Sunday, 3rd July 2022

ಅಗ್ನಿವೀರರಾಗಿ, ಅಗ್ನಿಕುಂಡಗಳಾಗಬೇಡಿ

ಪ್ರಸ್ತುತ

ಪ್ರಕಾಶ್ ಶೇಷರಾಘವಾಚಾರ್‌

sprakashbjp@gmail.com

ಭಾರತ ಈಗಾಗಲೇ ಪಾಕಿಸ್ತಾನ ಮತ್ತು ಚೀನಾ ದೇಶಗಳ ಕಿರುಕುಳ, ನಿತ್ಯ ತಾಗಾದೆಯನ್ನು ಎದುರಿಸುತ್ತಿದೆ. ಆಂತರಿಕ ಶತ್ರಗಳ ದೈನಂದಿನ ದೇಶ ವಿರೋಧಿ ಚಟುವಟಿಕೆಗಳ ಸವಾಲು ಮುಂದಿದೆ, ಇಂತಹ ಸೂಕ್ಷ್ಮ ಸಮಯದಲ್ಲಿ ರಾಜಕೀಯ ಪಕ್ಷಗಳಿಗೆ ದೇಶದ ಹಿತ ಮುಖ್ಯವಾಗಬೇಕು.

ಸೇನಾ ನೇಮಕಕ್ಕೆ ವಿನೂತನವಾದ ‘ಅಗ್ನಿಪಥ’ ಯೋಜನೆಯನ್ನು ಕೇಂದ್ರ ಸರಕಾರ ಘೋಷಿಸಿದ ಕೂಡಲೇ ಇದರ ಪೂರ್ವಾಪರ ವನ್ನು ಅರಿಯದೇ ನಾನಾ ರಾಜ್ಯಗಳಲ್ಲಿ ಏಕಾಏಕೀ ಪ್ರತಿಭಟನೆಯು ಸ್ಫೋಟವಾಗಿದೆ. ಉತ್ತರ ಭಾರತದಲ್ಲಿ ವಿಶೇಷವಾಗಿ ಬಿಹಾರ ಅಗ್ನಿಕುಂಡವಾಗಿ ಸಾರ್ವಜನಿಕ ಆಸ್ತಿಗಳು ಧಗಧಗಿಸಿ ಉರಿದಿವೆ.

ದಕ್ಷಿಣದಲ್ಲಿ ಇದರ ಬಿಸಿಯು ತೆಲಂಗಣಾ ಮತ್ತು ಅಲ್ಪ ಪ್ರಮಾಣದಲ್ಲಿ ಕರ್ನಾಟದಲ್ಲೂ ಕಂಡು ಬಂದಿದೆ. ಕಳೆದ 3  ವರ್ಷದಲ್ಲಿ ಮೋದಿ ಸರಕಾರವು ಜಾರಿಗೆ ತಂದಿರುವ ಮೂರನೆ ಯ ಮಹತ್ತರ ಸುಧಾರಣೆಯ ವಿರುದ್ಧ ವ್ಯವಸ್ಥಿತ ಸಂಚಿನ ಮೂಲಕ ಹೋರಾಟಕ್ಕೆ ಪ್ರಚೋದಿಸಲಾಗಿದೆ. ಒಳಗೊಳಗೇ ಕಾವು ನೀಡಿ, ವ್ಯಾಪಕ ಹಿಂಸಾಚಾರ ಹಾಗೂ ಸಾರ್ವಜ ನಿಕ ಆಸ್ತಿಯನ್ನು ನಾಶ ಮಾಡುವ ಹೀನ ಸಂಸ್ಕೃತಿಯು ಸರಕಾರದ ವಿರುದ್ಧ ಸದಾ ಕತ್ತಿ ಮಸೆಯುತ್ತಿರುವ ಪ್ರತಿಪಕ್ಷಗಳ ಸಹಯೋಗದೊಂದಿಗೆ ವಿಜೃಂಭಿ ಸುತ್ತಿದೆ.

