Monday, 5th December 2022

ಅಕ್ರಮಗಳ ತನಿಖೆಗೆ ಇಚ್ಛಾಶಕ್ತಿ ಪ್ರದರ್ಶನ ಯಾವಾಗ ?

ವರ್ತಮಾನ

maapala@gmail.com

ರಾಜ್ಯದಲ್ಲಿ ನಡೆದಿರುವ ಹಗರಣಗಳ ಕುರಿತು ಭಾರಿ ಚರ್ಚೆಯೊಂದಿಗೆ ತನಿಖೆಯ ಸವಾಲು-ಪ್ರತಿಸವಾಲುಗಳು ಹೊಮ್ಮುತ್ತಿವೆ. ಆದರೆ, ಇದು ಕಾರ್ಯರೂಪಕ್ಕೆ ಬರುವುದೇ? ಬಂದರೆ ಅದರಿಂದ ಏನಾದರೂ ಪ್ರಯೋಜನವಾಗಿ ಕಾನೂನು ಬಾಹಿರ ಕೃತ್ಯಗಳಿಗೆ ಕಡಿವಾಣ ಬೀಳುವುದೇ?

ವಿಧಾನಮಂಡಲ ಅಧಿವೇಶನ ಮುಗಿದಿದೆ. ಚುನಾವಣಾ ವರ್ಷ, ರಾಜಕೀಯ ಜಿದ್ದಾಜಿದ್ದಿನ ಕಾರಣದಿಂದ ಈ ಬಾರಿಯ ಅಧಿವೇಶನ ಹೆಚ್ಚು ಗದ್ದಲದಿಂದ ಕೂಡಿರಬಹುದು ಎಂಬ ನಿರೀಕ್ಷೆಯನ್ನು ಹುಸಿ ಮಾಡಿ ಬಹುತೇಕ ಕಲಾಪ ಯಶಸ್ವಿಯಾಗಿ ನಡೆದಿದೆ. ಹಾಲಿ ಬಿಜೆಪಿ ಸರಕಾರದ ಅಕ್ರಮ, ಹಗರಣಗಳ ಕುರಿತು ಪಟ್ಟಿ ಮಾಡಿಕೊಂಡಿದ್ದ ಕಾಂಗ್ರೆಸ್‌ಗೆ, ಪಿಎಸ್‌ಐ ನೇಮಕ ಅಕ್ರಮ ಹೊರತು ಪಡಿಸಿ ಉಳಿದ ಯಾವುದೇ ವಿಚಾರದ ಬಗ್ಗೆ ಚರ್ಚೆಗೆ ಅವಕಾಶ ಸಿಕ್ಕಿಲ್ಲ.

ಬಿಎಂಎಸ್ ಸಾರ್ವಜನಿಕ ಟ್ರಸ್ಟ್ ಅನ್ನು ಖಾಸಗಿ ಟ್ರಸ್ಟ್ ಆಗಿ ಪರಿವರ್ತಿಸಿದ ಸರಕಾರದ ವಿರುದ್ಧ ಜೆಡಿಎಸ್ ಧರಣಿಯೊಂದಿಗೆ ಚಳಿಗಾಲದ ಅಧಿವೇಶನಕ್ಕೆ ತೆರೆ ಬಿದ್ದಿದೆ. ಆದರೆ, ಆಡಳಿತ ಮತ್ತು ಪ್ರತಿಪಕ್ಷಗಳ, ಅದರಲ್ಲೂ ಮುಖ್ಯವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ನಿಜವಾದ ರಾಜಕೀಯ ಸಮರ ಇನ್ನಷ್ಟೇ ಆರಂಭವಾಗಬೇಕಿದೆ.

