49 ಕುಟುಂಬಗಳು ಆ ಮನೆಗಳಿಗೆ ಇನ್ನೂ ಬಂದೇ ಇಲ್ಲ
ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ವಿತರಣೆ ಮಾಡಲು ಮುಂದಾಗಿದೆ
ಕೊಡಗು: ನಮಗೂ ಒಂದು ಸ್ವಂತ ಮನೆ ಬೇಕೆಂದು ಕೊಡಗಿನ ದಿಡ್ಡಳ್ಳಿಯ ಆದಿವಾಸಿಗಳು 2016 ರಲ್ಲಿ ರಾಷ್ಟ್ರದ ಗಮನ ಸೆಳೆಯುವಂತೆ ಬೆತ್ತಲೆ ಹೋರಾಟ ಮಾಡಿದ್ದು ಎಂದಿಗೂ ಮರೆಯಲಾರದ ಹೋರಾಟ. ಈ ಹೋರಾಟಕ್ಕೆ ಮಣಿದಿದ್ದ ಸರಕಾರ ಅನಂತರ ಸೋಮವಾರಪೇಟೆ ತಾಲೂಕಿನ ಬ್ಯಾಡಗೊಟ್ಟ ಮತ್ತು ಬಸವನಹಳ್ಳಿಯಲ್ಲಿ ಮನೆ ನಿರ್ಮಿಸಿ ವಿತರಣೆ ಮಾಡಿದ್ದು ಗೊತ್ತೆ ಇದೆ.
ಆದರೆ ಮನೆ ನಿರ್ಮಿಸಿ ಫಲಾನುಭವಿಗಳಿಗೆ ವಿತರಣೆ ಮಾಡಿದ್ದರೂ 49 ಕುಟುಂಬಗಳು ಆ ಮನೆಗಳಿಗೆ ಇನ್ನೂ ಬಂದೇ ಇಲ್ಲ. ಹೀಗಾಗಿ ಐಟಿಡಿಪಿ ಇಲಾಖೆ ಈ 49 ಮನೆಗಳನ್ನು ಬೇರೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಅವರಿಗೆ ವಿತರಣೆ ಮಾಡಲು
ಮುಂದಾಗಿದೆ. ಆದರೆ ಜಿಲ್ಲಾಡಳಿತದ ಈ ನಿರ್ಧಾರಕ್ಕೆ ಆದಿವಾಸಿ ಬುಡಕಟ್ಟು ಜನಾಂಗದ ಮುಖಂಡರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಹೌದು, 2016 ರಲ್ಲಿ ವಿರಾಜಪೇಟೆ ತಾಲೂಕಿನ ದಿಡ್ಡಳ್ಳಿ ಹಾಡಿಯ 611 ಕುಟುಂಬಗಳನ್ನು ಅಲ್ಲಿಂದ ಒಕ್ಕಲೆಬ್ಬಿಸಲು ಸರಕಾರ ಮುಂದಾಗಿತ್ತು. ಈ ವೇಳೆ ಶಾಶ್ವತ ಸೂರು ಒದಗಿಸದ ಹೊರತ್ತು ಅಲ್ಲಿಂದ ಮೇಲೇಳುವುದಿಲ್ಲ ಎಂದು ಬುಡಕಟ್ಟು ಜನರು ತಿಂಗಳು ಗಟ್ಟಲೆ ಪ್ರತಿಭಟನೆ ಮಾಡಿದ್ದರು. ಅಷ್ಟೇ ಅಲ್ಲ ಬುಡಕಟ್ಟು ಜನಾಂಗದ ಮುತ್ತಮ್ಮ ಎಂಬುವರು ಮರವೇರಿ ಬೆತ್ತಲೆ ಹೋರಾಟ ನಡೆಸಿದ್ದರು. ಇದು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿತ್ತು.
ಈ ವೇಳೆ 528 ಕುಟುಂಬಗಳ ದಾಖಲೆಗಳನ್ನು ಪಡೆದು, ಅಷ್ಟೂ ಕುಟುಂಬಗಳಿಗೆ ಕುಶಾಲನಗರ ಸಮೀಪದ ಬ್ಯಾಡಗೊಟ್ಟದಲ್ಲಿ 350 ಮತ್ತು ಬಸನಹಳ್ಳಿಯಲ್ಲಿ 178 ಮನೆಗಳನ್ನು ನಿರ್ಮಿಸಲಾಗಿತ್ತು. 2018 ರಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಮನೆ ಗಳನ್ನು ವಿತರಣೆ ಮಾಡಿದ್ದರು. ಇದುವರೆಗೆ 479 ಕುಟುಂಬಗಳು ಮಾತ್ರವೇ ಮನೆಗಳಿಗೆ ಬಂದಿದ್ದು, ಹಕ್ಕುಪತ್ರ ಪಡೆದು, ವಾಸ ಆರಂಭಿಸಿವೆ. ಆದರೆ 49ಕುಟುಂಬಗಳು ಇಂದಿಗೂ ಮನೆಗಳಿಗೆ ಬಂದಿಲ್ಲ ಎನ್ನುತ್ತಿದ್ದಾರೆ ಐಟಿಡಿಪಿ ಇಲಾಖೆ ಅಧಿಕಾರಿ ಶಿವ ಕುಮಾರ್.
