Friday, 24th September 2021

ಸಮುದಾಯಾಧರಿತ ಬಡತನ ನಿವಾರಣೆಗೆ ’ಅಮೃತಘಳಿಗೆ’

ಅಭಿಪ್ರಾಯ

ಡಾ.ಶಾಲಿನಿ ರಜನೀಶ್

ಸರಕಾರದ ಅಪರ ಮುಖ್ಯ ಕಾರ್ಯದರ್ಶಿ

ಸರಕಾರ ಗುರುತಿಸಿರುವ 750 ಗ್ರಾಮಗಳನ್ನು ಆಯಾ ಜಿಲ್ಲೆಯ ವಿಶ್ವವಿದ್ಯಾಲಯ, ಕಾಲೇಜುಗಳ ಎನ್‌ಎಸ್‌ಎಸ್ ಘಟಕಗಳು ದತ್ತು ಸ್ವೀಕಾರ ಮಾಡಿರುತ್ತವೆ. ಈ ಸಂಸ್ಥೆಗಳ ಕಾರ್ಯವನ್ನು ಗುರುತಿಸಲು ಮತ್ತು ಉತ್ತೇಜಿಸಲು ಮೂರು ವಿಶ್ವವಿದ್ಯಾಲಯಗಳಿಗೆ ಅತ್ಯುತ್ತಮ ವಿಶ್ವವಿದ್ಯಾಲಯ ಪ್ರಶಸ್ತಿ ಮತ್ತು ಏಳು ಕಾಲೇಜು ಗಳ ಪ್ರಾಂಶುಪಾಲರು ಮತ್ತು ಕಾರ್ಯಕ್ರಮ ಅಧಿಕಾರಿಗಳಿಗೆ ಪ್ರಶಸ್ತಿ ನೀಡಲಾಗುವುದು.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರುಷಗಳಾದವು. ಈ 75ರ ಸಂಭ್ರಮವನ್ನು ಇಡೀ ವರುಷ ಸ್ವತಂತ್ರದ ಅಮೃತ ಮಹೋತ್ಸವನ್ನಾಗಿ ಆಚರಿಸುವ ಮೂಲಕ ಇಡೀ ದೇಶ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮಿಸುತ್ತಿದೆ. ಅಮೃತ ಎಂಬ ಪದ, ಹೆಸರಿಗೆ ವಿಶೇಷ ಅರ್ಥಗಳಿವೆ. ಅಮೃತ ಅಂದರೆ ಸಾವು ಇಲ್ಲದ್ದು, 75 ವರ್ಷಗಳ ಸವಿ ನೆನಪು, ಸಂಭ್ರಮ ಹೀಗೆ ಅರ್ಥಗಳನ್ನು ಈ ಪದ ಸೂಚಿಸುತ್ತದೆ. ಹಾಗಾದರೆ ನಾವು ಎಲ್ಲ ವಿಧದಲ್ಲಿ ಸ್ವತಂತ್ರರಾಗಿದ್ದೇವೆಯೇ ಎಂಬ ಪ್ರಶ್ನೆ ಏಳುವುದು ಬಹಳ ಸಹಜ, ದೇಶ ರಾಜಕೀಯವಾಗಿ ಸ್ವಾತಂತ್ರ ಪಡೆದರೆ ಮಾತ್ರ ಅದು ಸ್ವಾತಂತ್ರ್ಯವಲ್ಲ.

ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಜನರು ಸಶಕ್ತರಾಗುವ ಮೂಲಕ ಪ್ರತಿ ಕುಟುಂಬ, ಗ್ರಾಮ, ನಗರ, ಸಮಾಜ ಸಬಲರಾದಾಗ ಮಾತ್ರ ಸ್ವಾತಂತ್ರ್ಯದ ಈ ಸಂಭ್ರಮ ಕ್ಕೊಂದು ಅರ್ಥಬರುತ್ತದೆ. ಈ ನಿಟ್ಟಿನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕಾಗಿ ಕರ್ನಾಟಕದ ಮುಖ್ಯಮಂತ್ರಿಗಳು ಆಗ 15ರ ಸ್ವಾತಂತ್ರ್ಯ ದಿನದಂದು, ಅಮೃತ ನಿರ್ಮಲ ನಗರ, ಅಮೃತ ಗ್ರಾಮ ಪಂಚಾಯಿತಿ, ಅಮೃತ ವಸತಿ, ಅಮೃತ ಅಂಗನವಾಡಿ ಹೀಗೆ 14 ಯೋಜನೆಗಳನ್ನು ಘೋಷಿಸುವ ಮೂಲಕ ಅಭಿವೃದ್ಧಿಯ ಪಥದಲ್ಲಿ ಕರ್ನಾಟಕವನ್ನು ಕೊಂಡೊಯುವಲ್ಲಿ ಅಮೃತ ಮಹೋತ್ಸವದ ಆಚರಣೆಗೆ ಹೊಸ ಕಾಯಕಲ್ಪ ಒದಗಿಸಿದ್ದಾರೆ.

