Saturday, 23rd November 2024

ಅತಿರೇಕದ ಆದರ್ಶವಾದವೆಂಬ ವ್ಯಸನ !

ದಾಸ್ ಕ್ಯಾಪಿಟಲ್

dascapital1205@gmail.com

ಕೆಲವರಿಗೆ ಊರ ಮೇಲೆ ಊರು ಬಿದ್ದರೂ ಚಿಂತೆಯಿರುವುದಿಲ್ಲ, ತಮ್ಮದೇ ಆದ ಅತಿರೇಕದ ಶಿಸ್ತಿನ, ಆದರ್ಶದ ಬದುಕಿನ ಗುಂಗಿನಲ್ಲೇ ಇರುತ್ತಾರೆ. ಮಳೆ- ಚಳಿ-ಉರಿಬೇಸಗೆಯಿದ್ದರೂ ಮನೆಮಕ್ಕಳು ೫ ಗಂಟೆಗೇ ಎದ್ದು ಜಾಗಿಂಗಿಗೋ ವಾಕಿಂಗಿಗೋ ಹೋಗಲೇಬೇಕು, ಮೈಯಲ್ಲಿ ಜ್ವರವಿದ್ದರೂ ತಪ್ಪಿಸುವಂತಿಲ್ಲ!

ಇನ್ನು ಹೆಂಡತಿಯ ಕಥೆ ಕೇಳುವುದೇ ಬೇಡ. ಗಂಡ ಏಳುವ ಮುಂಚೆ ಅವನ ದಿನಚರಿಗೆ ಬೇಕಾಗುವುದೆಲ್ಲವನ್ನೂ ಸಿದ್ಧಪಡಿಸ ಬೇಕು. ಸ್ವಲ್ಪ ಆಚೀಚೆ ಯಾದರೂ ಇಂಥವರು ಸಿಡಿಮಿಡಿಗೊಳ್ಳುತ್ತಾರೆ. ೬ ಗಂಟೆಯೊಳಗೆ ನಿತ್ಯಕರ್ಮ ಗಳು ಮುಗಿಯಬೇಕು, ೭ ಗಂಟೆಗೆ ಕಾಫಿ/ಟೀ ಸಿದ್ಧವಾಗಲೇಬೇಕು, ಅಷ್ಟು ಹೊತ್ತಿಗೆ ನ್ಯೂಸ್ ಪೇಪರ್ ಮನೆಬಾಗಿಲಲ್ಲಿರಬೇಕು. ೮ ಗಂಟೆಗೆ ತಿಂಡಿ
ಯಾಗುವಷ್ಟರಲ್ಲಿ ಷೂ ಪಾಲಿಷ್ ಆಗಿದ್ದು, ಟೈ-ಬೆಲ್ಟ್ ರೆಡಿಯಿರಬೇಕು.

ನಂತರ ರೆಡಿಯಾಗಿ ಒಂಭತ್ತೂವರೆಗೆ ಕಚೇರಿಯಲ್ಲಿ ಎಲ್ಲರಿಗಿಂತ ಮುಂಚೆ ಹಾಜರಿರಲೇಬೇಕು. ಈ ಸಮಯದಲ್ಲೇ ಇಡೀ ಮನೆಯನ್ನು ಒರೆಸಿ ನೀಟಾಗಿಟ್ಟಿರಬೇಕು. ನಿತ್ಯಬಳಕೆಯ ವಸ್ತುಗಳು ಧೂಳಂಟದೆ ಥಳಥಳಿಸು ತ್ತಿರಬೇಕು. ಟೈಮಿಗೆ ಸರಿಯಾಗಿ ಊಟ-ನೀರು-ನಿದ್ರೆಯಾಗಲೇಬೇಕು. ಕಚೇರಿಯಿಂದ ಮನೆಗೆ ಬರುತ್ತಿದ್ದಂತೆ ಬಿಸಿಬಿಸಿ ಕಾಫಿ ಸಿದ್ಧವಾಗಿರಬೇಕು. ಮಕ್ಕಳು ಕೂಡ ಸಮಯಕ್ಕೆ ಸರಿಯಾಗಿ ಪ್ರತಿಯೊಂದು ಕೆಲಸವನ್ನೂ ಮುಗಿಸಿಕೊಳ್ಳಲೇಬೇಕು.

