ವರ್ತಮಾನ
ಸಾಮಾನ್ಯ ದಲಿತ ಕುಟುಂಬದಿಂದ ಬಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷರಾಗಿ ಆಯ್ಕೆಯಾಗುವುದು ಎಂದರೆ ಅದು ಸಾಮಾನ್ಯ ವಿಷಯವೇನೂ ಅಲ್ಲ. ಅದರಲ್ಲೂ ಸ್ವಾತಂತ್ರ್ಯಾನಂತರ ನೆಹರು ಕುಟುಂಬದ ಬಿಗಿ ಹಿಡಿತದಲ್ಲೇ
ಮುಂದುವರಿಯುತ್ತಿರುವ ಕಾಂಗ್ರೆಸ್‌ನಲ್ಲಿ ಆ ಕುಟುಂಬದವರನ್ನು ಹೊರತು ಪಡಿಸಿ ಇತರರು ಅಧ್ಯಕ್ಷರಾಗುವುದೇ ಒಂದು ಪವಾಡ.
ಅದರಲ್ಲೂ ಇಂದಿರಾ ಗಾಂಧಿ ಅಧಿಕಾರಕ್ಕೆ ಬಂದ ಮೇಲಂತೂ (1978) ಕಾಂಗ್ರೆಸ್ ೪೪ ವರ್ಷಗಳಲ್ಲಿ ಸುಮಾರು ೪೦ ವರ್ಷ ನೆಹರೂ ಕುಟುಂಬದ ಕೈಯ್ಯಲ್ಲೇ ಇತ್ತು. ರಾಜೀವ್ ಗಾಂಧಿ ನಿಧನದ ನಂತರ ಪಿ.ವಿ.ನರಸಿಂಹ ರಾವ್ ಮತ್ತು ಸೀತಾರಾಮ್ ಕೇಸರಿ ಅಧ್ಯಕ್ಷರಾದರು. ಬಳಿಕ 1998ರಲ್ಲಿ ಸೋನಿಯಾ ಗಾಂಧಿ ಅಧ್ಯಕ್ಷರಾದ ಮೇಲೆ ಆ ಕುಟುಂಬದವರ ಹೊರತಾಗಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಂದ ಮೊದಲ ವ್ಯಕ್ತಿ ಮಲ್ಲಿಕಾರ್ಜುನ ಖರ್ಗೆ.
ಕರ್ನಾಟಕದಿಂದ ಆಯ್ಕೆಯಾಗಿರುವ ೨ನೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅ. 26ರಂದು ಅಧಿಕಾರ ಸ್ವೀಕರಿಸ ಲಿದ್ದಾರೆ. ಬೇರೆಯರನ್ನು ಎಐಸಿಸಿ ಅಧ್ಯಕ್ಷರಾಗಿ ನೇಮಕ ಮಾಡಿ ಅವರ ಮೂಲಕ ತಾವೇ ಆಡಳಿತ ನಡೆಸುವುದು ನೆಹರೂ ಕುಟುಂಬಕ್ಕೆ ಹೊಸದೇನೂ ಅಲ್ಲ. ಸ್ವಾತಂತ್ರ್ಯಾ ನಂತರ 11 ಮಂದಿ ಈ ಕುಟುಂಬೇತರರು ಅಧ್ಯಕ್ಷರಾಗಿದ್ದರೂ ಅವರೆಲ್ಲರೂ ನೆಹರೂ, ಇಂದಿರಾ ಗಾಂಧಿ, ರಾಜೀವ್ ಮತ್ತು ಸೋನಿಯಾ ಅಣತಿಯಂತೆ ಕಾರ್ಯನಿರ್ವಹಿಸಿದ್ದರು.
