Saturday, 14th December 2024

ಬಿಜೆಪಿಯ ಮುಂದಿರುವ ಮಹತ್ತರ ಸವಾಲುಗಳು

ಧರ್ಮಕಾರಣ

ಪ್ರೊ.ಆರ್‌.ಜಿ.ಹೆಗಡೆ

‘ಹಿಂದುತ್ವದ ರಾಜಕೀಯ’ ದೊಡ್ಡ ಶಕ್ತಿಯಾಗಿ ಒಡಮೂಡಿದ್ದು ೮೦ರ ದಶಕದ ನಂತರ, ಅದು ಬಹಳ ಶಕ್ತಿಯುತ ವಾದದ್ದು ೨೦೧೩ರ ನಂತರ. ೮೦ರ ದಶಕದಲ್ಲಿ ಬಿಜೆಪಿ ಬಲವಾಗುತ್ತ ಹೋಗಿದ್ದೇಕೆ ಎಂಬುದನ್ನು ಗಮನಿಸಬೇಕು. ಇದಕ್ಕೆ ಹಲವು ಸಂಕೀರ್ಣ ಕಾರಣಗಳಿವೆ.

ಬಿಜೆಪಿಯ ಮುಂದಿರುವ ಸವಾಲುಗಳೇನು, ಅವಕ್ಕಿರುವ ಪರಿಹಾರವೇನು ಎಂಬುದನ್ನು ಯೋಚಿಸುವ ಮೊದಲು ‘ಹಿಂದುತ್ವ ರಾಜಕೀಯ’ವನ್ನು, ಹಾಗೆಯೇ ಬಿಜೆಪಿಯ ಹುಟ್ಟು ಮತ್ತು ಬೆಳವಣಿಗೆಯನ್ನು ಗಮನಿಸಬೇಕು. ಹಿಂದೂಧರ್ಮದ ಸ್ವರೂಪವನ್ನೂ ಅವಲೋಕಿಸಬೇಕು.

ಹಿಂದೂಧರ್ಮವು ‘ರಾಜಕೀಯವಾಗಿ’ ಜನರನ್ನು ಒಂದುಗೂಡಿಸುವಂಥ ಧರ್ಮವಲ್ಲವೇ ಅಲ್ಲ. ರಾಜಕೀಯ ಎಂಬುದು ಜನರನ್ನು ಒಂದು ಸಾಮಾನ್ಯ ಅಂಶದ- ಅಂದರೆ, ಧರ್ಮ, ಜಾತಿ, ಭಾಷೆ, ಪ್ರದೇಶ ಇಂಥ ಅಂಶಗಳ ಆಧಾರದ ಮೇಲೆ ಗುಂಪಾಗಿ ಕೂಡಿಸಿ ತಾವೆಲ್ಲ ಒಂದೇ ಎನ್ನುವ ಭಾವನೆ ಸೃಷ್ಟಿಸಿ, ತಮ್ಮದೇ ಆದ ‘ನೇಷನ್ ಸ್ಟೇಟ್’ ಕಟ್ಟಿಕೊಳ್ಳಲು ಪ್ರೇರೇಪಿಸುವ ಕ್ರಿಯೆ. ಹೀಗೆ ಒಂದಾಗಿ ತಮ್ಮ ಸಂಸ್ಕೃತಿಯನ್ನು, ಜನರನ್ನು, ವಸ್ತುಗಳನ್ನು, ಸಂಪತ್ತನ್ನು ಬೇರೆಯವರಿಂದ ರಕ್ಷಿಸುವ ಕ್ರಿಯೆ.

ಸ್ವಾರಸ್ಯವೆಂದರೆ, ಹಿಂದೂಧರ್ಮವು ಇಂಥದಕ್ಕೆಲ್ಲ ಅನುವು ಮಾಡಿಕೊಡುವ ಧರ್ಮವಲ್ಲ. ಇದು  ವಿಶಾಲವಾಗಿ ಹರಡಿ ಕೊಂಡಿರುವ ಧರ್ಮ. ಇದಕ್ಕೆ ಬೇರೆ ಧರ್ಮಗಳ ರೀತಿಯಲ್ಲಿ ಒಂದೇ ಒಂದು ಬಲವಾದ ಕೇಂದ್ರವಿಲ್ಲ (ಪ್ರವಾದಿ ಮೊಹಮ್ಮದ್ ಮತ್ತು ಕುರಾನ್- ಇಸ್ಲಾಂ ಧರ್ಮದ ಕೇಂದ್ರ; ಯೇಸುಕ್ರಿಸ್ತ ಮತ್ತು ಬೈಬಲ್- ಕ್ರಿಶ್ಚಿಯನ್ ಧರ್ಮದ ಕೇಂದ್ರ; ಬುದ್ಧ- ಬೌದ್ಧ ಧರ್ಮದ ಕೇಂದ್ರ). ಬದಲಿಗೆ ಹಿಂದೂಧರ್ಮದ ಒಳಗೇ ಬಹುಕೇಂದ್ರ ಗಳಿವೆ, ಪಂಥಗಳಿವೆ, ನೂರಾರು ದೇವರುಗಳಿವೆ,  ಚರಣೆಗಳಿವೆ, ನಂಬುಗೆಯ ವ್ಯವಸ್ಥೆಗಳಿವೆ, ವಿಭಿನ್ನತೆಗಳಿವೆ.