ಬೆಳಗ್ಗೆ ಏಳುವುದರಿಂದ ರಾತ್ರಿ ಮಲಗುವವರೆಗೆ ‘ಟೈಮ್ ಮೇಂಟೇನ್’ ಮಾಡಬೇಕು. ತಿಂಡಿ, ಊಟ, ಆಟಕ್ಕೆ, ಟಿವಿ ವೀಕ್ಷಣೆಗೆ ಅಂತ ಸಮಯ ನಿಗದಿಯಾಗಿರುತ್ತದೆ, ಅದರಂತೆ ನಡೆಯಬೇಕು. ಹೀಗೆ ನಿತ್ಯಬದುಕಿನ ಪ್ರತಿ ವ್ಯವಹಾರಕ್ಕೂ, ನಡೆಗೂ ಕಟ್ಟುನಿಟ್ಟು ಅಳವಡಿಸಿಕೊಂಡು ಬದುಕುವವರನ್ನು ನೋಡುತ್ತಿರುತ್ತೇವೆ. ಕಿಸೆಯಲ್ಲಿ 100 ರುಪಾಯಿ ಇಟ್ಟುಕೊಂಡು ತರಕಾರಿ ತರಲು ಹೋದವ, ಎಂಥ ಸಂದರ್ಭದಲ್ಲೂ ಅಷ್ಟನ್ನು ಮೀರಿ ತರಕಾರಿ ಖರೀದಿಸಲಾರ.

ಲೆಕ್ಕ ಅಂದ್ರೆ ಲೆಕ್ಕ. ವಾರಕ್ಕಿಷ್ಟು ರುಪಾಯಿ ತರಕಾರಿಗೆ, ದಿನಸಿಗೆ, ಕರೆಂಟ್‌ಬಿಲ್-ಹಾಲು-ಪೇಪರಿಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ, ಮನೆಖರ್ಚಿಗೆ ಅಂತ ಲೆಕ್ಕಹಾಕಿ ಜೀವನ ನಡೆಸುವವರು ಅಕಸ್ಮಾತ್ತಾಗಿ ಹೆಚ್ಚಿಗೆ ೧ ರುಪಾಯಿಯನ್ನು ಖರ್ಚುಮಾಡಲಾರರು. ಎಂಥ ಪರಿಸ್ಥಿತಿಯಲ್ಲೂ ಹಣ ಖರ್ಚುಮಾಡದವರಿದ್ದಾರೆ. ಇಷ್ಟೇ ರುಪಾಯಿಯ ನೋಟ್ ಬುಕ್ಸ್, ಹೊಸಬಟ್ಟೆ, ಹಬ್ಬ-ಹರಿದಿನ ಗಳಿಗೆ ಇಷ್ಟೇ ಖರ್ಚು ಅಂತ ಇಡೀವರ್ಷದ ಖರ್ಚುಗಳನ್ನು ಲೆಕ್ಕಹಾಕಿ ಸಮತೋಲನದಲ್ಲಿ ಬದುಕುವ ಅದೆಷ್ಟು ಜನರಿಲ್ಲ ಹೇಳಿ? ಸಂಪತ್ತಿನ ಗಳಿಕೆ ಮತ್ತು ವಿನಿಯೋಗದ ಬಗ್ಗೆ ಎಚ್ಚರವಿರಬೇಕೆನ್ನುವುದು ನೂರಕ್ಕೆ ನೂರು ಸತ್ಯ.

ಆದರೆ ಅದೇ ಕಾರಣಕ್ಕೆ ಬದುಕು ಗೋಳಾಗಬೇಕು ಅಂತೇನಿಲ್ಲವಲ್ಲ! ವ್ಯತ್ಯಯಗಳನ್ನು ಯಾವ ಬಗೆಯಲ್ಲೂ ಸ್ವೀಕರಿಸಲು ಸಿದ್ಧವಾಗಿರಬೇಕು. ಹಾಗಂತ ಬೇಕಾಬಿಟ್ಟಿ ಖರ್ಚುಮಾಡಿ ಬದುಕುವುದೂ ಕಷ್ಟ. ಅತಿರೇಕದ ಆದರ್ಶವನ್ನಿಟ್ಟುಕೊಂಡು ಬದುಕು ವುದು ಇನ್ನೂ ಕಷ್ಟ! ಇನ್ನು ಕೆಲವರಿಗೆ, ನಿದ್ರೆ, ಊಟ, ತಿಂಡಿ, ಕಚೇರಿ, ಕೆಲಸ ಎಲ್ಲದಕ್ಕೂ ಟೈಮ್!

