Tuesday, 21st March 2023

ವೈದ್ಯಕೀಯ ರಂಗದ 2020ರ ಸಾಧನೆಗಳು

ವೈದ್ಯ ವೈವಿಧ್ಯ

ಡಾ.ಎಚ್.ಎಸ್. ಮೋಹನ್

2020ರ ವರ್ಷ ಕಳೆದು ನಾವು ಈಗ 2021 ರಲ್ಲಿದ್ದೇವೆ. 2020ರಲ್ಲಿ ಇಡೀ ವರ್ಷ ಕೋವಿಡ್ 19 ಕಾಯಿಲೆಯೇ ಎಡೆ ಆವರಿಸಿತ್ತು.

ಎಡೆ ಸಪ್ಪಳ ಮಾಡಿತ್ತು. ಮಾಧ್ಯಮ ಗಳಲ್ಲಿ, ದೇಶ, ರಾಜ್ಯಗಳ ಪಾಲಿಸಿ ಮಾಡುವವರು, ಆರೋಗ್ಯ ಅಧಿಕಾರಿಗಳು, ಕಾರ್ಯ ಕರ್ತರು, ವೈದ್ಯರು ಇವರೆ ಕೋವಿಡ್ ಕಾಯಿಲೆಯ ವಿವಿಧ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡು ತುಂಬಾ ಚಟುವಟಿಕೆಯಿಂದ ಕಾರ್ಯನಿರತರಾಗಿದ್ದರು. ಈ ಕಾಯಿಲೆ ಸಾಮಾಜಿಕ, ಆರ್ಥಿಕ, ರಾಜಕೀಯ – ಹೀಗೆ ಎಲ್ಲಾ ರಂಗಗಳಲ್ಲಿ
ಆವರಿಸಿ ಇಡೀ ವರ್ಷದಲ್ಲಿ ಅದೇ ದೊಡ್ಡ ಭೂತದ ರೀತಿ ಎಲ್ಲರನ್ನೂ ಕಾಡಿದ್ದು ವಾಸ್ತವ ಸಂಗತಿ.

ಹಾಗೆಂದು ವೈದ್ಯಕೀಯ ರಂಗದಲ್ಲಿ 2020ರಲ್ಲಿ ಹೊಸ ಆವಿಷ್ಕಾರಗಳು, ಸಂಶೋಧನೆಗಳು ನಡದೇ ಇಲ್ಲ ಎಂದೇನಿಲ್ಲ. ಆದರೆ ಅವು ಹೆಚ್ಚು ಜನರ ಗಮನ ಸೆಳೆದಿಲ್ಲ. ಕ್ಯಾನ್ಸರ್ ರಂಗದಲ್ಲಿ, ಜೀನ್ ಚಿಕಿತ್ಸೆಯಲ್ಲಿ, ಹೃದಯದ ಆರೋಗ್ಯ ರಂಗದಲ್ಲಿ ಹಾಗೆಯೇ
ಕೋವಿಡ್ 19 ಕಾಯಿಲೆಗೆ ವ್ಯಾಕ್ಸೀನ್ ಕಂಡು ಹಿಡಿಯುವ ವಿಚಾರದಲ್ಲಿ ಹಲವಾರು ಮುಖ್ಯ ಆವಿಷ್ಕಾರಗಳು, ಸಂಶೋಧನೆಗಳು ಜರುಗಿವೆ. ಅವುಗಳತ್ತ ಒಂದು ದೃಷ್ಟಿ ಹಾಯಿಸೋಣ.

1. ಜೆನೆಟಿಕ್ ಕೋಡ್‌ನ ವರ್ಷ: 2020ರ ಮುಖ್ಯ ಸುದ್ದಿ ಎಂದರೆ ಜೆನೆಟಿಕ್ ಕೋಡ್ ಬಗೆಗಿನ ಸಂಶೋಧನೆ ಎಂದು ಹೆಚ್ಚಿನ ಎಲ್ಲಾ ವಿಜ್ಞಾನಿಗಳೂ ಒಪ್ಪಿಕೊಳ್ಳುತ್ತಾರೆ. ಅಕ್ಟೋಬರ್ 2020ರಲ್ಲಿ ಎಮಾನು ಚಾರ್ಪೆಂಟಿಯರ್ ಮತ್ತು ಜೆನ್ನಿಫರ್ ಡೌಂಡಾ
ಅವರುಗಳಿಗೆ ಕ್ರಿಸ್ಪ್ ಆರ್ / ಕ್ಯಾಸ್ 9 ಜೆನೆಟಿಕ್ ಕತ್ತರಿಗಳ ಸಂಶೋಧನೆಯ ಬಗ್ಗೆ ರಸಾಯನ ಶಾಸ್ತ್ರದ ನೊಬೆಲ್ ಸಿಕ್ಕಿತು. ಇದರಲ್ಲಿ ಎಂಜೈಮ್‌ಗಳು ಡಿಎನ್‌ಎ ಅನ್ನು ತುಂಡುಗಳಾಗಿ ಕತ್ತರಿಸಿ ನಂತರ ಸಹಜ ಕೆಲಸಕ್ಕೆ ಬೇಕಾಗುವ ರೀತಿಯಲ್ಲಿ ಪುನಃ ಸೇರ್ಪಡೆಯಾಗುತ್ತದೆ.

