ವಿಜಯಪುರ: ಜಿಲ್ಲಾ ನಿರ್ಮಿತಿ ಕೇಂದ್ರದ ಪ್ರೊಜೆಕ್ಟ್ ಮ್ಯಾನೇಜರ್ ನಿವಾಸದ ಮೇಲೆ ಬುಧವಾರ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಪ್ರೊಜೆಕ್ಟ್ ಮ್ಯಾನೇಜರ್ ಗೋಪಿನಾಥ ಸಾಮಲಜಿ ಅವರ ನಿವಾಸ, ಕಚೇರಿ, ಸ್ಟೋರ್ ಹಾಗೂ ಕಚೇರಿ ಸಿಬ್ಬಂದಿ ನಿವಾಸದ ಮೇಲೆ ದಾಳಿ ಮಾಡಲಾಗಿದ್ದು, ಬಾಗಲಕೋಟೆ ಜಿಲ್ಲೆಯ ಗೋಪಿನಾಥ ಸಂಬಂಧಿಕರ ಎರಡು ಮನೆಗಳ ಮೇಲೆಯೂ ದಾಳಿ ನಡೆಸಿದ್ದಾರೆ.
ನಗರದ ಸೊಲ್ಲಾಪುರ ರಸ್ತೆಯಲ್ಲಿರುವ ಗೋಪಿನಾಥ ಸಾಮಲಜಿ ನಿವಾಸ, ದರ್ಗಾ ಪ್ರದೇಶ ದಲ್ಲಿರುವ ಕಚೇರಿ ಹಾಗೂ ಸ್ಟೋರ್ ನಲ್ಲಿಯೂ ದಾಖಲಾತಿ ಪರಿಶೀಲನೆ ಕಾರ್ಯ ಮುಂದುವರೆದಿದೆ. ನಗರದ ರಾಮದೇವ ನಗರದಲ್ಲಿರುವ ನಿರ್ಮಿತಿ ಕೇದ್ರದ ಅಕೌಟೆಂಟ್ ಮಲ್ಲಮ್ಮ ನಿವಾಸದ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲಾತಿಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಕೊಪ್ಪಳ ನಗರದಲ್ಲಿಯೂ ಸಹ ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಯಲಬುರ್ಗಾದ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಸಹಾಯಕ ಇಂಜನೀಯರ್ ಗಿರೀಶ ಅವರ ಮನೆ ಮೇಲೆ ದಾಳಿ ನಡೆದಿದೆ. ಕೊಪ್ಪಳದ ಕುಷ್ಟಗಿ ರಸ್ತೆ ಸಮೀಪದ ಅಗಡಿ ಲೇಔಟ್ ನಲ್ಲಿರುವ ಗಿರೀಶ್ ಮನೆ ಮೇಲೆ ದಾಳಿ ನಡೆದಿದ್ದು, ಪರಿಶೀಲನೆ ನಡೆಸಲಾಗುತ್ತಿದೆ.
ರಾಮನಗರದ ಎ. ಸಿ ಕಛೇರಿ ಮೇಲೆ ಎಸಿಬಿ ಡಿವೈಎಸ್ಪಿ ಮಂಜುನಾಥ ಗಂಗಲ್ ಹಾಗೂ ತಂಡದವರು ದಾಳಿ ನಡೆಸಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ರಾಮನಗರ ಉಪವಿಭಾಗಾಧಿಕಾರಿ ಮಂಜುನಾಥ್ ಅವರ ಕಛೇರಿ ಮೇಲೆ ಎಸಿಬಿ ದಾಳಿ ನಡೆಸಿದ್ದಾರೆ.