ಒಂಚೂರೂ ವ್ಯತ್ಯಾಸ ವಾಗಲೇಬಾರದು. ಮನೆಯೊಳಗೆ-ಹೊರಗೆ ಕಸ ಕಾಣಲೇಬಾರದು; ಕಂಡರಂತೂ ಸಾಕ್ಷಾತ್ ದೂರ್ವಾಸರೇ ಆಗುತ್ತಾರೆ. ಬಟ್ಟೆಯನ್ನೂ ನೀಟಾಗಿ ಜೋಡಿಸಿಟ್ಟಿರಬೇಕು. ಟೇಬಲ್ ಮೇಲಿಟ್ಟ, ಕಪಾಟಿನಲ್ಲಿಟ್ಟ ವಸ್ತುಗಳು ಅಲುಗಬಾರರು. ಇಂಥವರನ್ನು ಆದರ್ಶವಾದಿಗಳು ಎನ್ನುವುದುಂಟು. ಧ್ಯೇಯಾದರ್ಶಗಳನ್ನಿಟ್ಟುಕೊಂಡ ಬದುಕು ಬೇರೆ, ಭೌತಿಕ ಆದರ್ಶವಾದ ಬೇರೆ.

ಭೌತಿಕ ಆದರ್ಶವಾದವು ಒಂಥರಾ ವ್ಯಸನ! ಮನೋವೈದ್ಯ ಕಾರ್ಲ್ ಯೂಂಗ್ ಪ್ರಕಾರ, ಎಲ್ಲ ತರಹದ ಚಟಗಳೂ ಕೆಟ್ಟದ್ದೇ ಆಗಿರುತ್ತವೆ. ಅದು ಡ್ರಗ್ಸ್ ಸೇವನೆ, ಕುಡಿತವಾಗಿರಬಹುದು ಅಥವಾ ಆದರ್ಶವಾದವೂ ಆಗಿರಬಹುದು. ಕಚೇರಿಯಲ್ಲಿ ಅತಿ ನಿಯತ್ತಾಗಿ ಕೆಲಸ ಮಾಡುವ ನೌಕರನೂ, ಮನೆಯಲ್ಲಿ ಆದರ್ಶಪತಿಯಾಗುವವನೂ ಒಂದು ರೀತಿಯಲ್ಲಿ ತೊಡಕೇ ಆಗಿರು ತ್ತಾನೆ. ಕೊನೆಕೊನೆಗೆ ಅವನ ಆದರ್ಶವಾದ ಇತರರಿಗೆ ಕಿರಿಕಿರಿಯಾಗಿ, ಹಿಂಸೆಯಾಗಿ ಕಾಣತೊಡಗುತ್ತದೆ.

ಸಂಶೋಧನೆಗಳ ಪ್ರಕಾರ, ಬದುಕಿನ ಎಲ್ಲದರಲ್ಲೂ ಪರಿಪೂರ್ಣತೆ ಬಯಸುವವರು ಮುಪ್ಪಿನಲ್ಲಿ ಅನಾರೋಗ್ಯಕ್ಕೆ ತುತ್ತಾಗು ತ್ತಾರೆ. ತಮ್ಮ ಆದರ್ಶವಾದದಿಂದ ಬಹುದೊಡ್ಡದನ್ನು ಸಾಧಿಸುವ ಹಂಬಲವಿರುವವರು ದೈಹಿಕ, ಮಾನಸಿಕ, ಮಾನವೀಯ ಸಂಬಂಧಗಳ ಸಮಸ್ಯೆಗೀಡಾಗುತ್ತಾರೆ. ಅಂದುಕೊಂಡಿದ್ದನ್ನು ಸಾಧಿಸುತ್ತಾರೋ ಇಲ್ಲವೋ ಆ ಮಾತು ಬೇರೆ; ಆದರೆ ಸತತ ಯತ್ನದಲ್ಲಿ ತಮ್ಮ ಲೋಪದೋಷಗಳನ್ನು ಇತರರಿಂದ ಮರೆಮಾಚಲು ಒಳಗೊಳಗೇ ಯತ್ನಿಸುತ್ತಾರೆ. ಇಂಥವರಲ್ಲಿ ನಕಾರಾ ತ್ಮತೆ ಅಂಟಿಕೊಂಡಿರುತ್ತದೆ.

