Wednesday, 1st February 2023

ಆಕಾಶವಾಣಿಯಲ್ಲಿ ಆಪ್ತ ಅನುಭವ, ಮಂಗಳೂರಲ್ಲೂ, ಬೆಂಗಳೂರಲ್ಲೂ

ತಿಳಿರು ತೋರಣ

srivathsajoshi@yahoo.com

ಊರಲ್ಲಿ ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಳ್ಳುವ ಸಂದರ್ಭವೂ ಸೇರಿಕೊಂಡು ಪ್ರವಾಸಕ್ಕೆ ಮತ್ತಷ್ಟು ಸಾರ್ಥಕ್ಯ ಬಂತು. ಅದರ ಜೊತೆಗೆ ಆಕಾಶವಾಣಿಯಲ್ಲಿ ಸಂದರ್ಶನಗಳು- ಮಂಗಳೂರಿನಲ್ಲೊಂದು, ಬೆಂಗಳೂರಿ ನಲ್ಲೊಂದು! ಅಮೆರಿಕದಿಂದ ನಾನು ಹೊರಡುವ ಮೊದಲೇ ಇವು ನಿಗದಿಯಾಗಿ ದ್ದವು. ದಿನಾಂಕ, ಸಮಯ ಗೊತ್ತು ಮಾಡುವುದೊಂದೇ ಬಾಕಿ ಇದ್ದದ್ದು. ಬೆಂಗಳೂರಿಗೆ ಬಂದು ತಲುಪಿದೊಡನೆ ಅದೂ ಫಿಕ್ಸ್ ಆಯ್ತು. ನನ್ನೊಳಗಿನ ‘ಮೆಲ್ಬಾ’ಗೆ ಒಂಥರದ ಕಾತರವೂ ಶುರುವಾಯ್ತು ಎನ್ನಿ.

‘ಅಷ್ಟು ಎತ್ತರದ ಕಂಬದ ಮೇಲೆ ನಿಂತುಕೊಂಡು ನಾನು ಹಾಡಬೇಕೇ!?’ ಗಾಬರಿಗೊಳ್ಳು ತ್ತಾಳೆ ಪುಟ್ಟ ಹುಡುಗಿ ಮೆಲ್ಬಾ. ಆಕೆ ರೇಡಿಯೊ ಸ್ಟೇಷನ್‌ಗೆ ಹಾಡಲಿಕ್ಕೆಂದು ಹೋದವಳು. ಸ್ಟೇಷನ್‌ನ ಹೊರಗೆ ಕೆಂಪು-ಬಿಳಿ ಬಣ್ಣದ ಎತ್ತರದ ಕಂಬ (ಟ್ರಾನ್ಸ್‌ಮಿಷನ್ ಮಾಸ್ಟ್) ನೋಡಿ ಅವಳಿಗೆ ದಿಗಿಲು. ಆಮೇಲೆ ಅವಳ ಅಪ್ಪ ವಿವರಿಸಿದ ಮೇಲಷ್ಟೇ ಅವಳಿಗೆ ಗೊತ್ತಾಗುತ್ತದೆ ಹಾಡಲಿಕ್ಕಿರುವುದು ಕಂಬದ ತುದಿಯಲ್ಲಿ ನಿಂತುಕೊಂಡು ಅಲ್ಲ, ಧ್ವನಿಮುದ್ರಣ ಮಾಡುವ ಸ್ಟುಡಿಯೊದ ಒಳಗೆ ಕುಳಿತುಕೊಂಡು ಎಂದು.

ಅಲ್ಲಿ ಟೇಪ್‌ನೊಳಗೆ ರೆಕಾರ್ಡ್ ಆಗುವ ಹಾಡು ಆಮೇಲೆ ವಿದ್ಯುತ್ಕಾಂತೀಯ ಅಲೆಗಳ ರೂಪದಲ್ಲಿ ಟ್ರಾನ್ಸ್‌ಮಿಷನ್ ಮಾಸ್ಟ್‌ನಿಂದ ಬಿತ್ತರಗೊಳ್ಳುವುದು ಎಂದು. ಇದು ನಮಗೆ ಏಳನೆಯ ತರಗತಿಯಲ್ಲಿ ಇಂಗ್ಲಿಷ್ ಪಠ್ಯಪುಸ್ತಕದಲ್ಲಿದ್ದ Melba on Air ಎಂಬ ಪಾಠದ ಸಾರಾಂಶ. ಉಳಿದ ವಿವರಗಳು ಸ್ಪಷ್ಟ ನೆನಪಿಲ್ಲ. ಟ್ರಾನ್ಸ್ ಮಿಷನ್ ಕಂಬ ನೋಡಿ ಮೆಲ್ಬಾ ಹೆದರಿಕೊಳ್ಳುತ್ತಾಳೆಂಬು ದೊಂದೇ ನೆನಪು. ಅಷ್ಟಾಗಿ, ನಮ್ಮ ಹಳ್ಳಿಯ ಆ ಶಾಲೆಯಲ್ಲಿ ಅದುವರೆಗೆ ರೇಡಿಯೊ ಸ್ಟೇಷನ್ ನೋಡಿದವರು ಬಹುಶಃ ಯಾರೂ ಇದ್ದಿರಲಿಕ್ಕಿಲ್ಲ.

ಒಂದು ವೇಳೆ ನಮ್ಮನ್ನು ರೇಡಿಯೊ ಪ್ರೊಗ್ರಾಂ ಕೊಡಲಿಕ್ಕೆಂದು ಕರೆದುಕೊಂಡು ಹೋಗಿರುತ್ತಿದ್ದರೆ ನಮ್ಮ ಅವಸ್ಥೆಯೂ ಮೆಲ್ಬಾಳಿ ಗಿಂತ ಭಿನ್ನವಾಗೇನೂ ಇರುತ್ತಿರಲಿಲ್ಲ. ಮೊನ್ನೆ ಅಕ್ಟೋಬರ್ ೩೧ರಂದು ಸಂದರ್ಶನ ಧ್ವನಿಮುದ್ರಣಕ್ಕಾಗಿ ಮಂಗಳೂರು ಆಕಾಶವಾಣಿಗೆ ಹೋದಾಗ ನನಗೆ ಏಳನೆಯ ಕ್ಲಾಸಿನ ಮೆಲ್ಬಾ ನೆನಪಾದಳು. ಅಲ್ಲೇನೂ ದೊಡ್ಡ ಕಂಬ ನೋಡಿ ಹೆದರಿಕೊಳ್ಳುವ ಸೀನ್ ಇರಲಿಲ್ಲ ಬಿಡಿ. ಏಕೆಂದರೆ ಮಂಗಳೂರು ನಿಲಯದ ಟ್ರಾನ್ಸ್‌ಮಿಷನ್ ಮಾಸ್ಟ್ ಇರುವುದು ಉಡುಪಿಯ ಬಳಿ ಬ್ರಹ್ಮಾವರ ದಲ್ಲಿ. ಆದರೇನಂತೆ, ಸ್ಟುಡಿಯೊದೊಳಕ್ಕೆ ಹೋಗಿ ರೆಕಾರ್ಡ್ ಮಾಡುವಾಗಿನ ರೋಮಾಂಚನ ಮೆಲ್ಬಾಳಿಗೆ ಆದದ್ದನ್ನು ನಾವೂ ಊಹಿಸಬಹುದು. ಬಹುಮಟ್ಟಿಗೆ ನನಗದು ಮೊದಲ ಅನುಭವ.

ಆಕಾಶವಾಣಿ ನಿಲಯಕ್ಕೆ ಭೇಟಿ ನೀಡಿದ್ದು, ಇಡೀ ನಿಲಯದ ‘ಗೈಡೆಡ್ ಟೂರ್’ ಪಡೆದದ್ದು, ಮತ್ತು ಪೂರ್ಣಪ್ರಮಾಣದ ಸಂದರ್ಶನ ಧ್ವನಿಮುದ್ರಣದಲ್ಲಿ ಭಾಗವಹಿಸಿದ್ದು. ಬಹುಮಟ್ಟಿಗೆ ಮೊದಲ ಅನುಭವ ಎಂದಿದ್ದೇಕೆಂದರೆ, ದಶಕಗಳ ಹಿಂದೆ ಹೈದರಾಬಾದ್‌ನಲ್ಲಿರುತ್ತ ಒಮ್ಮೆ ಅಲ್ಲಿಯ ಆಕಾಶವಾಣಿ ನಿಲಯಕ್ಕೆ ಹೋಗಿದ್ದಿದೆ; ಆಗ ನಾನು ಕೆಲಸ ಮಾಡುತ್ತಿದ್ದ ಕಂಪನಿ ಯಿಂದ ನಾವೊಂದಿಷ್ಟು ಮಂದಿ ಸೇರಿ ‘ಸಂಕ್ರಾಂತಿ ವಿಶೇಷ- ಕಾರ್ಮಿಕರ ಕಾರ್ಯಕ್ರಮ’ ನಡೆಸಿಕೊಟ್ಟದ್ದಿದೆ; ಅದರಲ್ಲಿ ನನ್ನದೂ ಒಂದು ಚಿಕ್ಕ ಪ್ರಸ್ತುತಿ- ಸಹೋದ್ಯೋಗಿಯೊಬ್ಬರು ಬರೆದುಕೊಟ್ಟಿದ್ದ ತೆಲುಗು ಕವಿತೆಯೊಂದರ ವಾಚನ- ಇತ್ತು.

‘ವಚ್ಚಿಂದಿ ವಚ್ಚಿಂದಿ ಸಂಕ್ರಾಂತಿ ಪಂಡುಗ… ತೆಚ್ಚಿಂದಿ ತೆಚ್ಚಿಂದಿ ಸಂಬರಾಲು ಮೆಂಡುಗ’ (ಬಂದಿದೆ ಬಂದಿದೆ ಸಂಕ್ರಾಂತಿ ಹಬ್ಬ, ತಂದಿದೆ ತಂದಿದೆ ಸಂಭ್ರಮದ ದಿಬ್ಬ) ಎಂದು ಆ ಕವಿತೆಯ ಆರಂಭಿಕ ಸಾಲುಗಳು ನನಗಿನ್ನೂ ನೆನಪಿವೆ. ಆಕಾಶವಾಣಿ ನಿಲಯಕ್ಕೆ
ನಾವು ಆಫೀಸಿಂದ ಹೇಗೆ ಹೋದೆವು, ಎಷ್ಟು ಮಂದಿ ಹೋಗಿದ್ದೆವು, ಅಲ್ಲಿ ನಮ್ಮನ್ನು ಹೇಗೆ ನೋಡಿಕೊಂಡರು, ಗೌರವಧನ ಕೊಟ್ಟಿದ್ದರೇ ಇತ್ಯಾದಿಯೆಲ್ಲ ಏನೂ ನೆನಪಿಲ್ಲ. ಬಹುಶಃ ಚಿರಸ್ಮರಣೀಯ ಎನ್ನುವಂಥದ್ದೇನೂ ನಡೆದಿರಲಿಲ್ಲವಾದ್ದರಿಂದಲೇ ಏನೂ ನೆನಪಿಲ್ಲ.