ಇದೀಗ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಖರ್ಗೆ ಕೂಡ ಹಿಂದಿನವರಂತೆಯೇ ಇರಬೇಕಾಗುತ್ತದೆ. ಇಲ್ಲವಾದಲ್ಲಿ ಅವರು ಅಧ್ಯಕ್ಷ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ. ಅಲ್ಲದೆ, ಖರ್ಗೆಯವರಿಗೆ ಎಐಸಿಸಿ ಅಧ್ಯಕ್ಷ ಹುದ್ದೆ ಸಿಗಲು ಅವರ ಹಿರಿತನ, ಅನುಭವ ಎಲ್ಲಕ್ಕಿಂತ ಮುಖ್ಯ ಕಾರಣ ನೆಹರೂ ಕುಟುಂಬ ಮತ್ತು ಕಾಂಗ್ರೆಸ್ ಮೇಲಿನ ನಿಷ್ಠೆ. ಹೀಗಾಗಿ ಎಐಸಿಸಿ ನೂತನ ಅಧ್ಯಕ್ಷರಿಂದ ಹೆಚ್ಚಿನದೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ.
ಈ ಸಂದರ್ಭದಲ್ಲಿ ಖರ್ಗೆ ಎಐಸಿಸಿ ಅಧ್ಯಕ್ಷರಾಗಿರುವ ಸಂದರ್ಭವನ್ನು ನಾವು ಪರಿಗಣಿಸಲೇ ಬೇಕಾಗುತ್ತದೆ. ಈ ಹಿಂದೆ ನೆಹರು ಕುಟುಂಬದವರನ್ನು ಹೊರತುಪಡಿಸಿ ಬೇರೆಯವರು ಅಧ್ಯಕ್ಷರಾದಾಗ ಕಾಂಗ್ರೆಸ್ ದೇಶದಲ್ಲಿ ಶಕ್ತಿಯುತವಾಗಿತ್ತು. ಇಂದಿರಾ ಗಾಂಽ ತುರ್ತು ಪರಿಸ್ಥಿತಿ ಹೇರಿದ ಸಂದರ್ಭ ಹೊರತುಪಡಿಸಿ ಉಳಿದಂತೆಯಾವುದೇ ಒಂದು ಪಕ್ಷ ಅಥವಾ ಮೈತ್ರಿಕೂಟ ಕಾಂಗ್ರೆಸ್ಸನ್ನು ಸೋಲಿಸುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಅಷ್ಟರ ಮಟ್ಟಿಗೆ ಕಾಂಗ್ರೆಸ್ ಪ್ರಬಲವಾಗಿತ್ತು. ಆದರೆ, ಈಗ ಪರಿಸ್ಥಿತಿ ಹಾಗಿಲ್ಲ.
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ಅತ್ಯಂತ ಶಕ್ತಿಶಾಲಿಯಾಗಿದ್ದರೆ, ಕಾಂಗ್ರೆಸ್ ದೇಶದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುತ್ತಿದೆ. ಅನಾರೋಗ್ಯದ ಕಾರಣದಿಂದ ಸೋನಿಯಾ ಗಾಂಧಿ ಮೊದಲಿನಷ್ಟು ಲವಲವಿಕೆಯಿಂದ ಪಕ್ಷದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ರಾಹುಲ್ ಗಾಂಧಿ ಇನ್ನೂ ಪಕ್ಷವನ್ನು ಮುನ್ನಡೆಸುವಷ್ಟು ಪ್ರಬುದ್ಧತೆ ಹೊಂದಿಲ್ಲ. ಮೇಲಾಗಿ ನರೇಂದ್ರ ಮೋದಿ-ಅಮಿತ್ ಶಾ ನಾಯಕತ್ವವನ್ನು ಎದುರಿಸುವ ಶಕ್ತಿಯೂ ಅವರಲ್ಲಿ ಇದ್ದಂತೆ
ಕಾಣಿಸುತ್ತಿಲ್ಲ. ಏಕೆಂದರೆ, ಅನುಭವದ ಕೊರತೆ ಅವರನ್ನು ಕಾಡುತ್ತಿದೆ. ಹೀಗಾಗಿ ಪಕ್ಷ ಸಂಘಟನೆ ವಿಚಾರದಲ್ಲಿ ಗಾಂಧಿ ಕುಟುಂಬದವರು ಖರ್ಗೆಯವರ ಅನುಭವದ ನೆರವು ಪಡೆದುಕೊಳ್ಳುವುದು ಅನಿವಾರ್ಯ.