ನೆರೆಯ ದೇಶಗಳಲ್ಲಿ ಧಾರ್ಮಿಕ ನಂಬಿಕೆಯ ಕಾರಣಗಳಿಗೆ ದೌರ್ಜನ್ಯಕ್ಕೂಳಗಾಗಿರುವ ಹಿಂದು. ಕ್ರಿಶ್ಚಿಯನ್, ಸಿಖ್ಖ್ ಮತ್ತು ಪಾರ್ಸಿ ಗಳಿಗೆ ಭಾರತದಲ್ಲಿ ಪೌರತ್ವ ನೀಡುವ ಸಿಎಎ ಕಾಯಿದೆಗೆ ತಿದ್ದುಪಡಿ ಜಾರಿಗೆ ತಂದಾಗ ದೇಶಾದ್ಯಂತ ಈ ಕಾಯಿದೆಯನ್ನು ವಿರೋಧಿಸಿ ಭಾರತದ ಮುಸ್ಲಿಮರು ತಿಂಗಳುಗಟ್ಟಲೆ ಪ್ರತಿಭಟನೆ ನಡೆಸಿದರು. ವಾಸ್ತವವಾಗಿ ನಮ್ಮ ದೇಶದ ಮುಸ್ಲಿಮರಿಗೆ ಈ ಕಾಯಿದೆಯಿಂದ ಯಾವ ಹಾನಿಯೂ ಆಗುತ್ತಿರಲಿಲ್ಲ. ಆದರೆ ದೇಶದಲ್ಲಿ ಅಕ್ರಮವಾಗಿ ನುಸುಳಿ ಬರುವ ಪಾಕಿಸ್ತಾನ ಮತ್ತು ಬಂಗ್ಲಾದೇಶದ ನಾಗರಿಕರಿಗೆ ಭಾರತದ ಪೌರತ್ವ ನೀಡಲು ಒತ್ತಡ ಹೇರುವುದು ಈ ಹೋರಾಟದ ಹಿಂದಿನ ಕುತಂತ್ರವಾಗಿತ್ತು.

ನಿಂತ ನೀರಾಗಿರುವ ಕೃಷಿ ಕ್ಷೇತ್ರಕ್ಕೆ ಕಾಯಕಲ್ಪ ನೀಡಿ ಖಾಸಗಿ ಬಂಡವಾಳ ಹರಿದು ಬರಲು ಮತ್ತು ರೈತರಿಗೆ ತಮ್ಮ ಉತ್ಪಾದನೆ ಯನ್ನು ತಮಗಿಚ್ಛೆ ಬಂದವರಿಗೆ ಮಾರುವ ಅವಕಾಶ ನೀಡುವ ಮೂರು ಕೃಷಿ ಸುಧಾರಣೆಯ ಕಾಯಿದೆಗಳನ್ನು ಜಾರಿಗೆ ತರಲಾ ಯಿತು. ಯಥಾಪ್ರಕಾರ ರೈತರ ದಾರಿ ತಪ್ಪಿಸಿ ಸುದೀರ್ಘ ಹೋರಾಟ ಕೈಗೊಳ್ಳುವಂತೆ ಪ್ರಚೋದಿಸಿ ತಿದ್ದುಪಡಿಯನ್ನು ಕೇಂದ್ರ ಸರಕಾರ ಹಿಂಪಡೆಯುವಂತೆ ಮಾಡಿದರು.

ಕಳೆದ ವಾರ ಸೇನಾ ನೇಮಕದಲ್ಲಿ ಕ್ರಾಂತಿಕಾರಿಕ ಬದಲಾವಣೆಯನ್ನು ಘೋಷಣೆ ಮಾಡಲಾಯಿತು. ‘ಅಗ್ನಿಪಥ’ ಹೆಸರಿನ ಈ ಯೋಜನೆಯನ್ವಯ 17.5 ವರ್ಷದಿಂದ 23 ವರ್ಷದವರು ಸೇನೆಯಲ್ಲಿ ಸೇವೆ ಮಾಡಲು ಅವಕಾಶ ನೀಡುತ್ತದೆ. ಸೇನೆಯ ಒಟ್ಟು
ಬಲದ ಶೇಕಡಾ 3ರಷ್ಟು ಹುದ್ದೆಗಳಿಗೆ ಮಾತ್ರ ಅಗ್ನಿಪಥ ಯೋಜನೆಯಡಿ ಆಯ್ಕೆ ಮಾಡಲಾಗುವುದು. 4 ವರ್ಷದ ತರುವಾಯ ಶೇಕಡಾ 25ರಷ್ಟು ಜನರನ್ನು ಕಾಯಂಗೊಳಿಸಲಾಗುವುದು ಮತ್ತು ಉಳಿದವರನ್ನು 11.7 ಲಕ್ಷ ಹಣದೊಂದಿಗೆ ಬಿಡುಗಡೆ ಮಾಡ ಲಾಗುತ್ತದೆ. ಈ ಯೋಜನೆಯಡಿಯಲ್ಲಿ ನೇಮಕವಾಗುವವರಿಗೆ ಮೊದಲನೆ ವರ್ಷ ?21 ಸಾವಿರ ಎರಡನೆಯ ವರ್ಷ ?23000 ಮೂರನೆಯ ವರ್ಷ ? 25580 ನಾಲ್ಕನೆಯ ವರ್ಷದಲ್ಲಿ ?28000 ಸಾವಿರ ವೇತನ ದೊರೆಯುತ್ತದೆ.

ಈ ವಿನೂತನ ಯೋಜನೆಯಿಂದ ಸಶಕ್ತವಾದ ಹಾಗೂ ಯುವ ಸೇನಾ ಪಡೆಯು ದೇಶ ಸೇವೆಗೆ ಲಭ್ಯವಾಗುತ್ತದೆ. ‘ಅಗ್ನಿಪಥ’ ಯೋಜನೆಯಡಿ ತರಬೇತಿ ಪಡೆದವರನ್ನು ‘ಅಗ್ನಿವೀರ’ರೆಂದು ಕರೆಯಲಾಗುತ್ತದೆ. ಇವರಿಗೆ ವಿಶಿಷ್ಟ ಸಮವಸ್ತ್ರ ನೀಡಲಾಗುತ್ತದೆ. ಸೇನೆಯ ಹಾಲಿ ಸೈನಿಕರಿಗಿಂತ ಭಿನ್ನ ಸ್ವರೂಪದಲ್ಲಿ ಇವರ ತಂಡವಿರಲಿದೆ. ಸೇನೆಯ ಮೂರೂ ವಿಭಾಗದಲ್ಲಿ ಇವರ ನೇಮಕ ಕೈಗೊಳ್ಳಲಾಗುವುದು.

ನಾಲ್ಕು ವರ್ಷದ ತರುವಾಯ ಸಹಸ್ರಾರು ಯುವಕರು ಸೇನಾ ತರಬೇತಿ ಪಡೆದ ಅಗ್ನಿವೀರರಾಗಿ ಎಲ್ಲ ಸವಾಲುಗಳನ್ನು ಎದುರಿ ಸಲು ಸನ್ನದ್ದರಾಗುತ್ತಾರೆ. ಇಂಥ ಯುವ ಪಡೆಯು ದೇಶದ ಬಹು ಅಮೂಲ್ಯ ಆಸ್ತಿಯಾಗಿ ರೂಪಗೊಂಡಿರುತ್ತದೆ. ಇವರಿಗೆ ಹಲವಾರು ಅವಕಾಶಗಳ ಬಾಗಿಲು ತೆರೆದಿರುತ್ತದೆ. ತಮ್ಮ ವಿದ್ಯಾಭ್ಯಾಸ ಮುಂದುವರಿಸಬೇಕು ಎಂದರೆ 12ನೇ ತರಗತಿಯ ಸರ್ಟಿಫಿ ಕೇಟ್ ಕೊಡಲಾಗುತ್ತದೆ. ಪೊಲೀಸ್ ಅರಸೇನಾ ಪಡೆಗಳಲ್ಲಿ ಆದ್ಯತೆಯ ಮೇಲೆ ಕೆಲಸ ಮತ್ತು ಸ್ವಯಂ ಉದ್ಯೋಗ ಕೈಗೊಳ್ಳಲು ಬ್ಯಾಂಕ್ ಸಾಲವು ದೊರೆಯುತ್ತದೆ. 24ನೇ ವಯಸ್ಸಿನಲ್ಲಿ ‘ಸೇವಾನಿಽ’ ಹೆಸರಲ್ಲಿ ನೀಡುವ ?11.7 ಲಕ್ಷ ರೂಪಾಯಿ ಬಂಡವಾಳವು ಇವರ ಕೈಯಲ್ಲಿ ಇರುತ್ತದೆ.

ಈ ತಾತ್ಕಾಲಿಕ ನೇಮಕ ಯೋಜನೆಯು ಈಗಾಗಲೇ ಅಮೆರಿಕ, ಚೀನಾ, ರಷ್ಯ, ಇಸ್ರೇಲ್, ಫ್ರಾನ್ಸ್ ಮುಂತಾದ ರಾಷ್ಟ್ರಗಳಲ್ಲಿ ಚಾಲ್ತಿ ಯಲ್ಲಿ ಇರುವುದು. ಅಮೆರಿಕದಲ್ಲಿ ಯುದ್ಧ ವಾತಾವರಣ ನಿರ್ಮಾಣವಾದರೆ ತಾತ್ಕಾಲಿಕವಾಗಿ ನೇಮಕವಾಗಿ ಹಿಂದಕ್ಕೆ ಹೋದ ವರನ್ನು ಮತ್ತೆ ಕರೆಸಿ ಸೇನೆಗೆ ಸೇರ್ಪಡೆ ಮಾಡಿಕೊಳ್ಳುವ ಪದ್ಧತಿಯು ಜಾರಿಯಲ್ಲಿದೆ.

ಭಾರತದಲ್ಲಿಯೂ ಈ ವ್ಯವಸ್ಥೆಯನ್ನು ಜಾರಿಗೆ ತರುವ ಮುನ್ನ ವ್ಯಾಪಕ ಸಮಾಲೋಚನೆಗಳು ನಡದಿವೆ ಮತ್ತು ಅನೇಕ ಅಭಿ
ಪ್ರಾಯ ಹಾಗೂ ಸಲಹೆಗಳನ್ನು ನಿವೃತ್ತ ಸೇನಾಧಿಕಾರಿಗಳು ನೀಡಿದ್ದಾರೆ. ದೇಶದ ಸೇನಾ ಪ್ರಮುಖರು ಇದರ ಸಾಧಕ ಭಾಧಕ ಗಳನ್ನು ಪರಾಮರ್ಶಿಸಿದ ನಂತರವೇ ಯೋಜನೆಯ ಜಾರಿಗೆ ಸಮ್ಮತಿ ನೀಡಿದ್ದಾರೆ. ಸೇನೆಯ ಬೇಕು ಬೇಡಗಳು, ಅದರ ಒಳಿತು-ಕೆಡುಕುಗಳನ್ನು ಚೆನ್ನಾಗಿ ಬಲ್ಲವರು ಸೇನಾಧಿಕಾರಿಗಳೇ ವಿನಹ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ದೇಶದ ಅಭಿವೃದ್ಧಿಗೆ ಮತ್ತು ಸುಧಾರಣೆಗೆ ಕಲ್ಲು ಹಾಕಲೂ ಹೇಸದ ರಾಜಕಾರಣಿಗಳಂತೂ ಖಂಡಿತವಲ್ಲ.

ಆ ಯೋಜನೆಗೆ ಹಲವಾರು ನಿವೃತ್ತ ಸೇನಾಧಿಕಾರಿಗಳು ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ. ಸೇನೆಯು ಇದರಿಂದ ದುರ್ಬಲ ವಾಗುತ್ತದೆ ಎಂಬ ಆತಂಕ ಹೊರ ಹಾಕಿದ್ದಾರೆ. ಸರಕಾರ ಇವರ ಭಾವನೆಗಳಿಗೆ ಸೂಕ್ತ ಸಮಾಧಾನ ನೀಡಿ ಅವರ ಆತಂಕ ದೂರ
ಮಾಡಬೇಕು. ಸೋಜಿಗದ ಸಂಗತಿಯೆಂದರೆ ‘ಅಗ್ನಿಪಥ’ ಯೋಜನೆಯನ್ನು ಘೋಷಿಸಿದ ಮರುದಿನದಿಂದಲೇ ಇದರ ವಿರುದ್ದ ಬಿಹಾರ, ಯುಪಿ ಮುಂತಾದ ರಾಜ್ಯಗಳಲ್ಲಿ ಹಿಂಸಾತ್ಮಕ ಪ್ರತಿಭಟನೆ ಆರಂಭವಾಗಿದೆ. ಪ್ರತಿಭಟನಾಕಾರರ ಗುರಿಯು ಸಾರ್ವಜನಿಕ ಸೇವೆ ನೀಡುವ ರೈಲುಗಳಿಗೆ ಬೆಂಕಿ ಹಚ್ಚುವುದು ಸಾರ್ವಜನಿಕ ಆಸ್ತಿ ಪಾಸ್ತಿಯನ್ನು ಹಾಳುಗೆಡವಿದ್ದು ಮತ್ತು ನೆರೆಯ ಶ್ರೀಲಂಕಾ ದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ಮಾದರಿಯಲ್ಲಿ ಬಿಜೆಪಿ ಸಚಿವರ ಮನೆಯ ಮೇಲೆ ದಾಳಿ, ಬಿಜೆಪಿ ಕಚೇರಿಗಳನ್ನು ಧ್ವಂಸ ಗೊಳಿಸಿದ್ದು ಈ ಹೋರಾಟದ ಹಿಂದೆ ಇರುವ ಕಾಣದ ಕೈಗಳ ಸಂಚಿನತ್ತ ಬೊಟ್ಟು ಮಾಡುತ್ತದೆ.

ಮೋದಿ ಸರಕಾರದ ವಿರುದ್ದ ಒಂದಲ್ಲ ಒಂದು ಪಿತೂರಿ ಮಾಡುತ್ತಿರುವ ದೇಶ ವಿರೋಧಿ ಮತ್ತು ಪ್ರಗತಿ ವಿರೋಧಿ ಶಕ್ತಿಗಳು ‘ಅಗ್ನಿ ಪಥ’ ಯೋಜನೆಯ ವಿರುದ್ಧವೂ ಯುವಕರನ್ನು ಪ್ರತಿಭಟನೆಗೆ ಪ್ರಚೋದಿಸಿದ್ದಾರೆಂಬ ಅನುಮಾನ ಕಾಡುತ್ತಿದೆ. ಇದರ ಹಿಂದೆ ಸರ್ಕಾರವನ್ನು ಅಭದ್ರಗೊಳಿಸುವ ಕುತಂತ್ರವನ್ನೂ ತಳ್ಳಿಹಾಕಲಾಗದು. ಪ್ರತಿಭಟನೆಯ ಕಾವು ಬಿಹಾರದಲ್ಲಿ ತೀವ್ರವಾಗಿದೆ. ಬಿಹಾರ್ ಬಂದ್ ಹೆಸರಲ್ಲಿ ವ್ಯಾಪಕ ಹಿಂಸಾಚಾರ, ಸಾರ್ವಜನಿಕ ಆಸ್ತಿಪಾಸಿಗಳಿಗೆ ಅಗ್ನಿಸ್ಪರ್ಶ ಮಾಡಿ ತಮ್ಮ ಗಲಭೆ ಮನಃಸ್ಥಿತಿ ಯನ್ನು ವೈಭವೀಕರಿಸಿದ್ದಾರೆ.

ಹತ್ತು ರೈಲ್ವೆ ಎಂಜಿನ್‌ಗಳಿಗೆ, 60ಕ್ಕೂ ಹೆಚ್ಚು ಬೋಗಿಗಳಿಗೆ ಅಗ್ನಿಸ್ಪರ್ಶ ಮಾಡಿ ರೈಲ್ವೆ ಇಲಾಖೆಗೆ ?200 ಕೋಟಿಗೂ ಹೆಚ್ಚು ನಷ್ಟ ವನ್ನುಂಟು ಮಾಡಿದ್ದಾರೆ. ‘ಅಗ್ನಿಪಥ’ ಯೋಜನೆಯಲ್ಲಿ ನೇಮಕ ಮಾಡಿಕೊಳ್ಳುತ್ತಿರುವುದು ಕೇವಲ 1.25 ಲಕ್ಷ ಜನರನ್ನು ಮಾತ್ರ. ಆದರೆ ಕಳೆದ ವಾರ ಪ್ರಧಾನಿಗಳು ಕೇಂದ್ರ ಸರಕಾರದ ನಾನಾ ಇಲಾಖೆಗಳಲ್ಲಿ ಮುಂದಿನ ಒಂದೂವರೆ ವರ್ಷದಲ್ಲಿ 10 ಲಕ್ಷ ಜನರನ್ನು ನೇಮಕ ಮಾಡಿಕೊಳ್ಳಲು ಈಗಾಗಲೇ ಸೂಚಿಸಿದ್ದಾರೆ.

ಇಂತಹ ಬಹುದೊಡ್ಡ ಅವಕಾಶ ದೊರೆತಿರುವಾಗ ಅಗ್ನಿಪಥ ಯೋಜನೆಯನ್ನು ಮುಂದಿಟ್ಟುಕೊಂಡು ದಾಂಧಲೆ ನಡೆಸಿರುವ ಉದ್ದೇಶದ ಹಿನ್ನೆಲೆಯು ತನಿಖೆಯಾಗಬೇಕಿದೆ. ಪ್ರತಿಭಟನೆಯ ಕಾವು ಹೆಚ್ಚಾದ ತರುವಾಯ ಸರಕಾರ ‘ಅಗ್ನಿಪಥ’ ಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಈ ಮೊದಲು 17.5 ವರ್ಷದಿಂದ 21 ವರ್ಷಕ್ಕೆ ಸಿಮೀತವಿದ್ದದನ್ನು 23 ವರ್ಷಕ್ಕೆ ಏರಿಕೆ ಮಾಡಲಾಗಿದೆ. ಈ ರಿಯಾಯಿ ತಿಯು ಈ ಬಾರಿ ಮಾತ್ರ ಎಂದು ಸೇನಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಅರಸೇನಾ ಪಡೆಗಳಲ್ಲಿ ಅಗ್ನಿ ವೀರರಿಗೆ ಶೇಕಡಾ 10 ರಷ್ಟು ಮೀಸಲು ಕಲ್ಪಿಸಲು ಅನುಮೋದನೆ ನೀಡಲಾಗಿದೆ. ನಾಲ್ಕು ವರ್ಷದ
ತರುವಾಯ ಅಗ್ನಿವೀರರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸುಲಭವಾಗಿ ಸಾಲ ನೀಡಲು ರಕ್ಷಣಾ ಸಚಿವರು ಬ್ಯಾಂಕ್‌ಗಳೊಂದಿಗೆ ಸಮಾಲೊಚನೆ ಆರಂಭಿಸಲಿದ್ದಾರೆ.

ಯುಪಿ ಸರ್ಕಾರವು ಈಗಾಗಲೇ ಅಗ್ನಿವೀರರಿಗೆ ಪೊಲೀಸ್ ಇಲಾಖೆಯಲ್ಲಿ ನೌಕರಿ ನೀಡಲು ಅವಕಾಶ ಕಲ್ಪಿಸಲಾಗುವುದು ಎಂದು ಘೋಷಿಸಿದೆ. ಕರ್ನಾಟಕ ಸರ್ಕಾರವು ಅಗ್ನಿವೀರರಿಗೆ ಪೊಲೀಸ್ ನೇಮಕದಲ್ಲಿ ಪ್ರಾಶಸ್ತ್ಯ ನೀಡಲು ಮುಂದಾಗಿದೆ. ವಾಸ್ತವವಾಗಿ ಅಗ್ನಿಪಥ್ ಯೋಜನೆಯಲ್ಲಿ ತರಬೇತಿ ಪಡೆದು ಹೊರ ಬಂದವರಿಗೆ ಪೊಲೀಸ್ ಇಲಾಖೆಯಲ್ಲಿ ಮತ್ತು ಖಾಸಗಿ ಸಂಸ್ಥೆಯ ಭದ್ರತಾ
ವಿಭಾಗದಲ್ಲಿ ಕೆಲಸ ಸುಲಭವಾಗಿ ದೊರೆಯುತ್ತದೆ. ಈ ಯೋಜನೆಯ ಸಾಧಕ ಬಾಧಕಗಳನ್ನು ಅರ್ಥ ಮಾಡಿಕೊಳ್ಳದೆ ಭುಗಿಲೆದ್ದ ಪ್ರತಿಭಟನೆಯು ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರಕಾರವು ತಂದ ಸಿಎಎ ಮತ್ತು ಕೃಷಿ ಕಾಯಿದೆಯ ವಿರುದ್ಧ ನಡೆದ ಹೋರಾಟದ ರೀತಿಯಲ್ಲಿಯೇ ಇರುವುದು ಈ ಪ್ರತಿಭಟನೆಗಳು ಮೋದಿ ವಿರೋಽಗಳ ಭಾರತ ವಿರೋಧಿ ಕಾರ್ಯಸೂಚಿಯ ಮುಂದುವರಿದ ಭಾಗದಂತಿದೆ.

ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ‘ಅಗ್ನಿಪಥ’ ಯೋಜನೆಯನ್ನು ರದ್ದುಪಡಿಸಲು ಒತ್ತಾಯಿಸಿರುವುದು ಇವರ ನಕಾರಾ ತ್ಮಕ ಮನಃಸ್ಥಿತಿ ಮತ್ತು ಮೋದಿ ಸರಕಾರದ ವಿರುದ್ಧ ಇರುವ ಕುರುಡು ದ್ವೇಷವಷ್ಟೇ. ಪ್ರತಿಪಕ್ಷದ ನಾಯಕರು ಈ ಯೋಜನೆಯ ಒಳಿತು ಮತ್ತು ಕೆಡುಕುಗಳ ಬಗ್ಗೆ ಅಧ್ಯಯನ ಮಾಡಿಲ್ಲ, ಸರಕಾರ ಮತ್ತು ಸೇನಾ ಪ್ರಮುಖರೊಂದಿಗೆ ಚರ್ಚೆ ಮಾಡಿಲ್ಲ. ಆದರೆ ಉರಿಯುವ ಬೆಂಕಿಗೆ ತುಪ್ಪ ಸುರಿಯಲು ಈ ಯೋಜನೆಗೆ ಸರ್ಮರ್ಥನೀಯ ಕಾರಣವಿಲ್ಲದೆ ತಮ್ಮ ವಿರೋಧ ವನ್ನು ಪ್ರಕಟ ಮಾಡುತ್ತಿದ್ದಾರೆ.