ಇಂಥ ಸಾವಿರಾರು ಎಳೆಗಳು ಹೆಚ್ಚು-ಕಡಿಮೆ ಸ್ವಾಯತ್ತವಾಗಿ ಉಳಿದುಕೊಂಡೇ ಬಂದಿವೆ. ಸಮಾನ ಅಂಶಗಳು ಇಲ್ಲ ಎಂದೇನಿಲ್ಲ;
ಆದರೆ ಕೇಂದ್ರೀಯ ಶಕ್ತಿಯಾದ ಒಂದೇ ವಿಷಯ ಇಲ್ಲ. ಹಿಂದೂಧರ್ಮದಲ್ಲಿ ಭಾವನಾತ್ಮಕ, ಸಾಂಸ್ಕೃತಿಕ ಐಕ್ಯತೆ ಇದೆ; ಆದರೆ ಅದಕ್ಕೆ ರಾಜಕೀಯ ಏಕತೆ ಯಾಗಿ ಬದಲಾಗುವ ಶಕ್ತಿಯಿಲ್ಲ. ಬಹುಶಃ ಈ ಕಾರಣದಿಂದಾಗಿಯೇ ಭಾರತದ ಚರಿತ್ರೆಯಲ್ಲಿ
ಯಾವ ದೊರೆಗೂ ಹಿಂದೂಧರ್ಮ ಆಧರಿತ ರಾಷ್ಟ್ರೀಯತೆಯನ್ನು ಸೃಷ್ಟಿಸಿ ದೇಶದ ಚಕ್ರವರ್ತಿಯಾಗಲು ಸಾಧ್ಯವಾಗಲಿಲ್ಲ.

ಸೈನ್ಯ ಕಟ್ಟಿ ವಿದೇಶಗಳ ಮೇಲೆ ದಾಳಿಮಾಡಲಾಗಲಿಲ್ಲ. ಏಕೆಂದರೆ ಧರ್ಮವನ್ನು ಒಂದು ರಾಜಕೀಯ ಘಟಕವಾಗಿ ಪರಿವರ್ತಿ ಸಲು ದೇಶದಲ್ಲಿನ ವಿವಿಧತೆಗಳು ಅವಕಾಶ ನೀಡಲೇ ಇಲ್ಲ. ಇದು ರಾಜಕೀಯದ ಸಂದರ್ಭದಲ್ಲಿ ಹಿಂದೂ ಧರ್ಮದ ಸ್ವರೂಪದ ಮೊದಲ ಅಂಶ. ಹಿರಿಯ ನಾಯಕ ಲಾಲ್‌ಕೃಷ್ಣ ಆಡ್ವಾಣಿಯವರು ಸರಿಯಾಗಿಯೇ ಹೇಳಿರುವಂತೆ, ಹಿಂದೂಧರ್ಮ
ಮೂಲ ಭೂತವಾಗಿಯೇ ಜಾತ್ಯತೀತವಾದುದು ಮತ್ತು ಬೆರೆತುಹೋಗುವ ಗುಣವನ್ನು ಹೊಂದಿರುವಂಥದ್ದು.

ಹಿಂದೂಧರ್ಮವು ಇತಿಹಾಸದುದ್ದಕ್ಕೂ ಬೇರೆ ಧರ್ಮಗಳೊಂದಿಗೆ ಹೊಂದಿಕೊಂಡೇ ಹೋಗಿದೆಯೇ ವಿನಾ, ಘರ್ಷಣೆಗೆ ಇಳಿದಿಲ್ಲ. ಇದು ದೆಹಲಿಯ ಸುಲ್ತಾನರು, ಮೊಘಲರು, ಬ್ರಿಟಿಷರ ಜತೆ ಹೊಂದಿಕೊಂಡೇ ಹೋಗಿದೆ. ಸ್ವಾರಸ್ಯಕರ ಸಂಗತಿಯೆಂದರೆ, ಬ್ರಿಟಿಷ ರನ್ನು ಬಿಟ್ಟು ಬೇರೆ ಎಲ್ಲ ಆಕ್ರಮಣಕಾರರನ್ನೂ ಹಿಂದೂಧರ್ಮವು ಕೆಲಮಟ್ಟಿಗಾದರೂ ಹಿಂದೂಗಳನ್ನಾಗಿಸಿಬಿಟ್ಟಿತು.  ಅವರು ಧರ್ಮದ ಪ್ರಭಾವದಲ್ಲಿ ಬಂದುಬಿಟ್ಟರು. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಇರುವರೆಲ್ಲರೂ ಹಿಂದೂಗಳೇ ಎನ್ನುವ ವಾದ ಸ್ಥೂಲವಾಗಿ ಸರಿಯೇ.