ಬಿಜೆಪಿ ಸರಕಾರದ ಅಕ್ರಮ, ಹಗರಣಗಳ ಬಗ್ಗೆ ಸಾರ್ವಜನಿಕ ಹೋರಾಟದೊಂದಿಗೆ ಕಾನೂನು ಹೋರಾಟವನ್ನೂ ಮಾಡುವ ಘೋಷಣೆಯೊಂದಿಗೆ ಕಾಂಗ್ರೆಸ್ ಹೋರಾಟಕ್ಕೆ ಅಣಿಯಾಗಿದ್ದರೆ, ನಮ್ಮ ಸರಕಾರ, ಅವರ ಸರಕಾರದ ಅವಧಿಯಲ್ಲಿ ನಡೆದಿರುವ ಎಲ್ಲ ಅಕ್ರಮ, ಹಗರಣಗಳನ್ನೂ ತನಿಖೆ ಮಾಡುತ್ತೇವೆ.

ಆಗ ಕಾಂಗ್ರೆಸ್‌ನವರ ಬಣ್ಣ ಬಯಲಾಗುತ್ತದೆ ಎಂಬ ಪ್ರತಿಸವಾಲಿನೊಂದಿಗೆ ಬಿಜೆಪಿಯೂ ತೊಡೆ ತಟ್ಟಿದೆ. ಆದರೆ, ಇದು ಕೇವಲ ರಾಜಕೀಯ ಲಾಭದ ಹೇಳಿಕೆಗಳೇ ಅಥವಾ ನಿಜವಾಗಿಯೂ ಕಾನೂನು ಹೋರಾಟ, ತನಿಖೆಗಳು ನಡೆಯುತ್ತವೆಯೇ? ಇದರಿಂದ ಸರಿಯಾದ ಫಲಿತಾಂಶ ಹೊರಬಂದು ರಾಜಕೀಯ ಪಕ್ಷಗಳ ನಿಜಬಣ್ಣ ಬಯಲಾಗುವುದೇ? ತನಿಖೆ ವಿಚಾರದಲ್ಲಿ ಸರಕಾರ ನುಡಿದಂತೆ ನಡೆದುಕೊಳ್ಳುತ್ತದೆಯೇ? ಸದ್ಯದ ಪರಿಸ್ಥಿತಿ ಗಮನಿಸಿದಾಗ ಅಂತಹ ಯಾವುದೇ ಗಂಭೀರ ಕ್ರಮಗಳು ಆಡಳಿತ ಅಥವಾ ಪ್ರತಿಪಕ್ಷಗಳು ಕೈಗೊಳ್ಳುವ ಪರಿಸ್ಥಿತಿ ಕಾಣಿಸುವುದಿಲ್ಲ.

ಇದನ್ನು ಹೊಂದಾಣಿಕೆ ಎಂದೂ ಹೇಳಬಹುದು. ಏಕೆಂದರೆ, ನೀನು ಹೊಡೆದಂತೆ ಮಾಡು, ನಾನು ಅತ್ತಂತೆ ಮಾಡುತ್ತೇನೆ ಎನ್ನು
ವುದು ರಾಜಕೀಯ ಪಕ್ಷಗಳ ನಾಯಕರು ಮೊದಲಿನಿಂದಲೂ ಅನುಸರಿಸಿಕೊಂಡು ಬಂದ ಸಂಪ್ರದಾಯ. ತನಿಖೆ ವಿಚಾರದಲ್ಲಿ ಸವಾಲು-ಪ್ರತಿಸವಾಲುಗಳನ್ನು ಹಾಕಿಕೊಳ್ಳುವುದಕ್ಕಷ್ಟೇ ಈ ಅಕ್ರಮಗಳ ವಿರುದ್ಧದ ರಾಜಕೀಯ ಹೋರಾಟ ಸೀಮಿತ ವಾಗುತ್ತದೆ.