ಚಾರ್ಪೆಂಟಿಯರ್ ಮತ್ತು ಡೌಂಡಾ ಅವರು ಯಾವುದೇ ಡಿಎನ್‌ಎ ಮಾಲಿಕ್ಯೂಲ್‌ನ್ನು ಬೇಕಾದ ಸ್ಥಳದಲ್ಲಿ ಕತ್ತರಿಸಲು ಈ ಜೆನೆಟಿಕ್ ಟೂಲ್ಸಗಳನ್ನು ನಿಯಂತ್ರಿಸಬಹುದೆಂದು ತೋರಿಸಿಕೊಟ್ಟರು. ಇದರ ಅರ್ಥ ನಾವು ಜೀವನದ ಕೋಡ್‌ನ್ನು ಪುನಃ
ಹೊಸದಾಗಿ ಬರೆಯಬಹುದು. ಕ್ಲೀವ್ ಲ್ಯಾಂಡ್ ಕ್ಲಿನಿಕ್ ಇನ್ನೋವೇಷನ್ಸ್‌ನ ಎಕ್ಸಿಕ್ಯುಟಿವ್ ನಿರ್ದೇಶಕ ಡಾ. ವಿಲಿಯಂ ಮಾರಿಸ್
ಅವರು ಈ ಸಂಶೋಧನೆ ಜೆನೆಟಿಕ್ ತೊಂದರೆಯಿರುವ ಕೋಟ್ಯಂತರ ಜನರಿಗೆ ಅನುಕೂಲವಾಗುವ ಮತ್ತು ಹಲವು ಆಯಾಮ ಗಳುಳ್ಳ ಸಂಶೋಧನೆ ಎಂದು ಅಭಿಪ್ರಾಯ ಪಡುತ್ತಾರೆ.

ಅವರು ಉದಾಹರಣೆಯಾಗಿ ಸಿಕೆಲ್ ಸೆಲ್ ರಕ್ತದ ಕಾಯಿಲೆಯನ್ನು ಉದಾಹರಿಸಿದರು. ಈ ಕಾಯಿಲೆಯಲ್ಲಿ ರಕ್ತದ ಜೀವಕೋಶಗಳು ಸಹಜಕ್ಕಿಂತ ಭಿನ್ನವಾಗಿ ವಿರೂಪಗೊಂಡು ಕುಡುಗೋಲು ಆಕಾರ ತಳೆದು ರಕ್ತದ ಹರಿವನ್ನು ತಡೆಯುತ್ತವೆ. ಪರಿಣಾಮ ಎಂದರೆ
ರಕ್ತದಿಂದ ದೇಹಕ್ಕೆ ದೊರಕಬಹುದಾದ ಆಮ್ಲಜನಕ ಕಡಿಮೆಯಾಗುತ್ತದೆ. ಕಾರಣ ಎಂದರೆ ಹಿಮೋಗ್ಲೋಬಿನ್ ಪ್ರೋಟೀನ್‌ಗೆ ಈ ಆಮ್ಲಜನಕ ಪರಿಣಾಮಕಾರಿಯಾಗಿ ಸಾಗಿಸಲು ಸಾಧ್ಯವಾಗುವುದಿಲ್ಲ. ಈ ಜೆನೆಟಿಕ್ ತಪ್ಪನ್ನು ಈ ಮೈಕ್ರೋಸ್ಕೋಪಿಕ್ ಸಾಧನ ಗಳಿಂದ ಕತ್ತರಿಸಲು ಸಾಧ್ಯ ಎಂದು ಮಾರಿಸ್‌ರ ಅಭಿಮತ. ಇದರ ಮೊದಲು ಈ ತರಹದ ಕಾಯಿಲೆಗಳನ್ನು ಚಿಕಿತ್ಸೆ ಮಾಡಲು ಕೆಲವೇ ಕೆಲವು ಔಷಧಗಳು ಲಭ್ಯವಿದ್ದವು.

ಆದರೆ ಈ ಹೊಸ ಸಾಧ್ಯತೆಯಿಂದ – ತಪ್ಪನ್ನು ಕಿತ್ತುಹಾಕಿ ಜೆನೆಟಿಕ್ ಕೋಡ್‌ನ್ನು ತಿದ್ದಲು ಸಾಧ್ಯವಾಗಿದೆ. ನಿಮ್ಮ ಮೊಬೈಲ್
-ನ್ ಅಥವಾ ಕಂಪ್ಯೂಟರ್‌ನಲ್ಲಿ ಸರಿಯಾಗಿ ಕೆಲಸ ಮಾಡದ ಆಪ್‌ನ್ನು ತೆಗೆದು ಸರಿಯಾದ ಆಪ್ ಜೋಡಿಸಿದ ಹಾಗೆ. ಈ ರೀತಿಯ ರೋಗಿಗಳು ತಮ್ಮ ಜೀವಿತಾವಧಿಯಲ್ಲಿ ನೋವು ಮತ್ತು ದುಃಖದಿಂದ ಕಳೆದಿದ್ದಾರೆ.