ಔರಂಗಜೇಬ್ ಒಬ್ಬನನ್ನು ಬಿಟ್ಟು ಹೆಚ್ಚು-ಕಡಿಮೆ ಎಲ್ಲ ಮೊಘಲ್ ದೊರೆಗಳೂ ಹಿಂದೂಗಳಾಗಿಯೇ ಹೋಗಿಬಿಟ್ಟರು.
ಅವರೆಲ್ಲರೂ ರಾಜಕೀಯವಾಗಿ ಆಳಿದರೇ ಹೊರತು, ಇಡೀ ದೇಶವನ್ನೇ ತಮ್ಮ ಧರ್ಮಕ್ಕೆ ಬದಲಾಯಿಸಲು ಬಯಸಲಿಲ್ಲ. ಅವರು ಬಹುತೇಕವಾಗಿ ದೇವಾಲಯಗಳನ್ನು ಹಾಳುಮಾಡಿದ್ದು ಧನಕನಕಗಳಿಗಾಗಿ ಮತ್ತು ಈ ಎಲ್ಲ ದೊರೆಗಳು ದೆಹಲಿಯಲ್ಲಿ ‘ಆಳ್ವಿಕೆ’
ಮಾಡಿಕೊಂಡಿದ್ದರೇ ವಿನಾ, ಹಿಂದೂಧರ್ಮದೊಳಗೆ ಕೈಹಾಕಲಿಲ್ಲ. ಧಾರ್ಮಿಕ ಪರಂಪರೆಗಳು ತಮ್ಮಷ್ಟಕ್ಕೆ ತಾವೇ ಮುಂದು ವರಿದುಕೊಂಡೇ ಬಂದವು. ತನಗೆ ಅಪಾಯ ಬಂದಿದೆ, ಅದನ್ನೆದುರಿಸಲು ತಾನು ಒಂದಾಗಬೇಕು ಎಂಬ ಭಾವನೆ ಹಿಂದೂ ಧರ್ಮಕ್ಕೆ ಚರಿತ್ರೆಯಲ್ಲಿ ಬರಲಿಲ್ಲ.

ಹಿಂದೂ ಮತ್ತು ಮುಸ್ಲಿಂ ದೊರೆಗಳ ನಡುವಿನ ರಾಜಕೀಯ ಬೇರೆ ವಿಷಯ.  ಆದರೆ ರಾಜರುಗಳ ನಡುವಿನ ಯುದ್ಧಗಳು ಧರ್ಮ
ಯುದ್ಧಗಳಾಗಿರಲಿಲ್ಲ. ಹಾಗಾಗಿ ತನಗೆ ಅಪಾಯ ಬಂದಿದೆಯೆಂದು ಹಿಂದೂಧರ್ಮ ಭಾವಿಸಲೇ ಇಲ್ಲ. ಅಪಾಯ ಗ್ರಹಿಸ ದಿದ್ದುದರಿಂದ ವಿವಿಧತೆಗಳು ಒಟ್ಟಾಗಿ ಎದ್ದುನಿಲ್ಲುವ ಅವಶ್ಯಕತೆಯು ಬಹುಶಃ ಧರ್ಮಕ್ಕೆ ಕಾಣಲಿಲ್ಲ. ಹಿಂದೂಧರ್ಮವು ಮೂಲತಃ ಒಳಮುಖವಾದುದು. ಹಿಂದೂಗಳಿಗೆ ರಾಜ್ಯಗಳನ್ನು ಗೆಲ್ಲುವುದಕ್ಕಿಂತಲೂ ತಮ್ಮ ಮನಸ್ಸನ್ನು ಗೆಲ್ಲುವುದು ಮಹತ್ವದ್ದಾಗಿತ್ತು. ಹಿಂದೂಧರ್ಮದಲ್ಲಿ ಇಹಕ್ಕಿಂತ ಪರಕ್ಕೆ ಮಹತ್ವವಿದೆ. ಈ ಜೀವನ ಇರುವುದು ಪುಣ್ಯವನ್ನು ಗಳಿಸಲಿಕ್ಕಾಗಿ. ಹುಟ್ಟು-ಸಾವಿನ ಬಂಧನಗಳಿಂದ ಮುಕ್ತನಾಗುವುದು ಹಿಂದೂ ಜೀವನದ ಉದ್ದೇಶ.

ಇಂಥ ಒಳಮುಖತೆ ಹೊಂದಿದ್ದ ಹಿಂದೂಧರ್ಮವು ಸೈನ್ಯ ಕಟ್ಟುವಿಕೆ, ರಾಜ್ಯವನ್ನಾಳುವಿಕೆ ಇಂಥ ವಿಷಯಗಳ ಕುರಿತು ತಲೆ ಕೆಡಿಸಿಕೊಳ್ಳಲಿಲ್ಲ. ಹಿಂದೂಧರ್ಮವು ‘ಹಿಂದುತ್ವ’ ಎನ್ನುವ ತನ್ನ ರಾಜಕೀಯ ಪದರವನ್ನು ಬೆಳೆಸಿಕೊಳ್ಳಲಾರಂಭಿಸಿದ್ದು
೨೦ನೆಯ ಶತಮಾನದಲ್ಲಿ. ‘ಹಿಂದುತ್ವ’ ಶಬ್ದವನ್ನು ಮೊದಲಿಗೆ ಬಳಸಿದವರು ಚಂದ್ರನಾಥ ಬಸು. ಹಿಂದುತ್ವವನ್ನು ಒಂದು ರಾಜಕೀಯ ತತ್ತ್ವಜ್ಞಾನವಾಗಿ ಬಳಸಿದವರು ಸಾವರ್ಕರ್. ಹಿಂದುತ್ವದ ಬೆಳವಣಿಗೆಯ ೪ ಪ್ರಮುಖ ಕಾರಣಗಳೆಂದರೆ-
ಮುಸ್ಲಿಂ ಲೀಗ್‌ನ ಉದಯ (1906), ಹಿಂದೂ ಮಹಾಸಭಾದ ಉಗಮ (1915), ಆರೆಸ್ಸೆಸ್‌ನ ಹುಟ್ಟು (1925) ಮತ್ತು ದೇಶ ವಿಭಜನೆ (1947).

ಹಿಂದುತ್ವ ಹುಟ್ಟಿದ್ದು ದೇಶದಲ್ಲಿ ಹುಟ್ಟಿಕೊಳ್ಳುತ್ತಿದ್ದ ‘ರಾಷ್ಟ್ರೀಯತೆ’ಯ ಭಾಗವಾಗಿ ಮತ್ತು ದೇಶವಿಭಜನೆಯ ಬೀಜಗಳನ್ನು ಬಿತ್ತಿದ್ದ ಮುಸ್ಲಿಂ ಲೀಗ್‌ಗೆ ಎದುರಾಗಿ. ಬಾಲ ಗಂಗಾಧರ ತಿಲಕರು ರಾಷ್ಟ್ರೀಯತೆ ಯನ್ನು ಕಟ್ಟಲು ಗಣೇಶೋತ್ಸವದಂಥ ಹಬ್ಬಗಳನ್ನು ಬಳಸಿದರು. ಇಂಥ ಪ್ರಯತ್ನದ ಮುಂದುವರಿಕೆಯಾಗಿಯೇ ಹಿಂದೂ ರಾಷ್ಟ್ರೀಯತೆಯ ತತ್ತ್ವಜ್ಞಾನಿಗಳು,
ಅಂದರೆ ಸಾವರ್ಕರ್, ಶ್ಯಾಮಾಪ್ರಸಾದ್ ಮುಖರ್ಜಿ, ಗೋಳ್ವಾಲ್ಕರ್, ಹೆಡಗೆವಾರ್‌ರಂಥ ಪ್ರಮುಖ ನಾಯಕರು ಬಂದಿದ್ದು. ಅವರು ಹಿಂದುತ್ವದ ರಾಜಕೀಯವನ್ನು ೨೦ನೆಯ ಶತಮಾನದಲ್ಲಿ ಕಣ್ಣೆದುರಿಗಿದ್ದ ಹಲವು ‘ರ‍್ಯಾಡಿಕಲ್ ವಿಚಾರ’ಗಳ ಮತ್ತು ಹಿಟ್ಲರ್
ಪ್ರತಿಪಾದಿಸಿದ ‘ಸಾಂಸ್ಕೃತಿಕ ರಾಜಕೀಯ’ದ ಬೆಳಕಿನಲ್ಲಿಯೂ ನೋಡಿದ ಇದರಿಂದ ಪ್ರೇರಣೆ ಪಡೆದ ಆರೆಸ್ಸೆಸ್ ಪ್ರಬಲವಾಗಿ ಬೆಳೆಯಿತು.