ಆದರೆ ಮಂಗಳೂರು ಆಕಾಶವಾಣಿಗೆ ಮೊನ್ನೆ ಸೋಮವಾರ, ಆಮೇಲೆ ನಾಲ್ಕೇ ದಿನಗಳಲ್ಲಿ ಬೆಂಗಳೂರು ಆಕಾಶವಾಣಿಗೆ ಶುಕ್ರವಾರದ ದಿನ ಭೇಟಿ ಕೊಟ್ಟಾಗಿನ ಅನುಭವ ನಿಜಕ್ಕೂ ಅವಿಸ್ಮರಣೀಯ. ಆ ಸಂತೋಷವನ್ನು ಇಂದು ನಾನಿಲ್ಲಿ ನಿಮ್ಮೆಲ್ಲ ರೊಡನೆ ಹಂಚಿಕೊಳ್ಳಲೇಬೇಕು. ಸಾಮಾನ್ಯವಾಗಿ ಅಮೆರಿಕದಿಂದ ವರ್ಷಕ್ಕೊಮ್ಮೆ ಭಾರತಕ್ಕೆ ಬಂದುಹೋಗುತ್ತಿದ್ದ ನಾನು ಕೋವಿಡ್ ಪರಿಸ್ಥಿತಿಯಿಂದಾಗಿ ಸರಿಸುಮಾರು ಮೂರು ವರ್ಷಗಳಾದ ಮೇಲೆ ಈ ಸಲದ ಪ್ರವಾಸ ಕೈಗೊಂಡಿರುವುದು.

ತಿಳಿರುತೋರಣ ಅಂಕಣ ಬರಹಗಳ ಮೂರು ಹೊಸ ಸಂಪುಟಗಳು, ‘ಸ್ವಚ್ಛ ಭಾಷೆ ಅಭಿಯಾನ’ ಕಲಿಕೆ ಸರಣಿಯ ಪುಸ್ತಕರೂಪ- ಇವುಗಳ ಲೋಕಾರ್ಪಣೆ ಸಮಾರಂಭ ಬೆಂಗಳೂರಿನಲ್ಲಿ ಆಯೋಜನೆ ಮಾಡುವ ಪ್ಲಾನ್ ಮೊದಲೇ ಇತ್ತು. ಹಾಗೆಯೇ, ಊರಲ್ಲಿ
ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಳ್ಳುವ ಸಂದರ್ಭವೂ ಸೇರಿಕೊಂಡು ಪ್ರವಾಸಕ್ಕೆ ಮತ್ತಷ್ಟು ಸಾರ್ಥಕ್ಯ ಬಂತು. ಅದರ ಜೊತೆಗೆ ಆಕಾಶವಾಣಿಯಲ್ಲಿ ಸಂದರ್ಶನಗಳು- ಮಂಗಳೂರಿನಲ್ಲೊಂದು, ಬೆಂಗಳೂರಿನಲ್ಲೊಂದು!

ಅಮೆರಿಕದಿಂದ ನಾನು ಹೊರಡುವ ಮೊದಲೇ ಇವು ನಿಗದಿಯಾಗಿದ್ದವು. ದಿನಾಂಕ, ಸಮಯ ಗೊತ್ತು ಮಾಡುವುದೊಂದೇ ಬಾಕಿ
ಇದ್ದದ್ದು. ಬೆಂಗಳೂರಿಗೆ ಬಂದು ತಲುಪಿದೊಡನೆ ಅದೂ ಫಿಕ್ಸ್ ಆಯ್ತು. ನನ್ನೊಳಗಿನ ‘ಮೆಲ್ಬಾ’ಗೆ ಒಂಥರದ ಕಾತರವೂ
ಶುರು ವಾಯ್ತು ಎನ್ನಿ. ಮಂಗಳೂರು ಆಕಾಶವಾಣಿಯ ತಾಂತ್ರಿಕ ವಿಭಾಗದಲ್ಲಿ ಮುಖ್ಯ ಎಂಜಿನಿಯರ್ ಆಗಿರುವ ಚಂದ್ರಶೇಖರ ಶೆಟ್ಟಿಯವರು ಬಹುಕಾಲದಿಂದ ನನ್ನ ಅಂಕಣಬರಹಗಳ ನಿಯತ ಓದುಗರು. ನಾನು ಬಾಲ್ಯದಲ್ಲಿ ಮಂಗಳೂರು ಆಕಾಶವಾಣಿಯ ಕೇಳುಗನಾಗಿದ್ದವನು ಮತ್ತು ಈಗಲೂ ಅದರ ಬಗ್ಗೆ ಅಭಿಮಾನವುಳ್ಳವನು ಎಂದು ಗೊತ್ತಿರುವವರು.

ಹಾಗಾಗಿಯೇ ಶೆಟ್ಟಿಯವರು ಮೂರುನಾಲ್ಕು ವರ್ಷಗಳ ಹಿಂದೆಯೇ ನನ್ನನ್ನು ಮಂಗಳೂರು ಆಕಾಶವಾಣಿಯ ಅಭಿಮಾನಿ ಶ್ರೋತೃಗಳ ವಾಟ್ಸ್ ಆಪ್ ಗ್ರೂಪಿಗೆ ಸೇರಿಸಿದ್ದರು. ನನ್ನೊಂದಿಗಿನ ಸ್ನೇಹವನ್ನು ಕ್ರಮೇಣ ನನ್ನ ಅಣ್ಣಂದಿರಿಗೂ ವಿಸ್ತರಿಸಿದ ಶೆಟ್ಟಿಯವರು, ಊರಲ್ಲಿರುವ ಅಣ್ಣನನ್ನೊಮ್ಮೆ ಜೇನು ವ್ಯವಸಾಯದ ಸಂಪನ್ಮೂಲ ವ್ಯಕ್ತಿಯೆಂದು ಆಕಾಶವಾಣಿಗೆ ಕರೆಸಿ ಸಂದರ್ಶನ ಏರ್ಪಡಿಸಿದ್ದರು.