ಅಂತಹವರಿಗೆ ಸರಿಯಾದ ಚಿಕಿತ್ಸೆ ಮಾಡಿ ಸಮಾಧಾನ ತಂದು ಕೊಡುವಲ್ಲಿ ಈ ಹೊಸ ಸಾಧ್ಯತೆಯಿಂದ ಸಾಧ್ಯವಾಗಿದೆ. ಇದನ್ನು ನಾವು ಊಹಿಸಲೂ ಸಾಧ್ಯವಿಲ್ಲ ಎಂದು ಮಾರಿಸ್ ಅಭಿಪ್ರಾಯಪಡುತ್ತಾರೆ. ನ್ಯೂಯಾರ್ಕ್‌ನ ಎನ್ ಗ್ಲಾಂಡರ್ ಇನ್ಸ್ಟಿಟ್ಯೂಟ್ ಆಫ್ ಪ್ರೆಸಿಷನ್ ಮೆಡಿಸಿನ್‌ನ ನಿರ್ದೇಶಕ ಆಲಿವರ್ ಎಲಿಮೆಂಟೋ ಅವರು ಈ ಜೀನ್ ಚಿಕಿತ್ಸೆ ಮಾನವೀಯತೆಗೆ ಸಹಾಯ ಮಾಡುವಲ್ಲಿ ಈ ತಾಂತ್ರಿಕತೆ ಉಪಯೋಗಿಸಲು ಸಾಧ್ಯವಾಗಿದೆ. ಇದು ನೊಬೆಲ್ ಪಾರಿತೋಷಕವನ್ನು ಮೀರಿದ ಸಾಧನೆ
ಎಂದು ಅವರು ಬಣ್ಣಿಸುತ್ತಾರೆ. ಅವರು ಕೆಲಸ ಮಾಡುವ ವೆಲ್ ಕಾರ್ನೆಲ್ ಮೆಡಿಸಿನ್ ಸೆಂಟರ್‌ನಲ್ಲಿ ಇತ್ತೀಚೆಗೆ ಸಾವಿರಾರು ರೋಗಿಗಳ ಜೀನ್‌ಗಳನ್ನು ಸೀಕ್ವೆನ್ಸ್ ಮಾಡುವ ಕ್ರಿಯೆಯನ್ನು ಆರಂಭಿಸಿದ್ದಾರೆ.

ಜೆನೆಟಿಕ್ಸ್ ಮತ್ತು ಜೀನ್ ಥೆರಪಿಯ ಬಗ್ಗೆ ನಾವು ಜಾಸ್ತಿ ತಿಳಿದುಕೊಳ್ಳುತ್ತಾ ಹೋದ ಹಾಗೆ ನಮ್ಮ ವೈದ್ಯಕೀಯದ ನಿಖರತೆ ಜಾಸ್ತಿ ಯಾಗುತ್ತಾ ಹೋಗುತ್ತದೆ, ಕ್ರಮೇಣ ನಾವು ಎಲ್ಲಾ ರೀತಿಯ ಕಾಯಿಲೆಗಳಿಗೂ ಚಿಕಿತ್ಸೆಯನ್ನು ಕಂಡು ಹಿಡಿಯುತ್ತಾ ಹೋಗಬ ಹುದು ಎಂದು ಅವರ ಅಭಿಮತ.

2. ಹೊಸ ಸಂಶೋಧನೆಗಳು: ಇತ್ತೀಚೆಗೆ ಅಮೆರಿಕದ ಹಾರ್ಟ್ ಅಸೋಸಿಯೇಷನ್ ತನ್ನ ಇತ್ತೀಚಿನ ಹೊಸ ಚಿಕಿತ್ಸೆಗಳ ಬಗೆಗೆ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಮುಖ್ಯವಾದದ್ದೆಂದರೆ – ಹೈಪರ್ ಟ್ರೋಫಿಕ್ ಕಾರ್ಡಿಯೋಮಯೋಪತಿ ಚಿಕಿತ್ಸೆ
ಮಾಡುವ ಬಗ್ಗೆ 3ನೆಯ ಹಂತದ ಅಧ್ಯಯನ ನಡೆಯುತ್ತಿದೆ ಎಂಬ ವಿಚಾರ.

