Saturday, 23rd November 2024

ಕ-ಕಾರ ಕವನದಲಿ ಕಡೆತನಕ ಕಂಗೊಳಿಪ ಕನ್ನಡದ ಕಂಪು

ತಿಳಿರುತೋರಣ

srivathsajoshi@yahoo.com

ಅಕ್ಷರಾಣಾಂ ಅಕಾರೋಧಿಸ್ಮಿ ಎಂದು ಹೇಳಿದ್ದಾನೆ ಗೀತಾಚಾರ್ಯ ಶ್ರೀಕೃಷ್ಣ, ಭಗವದ್ಗೀತೆಯ ಹತ್ತನೆಯ ಅಧ್ಯಾಯ ವಿಭೂತಿ ಯೋಗದಲ್ಲಿ. ಅಕ್ಷರಗಳ ಪೈಕಿ ತಾನು ಅ ಆಗಿದ್ದೇನೆ ಎಂದು ಅದರ ಅರ್ಥ.

ಅಷ್ಟು ಮಾತ್ರವಲ್ಲ, ಭಗವದ್ಗೀತೆಯ ಒಟ್ಟು 700 ಶ್ಲೋಕಗಳ ಪೈಕಿ 97 ಶ್ಲೋಕಗಳು ಶುರುವಾಗುವುದು ಅ ಅಕ್ಷರದಿಂದಲೇ! ಅಷ್ಟಾಗಿ ಅದನ್ನೆಲ್ಲ ಕೇಳಿಸಿಕೊಂಡವನೂ ಅರ್ಜುನನೇ ತಾನೆ! ಅ ಅಕ್ಷರದ ಹುಚ್ಚು ನನಗೂ ಹಿಡಿದಿರುವುದರಿಂದಲೇ ನಾನು ತಿಳಿರುತೋರಣ ಅಂಕಣದಲ್ಲಿ ಇದುವರೆಗಿನ ಎಲ್ಲ 350 ಲೇಖನಗಳನ್ನೂ, ಈ ವಾರದ್ದನ್ನೂ, ಅ ಅಕ್ಷರದಿಂದಲೇ ಆರಂಭಿಸಿದ್ದೇನೆ.

ಅದಿರಲಿ, ಕೃಷ್ಣ ಪರಮಾತ್ಮನೇನಾದರೂ ಭಗವದ್ಗೀತೆಯನ್ನು ಕನ್ನಡದಲ್ಲಿ ಬೋಧಿಸಿರುತ್ತಿದ್ದರೆ ‘ಅಕ್ಷರಗಳ ಪೈಕಿ ನಾನು ಕ ಆಗಿದ್ದೇನೆ’ ಎನ್ನುತ್ತಿದ್ದನೇ ನೋ! ಯಾಕೆ ಹೇಳಿ? ‘ಕನ್ನಡ’ದಲ್ಲಿ ಮೊದಲ ಅಕ್ಷರ ಕ. ‘ಕರ್ನಾಟಕ’ ದಲ್ಲಂತೂ ಮೊದಲ ಮತ್ತು ಕೊನೆಯ ಅಕ್ಷರವೂ ಕ! ಅಷ್ಟಿದೆ ಕ ಅಕ್ಷರದ ವ್ಯಾಪ್ತಿ, ವಿಸ್ತಾರ ಮತ್ತು ವೈಶಿಷ್ಟ್ಯ. ಕಣ್ಣು ಬೇಕು ಅದನ್ನು ಸೂಕ್ಷ್ಮವಾಗಿ ಗಮನಿಸ ಲಿಕ್ಕೆ ಅಷ್ಟೇ.

ನನಗಿದರ ವಿಶ್ವರೂಪ ದರ್ಶನವಾದದ್ದು ಮೂರು ವಾರಗಳ ಹಿಂದೆ ಎಲ್ಲಿಟರೇಷನ್ ಅಥವಾ ಅನುಪ್ರಾಸದ ಬಗ್ಗೆ ಬರೆದಿದ್ದ ಅಂಕಣಬರಹಕ್ಕೆ ಪ್ರತಿಕ್ರಿಯಿಸುತ್ತ ಒಂದಿಬ್ಬರು ಓದುಗರು ಪರಿಚಯಿಸಿದ ಕ-ಕಾರ ಕವನದಲ್ಲಿ. ಅದೇನು ನಾಲ್ಕಾರು ಸಾಲುಗಳ ಪುಟಗೋಸಿ ಕವಿತೆಯಲ್ಲ, ತಲಾ ನಾಲ್ಕು ಸಾಲುಗಳ ಹದಿನೆಂಟು ಚೌಪದಿಗಳಿರುವ ಬೃಹತ್ ಕಾವ್ಯ. ಪ್ರತಿ ಸಾಲಿನ ಪ್ರತಿ ಯೊಂದು ಪದವೂ ಕ-ಕಾರದಿಂದಲೇ ಆರಂಭ. ಅದೂ ಹೇಗೆಂದರೆ ಪದಗಳನ್ನು ಒತ್ತಾಯದಿಂದ ತಂದು ಕೂರಿಸಿದ್ದೆಂದು ಎಲ್ಲೂ ಅನಿಸುವುದಿಲ್ಲ.

