Wednesday, 28th July 2021

ವಚನ ಸಾಹಿತ್ಯ ರಕ್ಷಣೆಗಾಗಿ ಹೋರಾಡಿದ ಅಕ್ಕನಾಗಮ್ಮ

ಸಾಂದರ್ಭಿಕ

ಬಾಲಾಜಿ ಕುಂಬಾರ

12ನೇ ಶತಮಾನದ ಬಸವಣ್ಣನವರ ಸಮಕಾಲೀನ ವಚನಕಾರರಲ್ಲಿ ಬಸವಣ್ಣನವರ ಹಿರಿಯ ಸಹೋದರಿ ಶರಣೆ ಅಕ್ಕನಾಗಮ್ಮ ಕೂಡ ಒಬ್ಬರು. ಮಾದರಸ ಹಾಗೂ ಮಾದಲಾಂಬಿಕೆ ದಂಪತಿಗಳ ಮಗಳಾದ ನಾಗಲಾಂಬಿಕೆ ಬಿಜಾಪುರ ಜಿಲ್ಲೆಯ ಬಾಗೇವಾಡಿಯ ಇಂಗಳೇಶ್ವರದಲ್ಲಿ ಜನಿಸಿದರು.

ಸಹೋದರ ಬಸವಣ್ಣನವರ ಉಜ್ವಲ ಬದುಕು ರೂಪಿಸುವಲ್ಲಿ ಅಕ್ಕನಾಗಮ್ಮನವರ ಪಾತ್ರ ಪ್ರಮುಖವಾಗಿದೆ. ವಚನ ಸಾಹಿತ್ಯ ಹಾಗೂ ಧರ್ಮ ರಕ್ಷಣೆಗಾಗಿ ಬದುಕಿನುದ್ದಕ್ಕೂ ಹೋರಾಡಿದ ತ್ಯಾಗಮಯಿ ಅಕ್ಕನಾಗಲಾಂಬಿಕೆಯವರ ಜೀವನ – ಹೋರಾಟ ಇಂದಿನ ಯುವ ಸಮುದಾಯಕ್ಕೆ ದಾರಿದೀಪವಾಗಿದೆ.ಅನುಭವ ಮಂಟಪದ ಮೇಲ್ವಿಚಾರಣೆ ಸೇರಿದಂತೆ ಎಲ್ಲಾ ಶರಣರನ್ನು ಉಪಚಾರ ಮಾಡುವ ಕಾರ್ಯ ಅಕ್ಕನಾಗಮ್ಮ ಮಾಡುತ್ತಿದ್ದರು.

ಅಕ್ಕನಾಗಮ್ಮನವರಿಗೆ ಅಕ್ಕನಾಗಲಾಂಬಿಕೆ, ನಾಗಾಯಿ ಸೇರಿದಂತೆ ಹಲವು ಹೆಸರುಗಳಿಂದ ಕರೆಯುತ್ತಾರೆ, ಅಕ್ಕನಾಗಮ್ಮನವರ ಗಂಡ ಶಿವದೇವ, ಮಗ ಚನ್ನಬಸವಣ್ಣ, ಅನುಭವ ಮಂಟಪದಲ್ಲಿ ಸ್ತ್ರೀ ಸಮಾನತೆಯ ದನಿಯಾಗಿ, ಮಹಿಳೆಯರ ಸ್ಥಾನಮಾನ
ಹೆಚ್ಚಿಸುವಲ್ಲಿ ಅಕ್ಕ ನಾಗಮ್ಮನವರ ಪಾತ್ರ ಹಿರಿದಾಗಿತ್ತು. ಕಲ್ಯಾಣದ ಅನುಭವ ಮಂಟಪದಲ್ಲಿ ಅನನ್ಯ ಕಾರ್ಯಕ್ಷಮತೆ ತೋರುವ ಜತೆಗೆ ಸಮಕಾಲೀನ ಶರಣ ಬಳಗದಲ್ಲಿ ಗುರುತಿಸಿಕೊಳ್ಳುತ್ತಾರೆ.

ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ವಚನಕಾರರ ಜತೆಯಾಗಿ ವಚನ ಕಟ್ಟುಗಳನ್ನು ಸಂರಕ್ಷಿಸಲು ನೇತೃತ್ವವಹಿಸಿದ ಧೀರ ಮಹಿಳೆ ಅಕ್ಕನಾಗಮ್ಮ. ಅಕ್ಕನಾಗಮ್ಮನವರಿಗೆ ಬಸವಣ್ಣನವರ ಮೇಲೆ ಅಪಾರವಾದ ಪ್ರೀತಿ ಹಾಗೂ ಅಭಿಮಾನ ಇತ್ತು. ಬಸವಣ್ಣ ನವರ ಏಳಿಗೆಗಾಗಿ ಶ್ರಮಿಸಿದ ಅಕ್ಕನಾಗಮ್ಮ ಬಸವಣ್ಣನವರ ಸ್ತುತಿಪರವಾಗಿ ಅಧಿಕ ವಚನಗಳು ಬರೆದಿರುವುದು ಕಾಣಬಹುದು. ಅಕ್ಕನಾಗಮ್ಮನವರು ರಚಿಸಿದ 15 ವಚನಗಳು ಮಾತ್ರ ಲಭ್ಯವಾಗಿವೆ.

