Friday, 18th June 2021

ಮುಸುಕಿನ ಗುದ್ದಾಟ ಇರುವುದು ಆಯುರ್ವೇದ – ಅಲೋಪತಿ ನಡುವೆಯಲ್ಲ !

ಅಭಿಮತ

ಡಾ.ಕರವೀರಪ್ರಭು ಕ್ಯಾಲಕೊಂಡ

ಮೊದಲೇ ಸ್ಪಷ್ಟ ಪಡಿಸುತ್ತಿದ್ದೇನೆ ಮುಸುಕಿನ ಗುದ್ದಾಟ ನಡೆದಿರುವುದು ಆಯುರ್ವೇದ ಮತ್ತು ಅಲೋಪತಿ ಶಾಸಗಳ ಮಧ್ಯೆ ಅಲ್ಲ. ಗುದ್ದಾಟ ಇರುವುದು ಅಳಲೆಕಾಯಿ ಪಂಡಿತ ವ್ಯಾಪಾರಿ ವಿರುದ್ಧ!

ಈ ಗುದ್ದಾಟವು ಯೋಗಶಾಸದ ವಿರುದ್ಧವೂ ಅಲ್ಲ. ಪ್ರಪಂಚದಾದ್ಯಂತ ಯೋಗವನ್ನು ಪ್ರಚಾರ ಪಡಿಸಿದ ಯೋಗ ಪಟು ರಾಮದೇವರ ಬಗ್ಗೆಯೂ ಗೌರವವಿದೆ. ಆ ಗೌರವ ಉಳಿಸಿಕೊಂಡು, ಬೆಳೆಸಿಕೊಂಡು ಹೋಗುವ ಪ್ರಜ್ಞೆ ಅವರಿಗೆ ಇರಬೇಕಿತ್ತು. ಈ ವಿವಾದ ಧರ್ಮ ಮತ್ತು ರಾಷ್ಟ್ರೀಯತೆಯ ಬಣ್ಣ ಬಳಿದುಕೊಂಡು, ಲಾಲಾ ರಾಮದೇವ ಅವರನ್ನು ರಕ್ಷಣೆ ಮಾಡುತ್ತಿರುವುದು ಖೇದಕರ.

ಆಯುರ್ವೇದ ಮತ್ತು ಅಲೋಪತಿ ನಡುವಿನ ಸಮರಕ್ಕೆ ಸೈರನ್ ಊದುತ್ತಿರುವುದು ಇನ್ನೂ ಖೇದಕರ ಮತ್ತು ದೇಶ ಕಂಡ ದೊಡ್ಡ ದುರಂತ! ಪುರಾತನ ಕಾಲದ ವೈದ್ಯ ಪದ್ಧತಿ ಆಯುರ್ವೇದ ಬಗ್ಗೆ ಎಲ್ಲ ಆಧುನಿಕ ವೈದ್ಯ ಪದ್ಧತಿಯ ವೈದ್ಯರಿಗೆ ಅಪಾರ
ಗೌರವವಿದೆ. ಆಯುರ್ವೇದ ಮತ್ತು ಅಲೋಪತಿ ವೈದ್ಯಪದ್ಧತಿಯ ಎರಡು ಕವಲುಗಳಾಗಿದ್ದು, ರೋಗಿಗಳಿಗೆ ಗುಣಪಡಿಸುವುದೇ ಅಂತಿಮ ಗುರಿ ಯಾಗಿರುತ್ತದೆ. ಆದರೆ, ಪತಂಜಲಿ ಪ್ರಾಡಕ್ಟ್‌ಗಳ ಪೈಪೋಟಿ ಮಾರಾಟದಲ್ಲಿ ಕುತಂತ್ರ ವ್ಯಾಪಾರಿ ಆಗಿರುವ ಲಾಲಾ ರಾಮದೇವ ಯಾದವ್ ಮತ್ತು ರಾಮಕೃಷ್ಣ ಯಾದವ್ ಅವರ ವಿರುದ್ಧ ಖಂಡಿತವಾಗಿಯೂ ಇದೆ.