ಒಬ್ಬ ‘ಕಟ್ಟರ್’ ಪ್ರಾಮಾಣಿಕನಿಗೆ ತನ್ನ ಪ್ರಾಮಾಣಿಕತೆಯ ಮೇಲೆ ಅತಿರೇಕದ ಅಭಿಮಾನ ಬೆಳೆದು ಮಾನವೀಯತೆಯ ಒರತೆ
ಬತ್ತಿಹೋಗಬಹುದು; ಇದು ಒಬ್ಬ ನಿಷ್ಠಾವಂತನಿಗೂ, ಕರ್ಮಠನಿಗೂ ಅನ್ವಯಿಸುತ್ತದೆ. ಈ ಪರಿಪೂರ್ಣತೆಯ ಹಪಾಹಪಿ ಇರುವವರಲ್ಲಿ ವಿಚಿತ್ರ ಏಕಮುಖಿ ಧೋರಣೆಗಳಿರುತ್ತವೆ. ಇಂಥವರ ಬದುಕು ಆಂತ ರ್ಯದಲ್ಲಿ ಸಂಕೀರ್ಣವಾಗಿರುತ್ತದೆ. ಪರಿಸ್ಥಿತಿ ಬಂದಹಾಗೆ ಒಪ್ಪಿ ಸ್ವೀಕರಿಸುವ ಔದಾರ್ಯ ನಶಿಸಿರುತ್ತದೆ.

ಬಿಕ್ಕಟ್ಟಿನ ಪರಿಸ್ಥಿತಿ ನಿಭಾಯಿಸುವ ತಾಕತ್ತು ಇವರಲ್ಲಿರುವುದಿಲ್ಲ. ಆದರ್ಶದ ಬೆನ್ನುಹತ್ತಿ ಪರಿಪೂರ್ಣತೆ ಸಾಧಿಸಲಾಗದೆ ಬದುಕಿ ನುದ್ದಕ್ಕೂ ತಳಮಳ, ಚಡಪಡಿಕೆ ಇವರನ್ನು ಕಾಡುತ್ತದೆ. ಇವರಲ್ಲಿ, ಪರಿಸ್ಥಿತಿ ತಮ್ಮ ನಿಯಂತ್ರಣದಲ್ಲೇ ಇರಬೇಕೆಂಬ ವಾಂಛೆ ಯಿರುತ್ತದೆ, ತಮ್ಮ ದೌರ್ಬಲ್ಯಗಳನ್ನು ಮುಚ್ಚಿಕೊಳ್ಳಲು ಇಲ್ಲ ದ್ದನ್ನು ಸೃಷ್ಟಿಸುವ ಕುಯುಕ್ತಿಯೂ ಇರುತ್ತದೆ. ತಮ್ಮಲ್ಲಿಲ್ಲದ
ಶಕ್ತಿ-ಸಾಮರ್ಥ್ಯ-ಪ್ರತಿಭೆ ಮತ್ತೊಬ್ಬರಲ್ಲಿರುವುದನ್ನು ಕಂಡರೆ ಇವರು ಸಹಿಸಲಾರರು. ಅವಸರದ ನಡೆಯಲ್ಲೂ ಇವರಲ್ಲೊಂದು ಉದ್ವೇಗ, ಆವೇಶವಿದ್ದು ಜತೆಯಲ್ಲಿದ್ದವರಿಗೂ ಅದು ಅನುಭವವಾಗುತ್ತವೆ.

ಇಂಥ ನಡೆಗಳು ದೇಹಾರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನುಂಟು ಮಾಡಿ, ಬಿಪಿ, ಮಧುಮೇಹ, ಅಸಿಡಿಟಿಗಳನ್ನೂ ಆಹ್ವಾನಿಸುತ್ತವೆ. ಖಿನ್ನತೆಯೂ ಬಾಧಿಸಬಹುದು, ಆಹಾರ ಸೇವನೆಯಲ್ಲೂ ವ್ಯತ್ಯಯ ಉಂಟಾಗಬಹುದು. ಆತ್ಮರತಿ ಯಾರಿಗೂ ಹಿತವಲ್ಲ. ಸಣ್ಣಸಣ್ಣ ವಿಷಯಗಳಿಗೂ ಅತಿಯಾಗಿ ಪ್ರತಿಕ್ರಿಯಿಸುವ, ಸ್ಪಂದಿಸುವ ಇಂಥವರಲ್ಲಿ ದೈಹಿಕ- ಮಾನಸಿಕ ಸ್ವಾಸ್ಥ್ಯಗಳೂ ಕುಸಿಯುತ್ತವೆ.

ಕ್ಷುಲ್ಲಕ ಅಸಂಗತಗಳಿಗೆ ಹೌಹಾರುವ ಇಂಥವರು ಸಾಽಸುವುದಾದರೂ ಏನನ್ನು ಎಂಬುದು ಪ್ರಶ್ನೆ. ಮಾನಸಿಕ ಸ್ಥಿಮಿತ ಕಳೆದುಕೊಂಡವರಾಗಿ ಎಲ್ಲರಂತೆ ಸಹಜನೆಲೆಯಲ್ಲಿ ಇವರು ಅಭಿವ್ಯಕ್ತಿಸಲಾರರೆಂಬುದನ್ನು ಸಮಾಜ ಗುರುತಿಸುತ್ತದೆ. ಇವರು ತಮ್ಮ ವರ್ಚಸ್ಸು ಕಾಯ್ದುಕೊಳ್ಳುವಲ್ಲಿ ಬದುಕಿನುದ್ದಕ್ಕೂ ಹೆಣಗುತ್ತಾರೆ. ಅತಿಯಾದ ಆದರ್ಶವಾದ ಮತ್ತು ಶುದ್ಧ ಕರ್ಮಠತನ ದಲ್ಲಿ ಯಾವ ಅಂತರವೂ ಇಲ್ಲವೇನೋ! ಬದುಕು ಯಾವ ಹಂತದಲ್ಲೂ ಕರ್ಮಠವಾಗಬಾರದು.

ಇಷ್ಟವಿಲ್ಲದ ಕೆಲಸಗಳನ್ನು ಮಾಡದೆ ಇರಬಹುದು; ಆದರೆ ಬಿಡುವುದೇ ಒಂದು ಚಟವಾಗಬಾರದು! ಪ್ರತಿಯೊಂದರಲ್ಲೂ ಅತಿಆದರ್ಶವನ್ನು ಹುಡುಕುತ್ತ ಅಥವಾ ಕಟ್ಟಿಕೊಳ್ಳುತ್ತ ಹೋದರೆ, ಮನುಷ್ಯ ಸಂಬಂಧಗಳು ಸಹಜವಾಗಿರುವುದಿಲ್ಲ.
ಪ್ರತಿಯೊಂದರಲ್ಲೂ ‘ಶಿಸ್ತು’ ಅಂತ ಬದುಕಿನುದ್ದಕ್ಕೂ ಗುದುಮುರಿಯುವ ಇಂಥವರು ಹೆಂಡತಿ-ಮಕ್ಕಳನ್ನು ಗೋಳುಹೊಯ್ದು ಕೊಳ್ಳುತ್ತಾರೆ. ‘ಅದು ಸರಿಯಿಲ್ಲ, ಇದು ಹಾಗಿರಬೇಕಿತ್ತು’ ಎಂಬ ವರಾತದಲ್ಲಿ ತಮ್ಮಿಂದಾಗುವ ಹಿಂಸೆಗಳ ಬಗೆಗಿನ ಪಶ್ಚಾತ್ತಾಪ ವೇ ಇವರಲ್ಲಿ ಸತ್ತುಹೋಗಿರುತ್ತದೆ.