ಈ 14  ಅಮೃತ ಯೋಜನೆಗಳಲ್ಲಿ ‘ಅಮೃತ ಸಮುದಾಯ ಅಭಿವೃದ್ಧಿ ಯೋಜನೆಯೂ’ ಒಂದು. ಅಮೃತ ಸಮುದಾಯ ಅಭಿವೃದ್ಧಿ ಯೋಜನೆಯನ್ನು 750 ಗ್ರಾಮಗಳಲ್ಲಿ ಜಾರಿಗೆ ತರಲಾಗುತ್ತಿದೆ. ಹೆಸರೇ ಹೇಳುವಂತೆ ಅಮ್ಮತ ಸಮುದಾಯ ಅಭಿವೃದ್ಧಿ ಯೋಜನೆ ಗ್ರಾಮಗಳ ಸಮಗ್ರ ಅಭಿವೃದ್ಧಿಯನ್ನು ಸೂಚಿಸುತ್ತದೆ. ನೀತಿ ಆಯೋಗದ ಸುಸ್ಥಿರ ಅಭಿವೃದ್ಧಿ ಗುರಿಗಳ ಸೂಚ್ಯಂಕದ ಪ್ರಕಾರ ನಮ್ಮ ರಾಜ್ಯದಲ್ಲಿ ಇನ್ನೂ 17.3 ಪ್ರಮಾಣದಷ್ಟು ಜನರು ಬಹು ಆಯಾಮದ ಬಡತನದಲ್ಲಿದ್ದಾರೆ.

ಬಡತನವಲ್ಲದೆ, ಅಪೌಷ್ಟಿಕತೆ, ಅನಕ್ಷರಸ್ಥರು, ಅನಾರೋಗ್ಯ, ನಿರುದ್ಯೋಗ ಇವೆಲ್ಲವೂ ಒಂದಕ್ಕೊಂದು ಕೊಂಡಿಯಾಗಿ ಒಂದು ಸಮುದಾಯದ ಸಮಗ್ರ
ಅಭಿವೃದ್ಧಿಯ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ. ಈ ಯೋಜನೆಯ ಅಡಿಯಲ್ಲಿ ಬಹು ಆಯಾಮದ ಬಡತನದ ಲ್ಲಿರುವ ಕುಟುಂಬಗಳನ್ನು ಗುರುತಿಸಲು, ಎನ್‌ಎಸ್‌ಎಸ್ ಯುವಜನರ ಮೂಲಕ ಈ ಪ್ರಕ್ರಿಯೆಯು ಆರಂಭವಾಗುತ್ತದೆ. ಎನ್‌ಎಸ್‌ಎಸ್ ಸ್ವಯಂಸೇವಕರು ಸಮುದಾಯ ಅಭಿವೃದ್ಧಿಯಲ್ಲಿ ತೊಡಗಲು ವೆಬ್‌ಸೈಟ್ WWW.nsskarnataka.net ನಲ್ಲಿ ನೋಂದಾಯಿಸಿರುತ್ತಾರೆ.

ಸ್ವಯಂ ಸೇವಕರು ಬಡಜನರಿಗೆ ಸರಕಾರದ ವಿವಿಧ ಯೋಜನೆಗಳಲ್ಲಿ ಇರುವ ಸೌಲಭ್ಯಗಳನ್ನು ವಿವರಿಸಿ, ಅವರಿಗೆ ನೇರವಾಗಿ ಸೌಲಭ್ಯಗಳನ್ನು ತಲುಪಿಸಲು
ಸಹಾಯ ಮಾಡುತ್ತಾರೆ. ಸರಕಾರ ಗುರುತಿಸಿರುವ 750 ಗ್ರಾಮಗಳನ್ನು ಆಯಾ ಜಿಲ್ಲೆಯ ವಿಶ್ವವಿದ್ಯಾಲಯಗಳು/ಕಾಲೇಜುಗಳ ಎನ್‌ಎಸ್‌ಎಸ್ ಘಟಕಗಳು ದತ್ತು ಸ್ವೀಕಾರ ಮಾಡಿರುತ್ತವೆ. ವಿಶ್ವವಿದ್ಯಾಲಯಗಳು ಹಾಗೂ ಶಿಕ್ಷಣ ಸಂಸ್ಥೆಗಳ ಕಾರ್ಯವನ್ನು ಗುರುತಿಸಲು ಮತ್ತು ಉತ್ತೇಜಿಸಲು ಮೂರು ವಿಶ್ವವಿದ್ಯಾಲಯಗಳಿಗೆ ಅತ್ಯುತ್ತಮ ವಿಶ್ವವಿದ್ಯಾಲಯ ಪ್ರಶಸ್ತಿ ಮತ್ತು ಏಳು ಕಾಲೇಜುಗಳ ಪ್ರಾಂಶುಪಾಲರು ಮತ್ತು ಕಾರ್ಯಕ್ರಮ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ಮತ್ತು 10000
ರುಪಾಯಿಗಳ ನಗದು ಪುರಸ್ಕಾರ ನೀಡಲಾಗುವುದು.

ಈ ಸಮೀಕ್ಷೆಯನ್ನು ಗ್ರಾಮೀಣ ಅಭಿವೃದ್ಧಿ ಇಲಾಖೆಯು ಈಗಾಗಲೇ ಕೋವಿಡ್ ನಿಯಂತ್ರಣಕ್ಕಾಗಿ ರಚಿಸಿದ ಗ್ರಾಮಮಟ್ಟದ ಕಾರ್ಯಪಡೆಯ ಸಹಾಯದಿಂದ ನಡೆಸುತ್ತದೆ. ಜನರನ್ನು ತಲುಪುವ ಈ ಪ್ರಕ್ರಿಯೆಯಲ್ಲಿ ಗ್ರಾಮಸಭೆಯು ಎಲ್ಲಾ ಪ್ರಸ್ತಾವನೆಗಳನ್ನು ಅನುಮೋದಿಸುತ್ತದೆ. ಗ್ರಾಮೀಣ ಅಭಿವೃದ್ಧಿ ಇಲಾಖೆ ಜತೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆಹಾರ ಮತ್ತು ನಾಗರಿಕ ಸರಬರಾಜು, ಆರೋಗ್ಯ, ವಸತಿ ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ಹಮ್ಮಿಕೊಳ್ಳುವ ವಿವಿಧ
ಸೌಲಭ್ಯಗಳನ್ನು ಆದ್ಯತೆಯ ಮೇರೆಗೆ ಒದಗಿಸುವಲ್ಲಿ ಎನ್‌ಎಸ್ ಎಸ್ ಸ್ವಯಂಸೇವಕರು ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಾರೆ.

ಇದು ಒಂದು ಯುವಜನರಿಂದ ಸಮುದಾಯದ ಅಭಿವೃದ್ಧಿಗೆ ಮಾದರಿ ಪ್ರಯೋಗ ಆಗಲಿಕ್ಕಿದೆ. ಯೋಜನೆ ಅನುಷ್ಠಾನದ ಎಲ್ಲಾ ಚಟುವಟಿಕೆಗಳನ್ನು WWW. nsskarnataka.net ನಲ್ಲಿ ವೀಕ್ಷಿಸಬಹುದಾಗಿದೆ. ಜನರ ಜೀವನ ಮಟ್ಟವನ್ನು ಸುಧಾರಿಸಲು ಹಾಗೂ ಗ್ರಾಮದ ಆರ್ಥಿಕ ಬೆಳವಣಿಗೆಗೆ ಈ ಯೋಜನೆಯು ಹೆಚ್ಚು ಒತ್ತು ನೀಡುತ್ತದೆ. ಉದಾ: ಕೃಷಿ ಉತ್ಪಾದಕರ ಸಂಘಗಳ ಸ್ಥಾಪನೆ, ಬೆಳೆ ಮತ್ತು ಉದ್ಯಮ ವೈವಿಽಕರಣ, ರೈತರ ಆದಾಯವನ್ನು ದ್ವಿಗುಣ ಗೊಳಿಸಲು- ಹೈನು ಗಾರಿಕೆಯ ಒಕ್ಕೂಟ, ಕೃಷಿ ಉತ್ಪಾದಕ ಸಂಘಗಳ ಮೂಲಕ ಮಾರುಕಟ್ಟೆಗೆ ಪ್ರೋತ್ಸಾಹ, ಕೃಷಿ ಸಂಸ್ಕರಣೆ, ಸಾವಯವ ಕೃಷಿ, ರೈತನಿಂದ, ರೈತ ಉದ್ಯಮಿ, ಇ-ತ್ಯಾಜ್ಯ ನಿರ್ವಹಣೆ, ಬಂಜರು ಭೂಮಿಯನ್ನು ಉತ್ಪಾದಕ ಭೂಮಿಯನ್ನಾಗಿ ಪರಿವರ್ತಿಸುವುದು, ನದಿಗಳ ಜೋಡಣೆ ಹಾಗೂ ಮೇಲ್ಮೈ ನೀರಾವರಿ ಪ್ರದೇಶವನ್ನು ಸೂಕ್ಷ ನೀರಾ ಅಡಿಯಲ್ಲಿ ತರುವುದರ ಮೂಲಕ ನೀರಾವರಿ ಪ್ರದೇಶವನ್ನು ಗಮನಾರ್ಹ ವಾಗಿ ಹೆಚ್ಚಿಸುವುದು, ಉದ್ಯೋಗಕ್ಕಾಗಿ ಕೌಶಲೀಕರಣ, ಕಚ್ಚಾ ಮನೆಯ ವರಿಗೆ ಪಕ್ಕಾ ವಸತಿ ಹೀಗೆ ಹತ್ತು ಹಲವು ಸೌಲಭ್ಯಗಳು ಗ್ರಾಮದ ಬಡಜನರನ್ನು ತಲುಪುವಲ್ಲಿ ಸಹಾಯ ಮಾಡುತ್ತವೆ.

ಗ್ರಾಮೀಣ ಪ್ರದೇಶದ ಜನರಲ್ಲಿ ಸರಕಾರದ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ವಿಶೇಷವಾಗಿ ಕೌಶಲ್ಯ ಅಭಿವೃದ್ಧಿಯ ಬಗ್ಗೆ ಅರಿವು ಮೂಡಿಸು ವಲ್ಲಿ ಯುವಜನರ ಪಾತ್ರ ಅತಿಮುಖ್ಯವಾಗಿದೆ. ಸುಶಿಕ್ಷಿತ ಯುವಕ-ಯುವತಿಯರು ಶಿಕ್ಷಣ ಸಂಸ್ಥೆಯಲ್ಲಿ ಪಡೆದಿರುವ ತಮ್ಮ ವಿದ್ಯೆ ಹಾಗೂ ತಾಂತ್ರಿಕ
ಕೌಶಲ್ಯತೆಯನ್ನು ಅತಿ ಹಿಂದುಳಿದ ಗ್ರಾಮೀಣ ಪ್ರದೇಶಗಳಲ್ಲಿ ಉಪಯೋಗಿಸಿ, ಅಭಿವೃದ್ಧಿಯಿಂದ ವಂಚಿತರಾಗಿರುವ ನಮ್ಮ ನಾಡಿನ ಗ್ರಾಮಸ್ಥರಿಗೆ, ಅದರಲ್ಲಿಯೂ ವಿಶೇಷ ಗ್ರಾಮೀಣ ಯುವಕ-ಯುವತಿಯರಿಗೆ ಆತ್ಮವಿಶ್ವಾಸ ತುಂಬಿಸಿ, ಅವರ ಜತೆಗೆ ಕೈಜೋಡಿಸಿ ಅವರ ಸುಸ್ಥಿರ ಬೆಳವಣಿಗೆಗಾಗಿ Youth for Youth  ಎಂಬ ಕರೆಯನ್ನು ಕಾರ್ಯಗತಗೊಳಿಸಲಿದ್ದಾರೆ. ಅಂತೆಯೇ ವಿವಿಧ ಸ್ವಯಂಸೇವಾ ಸಂಸ್ಥೆಗಳೂ ಈ ಯೋಜನೆಯಲ್ಲಿ ತಮ್ಮ ಕೊಡುಗೆಯನ್ನು ನೀಡಲು ಮುಂದೆ
ಬಂದಿವೆ.

ಉದಾ: ಅಪೌಷ್ಟಿಕತೆಯ ನಿವಾರಣೆಗೆ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಹಾಗೂ ಅಕ್ಷಯಪಾತ್ರೆ ಸಂಸ್ಥೆಯು ಪೌಷ್ಟಿಕ ಆಹಾರ ವಿತರಣೆಗೆ ಸರಕಾರದ ಜತೆಗೆ ಕೈಜೋಡಿಸಿವೆ. ಇದೇ ರೀತಿ, ಭಾರತೀಯ ಜೈನ ಸಂಘವು ಈಗಾಗಲೇ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ನೀರು ಸಂರಕ್ಷಣೆಯಲ್ಲಿ ಸಾಧಿಸಿರುವ
ಮೈಲಿಗಲ್ಲುಗಳನ್ನು ಎಲ್ಲಾ 750 ಗ್ರಾಮಗಳಲ್ಲಿ ವಿಸ್ತರಿಸುತ್ತದೆ. ಅಲ್ಲದೇ, ರೋಟರಿ ಸಂಸ್ಥೆ ಸಾಕ್ಷರತಾ ಅಭಿಯಾನದಲ್ಲಿ ಎನ್‌ಎಸ್‌ಎಸ್ ನೊಂದಿಗೆ ಕೈಜೋಡಿಸಿದೆ. ದಿ ನಡ್ಸ್ ಫೌಂಡೇಶನ್ ಎಂಬ ಸಂಸ್ಥೆ ಈಗಾಗಲೇ ಬಡತನ ನಿರ್ಮೂಲನೆಗೆ ಯಶೋಗಾಥೆಯನ್ನು ಹೊಂದಿರುವರು. ಈ ಹಳ್ಳಿಗಳಿಗೂ ತಮ್ಮ ಸಹಕಾರವನ್ನು ನೀಡಲಿದ್ದಾರೆ.

ಅದೇ ರೀತಿ, ಹಲವು ಉಪಕ್ರಮಗಳ ಮೂಲಕ ಯಶಸ್ವಿಯಾದ ವಿವಿಧ ಸರಕಾರೇತರ ಸಂಸ್ಥೆಗಳನ್ನು ಈ ಯೋಜನೆಯಲ್ಲಿ ತೊಡಗಿಸಲು, ಎನ್‌ಎಸ್‌ಎಸ್ WWW.nsskarnataka.net  ನಲ್ಲಿ ನೋಂದಾಯಿಸಲು ನಾನು ಈ ಮೂಲಕ ಕೋರುತ್ತೇನೆ. ವಿನೂತನ ಯೋಜನೆಗಳನ್ನು ಉತ್ತೇ ಜಿಸಲು ಸಾಮಾಜಿಕ ಸಾಂಸ್ಥಿಕ ಜವಾಬ್ದಾರಿ (ಸಿಎಸ್‌ಆರ್) ಅಡಿ ಯಲ್ಲಿ ಕಂಪನಿಗಳ ಸಹಕಾರವನ್ನು WWW.akanksha karnataka.gov.in ಮೂಲಕ ಪಡೆಯಲಾಗುತ್ತದೆ.
ಗ್ರಾಮ, ಗ್ರಾಮದ ಜನರು, ಇಲಾಖೆಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳು ಈ ಅಭಿಯಾನದಲ್ಲಿ ಎನ್‌ಎಸ್‌ಎಸ್ ಜತೆಗೆ ಕೈಜೋಡಿಸಿದಾಗ ಅಮೃತ ಸಮುದಾಯ ಅಭಿವೃದ್ಧಿ ಮೂಲಕ ಒಂದು ಹೊಸ ಯುಗವನ್ನು ಆರಂಭಿಸಬಹುದಾಗಿದೆ.

ಯುವಜನರಿಂದ ತಮ್ಮ ಸಮುದಾಯದ ಪ್ರೀತಿ, ಸೌಹಾರ್ದತೆ, ನಿಷ್ಠೆಯಂತಹ ಅತ್ಯುನ್ನತ ಮೌಲ್ಯಗಳನ್ನು ಬಲಪಡಿಸಲು ಇದು ಒಂದು ಸುವರ್ಣ ಅವಕಾಶ ವಾಗಿದೆ. ಬಡತನವನ್ನು ತೊಲಗಿಸಿದರೆ, ನಮ್ಮ ದೇಶವು ಅತ್ಯಂತ ಶ್ರೀಮಂತವಾಗಬಹುದು. ಬನ್ನಿ, ಎಲ್ಲರೂ ಈ ಕಾರ್ಯಕ್ರಮದೊಂದಿಗೆ ಕೈಜೋಡಿಸೋಣ.

Leave a Reply

Your email address will not be published. Required fields are marked *