ಆದರೆ, ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಮುಂದೆ ಇರುವುದು ಮುಳ್ಳಿನ ಹಾದಿ. ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಗೆ ಸರಿಸಮನಾಗಿ ಕಾಂಗ್ರೆಸ್ಸನ್ನು ಬಲಿಷ್ಠಗೊಳಿಸುವುದು ಕನಸಿನ ಮಾತು. ಅದಕ್ಕೆ ಮೊದಲು ಅವರು ಪಕ್ಷದೊಳಗಿನ ವಾತಾವರಣ ಬದಲಿಸಬೇಕಿದೆ. 2014ರ ಲೋಕಸಭೆ ಚುನಾವಣೆ ಬಳಿಕ ಒಂದೆರಡೆ ಚುನಾವಣೆ ಬಿಟ್ಟರೆ ದೇಶದಲ್ಲಿ ಕಾಂಗ್ರೆಸ್ ಸೋಲಿನ ಮೇಲೆ ಸೋಲು ಕಾಣುತ್ತಿದೆ. ನಾಯಕರು ಸ್ಥೈರ್ಯ ಕಳೆದುಕೊಳ್ಳುತ್ತಿದ್ದಾರೆ.
ನರೇಂದ್ರ ಮೋದಿ-ಅಮಿತ್ ಶಾ ಜೋಡಿಯನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಅನೇಕರು ಪಕ್ಷ ತೊರೆಯುತ್ತಿದ್ದಾರೆ. ಮತ್ತೊಂದೆಡೆ ಹಿರಿಯರು ಮತ್ತು ಕಿರಿಯರು ಎಂದು ಎರಡು ಗುಂಪುಗಳಾಗಿವೆ. ಹೀಗಾಗಿ ಅವರ ಮುಂದಿರುವ ಮೊದಲ ಸವಾಲು ಸೋತು ಸುಣ್ಣಾಗಿರುವ ನಾಯಕರಲ್ಲಿ ಆತ್ಮಸ್ಥೈರ್ಯ ಮೂಡಿಸುವುದು ಹಾಗೂ ಹಿರಿ-ಕಿರಿಯರನ್ನು ಒಟ್ಟಾಗಿ ಕರೆದೊಯ್ಯುವುದು. ಆ ಮೂಲಕ ಪಕ್ಷವನ್ನು ಸರಿಪಡಿಸಿ ಬಳಿಕವಷ್ಟೇ ಸಂಘಟನೆ ಬಲಿಷ್ಠಗೊಳಿಸಲು ಅವರು ಕಾರ್ಯಪ್ರವೃತ್ತ ರಾಗಬೇಕಾಗಿದೆ. ಏಕೆಂದರೆ, ಈ ಹಿಂದೆ ಅಧ್ಯಕ್ಷರಾಗಿದ್ದ ನೆಹರೂ ಕುಟುಂಬೇತರರಿಗಿಂತ ಭಿನ್ನವಾದ ಪರಿಸ್ಥಿತಿ ಈಗ ಇದೆ. ಮೊದಲು ಯಾರೇ ಅಧ್ಯಕ್ಷರಾಗಿದ್ದರೂ ಅಲ್ಲಿ ನೆಹರೂ ಕುಟುಂಬದವರ ಮಾತೇ ಅಂತಿಮವಾಗಿತ್ತು.