ಮುಂಜಾನೆ ಬೇಗ ಎದ್ದು ಜಾಗಿಂಗ್ ಮಾಡುವ, ಸ್ನಾನ ಮಾಡಿ ಪೂಜೆ ಮುಗಿಸಿ ಪೇಪರ್ ಓದಿ, ‘ತಿಂಡಿ ಮಾಡಿಕೊಡೇ,
ಬಟ್ಟೆ ತೊಳೆದುಕೊಡೇ’ ಎಂದು ಅಬ್ಬರಿಸುವುದನ್ನೇ ‘ಡಿಸಿಪ್ಲೀನ್’ ಎನ್ನುವ ಇಂಥವರಿಗೆ ‘ಡಿಸಿಪ್ಲೀನ್’ಗೂ ಮುಂಚೆ ‘ಡಿಸೈಪಲ್’ ಎಂಬ ಪದ ಇದೆಯೆಂದು ಗೊತ್ತೇ ಇರುವುದಿಲ್ಲ.

ಇಸ್ತ್ರಿ ಮಾಡಿದ ಪ್ಯಾಂಟು-ಶರ್ಟುಗಳನ್ನು ನೀಟಾಗಿ ಧರಿಸಿ, ಟೈ-ಬೆಲ್ಟ್ ಕಟ್ಟಿಕೊಂಡು, ಪಾಲಿಷ್ ಮಾಡಿದ ಷೂ ಧರಿಸಿ
ಸಮಯಕ್ಕೆ ಸರಿಯಾಗಿ ಕಚೇರಿಗೆ ತೆರಳಿ, ತನ್ನದೆಷ್ಟುಂಟೋ ಅಷ್ಟೇ ಕೆಲಸ ಮಾಡಿಕೊಂಡು, ಸ್ವಲ್ಪವೂ ಆಚೀಚೆ ತಿರುಗದೆ
ಯಾರನ್ನೂ ಮಾತಾಡಿಸದೆ, ಸಂಜೆ ಸೀದಾ ಮನೆಗೆ ಬರುವವನ ಆದರ್ಶದಿಂದೇನು ಲಾಭ? ಅಂಥವನು ನಿರುಪಯುಕ್ತ.
ಯಾರೇ ಆದರೂ ಬದುಕಿನ ಗತಿಬಿಂಬಕ್ಕೆ ಇಳಿಯಬೇಕು, ಓದಬೇಕು, ಹಾಸ್ಯಪ್ರಜ್ಞೆ ಬೇಕು.

ಒಂದು ಸಣ್ಣಸಿಟ್ಟು, ಜಗಳ, ಪ್ರೀತಿ, ಮತ್ತೊಬ್ಬರಿಗೆ ಚೂರು ಆಸರೆ, ಸಾಂತ್ವನ ಕೊಡದ ಆದರ್ಶದ ಬದುಕನ್ನು ಕಟ್ಟಿಕೊಂಡೇನು ಮಾಡಲಾದೀತು? ಒಂದು ಸಾಂದರ್ಭಿಕ ಸಣ್ಣ ತಮಾಷೆ, ವಿನೋದಕ್ಕೂ ಅವಕಾಶವಿಲ್ಲದವನು, ಪ್ರತಿಹಂತದಲ್ಲೂ ಮುಸಿಮುಸಿ ಅನ್ನುವವನು ಬದುಕಿನಲ್ಲಿ ಯಾವ ಆದರ್ಶ ಇಟ್ಟುಕೊಂಡೇನು ಪ್ರಯೋಜನ? ಮಕ್ಕಳೊಂದಿಗಿರುವಾಗ ಅವರ ಮುಗ್ಧತೆಯನ್ನು ಅಪ್ಪಿದ ಅಪ್ಪನಾಗಬೇಕು, ಹೆಂಡತಿಗೆ ಪ್ರೀತಿಯನ್ನು ಮೊಗೆದು ಕೊಡುವ ಗಂಡನಾಗಬೇಕು, ಸಮಾಜಕ್ಕೆ ಸಭ್ಯ ಗೃಹಸ್ಥನಾ ಗಬೇಕು.