ಹೈಪರ್ ಟ್ರೋಫಿಕ್ ಕಾರ್ಡಿಯೋಮಯೋಪತಿ ಎಂದರೆ ಹೃದಯದ ಮಾಂಸ ಖಂಡಗಳು ದಪ್ಪಗಾಗಿ ತುಂಬಾ ಗಡುಸಾಗಿ
ಹೃದಯ ಬಡಿದುಕೊಳ್ಳುವ ರಿದಂನ್ನು ಏರು ಪೇರು ಮಾಡುತ್ತವೆ. ಹಾಗೆಯೇ ಏಟ್ರಿಯಲ್ ಫಿಬ್ರಿಲೇಷನ್‌ಗೆ ಹೊಸ ರೀತಿಯ ಚಿಕಿತ್ಸೆ ಕಂಡುಹಿಡಿಯಲಾಗಿದೆ, ಪಾರ್ಶ್ವವಾಯುವನ್ನು ಬಾರದಂತೆ ತಡೆಯಲು ಸಣ್ಣ ರಂಧ್ರ ಕೊರೆದು ಕೊಳವೆ ತೂರಿಸಿ ಮಾಡುವ ಶಸ್ತ್ರಚಿಕಿತ್ಸೆ ರೂಪಿಸಲಾಗಿದೆ. ಕಾರೋನರಿ ಹೃದಯದ ಕಾಯಿಲೆಗೆ ಬಹಳಷ್ಟು ರೀತಿಯ ಚಿಕಿತ್ಸೆ ಅವಶ್ಯಕತೆ ಇಲ್ಲ ಎಂಬ
ಹೊಸ ಪ್ರಯೋಗ.

ಅಮೆರಿಕದ ಹಾರ್ಟ್ ಅಸೋಸಿಯೇಷನ್‌ನ ಅಧ್ಯಕ್ಷ ಡಾ.ಮಿಚೆಲ್ ಎಲ್ ಕೈಂಡ್ ಅವರು ಕಳೆದ ವರ್ಷ (2020) ವೈದ್ಯಕೀಯದ ಹಲವಾರು ವಿಭಾಗ ಗಳಲ್ಲಿನ ಸಮನ್ವಯತೆಯಿಂದ ನಮಗೆ ಇದೆ ಸಾಧಿಸಲು ಸಾಧ್ಯವಾಗಿದೆ ಎಂದು ನುಡಿಯುತ್ತಾರೆ. ಈ ವರ್ಷ
ಡಯಾಬಿಟಿಸ್ ಚಿಕಿತ್ಸೆ ಮಾಡುವ ಔಷಧ – ಸೋಡಿಯಂ ಗ್ಲೂಕೋಸ್ ಟ್ರಾನ್ಸ್‌ಪೋರ್ಟರ್ 2 ಇನ್ ಹಿಬಿಟರ್ಸ್‌ಗಳು ಹೃದಯ ವೈಫಲ್ಯ (Heart failure) ರೋಗಿಗಳಿಗೆ ತುಂಬಾ ಅನುಕೂಲವಾಗುತ್ತವೆ ಎಂದು ತಿಳಿದುಬಂದಿತು. ಹಾಗೆಯೇ ರೋಗಿಯಲ್ಲಿ
ಡಯಾಬಿಟಿಸ್ ಇಲ್ಲದಿದ್ದಾಗಲೂ ಇವು ಅನುಕೂಲ ಎಂದು ಗೊತ್ತಾಯಿತು.

ಅಲ್ಲದೆ ಎಲ್ ಕೈಂಡ್ ಅವರು ಈಗಿನ ಸೋಂಕು ಕಾಯಿಲೆಗಳಾದ – ಮತ್ತು ಕೋವಿಡ್ ಕಾಯಿಲೆಗಳು, ಹೃದಯದ ಕಾಯಿಲೆಗಳಿಗೆ
ಮತ್ತು ಪಾರ್ಶ್ವವಾಯುವಿಗೆ ಹೇಗೆ ಹೆಚ್ಚಿನ ರಿಸ್ಕ್ ತರಬಲ್ಲವು ಎಂಬುದೂ ಸಹಿತ ಈ ವರ್ಷ ಗೊತ್ತಾಯಿತು ಎಂದು ನುಡಿಯುತ್ತಾರೆ. ಈ ವರ್ಷ ಕೈಗೊಂಡ ದೊಡ್ಡ ಸಮೀಕ್ಷೆಯಿಂದ ಅಮೆರಿಕದಲ್ಲಿ ಏರುರಕ್ತದೊತ್ತಡ ನಿಯಂತ್ರಣ ಮಾಡುವ ಕ್ರಮ ಮೊದಲಿಗಿಂತ ಕಡಿಮೆಯಾಗುತ್ತಿದೆ. ಇದು ಎಚ್ಚರಿಕೆಯ ಸಂಕೇತ ಎಂದು ಅವರು ನುಡಿಯುತ್ತಾರೆ.