ಇದೀಗ ಆ ಕುಟುಂಬದ ವಿರುದ್ಧ ಪಕ್ಷದಲ್ಲೇ ಜಿ-೨ ಬಣ ಇದೆ. ಆ ಬಣವನ್ನು ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳದೇ ಇದ್ದರೆ ಖರ್ಗೆಯವರ ನಡೆ ಕೆಂಡವನ್ನು ಸೆರಗಲ್ಲಿ ಕಟ್ಟಿಕೊಂಡತಾಗಬಹುದು. ಆದರೆ, ಸಂಘಟನಾತ್ಮಕವಾಗಿ ಖರ್ಗೆ ಯಶಸ್ಸು
ಸಾಧಿಸುವರೇ? ಸದ್ಯ ಕಾಂಗ್ರೆಸ್‌ನಲ್ಲಿ ಕೇಳಿಬರುತ್ತಿರುವ ಪ್ರಮುಖ ಪ್ರಶ್ನೆಯೇ ಇದು. ೯ ವಿಧಾನಸಭೆ ಮತ್ತು ಮೂರು
ಲೋಕಸಭೆ ಚುನಾವಣೆ ಸೇರಿದಂತೆ ೧೨ ಚುನಾವಣೆಗಳನ್ನು ಎದುರಿಸಿ ೧೧ ಬಾರಿ ಗೆದ್ದಿರುವ ಮಲ್ಲಿಕಾರ್ಜುನ ಖರ್ಗೆ ಉತ್ತಮ ಜನಪ್ರತಿನಿಧಿ ಎಂಬುದರಲ್ಲಿ ಎರಡು ಮಾತಿಲ್ಲ.
ಅದೇ ರೀತಿ ರಾಜ್ಯ ಮತ್ತು ಕೇಂದ್ರದಲ್ಲಿ ಹಲವು ಬಾರಿ ಸಚಿವರಾಗಿ, ಪ್ರತಿಪಕ್ಷ ನಾಯಕ, ಉಪನಾಯಕರಾಗಿ ಸಾಕಷ್ಟು ಹುದ್ದೆಗಳನ್ನು ಉತ್ತಮವಾಗಿ ನಿಭಾಯಿಸಿದ್ದರು. ತಾವು ಕೆಲಸ ಮಾಡಿದ ಇಲಾಖೆಗಳಲ್ಲಿ ಹೆಜ್ಜೆ ಗುರುತು ಮೂಡಿಸುವ ಕೆಲಸ ಮಾಡಿದರು. ಆದರೆ, ಸಂಘಟನಾತ್ಮಕವಾಗಿ ಅಂದರೆ ಪಕ್ಷದ ಸಂಘಟನೆ ವಿಚಾರದಲ್ಲಿ ಉತ್ತಮ ಸಾಧನೆ ತೋರುವಲ್ಲಿ ವಿಫಲ ರಾದರು. 2005ರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೂ ಪಕ್ಷವನ್ನು ಒಟ್ಟಿಗೆ ತೆಗೆದುಕೊಂಡು ಹೋಗಲು ಸಾಧ್ಯ ವಾಗಲಿಲ್ಲ.
ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಆಗುತ್ತಿದ್ದ ಆಂತರಿಕ ಬೆಳವಣಿಗೆಗಳನ್ನು ಗಮನಿಸಲು ಸಾಧ್ಯವಾಗದೆ ಕಾಂಗ್ರೆಸ್
ಅಽಕಾರ ಕಳೆದುಕೊಳ್ಳುವಂತಾಯಿತು. ಆಗ ತಮ್ಮ ಪುತ್ರ ಪ್ರಿಯಾಂಕ್ ಖರ್ಗೆ ಅವರನ್ನು ರಾಜಕೀಯಕ್ಕೆ ಕರೆತರಲು ವೇದಿಕೆ ಸೃಷ್ಟಿಸಿದ್ದು ಬಿಟ್ಟರೆ ಪಕ್ಷದ ಅಧ್ಯಕ್ಷರಾಗಿ ಹೇಳಿಕೊಳ್ಳುವಂತಹ ಸಾಧನೆ ಅವರಿಂದ ಹೊರಬರಲಿಲ್ಲ. ಇದಕ್ಕೆ ಕಾರಣ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಟ್ಟಾಗಿ ಕರೆದೊಯ್ಯುವ ವಿಚಾರದಲ್ಲಿ ಅವರು ವಿಫಲರಾಗಿದ್ದು.