ಕೆಲಸಕ್ಕೆ ಬಾರದ ಆದರ್ಶವಿಟ್ಟುಕೊಂಡು ತನ್ನವರಿಂದಲೇ ಉಪೇಕ್ಷೆಗೆ ಒಳಪಡುವ ಗಂಡಸು ಮಾಡುವುದಾದರೂ ಏನನ್ನು? ಗೆಲ್ಲುವುದಾದರೂ ಯಾರನ್ನು, ಯಾವುದನ್ನು? ನಾಲ್ಕು ಜನರೆದುರು ಆದರ್ಶದ ಸೋಗಿನಲ್ಲಿ ವ್ಯವಹರಿಸುವ ಹೆಂಗಸು, ಒಳಬದುಕಿನಲ್ಲಿ ದಾರಿತಪ್ಪಿದ ಗಂಡಸಿನಂತಿರುವುದನ್ನು ನೋಡಿದ್ದೇನೆ. ಗಂಡಸು ಸಭ್ಯತೆಯನ್ನು ಮೀರಬಾರದು, ಮಾತೂ ಆಡಬಾರದು. ಆದರೆ ಹೆಂಗಸೊಬ್ಬಳು ಬೀದಿಯಲ್ಲಿ ನಿಂತು ಗಂಡಸನ್ನು, ಗಂಡನನ್ನು ಹೀಯಾಳಿಸಿದರೆ ಅವಮಾನಿಸಿ ಮಾತನಾಡಿದರೆ ಅದು ಕುಡಿದು ರೇಗಾಡುವ ಗಂಡಸಿಗಿಂತಲೂ ಅಸಹ್ಯ ಹುಟ್ಟಿಸುವಂಥದ್ದು.

ಗಂಡಾಗಲಿ ಹೆಣ್ಣಾಗಲಿ ಅಗ್ಗವಾಗಿ ವರ್ತಿಸಬಾರದೆಂದು ಈ ಸಮಾಜ ಬಯಸುತ್ತದೆಂಬುದು ನೂರಕ್ಕೆ ನೂರು ಸತ್ಯ! ಗಂಡ ನಾದವ ಅತಿರೇಕದ ಆದರ್ಶವಾದಿಯಾದರೆ ಯಾವ ಹೆಂಗಸೂ ಸಹಿಸಲಾರಳು. ಸಂಬಂಧದೊಂದಿಗೆ, ಮನೆಮಕ್ಕಳೊಂದಿಗೆ ಬೆರೆಯದ ಗಂಡಿನ ಬಗ್ಗೆ ಹೆಣ್ಣು ಅಂತರಂಗದಲ್ಲಿ ಯಾವ ಭಾವವನ್ನೂ ತಾದಾತ್ಮ್ಯವನ್ನೂ ಜೀವಂತವಾಗಿ ಉಳಿಸಿಕೊಳ್ಳಲಾರ ಳೇನೋ! ಇಂಥವರಿಂದ ಮಾನಸಿಕ ಸಂತೋಷ ಸಿಗಲಾರದು.

ಎಲ್ಲವೂ ತಮ್ಮ ನಿಯಂತ್ರಣದಲ್ಲೇ ಇರಬೇಕೆನ್ನುವ ಇವರು ತೀರಾ ನೋವನುಭವಿಸುತ್ತಾರೆ. ಹೆಂಡತಿ-ಮಕ್ಕಳನ್ನೂ ಪ್ರೀತಿಸಲು ಇವರಿಗೆ ಸಾಧ್ಯವಾಗುವುದಿಲ್ಲ. ಅಭಿವ್ಯಕ್ತಿಗಳೂ ಕೃತಕವಾಗಿ, ಪ್ರೀತಿಯ ಮೇಲೂ ಸಂಶಯ ಹುಟ್ಟುತ್ತದೆ. ಎಲ್ಲರನ್ನೂ ಎಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಂಡಿದ್ದೇನೆಂಬ ಭ್ರಮೆಯಿಂದ, ಅತಿರೇಕದ ಆದರ್ಶದ ಗುಂಗಿನಿಂದ ಇಂಥವರು ಹೊರಬರಲಾರದೆ, ತಾವೂ ವ್ಯಸನಿಯಾಗಿ ಇತರರನ್ನೂ ವ್ಯಸನಿಯಾಗಿಸುತ್ತಾರೆ.

ನೆನಪಿಡಿ: ಹಾಗಂತ ಯಾವ ಆದರ್ಶವೂ ಇಲ್ಲದ ಬದುಕು ಕೂಡ ಒಂಥರ ವ್ಯಸನವೇ!