Friday, 7th October 2022

ಒಲುಮೆಯ ಕವಿ ದೊಡ್ಡರಂಗೇಗೌಡರಿಗೆ 86ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಕಿರೀಟ

ಹಾವೇರಿ: ಹಾವೇರಿ ನಗರದಲ್ಲಿ ಇದೇ ಫೆಬ್ರುವರಿ 26,27 ಹಾಗೂ 28 ರಂದು ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ.ದೊಡ್ಡರಂಗೇಗೌಡ ಅವರು ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಜರುಗಿದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ದೊಡ್ಡರಂಗೇಗೌಡರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಲಿಂಗಯ್ಯ ಹಿರೇಮಠ ಅವರು ತಿಳಿಸಿದ್ದಾರೆ.

ಕವಿ, ಪ್ರಾಧ್ಯಾಪಕ, ವಿದ್ವಾಂಸ, ಚಲನಚಿತ್ರ ಸಾಹಿತಿ, ಉಪನ್ಯಾಸಕ ಹೀಗೆ ಹಲವು ರೀತಿಯಲ್ಲಿ ಶೋಭಾಯಮಾನರಾಗಿ ಕನ್ನಡ ನಾಡಿನಲ್ಲಿ ಪ್ರಕಾಶಮಾನರಾಗಿದ್ದು, ಇವೆಲ್ಲ ಗುಣಗಳನ್ನೂ ಸವಿಪಾಕವಾಗಿ ಎಂಬಂತೆ ಸರಳ ಸಜ್ಜನಿಕೆಯಲ್ಲಿ ಬೆಸೆದಂತಿರುವ ನಮ್ರತೆಯ ಹಿರಿಯ ಚೇತನರು ದೊಡ್ಡರಂಗೇಗೌಡರು.
ಶ್ರೀಯುತ ರಂಗೇಗೌಡರು ಮತ್ತು ಅಕ್ಕಮ್ಮನವರ ಮಗನಾಗಿ ಫೆಬ್ರುವರಿ 7, 1946ರಲ್ಲಿ ಜನಿಸಿದ ದೊಡ್ಡರಂಗೇಗೌಡರು ಕುರುಬರ ಹಳ್ಳಿ, ಬಡವನ ಹಳ್ಳಿ, ಮಧುಗಿರಿ, ತುಮಕೂರು ಹಾಗೂ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿ 1970ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಎ. ಆನರ್ಸ್ ಪದವಿ, 1972 ರಲ್ಲಿ ಎಂ.ಎ. ಪದವಿ ಪಡೆದರು.

ಸ್ನಾತಕೋತ್ತರ ಪದವಿ ಸಂದರ್ಭದಲ್ಲಿ ಜಾನಪದದ ಕುರಿತು ಅವರು ವಿಶೇಷ ಅಧ್ಯಯನ ಕೈಗೊಂಡರು. 2004 ವರ್ಷದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ `ನವೋದಯ ಕಾವ್ಯ: ಒಂದು ಪುನರ್ ಮೌಲ್ಯಮಾಪನ’ ಎಂಬ ಮಹಾಪ್ರಬಂಧಕ್ಕಾಗಿ ಅವರು ಡಾಕ್ಟರೇಟ್ ಪದವಿ ಲಭಿಸಿದೆ.

1972ರಿಂದ ಬೆಂಗಳೂರು ನಗರದ ಕೃಷ್ಣರಾಜಮಾರುಕಟ್ಟೆ ಬಳಿಯಲ್ಲಿನ `ಎಸ್.ಎಲ್.ಎನ್. ಕಲೆ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿ’ನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ದೊಡ್ಡರಂಗೇಗೌಡರು 2002ರಲ್ಲಿ ನಿವೃತ್ತರಾಗಿದ್ದಾರೆ. ಅವರು ಶೇಷಾದ್ರಿಪುರಂ ಕಾಲೇಜಿನ ಕನ್ನಡ ಸ್ನಾತ್ತಕೋತ್ತರ ಅಧ್ಯಯನ ಕೇಂದ್ರದ ಗೌರವ ನಿರ್ದೇಶಕರಾಗಿ ಸಹಾ ಕೆಲಸಮಾಡಿದ್ದಾರೆ. ಕನ್ನಡ ನಾಡು ಅವರನ್ನು ವಿಧಾನ ಪರಿಷತ್ತಿಗೂ ಬರಮಾಡಿಕೊಂಡಿದೆ. ರಾಜ್ಯ ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರಗಳಲ್ಲೂ ಅವರ ಸೇವೆ ಸಂದಿದೆ.

ವಿದ್ಯಾರ್ಥಿ ದೆಸೆಯಿಂದಲೇ ಕಥೆ, ಕವಿತೆ, ವಿಮರ್ಶೆಗಳನ್ನು ಬರೆಯುತ್ತಾ ಬಂದ ಡಾ. ದೊಡ್ಡರಂಗೇಗೌಡರು ನೂರಾರು ಕೃತಿಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟರಾಗಿ ಕಂಗೊಳಿಸಿದ್ದಾರೆ.