ಇಂಥ ಪ್ರಭಾವಿ ತತ್ತ್ವಗಳು ಗಾಳಿಯಲ್ಲಿದ್ದಾಗಲೂ, ಧರ್ಮದ ಆಧಾರದ ಮೇಲೆಯೇ ದೇಶವಿಭಜನೆ ನಡೆದು ಪಾಕಿಸ್ತಾನ ಹುಟ್ಟಿ ಅದು ತನ್ನನ್ನು ‘ಇಸ್ಲಾಮಿಕ್ ಸ್ಟೇಟ್’ ಎಂದು ಕರೆದುಕೊಂಡರೂ, ಭಾರತದಲ್ಲಿ ಹಿಂದುತ್ವ ರಾಜಕೀಯವು ತಾನೇ ದೇಶದ ‘ಆಳ್ವಿಕೆ’ ನಡೆಸುವಷ್ಟು ಮತ್ತು ಭಾರತವನ್ನುಹಿಂದೂರಾಷ್ಟ್ರವನ್ನಾಗಿಸುವಷ್ಟು ಏಕೆ ಬಲಗೊಳ್ಳಲಿಲ್ಲ ಎಂಬುದು ಮಹತ್ವದ ಪ್ರಶ್ನೆ. ಹಿಂದೂಧರ್ಮದೊಳಗೆ ಒಂದೇ ಒಂದು ಕೇಂದ್ರವಿಲ್ಲ, ಹಾಗಾಗಿ ಹಿಂದೂಗಳು  ರಾಜಕೀಯವಾಗಿ ಸುಲಭವಾಗಿ ಒಂದಾಗುವುದಿಲ್ಲ
ಎನ್ನುವುದೇ ಇದಕ್ಕೆ ಕಾರಣ.

ಜತೆಗೆ, ಧರ್ಮದ ಎಲ್ಲ ವೈವಿಧ್ಯತೆಗಳು ಹಿಂದುತ್ವವನ್ನು ಒಪ್ಪಲಿಲ್ಲ; ಏಕೆಂದರೆ ಕೆಲವು ಹಿಂದೂ ವರ್ಗಗಳು ‘ಹಿಂದುತ್ವ ಅಂದರೆ
ಮೇಲ್ವರ್ಗಗಳು ರಾಜಕೀಯ ಅಽಕಾರ ಪಡೆಯುವ ಸಾಧನೋಪಾಯ’ ಎನ್ನುವ ಪರಿಕಲ್ಪನೆಯನ್ನು ಹೊಂದಿದ್ದವು. ಬಹುಶಃ ಹೀಗಾಗಿಯೇ ಈ ತತ್ತ್ವ ಗಳನ್ನು ಆಧರಿಸಿ ಹುಟ್ಟಿದ ಭಾರತೀಯ ಜನಸಂಘವು ರಾಷ್ಟ್ರೀಯವಾಗಿ ಅಽಕಾರಕ್ಕೆ ಬರದೆ ಹೋಗಿದ್ದು,
ಇಂದಿರಾ ಗಾಂಧಿಯವರ ನಿಧನದ ತನಕವೂ ಹಿಂದುತ್ವವು ಭಾರಿಶಕ್ತಿಯ ಪಕ್ಷವಾಗಿ ಬೆಳೆಯದಿ ದ್ದುದು. ಏಕೆಂದರೆ, ಹಿಂದೂಗಳ ಮನಸ್ಸು ಅರಿತಿದ್ದ ಇಂದಿರಾ ತಮ್ಮ ರಾಜಕೀಯ ಶೈಲಿಯಲ್ಲಿಯೇ ಹಿಂದುತ್ವದ ಅಂಶಗಳನ್ನು ಜೋಡಿಸಿಕೊಂಡಿದ್ದರು.