ಎಲ್ಲವೂ ಸಹಜವಾಗಿ, ಅರ್ಥಗರ್ಭಿತವಾಗಿ, ಭಾವನಾತ್ಮಕವಾಗಿ, ಕನ್ನಡಿಗರಿಗೆಲ್ಲ ಅಭಿಮಾನ ಉಕ್ಕೇರುವಂತೆ ಮೂಡಿ ಬಂದಿರುವ ಅದ್ಭುತ ರಚನೆ. ಕುವೆಂಪು ಬರೆದ ‘ಕನ್ನಡಕೆ ಹೋರಾಟು ಕನ್ನಡದ ಕಂದ…’ ಜೋಗುಳದ ಹರಕೆ ಕವಿತೆ ಕನ್ನಡದ ಕಂದನನ್ನು ಉದ್ದೇಶಿಸಿದ್ದಾದರೆ ಈ ಕವನವು ಸಂಬೋಽಸುತ್ತಿರುವುದು ಕನ್ನಡದ ಕೂಸನ್ನು. ಕ-ಕಾರ ಕವನ ಬರೆದ ಕವಯಿತ್ರಿಯ ಹೆಸರು ಶೀಲಾ ಅರಕಲಗೂಡು. ಅವರು ಇದನ್ನು ಹಂಚಿಕೊಂಡಿದ್ದ ‘ಸಸಕಸ’ (ಸಮನ್ವಯ ಸಮಿತಿ ಕನ್ನಡವೇ ಸತ್ಯ) ಗ್ರೂಪಲ್ಲಿ ನಾನಿಲ್ಲವಾದ್ದರಿಂದ ಈಮೊದಲು ನನ್ನ ಗಮನಕ್ಕೆ ಬಂದಿರಲಿಲ್ಲ.

ಮಾತ್ರವಲ್ಲ, ಶೀಲಾ ಅವರೊಡನೆ ಬೇರಾವ ಸಂದರ್ಭದಲ್ಲೂ ವಿಚಾರ ವಿನಿಮಯ ಮಾಡಿದ್ದ ನೆನಪು ನನಗಿರಲಿಲ್ಲ. ಆದರೆ
ಯಾವಾಗ ಅವರು ಮೈಸೂರಿನಲ್ಲಿರುವ ರಘುರಾಮ ಅರಕಲಗೂಡು ಅವರ ಒಡಹುಟ್ಟಿದ ತಂಗಿ ಎಂದು ನನಗೆ ಗೊತ್ತಾ ಯಿತೋ ಆಗ ತತ್‌ಕ್ಷಣ ‘ಅರಗಣೆ ಮುದ್ದೆ ಅಭಿಮಾನಗಳ ಬಳಗ’ ನೆನಪಾಯ್ತು; ಶೀಲಾ ಅವರು ಏಕ್‌ದಂ ಆತ್ಮೀಯರೇ
ಆಗಿಬಿಟ್ಟರು! ಏನಿದು ಅರಗಣೆ ಮುದ್ದೆ ಅಭಿಮಾನಿಗಳ ಬಳಗ ಅಂತೀರಾ? ಎರಡು ವರ್ಷಗಳ ಹಿಂದೆ ಒಮ್ಮೆ ತಿಳಿರು ತೋರಣ ದಲ್ಲಿ ಪಂಜೆ ಮಂಗೇಶರಾಯರ ಮಕ್ಕಳ ಕಥೆಗಳು ಪುಸ್ತಕದ ಬಗ್ಗೆ ಬರೆದಾಗ ನನಗೆ ಈ ಬಳಗ ಪರಿಚಯವಾದದ್ದು.

ಪಂಜೆಯವರು ಬರೆದ ಕಥೆಗಳಲ್ಲಿ ಅರಗಣೆ ಮುದ್ದೆ ಅತ್ಯಂತ ಜನಪ್ರಿಯ ಮತ್ತು ಪ್ರಖ್ಯಾತ. ಆ ಕಥೆ ಕೇಳುತ್ತ ದೊಡ್ಡವರಾದ ಕನ್ನಡಿಗರು ಅದೆಷ್ಟೋ! ಅಂಕಣಬರಹವನ್ನೋದಿದ ಬೆಂಗಳೂರಿನ ಶಾರದಾ ಮೂರ್ತಿ ಅವರು ನನಗೆ ಮೈಸೂರಿನ ರಘುರಾಮ-ರೋಹಿಣಿ ದಂಪತಿಯನ್ನು ಪರಿಚಯಿಸಿದರು. ರಘುರಾಮರ ತಂದೆ ಅನಂತರಾಮಯ್ಯನವರು ಮೊಮ್ಮಕ್ಕಳಿಗೆಲ್ಲ ಅರಗಣೆ ಮುದ್ದೆ ಕಥೆಯನ್ನು ರಂಜನೀಯವಾಗಿ ಹೇಳುತ್ತಿದ್ದವರು.

ಅಜ್ಜನಿಗೆ 90 ವರ್ಷ ತುಂಬಿದ ಸಡಗರವನ್ನು ಆ 12 ಮಂದಿ ಮೊಮ್ಮಕ್ಕಳು ಕೌಟುಂಬಿಕ ಸಮ್ಮಿಲನವಾಗಿ ಆಚರಿಸಿದ್ದರಂತೆ. ಮುಂದಿನಿಂದ ಅನಂತರಾಮಯ್ಯನವರ ಫೋಟೊ, ಹಿಂದೆ ಬೆನ್ನಮೇಲೆ ‘ಅರಗಣೆ ಮುದ್ದೆ ಫ್ಯಾನ್ಸ್ ಕ್ಲಬ್’ ಎಂದು ಪ್ರಿಂಟ್ ಮಾಡಿಸಿದ ಬಿಳಿ ಟಿ-ಶರ್ಟ್‌ಗಳನ್ನು ಆವತ್ತು ಎಲ್ಲರೂ ಧರಿಸಿ ಸಂಭ್ರಮಿಸಿದ್ದರಂತೆ. ಆ ಟಿ-ಶರ್ಟ್‌ನ ಚಿತ್ರವನ್ನೂ, ಅನಂತ ರಾಮಯ್ಯನವರ ಧ್ವನಿಯಲ್ಲಿ ಅರಗಣೆ ಮುದ್ದೆ ಕಥೆಯ ಆಡಿಯೊವನ್ನೂ ಶಾರದಾ ಮೂರ್ತಿ ನನಗೆ ಕಳುಹಿಸಿದ್ದರು.