1972 ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಗೌಡರ ಕವನ ಸಂಕಲನ `ಕಣ್ಣು ನಾಲಗೆ ಕಡಲು ಕಾವ್ಯ’ ಕೃತಿಗೆ ಬಹುಮಾನ ಬಂದಿದೆ. 1990ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಇವರ `ಪ್ರೀತಿ ಪ್ರಗಾಥ’ ಕೃತಿಯು ವರ್ಷದ ಅಭಿಜಾತ ಕಾವ್ಯ ಎಂದು ವಿಮರ್ಶಕರ ಮೆಚ್ಚುಗೆ ಪಡೆದು ? “ರತ್ನಾಕರವರ್ಣಿ ? ಮುದ್ದಣ ಕಾವ್ಯ ಪ್ರಶಸ್ತಿ” ಗೌರವ ಲಭಿಸಿದೆ.
ದೊಡ್ಡರಂಗೇಗೌಡರು ನವ್ಯ ಕವಿಯಾಗಿ ಕನ್ನಡ ಸಾಹಿತ್ಯದಲ್ಲಿ ವಿಶೇಷ ಛಾಪು ಮೂಡಿಸಿದ್ದು ಅವರ ಕಾವ್ಯ ಸಂಕಲನಗಳಾದ `ಜಗಲಿ ಹತ್ತಿ ಇಳಿದು’, `ಕಣ್ಣು ನಾಲಿಗೆ ಕಡಲು’, `ನಾಡಾಡಿ’, `ಮೌನ ಸ್ಪಂದನ’, `ಏಳು ಬೀಳಿನ ಹಾದಿ’, `ಕುದಿಯುವ ಕುಲುಮೆ’, `ಚದುರಂಗದ ಕುದುರೆಗಳು’, `ಯುಗವಾಣಿ’, `ಅವತಾರ ಐಸಿರಿ’, `ಬದುಕು ತೋರಿದ ಬೆಳಕು’, `ಹೊಸ ಹೊನಲು’, `ಲೋಕಾಯಣ’, `ನಿಕ್ಷೇಪ’, `ಗೆಯ್ಮೆ’ ಮುಂತಾದವು ಕನ್ನಡ ಕಾವ್ಯ ರಸಿಕರ ಮತ್ತು ವಿಮರ್ಶಕರ ನಲ್ಮೆ ಸಂಪಾದಿಸಿವೆ. ಅವರ `ಪ್ರೀತಿ ಪ್ರಗಾಥ’ ಮತ್ತು `ಹಳ್ಳಿ ಹುಡುಗಿ ಹಾಡು ? ಪಾಡು’ ಪ್ರಗಾಥಗಳ ಸಾಲಿಗೆ ಸೇರಿವೆ. ಮುಕ್ತಕಗಳಲ್ಲಿ `ಮಣ್ಣಿನ ಮಾತುಗಳು’, `ಮಿಂಚಿನ ಗೊಂಚಲು’ ಪ್ರಧಾನವಾಗಿವೆ.

ದೊಡ್ಡರಂಗೇಗೌಡರು ಗದ್ಯಕೃತಿಗಳಲ್ಲೂ ಸಮಾನ ಕೃಷಿ ನಡೆಸಿದ್ದು `ವರ್ತಮಾನದ ವ್ಯಂಗ್ಯದಲ್ಲಿ’, `ವಿಚಾರ ವಾಹಿನಿ’, `ವಿಶ್ವಮುಖಿ’, `ದಾರಿ ದೀಪಗಳು’ ಮುಂತಾದ ಕೃತಿಗಳನ್ನು ನೀಡಿದ್ದಾರೆ. `ಅನನ್ಯನಾಡು ಅಮೆರಿಕ’ ಮತ್ತು `ಪಿರಮಿಡ್ಡುಗಳ ಪರಿಸರದಲ್ಲಿ’ ದೊಡ್ಡರಂಗೇಗೌಡರ ಪ್ರವಾಸ ಕಥನಗಳು. ದೊಡ್ಡರಂಗೇಗೌಡರು ಅನೇಕ ಭಕ್ತಿಗೀತೆಗಳ ಸಂಕಲನವನ್ನೂ ರಚಿಸಿದ್ದಾರೆ. ಶ್ರೀಸಿದ್ದೇಶ್ವರ ಸ್ತುತಿ, ಭಕ್ತಿ ಕುಸುಮಾಂಜಲಿ, ನೂರೆಂಟು ನಮನ, ಶ್ರೀ ಗುರುಚರಣದಲ್ಲಿ, ವಚನವಾರಿದಿ ಇವುಗಳಲ್ಲಿ ಪ್ರಮುಖವಾಗಿವೆ.
ಕನ್ನಡ ಚಲನಚಿತ್ರಗೀತೆಗಳಲ್ಲಿ ಜಾನಪದ, ನವ್ಯ ಸಾಹಿತ್ಯಗಳ ಸೊಬಗನ್ನು ತುಂಬಿದ ಕೀರ್ತಿವಂತರಲ್ಲಿ ದೊಡ್ಡರಂಗೇಗೌಡರು ಪ್ರಮುಖರಾಗಿ ಕಾಣುತ್ತಾರೆ. ಭಾರತೀಯ ಸಾಮಾನ್ಯನ ಆಪ್ತ ಮಾಧ್ಯಮಗಳಾದ ಸಿನಿಮಾ, ದೂರದರ್ಶನ, ರೇಡಿಯೋ ಹಾಗೂ ಶ್ರವ್ಯಮಾಧ್ಯಮಗಳಲ್ಲಿ ದೊಡ್ಡರಂಗೇಗೌಡರು ಅಪಾರ ಸಾಧನೆ ಮಾಡಿರುವುದನ್ನು ನೆನೆದಾಗ ಅವರನ್ನು ಅರಿಯದ ಕನ್ನಡಿಗನೇ ಇಲ್ಲ ಎಂಬುದು ಮನವರಿಕೆಯಾಗುತ್ತದೆ.