ಮತ್ತೊಮ್ಮೆ ಇಂಗ್ಲೆಂಡ್‌ನಲ್ಲಿರುವ ಇನ್ನೊಬ್ಬ ಅಣ್ಣನನ್ನೂ ಆಕಾಶವಾಣಿಗೆ ಕರೆಸಿ, ವಿದೇಶದಲ್ಲಿ ಭಾರತೀಯ ಸಂಸ್ಕೃತಿ ಪ್ರಚಾರದ ಸಮುದಾಯ ರೇಡಿಯೊ ನಡೆಸುತ್ತಿರುವ ಅವರ ಅನುಭವವನ್ನು ಮಂಗಳೂರು ನಿಲಯದ ಶ್ರೋತೃಗಳಿಗೆ ಕೇಳಿಸುವ ಏರ್ಪಾಡು ಮಾಡಿದ್ದರು. ಚಂದ್ರಶೇಖರ ಶೆಟ್ಟಿಯವರ ಈ ವ್ಯಕ್ತಿತ್ವ ಗಮನಾರ್ಹವಾದುದು. ಅವರು ಎಂಜಿನಿಯರಿಂಗ್ ಡ್ಯೂಟಿಯನ್ನಷ್ಟೇ ನೋಡಿಕೊಂಡು ಹಾಯಾಗಿ ಇರಬಹುದಾಗಿತ್ತು; ಆದರೆ ಅವರು ಹಾಗೆ ಮಾಡುವವರಲ್ಲ.

ಆಕಾಶವಾಣಿಗೆ ಹೆಚ್ಚುಹೆಚ್ಚು ಉಪಯುಕ್ತತೆ ಬರಬೇಕು, ಶ್ರೋತೃಗಳಿಗೆ ಹೊಸಹೊಸ ವ್ಯಕ್ತಿಗಳ/ ವಿಚಾರಗಳ ಪರಿಚಯವಾಗಬೇಕು ಎಂಬ ತುಡಿತ ಅವರದು. ಆ ದೃಷ್ಟಿಕೋನದಿಂದಲೇ ಅವರು ಅಮೆರಿಕದಿಂದ ಊರಿಗೆ ಭೇಟಿಯಲ್ಲಿ ಬಂದ ನನ್ನನ್ನು ‘ಕಟ್ಟಿ ಹಾಕಿ’ ಒಂದು ಸಂದರ್ಶನ ಏರ್ಪಡಿಸಿದ್ದು. ಮತ್ತೆ ನೋಡಿದರೆ ನನ್ನಂತೆಯೇ ಪ್ರಕೃತ ಊರಿಗೆ ರಜೆಯಲ್ಲಿ ಬಂದಿರುವ ಅಮೆರಿಕನ್ನಡಿತಿ ಶ್ರೀವಲ್ಲಿ ರೈಯವರನ್ನೂ ಆಕಾಶವಾಣಿಗೆ ಕರೆಸಿ, ಅವರು ಅಮೆರಿಕದಲ್ಲಿ ನಡೆಸುತ್ತಿರುವ ತುಳು ಭಾಷೆ-ಸಂಸ್ಕೃತಿ ಪೋಷಣೆಯನ್ನು
ಪರಿಚಯಿಸಲಿಕ್ಕಾಗಿ ಅವರದೂ ಒಂದು ಸಂದರ್ಶನ ಏರ್ಪಡಿಸಿದ್ದರು.

ಶೆಟ್ಟಿಯವರ ಬಗ್ಗೆ ನನಗೆ ಹೆಮ್ಮೆಯೆನಿಸವುದು ಇದೇ ಕಾರಣಕ್ಕೆ. ಆವತ್ತು ನಾನು ನಮ್ಮೂರಿಂದ ನನ್ನ ಅಣ್ಣನ ಮಗನ ಜೊತೆಯಲ್ಲಿ ಮಂಗಳೂರು ಆಕಾಶವಾಣಿ ನಿಲಯಕ್ಕೆ ಹೋದೆನು. ಬೆಳಗ್ಗೆ ಹತ್ತೂವರೆಗೆಲ್ಲ ತಲುಪಿದ ನಮ್ಮನ್ನು ಚಂದ್ರಶೇಖರ ಶೆಟ್ಟಿಯವರು ಪ್ರವೇಶದ್ವಾರದಲ್ಲೇ ಸ್ವಾಗತಿಸಿ ಒಳಗೆ ಕರೆದೊಯ್ದರು. ಅಷ್ಟು ಹೊತ್ತಿಗೆ ಕಾರ್ಯಕ್ರಮ ನಿರ್ವಹಣಾಧಿಕಾರಿಗಳ ದೈನಂದಿನ ಸಭೆ ನಡೆಯುತ್ತಿದ್ದು ದರಿಂದ, ಸಮಯದ ಸದುಪಯೋಗಕ್ಕಾಗಿ ನಮಗೆ ಇಡೀ ನಿಲಯದ ‘ಗೈಡೆಡ್ ಟೂರ್’ ಕೊಟ್ಟರು.

ರೆಕಾರ್ಡಿಂಗ್ ಸ್ಟುಡಿಯೊಗಳು, ನಿಯಂತ್ರಣ ಕೊಠಡಿ, ಅಲ್ಲಿಯ ಕಂಪ್ಯೂಟರ್ ಸರ್ವರ್‌ಗಳು, ಟ್ರಾನ್ಸ್‌ಮಿಷನ್ ರೂಮ್,
ಉದ್ಘೋಷಕರ ಕೊಠಡಿ, ಟೇಪುಗಳ ಸಂಗ್ರಹಾಲಯ ಇತ್ಯಾದಿ ಎಲ್ಲವನ್ನೂ ತುಂಬ ಆಸ್ಥೆಯಿಂದ ತೋರಿಸಿದರು. ಹೊಸ ತಂತ್ರಜ್ಞಾನದ ಅಳವಡಿಕೆಯಲ್ಲಿ ಮಂಗಳೂರು ಆಕಾಶವಾಣಿಯು ದೇಶದ ಮಿಕ್ಕೆಲ್ಲ ನಿಲಯಗಳಿಗಿಂತ ಮುಂಚೂಣಿಯಲ್ಲಿದೆ
ಯೆಂದು ಹೆಮ್ಮೆಯಿಂದ ವಿವರಿಸಿದರು. ಅವರ ಸಹೋದ್ಯೋಗಿಗಳನ್ನೂ ಪರಿಚಯಿಸಿದರು. ಚಹ ಸತ್ಕಾರವೂ ಆಯ್ತ.