3. ಕ್ಯಾನ್ಸರ್ ಚಿಕಿತ್ಸೆಯಲ್ಲಿ ಪ್ರಗತಿ: ನ್ಯೂಯಾರ್ಕ್ ನ ಪರ್ಲ್ ಮಟರ್ ಕ್ಯಾನ್ಸರ್ ಕೇಂದ್ರದ ಬೆಂಜಮಿನ್ ನೀಲ್ 2020ರಲ್ಲಿ ಕ್ಯಾನ್ಸರ್ ಸಂಶೋಧನೆ ಹಲವಾರು ರಂಗದಲ್ಲಿ ಪ್ರಗತಿ ಸಾಧಿಸಿದೆ ಎಂದು ನುಡಿಯುತ್ತಾರೆ. ರಕ್ತಪರೀಕ್ಷೆಗಳಿಂದ ಹಲವು ಕ್ಯಾನ್ಸರ್ ‌ಗಳನ್ನು ಆರಂಭದ ಕಂಡು ಹಿಡಿಯಲು ಹಲವಾರು ಪ್ರಯೋಗಗಳು, ಸಂಶೋಧನೆಗಳು ನಡೆಯುತ್ತಿವೆ. ಕ್ಯಾನ್ಸರ್ ಟ್ಯೂಮರ್‌ಗಳು ರಕ್ತಕ್ಕೆ ಡಿಎನ್‌ಎ ಬಿಡುಗಡೆ ಮಾಡುತ್ತವೆ ಎಂದು ಹಲವು ಸಮಯದಿಂದ ಗೊತ್ತಿದೆ. ಈ ಟ್ಯೂಮರ್‌ಗಳನ್ನು ಮಾನಿಟರ್ ಮಾಡಲು ತಾಂತ್ರಿಕತೆ ಅಭಿವೃದ್ಧಿ ಪಡಿಸುತ್ತಿದ್ದೇವೆ. ಹಾಗೆಯೇ ಕ್ಯಾನ್ಸರ್ ಕಾಯಿಲೆ ಪುನಃ ಪುನಃ ಬಾರದಂತೆ ಮಾಡುವಲ್ಲಿ ಮಾಡಬೇಕಾದ ಕ್ರಮಗಳ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ.

ರೆಗ್ಯುಲೇಟರಿ ಸೀಕ್ವೆನ್ಸ್ ಪ್ಯಾಟರ್ನ್‌ಗಳನ್ನು ನಿಯಂತ್ರಿಸುವ ತಾಂತ್ರಿಕತೆಯ ಬಗ್ಗೆ ಪ್ರಯೋಗ ನಡೆಯುತ್ತಿದೆ. ಇದರಲ್ಲಿ ನಮ್ಮ ದೇಹದಲ್ಲಿ ಜೀನ್ ವ್ಯಕ್ತಪಡಿಸುವ ರೀತಿಯನ್ನು ಬದಲಿಸುವ ಡಿಎನ್‌ಎ ಭಾಗವೇ ಮೇಲೆ ತಿಳಿಸಿದ ರೆಗ್ಯುಲೇಟರಿ ಸೀಕ್ವೆನ್ಸ್
ಪ್ಯಾಟರ್ನ್. ಹಾಗೆಯೇ ಈ ವರ್ಷ ಮತ್ತೊಂದು ಅಧ್ಯಯನ ಎಂದರೆ ಜೆನೆಟಿಕ್ ಮ್ಯುಟೇಷನ್‌ಗಳಿಗೆ ಸೂಕ್ತವಾದ ಔಷಧ ಕಂಡು ಹಿಡಿಯುವುದು. ಪ್ರಾಸ್ಟೇಟ್ ಕ್ಯಾನ್ಸರ್ ಜೀವಕೋಶಗಳ ಪ್ರಸಾರಕ್ಕೆ ತಡೆಒಡ್ಡುವ ಹೊಸ ವಸ್ತುವನ್ನು ಕಂಡುಹಿಡಿಯಲು ಪ್ರಯೋಗ ನಡೆಯುತ್ತಿದೆ.

4.ವೈದ್ಯಕೀಯ ಚಿಕಿತ್ಸೆಯಲ್ಲಿ ಪ್ರಜಾಪ್ರಭುತ್ವ ಧೋರಣೆ: ಈ ವರ್ಷ ವೈದ್ಯಕೀಯ ಚಿಕಿತ್ಸೆಯ ರಂಗದಲ್ಲಿ ಆದ ದೊಡ್ಡ ಬದಲಾವಣೆ ಎಂದರೆ – ಮನೆಯಲ್ಲಿಯೇ ಕುಳಿತು ಕೆಲಸ ಮಾಡುವ ವ್ಯಕ್ತಿಗಳ ಜೀವನ ಶೈಲಿಯಿಂದ ವೈದ್ಯಕೀಯ ರಂಗದಲ್ಲಿ ಆದ ಬೆಳವಣಿಗೆ. ಹೆಚ್ಚೆಚ್ಚು ಜನರು ಆಫೀಸ್ ಮತ್ತು ಸಾರ್ವಜನಿಕ ಸ್ಥಳಗಳನ್ನು ಬಿಟ್ಟು ತಮ್ಮ ಮನೆಯ ಇರಲಾರಂಭಿಸಿದ ಮೇಲೆ
ಟೆಲಿಮೆಡಿಸಿನ್‌ಗೆ ಬದಲಾಗುತ್ತಿದ್ದಾರೆ. ಡಾಕ್ಟರುಗಳ ಆಫೀಸ್‌ಗಳಲ್ಲಿ ಎಡೆ ಜೂಮ ಪರದೆಗಳು ಬಂದಿವೆ.