ಯಾವುದೇ ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡಬೇಕಾದರೆ ಚಾಣಾಕ್ಷತನ ಬೇಕು. ಅದರಲ್ಲೂ ನರೇಂದ್ರ ಮೋದಿ-ಅಮಿತ್ ಶಾ ಜೋಡಿಯ ಬಿಜೆಪಿಯನ್ನು ಎದುರಿಸಿ ಪಕ್ಷ ಸಂಘಟಿಸಲು ಎಷ್ಟು ಚಾಣಾಕ್ಷತನ ಇದ್ದರೂ ಅದು ಕಡಿಮೆಯೆ. ಪ್ರಸ್ತುತ ಮಲ್ಲಿಕಾ ರ್ಜುನ ಖರ್ಗೆ ಅವರನ್ನು ಆ ಚಾಣಾಕ್ಷತನದ ಕೊರತೆ ಎದ್ದು ಕಾಣುತ್ತಿದೆ. ರಾಜ್ಯ ಕಾಂಗ್ರೆಸ್‌ನಲ್ಲಿ ದಲಿತರಲ್ಲಿರುವ ಬಲಗೈ- ಎಡಗೈ ಸಮುದಾಯವನ್ನು ಒಟ್ಟಾಗಿ ತೆಗೆದುಕೊಂಡು ಹೋಗಲು ಅವರಿಂದ ಸಾಧ್ಯವಾಗಲಿಲ್ಲ.
ಹೀಗಿರುವಾಗ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಇರುವ ಗುಂಪುಗಾರಿಕೆಯನ್ನು ಸರಿಪಡಿಸುವುದು ಅದು ಹೇಗೆ ಸಾಧ್ಯ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಏಕೆಂದರೆ, ನೆಹರೂ ಪರಿವಾರದವರನ್ನು ಹೊರತು ಪಡಿಸಿ ಬೇರೆಯವರು ಕಾಂಗ್ರೆಸ್ ಅಧ್ಯಕ್ಷರಾದಾಗಲೆಲ್ಲಾ
ಅವರ ಮಾತನ್ನು ಪಕ್ಷದ ಯಾವ ಹಿರಿಯ ನಾಯಕರೂ ಕೇಳುವುದಿಲ್ಲ. ಹೀಗಾಗಿ ಪಕ್ಷದವರನ್ನು ಹಿಡಿದಿಟ್ಟುಕೊಳ್ಳಬೇಕಾದರೆ ಅವರು ಮತ್ತೆ ನೆಹರೂ ಪರಿವಾರದ ಅಂದರೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರನ್ನು ಅವಲಂಬಿಸಲೇ ಬೇಕು. ಹಾಗೆ ಕೆಲಸ ಮಾಡಿದರೆ ರಬ್ಬರ್ ಸ್ಟಾಂಪ್ ಎಂಬ ಹಣೆಪಟ್ಟಿ ಬಂದೇ ಬರುತ್ತದೆ.
ಆ ಹಣೆಪಟ್ಟಿ ಬಂದರೆ ಬಿಜೆಪಿಯನ್ನು ಎದುರಿಸುವುದು ಇನ್ನಷ್ಟು ಕಷ್ಟವಾಗಬಹುದು. ಇನ್ನು ರಾಜ್ಯದ ವಿಚಾರಕ್ಕೆ ಬಂದರೆ, ಎಐಸಿಸಿ ಅಧ್ಯಕ್ಷರಾಗಿ ಅವರು ರಾಜ್ಯ ಕಾಂಗ್ರೆಸ್ ಘಟಕವನ್ನು ನಿಯಂತ್ರಿಸಬಹುದಾದರೂ ನಾಯಕರನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಪ್ರಸ್ತುತ ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಬಣ ಮತ್ತು ಡಿ.ಕೆ.ಶಿವಕುಮಾರ್ ಬಣ ಎಂಬ ಎರಡು ಗುಂಪು ಗಳಿವೆ. ಈ ಎರಡೂ ಗುಂಪುಗಳಲ್ಲಿ ಇಲ್ಲದವರು ಇದೀಗ ಖರ್ಗೆಯವರ ಜತೆ ಸೇರಿ ಮೂರನೇ ಗುಂಪು ರಚಿಸಲು ಸಿದ್ಧರಾಗು ತ್ತಿದ್ದಾರೆ.
ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮೂರು ಬಣಗಳನ್ನು ಒಟ್ಟಾಗಿಸುವ ಜವಾಬ್ದಾರಿ ಇದೆ. ಇನ್ನು ಕೆಲವೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ಬರುತ್ತಿರುವುದರಿಂದ ಸಮಸ್ಯೆ ಬಗೆಹರಿಸಲು ಹೆಚ್ಚು ಸಮಯವೂ ಇಲ್ಲ. ಅಷ್ಟರಲ್ಲಾಗಲೇ ಖರ್ಗೆ ಬಣ ಈಗಾಗಲೇ ಚುನಾವಣೆ ಟಿಕೆಟ್ ಮೇಲೆ ಕಣ್ಣಿಟ್ಟಿದೆ. ಹೀಗಾಗಿ ವಿಧಾನಸಭೆ ಚುನಾವಣೆ ಟಿಕೆಟ್ ಹಂಚಿಕೆಯಲ್ಲಿ ಈ ಮೂರೂ ಬಣಗಳನ್ನು ಸಮಾಧಾನಪಡಿಸಬೇಕು. ಇಲ್ಲದಿದ್ದರೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಕಷ್ಟಕ್ಕೆ ಸಿಲುಕಬೇಕಾಗುತ್ತದೆ.
ಈ ಸಮಸ್ಯೆಯನ್ನು ಬಗೆಹರಿಸಿ ರಾಜ್ಯ ಕಾಂಗ್ರೆಸ್ಸನ್ನು ಒಮ್ಮತದಿಂದ ಮುಂದೆ ಕೊಂಡೊಯ್ಯುವಲ್ಲಿ ಖರ್ಗೆ ಯಶಸ್ವಿಯಾದರೆ ಎಐಸಿಸಿ ಅಧ್ಯಕ್ಷರಾಗಿ ಅವರು ಮೊದಲ ಯಶಸ್ಸು ಗಳಿಸಿದಂತೆ.
ಈ ಯಶಸ್ಸನ್ನೇ ಮುಂದಿಟ್ಟುಕೊಂಡು ರಾಷ್ಟ್ರ ಮಟ್ಟದಲ್ಲಿ ಪಕ್ಷವನ್ನು ಒಗ್ಗೂಡಿಸಬಹುದು. ಇಲ್ಲಿ ವಿಫಲವಾದರೆ ಅಲ್ಲೂ ಸಮಸ್ಯೆ ಎದುರಿಸಬೇಕಾಗಬಹುದು. ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್‌ನ ಭಿನ್ನಮತ ಬಗೆಹರಿಸುವಲ್ಲಿ ಖರ್ಗೆ ಕೈಗೊಳ್ಳುವ ನಿರ್ಧಾರದಿಂದ ಅವರ ಮುಂದಿನ ಯಶಸ್ಸು, ವೈಫಲ್ಯವನ್ನು ನಿರ್ಧರಿಸಬಹುದು.
ಲಾಸ್ಟ್ ಸಿಪ್: ರಬ್ಬರ್ ಸ್ಟ್ಯಾಂಪ್ ಆದರೂ ಪರವಾಗಿಲ್ಲ, ಪಕ್ಷವನ್ನೇ ಒರೆಸಿಹಾಕುವ ರಬ್ಬರ್ ಆಗದಿದ್ದರೆ ಸಾಕು.