Friday, 7th May 2021

ಬಿಪಿಎಲ್ ಕಾರ್ಡದಾರ ಪೇಷೆಂಟ್ ಗಳ ಪೂರ್ಣ ವೆಚ್ಚ ಭರಿಸುವೆ: ಕೃಷಿ ಸಚಿವ ಬಿ.ಸಿ. ಪಾಟೀಲ್

ಕೊಪ್ಪಳದ ಜನಪ್ರತಿನಿಧಿಗಳಿಗೂ ಹೀಗೆ ಮಾಡಲು ಮನವಿ ಮಾಡುವೆ
ಕೊಪ್ಪಳ: ನನ್ನ ಸ್ವ ಕ್ಷೇತ್ರದ ಬಿಪಿಎಲ್ ಕಾರ್ಡ್ ಹೊಂದಿರುವ ಯಾರೇ ಬಡಜನರಿಗೆ ಪಾಸಿಟಿವ್ ಬಂದು ಖಾಸಗಿ ಆಸ್ಪತ್ರೆಗಳಿಗೆ ದಾಖಲಾದರೆ ಅದಕ್ಕೆ ತಗುಲುವ ಸಂಪೂರ್ಣ ವೆಚ್ಚವನ್ನು ನನ್ನ ವೈಯಕ್ತಿಕ ಹಣ ಭರಿಸು ತ್ತಿದ್ದು, ಕೊಪ್ಪಳದ ಜನಪ್ರತಿನಿಧಿಗಳಿಗೂ ಹೀಗೆ ಮಾಡುವ ಮೂಲಕ ಬಡ ಜನರಿಗೆ ಅನುಕೂಲ ಮಾಡುವಂತೆ  ಮನವಿ ಮಾಡುತ್ತೇನೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ಅವರು ಕೊಪ್ಪಳದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಡವರಿಗೆ ಸಹಾಯ ಮಾಡುವುದು ಅವರವರ ವೈಯಕ್ತಿಕ ನಿರ್ಧಾರ. ಇಲ್ಲಿನ ಜನಪ್ರತಿನಿಧಿಗಳಿಗೂ ಬಡವರ ಸಂಕಷ್ಟ ನಿವಾರಣೆಗೆ ಕೈ ಜೋಡಿಸಲು ಮನವಿ ಮಾಡುತ್ತೇನೆ ಎಂದರು.
ಕರೋನ ಪ್ರಕರಣಗಳ ನಿಯಂತ್ರಣ ತಪ್ಪುತ್ತೆ ಎನ್ನುವ ಸದುದ್ದೇಶದಿಂದ ಜನತಾ ಕರ್ಪ್ಯೂ ಜಾರಿಗೊಳಿಸ ಲಾಗಿದೆ. ಈಗಾಗಲೇ ಸರಪಳಿ ಶುರುವಾಗಿದೆ . ಇದನ್ನು ಬ್ರೆಕ್ ಮಾಡಲು 14-16 ದಿನಗಳು ಬೇಕು. ಕೊಪ್ಪಳ ಜಿಲ್ಲೆಯಲ್ಲೂ ಕರೊನಾ ಪ್ರಕರಣಗಳು ಹೆಚ್ಚುತ್ತಿವೆ. ನಿತ್ಯ 350ರಿಂದ 400 ಕೇಸ್ ಗಳು ಬರುತ್ತಿವೆ. ನಿನ್ನೆ ಜಿಲ್ಲೆ ಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಕೊಪ್ಪಳ ಜಿಲ್ಲಾಡಳಿತ ಆಕ್ಸಿಜನ್, ವೆಂಟಿಲೇಟರ್, ಬೆಡ್ ಕೊರತೆ ಆಗದಂತೆ ಇಲ್ಲಿಯವರೆಗೆ ನೋಡಿಕೊಂಡಿದೆ. ಮುಂದಿನ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ. ವಿಡಿಯೋ ಕಾನ್ಸರೆನ್ಸ್ ಮುಗಿದ ತಕ್ಷಣ ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ಕರೆದು ಮುಂದಿನ ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಾ ಹೋದರೆ ಅವುಗಳ ನಿಯಂತ್ರಣಕ್ಕೆ ಯಾವ ರೀತಿ ಕ್ರಮ ತೆಗೆದು ಕೊಳ್ಳಬೇಕು ಎಂದು ಸಭೆಗೆ ಹಾಜರಾಗುವ ಶಾಸಕರು , ಸಂಸದರ ಜೊತೆ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದು ಹೇಳಿದರು.
ಅನ್ಯ ಊರುಗಳಿಂದ ಬಂದಿರುವ ಗ್ರಾಮೀಣ ಭಾಗದ ಜನರನ್ನು ಇದುವರೆಗೂ ಟೆಸ್ಟ್ ಮಾಡಲು ಕ್ರಮ ಕೈಗೊಳ್ಳ ಲಾಗುತ್ತಿದೆ. ಪಿಡಿಒ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಗ್ರಾಮೀಣ ಭಾಗದ ಜನರ ಕೋವಿಡ್ ಟೆಸ್ಟ್ ಮಾಡಿಸಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಹಾಗೆನೆ ಜನರೂ ಸಹ ತಮ್ಮ ಸಂಸಾರದ ಹಿತದೃಷ್ಟಿಯಿಂದ, ಸಮಾಜದ ಹಿತದೃಷ್ಟಿಯಿಂದ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳ ಬೇಕು ಎಂದು ತಿಳಿಸಿ ಹೋದರು.
ಜಿಲ್ಲೆಯಲ್ಲಿ ಈಗಾಗಲೆ 1655 ಜನರನ್ನು ಹೋಮ್ ಐಸೊಲೇಷನ್ ಮಾಡಲಾಗಿದೆ . ಈ ಹೋಮ್ ಐಸೋಲೇಷನ್ ಶ್ರೀಮಂತರಿಗೆ ಸರಿ ಹೊಂದುತ್ತದೆ. ಅವರ ಮನೆಗಳು ದೊಡ್ಡದಾಗಿರುತ್ತವೆ. ಬಡವರಿಗೆ ಹೋಮ್ ಐಸೋಲೇಷನ್ ಸರಿ ಹೋಗಲ್ಲ . ಯಾಕೆಂದರೆ ಅವರ ಮನೆಗಳು ಬಹುತೇಕ 20 * 30 ಅಳತೆಯ ದ್ದಾಗಿರುತ್ತವೆ . ಸಣ್ಣ ಜಾಗದಲ್ಲಿ ಐಸೋಲೇಷನ್ ಮಾಡುವುದರಿಂದ ವೈರಸ್ ಮನೆಯ ಇತರರಿಗೂ ಹರಡುವ ಸಾಧ್ಯತೆ ಹೆಚ್ಚು . ಹಾಗಾಗಿ ಕೂಡಲೇ ಕೋವಿಡ್ ಸೆಂಟರ್ ತೆರೆದು ಬಡವರನ್ನು ಐಸೋಲೇಷನ್ ಮಾಡುವ ಬದಲು ಕೋವಿಡ್ ಕೇರ್ ಸೆಂಟರ್‌ನಲ್ಲಿ ದಾಖಲಿಸಿಕೊಳ್ಳಲು ಸೂಚನೆ ನೀಡಿದ್ದೇನೆ ಎಂದರು.