ಯೋಗದಿಂದ ಎಲ್ಲ ಅಂಗಾಂಗಗಳಿಗೆ ತರಬೇತಿ ಕೊಡಲು ಸಾಧ್ಯ ಎನ್ನುವ ಬಾಬಾ, ತಮ್ಮ ನಾಲಿಗೆಯ ಮೇಲೆ ಹಿಡಿತ ಸಾಧಿಸಲು, ಅದಕ್ಕೆ ಯೋಗ ತರಬೇತಿ ಕೊಡಬೇಕಿತ್ತು. ಪರಿಣತಿ, ಪಾಂಡಿತ್ಯ ಇಲ್ಲದ ಕ್ಷೇತ್ರದಲ್ಲಿ ಮೂಗು ತೂರಿಸಬಾರದು. ಮಾತನಾಡಲೂ ಹೋಗಬಾರದು. ದೇಶದ ಸೂತ್ರಧಾರಿಗಳಿಗೆ ಆಶೀರ್ವಾದ ಮಾಡುವ ಪೋಜುಗಳ ಪೋಟೊಗಳನ್ನು ಜಾಲತಾಣದಲ್ಲಿ ಹರಿಬಿಟ್ಟು ‘ನನಗೆ ಏನೂ ಮಾಡಲು ಸಾಧ್ಯವಿಲ್ಲ ’ಎಂದು ಜಂಬಕೊಚ್ಚಿಕೊಳ್ಳುವುದು ಸರಿಯೂ ಅಲ್ಲ.

ಸೂಕ್ತವೂ ಅಲ್ಲ. ಹೀಗೆ ಜಂಬಕೊಚ್ಚಿಕೊಂಡ ಅಹಂಕಾರಿಗಳು – ರಾವಣ, ದುರ್ಯೋಧನ ಏನಾದರು ಎಂಬುದು ಎಲ್ಲರಿಗೂ ಗೊತ್ತು. ಇನ್ನು ಬಾಬಾ ರಾಮದೇವ ಇವರ ಮುಂದೆ ಯಾವ ಗಿಡದ ತಪ್ಪಲು! ಇದರ ಅರಿವು ಅವರಿಗಿರಬೇಕಾಗಿತ್ತು. ಬಾಲಬಡಕ
ಭಕ್ತರ ಮಾತಿಗೆ ಮರುಳಾಗಿ ಹಿಗ್ಗಿ ಹೀರೇಕಾಯಿ ಆಗುವುದು ಸರಿಯಲ್ಲ. ಜನರ ಸಂಕಷ್ಟ ಕಾಲದಲ್ಲಿ ಅವರ ಅಸಹಾಯಕತೆಯನ್ನೇ ಬಂಡವಾಳವನ್ನಾಗಿಸಿಕೊಂಡು ಹಣ ಪೀಕುವ ದುಷ್ಟ ದುರುಳರಿಗಿಂತಲೂ ದುರಿತ ಕಾಲದಲ್ಲಿ ಜನರ ಜೀವಭಯದ ಹಾಗೂ ಮೌಢ್ಯದ ದೌರ್ಬಲ್ಯವನ್ನೇ ದಾಳವಾಗಿಸಿಕೊಂಡು ಅವರಲ್ಲಿ ಮತ್ತಷ್ಟು ದಿಗಿಲು ಹುಟ್ಟಿಸಿ, ಸಮಾಜದ ಸ್ವಾಸ್ಥ್ಯವನ್ನೇ ಹಾಳು ಮಾಡುವ, ಕೆಲ ಸ್ವಯಂ ದೇವಮಾನವರ ಪೋಜುಗಳ ಸೆಲೆಬ್ರೆಟಿ ಢೋಂಗಿಗಳೇ ಹೆಚ್ಚು ಡೇಂಜರ್!

ಮಾತು ಆಡಿದರೂ ಆತು, ಮುತ್ತು ಒಡೆದರೂ ಆಯಿತು. ಅದನ್ನು ತಿದ್ದಲು ಆಗುವುದಿಲ್ಲ. ಆದ್ದರಿಂದ ಸಾರ್ವಜನಿಕ ಹೇಳಿಕೆ ಕೊಡುವ ಮೊದಲು ಹತ್ತು ಸಾರಿ ವಿಚಾರ ಮಾಡಬೇಕು! ಹೇಳುವ ವಿಷಯ ಎಂಥ ಪರಿಣಾಮ ಬೀರಬಲ್ಲದು ಎಂಬ ‘ಕಾಮನ್ ಸೆನ್ಸ್’ ಇರಬೇಕು. ಅದು ಬಿಟ್ಟು ಮೆಟ್ಟಿದ್ದೇ ಮಾರ್ಗ ಎಂಬ ಹುಚ್ಚಿಗೆ ಕಿಚ್ಚು ಹಚ್ಚಬೇಕು.