ಇದೊಂದು ಹೊಸ ಶೋಧ ಅಂತಲ್ಲದಿದ್ದರೂ ವೈದ್ಯಕೀಯ ಕ್ಷೇತ್ರದಲ್ಲಿನ ಈ ಬೆಳವಣಿಗೆಯೂ ನಮ್ಮ ಜೀವನದ ಅವಿಭಾಜ್ಯ ಅಂಗ ವಾಗಿದೆ. ಹಾಗೆಯೇ ಪ್ರಾಣ ಉಳಿಸುವ ವ್ಯವಸ್ಥೆಯೂ ಆಗಿದೆ. ಈ ಕರೋನಾ ಸಾಂಕ್ರಾಮಿಕವು ರೋಗಿಗಳು ಎಲ್ಲಿದ್ದಾರೋ ಅಲ್ಲಿಯೇ
ನಾವು ಅವರನ್ನು ಪರೀಕ್ಷಿಸಬೇಕು, ಅವರನ್ನು ಇಂತಲ್ಲಿಗೇ ಬನ್ನಿ ಎಂದು ಒತ್ತಾಯಿಸಬಾರದು.

ಹಾಗಾಗಿ ಈಗ ಟೆಲಿಮೆಡಿಸಿನ್, ಸ್ಕೈಪ್‌ಗಳ ಮೂಲಕ ರೋಗಿಗಳಿಗೆ ಸಲಹೆ, ಹಾಗೆಯೇ ವಿಡಿಯೋ ಉಪಯೋಗಿಸುವುದು ಇವೆ ಜಾಸ್ತಿಯಾಗಿವೆ ಎಂದು ಮಾರಿಸ್ ನುಡಿಯುತ್ತಾರೆ. ರೋಗಿಗಳಿಗೆ ಅಗತ್ಯವಾದ ಚಿಕಿತ್ಸೆ ಕೊಡುವಲ್ಲಿ ಇರುವ ಅಡೆತಡೆಗಳನ್ನು ತೆಗೆಯುವಲ್ಲಿ ಸರಕಾರದ ಮಟ್ಟ ದಲ್ಲಿಯೂ ಕೆಲಸ ಆಗಲು ಈ ಸಾಂಕ್ರಾಮಿಕ ಸಹಾಯ ಮಾಡಿದೆ ಎಂದು ಅವರು ನುಡಿಯು ತ್ತಾರೆ.

ವೈದ್ಯರು ಗಳು ತಮ್ಮ ರೋಗಿಗಳನ್ನು ಭೌತಿಕವಾಗಿ ನೇರವಾಗಿ ಪರೀಕ್ಷಿಸಲು ಸಾಧ್ಯವಾಗದಿದ್ದರೂ ಈ ಟೆಲಿಮೆಡಿಸಿನ್ ಸಹಾಯ ದಿಂದ ರೋಗಿಗಳು ವೈದ್ಯರನ್ನು ಸಂಪರ್ಕಿಸುವ ವಿಧಾನ ಬದಲಾದರೂ ಅವರ ಸಂಖ್ಯೆ ಖಂಡಿತಾ ಕಡಿಮೆಯಾಗಿಲ್ಲ. ಹಾಗೆಯೇ ಇದು ಹಳೆಯ ವಿಧಿ ವಿಧಾನಗಳನ್ನು ಪ್ರಶ್ನಿಸುವ ರೀತಿಯಲ್ಲಿ ಬೆಳೆದು ಬಂದು ಆರೋಗ್ಯ ಕ್ಷೇತ್ರದಲ್ಲಿ ಒಳ್ಳೆಯದನ್ನು ಮಾಡಿದೆ
ಎನ್ನುತ್ತಾರೆ ಅವರು. ಎಲ್ಲಾ ಪ್ರಗತಿಗಳು ಓಹ್ ಎನ್ನುವಷ್ಟು ಮಟ್ಟದ ಪ್ರಯೋಗಾಲಯದ ಹೊಸತೇ ಇರಬೇಕು ಎಂದೇನಿಲ್ಲ.

ಒಂದು ಸಾಂಕ್ರಾಮಿಕ ರೋಗವು ಈ ರೀತಿಯ ಪ್ರಗತಿಯನ್ನು ತರುವಲ್ಲಿ ಅನಿವಾರ್ಯವಾಯಿತಲ್ಲ, ಇದು ದುಃಖಕರ ಸಂಗತಿ
ಎಂದು ಅವರ ಅಂಬೋಣ.