ಇಲ್ಲಿ ಬಹುಶಃ ಗಮನಿಸಬೇಕಾದ ವಿಷಯವೆಂದರೆ, ಹೀಗೆ ಯಾವುದಾದರೂ ಪಕ್ಷ ಬಿಜೆಪಿಗಿಂತಲೂ ಮುಂದೆ ಹೋಗಿ ‘ಹಿಂದುತ್ವ ರಾಜಕೀಯ’ದಲ್ಲಿ ತೊಡಗಿದರೆ ಪಕ್ಷಕ್ಕೆ ಸವಾಲು ಸೃಷ್ಟಿಯಾಗುತ್ತದೆ. ಹಾಗಾಗಿ ಅದು ಹಿಂದೂ ಬೆಂಬಲವನ್ನು ‘ಟೇಕನ್
ಫಾರ್ ಗ್ರಾಂಟೆಡ್’ ಎಂದುಕೊಳ್ಳಲಾಗುವುದಿಲ್ಲ. ಇದು ಬಿಜೆಪಿಯ ಮುಂದಿರುವ ಸವಾಲು. ‘ಹಿಂದುತ್ವದ ರಾಜಕೀಯ’ ದೊಡ್ಡ ಶಕ್ತಿಯಾಗಿ ಒಡಮೂಡಿದ್ದು ೮೦ರ ದಶಕದ ನಂತರ, ಅದು ಬಹಳ ಶಕ್ತಿಯುತವಾದದ್ದು 2013ರ ನಂತರ. ೮೦ರ ದಶಕದಲ್ಲಿ ಬಿಜೆಪಿ ಬಲವಾಗುತ್ತ ಹೋಗಿದ್ದೇಕೆ ಎಂಬುದನ್ನು ಗಮನಿಸಬೇಕು.

ಇದಕ್ಕೆ ಹಲವು ಸಂಕೀರ್ಣ ಕಾರಣಗಳಿವೆ. ಪ್ರಮುಖ ಕಾರಣ- ಸ್ವಾತಂತ್ರ್ಯಾನಂತರದಲ್ಲಿ ರೇಜಿಗೆಯಾಗುವಷ್ಟು ನಡೆದ ಮೈನಾರಿಟಿ ರಾಜಕೀಯ ಮತ್ತು ಓಲೈಕೆಯ ರಾಜಕಾರಣ, ಕಾಶ್ಮೀರದಲ್ಲಿನ ರಾಜಕೀಯಕ್ಕೆ ಹಿಂದೂಗಳು ನಿರಂತರವಾಗಿ ಬಲಿಯಾಗುತ್ತ  ದಿದ್ದು
ಮತ್ತು ಶಾ ಬಾನು ಪ್ರಕರಣ. ಈ ಪ್ರಕರಣದಲ್ಲಿ ಒಂದು ಸಮುದಾಯವನ್ನು ಖುಷಿಪಡಿಸುವ ಸಲುವಾಗಿ ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯದ ಆದೇಶವನ್ನೇ ರದ್ದುಗೊಳಿಸಲು ಮಸೂದೆಯೊಂದನ್ನು ಅನುಮೋದಿಸಿದ್ದುಂಟು.

ಇದು ಹಿಂದೂಗಳಿಗೆ ತುಂಬ ಬೇಸರ ತಂದ ಘಟನೆ. ರಾಮಮಂದಿರ ಚಳವಳಿಯು ಹಿಂದುತ್ವದ ಬೆಳವಣಿಗೆಗೆ ಇಂಬುಕೊಟ್ಟಿದ್ದು ಕೂಡ ಎಲ್ಲರಿಗೂ ಗೊತ್ತಿದೆ. ಹಾಗೆಯೇ ಹಿಂದುತ್ವದ ಬೆಳವಣಿಗೆಗೆ ಸಹಾಯ ಮಾಡಿದವರು ಅಂದಿನ ಪ್ರಧಾನಿ ವಿ.ಪಿ. ಸಿಂಗ್.
ಅವರು ಧರ್ಮವನ್ನು ಒಡೆಯಲು ಪ್ರಯತ್ನಿಸಿದ್ದು, ಅಲ್ಪಸಂಖ್ಯಾತರನ್ನು ಖುಷಿಪಡಿಸಲು ಕಾಂಗ್ರೆಸ್‌ಗಿಂತ ಮುಂದೆಹೋಗಿದ್ದು ಹಿಂದೂಗಳಿಗೆ ಸಿಟ್ಟು ತಂದಿತು. ಇದರ ವಿರುದ್ಧವಾಗಿಯೇ ಆಡ್ವಾಣಿಯವರು ರಥಯಾತ್ರೆ ಹಮ್ಮಿಕೊಂಡಿದ್ದು. ದೇಶದ ಹಳ್ಳಿ
ಹಳಿಗಳಲ್ಲಿದ್ದ ಹಿಂದೂಗಳನ್ನು ದೊಡ್ಡ ಮಟ್ಟದಲ್ಲಿ ಒಂದುಗೂಡಿಸಿದ್ದು ಆಡ್ವಾಣಿ. ವಿಶೇಷವಾಗಿ ಉತ್ತರ ಭಾರತದಲ್ಲಿ, ಮೊಘಲರು ಕೂಡ ಮಾಡದಿದ್ದುದನ್ನು ವಿ.ಪಿ. ಸಿಂಗ್ ಮಾಡಿದರು.