ಕರೋನಾ ಕರಾಳ ಛಾಯೆಯ ಕತ್ತಲಲ್ಲಿ ಇಡೀ ದೇಶವೇ ತತ್ತರಿಸುತ್ತಿರುವಾಗ, ಇಡೀ ದೇಶದ ಜನರ ಆ ರೋಗ್ಯದ ಅಡಿಗಲ್ಲನ್ನೇ ಅಡಿಸಿ, ಬುಡಮೇಲು ಮಾಡಿರುವಾಗ, ಅತಿ ಸೂಕ್ಷ್ಮ ಹಾಗೂ ವೈದ್ಯಕೀಯ ವಿಜ್ಞಾನಕ್ಕೆ ಸಂಬಂಧಿಸಿದಂತೆ ಬಾಯಿ ಬಿಡುವಾಗ,
ಆ ವಿಚಾರ ವಿಷಯಗಳ ಕುರಿತಾದ ಆಳ ಅಗಲಗಳ ಜ್ಞಾನ, ಅರ್ಹತೆ ಅಥವಾ ಬದ್ಧತೆ ನಮಗಿದೆಯೇ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು.

ಅರ್ಹತೆ ಇಲ್ಲದಿದ್ದರೂ, ಮಹಾಸಾಧಕರಂತೆ ಪೋಜು ಕೊಟ್ಟು, ಎಲ್ಲ ಬಲ್ಲವರಿಲ್ಲ ಬಲ್ಲವರು ಬಹಳಿಲ್ಲ ಎಂಬುದನ್ನು ಮರೆತು, ತಾವೇ ದಿವ್ಯ ಪಂಡಿತರು, ತಾನು ಕೂಗಿದರೆ ಬೆಳಗಾಗುವುದೆಂಬ ಜಂಬದ ಕೋಳಿಯ ಹಾಗೆ ಕೂಗಿ ಕೂಗಿ ಅಲೋಪತಿ ವೈದ್ಯರ
ಬಗ್ಗೆ, ಅವರು ಬಳಸುವ ಔಷಧಿಗಳ ಬಗ್ಗೆ ಬಯಕಿ ಹತ್ತಿದ ಬಸುರಿಯ ಹಾಗೆ ವಾಂತಿ ಮಾಡಿಕೊಳ್ಳುತ್ತ, ಜನರನ್ನು ಗೊಂದಲಕ್ಕೆ ತಳ್ಳುವ ಕೃತ್ಯಗಳಲ್ಲಿ ತೊಡಗಿರುವ, ಸಲ್ಲದ ಸೀನುಗಳ ಸೃಷ್ಟಿ ಇಂಥ ಸಮಯದಲ್ಲಿ ಬೇಕಾಗಿತ್ತೆ? ಇಡೀ ದೇಶವೇ ಕರೋನಾ ಮಾರಿಯ ಬಾಹುಬಂಧನದಲ್ಲಿ ತತ್ತರಿಸಿ ಕಂಗಾಲಾಗಿರುವಾಗ, ಜತೆಗೆ ಬ್ಲಾಕ್ ಫಂಗಸ್, ವೈಟ್ ಫಂಗಸ್, ಯಲ್ಲೋ ಫಂಗಸ್
ಭೂತಗಳು ಬೆನ್ನತ್ತಿ ಜನರ ಜೀವ ಹಿಂಡುತ್ತಿರುವಾಗ, ಸತ್ತವರಿಗೆ ಸಕಾಲಕ್ಕೆ ಶವಸಂಸ್ಕಾರಕ್ಕೆ ಸ್ಮಶಾನ ಸಿಗದ ವಿಷಮ ಸ್ಥಿತಿಯಲ್ಲಿ ಜನರು ಇರುವಾಗ, ಅಂತಾರಾಷ್ಟ್ರೀಯ ಖ್ಯಾತಿಯ ಯೋಗಪಟು, ಪತಂಜಲಿ ಬಾಬಾ ರಾಮದೇವ್ ಇತ್ತೀಚೆಗೆ ಅಲೋಪತಿ ಚಿಕಿತ್ಸೆಯ ಬಗೆಗೆ ಹೇಳಿರುವ ಅನುಚಿತ ಹೇಳಿಕೆಗಳು, ಹಗಲು ರಾತ್ರಿ ಎನ್ನದೇ ಪ್ರಾಣವನ್ನೇ ಪಣಕ್ಕಿಟ್ಟು ಜನರ ಜೀವವನ್ನು ರಕ್ಷಿಸಲು ಹೆಣಗುತ್ತಿರುವ’ ಕರೋನಾ ವಾರಿಯರ್ಸ್‌ಗೆ ಮಾಡಿದ ಘೋರ ಅವಮಾನ!