ಉದಾಹರಣೆಗೆ 545 ಪಿಎಸ್‌ಐಗಳ ನೇಮಕ ಅಕ್ರಮದ ವಿಚಾರವನ್ನೇ ತೆಗೆದುಕೊಳ್ಳೋಣ. ಪ್ರಕರಣದ ಕುರಿತು ಸರಕಾರ ಸಿಐಡಿ ತನಿಖೆ ನಡೆಸುತ್ತಿದೆ. ಎಡಿಜಿಪಿ ದರ್ಜೆಯ ಐಪಿಎಸ್ ಅಧಿಕಾರಿ ಬಂಧನವಾಗಿದೆ. ಆದರೆ, ಅಲ್ಲೊಬ್ಬ ಆರ್ .ಡಿ.ಪಾಟೀಲ್, ಇಲ್ಲೊಬ್ಬ ದಿವ್ಯಾ ಹಾಗರಗಿ ಬಿಟ್ಟರೆ ಯಾವುದೇ ಪ್ರಮುಖ ರಾಜಕಾರಣಿಗಳ ಬಂಧನವೂ ಆಗಿಲ್ಲ. ಅದು ಆಗುವ ಲಕ್ಷಣವೂ ಇಲ್ಲ. ಮತ್ತೊಂದೆಡೆ ಈ ಪ್ರಕರಣವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ಕಾಂಗ್ರೆಸ್ ಸದನದ ಹೊರಗೆ ಮತ್ತು ಒಳಗೆ ಹೋರಾಟ ಮಾಡಿತು.

ನ್ಯಾಯಾಂಗ ತನಿಖೆಗೆ ಆದೇಶಿಸುವಂತೆ ಆಗ್ರಹಿಸಿತು. ಆದರೆ, ಸರಕಾರ ಈ ತನಿಖೆಗೆ ಒಪ್ಪಿಲ್ಲ. ಅದರ ಬದಲಾಗಿ ಸಿಐಡಿ ತನಿಖೆ ಸಾಕು ಎನ್ನುತ್ತಿದೆ. ಇನ್ನು ರಾಜಕೀಯವಾಗಿ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಅವಧಿ ಯಲ್ಲಿ ನಡೆದ ಪಿಎಸ್‌ಐ ನೇಮಕ ಅಕ್ರಮ ಕುರಿತು ಪ್ರಸ್ತಾಪಿಸಿ ತಿರುಗೇಟು ನೀಡಿದೆ. ಆಗ ಸಿದ್ದರಾಮಯ್ಯ ಸರಕಾರ ಡಿಜಿಪಿ ದರ್ಜೆಯ ಅಽಕಾರಿಯನ್ನು ರಕ್ಷಿಸಿತು. ಅವರು ನಿವೃತ್ತಿ ತೆಗೆದುಕೊಳ್ಳಲು ಅವಕಾಶ ನೀಡಿತು ಎಂದು ಆರೋಪಿಸಿದೆ. ಆದರೆ, ಆ ಬಗ್ಗೆ ತನಿಖೆಗೆ ಆದೇಶಿಸುತ್ತೇವೆ ಎಂದು ಹೇಳುತ್ತಿದೆಯೇ ಹೊರತು ಹೇಳಿದಂತೆ ನಡೆದುಕೊಳ್ಳುತ್ತಿಲ್ಲ.

ಹಾಗೆಂದು ನ್ಯಾಯಾಂಗ ತನಿಖೆ ನಡೆದರೂ ಅದರಿಂದ ಫಲಿತಾಂಶ ಸಿಗುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ. ಇದಕ್ಕೆ ಉದಾಹರಣೆ ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ನ್ಯಾಯಮೂರ್ತಿ ಕೆಂಪಣ್ಣ ಆಯೋಗದ ತನಿಖೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 2015ರಲ್ಲಿ ಅರ್ಕಾವತಿ ಬಡಾವಣೆಗಾಗಿ ಸ್ವಾಧೀನಪಡಿಸಿಕೊಂಡಿದ್ದ 541 ಎಕರೆ ಭೂಮಿಯನ್ನು ಡಿನೋಟಿಫೈ (ರಿಡೂ) ಮಾಡಿದ್ದಾರೆ ಎಂಬ ಬಗ್ಗೆ ಭಾರೀ ವಿವಾದವಾಗಿತ್ತು.