5.ಆಲ್ಜೀಮರ್ಸ್ ಕಂಡು ಹಿಡಿಯಲು ರಕ್ತ ಪರೀಕ್ಷೆ: ಆಲ್ಜೀಮರ್ಸ್ ಅಥವಾ ಮರೆಗುಳಿತನ ಕಾಯಿಲೆಯನ್ನು ಆದಷ್ಟು ಬೇಗ ಕಂಡು ಹಿಡಿಯಲು ಹೊಸದೊಂದು ರಕ್ತ ಪರೀಕ್ಷೆಯ ಬಗ್ಗೆ ಈ ವರ್ಷ ಪ್ರಗತಿ ಆಗಿದೆ. ಆದರೆ ಇನ್ನೂ ಟ್ರಯಲ್‌ನ ಹಂತದಲ್ಲಿದೆ. ಇದು ಒಂದು ವೇಳೆ ಸಫಲಗೊಂಡು ಒಪ್ಪಿಗೆ ಸಿಕ್ಕರೆ ಈ ಕಾಯಿಲೆಯ ರೋಗಿಗಳಿಗೆ ನಿಜವಾಗಿಯೂ ವರದಾನ ಆಗಬಲ್ಲದು. ಜಗತ್ತಿನಾದ್ಯಂತ 15 ಮಿಲಿಯನ್‌ಗಿಂತಲೂ ಜಾಸ್ತಿ ಆಲ್ಜೀಮರ್ಸ್ ರೋಗಿಗಳಿದ್ದಾರೆ ಎನ್ನಲಾಗಿದೆ.

2060ರ ಹೊತ್ತಿಗೆ ಈ ಸಂಖ್ಯೆ ಇದರ ಮೂರರಷ್ಟಾಗುತ್ತದೆ ಎಂಬ ಅಂದಾಜಿದೆ. ಹಲವು ವೈದ್ಯಕೀಯ ಚಿಕಿತ್ಸೆಗಳು 2020ರಲ್ಲಿ
ಬೆಳವಣಿಗೆ ಹೊಂದಿ 2021ರಲ್ಲಿ ಹೊರಗೆ ಉಪಯೋಗಕ್ಕೆ ಬಂದು ವೈದ್ಯಕೀಯ ರಂಗವನ್ನು ಬದಲಿಸಬಹುದು ಎಂದು ತಜ್ಞ ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ.

ಇವುಗಳತ್ತ ಒಂದು ಗಮನಹರಿಸೋಣ:
1. ಮೈಗ್ರೇನ್ ಕಾಯಿಲೆಗೆ ಹೊಸ ಔಷಧಗಳು: ಹಲವು ಕೋಟಿ ಜನರು ಜಗತ್ತಿನಾದ್ಯಂತ ಮೈಗ್ರೇನ್ ಕಾಯಿಲೆಯಿಂದ ನರಳುತ್ತಿzರೆ. ನಿರ್ದಿಷ್ಟ ಚಿಕಿತ್ಸೆ ಇಲ್ಲದ ಇದಕ್ಕೆ ಏರುರಕ್ತದೊತ್ತಡದ ಮಾತ್ರೆಗಳು, ಮಾನಸಿಕ ಖಿನ್ನತೆಯ ಔಷಧಗಳು, ಕಂಪನ ನಿಲ್ಲಿಸುವ ಔಷಧಗಳು – ಇವುಗಳನ್ನು ಕೊಟ್ಟು ತಾತ್ಕಾಲಿಕ ಶಮನಕ್ಕೆ ಪ್ರಯತ್ನಿಸಲಾಗುತ್ತಿದೆ.

2018ರಲ್ಲಿ ಕ್ಯಾಲ್ಸಿಟೋನಿನ್ ಜೀನ್ ರಿಲೇಟೆಡ್ ಪೆಪ್ಟೆಡ್ (CGRP) ವಸ್ತುವನ್ನು ತಡೆಯುವ ಔಷಧಗಳು ಹುಟ್ಟಿಕೊಂಡು, ಮೈಗ್ರೇನ್‌ನಲ್ಲಿ ಕಂಡು ಬರುವ ವಸ್ತುವನ್ನು ತಡೆಯುತ್ತವೆ. ಮೈಗ್ರೇನ್ ನಲ್ಲಿ CGRP ಮಟ್ಟವು ಗಮನಾರ್ಹವಾಗಿ ಹೆಚ್ಚುತ್ತದೆ.
2020ರಲ್ಲಿ ವೈದ್ಯರು ಈ ಔಷಧವನ್ನು ಬಹಳವಾಗಿ ಉಪಯೋಗಿಸಿದ್ದಾರೆ.