ಬಾಬಾ ರಾಮದೇವ್ ಇಂದು ಇಪ್ಪತ್ತೈದು ಪ್ರಶ್ನೆ ಕೇಳಿ, ತನ್ನ ಅಜ್ಞಾನದ ಪ್ರದರ್ಶನ ಮಾಡಿದ್ದಾರೆ. ಜಾತಸ್ಯ ಮರಣಂ ದೃವಂ ಎಂಬುದು ಅವರಿಗೆ ಗೊತ್ತಿಲ್ಲವೆ. ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ ಎಂಬ ಸತ್ಯ ಸೂತ್ರದಲ್ಲಿ ಜಗತ್ತು ಬಾಳುತ್ತಿದೆ. ಬೆಳಗುತ್ತಿದೆ.
ಇಲ್ಲದಿದ್ದರೆ ನಿಂತು ನಿದ್ದೆ ಮಾಡಲು ಜಾಗ ಸಿಗುತ್ತಿರಲಿಲ್ಲ. ಕರೋನಾ ಸೋಂಕಿತರು ಸತ್ತದ್ದು ಅಲೋಪತಿ ಔಷಧ ಚಿಕಿತ್ಸೆಯಿಂದ ವಿನಾ ಆಕ್ಸಿಜನ್ ಕೊರತೆಯಿಂದಲ್ಲ ಎಂದು ಹೇಳಿರುವುದು ಹುಚ್ಚಾ ವೆಂಕಟ ಮಾತಾಡಿದಂತಿದೆ.

ಭಾರತದಲ್ಲಿ ಕರೋನಾ ಪೀಡಿತರ ಸಂಖ್ಯೆ 28,664,375. ಅಸುನೀಗಿದವರು 3,42,280. ಚಿಕಿತ್ಸೆ ಯಿಂದ ಗುಣಮುಖ ಆದವರು 26,724,010. ಬಾಬಾ ರಾಮದೇವ್ ಈ ಅಂಕಿ ಸಂಖ್ಯೆಗಳ ಮೇಲೊಮ್ಮೆ ಕಣ್ಣಾಡಿಸಲಿ. ಪೂರ್ವಾಗ್ರಹ ಪೀಡಿತ
ವಿಷಯಗಳಿಂದ ಹೊರಬರಲಿ. ಆಗಲಾದರೂ ಅವರಿಗೆ ಜ್ಞಾನೋದಯವಾಗಬಹುದು!

