Sunday, 3rd July 2022

ವಾಹನ ಪಲ್ಟಿ: 10 ಯಾತ್ರಾರ್ಥಿಗಳ ಸಾವು, ಏಳು ಮಂದಿಗೆ ಗಾಯ

ಪಿಲಿಭಿತ್: ಉತ್ತರ ಪ್ರದೇಶದ ಗಜ್‌ರೌಲಾ ಪ್ರದೇಶದಲ್ಲಿ ವಾಹನ ಪಲ್ಟಿಯಾಗಿ ರಸ್ತೆ ಪಕ್ಕದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ 10 ಯಾತ್ರಾರ್ಥಿಗಳು ಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ.

ಹರಿದ್ವಾರದಿಂದ 17 ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ವಾಹನವು ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಕಡೆಗೆ ಸಾಗುತ್ತಿದ್ದಾಗ ಲಖನೌ ಹೆದ್ದಾರಿಯಲ್ಲಿ ಅವಘಡ ಸಂಭವಿಸಿದೆ.

ಚಾಲಕ ನಿದ್ರೆಯ ಮಂಪರಿನಲ್ಲಿ ಇದ್ದುದೇ ಅಪಘಾತಕ್ಕೆ ಕಾರಣವಾಗಿದ್ದು, ಇದರಿಂದಾಗಿ ವಾಹನದ ನಿಯಂತ್ರಣ ಕಳೆದುಕೊಂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರ ಪ್ರಕಾರ, ಎಂಟು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.

ಮೃತರಲ್ಲಿ ಮೂವರು ಮಕ್ಕಳು, ಮೂವರು ಮಹಿಳೆಯರು ಮತ್ತು ಚಾಲಕ ಸಹಿತ ನಾಲ್ವರು ಪುರುಷರು ಸೇರಿದ್ದಾರೆ ಎಂದು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ (ಎಆರ್‌ಟಿಒ) ಅಮಿತಾಭ್ ತಿಳಿಸಿದ್ದಾರೆ.

ಮೃತರನ್ನು ಲಕ್ಷ್ಮಿ (28), ರಚನಾ (28), ಸರಳಾ ದೇವಿ (60), ಹರ್ಷ್ (16), ಖುಷಿ (2), ಸುಶಾಂತ್ (14), ಆನಂದ್ (3), ಲಾಲ್‌ಮನ್ (65), ಶ್ಯಾಮಸುಂದರ್ (55) ಮತ್ತು ಚಾಲಕ ದಿಲ್ಶಾದ್ (35) ಎಂದು ಗುರುತಿಸಲಾಗಿದೆ.