‘ಬಸವಣ್ಣ ಪ್ರಿಯ ಚನ್ನಸಂಗಯ್ಯ’ ಎಂಬ ವಚನಾಂಕಿತದಲ್ಲಿ ರಚಿತವಾದ ವಚನಗಳಲ್ಲಿ ಬಸವ ಸ್ತುತಿ, ಶರಣರ ಸ್ತುತಿ, ಆಧ್ಯಾತ್ಮಿಕ ನಿಲುವು ಹಾಗೂ ಸತ್ಯ, ನಿಷ್ಠೆ ಮತ್ತು ಭಕ್ತಿ ಕುರಿತಾದ ಅಂಶಗಳು ಎದ್ದು ಕಾಣುತ್ತವೆ. ಎನ್ನುವ ಈ ಮೇಲಿನ ವಚನವು, ಬಸವಣ್ಣ ನವರು ಕಲ್ಯಾಣ ತೊರೆದು ಕೂಡಲಸಂಗಮದಲ್ಲಿ ಲಿಂಗೈಕ್ಯರಾದ ನಂತರ ಅವರ ಸಹೋದರಿ ಅಕ್ಕನಾಗಮ್ಮ ತನ್ನ ಹೃದಯ ಸ್ಪರ್ಶ ನುಡಿಗಳನ್ನು ವಚನಗಳಲ್ಲಿ ವ್ಯಕ್ತಪಡಿಸಿರುವುದನ್ನು ವಚನದಲ್ಲಿ ಕಾಣಬಹುದು.

ಬಸವಣ್ಣ ಎನ್ನುವ ಹೆಸರು ದೇವರ ನಾಮವಲ್ಲ, ಪೂಜಿಸುವ ದೇವರ ಮೂರ್ತಿಯೂ ಅಲ್ಲ. ಅಂಧಕೂಪದಲ್ಲಿ ಮುಳುಗಿದ
ಸಮಾಜವನ್ನು ಜ್ಞಾನದ ಬೆಳಕು ಹರಿಸಿದ ಜ್ಞಾನ ದೀವಿಗೆ, ಸಮತ್ವ ಸಮಾಜಕ್ಕಾಗಿಯೋ ಶ್ರಮಿಸಿದ ಮಹಾಗುರು ಬಸವಣ್ಣ. ವೃತ್ತಿ ಕಾಯಕವನ್ನು ಎತ್ತಿ ಹಿಡಿದು ಕಾಯಕಜೀವಿಗಳನ್ನು ಸಮಾಜದ ಉತ್ತಮ ಸ್ಥಾನಕ್ಕೆ ಕೊಂಡೊಯ್ದು ಸಮಾನತೆ ಸಮಾಜ ರೂಪಿಸಿದ ಸಾಮಾಜಿಕ ಚಿಂತಕ ಬಸವಣ್ಣ ಸೀ ಕುಲಕ್ಕೆ ಘನತೆಯನ್ನು ತಂದುಕೊಟ್ಟವರು.ಅಗಮ್ಯ, ಅಗೋಚರ, ಅಪ್ರತಿಮ ಚೈತನ್ಯ ಶಕ್ತಿ ಬಸವಣ್ಣನ ಅಂತರಂಗ ತುಂಬಿತ್ತು.

ಬಸವಣ್ಣ ನೀವು ಭೂಲೋಕಕ್ಕೆ ಜನ್ಮತಾಳಿದ ಬಳಿಕ ಭಕ್ತಿಯ ಬೆಳಕು ಎಲ್ಲಾ ದಿಕ್ಕುಗಳಿಗೂ ಹರಿಯಿತು. ನಿಮ್ಮ ಕಾಯಕ ನಿಷ್ಠೆ, ನಡೆ – ನುಡಿ ಭಕ್ತಿ ಜಗದಗಲ ಪಸರಿಸಿದೆ, ಈ ಘನವಾದ ಭಕ್ತಿ ಯಾರು ಬಲ್ಲವರು? ಎಂದು ಅಕ್ಕ ನಾಗಮ್ಮ ಬಸವಣ್ಣನವರಿಗೆ ಕೇಳುತ್ತಾರೆ. ನೀವು ಜನಿಸಿ ಬಂದ ಈ ಜಗಕ್ಕೆ ಎಲ್ಲವೂ ಪೂರೈಸಿತ್ತೆಂದು ಹೆಮ್ಮೆಪಟ್ಟೇವು, ಆದರೆ ನೀವು ಲಿಂಗೈಕ್ಯರಾಗಿ ಹೋದ ನಂತರ ನಿಮ್ಮ ಜತೆ ಭಕ್ತಿಯೂ ಹೋಯಿತ್ತಯ್ಯಾ, ನಿಮ್ಮ ಸಮಕಾಲೀನ 770ಕ್ಕಿಂತ ಹೆಚ್ಚಿನ ಅಸಂಖ್ಯಾತ ಮಹಾ ಅಮರಗಣಗಳು ನಿಮ್ಮ ಜತೆಗೆ ಹೊರಟು ಹೋದರು ಎನ್ನುವ ಅಕ್ಕ ನಾಗಮ್ಮ ಬಸವಣ್ಣನವರನ್ನು ಕಳೆದುಕೊಂಡ ಕಲ್ಯಾಣ ರಾಜ್ಯ ಬಡವಾಗಿತ್ತು.

ಶರಣರ ಹತ್ಯಾಕಾಂಡ ಸಂದರ್ಭದಲ್ಲಿ ಅಕ್ಕನಾಗಮ್ಮ, ನುಲಿಯ ಚಂದಯ್ಯನವರು ತರೀಕೆರೆ ಹತ್ತಿರದ ಎಣ್ಣೆ ಹೊಳೆ ಪ್ರದೇಶದಲ್ಲಿ ನೆಲೆಸುತ್ತಾರೆ, ಅಲ್ಲಿಯೇ ಅಕ್ಕ ನಾಗಮ್ಮ ಲಿಂಗದಲ್ಲಿ ಲೀನವಾದರು.

Leave a Reply

Your email address will not be published. Required fields are marked *