ಇವರೆಲ್ಲ ಬದುಕಿರುವುದು ಅಲೋಪತಿ ಚಿಕಿತ್ಸೆಯಿಂದ ವಿನಾ ಪತಂಜಲಿ ತಯಾರಿಸಿದ ‘ಕೊರೊನಿಲ’ದಿಂದ ಅಲ್ಲ. ಅಲೋಪತಿ ವರ್ಸಸ್ ಬಾಬಾರ ಕಿತಾಪತಿ ಯುದ್ಧ ಇಷ್ಟಕ್ಕೆ ನಿಂತಿಲ್ಲ. ಭಾರತೀಯ ವೈದ್ಯಕೀಯ ಸಂಘದ ವಿರುದ್ಧ ತೊಡೆತಟ್ಟಿ, ಬುದ್ಧಿ ಸ್ತಿಮಿತ ಕಳೆದುಕೊಂಡವರಂತೆ ಅಬ್ಬರಿಸುತ್ತಿದ್ದಾರೆ. ಕೊಲೆಸ್ಟ್ರಾಲ್, ಪಾರ್ಕಿನ್ ಸನ್, ಮೈಗ್ರೇನ್, ಮಧುಮೇಹ, ಹೈಬಿಪಿ ಮುಂತಾದ
ಕಾಯಿಲೆಗಳಿಗೆ ಸಂಪೂರ್ಣ ಗುಣಪಡಿಸಲು ಮದ್ದಿಲ್ಲವೇಕೆ? ವೈದ್ಯರೇಕೆ ಕೋವಿಡ್-19ನಿಂದ ಸಾಯುತ್ತಿದ್ದಾರೆ ಎಂಬೆಲ್ಲ ಪಡಪೋಶಿ ಪ್ರಶ್ನೆಗಳನ್ನು ಕೇಳಿ ಸುದ್ದಿಯಾಗುತ್ತಿದ್ದಾರೆ.

ವಿಪರ್ಯಾಸವೆಂದರೆ, ಬಾಬಾ ರಾಮದೇವ್ ಅವರ ಹಿಂಬಾಲಕರು ಅನಾರೋಗ್ಯದಿಂದ ಅಸ್ವಸ್ಥರಾದಾಗ ಏಮ್ಸ್‌ನಂಥ ಅಲೋಪತಿ ಆಸ್ಪತ್ರೆಗೆ ಸೇರಿಕೊಂಡು ಚಿಕಿತ್ಸೆ ಪಡೆಯುತ್ತಿರುವುದು ಶಾಸ್ತ್ರ ಹೇಳೋಕೆ, ಬದನೆಕಾಯಿ ತಿನ್ನೋಕೆ ಅನ್ನುವ ಹಾಗಿದೆ.
ಯೋಗವಿದ್ಯೆಯಿಂದ ಈತ ಅಂತಾರಾಷ್ಟ್ರೀಯ ಮಟ್ಟದ ಸೆಲೆಬ್ರೆಟಿ. ಸಾವಿರಾರು ಕೋಟಿ ವ್ಯವಹಾರದ ಪತಂಜಲಿ ಔಷಧ ಕಂಪನಿಯ ಧಣಿ. ಬಾಬಾನನ್ನು ಬ್ಲೈಂಡಾಗಿ ಆರಾಧಿಸುವ ಭಕ್ತರ ದಂಡು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ. ಪತಂಜಲಿ ಪ್ರಾಡಕ್ಟ್‌ಗಳನ್ನು ಪ್ರಮೋಟ್ ಮಾಡಲು, ಅಲೋಪತಿಯನ್ನು ಹೀಗೆ ಡಿಗ್ರೇಡ್ ಮಾಡಿ ಮಾತನಾಡುವುದನ್ನು ಕೇಳಿಯೂ, ಕೇಳದಂತೆ ಜಾಣಕಿವುಡರಾಗಿ ಕುಳಿತಿರುವ ಮಂತ್ರಿ ಮಹೋದರಿಗೆ ಏನಾಗಿದೆ ಎಂಬುದೇ ಗೊತ್ತಾಗುತ್ತಿಲ್ಲ!

ಇಷ್ಟುದಿನ ಕೋಟ್ಯಂತರ ಜನ ಅಲೋಪತಿ ಔಷಧಿ ಚಿಕಿತ್ಸೆ ಪಡೆದಿದ್ದಾರೆ. ಭಾರತವು ಶಕ್ತಿಶಾಲಿ, ಉಪಯುಕ್ತ, ಪರಿಣಾಮಕಾರಿ ಲಸಿಕೆ ತಯಾರಿಕೆಯಲ್ಲಿ ಜಗತ್ತಿನಲ್ಲಿಯೇ ಮುಂಚೂಣಿಯಲ್ಲಿದೆ ಎಂಬುದು ಬಾಬಾರ ಗಮನಕ್ಕೆ ಬಂದಿಲ್ಲವೇ? ಇದನ್ನು ಬೇರೆ
ಬೇರೆ ದೇಶಗಳಿಗೆ ರಫ್ತು ಮಾಡಿದ್ದೇವೆ. ಇಂಥ ಸಂದರ್ಭದಲ್ಲಿ ಅಲೋಪತಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಯಾವ ಅರ್ಹತೆ ಈ ಬಾಬಾರಿಗೆ ಇದೆ. ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಎಂಬ ಮಾತಿದೆ.