ಈ 49 ಕುಟುಂಬಗಳು ಇಂದಿಗೂ ವಿವಿಧ ಎಸ್ಟೇಟ್ ಗಳ ಮನೆಗಳಲ್ಲೇ ಕೂಲಿ ಮಾಡಿಕೊಂಡು ವಾಸಿಸುತ್ತಿವೆ. ಮನೆಗಳಿಗೆ ಬರುವಂತೆ ಮೂರು ಬಾರಿ ನೋಟಿಸ್ ನೀಡಲಾಗಿದೆ. ಆದರೂ ಇಂದಿಗೂ ಈ ಕುಟುಂಬಗಳು ಮನೆಗಳಿಗೂ ಬಂದಿಲ್ಲ. ಇನ್ನು ಹದಿನೈದು ದಿನ ಗಳಲ್ಲಿ ಮನೆಗಳಿಗೆ ಬಾರದಿದ್ದರೆ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅರ್ಹ ಫಲಾನುಭವಿಗಳ ಆಯ್ಕೆ ಮಾಡಿ ಆ ಮನೆಗಳನ್ನು
ವಿತರಣೆ ಮಾಡುವುದಾಗಿ ಐಟಿಡಿಪಿ ಅಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ.
ಆದರೆ ಬುಡಕಟ್ಟು ಸಮುದಾಯದ ಮುಖಂಡರು ಮಾತ್ರ, ಹೋರಾಟ ಮಾಡಿ ಮನೆಗಳನ್ನು ಪಡೆದಿದ್ದೇವೆ. 49 ಕುಟುಂಬಗಳು ತಮ್ಮ ದಾಖಲನೆಗಳನ್ನು ವಿರಾಜಪೇಟೆ ತಾಲೂಕಿನಿಂದ ಸೋಮವಾರಪೇಟೆ ತಾಲ್ಲೂಕಿಗೆ ಬದಲಾವಣೆ ಮಾಡಿಕೊಂಡಿಲ್ಲ. ಜತೆಗೆ
ಕಾಫಿ ತೋಟಗಳಲ್ಲಿ ಈಗ ಕೂಲಿ ಸಿಗುವುದರಿಂದ ಲೈನ್ ಮನೆಗಳಲ್ಲಿ ಇದ್ದಾರೆ.
ಈಗಾಗಲೇ 49 ಕುಟುಂಬಗಳ ಸಂಬಂಧಿಕರೇ ಅವರ ಈ ಮನೆಗಳಲ್ಲಿ ಇದ್ದಾಾರೆ. ಹೀಗಾಗಿ ಬೇರೆಯವರಿಗೆ ಮನೆಗಳನ್ನು ವಿತರಣೆ ಮಾಡಲು ಬಿಡುವುದಿಲ್ಲ. ಹಾಗೇನಾದರೂ ಬೇರೆಯವರಿಗೆ ವಿತರಣೆ ಮಾಡಿದರೆ ಮತ್ತೆ ತೀವ್ರ ಹೋರಾಟ ರೂಪಿಸುತ್ತೇವೆ. ಅಂತಹ
ಪರಿಸ್ಥಿತಿಗೆ ಅಧಿಕಾರಿಗಳು ಎಡೆಮಾಡಿಕೊಳ್ಳಬಾರದು ಎನ್ನುತ್ತಿದ್ದಾರೆ ಆದಿವಾಸಿ ಮುಖಂಡ ಸ್ವಾಮಿ.
ಕೋಟ್
ಕುಶಾಲನಗರ ಸಮೀಪದ ಬ್ಯಾಡಗೊಟ್ಟದಲ್ಲಿ 350 ಮತ್ತು ಬಸವನಹಳ್ಳಿಯಲ್ಲಿ 178 ಮನೆಗಳನ್ನು ನಿರ್ಮಿಸಲಾಗಿತ್ತು. 2018ರಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ಮನೆಗಳನ್ನು ವಿತರಣೆ ಮಾಡಿದ್ದರು. ಇದುವರೆಗೆ 479 ಕುಟುಂಬಗಳು ಮಾತ್ರವೇ ಮನೆ ಗಳಿಗೆ ಬಂದಿದ್ದು, ಹಕ್ಕುಪತ್ರ ಪಡೆದು, ವಾಸ ಆರಂಭಿಸಿವೆ. ಆದರೆ 49 ಕುಟುಂಬಗಳು ಇಂದಿಗೂ ಮನೆಗಳಿಗೆ ಬಂದಿಲ್ಲ.
-ಶಿವಕುಮಾರ್ ಐಟಿಡಿಪಿ ಇಲಾಖೆ ಅಧಿಕಾರಿ