ಇದರಿಂದಾಗಿಯೇ ಮೊಟ್ಟಮೊದಲ ಬಾರಿಗೆ ಹಿಂದೂಗಳು ಉತ್ತರ ಭಾರತದಲ್ಲಿ ಒಂದುಗೂಡಿ ನಿಂತಿದ್ದು ಮತ್ತು ಅಧಿಕಾರಕ್ಕೆ ಬಂದಿದ್ದು. ಹಿಂದುತ್ವದ ಬೆಳವಣಿಗೆಗೆ ಕಾರಣವಾದ ಇನ್ನೊಂದು ವಿಚಿತ್ರ ಸಂಗತಿಯನ್ನೂ ಗಮನಿಸಬೇಕು. ೯೦ರ ದಶಕದಲ್ಲಿ ಪಿ.ವಿ. ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ಆರಂಭಿಸಿದ ಉದಾರೀಕರಣ ನೀತಿ ಕೂಡ ಹಿಂದೂಗಳನ್ನು ಒಂದು ಗೂಡಿಸಿತು. ಅದು ಹೇಗೆಂದರೆ, ಉದಾರೀಕರಣವು ದೇಶದ ಕೋಟ್ಯಂತರ ಜನರಿಗೆ ಉದ್ಯೋಗಗಳನ್ನು ಸೃಷ್ಟಿಸಿತು. ಜನರನ್ನು ಬಡತನದಿಂದ ಹೊರತಂದು ಮಧ್ಯಮವರ್ಗದವರನ್ನಾಗಿಸಿತು. ಈ ನವ ಮಧ್ಯಮವರ್ಗವೇ ಬಿಜೆಪಿಯನ್ನು ಬೆಂಬಲಿಸಿದ್ದು.

ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಈ ನವ ಮಧ್ಯಮವರ್ಗವು ಹಿಂದೂಧರ್ಮದ ಕಂದಾಚಾರಗಳು ಅಥವಾ ಆಚರಣೆಗಳನ್ನು ಬಿಟ್ಟು ಹೊರಬಂದ, ಆದರೆ ತಮ್ಮ ಧರ್ಮವನ್ನು ಇಟ್ಟುಕೊಳ್ಳಲು ಬಯಸುವ ವರ್ಗ. ಅಂದರೆ ಇದು ಜಾತಿ, ಮತ, ಪಂಥಗಳೇ ಇಲ್ಲದ ಹಿಂದೂ ಪ್ರವರ್ಗ. ಇವರು ಪಾಶ್ಚಾತ್ಯೀಕರಣಗೊಂಡ, ಉದಾರವಾದಿ ಹಿಂದೂಗಳು. ‘ಮೈಕ್ರೋ’ ಹಂತದ ಪಂಥ, ಜಾತಿ, ಮತಗಳನ್ನು ಬಿಟ್ಟು ‘ಮ್ಯಾಕ್ರೋ’ ಹಂತದಲ್ಲಿ ಧರ್ಮವನ್ನು ಚರಿಸುವವರು. ಇವರಿಗೆ ರಾಜಕೀಯವಾಗಿ ಒಗ್ಗೂಡು ವುದು ಸುಲಭ. ಹೀಗಾಗಿಯೇ ಜಾಗತೀಕರಣದ ಆರ್ಥಿಕತೆ ಬೆಳೆದಂತೆ ಹಿಂದುತ್ವ ಬೆಳೆದಿದ್ದು. ಇಲ್ಲಿ ಹಿಂದುತ್ವವು ಉದಾರೀಕರಣವನ್ನು ಬೆಂಬಲಿಸುತ್ತದೆ ಮತ್ತು ಉದಾರೀಕರಣವು ಹಿಂದುತ್ವವನ್ನು ಬೆಂಬಲಿಸುತ್ತದೆ.

ಇವೆರಡೂ ಜತೆಜತೆಯಾಗೇ ಸಾಗುತ್ತವೆ, ಆದರೆ ಇವರೆಡರಲ್ಲಿ ಯಾವುದಕ್ಕೆ ಪ್ರಾಶಸ್ತ್ಯ ಎಂಬ ಪ್ರಶ್ನೆ ಬಂದರೆ ಭಾರತದ ನವ ಮಧ್ಯಮವರ್ಗ ಉದಾರೀಕರಣವನ್ನೇ ಆಯ್ದುಕೊಳ್ಳುತ್ತದೆ. ಇಂಥ ಮನಸ್ಥಿತಿಯಿಂದಾಗಿಯೇ ಮಧ್ಯದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದು. ಹಿಂದೂಗಳಿಗೆ ಮುಖ್ಯವಾಗಿ ಬೇಕಾಗಿದ್ದು ಆರ್ಥಿಕ ಉದಾರೀಕರಣ ಮತ್ತು ಅದು ಸೃಷ್ಟಿಸುವ ಉದಾರ ಸಮಾಜ. ಇವರು ಆಧುನಿಕರು.