ಆಮೇಲೆ ರಘುರಾಮರು ತನ್ನ ತಂದೆಯ ಬಗ್ಗೆ ಮತ್ತಷ್ಟು ವಿವರಗಳನ್ನು- ಮೈಸೂರಲ್ಲಿ ಹುಟ್ಟಿಬೆಳೆದು ಇಂಟರ್‌  ಮೀಡಿಯಟ್‌ ವರೆಗೆ ಓದಿ ಆಮೇಲೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಕುಲಪತಿಯಾಗಿದ್ದ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಬಿಎಸ್‌ಸಿ ಪದವಿ ಪಡೆದದ್ದು, ದಾವಣಗೆರೆಯಲ್ಲಿ ಕಾರ್ಖಾನೆಗಳಲ್ಲಿ ಸೇವೆ ಸಲ್ಲಿಸಿದ್ದು, ಬಹುಕಾಲ ಅಲ್ಲೇ ಇದ್ದು ಬಾಳಸಂಜೆಯಲ್ಲಿ ಬೆಂಗಳೂರು ಸೇರಿದ್ದು, ಬದುಕಿಡೀ ಎಲ್ಲರಿಗೂ ಖುಷಿಯನ್ನೇ ಹಂಚಿದ್ದು ಇತ್ಯಾದಿ- ನನಗೆ ತಿಳಿಸಿದರು. ಅಂತಹ ಅನಂತ ರಾಮಯ್ಯನವರ ಸುಪುತ್ರಿ ಶೀಲಾ ಅರಕಲಗೂಡು!

ಮೊದಲಿಗೆ, ಕ-ಕಾರ ಕವನದ ಪೂರ್ಣ ಸಾಹಿತ್ಯವನ್ನು ಇಲ್ಲಿ ನಿಮ್ಮ ಓದಿಗೆ ಒದಗಿಸುತ್ತೇನೆ. ಇದನ್ನು ನಾನು ಯಾವ್ದೋ ಒಂದು
ಕವನದ ಪ್ರಚಾರಕ್ಕೆಂದೋ, ಅಂಕಣವನ್ನು ಹೇಗಾದರೂ ತುಂಬಿಸಲಿಕ್ಕೆಂದೋ ಮಾಡುತ್ತಿಲ್ಲ. ಇದು ‘ಅಂಕಣದಲ್ಲಿ ಉಲ್ಲೇಖ ವಾಗಿ ಕವನಕ್ಕೆ ಗೌರವ ಸಿಕ್ಕಿತು’ ಅಲ್ಲ, ‘ಇಂತಹ ವಿಶಿಷ್ಟ ಕವನ ಪ್ರಕಟವಾಗಿ ಅಂಕಣಕ್ಕೆ ಘನತೆ-ಗೌರವ ಸಿಕ್ಕಿತು’ ಎಂದಾಗು ತ್ತಿರುವುದು ಅಂತ ನಾನಂದುಕೊಳ್ಳುತ್ತೇನೆ. ಸರಿ, ಕವನ ಓದಿಕೊಳ್ಳಿ, ಆಮೇಲೆ ಇದರ ಬಗ್ಗೆ ಇನ್ನಷ್ಟು ಹೇಳುವುದಿದೆ.

ಕನ್ನಡವ ಕಲಿಯುತಿರು ಕನ್ನಡದ ಕಂದನೇ ಕನ್ನಡವೆ ಕಾಯುವುದು ಕಾಪಿಡುವುದಂತೆ ಕನ್ನಡಕೆ ಕಂಪುಂಟು ಕನ್ನಡಕೆ ಕಳೆಯುಂಟು ಕನ್ನಡದಿ ಕಲಿತಾಡು ಕೂಸೆ ಕಣ್ಮಣಿಯೆ ||೧||

ಕನ್ನಡದ ಕೈಂಕರ್ಯ ಕಡುಭಾಗ್ಯ ಕಂಡವಗೆ ಕಾತರದಿ ಕಾದಿದ್ದು ಕಲಿಯುವಾತಂಗೆ ಕರ್ತಾರ ಕಸವರವ ಕೈತುಂಬಿ ಕೊಟ್ಟಂತೆ
ಕೊಡುತಿಹುದು ಕನ್ನಡವು ಕೈಚಾಚು ಕೂಸೆ ||೨||

ಕೇಳಿದ್ದು ಕೊಡುವಂಥ ಕಲ್ಪತರು ಕನ್ನಡವು ಕರುನಾಡಲಿರುವವರು ಕಲಿಯಬೇಕಿದನು ಕಲಿತಷ್ಟು ಕಡಲಾಳ ಕಂಡಷ್ಟು ಕೋಮಲತೆ ಕಲಿಯುವೆಯ ಕಾಣುವೆಯ ಕರುನಾಡ ಕೂಸೆ? ||೩||

ಕೋಟೆ ಕೊತ್ತಲವಿಹುದು ಕಡಲು ಕಂದಕವಿಹುದು ಕಾಡು ಕಟ್ಟಡ ಕಿಲ್ಲೆ ಕಾಣಲಿಲ್ಲುಂಟು ಕಾವೇರಿ ಕಣಿವೆಯನು ಕರ್ದಮಿತ ಕವಲನ್ನು ಕಾಂಬಾಸೆ ಕನಸಲ್ಲು ಕೇಳೆನ್ನ ಕೂಸೆ ||೪||