ಒತ್ತಡಕ್ಕೆ ಮಣಿದ ಸರಕಾರ ನ್ಯಾಯಮೂರ್ತಿ ಕೆಂಪಣ್ಣ ಆಯೋಗ ನೇಮಕ ಮಾಡಿತ್ತು. ಈ ಆಯೋಗ ವಿಚಾರಣೆ ನಡೆಸಿ 2017ರ ಆಗಸ್ಟ್ 23ರಂದು ಸರಕಾರಕ್ಕೆ ತನ್ನ ವರದಿ ಸಲ್ಲಿಸಿತ್ತು. ಆದರೆ, ಆಗಿನ ಸರಕಾರ ಈ ವರದಿಯನ್ನು ಸದನದಲ್ಲಿ ಮಂಡಿಸಲಿಲ್ಲ. ಅಷ್ಟೇ ಏಕೆ, ಈಗ ಸಿದ್ದರಾಮಯ್ಯ ಸೇರಿದಂತೆ ಹಿಂದಿನ ಕಾಂಗ್ರೆಸ್ ಸರಕಾರದ ವಿರುದ್ಧ ಇದೇ ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣ ಇಟ್ಟುಕೊಂಡು ಆರೋಪಗಳನ್ನು ಮಾಡುತ್ತಿರುವ ಹಾಲಿ ಸರಕಾರ ಕೂಡ ನ್ಯಾ. ಕೆಂಪಣ್ಣ ಆಯೋಗದ ವರದಿಯನ್ನು ಸದನದಲ್ಲಿ ಮಂಡಿಸಲು ಆಸಕ್ತಿ ತೋರಿಸುತ್ತಿಲ್ಲ.

ಏಕೆಂದರೆ, ನ್ಯಾಯಾಂಗ ತನಿಖೆಯ ವರದಿಯಲ್ಲಿ ಸರಕಾರದ ಕಡೆಯಿಂದ ಲೋಪ ಆಗಿದ್ದು ಕಂಡುಬಂದರೆ ಕಾನೂನು ಪ್ರಕಾರ
ಕ್ರಮ ಕೈಗೊಳ್ಳಲೇ ಬೇಕಾಗುತ್ತದೆ. ಆದರೆ, ಅಧಿಕಾರಕ್ಕಾಗಿ ಕಚ್ಚಾಡುತ್ತ ಉಳಿದಂತೆ ಹೊಂದಾಣಿಕೆ ಮಾಡಿಕೊಳ್ಳುವ ರಾಜ ಕಾರಣಿಗಳು ಅಂತಹ ಅಪಾಯ ಮೈಮೇಲೆ ಎಳೆದುಕೊಳ್ಳಲು ಸಿದ್ಧರಿಲ್ಲ. ಈಗ ನಾವು ಅವರ ವಿರುದ್ಧ ಕ್ರಮ ಕೈಗೊಂಡರೆ,
ನಾಳೆ ಅವರೂ ನಮ್ಮ ವಿರುದ್ಧ ತಿರುಗಿ ಬೀಳುತ್ತಾರೆ ಎಂಬ  ತಂಕ ಎರಡೂ ಕಡೆಯವರನ್ನು ಕಾಡುತ್ತಿದೆ. ಅದನ್ನು ಹೊರತು ಪಡಿಸಿ ನ್ಯಾ.ಕೆಂಪಣ್ಣ ವರದಿಯಲ್ಲಿ ಏನಿದೆ ಎಂಬ ಸಣ್ಣ ಸುಳಿವೂ ಸಿಗುತ್ತಿಲ್ಲ. ಅಷ್ಟರ ಮಟ್ಟಿಗೆ ವರದಿಯನ್ನು ಗೌಪ್ಯವಾಗಿಡ ಲಾಗಿದೆ.

