂಡ್ ಮೇಲೆ ಮುನಿಸಿಕೊಂಡು ಪಕ್ಷದಿಂದ ಹೊರಬಿದ್ದು ‘ಕರ್ನಾಟಕ ಕಾಂಗ್ರೆಸ್ ಪಕ್ಷ’ (ಕೆಸಿಪಿ) ಎಂಬ ತಮ್ಮದೇ ನೆಲೆಯನ್ನು ಹುಟ್ಟುಹಾಕಿ ಕಾಂಗ್ರೆಸ್‌ಗೆ ರಾಜ್ಯದಲ್ಲಿ ತೊಡೆತಟ್ಟಿದ್ದ ಪರ್ವಕಾಲ. ಕೆಸಿಪಿಗೆ ಆಗ ಸಿಕ್ಕಿದ್ದ ಚುನಾವಣಾ ಗುರುತು ‘ತೆಂಗಿನಮರ’. ಅದನ್ನು ಜನಮನದಲ್ಲಿ ಬೇರೂರಿಸುವ ‘ಪ್ರಚಾರೋದ್ದೇಶ’ದೊಂದಿಗೆ ಗೀತಸಂಪುಟದಲ್ಲಿ ಈ ಗೀತೆಯನ್ನು ಸೇರಿಸಲಾಯಿತು.

ಜಿ.ವಿ.ಅತ್ರಿ ರಚನೆ-ಸಂಗೀತದ ಈ ಗೀತೆಯಲ್ಲಿ ಒಂದೆಡೆ ‘ಅವ್ವನಕೇಳು ತೆಂಗಿನಮರ, ಅಪ್ಪಯ್ನ ಕೇಳು ತೆಂಗಿನಮರ, ಅಕ್ಕಯ್ನ
ಕೇಳು ತೆಂಗಿನಮರ’ ಎಂಬ ಸಾಲುಗಳು ವೃಂದಗಾನದೊಂದಿಗೆ ಬಂಗಾರಪ್ಪನವರ ದನಿಯಲ್ಲಿ ಕೇಳುತ್ತವೆ ಎನ್ನಿ. ಮಿಕ್ಕಂತೆ,
‘ನಮೋ ದೇವಿ, ನಮೋ ತಾಯಿ’, ‘ಮೇಲು ಕೀಳು ಎಲ್ಲಿದೆ’, ‘ಮೂಡಿ ಬರಲಿ’, ‘ಉಳ್ಳವರು ಶಿವಾಲಯವ ಮಾಡುವರು’, ‘ಏನಿದು ಸೊಬಗು’, ‘ಯಾರು ಏನೇ ಜರಿಯಲಿ’ ಎಂಬ ಗೀತೆಗಳಿದ್ದು, ಬಂಗಾರಪ್ಪನವರ ಗಾಯನವೈವಿಧ್ಯವನ್ನು ಇವುಗಳ ಮೂಲಕ ಸವಿಯಬಹುದು.

ಹಾಗೆ ಸವಿದಾಗ, ‘ರಾಜಕೀಯ ಎದುರಾಳಿಗಳು ಇದ್ದಾಗ ಕಡ್ಡಿ ಎರಡು ತುಂಡುಮಾಡುವಂತೆ ಮಾತಿನಬಾಣ ಬಿಡುತ್ತಿದ್ದ ಬಂಗಾರಪ್ಪ ಅವರದ್ದೇನಾ ಈ ಸಪ್ತಸ್ವರದ ಹೂಬಾಣ?’ ಎಂದು ನಿಮಗನ್ನಿಸಿದರೂ ಅಚ್ಚರಿಯಿಲ್ಲ! ಬಂಗಾರಪ್ಪನವರು ಇಂದು ಬದುಕಿದ್ದಿದ್ದರೆ ೮೯ ವರ್ಷ ತುಂಬಿ ೯೦ಕ್ಕೆ ಕಾಲಿಡುತ್ತಿದ್ದರು (ಜನನ: 1933 ಅಕ್ಟೋಬರ್ ೨೬). ಅವರ ರಾಜಕೀಯ ಚಿಂತನೆಗಳೇನೇ ಇರಬಹುದು, ಪಕ್ಷಗಳನ್ನು ಪದೇಪದೆ ಬದಲಿಸಿದ ಅಥವಾ ಹೊಸದಾಗಿ ಹುಟ್ಟುಹಾಕಿ ರದ್ದುಮಾಡಿದ ಅವರ ಪರಿಪಾಠವನ್ನು ನಾವು ಒಪ್ಪಬಹುದು ಅಥವಾ ಬಿಡಬಹುದು.

ಆದರೆ ಅವರಲ್ಲಿ ಕೆನೆಗಟ್ಟಿದ್ದ ಜೀವನೋತ್ಸಾಹ, ಸೊಗಸುಗಾರಿಕೆ, ಅಚ್ಚುಕಟ್ಟುತನ, ರುಚಿ-ಅಭಿರುಚಿಗಳು ನಿಜಕ್ಕೂ ಅನುಕರಣೀಯ. ರಾಜಕೀಯ ಅವರ ಕಾರ್ಯಕ್ಷೇತ್ರವಾಗಿದ್ದರೂ ಹಾಸಿ-ಹೊದ್ದುಕೊಳ್ಳುವಷ್ಟರ ಮಟ್ಟಿಗೆ ಅದರಲ್ಲೇ ಮುಳುಗದೆ ಸೃಜನಶೀಲ ಹವ್ಯಾಸಗಳಿಗೆ ಒಡ್ಡಿಕೊಳ್ಳುವ ಮೂಲಕ ಕೊನೆವರೆಗೂ ಲವಲವಿಕೆಯಿಂದಿದ್ದರು ಬಂಗಾರಪ್ಪ. ಏಕತಾನತೆ ಯಿಂದಾಗಿ ಬದುಕನ್ನು ಬರಡಾಗಿಸಿಕೊಂಡವವರು, ಮಧ್ಯವಯಸ್ಸು ಬರುತ್ತಿದ್ದಂತೆ ಜೀವನೋತ್ಸಾಹ ಕಳೆದುಕೊಂಡು ವೃದ್ಧಾಪ್ಯದ ‘ಕಾಲಿಂಗ್‌ಬೆಲ್’ ಒತ್ತುವವರು ಬಂಗಾರಪ್ಪನವರ ಜೀವನಶೈಲಿಯನ್ನೊಮ್ಮೆ ನೆನಪಿಸಿಕೊಂಡರೆ ಚೈತನ್ಯದ
ಚಿಲುಮೆಯಾಗುವುದರಲ್ಲಿ ಸಂದೇಹವಿಲ್ಲ.