ಕಪಿಲೆನದಿ ಕೊಡಚಾದ್ರಿ ಕಾಡುಮಲೆ ಕಡಲಾಮೆ ಕೊಲ್ಲೂರು ಕಾಗಿನೆಲೆ ಕೃಷ್ಣೆ ಕಾವೇರಿ ಕೋಲಾರ ಕುಪ್ಪಳ್ಳಿ ಕೊಡಗು ಕಾಕನಕೋಟೆ ಕರ್ನಾಟಕದ ಕಳಸ ಕಾಣೋಣ ಕೂಸೆ ||೫||

ಕಾರ್ಮೋಡ ಕಾರಿರುಳು ಕರಿನೆರಳು ಕಪ್ಪುಂಟು ಕಪ್ಪೇನು ಕಸವಲ್ಲ ಕರಿಕೃಷ್ಣ ಕಾಂತಿ ಕಸ್ತೂರಿ ಕಪ್ಪಂತೆ ಕಾರ್ಮುಗಿಲು ಕರಿಯಂತೆ ಕಾಳಿಂಗ ಕೃಷ್ಣನಿಗೆ ಕರಮುಗಿವ ಕೂಸೆ ||೬||

ಕಾಡಿನಲಿ ಕೇಸರವು ಕಾಡಾನೆ ಕಿರುಬಗಳು ಕಾಡು ಕೋಣಗಳುಂಟು ಕೀಶ ಕರಡಿಗಳು ಕರಿಜಾಲಿ ಕಲ್ಗರಿಗೆ ಕಾಸರಕ ಕೋಡಸಿಗ ಕಾಡಿನಲಿ ಕಾಣುವುವು ಕಾಣಿಸಿತೆ ಕೂಸೆ? ||೭||

ಕ್ರಿಮಿ ಕೀಟಗಳ ಕೂಟ ಕಾಣಬಹುದೆಲ್ಲೆಡೆಯು ಕೀಚಕ್ಕಿ ಕೋಗಿಲೆಯು ಕುರವಿ ಕೆಂಜಿರುವೆ ಕೋಳಿ ಕುಕ್ಕುಟವುಂಟು ಕುರಿ ಕರುಗಳಿಲ್ಲುಂಟುಕಾಣುವೆಯ ಕಣ್ಬಿಟ್ಟು ಕೂಸೆನ್ನ ಕೂಸೆ? ||೮||

ಕಮಲ ಕನಕಾಂಬರದ ಕುಸುಮ ಕುಲವಿಹುದಿಲ್ಲಿ ಕಾಮಲತೆ ಕೇದಗೆಯು ಕೆಂಗುಲಾಬಿಗಳು ಕಣಗಿಲೆಯು ಕಾಕಡವು ಕಿಲಕಿಲನೆ ಕಿಸಿಯುತಿರೆ ಕುಳಿತು ಕಾಣೋಣವನು ಕುಳಿತುಕೋ ಕೂಸೆ ||೯||

ಕೈಕಾಲು ಕಣ್ಣುಗಳು ಕಿವಿ ಕೆನ್ನೆ ಕೇಶಗಳು ಕುತ್ತಿಗೆಯು ಕರುಳುಗಳು ಕಲಿಜ ಕೀಲುಗಳು ಕಾಳ್ಕಡ್ಡಿ ಕೂಳಿಗಿದೆ ಕುಡಿಯಲಿಕೆ ಕೆನೆಹಾಲು ಕಾಯ ಕೇವಲವಲ್ಲ ಕರುಳಕುಡಿ ಕೂಸೆ ||೧೦||

ಕಾಲ್ಗೆಜ್ಜೆ ಕೇಯೂರ ಕೈಬಳೆಗೆ ಕಂಕಣವು ಕಾಲ್ಗಡಗ ಕಿವಿಯೋಲೆ ಕಂಠಿ ಕುತ್ತಿಗೆಗೆ ಕಣ್ಕಪ್ಪು ಕಣ್ಗಳಿಗೆ ಕಟಿಗುಂಟು ಕಟಿಬಂಧ
ಕಿಂಕಾಪು ಕಾಯಕ್ಕೆ ಕೊಡುತಿರುವೆ ಕೂಸೆ ||೧೧||

ಕೆಲವು ಕಸುಬುಗಳಿಹವು ಕರಕುಶಲ ಕರ್ಮಗಳು ಕ್ಷೌರಿಕರು ಕೃಷಿಕಾರ ಕುರಿಕಾಯ್ವ ಕುರುಬ ಕುಂಬಾರ ಕಲ್ಕುಟಿಗ ಕಾರ್ಮಿಕರು ಕರಣಿಕರು ಕರುನಾಡಿಗಾಗಿವರು ಕೊಂಡಾಡು ಕೂಸೆ ||೧೨||

ಕಜ್ಜಾಯ ಕರದಂಟು ಕೋಡುಬಳೆ ಕಾಕಂಬಿ ಕೋಸಂಬರಿಗಳಿಹವು ಕುರುಕಲಿಕೆ ಕಾಳು ಕೂಟು ಕಷಾಯಗಳಿವೆ ಕಡುಬು ಕಲಸನ್ನವಿದೆ ಕೂಳಿದುವೆ ಕಾಯಕ್ಕೆ ಕುಳಿತುಣ್ಣು ಕೂಸೆ ||೧೩||

ಕೆಲವುಂಟು ಕ್ರೀಡೆಗಳು ಕೋಲಾಟ ಕಲ್ಲಾಟ ಕಬಡಿ ಕಾಲ್ಚೆಂಡಾಟ ಕುಂಟಾಟ ಕೂಟ ಕವಡೆ ಕಣ್ಮುಚ್ಚಾಲೆ ಕೇರಮ್ಮು ಕುಸ್ತಿಗಳು
ಕೀಲ್ಗೊಂಬೆ ಕಥೆಯಾಟ ಕುಣಿದಾಡು ಕೂಸೆ ||೧೪||