ಇನ್ನು ವಕ್ ಆಸ್ತಿ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಸಲ್ಲಿಸಿದ ವರದಿ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರ ಅಧಿಕಾರದಲ್ಲಿದ್ದಾಗ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಅನ್ವರ್ ಮಾಣಿಪ್ಪಾಡಿ ವಕ್ಫ್ ಆಸ್ತಿ ಕುರಿತಂತೆ ಸುದೀರ್ಘ ಅಧ್ಯಯನ ನಡೆಸಿ, ದಾಖಲೆಗಳನ್ನು ಕಲೆಹಾಕಿ ವಕ್ಫ್ ಆಸ್ತಿ ದುರುಪಯೋಗಕ್ಕೆ ಸಂಬಂಧಿಸಿದಂತೆ 2011ರ ಅ.12ರಂದು ಸುದೀರ್ಘ ವರದಿಯನ್ನು ಸರಕಾರಕ್ಕೆ ಸಲ್ಲಿಸಿತ್ತು.

ರಾಜ್ಯದಲ್ಲಿರುವ ಸುಮಾರು 410 ಲಕ್ಷ ಕೋಟಿ ರು. ಮೌಲ್ಯದ ವಕ್ ಆಸ್ತಿಯಲ್ಲಿ 2.5 ಲಕ್ಷ ಕೋಟಿ ರು. ಮೌಲ್ಯದ ಆಸ್ತಿ
ಕಬಳಿಕೆ ಯಾಗಿದೆ ಎಂದು ಹೇಳಿತ್ತು. ವರದಿಯಲ್ಲಿ ಪ್ರಸ್ತುತ ರಾಜ್ಯಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್, ಮಾಜಿ ಸಚಿವ ಜಾಫರ್ ಷರೀಫ್ ಸೇರಿದಂತೆ ಕಾಂಗ್ರೆಸ್‌ನ ಘಟಾನುಘಟಿ ನಾಯಕರ ಹೆಸರು ಉಲ್ಲೇಖವಾಗಿತ್ತು. ಈ ವರದಿಯನ್ನು ಸದನದಲ್ಲಿ ಮಂಡಿಸಲು ಆಗಿನ ಬಿಜೆಪಿ ಸರಕಾರ ಧೈರ್ಯ ತೋರಲಿಲ್ಲ.

ನಂತರ ಬಂದ ಕಾಂಗ್ರೆಸ್ ಸರಕಾರ ಮತ್ತು ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಮೈತ್ರಿ ಸರಕಾರ ಅದನ್ನು ಮರೆತೇ ಬಿಟ್ಟಂತಿತ್ತು. ಬಿಜೆಪಿ ಒತ್ತಾಯ ಮಾಡಿದರೂ ಅದನ್ನು ಸದನದಲ್ಲಿ ಮಂಡಿಸುವ ಗೋಜಿಗೆ ಹೋಗಲಿಲ್ಲ. ಇದೀಗ ಗುರುವಾರ ವಿಧಾನ ಪರಿಷತ್ತಿನಲ್ಲಿ ಅನ್ವರ್ ಮಾಣಿಪ್ಪಾಡಿ ಅವರ ವರದಿ ಮಂಡಿಸಲಾಗಿದೆ. ಆದರೆ, ಈ ವರದಿಗೆ ಕಾನೂನು ಬಲ ಇಲ್ಲದ ಕಾರಣ ಅದನ್ನು ಆಧರಿಸಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಸರಕಾರ ಮನಸ್ಸು ಮಾಡಿದರೆ ಮತ್ತೊಂದು ತನಿಖೆಗೆ ಆದೇಶಿಸಿ ಅದರ ಆಧರಾದ ಮೇಲೆ ಕ್ರಮ ಕೈಗೊಳ್ಳಬಹುದು.