2. ಪಿಎಆರ್‌ಪಿಇನ್ ಹಿಬಿಟರ್ಸ್: ಪ್ರಾಸ್ಟೇಟ್ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಲವಾರು ಪ್ರಗತಿಗಳು ಆಗಿದ್ದರೂ ಈ ಕಾಯಿಲೆ ಜಗತ್ತಿನಾದ್ಯಂತ ಲಕ್ಷಾಂತರ ಮರಣಕ್ಕೆ ಕಾರಣವಾಗಿದೆ. ಪಿಎಆರ್‌ಪಿ ಇನ್ ಹಿಬಿಟರ್ಸ್ ಔಷಧಗಳಿಗೆ ೨೦೨೦ರ ಮೇನಲ್ಲಿ ಎಫ್ಡಿಎಯ ಒಪ್ಪಿಗೆ ದೊರೆತ ನಂತರ ಇದು ಗಮನಾರ್ಹವಾದ ಚಿಕಿತ್ಸೆಯಾಗಿ ಬದಲಾಗಿದೆ.

3. ಹೆಪಟೈಟಿಸ್ ಸಿ ಚಿಕಿತ್ಸೆಯ ಪ್ರಗತಿ: ಹೆಪಟೈಟಿಸ್ ಸಿ ಕಾಯಿಲೆ ಲಿವರ್ ಸಿರೋಸಿಸ್, ಲಿವರ್ ವೈಫಲ್ಯ ಮತ್ತು ಲಿವರ್ ಕ್ಯಾನ್ಸರನ್ನು ಉಂಟುಮಾಡುತ್ತದೆ. ಇದುವರೆಗೆ ಇದಕ್ಕೆ ವ್ಯಾಕ್ಸೀನ್ ಲಭ್ಯವಿಲ್ಲ. ಚಿಕಿತ್ಸೆಗೆ ಉಪಯೋಗಿಸಲು ಬಳಸುವ ಹಲವು ಔಷಧಗಳು ಗಂಭೀರ ಪಾರ್ಶ್ವ ಪರಿಣಾಮ ಹೊಂದಿವೆ. ಇತ್ತೀಚಿನ ಹಲವು ಔಷಧಗಳ ಸಂಯುಕ್ತವು ಶೇ.೯೦ಕ್ಕೂ ಹೆಚ್ಚಿನ
ಸಫಲತೆ ತೋರಿ ಭವಿಷ್ಯದ ದಿನಗಳಿಗೆ ಆಶಾದಾಯಕ ವಾಗಿ ಕಂಡು ಬರುತ್ತದೆ ಎನ್ನಲಾಗಿದೆ.

4. ಸಿಸ್ಟಿಕ್ -ಬ್ರೋಸಿಸ್ ಕಾಯಿಲೆಗೆ ಹೊಸ ಚಿಕಿತ್ಸೆ: ಟ್ರಾನ್ಸ್ ಮೆಂಬ್ರೇನ್ ಕಂಡಕ್ಟನ್ಸ್ ರೆಗ್ಯುಲೇಟರ್ ಮಾಡ್ಯುಲೇಟರ್ಸ್ – ಈ ಔಷಧಗಳು ಸಿಸ್ಟಿಕ್ -ಬ್ರೋಸಿಸ್ ಎಂಬ ಶ್ವಾಸಕೋಶದ ಕಾಯಿಲೆಯ ಚಿಕಿತ್ಸೆಯಲ್ಲಿ ವರದಾನವಾಗಿ ಪರಿಣಮಿಸಿದೆ.
5. ಸ್ಮಾರ್ಟ್ ಫೋಸ್ ಮೇಕರ್ಸ್/ ಡಿ ಫಿಬ್ರಿಲೇಟರ್ಸ್: ರಿಮೋಟ್ ಆಗಿ ಕಾರ್ಯ ನಿರ್ವಹಿಸುವ ಪೋಸ್ ಮೇಕರ್ಸ್ ಅಥವಾ ಫಿಬ್ರಿಲೇಟರ್‌ಗಳಿದ್ದರೆ ಹೇಗೆ? ಸ್ಮಾರ್ಟ್ ಫೋನ್‌ಗಳು ಮತ್ತು ಮೊಬೈಲ್ ಆಪ್‌ಗಳ ಮೂಲಕ ಈ ರೀತಿಯ ಕಾರ್ಯ ನಿರ್ವಹಿಸುವ ವ್ಯವಸ್ಥೆ ಈಗ ಬಂದಿದೆ.

6. ಪ್ರೈಮರಿ ಪ್ರೋಗ್ರೆಸ್ಸಿವ್ ಮಲ್ಟಿಪಲ್ ಸಿರೋಸಿಸ್ ಮಲ್ಟಿಪಲ್ ಸಿರೋಸಿಸ್ ಕಾಯಿಲೆಗೆ ಇತ್ತೀಚೆಗೆ ಮಾನೋಕ್ಲೋನಲ್ ಆಂಟಿಬಾಡಿಯೊಂದು ಚಿಕಿತ್ಸೆಯಾಗಿ ರೂಪುಗೊಂಡಿದೆ.

error: Content is protected !!