ಕಾವ್ಯಗಳು ಕಥನಗಳು ಕಾದಂಬರಿಯ ಕೋಠಿ ಕವಿಗೋಷ್ಠಿ ಕಿರುಚಿತ್ರ ಕರುನಾಡ ಕವಿತೆ ಕವಿ ಕೋವಿದರ ಕಥನ ಕಲಾವಿದರುಗಳ ಕಲೆ ಕೋರೈಸುವಂತಿಹುದು ಕುಳಿತೋದು ಕೂಸೆ ||೧೫||

ಕಬ್ಬಿಣದ ಕಡಲೆಯಿದು ಕನ್ನಡವು ಕಲಿಯಲಿಕೆ ಕಷ್ಟವಿದೆ ಕಠಿಣವಿದೆ ಕಲಿಯುವುದದೆಂತು? ಕೇಳಿಹರು ಕೀಳಾಗಿ ಕಲಿಯಲೊಲ್ಲದ ಕುಜನ ಕೇಳ್ಬೇಡ ಕಟ್ಟುಕತೆ ಕುಸಿಯದಿರು ಕೂಸೆ ||೧೬||

ಕೇಳಿಲ್ಲಿ ಕಟುಸತ್ಯ ಕಡಲೆಪುರಿ ಕುರುಕುವೊಲು ಕ್ಷಣದಲ್ಲೆ ಕರಗತವು ಕನ್ನಡವು ಕೂಸೆ ಕುಳಿತಲ್ಲೆ ಕಲಿಯುತ್ತ ಕಲಿತೊಲಿದು ಕುಣಿಯುತ್ತ ಕುಣಿದು ಕೊಂಡಾಡುತ್ತ ಕಲಿವೆ ಕಲಿ ಕೂಸೆ ||೧೭||

ಕನ್ನಡದ ಕಂದಗಳು ಕರುನಾಡ ಕೂಸುಗಳು ಕನ್ನಡವ ಕಲಿಯುತಿಹ ಕಲಿಗಳಿವರಂತೆ ಕಲಿತೋದಿ ಕುಳಿತಾಡಿ ಕಾವ್ಯಕೃತಿ ಕೋದುತ್ತ ಕನ್ನಡವ ಕಾಪಾಡಿ ಕಾಯುತಿಹರಂತೆ ||೧೮||

ಆಹಾ! ಎಷ್ಟು ಚೆನ್ನಾಗಿದೆ! ಈ ಕ-ಕಾರ ಕವನವೇ ಒಂದು ಕನಕಪುಷ್ಪ ಅಂತಾದರೆ ಇದಕ್ಕೆ ಕಂಪು ಕೊಡುವ ಕೆಲಸ ಮಾಡಿ ದ್ದಾರೆ ಕನ್ನಡದ ಖ್ಯಾತ ಗಮಕ ಕಲಾವಿದೆ, ಕರ್ನಾಟಕ ಗಮಕ ಕಲಾ ಪರಿಷತ್ತಿನ ಅಧ್ಯಕ್ಷೆ ಗಂಗಮ್ಮ ಕೇಶವಮೂರ್ತಿ.

ಅವರು ಈ ಕ-ಕಾರ ಕವನದ ಹದಿನೆಂಟು ಚೌಪದಿಗಳನ್ನು ಹದಿನೆಂಟು ಬೇರೆಬೇರೆ ರಾಗಗಳಲ್ಲಿ ರಾಗಮಾಲಿಕೆಯಂತೆ
ಹಾಡಿದ್ದಾರೆ. ಕಂಚಿನ ಕಂಠದಿಂದ ಇದಕ್ಕೆ ಮತ್ತಷ್ಟು ಜೀವಂತಿಕೆ ತುಂಬಿದ್ದಾರೆ. ಬರೀ ಗಾಯನವಷ್ಟೇ ಅಲ್ಲದೆ ಯಾವ ಚೌಪದಿಗೆ
ಯಾವ ರಾಗವನ್ನು ಯಾಕೆ ಆರಿಸಿಕೊಂಡಿದ್ದಾರೆಂಬ ವಿವರಣೆಯನ್ನೂ ಬಹಳ ಚೆನ್ನಾಗಿ ಕೊಟ್ಟಿದ್ದಾರೆ.

ಅತಿ ಸೂಕ್ತವಾಗಿ ಮೊತ್ತಮೊದಲ ಚೌಪದಿಯನ್ನು ‘ಕನ್ನಡ’ (ಕಾನಡಾ) ರಾಗದಲ್ಲೇ ಹಾಡಿದ್ದಾದರೆ, ಕನ್ನಡ ಭಾಷೆ ಎಷ್ಟೊಂದು ಮೋಹಕವಾಗಿದೆ ಎಂದು ತಿಳಿಸಲಿಕ್ಕೆ ಎರಡನೆಯ ಚೌಪದಿಗೆ ಮೋಹನ ರಾಗ. ಕನ್ನಡದ ಭೇರಿಯನ್ನು ನಾವೆಲ್ಲ ಸೇರಿ ಬಾರಿಸೋಣ ಎನ್ನುತ್ತ ಮೂರನೆಯ ಚೌಪದಿ ಅಭೇರಿ ರಾಗದಲ್ಲಿ. ಹಿಂದೆ ನಡೆದಿರುವ ಅನೇಕ ವಿಚಾರಗಳನ್ನು ಓಳಿಓಳಿಯಾಗಿ ಅಂದರೆ ಸಾಲುಸಾಲಾಗಿ ತಿಳಿಸಲಿಕ್ಕೆ ‘ಹಿಂದೋಳ’ ರಾಗ.

ಸಾರಂಗಪಾಣಿಯಾದಂಥ ಕೃಷ್ಣನಿಗೆ ಕೈಮುಗಿಯೋಣವೆಂದು ಸಾರಂಗ ರಾಗ. ಕರ್ನಾಟಕದ ಕಾಡುಗಳಲ್ಲಿ ಕಂಡುಬರುವ ಅನೇಕ ಪ್ರಾಣಿಗಳ ರೀತಿ ಗೌಣವಲ್ಲ ಎನ್ನುತ್ತ ರೀತಿಗೌಳ ರಾಗ. ವಸಂತ ಋತುವಿನಲ್ಲಿ ಕೋಗಿಲೆಯ ಕುಹೂಕುಹೂ ಕೂಜನ ಕ್ಕಾಗಿ ರಾಗ ವಸಂತ. ಕಮಲಿನಿಗೆ ಕಾತ್ಯಾಯನಿಗೆ ಕೆಂಗುಲಾಬಿ ಕೂಡಿಸೋಣವೆಂದು ಕಮಾಂಡ್ ಕೊಟ್ಟಿರುವುದು ಕಮಾಜ್ ರಾಗದಲ್ಲಿ. ಕೇಶ(ಕೂದಲು) ಸೇರಿದಂತೆ ದೇಹದ ಅಂಗಾಂಗಗಳ ಹೆಸರುಗಳೂ ಕ-ಕಾರದವು, ಅವುಗಳ ಬಣ್ಣನೆಗೆ ಕುಂತಲವರಾಳೀ ರಾಗ.

ಕಸುಬುದಾರರೆಲ್ಲ ನಮ್ಮ ಜೀವನವನ್ನು ಸೌಖ್ಯಪ್ರದವಾಗಿಸುವುದರಿಂದ ಅವರನ್ನು ಕೊಂಡಾಡಿದ್ದು ಸೌಖ್ಯದಾಯಿನೀ ರಾಗದಲ್ಲಿ. ಅಮೃತತುಲ್ಯ ಆಹಾರಪದಾರ್ಥಗಳಿಗೆ ಅಮೃತವರ್ಷಿಣಿ ರಾಗ. ಕ್ರೀಡೆ ಮನೋಲ್ಲಾಸಗಳ ಪಟ್ಟಿಗೆ ಜನಪದದ ಮಟ್ಟು. ಕನ್ನಡದ
ಕಲೆಗಳನ್ನು ಕೇಳಿ ಹಾಡಿ ಸಂತೋಷಪಟ್ಟು ಧನ್ಯರಾಗಲು ಧನ್ಯಾಸಿ ರಾಗ.

ಲಂಗುಲಗಾಮಿಲ್ಲದೆ ಕನ್ನಡವನ್ನು ಜರೆಯುತ್ತಿರುವವರ ಮಾತಿಗೆ ತಿಲದಷ್ಟೂ ಬೆಲೆಕೊಡಬೇಡವೆಂಬ ಹಿತೋಪದೇಶ ತಿಲ್ಲಂಗ್ ರಾಗದಲ್ಲಿ. ಕಸ್ತೂರಿ ಕನ್ನಡ ರಂಜನೀಯವೆಂದು ಮತ್ತೊಮ್ಮೆ ಸಾರಲಿಕ್ಕೆ ರಂಜನೀ ರಾಗ. ಕೊನೆಯಲ್ಲಿ ಮಂಗಳವು ಯಥಾ ಪ್ರಕಾರ ಮಧ್ಯಮಾವತಿ ರಾಗದಲ್ಲಿ. ಹೀಗೆ ಕ-ಕಾರ ಕವನವನ್ನು ಗಂಗಮ್ಮ ಕೇಶವಮೂರ್ತಿಯವರ ಗಾಯನದಲ್ಲಿ ಕೇಳುವುದೂ ಒಂದು ದಿವ್ಯಾನುಭವವೇ.

ನಿಮಗೆಲ್ಲರಿಗೆ ಅದು ಸಿಗಬೇಕೆಂಬ ಆಶಯದಿಂದ ಒಂದು ಯುಟ್ಯೂಬ್ ವಿಡಿಯೊ ಮಾಡಿಟ್ಟಿದ್ದೇನೆ: youtu.be/H34pRV3A8Uo ಕ-ಕಾರ ಕವನ ಹುಟ್ಟಿದ ಬಗೆಯನ್ನು ಶೀಲಾ ವಿವರಿಸುವುದು ಹೀಗೆ: ‘ಪ್ರಾರ್ಥನಾ ಸ್ಕೂಲಲ್ಲಿ ಪ್ರಿನ್ಸಿಪಾಲ್ ಆಗಿ ನಿವೃತ್ತಳಾಗುವವರೆಗೂ ಸಾಹಿತ್ಯಕೃಷಿಯತ್ತ ಗಮನ ಹರಿಸಿದವಳೇ ಅಲ್ಲ. ಆಮೇಲೆ ಸ್ನೇಹಿತೆಯೊಬ್ಬರ ಸಲಹೆಯಂತೆ ಈ ‘ಸಸಕಸ’ ಬಳಗಕ್ಕೆ ಸೇರಿಕೊಂಡೆ. ಅದರಲ್ಲಿ ತಿಂಗಳಿಗೊಮ್ಮೆ ಸಾಹಿತ್ಯಸಭೆ.

ಲಾಕ್‌ಡೌನ್ ಸಮಯದಲ್ಲಿ ಆನ್‌ಲೈನ್‌ನಲ್ಲೇ ಕಾರ್ಯಕ್ರಮ. ಎಲ್ಲರೂ ತುಂಬ ಪ್ರೋತ್ಸಾಹಿಸೋರು. ಅಚ್ಚರಿಯೆಂದರೆ ಏನೂ ಬರೆಯದಿದ್ದವಳ ಕೈಯಿಂದ ಕವನ ಸಂಕಲನ ತಯಾರಾಯ್ತು ಆಗಸ್ಟ್ 2020ರಲ್ಲಿ ಎಚ್ಚೆಸ್ಕೆ ಶತಮಾನೋತ್ಸವಕ್ಕೆ ಪುಸ್ತಕ ಯೋಜನೆಯಲ್ಲಿ! ಆಮೇಲೊಂದು ಸಲ ತಿಂಗಳ ಕಾರ್ಯಕ್ರಮದಲ್ಲಿ ‘ಆರು ನಿಮಿಷದ ಪ್ರಸ್ತುತಿೞಗೆ ನಾನೂ ಹೆಸರುಕೊಟ್ಟೆ. ಕನ್ನಡದ ಸೊಗಡಿನ ಬಗ್ಗೆಯೇ ಬರೆಯೋಣವೆಂದು ಪಟ್ಟಾಗಿ ಕುಳಿತೆ.

ಅದೇನು ಮೈಮೇಲೆ ಆವೇಶ ಬಂತೋ, ಕ ಪದಗಳೇ ತಲೆಯೊಳಗೆ ಕುಣಿದವು. ಕ-ಕಾರ ಕವನ ಜನ್ಮತಾಳಿತು. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತು. ಐರ್‌ಲ್ಯಾಂಡ್‌ನ ಕನ್ನಡಿತಿ ಅಮಿತಾ ರವಿಕಿರಣ್ ಇದನ್ನು ಹಾಡಿದರು. ಮಕ್ಕಳಿಗೂ ರಂಜಿಸು ವಂಥ ರಾಗಸಂಯೋಜನೆ ಮಾಡಿದರು. ಗಂಗಮ್ಮ ಕೇಶವಮೂರ್ತಿ ಗಮಕದ ಘಮ ಬೆರೆಸಿದರು. ಈಗಿನ್ನು ಇದು ನನ್ನದಲ್ಲ, ಲೋಕದ ಸ್ವತ್ತು.’ – ಹೀಗೆನ್ನುವಾಗ ಶೀಲಾ ಅವರ ಮಾತಿನಲ್ಲಿ ಹಮ್ಮುಬಿಮ್ಮಿನ ಲವಲೇಶವೂ ಕಾಣಿಸುವುದಿಲ್ಲ. ಕ-ಕಾರದ ಗುಂಗಿನಲ್ಲೇ ಇನ್ನೂ ಮೂರು ಕ ವಿಶೇಷಗಳನ್ನು ನಿಮ್ಮೊಡನೆ ಹಂಚಿಕೊಳ್ಳಲಿಕ್ಕಿದೆ.

ಒಂದನೆಯದಾಗಿ, ಈಗಲೂ ನಾನು ಕಂಪ್ಯೂಟರ್‌ನಲ್ಲಿ ಕನ್ನಡ ಕೈಪ್ ಮಾಡಲಿಕ್ಕೆ ಬಳಸುವ, ನನ್ನೆಲ್ಲ ಬರವಣಿಗೆಯು ಕಾಗದ-ಪೆನ್ನು ಇಲ್ಲದೆ ನೇರವಾಗಿ ಕೀಲಿಮಣೆಯಲ್ಲಿ ಕುಟ್ಟಲಿಕ್ಕೆ ನೆರವಾದ, ‘ಬರಹ’ ತಂತ್ರಾಂಶದ ಲಾಂಛನ ಇರುವುದು ‘ಕ’ ಎಂದೇ! ಕಂಪ್ಯೂಟರ್‌ಗೆ ಗೊತ್ತಿರುವ ೦ ಮತ್ತು ೧ ಇವೆರಡೇ ಅಂಕಿಗಳನ್ನು ಅಡ್ಡಡ್ಡ ಮಲಗಿಸಿ ಈ ಲಾಂಛನವನ್ನು ಶೇಷಾದ್ರಿವಾಸುಗೆ ಮಾಡಿ ಕೊಟ್ಟಿರುವವರು ನನ್ನ ಇನ್ನೊಬ್ಬ ಸ್ನೇಹಿತ, ಸಹಪಾಠಿ, ಮತ್ತು ಒಂದು ಅವಧಿಗೆ ಚಿತ್ರದುರ್ಗ ಕ್ಷೇತ್ರದ ಸಂಸದ ನಾಗಿಯೂ ಸೇವೆ ಸಲ್ಲಿಸಿರುವ ಜನಾರ್ದನ ಸ್ವಾಮಿ.