ಹೀಗಾಗಿ ಅನ್ವರ್ ಮಾಣಿಪ್ಪಾಡಿ ಅವರ ವರದಿ ವಕ್ ಆಸ್ತಿ ಉಳಿಸುವ ಉದ್ದೇಶಕ್ಕಿಂತ ಕಾಂಗ್ರೆಸ್ ವಿರುದ್ಧ ರಾಜಕೀಯ ಹೋರಾಟಕ್ಕೆ ಬಿಜೆಪಿ ಪಾಲಿಗೆ ಒಂದು ಅಸ್ತ್ರ ಎಂಬಷ್ಟಕ್ಕೆ ಸೀಮಿತಗೊಂಡಿದೆ. ಅಕ್ರಮ, ಭ್ರಷ್ಟಾಚಾರ, ಹಗರಣಗಳ ಕುರಿತಾಗಿ ಆಡಳಿತ ಮತ್ತು ಪ್ರತಿಪಕ್ಷಗಳು ನಡೆಸುವ ರಾಜಕೀಯ ಹೋರಾಟಗಳಿಗೆ ಇವು ಸಣ್ಣ ಉದಾಹರಣೆಗಳಷ್ಟೆ. ಈ ಕಾರಣಕ್ಕಾಗಿಯೇ
ಇಂತಹ ವಿಚಾರಗಳ ಬಗ್ಗೆ ನಾಯಕರ ನಡುವಿನ ಸವಾಲು- ಪ್ರತಿಸವಾಲುಗಳು ಕೇವಲ ಹೇಳಿಕೆಗಳಿಗಷ್ಟೇ ಸೀಮಿತವಾಗಿವೆ.
ಬಿಜೆಪಿ ಸರಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಒಂದು ಪಕ್ಷ ಆರೋಪಿಸಿದರೆ, ನಿಮ್ಮ ಅವಧಿಯಲ್ಲಿ ಭ್ರಷ್ಟಾಚಾರ ಆಗಿಲ್ಲವೇ ಎಂದು ಪ್ರತ್ಯಾರೋಪ ಮಾಡಲಾಗುತ್ತಿದೆ.

ಉಳಿದಂತೆ ಭ್ರಷ್ಟಾಚಾರಮುಕ್ತ ಆಡಳಿತ ನೀಡುತ್ತೇವೆ ಎಂಬ ಬಾಯಿಮಾತು ಹೊರತುಪಡಿಸಿ ಅನುಷ್ಠಾನ ಆಗುತ್ತಿಲ್ಲ.
ಈ ಕಾರಣಗಳಿಂದಾಗಿಯೇ ರಾಜಕೀಯ ಪಕ್ಷಗಳ ನಡುವಿನ ಅಕ್ರಮ, ಹಗರಣ, ಭ್ರಷ್ಟಾಚಾರದ ಹೋರಾಟಗಳು ಕೇವಲ
ಅಧಿಕಾರ ಹಿಡಿಯಲಷ್ಟೇ ಹೊರತು ರಾಜ್ಯ ಮತ್ತು ರಾಜ್ಯದ ಜನರಿಗಾಗಿ ಅಲ್ಲ ಎಂಬ ಸತ್ಯ ಎಲ್ಲರಿಗೂ ಅರಿವಾಗಿದೆ. ಹೀಗಾಗಿ ಅವರೂ ಇದನ್ನು ಒಂದು ಮನರಂಜನೆ ಎನ್ನುವಂತೆ ನೋಡುತ್ತಿದ್ದಾರೆ.

ಲಾಸ್ಟ್ ಸಿಪ್: ಅಧಿಕಾರ ಸಿಗುವವರೆಗೆ ರಾಜಕಾರಣಿಗಳು ಮಾಡುವ ಹೋರಾಟವೇ ಭ್ರಷ್ಟಾಚಾರ, ಹಗರಣಗಳ ವಿರುದ್ಧದ ಹೋರಾಟ.