Friday, 27th May 2022

ನಾಳೆ ಆಪ್‌ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಫೈನಲ್‌: ಕೇಜ್ರಿವಾಲ್‌

ನವದೆಹಲಿ: ಪಂಜಾಬ್‌ ವಿಧಾನಸಭೆ ಚುನಾವಾಣೆಗೆ ತಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಜ.18 ಘೋಷಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಮತ್ತು ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ತಿಳಿಸಿದ್ದಾರೆ.

ಅಭ್ಯರ್ಥಿ ಯಾರಾಗಬೇಕು ಎಂದು ಜನರೇ ಹೆಸರು ಶಿಫಾರಸು ಮಾಡಬೇಕು ಎಂದು ಕೇಜ್ರಿವಾಲ್ ಜ.13ರಂದು ಮನವಿ ಮಾಡಿದ್ದರು. ಪಕ್ಷದ ಸಂಸದ ಭಗವಂತ್‌ ಮಾನ್‌ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿಸಲು ಕೇ‌ಜ್ರಿವಾಲ್‌ ಬಯಸಿದ್ದರು.

ಪಂಜಾಬ್‌ ವಿಧಾನಸಭೆಗೆ 2022ರಲ್ಲಿ ನಡೆಯುವ ಚುನಾವಣೆ ವೇಳೆ ಸಿಖ್‌ ಸಮುದಾಯದ ವ್ಯಕ್ತಿಯೇ ತಮ್ಮ ಪಕ್ಷದ ಮುಖ್ಯ ಮಂತ್ರಿ ಅಭ್ಯರ್ಥಿಯಾಗಲಿದ್ದಾರೆ. ಪಕ್ಷದ ಆಯ್ಕೆ ಬಗ್ಗೆ ಇಡೀ ಪಂಜಾಬ್‌ ಹೆಮ್ಮೆ ಪಡಲಿದೆ ಎಂದು ಕೇಜ್ರಿವಾಲ್‌ ಕಳೆದ ವರ್ಷ ಜೂನ್‌ನಲ್ಲಿ ಹೇಳಿಕೊಂಡಿದ್ದರು. ‌117 ಸದಸ್ಯ ಬಲದ ಪಂಜಾಬ್ ವಿಧಾನಸಭೆಗೆ ಫೆಬ್ರುವರಿ 14ರಂದು ಚುನಾವಣೆ ನಿಗದಿಯಾಗಿತ್ತು.

‘ಫೆಬ್ರುವರಿ 16ರಂದು ಗುರು ರವಿದಾಸ್ ಜಯಂತಿ ಇರುವುದರಿಂದ, ಚುನಾವಣೆಯನ್ನು ಕನಿಷ್ಠ ಆರು ದಿನ ಮುಂದೂಡಬೇಕು’ ಎಂದು ಆಡಳಿತ ಪಕ್ಷ ಕಾಂಗ್ರೆಸ್‌ ಸೇರಿದಂತೆ ವಿವಿಧ ಪಕ್ಷಗಳು ಚುನಾವಣಾ ಆಯುಕ್ತ ಸುಶೀಲ್‌ ಚಂದ್ರ ಅವರಿಗೆ ಪತ್ರ ಬರೆದಿದ್ದವು. ಹೀಗಾಗಿ ಮತದಾನ ದಿನಾಂಕ ಫೆಬ್ರುವರಿ 20ಕ್ಕೆ ಮರುನಿಗದಿ ಯಾಗಿದೆ.