ಬಾಬಾರ ಇಂಥ ಮಾತುಗಳಿಂದ ಪ್ರಚೋದನೆಗೊಂಡ ಜ್ಯೋತಿಷಿಗಳು ಟಿ.ವಿ. ಯಲ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.
ಇಂಥವರು ಬಾಯಿಗೆ ಬೀಗ ಹಾಕುವುದು ಜನಸಾಮಾನ್ಯರ ಹಿತ ದೃಷ್ಟಿಯಿಂದ ಒಳ್ಳೆಯದು. ಇಂಥ ಕಾರ್ಯಕ್ರಮಗಳನ್ನು ಬಿತ್ತರಿಸುವ ಟಿ.ವಿ. ಚಾನಲ್‌ಗಳನ್ನು ನೋಡದೇ ಇರುವುದು ಇನ್ನೂ ಒಳ್ಳೆಯದು!

ಲಕ್ಷ್ಮಣನನ್ನು ಬದುಕಿಸಲು ‘ಸಂಜೀವಿನಿ ’ಯನ್ನು ಹೊತ್ತು ತಂದ ಹನುಮಂತನಂತೆ ಹಾರಾಡುತ್ತಿರುವ ಪತಂಜಲಿ ಬಾಬಾ, ತನ್ನ ಪ್ರಾಡಕ್ಟ್‌ಗಳ ಮಾರಾಟಕ್ಕೆ ಗೊತ್ತಿರುವ ಗಿಮಿಕ್ಸ್‌ಗಳೆಲ್ಲವನ್ನೂ ಮಾಡುತ್ತಿರುವುದು ಎಷ್ಟು ಸರಿ. ಅಷ್ಟಕ್ಕೂ ಅವರು ಆಯುರ್ವೇದ ತಜ್ಞರೂ ಅಲ್ಲ. ಅವರ ಪ್ರಾಡಕ್ಟ್ ಅಷ್ಟೊಂದು ಪರಿಣಾಮಕಾರಿಯಾಗಿದ್ದರೆ, ಅವರಿಗೆ ಆಗಿರುವ ‘ಬೆಲ್ಸ ಪಾಲ್ಸಿ’ ಏಕೆ ನಿವಾರಣೆ ಮಾಡಿಕೊಂಡಿಲ್ಲ.

ವರಗ ಬಾಯನ್ನು ಗಡ್ಡ ಮೀಸೆಗಳ ನಡುವೆ ಕಷಪಟ್ಟು ಮುಚ್ಚಿಕೊಳ್ಳುತ್ತಿರುವು ದೇಕೆ? ಬ್ರಹ್ಮಾಂಡದಲ್ಲಿ ಆಕ್ಸಿಜನ್ ತುಂಬಿದೆ.
ದೇವರು ನಮಗೆ ಎರಡು ಸಿಲಿಂಡರ್ ಕೊಟ್ಟಿದ್ದಾನೆ ಎಂದು ಮೂಗಿನ ಹೊರಳಿಯ ಮೇಲೆ ಬೆರಳಿಟ್ಟು ‘ಟಸ್ ಪುಸ್’ ಮಾಡುವ ಬಾಬಾ, ಶಿಷ್ಯಂದಿರನ್ನು ಆಕ್ಸಿಜನ್‌ಗಾಗಿಯೇ ಏಮ್ಸನಲ್ಲಿ ಆಡ್ಮಿಟ್ ಮಾಡುವರೇಕೆ? ಏಮ್ಸ ಆವರಣದಲ್ಲಿ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯನ್ನೇ ಪ್ರಶ್ನಿಸಿ ಬಿರುಗಾಳಿಯನ್ನೆಬ್ಬಿಸಿರುವ ಬಾಬಾ, ಜೀವ ಉಳಿಸುವ ಶಸ ಚಿಕಿತ್ಸೆಗಳು ಮತ್ತು ಕಾಯಿಲೆಗಳಿಗೆ ಆಧುನಿಕ ಔಷಧ ಅನಿವಾರ್ಯವೆಂದು ಹೇಳಿ, ತಮ್ಮ ಊಸರವಳ್ಳಿ ಗುಣಕ್ಕೆ ಸಾಕ್ಷಿಯಾಗಿದ್ದಾರೆ.

