Wednesday, 28th July 2021

ಎಬಿವಿಪಿಯಿಂದ ರಾಜ್ಯಾದ್ಯಂತ ೧೦ ಲಕ್ಷ ಸಸಿ ಮತ್ತು ಸೀಡ್ ಬಾಲ್ ನೆಡುವ ಅಭಿಯಾನ

ತುಮಕೂರು: ಪರಿಸರ ಸಂರಕ್ಷಿಸುವ ಕೆಲಸ ಈಗ ಆಗಬೇಕಾಗಿದೆ. ಕೊರೋನಾ ಪರಿಸ್ಥಿತಿಯು ನಮಗೆ ಒಂದು ಪಾಠವನ್ನಂತು ಕಲಿಸಿದೆ. ಈಗ ನಾವು ಎಚ್ಚೆತ್ತುಕೊಳ್ಳದೇ ಇದ್ದರೆ ಅದು ನಮ್ಮ ಬಹು ದೊಡ್ಡ ತಪ್ಪಾಗುತ್ತದೆ. ಕೆಲ ವರ್ಷಗಳ ಹಿಂದೆ ನಾವು ಕುಡಿಯುವ ನೀರಿಗೆ ಹಣವನ್ನು ಕೊಡುತ್ತಿದ್ದೆವು. ಈಗ ಪ್ರಾಣವಾಯು ಆಮ್ಲಜನಕವನ್ನು ಹಣಕೊಟ್ಟು ಕೊಂಡುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲ ಮನುಷ್ಯನೇ ಕಾರಣವಾಗಿದ್ದು ಈ ತಪ್ಪುಗಳನ್ನು ತಿದ್ದಿಕೊಳ್ಳುವುದಕ್ಕೆ ಇದೊಂದು ಅವಕಾಶ, ಎಲ್ಲರೂ ಪರಿಸರ ಸಂರಕ್ಷಣೆ ಮತ್ತು ಮರಗಳನ್ನು ನೆಡುವುದರ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಸಮಾಜವನ್ನ ಕೊಡುಗೆ ನೀಡುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕರ ಮೇಲಿದೆ, ಎಂದು ಬೆಳ್ಳಾವಿಯ ಕಾರದೇಶ್ವರ ಮಠದ ಕಾರದ ವೀರಬಸವ ಮಹಾ ಸ್ವಾಮೀಜಿ ತಿಳಿಸಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿಶ್ವ ಪರಿಸರ ದಿನದ ಅಂಗವಾಗಿ ಹಮ್ಮಿಕೊಂಡಿರುವ ಆಕ್ಸಿಜನ್ ಚಾಲೆಂಜ್ ನಿಮಿತ್ತ ರಾಜ್ಯದಲ್ಲಿ ೧೦ ಲಕ್ಷ ಗಿಡಗಳನ್ನು ನೆಡುವ ಅಭಿಯಾನಕ್ಕೆ ಕರೆ ನೀಡಿದ್ದು ಇದರ ಅಂಗವಾಗಿ ದೇವರಾಯನ ದುರ್ಗದಲ್ಲಿ ಸೀಡ್ ಬಾಲ್ ಹಾಕುವ ಕಾರ್ಯಕ್ರಮವನ್ನು ಮಾಡಲಾಯಿತು. ಈ ಕಾರ್ಯಕ್ರಮವನ್ನು ಬೆಳ್ಳಾವಿಯ ಶ್ರೀ ಕಾರದೇಶ್ವರ ಮಠದ ಶ್ರೀ ಕಾರದ ವೀರಬಸವ ಮಹಾ ಸ್ವಾಮಿಗಳು ಉದ್ಘಾಟಿಸಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಡಿ ಆರ್ ಎಫ್ ಒ ಮನು ಅವರು ಮಾತನಾಡಿ ಎಬಿವಿಪಿ ಯವರು ಈ ಕಾರ್ಯಕ್ರಮವನ್ನು ರಾಜ್ಯಾಧ್ಯಂತ ಸಮರೋಪಾದಿಯಲ್ಲಿ ಮಾಡುತ್ತಿದ್ದು, ೧೦ ಲಕ್ಷ ಗಿಡ ನೆಡುವ ಗುರಿಯನ್ನ ಇಟ್ಟುಕೊಂಡು ಈ ಅಭಿಯಾನವನ್ನು ಆರಂಭಿಸಿರುವುದು ಸಂತೋಷದ ವಿಷಯ. ಪ್ರತಿಯೊಬ್ಬ ನಾಗರೀಕನೂ ಕೂಡ ಪರಿಸರದ ಸಂರಕ್ಷಣೆಗೆ ಮುಂದಾಗಬೇಕು. ಕೇವಲ ಅರಣ್ಯ ಇಲಾಖೆ ಮಾತ್ರವಲ್ಲದೆ ಈ ರೀತಿಯ ಸಂಘ ಸಂಸ್ಥೆಗಳು ಕೈ ಜೋಡಿಸಿದರೆ ಉತ್ತಮ ಪರಿಸರವನ್ನು ನಿರ್ಮಾಣ ಮಾಡುವು ದಕ್ಕೆ ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಎಬಿವಿಪಿ ವಿಭಾಗ ಪ್ರಮುಖ್ ಅಜಯ್ ಕುಮಾರ್ ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪ್ರತಿ ವರ್ಷವೂ ಒಂದೊAದು ವಿಷಯಾಧಾರಿತವಾಗಿ ಆಂಧೋಲನಗಳನ್ನು ರೂಪಿಸಿಕೊಂಡು ಬಂದಿದೆ. ಕಳೆದ ಎರಡು ವರ್ಷಗಳಿಂದ ಪ್ರಪಂಚವನ್ನು ಕಾಡುತ್ತಿರುವ ಕೊರೋನಾ ಸಂಕಷ್ಟವನ್ನು ಅರಿತ ಸಂಘಟನೆಯು ಈ ಬಾರಿ ಆಕ್ಸಿಜನ್ ಜಾಲೆಂಜ್ ಅನ್ನು ನೀಡಿ ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ಕಾರ್ಯಕರ್ತರು ಪರಿಸರ ಉಳಿಸುವ ನಿಟ್ಟಿನಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ರಾಜ್ಯಾದ್ಯಂತ ಗಿಡ, ಮರಗಳನ್ನು ನೆಟ್ಟು ಸಂರಕ್ಷಿಸುವುದಕ್ಕೆ ಕರೆ ನೀಡಿದ್ದು, ಇದರ ಪ್ರಯುಕ್ತ ಎಲ್ಲಾ ವಿಭಾಗಗಳಲ್ಲಿ ಈಗಾಗಲೇ ಲಕ್ಷಾಂತರ ಗಿಡಗಳನ್ನು ನೆಡುವುದು ಮತ್ತು ಸೀಡ್ ಬಾಲ್‌ಗಳನ್ನು ಹಾಕುವ ಕೆಲಸ ಬರದಿಂದ ಸಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಎಬಿವಿಪಿಯ ವಿಭಾಗ ಸಂಘಟನಾ ಕಾರ್ಯದರ್ಶೀ ಅಪ್ಪು ಪಾಟೀಲ್, ನಗರ ಉಪಾಧ್ಯಕ್ಷ ಡಾ. ಪೃಥ್ವಿರಾಜ ಟಿ, ನಗರ ಕಾರ್ಯದರ್ಶೀ ಪ್ರತಾಪ ಸಿಂಹ, ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ, ಅಧ್ಯಾಪಕರಾದ ಪ್ರದೀಪ್, ಕಿಶೋರ್, ರವಿಕುಮಾರ್, ರಾಮಲಿಂಗಾರೆಡ್ಡಿ, ಕಾರ್ಯಕರ್ತರಾದ ಅರ್ಪಿತಾ ಕೆ.ಸಿ., ಚೈತ್ರ, ಕಾರ್ತಿಕ್, ರಘು ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *