Saturday, 14th December 2024

Gururaj Kulkarni: ಅರ್ಧ ದಿನದ ಗಣಪ

ಗುರುರಾಜ ಮ.ದೇಶಕುಲಕರ್ಣಿ

ನಮ್ಮ ಮೇಲೆ ಆಡಳಿತ ನಡೆಸುವರು ಹಬ್ಬದಾಚರಣೆಯಲ್ಲಿ ಮೂಗು ತೂರಿಸಿದರೆ ಏನಾಗುತ್ತದೆ? ಅಧಿಕಾರಿಗಳ ಹಸ್ತಕ್ಷೇಪದಿಂದಾಗಿ, ಅರ್ಧ ದಿನ ಮಾತ್ರ ಗಣಪನನ್ನು ಕೂರಿಸುವ ಪದ್ಧತಿ ಇಲ್ಲಿದೆ!

ಅರ್ಧ ದಿನ ಮಾತ್ರ ಗಣೇಶನನ್ನು ಕೂಡ್ರಿಸುವ ಒಂದು ಸಂಪ್ರದಾಯ ಇರುವುದು ನಿಮಗೆ ಗೊತ್ತೆ? ಇದಕ್ಕೆ ಐತಿಹಾಸಿಕ
ಕಾರಣವೂ ಇದೆ ಗೊತ್ತೆ? ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಭೋಗೇನಾಗರಕೊಪ್ಪ ಗ್ರಾಮದ ದೇಶಕುಲಕರ್ಣಿ (ದೇಸಾಯಿ) ಅವರ ವಾಡೆದಲ್ಲಿ ಕೇವಲ ಅರ್ಧ ದಿನ ಮಾತ್ರ ಗಣಪತಿಯನ್ನು ಕೂಡ್ರಿಸುತ್ತಾರೆ. ಈ ಆಚರಣೆಗೆ ಅಂತಹ ವಿಶೇಷ ಕಾರಣವೇನಿದೆ? ಬ್ರಿಟಿಷರು ಆಳ್ವಿಕೆ ನಡೆಸುತ್ತಿದ್ದ ಕಾಲ. ಕಲಘಟಗಿ ತಾಲೂಕಿನಲ್ಲಿ ತೀವ್ರ ಬರಗಾಲ ಆವರಿ ಸಿತ್ತು. ಜತೆಗೆ ಉಪ್ಪಿಗೂ ಬ್ರಿಟಿಷರು ತೆರಿಗೆ ವಿಧಿಸಿದ್ದರು. ದೇಸಗತಿಯ ಆಡಳಿತದ ಐದು ಹಳ್ಳಿಗಳು ಕಂದಾಯ
ಕಟ್ಟಿರಲಿಲ್ಲ. ಈ ವಿಷಯದಲ್ಲಿ ಬ್ರಿಟಿಷರಿಗೂ ದೇಸಯಿಯವರಿಗೂ ವಾಗ್ವಾದವಾಗಿತ್ತು. ಕಂದಾಯ ಅಧಿಕಾರಿಯು ಅಗ ದಾಸ್ತಿಕೊಪ್ಪದ ಬ್ರಿಟಿಷ್ ಬಂಗಲೆಯಲ್ಲಿ ಇರುತ್ತಿದ್ದ. ಅವನು ದೇಸಾಯಿಯವರ ಅಡಳಿತದಲ್ಲಿದ್ದ ಗ್ರಾಮದ ಮರಾಠಿ ಓಣಿಯ ಹಿತ್ತಲನ್ನು ವಿಭಾಗಿಸಿ ಅದನ್ನು ಗಂಜೀಗಟ್ಟಿ ಸರಹದ್ದಿನಲ್ಲಿಟ್ಟು ನಕಾಶೆಯನ್ನು ತಯಾರಿಸಿದ.
ದೇಸಾಯಿಯವರು ಇರುವ ಗ್ರಾಮದ ವಿಸ್ತೀರ್ಣ ಕಡಿತಗೊಳಿಸಿ ಸೇಡು ತೀರಿಸಿಕೊಂಡ.

ಛತ್ರಪತಿ ಶಿವಾಜಿ ಮಹಾರಾಜರಿಂದ ಐದು ಹಳ್ಳಿಗಳನ್ನು ಇನಾಮು ಪಡೆದ ದೇಸಾಯರು ಬೇಸರಗೊಂಡರು.
ಆಕ್ರೋಶಗೊಂಡ ವಿರುಪಾಕ್ಷ ಅನಂತರಾವ್ ದೇಸಾಯಿ ಅವರು ಚಳುವಳಿ ಆರಂಭಿಸಿದರು. ಮುಂದೆ ಇವರು ಗೋವಾ ವಿಮೋಚನಾ ಚಳವಳಿಯಲ್ಲಿಯೂ ಭಾಗವಹಿಸಿದ್ದರು. ಇವರಿಗೆ ಸ್ವತಂತ್ರ ಯೋಧರ ಪಿಂಚಣಿ ಸಹ ಬರುತ್ತಿತ್ತು. ಇವರ ಜೊತೆಗೆ ದೇಸಾಯಿ ದತ್ತಮೂರ್ತಿಯವರು ಭೂಗತರಾಗಿದ್ದುಕೊಂಡು ಪತ್ರಿಕೆಗಳಿಗೆ ದೇಶಪ್ರೇಮಿ ಲೇಖನಗಳನ್ನು ಬರೆಯುತ್ತಿದ್ದರು.