ಜೀವನಶೈಲಿ, ಅನುವಂಶಿಕ ಮತ್ತು ಗುಣಪಡಿಸಲಾಗದ ಕಾಯಿಲೆಗಳಿಗೆ ಅಲೋಪತಿಯಲ್ಲಿ ಅಷ್ಟೇ ಅಲ್ಲ, ಯಾವುದೇ ಪತಿಯಲ್ಲಿ ಔಷಧ ಇಲ್ಲ ಎಂಬ ಕಟು ಸತ್ಯದ ಅರಿವು ಪತಂಜಲಿ ಪಾಗಲ್‌ಗಳಿಗೆ ಇಲ್ಲ. ಅಲೋಪತಿಯಲ್ಲಿ ಅವುಗಳ ನಿರ್ಮೂಲನೆಗೆ
ಔಷಽಗಳಿಲ್ಲ. ನಿಜ. ಆದರೆ ನಿಯಂತ್ರಣಕ್ಕೆ ಸಾಕಷ್ಟು ಔಷಧಗಳಿವೆ. ಇದರಿಂದ ಮನುಷ್ಯರು ಉತ್ಪಾದಕ ಜೀವಿಗಳಾಗಿ ಜೀವನ ಸಾಗಿಸಬಹುದಾಗಿದೆ. ಇದು ಪತಂಜಲಿ ಪ್ರಾಡಕ್ಟ್‌ಗಳಿಂದ ಸಾಧ್ಯವೇ? ಇತ್ತೀಚೆಗೆ ದೇಶದ ತುಂಬಾ ವೈದ್ಯರು ಕಪ್ಪು ಪಟ್ಟಿ ರಟ್ಟೆಗೆ ಕಟ್ಟಿಕೊಂಡು ಪ್ರತಿಭಟನೆ ಮಾಡಿದರು.

ಫಲಿತಾಂಶ ದೊಡ್ಡ ಬಂಡಿಗಾಲಿ. ಇಂಥವರನ್ನು ನೋಡಲು ಆಗದ್ದಕ್ಕೆ ನ್ಯಾಯದೇವತೆ ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕೂತಿರಬೇಕು. ಪ್ರಧಾನ ಮಂತ್ರಿಗಳು ‘ಕರೋನಾ ವಾರಿಯರ್ಸ್’ಗೆ ಹುರುಪು ಹುಮ್ಮಸ್ಸು ತುಂಬಲು ಚಪ್ಪಾಳೆ ಹಾಕುತ್ತಾರೆ. ವೈದ್ಯರ ಮೇಲೆ ಹೂ ಮಳೆ ಸುರಿಸುತ್ತಾರೆ. ‘ಹುತಾತ್ಮ’ರೆಂದು ಬಣ್ಣಿಸುತ್ತಾರೆ.

ವೇದಿಕೆಯ ಮೇಲೆ ಕಣ್ಣೀರು ಸುರಿಸುತ್ತಾರೆ. ವೈದ್ಯ ವೃತ್ತಿಯ ಬಗ್ಗೆ, ವೈದ್ಯರ ಬಗ್ಗೆ ಅವಹೇಳನಕರ ಮಾತುಗಳನ್ನು ವೈದ್ಯಕೀಯ ಗಂಧ ಗಾಳಿ ಗೊತ್ತಿಲ್ಲದ ಬಾಬಾ ಹೇಳಿದಾಗ ಬಾಯಿಗೆ ಬೀಗ ಹಾಕುತ್ತಾರೆ. ದೊಣ್ಣೆ ಯಾರದೋ ಎಮ್ಮೆಯೂ ಅವರದೇ !
ಬೆಣ್ಣೆಯೂ ಅವರದೇ! ಅಲ್ಲವೇ?

Leave a Reply

Your email address will not be published. Required fields are marked *