ಅಷ್ಟರಲ್ಲಿ ಮೀಟಿಂಗ್ ಮುಗಿಸಿಬಂದ ಕಾರ್ಯಕ್ರಮ ನಿರ್ವಹಣಾಧಿಕಾರಿ ಸೂರ್ಯನಾರಾಯಣ ಭಟ್ ನಮ್ಮನ್ನು ಎದುರು ಗೊಂಡರು. ಸಂದರ್ಶನವನ್ನು ಅವರೇ ಮಾಡುವುದೆಂದು ಅದಾಗಲೇ ಗೊತ್ತುಪಡಿಸಿದ್ದರು. ಸೂರ್ಯ ನಾರಾಯಣ ಭಟ್ ಬಗ್ಗೆಯೂ ಒಂದೆರಡು ಮಾತುಗಳನ್ನಿಲ್ಲಿ ಹೇಳಲೇಬೇಕು. ಮಂಗಳೂರು ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ಕಳೆದ ಎರಡು-ಮೂರು ದಶಕಗಳಲ್ಲಿ ಆಕಾಶವಾಣಿಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವವರು. ಸ್ನೇಹಮಯಿ, ಮೆಲುದನಿಯ, ಮೃದು ಸ್ವಭಾವದ ‘ತಣ್ಣಗಿನ’ ಮನುಷ್ಯ.

ಆಪ್ತ ಸ್ನೇಹಿತನೊಡನೆ ಉಭಯಕುಶಲೋಪರಿ ಮಾತನಾಡುತ್ತಿದ್ದೇವೇನೋ ಎಂದೆನಿಸುವಂತೆ ಸಂದರ್ಶನ ನಡೆಸುವ ವಿಶೇಷ ಸಾಮರ್ಥ್ಯವುಳ್ಳವರು. ನನಗದು ಸಂದರ್ಶನದ ವೇಳೆ ಪೂರ್ಣ ಅನುಭವಕ್ಕೆ ಬಂತು. ನನ್ನ ಕೆಲಸ ತುಂಬ ಸುಲಭವೂ ಆಯ್ತು. ನಮ್ಮ ಸಂದರ್ಶನದ ರೆಕಾರ್ಡಿಂಗ್ ಮಾಡಿದ ಲತೀಶ್ ಸಹ ಇಂಟೆರೆಸ್ಟಿಂಗ್ ವ್ಯಕ್ತಿ. ಐಟಿ ಕ್ಷೇತ್ರದಲ್ಲಿ ಉದ್ಯೋಗದ ಬಳಿಕ ಒಂದಿಷ್ಟು ಸಮಯ ಸ್ಟೇಟ್ ಬ್ಯಾಂಕ್‌ನಲ್ಲಿ ಕೆಲಸ ಮಾಡಿ ಇದೀಗ ಪ್ರಸಾರ ನಿರ್ವಾಹಕರಾಗಿ ಆಕಾಶವಾಣಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಒಟ್ಟಿನಲ್ಲಿ ತುಂಬ ಫ್ರೆಂಡ್ಲಿ ವಾತಾವರಣದಲ್ಲಿ ಸಂದರ್ಶನ ನಡೆದದ್ದು ನನ್ನೊಳಗಿನ ‘ಮೆಲ್ಬಾ’ಳ ಆತಂಕವೆಲ್ಲ ಕರಗಿ ಹೋಗು ವಂತೆ ಮಾಡಿತು. ಸಂದರ್ಶನ ಮುಗಿಯುವ ಹೊತ್ತಿಗೆ ಅಲ್ಲಿಗೆ ಮಂಗಳೂರು ಆಕಾಶವಾಣಿಯಲ್ಲೇ ಈ ಹಿಂದೆ ಉದ್ಘೋಷಕ ರಾಗಿ ಮತ್ತು ಉತ್ಕೃಷ್ಟ ಮಟ್ಟದ ತುಳು ಕಾರ್ಯಕ್ರಮಗಳನ್ನು ನಿರ್ಮಿಸಿ ಈಗ ನಿವೃತ್ತರಾಗಿರುವ ಮುದ್ದು ಮೂಡುಬೆಳ್ಳೆ ಬಂದರು.

ಮಂಗಳೂರು ಆಕಾಶವಾಣಿಯ ತುಳು ವಿಭಾಗವನ್ನು ಅನನ್ಯವಾಗಿ ಶ್ರೀಮಂತಗೊಳಿಸಿದ, ‘ತ್ಯಾಂಪನ ಮಾಹಿತಿ’, ‘ಕೆಂಚನ ಕುರ್ಲರಿ’ ಮುಂತಾದ ಹರಟೆ ಕಾರ್ಯಕ್ರಮಗಳಿಂದ 80-90ರ ದಶಕಗಳಲ್ಲಿ ಕರಾವಳಿಯ ಮನೆಮಾತಾಗಿದ್ದ ದಿ.ಕಲ್ಕಾಡಿ ರಮಾನಂದ ರೈ ಬಗ್ಗೆ ಸಂಪಾದಿಸಿದ ಸ್ಮರಣಗ್ರಂಥದ ಪ್ರತಿಯನ್ನು ನನಗೆ ಕೊಡಲಿಕ್ಕೆಂದೇ ಅವರು ಬಂದಿದ್ದರು.

ಮಂಗಳೂರು ನಿಲಯವನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿದ ಇನ್ನೊಬ್ಬ ಪ್ರತಿಭೆ ದೇವು ಹನೆಹಳ್ಳಿ ಸಹ ಬಂದಿದ್ದರು. ಅಂತೂ ಬಾಲ್ಯದಲ್ಲಿ ನಾನು ಮಂಗಳೂರು ಆಕಾಶವಾಣಿಯ ಕಾರ್ಯಕ್ರಮಗಳನ್ನು ಕೇಳುತ್ತಿದ್ದಾಗ ಯಾವ್ಯಾವ ಹೆಸರುಗಳನ್ನು ಕೇಳುತ್ತಿದ್ದೆನೊ ಅವರಲ್ಲಿ ಕೆಲವರನ್ನು ಪ್ರತ್ಯಕ್ಷ ಕಂಡ, ಇನ್ನುಳಿದವರು ಅಲ್ಲಿ ಕೆಲಸ ಮಾಡಿದ್ದನ್ನು ನಾನು ಮನದಲ್ಲೇ ಚಿತ್ರಿಸಿಕೊಂಡ ರೋಮಾಂಚನದ ಕ್ಷಣಗಳು ಅವು. ಎಲ್ಲ ಮುಗಿಸಿ ಅಲ್ಲಿಂದ ಹೊರಡುವ ಹೊತ್ತಿಗೆ ಚಂದ್ರಶೇಖರ ಶೆಟ್ಟಿಯವರಿಂದ
ಇನ್ನೊಂದು ಪುಟ್ಟ ಅಚ್ಚರಿ.

‘ನಾವು ಅತಿಥಿಗಳಿಗೆ ಗಂಧದಮಾಲೆಯನ್ನೋ, ಹೂಗುಚ್ಛವನ್ನೋ ಮತ್ತೇನಾದರೂ ಸ್ಮರಣಿಕೆಯನ್ನೋ ಕೊಡುವುದಿಲ್ಲ. ನಮ್ಮದು ಗೋ-ಗ್ರೀನ್ ಇನಿಷಿಯೇಟಿವ್’ ಎಂದು ಹೇಳಿ ನನಗೊಂದು ಗಿಡವನ್ನು ಉಡುಗೊರೆಯಾಗಿ ಕೊಟ್ಟರು. ಮಂಗಳೂರು ಆಕಾಶ ವಾಣಿಯ ಭೇಟಿ ಮನಸ್ಸಲ್ಲಿ ಸದಾ ಹಸುರಾಗಿರಬೇಕೆಂಬ ಆಶಯದ ಪ್ರತೀಕವೋ ಎಂಬಂತೆ. ಅಮೆರಿಕದಲ್ಲಿ ನನ್ನ ವೃತ್ತಿಜೀವನ, ಬರವಣಿಗೆ ಹವ್ಯಾಸ, ಅಂಕಣ ಬರವಣಿಗೆ, ಬರಹದಲ್ಲಿ ಭಾಷಾ ಶುದ್ಧಿಯ ಅಗತ್ಯ… ಹೀಗೆ ನಾಲ್ಕಾರು ವಿಷಯಗಳು ಮುಖ್ಯವಾಗಿದ್ದ ಸಂದರ್ಶನ ಶುಕ್ರವಾರ ನವೆಂಬರ್ ೪ರಂದು ಬೆಳಗ್ಗೆ ೮:೩೦ಕ್ಕೆ ಪ್ರಸಾರವಾಯ್ತು.

ಮಾತ್ರವಲ್ಲ, ಅದು ಶ್ರೋತೃಗಳ ಮೆಚ್ಚುಗೆ ಪಡೆದಿದ್ದರಿಂದ ಭಾನುವಾರ ನವೆಂಬರ್ ೬ರಂದು ರಾತ್ರಿ ೮ ಗಂಟೆಗೆ ಮರುಪ್ರಸಾರ ಆಗಲಿದೆಯಂತೆ. ಆಕಾಶವಾಣಿ. ಮುಂದಿನ ಕಾರ್ಯಕ್ರಮ ಬೆಂಗಳೂರು ಕೇಂದ್ರದಿಂದ. ಬೆಂಗಳೂರು ಆಕಾಶವಾಣಿಯ ವಿವಿಧ ಭಾರತಿ ವಿಭಾಗದ ಕಾರ್ಯಕ್ರಮ ನಿರ್ವಹಣಾಧಿಕಾರಿ ಕಾನ್ಸೆಪ್ಟಾ ಫೆರ್ನಾಂಡಿಸ್ ಅವರೂ ನನ್ನೊಬ್ಬ ಓದುಗ ಸ್ನೇಹಿತೆ, ಸಹೃದಯಿ ಹಿತೈಷಿ. ಕಳೆದಸಲ ನನ್ನ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಬಂದಿದ್ದರು. ಅವರು ಈ ಹಿಂದೆ ಮಂಗಳೂರು ಆಕಾಶವಾಣಿಯಲ್ಲಿ ಸೇವೆ ಸಲ್ಲಿಸುತ್ತಿದ್ದವರು ಈಗ ಬೆಂಗಳೂರಿಗೆ ವರ್ಗವಾಗಿದ್ದಾರೆ.

ನಾನು ರಜೆಯಲ್ಲಿ ಭಾರತಕ್ಕೆ ಬರುತ್ತಿರುವ ಸಮಾಚಾರ ತಿಳಿದ ಅವರೂ ಕೆಲ ವಾರಗಳ ಹಿಂದೆಯೇ, ‘ನೀವು ಬೆಂಗಳೂರಿಗೆ ಬಂದಾಗ
ವಿವಿಧಭಾರತಿಯಲ್ಲಿ ನಮಗೆ ನಿಮ್ಮದೊಂದು ಸಂದರ್ಶನ ಬೇಕು’ ಎಂದು ಟವೆಲ್ ಹಾಸಿಟ್ಟಿದ್ದರು. ನೇರಪ್ರಸಾರಕ್ಕಾದರೂ ಸರಿ ಧ್ವನಿಮುದ್ರಣ ಮಾಡಿಕೊಂಡು ಆಮೇಲೆ ಪ್ರಸಾರಿಸುವುದಾದರೂ ಸರಿ ಎಂದು ಆಯ್ಕೆ ಬೇರೆ ಸೂಚಿಸಿದ್ದರು. ನಾನು ಎರಡನೆ ಯದನ್ನೇ ಆಯ್ದುಕೊಂಡೆ. ನವೆಂಬರ್ 4, ಶುಕ್ರವಾರ ಧ್ವನಿಮುದ್ರಣಕ್ಕೆ ಪ್ರಶಸ್ತ ದಿನ ಎಂದು ಸೂಚಿಸಿದೆ.

