Monday, 30th January 2023

ಹೇಳಿದರೆ ಯಾರೂ ನಂಬದ, ಲಂಡನ್‌ನಲ್ಲಿ ನಡೆದ ಒಂದು ನೈಜ ಪ್ರಸಂಗ !

ಇದೇ ಅಂತರಂಗ ಸುದ್ದಿ

vbhat@me.com

ಮೊನ್ನೆ ಲಂಡನ್ನಿಗೆ ಹೋದಾಗ, ನಗರದ ಹೊರವಲಯದ ಸರ್ರ‍ೆಕೌಂಟಿ ಪ್ರದೇಶದಲ್ಲಿರುವ ಏರ್‌ಬಿಎನ್ಬಿ ಮನೆಯೊಂದರಲ್ಲಿ ವಾಸವಾಗಿದ್ದೆವು. ನನ್ನ ಜತೆಯಲ್ಲಿ ಸ್ನೇಹಿತರಾದ, ‘ವಿಶ್ವವಾಣಿ’ ಅಂಕಣಕಾರ ಕಿರಣ್ ಉಪಾಧ್ಯಾಯ ಸಹ ಇದ್ದರು.

ಅದೊಂದು ಸ್ವತಂತ್ರ ಮನೆ. ನಾಲ್ವರು ಆರಾಮಾಗಿ ಮಲಗಬಹುದಾದ ಸ್ವತಂತ್ರವಾದ ಮನೆ. ಸುತ್ತಲೂ ಹಸುರು ಹಾಸು. ಮಲೆನಾಡಿನ ಗದ್ದೆ-ಬೆಟ್ಟದ ನಡುವೆ ಮನೆ ಇದ್ದರೆ ಹೇಗೋ ಹಾಗೆ. ಆ ಮನೆಯ ಸನಿಹದಲ್ಲಿ ಮಾಲೀಕರ ಮನೆಯ ಹೊರತಾಗಿ ಸುಮಾರು ಒಂದೆರಡು ಕಿಮಿ ಫಾಸಲೆ ಯಲ್ಲಿ ಬೇರೆ ಮನೆಗಳಿಲ್ಲ. ಜನ ವಸತಿಯೂ ಕಡಿಮೆ. ಎಷ್ಟು ದಿನ ಉಳಿದು ಕೊಂಡರೂ ಬೇಸರ ಬರದ ಶಾಂತ ಪರಿಸರ. ಪಕ್ಕದಲ್ಲಿ ಗಿಜಿಗುಡುವ ಲಂಡನ್ ಮಹಾನಗರ ಇದ್ದಿರಬಹುದು ಎಂಬ ಕಲ್ಪನೆಯೂ ಬರುವುದಿಲ್ಲ.

ಅಂಥ ಸುಂದರ, ನಯನಮನೋಹರ ಪರಿಸರ. ಅಲ್ಲಿಂದ ನಾವು ಸೆಂಟ್ರಲ್ ಲಂಡನ್‌ಗೆ ಹೋಗಬೇಕಾಗುತ್ತಿತ್ತು. ಕಾರಿನ ಜಿಪಿಎಸ್ ಆನ್ ಮಾಡಿಕೊಂಡು ನಾವು ಅಲ್ಲಿಂದ ನಮ್ಮಷ್ಟಕ್ಕೇ ತಿರುಗುತ್ತಿದ್ದೆವು. ಸಹಜವಾಗಿ ಜಿಪಿಎಸ್ ಹತ್ತಿರದ (Shortcut) ಮಾರ್ಗವನ್ನು ಸೂಚಿಸುತ್ತಿತ್ತು. ಮೊದಲ ದಿನ ಜಿಪಿಎಸ್ ಸೂಚಿಸಿದ ಮಾರ್ಗದಲ್ಲಿ ಹೊರಟೆವು. ಕಿರಣ್ ಉಪಾಧ್ಯಾಯ ಕಾರನ್ನು ಓಡಿಸುತ್ತಿದ್ದರು. ಆ ಮನೆಯಿಂದ ನಮ್ಮ ಕಾರು ಕಿರಿದಾದ ರಸ್ತೆಯಲ್ಲಿ ಹೊರಟಿತು.

ಅದೆಷ್ಟು ಕಿರಿದಾದ ರಸ್ತೆಯೆಂದರೆ ಮತ್ತೊಂದು ಸೈಕಲ್ ಬರಲಿ, ಮನುಷ್ಯರೇ ಎದುರಿಗೆ ಬಂದರೂ ಸೈಡ್ ಕೊಡಲು ಆಗುತ್ತಿರ ಲಿಲ್ಲ. ಸ್ವಲ್ಪ ಎಚ್ಚರ ತಪ್ಪಿದರೂ ಕಾರಿನ ಬಾಗಿಲು ಉಜ್ಜಿಕೊಳ್ಳುತ್ತಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಬಾಗಿ ನಿಂತ ಗಿಡಗಳ ಕೊಂಬೆ- ಎಲೆಗಳು ಕಾರಿಗೆ ತಾಕುತ್ತಿದ್ದುದರಿಂದ, ವಾಹನದ ಸೆನ್ಸರ್ ಆನ್ ಆಗಿ, ಕಿರುಚಿಕೊಳ್ಳುತ್ತಿತ್ತು.

ಆ ಹಾದಿಯಲ್ಲಿ ಹಠಾತ್ ವಾಹನವೇನಾದರೂ ಎದುರಿನಿಂದ ಬಂದರೆ ಏನು ಮಾಡುವುದು ಎಂಬ ಚಿಂತೆ ನಮ್ಮಿಬ್ಬರನ್ನೂ
ಕಾಡುತ್ತಿತ್ತು. ನಮ್ಮ ಕಾರನ್ನು ರಿವರ್ಸ್‌ನಲ್ಲಿ ಓಡಿಸಲು ಸಾಧ್ಯವಾಗದಷ್ಟು ಮುಂದೆ ಬಂದಿದ್ದೆವು. ಆ ರಸ್ತೆಯಲ್ಲಿ ಹೊರಳು
ದಾರಿಯೂ ಇರಲಿಲ್ಲ. ಕ್ಷಣಕ್ಷಣಕ್ಕೂ ನಮ್ಮಿಬ್ಬರ ಆತಂಕ ಹೆಚ್ಚಾಗುತ್ತಿತ್ತು. ಮಳೆಯಿಂದಾಗಿ ಆ ದಾರಿ ತುಸು ಕೊಚ್ಚೆಯಾಗಿತ್ತು. ಕಾರಿನಿಂದ ಇಳಿಯುವಂತೆಯೂ ಇರಲಿಲ್ಲ. ನಮ್ಮ ಈ ಆತಂಕದ ನಡುವೆಯೇ, ಕಿರಣ್ ಗಕ್ಕನೆ ಕಾರಿನ ಬ್ರೇಕ್ ಒತ್ತಿದರು. ದಾರಿಗೆ ಅಡ್ಡವಾಗಿ ಒಂದು ಸಣ್ಣ ಮರ ಬಿದ್ದಿತ್ತು!

ಏನು ಮಾಡುವುದು? ನಾನು ಮತ್ತು ಕಿರಣ್ ಮುಖಮುಖ ನೋಡಿಕೊಂಡೆವು. ನಾವು ಕಾರಿನಿಂದ ಇಳಿಯಲೂ ಆಗುತ್ತಿರಲಿಲ್ಲ. ಕಾರಿನ ಬಾಗಿಲು ಪಕ್ಕದ ಗೋಡೆಗೆ ತಗುಲುತ್ತಿತ್ತು. ಕಿರಣ್ ಹೇಗೋ ಹಿಂದೆ-ಮುಂದೆ ಕಾರನ್ನು ಚಲಿಸಿ, ನಾನು ಇಳಿಯಲು ಅನುವಾಗುವಷ್ಟು ಜಾಗವನ್ನು ಮಾಡಿದರು. ಆ ಮರವನ್ನು ಎತ್ತಲೇಬೇಕಿತ್ತು. ಇಲ್ಲದಿದ್ದರೆ ಕಾರು ಮುಂದಕ್ಕೆ ಚಲಿಸಲು ಸಾಧ್ಯವೇ ಇರಲಿಲ್ಲ. ಹಾಗಂತ ಆ ಮರವನ್ನು ಅನಾಮತ್ತು ಎತ್ತುವಷ್ಟು ಹಗುರವಾಗಿರಲಿಲ್ಲ. ಆದರೆ ಬಲವಾಗಿ ತಳ್ಳಿ ಪಕ್ಕಕ್ಕೆ ಸರಿಸಬಹುದಿತ್ತು. ಕಿರಣ್ ಸಹಾಯಕ್ಕೆ ಬರುವಂತಿರಲಿಲ್ಲ. ಕಾರಣ ಅವರ ಕಡೆಗಿನ ಕಾರಿನ ಬಾಗಿಲು ಪಕ್ಕಕ್ಕೆ ತಾಕುತ್ತಿದ್ದು ದರಿಂದ, ಅವರಿಗೆ ಇಳಿಯಲು ಆಗುತ್ತಿರಲಿಲ್ಲ.

ನಾನು ಪ್ರಯಾಸಪಟ್ಟು ಆ ನೀಳವಾದ, ಆದರೆ ಅಷ್ಟೇನೂ ಹೆಚ್ಚು ಭಾರವಲ್ಲದ, ಮರವನ್ನು ಏಕಾಂಗಿಯಾಗಿ ಪ್ರಯಾಸಪಟ್ಟು ಪಕ್ಕಕ್ಕೆ ಸರಿಸಲು ಯಶಸ್ವಿಯಾದೆ. ನಮ್ಮ ಕಾರು ಮುಂದಕ್ಕೆ ಹೊರಟಿತು. ಅದೃಷ್ಟವಶಾತ್ ಮುಂದಿನಿಂದ ಯಾವ ವಾಹನವೂ ಬರಲಿಲ್ಲ. ಹೀಗಾಗಿ ಸೈಡ್ ಕೊಡುವ ಪ್ರಮೇಯವೂ ಉದ್ಭವವಾಗಲಿಲ್ಲ. ಒಂದು ವೇಳೆ ಎದುರಿನಿಂದ ವಾಹನ ಬಂದಿದ್ದರೆ, ನಮ್ಮ ಕತೆ ಇನ್ನೂ ಕೆಡುತ್ತಿತ್ತು. ಕನ್ನಡ ನಾಡಿನ ಅಳಿಯ, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಖುದ್ದು ಬಂದರೂ ಕೈಚೆಲ್ಲುತ್ತಿದ್ದ ರೇನೋ?!

ನಾನು ಕಿರಣ್‌ಗೆ ಹೇಳಿದೆ – ‘ಇಂಥ ಪ್ರಸಂಗ ಎದುರಾಗಬಹುದು ಎಂದು ನಾನು ಕನಸು-ಮನಸಿನಲ್ಲಿಯೂ ಎಣಿಸಿರಲಿಲ್ಲ. ಈ ಪ್ರಸಂಗವನ್ನು ಬೇರೆಯವರಿಗೆ ಹೇಳುವಂತೆಯೂ ಇಲ್ಲ. ಹೇಳಿದರೆ ಯಾರೂ ನಂಬುವುದಿಲ್ಲ. ಸುಳ್ಳು ಹೇಳೋಕೆ, ಬುರುಡೆ ಬಿಡೋಕೆ ಒಂದು ಲಿಮಿಟ್ ಇರಬೇಕ್ರಿ, ಭಟ್ಟರು ಲಂಡನ್‌ನಲ್ಲಿ ಹೋಗುವಾಗ ದಾರಿಗೆ ಅಡ್ಡವಾಗಿ ಒಂದು ಮರ ಮುರಿದು ಬಿದ್ದಿತ್ತಂತೆ. ಅದನ್ನು ಅವರು ಎತ್ತಿ ಪಕ್ಕಕ್ಕೆ ಸರಿಸಿದರಂತೆ. ಇವನ್ನೆಲ್ಲ ನಂಬೋದುಂಟಾ? ಯಾವುದಕ್ಕೂ ಒಂದು ಮಿತಿ ಇರಬೇಕ್ರಿ ಅಂತ ಈ ಪ್ರಸಂಗವನ್ನು ಕೇಳಿಸಿಕೊಂಡವರು ಅಂದುಕೊಳ್ಳುತ್ತಾರೆ. ನಮ್ಮನ್ನು ಬುರುಡೆ ದಾಸ ಎನ್ನದೇ ಹೋಗು ವುದಿಲ್ಲ.’

ಅದಕ್ಕೆ ಕಿರಣ್, ‘ಒಂದು ವೇಳೆ ನಾನು ಅಲ್ಲಿರದಿದ್ದರೆ, ಈ ಪ್ರಸಂಗವನ್ನು ನಾನೂ ನಂಬುತ್ತಿರಲಿಲ್ಲ. ಎಲ್ಲಿಯ ಲಂಡನ್ ನಗರ? ಎಲ್ಲಿಯ ಮರ, ಎಲ್ಲಿಯ ಕನ್ನಡ ಪತ್ರಿಕೆಯ ಸಂಪಾದಕರು? ಅವರು ದಾರಿಗೆ ಅಡ್ಡವಾಗಿ ಮಲಗಿದ ಆ ಮರವನ್ನು ಎತ್ತಿ ಸರಿಸಿದ ರಂತೆ! ಚೆನ್ನಾಗಿದೆ ಕತೆ ಅಂತ ಅಂದುಕೊಳ್ಳುತ್ತಿದ್ದೆ’ ಎಂದು ಉದ್ಗಾರ ತೆಗೆದು ಜೋರಾಗಿ ನಕ್ಕರು. ‘ನೀವು ನಂಬೋ ದೇನು ಬಂತು? ಅಲ್ಲಿ ಖುದ್ದು ನಾನಿರದಿದ್ದರೆ, ನಾನೂ ನಂಬುತ್ತಿರಲಿಲ್ಲ’ ಎಂದೆ.

ಇಬ್ಬರೂ ನಕ್ಕೆವು. ಅದಕ್ಕೆ ನಾನು, ‘ಈ ಪ್ರಸಂಗವನ್ನು ನಾವು ಯಾರ ಮುಂದೆಯೂ ಹೇಳುವಂತಿಲ್ಲ. ಹೇಳಿದರೆ ಯಾರೂ
ನಂಬುವುದಿಲ್ಲ’ ಎಂದೆ. ‘ಹೌದು’ ಎಂಬಂತೆ ಕಿರಣ್ ತಲೆಯಾಡಿಸಿದರು. ಇಷ್ಟು ಹೇಳಿದ ನಂತರವೂ ಇದನ್ನು ನಂಬುವುದು,
ಬಿಡುವುದು ನಿಮಗೆ ಬಿಟ್ಟಿದ್ದು!

ಲಾರ್ಡ್ಸ್ ಎಂಬ ಮ್ಯೂಸಿಯಂ
ಈ ಸಲ ಲಂಡನ್‌ಗೆ ಹೋದಾಗ, ಕ್ರಿಕೆಟ್ ತವರು, ಕ್ರಿಕೆಟ್ ಕಾಶಿ ಎಂದು ಕರೆಯಿಸಿಕೊಂಡಿರುವ ಲಾರ್ಡ್ಸ್ ಮೈದಾನಕ್ಕೆ
ಹೋಗಿದ್ದೆ. ಅನೇಕರಿಗೆ ಅದು ಕ್ರಿಕೆಟ್ ಮೈದಾನ ಅಥವಾ ಸ್ಟೇಡಿಯಂ ಆಗಿರಬಹುದು. ಆದರೆ ಕ್ರಿಕೆಟ್ ಪ್ರಿಯರ ಪಾಲಿಗೆ
ಅದು ಪವಿತ್ರ ಕ್ಷೇತ್ರ.

ಲಾರ್ಡ್ಸ್ ಮೈದಾನದಲ್ಲಿ ಕ್ರಿಕೆಟ್ ಆಡುವುದು, ಆಟಗಾರನ ಜೀವಮಾನದ ಕನಸು. ಅದರಲ್ಲೂ ಆ ಮೈದಾನದಲ್ಲಿ ಶತಕ ಬಾರಿಸುವುದು, ಐದಕ್ಕಿಂತ ಹೆಚ್ಚು ವಿಕೆಟ್ ಕಬಳಿಸುವುದು ಶ್ರೇಷ್ಠ ಸಾಧನೆಯೇ. ಲಾರ್ಡ್ಸ್ ಮೈದಾನದ ಮಹತ್ವವಿರುವುದು ಅದರ ಐತಿಹಾಸಿಕ ಗುಣಗಳಿಂದ. ಅಲ್ಲಿ ನಡೆದಾಡಿದರೆ ಇತಿಹಾಸದ ಹಾಸಿನ ಮೇಲೆ ನಡೆದಾಡಿದಂತೆ. ಅಲ್ಲಿ ಏನೇ ಮುಟ್ಟಿದರೂ ಇತಿಹಾಸವನ್ನು ಸ್ಪರ್ಶಿಸಿದಂತೆ. ಆ ರೀತಿ ಇಡೀ ಮೈದಾನಕ್ಕೆ ಐತಿಹಾಸಿಕ ಮಹಿಮೆಯನ್ನು ಕಟ್ಟಿಕೊಟ್ಟಿದ್ದಾರೆ. ಅಲ್ಲಿ ಭೇಟಿ ಕೊಟ್ಟಿದ್ದೇ ಧನ್ಯತೆಯ ಪರಾಕಾಷ್ಠೆ ಎಂಬ ಭಾವ ಯಾರದರೂ ನೆಲೆಸಿದರೆ, ಅದು ಸಹಜ.

ಆ ಮೈದಾನದ ಪ್ರತಿಯೊಂದು ಸ್ಮರಣೀಯ ಕ್ಷಣಗಳನ್ನು ಒಂದು ಐತಿಹಾಸಿಕ ದಾಖಲೆಯಾಗಿ ಸಂರಕ್ಷಿಸಿ ಇಟ್ಟಿರುವುದು ವಿಶೇಷ.
ಹೀಗಾಗಿ ಲಾq ಮೈದಾನಕ್ಕೆ ಹೋದವರಿಗೆಲ್ಲ ತಮ್ಮ ಭೇಟಿ, ಒಂದು ರೀತಿಯಲ್ಲಿ ಕ್ರಿಕೆಟ್ ಇತಿಹಾಸವೆಂಬ ಜತೆಗಾರ ಬ್ಯಾಟ್ಸಮನ್ ನೊಂದಿಗೆ ಓಡಿದಂತೆ ಭಾಸವಾಗುತ್ತದೆ. ಹಾಗೆ ನೋಡಿದರೆ ಇಡೀ ಲಾರ್ಡ್ಸ್ ಮೈದಾನವೇ ಕ್ರಿಕೆಟ್‌ನ ವಸ್ತು
ಸಂಗ್ರಹಾಲಯ.

ಕ್ರಿಕೆಟ್‌ಗೆ ಸಂಬಂಧಿಸಿದ ಅಮೂಲ್ಯ ದಾಖಲೆ, ವಸ್ತು, ಪರಿಕರಗಳನ್ನು ಜೋಪಾನವಾಗಿ ಕಾಪಿಡಲಾಗಿದೆ. ಕ್ರಿಕೆಟ್ ಗೆ ಸಂಬಂಧಿಸಿದ ಅಪರೂಪದ ಮಾಹಿತಿಯನ್ನು ಸಹ ಅಲ್ಲಿ ಸಂಗ್ರಹಿಸಿ ಇಡಲಾಗಿದೆ. ಅಲ್ಲಿನ ವಸ್ತು ಸಂಗ್ರಹಾಲಯದಲ್ಲಿ ಒಂದು ಕಂಡ ಒಂದು ವಿಚಿತ್ರ ಸ್ಕೋರ್ ನೋಡಿ ಆಶ್ಚರ್ಯವಾಯಿತು. 1958 ರಲ್ಲಿ ಕರಾಚಿಯಲ್ಲಿ ನಡೆದ ಫೈನಲ್ ಪಂದ್ಯವೊಂದರಲ್ಲಿ ಪಾಕಿಸ್ತಾನದ ಬ್ಯಾಟ್ಸಮನ್ ಅಬ್ದುಲ್ ಅಝೀಜ್ ಅವರ ಸ್ಕೋರ್ ಕಾರ್ಡ್ ಹೀಗಿತ್ತು : First Innings – Abdul Aziz, Retired hurt, 0. Second Innings – Abdul Aziz, Didnot bat, Dead,0 ಪ್ರಾಯಶಃ ಈ ರೀತಿಯ ಸ್ಕೋರ್ ಅದೊಂದೇ. ