Friday, 7th May 2021

ಅಂಬೇಡ್ಕರ್‌‌ ಚಿಂತನೆ ಇಂದಿನ ಅವಶ್ಯಕತೆ

ಅಭಿಮತ

ಶಾಂತಾರಾಮ ಚಿಬ್ಬುಲಕರ

ನಾನು ಪ್ರತಿಮೆಗಳಲ್ಲಿ ಅಲ್ಲ, ಪುಸ್ತಕಗಳಲ್ಲಿ ಸಿಗುತ್ತೇನೆ. ನಾನು ಪೂಜೆ ಮಾಡುವುದರಿಂದ ಅಲ್ಲ, ಓದುವುದರ ಮೂಲಕ ಸಿಗುತ್ತೇನೆ. ಎಂದು ಹೇಳಿದ ಮಹಾಪುರುಷ ಅಂಬೇಡ್ಕರ್.

ಕಾನೂನು ತಜ್ಞರಾಗಿ, ಖ್ಯಾತ ರಾಷ್ಟ್ರೀಯತಾವಾದಿಯಾಗಿ, ರಾಜಕೀಯ ನೇತಾರರಾಗಿ, ಸಾಮಾಜಿಕ ಕಾರ್ಯಕರ್ತರಾಗಿ, ಶ್ರೇಷ್ಠ ಇತಿಹಾಸಕಾರರಾಗಿ, ಅಪ್ರತಿಮ ಚಿಂತಕರಾಗಿ, ಮಾನವಶಾಸ್ತ್ರಜ್ಞರಾಗಿ, ಶ್ರೇಷ್ಠ ಅರ್ಥಶಾಸ್ತ್ರಜ್ಞರಾಗಿ, ಅಪ್ರತಿಮ ಚಿಂತಕರಾಗಿ, ಕ್ರಾಂತಿಕಾರಿಯಾಗಿ, ಭಾರತದ ಸಂವಿಧಾನದ ಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಮಾಡಿದ ಸಾಧನೆಗಳು ಒಂದು ಮಹಾಕ್ರಾಂತಿ.

ಬುದ್ಧ, ಬಸವಣ್ಣ, ವಾಷಿಂಗ್ಟನ್, ಅಬ್ರಾಹಂ ಲಿಂಕನ್, ಮಾರ್ಟಿನ್ ಲೂಥರ್, ಶಾಹೂ ಮಾಹಾರಾಜರ ಚಿಂತನೆಗಳಿಂದ ರೂಪುಗೊಂಡ ಮಹಾನ್ ಚೇತನ ಅಂಬೇಡ್ಕರ್. ಭಾರತದಲ್ಲಿ ಯಾವುದೇ ವಿಷಯದ ಬಗ್ಗೆ ಅಧ್ಯಯನ ಮಾಡುವಾಗ ಬಾಬಾ ಸಾಹೇಬರ ಅನಿಸಿಕೆ ಚಿಂತನ ಮಂಥನದೊಂದಿಗೆ ಪ್ರಾರಂಭವಾಗುವುದು ಸಹಜ.

ಹಾಗಾಗಿಯೇ ಹಲವಾರು ವಿಶ್ವವಿದ್ಯಾಲಯಗಳಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಹೆಸರಿನ ಅಧ್ಯಯನ ಕೇಂದ್ರಗಳು, ಅವರ ಹೆಸರಿನ ವಿಶ್ವವಿದ್ಯಾಲಯ, ಅಂಬೇಡ್ಕರವರ ವಿಚಾರಗಳ ಮೇಲೆ ಸಾವಿರಾರು ಸಂಶೋಧನಾ ಪ್ರಬಂಧಗಳು, ಪುಸ್ತಕಗಳು ಹಾಗೂ ಚಿತ್ರ ಗಳನ್ನು ಗಮನಿಸಿದ್ದೇವೆ. ವಿಶ್ವದಲ್ಲಿಯೇ ಅತಿ ಹೆಚ್ಚು ಮೂರ್ತಿಗಳಿರುವ ವ್ಯಕ್ತಿಯಾಗಿಯು ಇವರನ್ನು ಗಮನಿಸಬಹುದು. ಅಂಬೇಡ್ಕರವರ ರುಪಾಯಿಯ ಬಿಕ್ಕಟ್ಟು (ದಿ ಪ್ರಾಬ್ಲಮ್ ಆಫ್ ರುಪಿ) ಎಂಬ ಪುಸ್ತಕದ ಆಧಾರದ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಥಾಪನೆ ಮಹತ್ವದ ವಿಚಾರ.

ಅಂಬೇಡ್ಕರವರು ಭಾರತದಲ್ಲಿ ಜಾತಿ ಪದ್ಧತಿ, ಬುದ್ಧಿಸಂ ಆಂಡ್ ಕಮ್ಯುನಿಸಂ, ಭಾರತದಲ್ಲಿ ಜಾತಿ ವ್ಯವಸ್ಥೆ ಹುಟ್ಟು ಬೆಳವಣಿಗೆ ಮುಂತಾದ ಪುಸ್ತಕಗಳ ಮೂಲಕ ಭಾರತದ ಸಾಮಾಜಿಕ ವ್ಯವಸ್ಥೆಯ ಕರಾಳ ಮುಖವನ್ನು ಸಮಾಜದ ಮುಂದಿಡುವ ಕಾರ್ಯ ಮಾಡಿದರು. ಸ್ವತಂತ್ರ ಕಾರ್ಮಿಕ ವರ್ಗದ ಸಂವಿಧಾನಾತ್ಮಕ ನಿಯಮ, ಕಾರ್ಮಿಕರು ಮತ್ತು ಸಂಸದೀಯ ಪ್ರಜಾಪ್ರಭುತ್ವ, ಸಂಸದೀಯ ಪ್ರಜಾಪ್ರಭುತ್ವದ ಭವಿಷ್ಯ ಮುಂತಾದ ಪುಸ್ತಕಗಳು ಮೂಲಕ ಕಾರ್ಮಿಕರ ಸಮಸ್ಯೆಗಳ ಪರಿಹಾರ ಮತ್ತು ಭಾರತಕ್ಕೆ ಪ್ರಜಾಪ್ರಭುತ್ವವೇ ಬೇಕೆಂಬ ಮಹದಾಸೆಯನ್ನು ಬಿತ್ತಿದರು.

ಭಾರತದ ಹಲವಾರು ಸಮಾಜ ಸುಧಾರಕರು ಕಡ್ಡಾಯ ವಿಧವಾ ಪದ್ಧತಿ, ಬಾಲ್ಯವಿವಾಹ, ಸತಿ ಪದ್ಧತಿ, ದೇವದಾಸಿ ಪದ್ಧತಿ ಮುಂತಾದ ಪಿಡುಗಗಳ ನಿವಾರಣೆಗೆ ತಮ್ಮ ಕಾರ್ಯಕ್ಷೇತ್ರವನ್ನು ಸೀಮಿತಗೊಳಿಸಿದ್ದರು. ಆದರೆ ಅವರು ಜಾತಿ ನಿರ್ಮೂಲನೆಯ ಅವಶ್ಯಕತೆ ಅರಿಯಲಿಲ್ಲ ಹಾಗೂ ನಿರ್ಮೂಲನೆಯ ಧೈರ್ಯವು ಅವರು ಮಾಡಲಿಲ್ಲ ಎಂಬುದು ಅಂಬೇಡ್ಕರವರ ಅನಿಸಿಕೆ ಯಾಗಿತ್ತು.

ಬ್ರಿಟಿಷರ ಆಳ್ವಿಕೆಯಲ್ಲಿ ರಾಜಕೀಯ ಸ್ವಾತಂತ್ರ್ಯ ಆದ್ಯತೆ ಸಾಮಾಜಿಕ ಸುಧಾರಣೆಯ ಬಗ್ಗೆ ಅಲಕ್ಷ್ಯ ಮುಂದುವರಿಯಿತು. ಅಂಬೇಡ್ಕರ್‌ರವರು ಸಾಮಾಜಿಕ ಒಕ್ಕಟ್ಟಿಗೆ ಹಾಗೂ ಐಕ್ಯತೆಗೆ ಅಡ್ಡಿಯಾಗಿರುವ ಜಾತಿ ನಿರ್ಮೂಲನಕ್ಕೆ ಮತ್ತು ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವದ ಆದರ್ಶಗಳ ಆಧಾರದ ಮೇಲೆ ಮತ್ತು ಪ್ರಜಾಪ್ರಭುತ್ವ ತತ್ತ್ವಗಳಿಗನುಗುಣವಾದ ಹೊಸ ಸಮಾಜದ ವ್ಯವಸ್ಥೆಯ ನಿರ್ಮಾಣಕ್ಕೆ ಕರೆ ನೀಡಿದ್ದರು.

ಆದ್ದರಿಂದ ಪ್ರತಿಯೊಬ್ಬ ಸ್ತ್ರೀ ಪುರುಷನನ್ನು ಶಾಸ್ತ್ರಗಳ ಗುಲಾಮಗಿರಿಯಿಂದ ಮುಕ್ತಗೊಳಿಸಿ, ಶಾಸ್ತ್ರಾಧಾರಿತ ವಿನಾಶಕಾರಿ ಭಾವನೆಗಳನ್ನು ಅವರ ಮನಸ್ಸುಗಳಿಂದ ತೆಗೆದು ಹಾಕಿ ಅವರ ಮನಸ್ಸುಗಳನ್ನು ಶುದ್ಧಗೊಳಿಸಿದಾಗ ಅವನಾಗಲೀ ಅವಳಾಗಲೀ ಸಹಪಂಕ್ತಿ ಭೋಜನ ಮತ್ತು ಅಂತರ್ಜಾತಿ ವಿವಾಹಕ್ಕೆ ಮುಂದಾಗುತ್ತಾರೆ ಎಂಬುದು ಅಂಬೇಡ್ಕರರವರ ಅಭಿಪ್ರಾಯ.

ನಾಸಿಕದಲ್ಲಿಯ ಭಿಕಾಳ ರಾಮನಭಿ ದೇವಸ್ಥಾನ ಮತ್ತು ಮಹಾಡದ ಚೌಡಾರ್ ಕೆರೆಯ ವಿಷಯವಾಗಿ ಅಸ್ಪೃಶ್ಯರನ್ನು ಹೊರಗಿಟ್ಟಿರುವ ವಿರುದ್ಧ ಅಂದೋಲನ ಪ್ರಾರಂಭವಾಯಿತು. ಅಸ್ಪೃಶ್ಯರ ದೇವಾಲಯ ಪ್ರವೇಶದ ಹಕ್ಕು, ಸಾರ್ವಜನಿಕ ಕೆರೆ, ಬಾವಿಗಳಿಂದ ನೀರು ಸೇದುವ ಹಕ್ಕು ಇತ್ಯಾದಿಗಳಿಗಾಗಿ ಹೋರಾಟ ಆರಂಭಿಸಿದರು. ಇಂಥ ಮಹಾನೀಯರಾದ ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಕೇವಲ ಸರಕಾರಿ ಕಾರ್ಯಕ್ರಮವಾಗದೆ, ಒಂದು ದಿನಕ್ಕೆ ಸೀಮಿತವಾದ, ಒಂದು ಸಮಾಜದ ಜನತೆಗೆ ಸೀಮಿತವಾಗದೆ, ಇಡೀ ವಿಶ್ವವೇ ಸಮಾನತೆಯ ದಿನವಾಗಿ ಆಚರಿಸುವಂತೆ ಅವರ ತತ್ತ್ವ, ಚಿಂತನೆಗಳನ್ನು ಸಮಾಜದ ಒಳಿತಿಗಾಗಿ ಸದುಪಯೋಗವಾದರೆ ಮಾತ್ರ ಅದು ಸಾರ್ಥಕ.

Leave a Reply

Your email address will not be published. Required fields are marked *