ಜಿಲ್ಲೆಯಲ್ಲಿ ಕರೋನಾ ನಿಯಂತ್ರಣದ ನಿಟ್ಟಿನಲ್ಲಿ ಅಗತ್ಯ ಸಲಕರಣೆ , ಚಿಕಿತ್ಸಾ ಸಾಮಗ್ರಿಗಳ ಕೊರತೆ ಇಲ್ಲ . ರೆಮ್‌ಡಿಸಿವರ್‌ ಬೇಡಿಕೆ ಇದೆ . ಈಗಾಗಲೇ ಪೂರೈಕೆ ಆಗಿದೆ . ಇನ್ನೂ ಹೆಚ್ಚುವರಿಯಾಗಿ ಬೇಕಾಗಿದ್ದು , ಸರಕಾರಕ್ಕೆ ಕೇಳುತ್ತೇವೆ . ಸದ್ಯ ಯಾವುದೇ ತೊಂದರೆ ಇಲ್ಲ . ಕಿನ್ನಾಳದಲ್ಲಿ ನೂರಕ್ಕೂ ಹೆಚ್ಚು ಸೋಂಕಿತರು ಕಂಡು ಬಂದಿದ್ದು , ಅವರೆಲ್ಲರೂ ಕೂಲಿ ಕೆಲಸಕ್ಕೆ ಹೋಗುತ್ತಿರುವ ಪ್ರಶ್ನೆಗೆ ಉತ್ತರಿಸಿದ ಸಚಿವ ಬಿ.ಸಿ. ಪಾಟೀಲ , ಆ ರೀತಿ ಆಗಿರಲಿಕ್ಕಿಲ್ಲ . ಯಾಕೆಂದರೆ ಈ ಸಲ ಕೋವಿಡ್ ವೈರಸ್ ಬಗ್ಗೆ ಜನ ಬಹಳಷ್ಟು ಭೀತಿಗೊಳಗಾಗಿದ್ದಾರೆ . ಜಾಗೃತಿ ಹೊಂದಿದ್ದಾರೆ . ಹಾಗೊಂದು ವೇಳೆ ಸೋಂಕು ಕಂಡು ಬಂದರೆ ಎಲ್ಲೂ ಹೊರಗಡೆ ಓಡಾಡದೇ ಕೋವಿಡ್ ಕೇರ್ ಸೆಂಟರ್‌ಗೆ ಬಂದು ಚಿಕಿತ್ಸೆ ಪಡೆದುಕೊಳ್ಳಲು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಸದ ಕರಡಿ ಸಂಗಣ್ಣ,  ಶಾಸಕ ರಾಘವೇಂದ್ರ ಹಿಟ್ನಾಳ, ಎಸ್‌ಪಿ ಟಿ. ಶ್ರೀಧರ್‌ ಸೇರಿದಂತೆ ಜನಪ್ರತಿನಿಧಿಗಳು, ಹಲವು ಅಧಿಕಾರಿಗಳು ಹಾಜರಿದ್ದರು.
ಹೊರಗೆ ಬಾರದ ಡಿಸಿಗೆ ಹೇಳ್ತಿನಿ… ಎಲ್ಲಾ ಜಿಲ್ಲೆಗಳಲ್ಲೂ ಸ್ವತಃ ಜಿಲ್ಲಾಧಿಕಾರಿಗಳೇ ಹೊರಗಡೆ ಬಂದು ಕೋವಿಡ್ ನಿಯಂತ್ರಣ ಹಾಗೂ ಜಾಗೃತಿ ನೀಡುತ್ತಿದ್ದಾರೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿರುವ ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೊರಗಡೆ ಬರ್ತಾ ಇಲ್ಲವಲ್ಲ ಎಂಬ ಪ್ರಶ್ನೆಗೆ, ಈ ಬಗ್ಗೆ ಡಿಸಿಗೆ ಹೇಳುತ್ತೇನೆ ಎಂದು ಸಚಿವ ಪಾಟೀಲ ಉತ್ತರಿಸಿದರು.
ಜಿಲ್ಲಾಸ್ಪತ್ರೆ , ಕೋವಿಡ್ ಕೇರ್ ಸೆಂಟರ್‌ ಪರಿಶೀಲನೆ
ಕೊಪ್ಪಳ ಜಿಲ್ಲಾಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್‌ಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಇದೇ ವೇಳೆ ಪರಿಶೀಲನೆ ನಡೆಸಿದರು. ಪರಿಶೀಲನೆ ಸಂದರ್ಭದಲ್ಲಿ ಆಸ್ಪತ್ರೆ ಹೊರಗೆ ಒರಗಿಕೊಂಡಿದ್ದ ರೋಗಿಯೊಬ್ಬರ ಯೋಗಕ್ಷೇಮ ವಿಚಾರಿಸಿದ ಸಚಿವ, ಆರೋಗ್ಯ ಸಿಬ್ಬಂದಿಯನ್ನು ಕರೆದು ರೋಗಿಯನ್ನು ಹೀಗೆ ಹೊರಗೆ ಬಿಡದೆ ಮೊದಲು ಒಳಗೆ ದಾಖಲಿಸಿಕೊಳ್ಳಿ ಎಂದು ಸೂಚನೆ ನೀಡಿದರು.

Leave a Reply

Your email address will not be published. Required fields are marked *