ವಿವಿಧ ಭಾರತಿಗಾದ್ದರಿಂದ ಒಂದಿಷ್ಟು ಹರಟೆ, ನಡುನಡುವೆ ಚಿತ್ರಗೀತೆಗಳು- ಹೀಗೆ ಒಂದು ಗಂಟೆಯ ಪ್ಯಾಕೇಜ್ ಸಿದ್ಧಪಡಿಸುವು ದೆಂದಾಯಿತು. ಸಂದರ್ಶನಕ್ಕೆ ಹಿರಿಯ ಉದ್ಘೋಷಕಿ ಸುಮತಿ ಬಿ.ಕೆ ಸಹ ನೆರವಾಗುತ್ತಾರೆಂದು ತಿಳಿಸಿದರು. ಸುಮತಿ ಮತ್ತು ನಾನು
ಇದುವರೆಗೆ ಮುಖತಃ ಭೇಟಿಯಾಗಿದ್ದಿಲ್ಲ ಎನ್ನುವುದನ್ನು ಬಿಟ್ಟರೆ 10-15 ವರ್ಷಗಳಿಂದ ಸ್ನೇಹಸಂಪರ್ಕ ಇರುವವರು.

ಕಳೆದ ವರ್ಷ ಅವರು ನಿರ್ಮಿಸಿದ ‘ನುಡಿತೇರನೆಳೆದವರು ಬಾನುಲಿ ಕಲಿಗಳು’ ಸರಣಿಯ ಎಲ್ಲ ಕಂತುಗಳನ್ನು ನಾನು ಕೇಳಿದ್ದೆ; ಸರಣಿಯ ಆರಂಭದಲ್ಲೊಂದು ಅಂತ್ಯದಲ್ಲೊಂದು ಲೇಖನಗಳನ್ನೂ ಅಂಕಣದಲ್ಲಿ ಬರೆದಿದ್ದೆ. ಸಂದರ್ಶನದಲ್ಲಿ ಸುಮತಿ ಸಹ ಇರುತ್ತಾರೆಂದು ತಿಳಿದಾಗ ನನಗೆ (ನನ್ನೊಳಗಿನ ‘ಮೆಲ್ಬಾ’ಗೆ?) ನಿರುಮ್ಮಳ. ಸಂದರ್ಶನದ ದಿನ ಬೆಳಗ್ಗೆ ಹನ್ನೊಂದೂವರೆಗೆ
ಆಕಾಶವಾಣಿಗೆ ನಾನು ಹೋಗುವುದೆಂದಾಯಿತು.

ಬೆಂಗಳೂರಿನಲ್ಲಿ ನನ್ನ ವಾಸ್ತವ್ಯದ ಜಾಗ ಸುಮತಿಯವರ ಮನೆಗೆ ತೀರ ಹತ್ತಿರವಾದ್ದರಿಂದ ಅವರೇ ನನ್ನನ್ನು ಆಕಾಶವಾಣಿ ನಿಲಯಕ್ಕೆ ಕರೆದುಕೊಂಡು ಹೋದರು. ವಾಪಸ್ ಬರುವಾಗಲೂ ಅವರೇ ತಂದುಬಿಟ್ಟರು. ನಮಗಿಬ್ಬರಿಗೆ ಆಕಾಶವಾಣಿ ಕೇಂದ್ರಿತ ಲೋಕಾಭಿರಾಮ ಮಾತಿಗೆ ಅದೂ ಒಳ್ಳೆಯದೇ ಆಯಿತು. ಬೆಂಗಳೂರು ಆಕಾಶವಾಣಿಗೆ ಮೊತ್ತಮೊದಲ ಬಾರಿ ಪದಾರ್ಪಣೆ ಮಾಡುವಾಗ ನನಗೊಂಥರ ರೋಮಾಂಚನ. ಎಂಥೆಂಥ ಗಣ್ಯ ಮಹನೀಯರ ಧ್ವನಿ ಮತ್ತು ಸಂಗೀತವನ್ನು ಕನ್ನಡಿಗರಿಗೆ
ಕರ್ಣಾಮೃತ ಧಾರೆಯೆರೆದ ಕೇಂದ್ರವದು! ಮೊದಲಿಗೆ ನನ್ನನ್ನು ಧ್ವನಿಭಂಡಾರಕ್ಕೆ ಕರೆದುಕೊಂಡುಹೋದರು.

ಆಮೇಲೆ ರೆಕಾರ್ಡಿಂಗ್ ಸ್ಟುಡಿಯೊ ಲಭ್ಯವಿದ್ದುದರಿಂದ ಕಾನ್ಸೆಪ್ಟಾ, ಸುಮತಿ, ಮತ್ತು ನಾನು ಅದರೊಳಗೆ ಕುಳಿತುಕೊಂಡೆವು. ನಮ್ಮ ಹರಟೆ ಹೇಗಿರಬೇಕೆಂಬ ನೀಲನಕ್ಷೆ ತಯಾರಿಸಿದೆವು. ಹೊರಗಿಟ್ಟ ಸ್ವಯಂನಿಯಂತ್ರಿತ (ಈಗ ಸಿಬಂದಿಗಳ ಸಂಖ್ಯೆ ಕಡಿಮೆಯಿರುವುದರಿಂದ) ಕಂಪ್ಯೂಟರ್‌ಗೆ ಆಣತಿಯಿತ್ತು ರೆಕಾರ್ಡಿಂಗ್ ಆರಂಭಿಸಿದೆವು. ನನ್ನ ಅಂಕಣಗಳಲ್ಲಿ, ಕೆಲವೊಮ್ಮೆ ಶೀರ್ಷಿಕೆಯಲ್ಲೂ, ಆಗಾಗ ಕಾಣಿಸಿಕೊಳ್ಳುವ ಚಿತ್ರಗೀತೆ ಸಾಲುಗಳೇ ಹರಟೆಗೆ ಬುನಾದಿಯಾದವು. ಚಿತ್ರಗೀತೆಗಳ ಅದ್ಭುತರಮ್ಯ ಲೋಕ, ಅವುಗಳಿಂದಾಗುವ ಭಾವಕೋಶಗಳ ಉದ್ದೀಪನ, ಆಗಿನ-ಈಗಿನ ಚಿತ್ರಸಾಹಿತ್ಯದ ತುಲನೆ… ನಮ್ಮ ಮಾತಿನ ಸರಕಾದವು.