ಎರಡನೆಯದಾಗಿ, ಈ ವಾರದ ‘ತರಂಗ’ದಲ್ಲಿ ಮುಖಪುಟದ ಅಗ್ರಲೇಖನಗಳೆಲ್ಲದರ ತಲೆಬರಹಗಳು ಕ-ಕಾರದವು: ‘ಕದಂಬರ ಕುಂಭದಲ್ಲಿ ಕನ್ನಡಬಿಂಬ’, ‘ಕಾಂಗ್ರೆಸ್ ಶಿಖರದಲ್ಲಿ ಕರ್ನಾಟಕದ ಖರ್ಗೆ’, ‘ಕನ್ನಡ ಗಾದೆಗಳ ವಿಡಿಯೊ ಮೋಡಿ’, ಮತ್ತು ‘ಕಡಲಾಚೆಯ ಕನ್ನಡ ಕಲಾನಿಧಿ ಕಾವೇರಿ’. ಇವುಗಳಲ್ಲಿ ಕೊನೆಯದು ವಾಷಿಂಗ್ಟನ್ ಡಿಸಿ. ಪ್ರದೇಶದ ‘ಕಾವೇರಿ’ ಕನ್ನಡ ಸಂಘವು ಇತ್ತೀಚೆಗೆ ಚಿನ್ನದ ಹಬ್ಬ ಆಚರಿಸಿದ್ದರ ಬಗ್ಗೆ ಒಂದು ನುಡಿಚಿತ್ರ- ತರಂಗ ಸಂಪಾದಕಿ ಡಾ. ಯು. ಬಿ. ರಾಜಲಕ್ಷ್ಮಿ ಯವರು ನನ್ನಿಂದ ವಿಶೇಷವಾಗಿ ಬರೆಸಿದ್ದು. ಅವರಿಗೆ ಧನ್ಯವಾದ ಸಲ್ಲಬೇಕು.

ಮೂರನೆಯದಾಗಿ ಮತ್ತು ಮುಖ್ಯವಾಗಿ: ‘ಸ್ವಚ್ಛ ಭಾಷೆ ಅಭಿಯಾನ: ಕಸವಿಲ್ಲದ ಕನ್ನಡಕ್ಕೊಂದು ಕೈಪಿಡಿ’ ಎಂಬ ಹೆಸರಿನ
ಪುಸ್ತಕವು ಇದೇ ಬರುವ ಶನಿವಾರ ೫ ನವೆಂಬರ್ 2022ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಲೋಕಾರ್ಪಣೆ ಯಾಗುತ್ತಿದೆ. ಇದು ಕಳೆದ ಮೂರು ವರ್ಷಗಳಿಂದ ನಾನು ನಡೆಸಿಕೊಂಡು ಬಂದಿರುವ ಸರಣಿ ಕಲಿಕೆಗಳ ಪುಸ್ತಕ ರೂಪ. ಇದರ ಜೊತೆಯಲ್ಲೇ ತಿಳಿರುತೋರಣ ಅಂಕಣದ ೩ ಹೊಸ ಸಂಕಲನಗಳು (ಪರ್ಣಮಾಲೆ ೬, ೭, ಮತ್ತು ೮) ಕೂಡ ಬಿಡುಗಡೆಯಾಗುತ್ತಿವೆ.

ಈ ಎಲ್ಲ ಪುಸ್ತಕಗಳ ಪ್ರಕಾಶಕರು: ಸಾಹಿತ್ಯಪ್ರಕಾಶನ ಹುಬ್ಬಳ್ಳಿ. ಆವತ್ತಿನ ಸಮಾರಂಭದಲ್ಲಿ ನಮ್ಮೊಂದಿಗಿರುತ್ತಾರೆ ಖ್ಯಾತ ಲೇಖಕ ಗಿರೀಶ್ ಹತ್ವಾರ್(ಜೋಗಿ) ಮತ್ತು ಹನಿಗವನಗಳ ರಾಜ ಡುಂಡಿರಾಜ್. ನನ್ನ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಗಳಲ್ಲಿ ಓದುಗರಿಗೇ ಅಗ್ರಪ್ರಾಶಸ್ತ್ಯವಾದ್ದರಿಂದ ಅಧ್ಯಕ್ಷತೆ ವಹಿಸುತ್ತಾರೆ ಆಸ್ಟ್ರೇಲಿಯಾದಿಂದ ರಜೆಯಲ್ಲಿ ಬೆಂಗಳೂರಿಗೆ ಬಂದಿರುವ, ‘ವಿಚಿತ್ರಾನ್ನ’ ಕಾಲಂ ಕಾಲದಿಂದಲೂ ನನ್ನೊಬ್ಬ ಹಿತೈಷಿ ಓದುಗರಾಗಿರುವ, ನನ್ನನ್ನು ಸ್ವಂತ ತಮ್ಮನಂತೆ ಕಾಣುವ, ಅನಸೂಯಾ ಶಿವರಾಂ.

ಹಾಗೆಯೇ ವಿಶ್ವವಾಣಿ ಪತ್ರಿಕೆಯಲ್ಲಿ ಅಂಕಣಕಾರ್ತಿಯೂ, ಕ್ಲಬ್‌ಹೌಸ್‌ನಲ್ಲಿ ‘ಆಂಕರ್’ಕಾರ್ತಿಯಾಗಿಯೂ ಜನಪ್ರಿಯರಾಗಿರುವ ರೂಪಾ ಗುರುರಾಜ್ ಅವರಿಂದ ಕಾರ್ಯಕ್ರಮ ನಿರೂಪಣೆ ಇರುತ್ತದೆ. ಪುಸ್ತಕ ಬಿಡುಗಡೆಯ ಶಿಷ್ಟಾಚಾರ ವಿಧಿಗಳು ಆರಂಭದಲ್ಲಿ ಸ್ವಲ್ಪ ಹೊತ್ತು ಮಾತ್ರ. ಆಮೇಲೆ ಬಹುಮಟ್ಟಿಗೆ ಅನೌಪಚಾರಿಕ ಸಂವಾದ ರೀತಿಯಲ್ಲಿ ಕಾರ್ಯಕ್ರಮ ಮುಂದುವರಿಯುತ್ತದೆ. ನೀವೆಲ್ಲರೂ ಅಗತ್ಯವಾಗಿ ಬರಬೇಕು ಎಂದು ಇದು ‘ಕನ್ನಡಿಗರೆಲ್ಲರಿಗೆ ಕರೆಯೋಲೆ’!