Monday, 3rd October 2022

ಹನಿಟ್ರ್ಯಾಪ್: ಯುವ ನಟನ ಬಂಧನ

ಬೆಂಗಳೂರು: ಉದ್ಯಮಿಯೋರ್ವರಿಗೆ ಹನಿಟ್ರ್ಯಾಪ್ ಮಾಡಿದ ಆರೋಪಕ್ಕೆ ಸಂಬಂಧಿಸಿ ಸ್ಯಾಂಡಲ್ ವುಡ್ ನ ಯುವ ನಟನನ್ನು ಬೆಂಗಳೂರಿನ ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಜೆ.ಪಿ.ನಗರ ನಿವಾಸಿ ಯುವರಾಜ್ ಅಲಿಯಾಸ್ ಯುವ ಎಂದು ಗುರುತಿಸಲಾಗಿದೆ. ಈತ ಮಿಸ್ಟರ್ ಅಭಿರಾಮ್ ಎಂಬ ಸಿನಿಮಾದ ನಾಯಕ ನಟ ಎನ್ನ ಲಾಗಿದೆ.

ಎಲೆಕ್ಟ್ರಾನಿಕ್ ಸಿಟಿ ಮೂಲದ ಉದ್ಯಮಿಗೆ ಹನಿಟ್ರ್ಯಾಪ್ ಮಾಡಿದ ಆರೋಪ ಯುವ ನಟನ ಮೇಲೆ ಬಂದಿದೆ. ಇಬ್ಬರು ಯುವತಿ ಯರ ಹೆಸರಲ್ಲಿ ಉದ್ಯಮಿಯೊಂದಿಗೆ ಚಾಟಿಂಗ್ ಮಾಡಿದ್ದ ಯುವ ಬಳಿಕ ಉದ್ಯಮಿಯನ್ನು ಭೇಟಿಯಾಗಿ ತಾನು ಕ್ರೈಂ ಬ್ರ್ಯಾಂಚ್ ಪೊಲೀಸ್, ಯುವತಿಯರಿಗೆ ಅಶ್ಲೀಲವಾಗಿ ಚಾಟ್ ಮಾಡಿದ ಬಗ್ಗೆ ನಿಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ. ಕೇಸ್ ಮುಚ್ಚಿ ಹಾಕಬೇಕು ಎಂದರೆ ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದ.

ಆರಂಭದಲ್ಲಿ 50 ಸಾವಿರ ಹಣ ಪಡೆದಿದ್ದ ಯುವ, ಬಳಿಕ ಹಂತ ಹಂತವಾಗಿ 14 ಲಕ್ಷದವರೆಗೂ ಹಣ ವಸೂಲಿ ಮಾಡಿದ್ದಾನೆ ಎನ್ನಲಾಗಿದೆ. ಅನುಮಾನಗೊಂಡ ಉದ್ಯಮಿ ಹಲಸೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ವಂಚನೆ ಮಾಡಿರುವುದು ಗೊತ್ತಾಗಿದ್ದು, ಇದೀಗ ಯುವ ನಟನನ್ನು ಬಂಧಿಸಿದ್ದಾರೆ.