ದೇಶದ ರಕ್ಷಣಾ ವ್ಯವಸ್ಥೆಯು ಇದೀಗ ರಾಜಕೀಯ ಕುತಂತ್ರಕ್ಕೆ ಬಳಕೆಯಾಗುತ್ತಿರುವುದು ಅತ್ಯಂತ ಆತಂಕದ ವಿಚಾರವಾಗಿದೆ. ಸೇನೆಯ ಬೇಕು-ಬೇಡಗಳು ಬೀದಿ ಹೋರಾಟದಗಲೀ ರಾಜಕೀಯ ಪಕ್ಷಗಳ ಕಾರ್ಯಸೂಚಿಯನ್ವಯ ತೀರ್ಮಾನವಾಗುವುದಿಲ್ಲ. ಭಾರತ ಈಗಾಗಲೇ ಪಾಕಿಸ್ತಾನ ಮತ್ತು ಚೀನಾ ದೇಶಗಳ ಕಿರುಕುಳ, ನಿತ್ಯ ತಾಗಾದೆಯನ್ನು ಎದುರಿಸುತ್ತಿದೆ. ಆಂತರಿಕ ಶತ್ರಗಳ ದೈನಂದಿನ ದೇಶ ವಿರೋಧಿ ಚಟುವಟಿಕೆಗಳ ಸವಾಲು ಮುಂದಿದೆ, ಇಂತಹ ಸೂಕ್ಷ್ಮ ಸಮಯದಲ್ಲಿ ರಾಜಕೀಯ ಪಕ್ಷಗಳಿಗೆ ದೇಶದ ಹಿತ ಮುಖ್ಯವಾಗಬೇಕು.

ಆದರೆ, ದೇಶದ ಸುರಕ್ಷತೆಯೊಂದಿಗೆ ರಾಜಿಯಾದವರು ಮೋದಿಯವರನ್ನು ವಿರೋಧಿಸುವ ಹೊಣೆಗೇಡಿತನವನ್ನು ಪ್ರದರ್ಶಿಸು ತ್ತಿದ್ದಾರೆ. ಬೀದಿಯಲ್ಲಿ ದಾಂಧಲೆ ನಡೆಸಲು ತಮ್ಮ ಶಕ್ತಿವ್ಯಯ ಮಾಡುತ್ತಿರುವವರು ದೊರೆತಿರುವ ಸದಾವಕಾಶವನ್ನು ಬಳಸಿ ಕೊಂಡು ಅಗ್ನಿವೀರರಾಗಿ ದೇಶ ಕಾಪಾಡುವ ಶಿಸ್ತಿನ ಸಿಪಾಯಿಗಳಾಗಿ ಭಾರತವನ್ನು ಸದೃಢಗೊಳಿಸುವ ಸೇನಾನಿಗಳಾಗ ಬೇಕು. ದೇಶದ ಆಸ್ತಿ ನಮ್ಮಲ್ಲರ ಆಸ್ತಿ. ಅದನ್ನು ಹಾಳು ಮಾಡುವುದು ನಮ್ಮ ಕಾಲ ಮೇಲೆ ನಾವೇ ಕಲ್ಲು ಹಾಕಿಕೊಂಡಂತೆ ಎಂಬುದನ್ನು ಈ ಗಲಭೆಕೋರರು ಮರೆಯಬಾರದು. ಗಲಭೆಯಲ್ಲಿ ಭಾಗಿಯಾದವರಿಗೆ ಸೇನೆಯ ಬಾಗಿಲು ಶಾಶ್ವತವಾಗಿ ಮುಚ್ಚ ಲಾಗಿದೆ ಎಂದು ಸೇನೆ ತಿಳಿಸಿರುವುದು ಭಾವಿ ಗಲಭೆಕೋರರಿಗೆ ನೀಡಿರುವ ಸ್ಪಷ್ಟ ಎಚ್ಚರಿಕೆಯ ಸಂದೇಶವು.