ಇದೇ ಸಂದರ್ಭದಲ್ಲಿ ಹುಬ್ಬಳ್ಳಿಗೆ ಲೋಕಮಾನ್ಯ ತಿಲಕರು ಬಂದು, ಸಾರ್ವಜನಿಕ ಗಣೇಶೋತ್ಸವದ ಬಗ್ಗೆ
ವಿವರಿಸಿದ್ದರು. ಸಾರ್ವಜನಿಕವಾಗಿ ಗಣಪತಿ ಕೂಡ್ರಿಸಿ ಜನರು ಹೇಗೆ ಬ್ರಿಟಿಷರ ವಿರುದ್ಧ ಒಂದಾಗಬಹುದೆಂದು ವಿವರಿಸಿದಾಗ, ದೇಸಾಯರು ಸಾರ್ವಜನಿಕವಾಗಿ ತಮ್ಮ ವಾಡೇದಲ್ಲಿ ವಿಜೃಂಭಣೆಯಿಂದ ಐದು ದಿನಗಳ ಕಾರ್ಯಕ್ರಮ ನಡೆಯಿತು. ಬರಗಾಲದ ವರ್ಷ ಗಣೇಶೋತ್ಸವದ ಸಂಭ್ರಮದ ತಯರಿ ನಡೆಸಿ ಬೆಳಿಗ್ಗೆ ಚೌತಿ
ದಿನ ಗಣಪತಿಯನ್ನು ಪ್ರತಿಷ್ಠಾಪೂಜೆ ಮಾಡಿದ್ದರು. ಗ್ರಾಮಸ್ಥರಿಗೆ ತೀರ್ಥ-ಪ್ರಸಾದ ವಿತರಿಸಲಾಗಿತ್ತು.

ಬ್ರಿಟಿಷರು ಕೋಪಗೊಂಡರು; ದೇಸಾಯಿವರು ಬ್ರಿಟಿಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದರೆಂದು ಪಿತೂರಿಯಿಂದ ವಾಡೆಗೆ ಬ್ರಿಟಿಷ್ ಸೈನ್ಯ ದಾಳಿ ಮಾಡಿತು. ದಾಳಿ ಮಾಡಿದ್ದು ಮಧ್ಯಾಹ್ನ ಸಮಯ! ದೇಸಾಯರು ಪ್ರಸಾದ ವಿತರಿಸಿ ಊಟಕ್ಕೆ ಕೂಡ್ರುವ ತಯಾರಿಯಲ್ಲಿದ್ದಾಗ ಪೊಲೀಸ್ ದಂಡು ಮನೆಬಾಗಿಲಿಗೆ ಬಂದಿತ್ತು! ಬ್ರಿಟಿಷರೂ ಒಳಬಂದು ಗಣಪತಿಗೆ ಧಕ್ಕೆ ಮಾಡಬಹುದೆಂದು ಅಂದಾಜಿಸಿ ವಾಡೆದಲ್ಲಿರುವ ಹುಡೇದ ಬಾವಿಯಲ್ಲಿ ವಿಸರ್ಜಿಸಿ ಪಶ್ಚಿಮದ್ವಾರದ ಮುಖಾಂತರ ಭೂಗತರಾದರು. ಬ್ರಿಟಿಷರಿಗೆ ತವು ಬರುವ ಮುಂಚೆ ಏನು ನಡೆದಿದೆ ಎಂದು ಸುಳಿವು ದೊರಕಲಿಲ್ಲ. ಬ್ರಿಟಿಷ ಸೈನ್ಯ ಬಂದ ದಾರಿಗೆ ಸುಂಕವಿಲ್ಲದಂತೆ ಮರಳಿತು.

ಹಬ್ಬದ ದಿನ ನಡೆದ ಈ ದಾಳಿಯ ನೆನಪಿನಲ್ಲಿ, ದೇಶಕುಲಕರ್ಣಿ(ದೇಸಾಯಿ) ಅವರು ಇಂದಿಗೂ ಅರ್ಧದಿನ ಗಣಪ ನನ್ನು ಕೂರಿಸುವ ಪರಿಪಾಠ ಮುಂದುವರೆಸಿಕೊಂಡು ಬಂದಿದ್ದಾರೆ. ಬೆಳಿಗ್ಗೆ ಗಣಪತಿಯನ್ನು ಕೂರಿಸಿ ಪೂಜೆ,
ಮಹಾನೈವ್ಯೆದ್ಯ, ಮಹಾಮಂಗಳಾರತಿ ನಂತರ ಮಧ್ಯಾಹ್ನದ ಊಟಕ್ಕೂ ಮುನ್ನವೇ ವಿಸರ್ಜಿಸಲಾಗುತ್ತದೆ ಎಂದು ಮನೆತನದ ಹಿರಿಯರಾದ ಮಧುಸೂದನ ದೇಶಕುಲಕರ್ಣಿ ಇತಿಹಾಸ ನೆನಪಿಸಿಕೊಳ್ಳುತ್ತಾರೆ. ಹಬ್ಬದ ಆಚರಣೆ ಯಲ್ಲೂ ಆಡಳಿತ ನಡೆಸುವವರು ಮಧ್ಯ ಪ್ರವೇಶಿಸಿದ ನೋವಿನ ಉದಾಹರಣೆ ಇದು.