ಜೊತೆಯಲ್ಲೇ ಅಮೆರಿಕದಲ್ಲಿ ಕನ್ನಡ ಚಟುವಟಿಕೆಗಳು, ಎರಡು ದಶಕಗಳ ಕಾಲ ಅಂಕಣಬರವಣಿಗೆಯಲ್ಲಿ ನನ್ನ ಅನುಭವಕ್ಕೆ ಬಂದ ಮೋಜಿನ ಅಥವಾ ಪೇಚಿನ ಪ್ರಸಂಗಗಳೂ ಹಾದುಹೋದವು. ರಾಪಿಡ್-ಫೈರ್ ಮಾದರಿಯಲ್ಲಿ ಪ್ರಶ್ನೆಗಳ ಕೇಳೋಣವೂ ಆಯಿತು. ಸುಮಾರು ಒಂದೂವರೆ ಗಂಟೆಯಷ್ಟು ಆಗಿರುವ ಧ್ವನಿಮುದ್ರಣವನ್ನು ಈಗಿನ್ನು ಸುಮತಿಯವರು ಸೂಕ್ತವಾಗಿ ಸಂಕಲಿಸಿ, 30-35 ನಿಮಿಷಗಳಿಗಾಗುವಷ್ಟು ಸಂಕ್ಷಿಪ್ತಗೊಳಿಸಿ ಪ್ರಸಾರಕ್ಕೆ ಸಿದ್ಧಪಡಿಸುತ್ತಾರೆ.

ಮುಂದಿನ ವಾರ ಒಂದು ದಿನ ಅದರ ಪ್ರಸಾರವಿರುತ್ತದೆ. ಇಂಥದೊಂದು ಆಲೋಚನೆ ಸಾಕಾರ ಗೊಂಡ ಖುಶಿಯಲ್ಲಿ, ಹತ್ತಿರ ದಲ್ಲಿರುವ ರೆಸ್ಟೋರೆಂಟಲ್ಲಿ ಊಟ ಸವಿಯುವುದರೊಂದಿಗೆ ನಮ್ಮ ಮೂವರ ಈ ಪ್ರಾಜೆಕ್ಟ್ ಸಂಪನ್ನವಾಯಿತು. ಬಾಲ್ಯದಲ್ಲಿ ನನಗೆ ಕನಸಿದ್ದದ್ದು ನಾನು ರೇಡಿಯೊದಲ್ಲಿ ಉದ್ಘೋಷಕನಾಗಿಯೋ ಮತ್ತೇನಾದರೂ ಹುದ್ದೆಯಲ್ಲೋ ಕೆಲಸ ಮಾಡಬೇಕು ಎಂದು. ಹಾಗೆ ನೋಡಿದರೆ ನನ್ನದೇನೂ ‘ರೇಡಿಯೊಜೆನಿಕ್’ ಧ್ವನಿ ಅಲ್ಲ.

ನಿರರ್ಗಳ ಮಾತುಗಾರ ಮೊದಲೇ ಅಲ್ಲ. ಆ ಕನಸು ಏಕಿತ್ತೋ ನಾನರಿಯೆ. ಅದನ್ನು ನಾನು ಗಂಭೀರವಾಗಿ ಮುನ್ನಡೆಸಲಿಲ್ಲ ಎನ್ನುವುದೂ ನಿಜವೇ. ಆದರೂ ರೇಡಿಯೊದ ಬಗ್ಗೆ, ಆಕಾಶವಾಣಿಯ ಬಗ್ಗೆ, ಅಲ್ಲಿ ಕೆಲಸ ಮಾಡುವವರ ಬಗ್ಗೆ ನನ್ನಲ್ಲೊಂದು ವಿಶೇಷ ಕುತೂಹಲ, ಆಸಕ್ತಿ, ಮತ್ತು ಗೌರವ ಅಂದಿನಿಂದ ಇಂದಿನವರೆಗೂ ಅವಿಚ್ಛಿನ್ನವಾಗಿ ಮುಂದುವರಿದುಕೊಂಡು ಬಂದಿರುವುದೂ ಸತ್ಯವೇ. ಈ ಸಲ ಭಾರತ ಪ್ರವಾಸದಲ್ಲಿ ಆಕಾಶವಾಣಿಯ ಎರಡು ಪ್ರತ್ಯೇಕ ನಿಲಯಗಳಿಂದ ಎರಡು ಪ್ರತ್ಯೇಕ
ಸಂದರ್ಶನಗಳ ಧ್ವನಿಮುದ್ರಣ ಮತ್ತು ಪ್ರಸಾರ ನನ್ನ ‘ಆಕಾಶವಾಣಿ ಕ್ರೇಜ್’ಗೊಂದು ಧನ್ಯತೆ ನೀಡಿದೆಯೆನ್ನುವುದು ಎದೆಯುಬ್ಬಿಸಿ ಹೇಳುವಂಥ ಸಂಗತಿ.

error: Content is protected !!