ಇವರು ಹಿಂದೂಧರ್ಮವನ್ನು ಪ್ರೀತಿಸುವುದಕ್ಕೆ ಕಾರಣ ಅದು ನೀಡುವ ಸ್ವಾತಂತ್ರ್ಯ. ಇವರೆಲ್ಲರೂ ನರೇಂದ್ರ ಮೋದಿಯವರನ್ನು ಬೆಂಬಲಿಸಿದ್ದಕ್ಕೆ ಇದೇ ಕಾರಣ. ಏಕೆಂದರೆ, ಉದಾರೀಕರಣ ಮತ್ತು ಧಾರ್ಮಿಕತೆ ಎರಡೂ ಒಂದೆಡೆ ಸೇರಿದ ಸಂಕೇತವೇ ಮೋದಿ.
ಬಿಜೆಪಿಗೆ ಪೂರ್ಣ ಬಹುಮತ ನೀಡಲು ಕೇವಲ ಹಿಂದುತ್ವವೊಂದಕ್ಕೇ ಸಾಧ್ಯವಾಗಿರಲಿಲ್ಲ; ಅದು ಸಾಧ್ಯವಾಗಿದ್ದು ಹಿಂದುತ್ವ, ಉದಾರೀಕರಣ ಮತ್ತು ಆಕ್ರಮಣಕಾರಿ ರಾಷ್ಟ್ರೀಯತೆಗಳ ಸಂಗಮವಾದ ಮೋದಿ ರಾಜಕೀಯಕ್ಕೆ ಎಂಬುದನ್ನು ಗಮನಿಸಬೇಕು.

ಬಿಜೆಪಿಯ ಮುಂದಿರುವ ಸವಾಲುಗಳು ಇವು. ಮೊದಲನೆಯದಾಗಿ, ಭಾರತದ ಉದಾರೀಕರಣ ನೀತಿಯನ್ನು ಹೆಚ್ಚೆಚ್ಚು ವಿಸ್ತರಿಸು ತ್ತಲೇ ಹೋಗ ಬೇಕಾದ ಅವಶ್ಯಕತೆ ಅದಕ್ಕಿದೆ. ಎರಡನೆಯದಾಗಿ, ಬಿಜೆಪಿಯು ‘ಹಿಂದುತ್ವದ ರಾಜಕೀಯ’ದಲ್ಲಿ ತೊಡಗಿದರೂ, ‘ಸನಾತನ ಹಿಂದುತ್ವ’ದೆಡೆಗೆ ತೆರಳುವ ಪ್ರಯತ್ನಕ್ಕೆ ಅದು ಕೈಹಾಕುವಂತಿಲ್ಲ. ಉದಾಹರಣೆಗೆ ಪಬ್ ಸಂಸ್ಕೃತಿ, ಪ್ರೇಮಿಗಳ ದಿನಾಚರಣೆಯಂಥವನ್ನು ಅದು ವಿರೋಧಿಸುವಂತಿಲ್ಲ; ಏಕೆಂದರೆ ಅಂಥ ಕ್ರಮಕ್ಕೆ ಹಿಂದೂಗಳಿಂದಲೇ ವಿರೋಧ ಬರುತ್ತದೆ.

ಮೂರನೆಯದಾಗಿ, ಬಿಜೆಪಿಯು ಧರ್ಮವನ್ನು ಎತ್ತಿ ಹಿಡಿದರೂ ‘ಕಟ್ಟರ್ ಧರ್ಮ’ಕ್ಕೆ ಹೋಗದೆ ಇರುಬೇಕಿದೆ. ಅಲ್ಲದೆ ಬಹುಶಃ ಹಿಂದುತ್ವದ ರಾಜಕೀಯದ ಕಾರ್ಯಸೂಚಿಯ ಜತೆಗೆ ಬೇರೆ ಅಂಶಗಳನ್ನೂ, ಅಂದರೆ ರಾಷ್ಟ್ರೀಯತೆ ರಾಜಕೀಯ, ಅಭಿವೃದ್ಧಿಯ
ರಾಜಕೀಯ ಇಂಥ ಅಂಶಗಳನ್ನೂ ಸೇರಿಸಿಕೊಳ್ಳಬೇಕಿರುವುದು ಪಕ್ಷದ ಮುಂದಿರುವ ಸವಾಲು. ಮಹಾರಾಷ್ಟ್ರ, ಮಧ್ಯಪ್ರದೇಶ. ಪಶ್ಚಿಮ ಬಂಗಾಳ ಚುನಾವಣೆಗಳು ಈ ವಿಷಯವನ್ನು ಹೇಳಿವೆ.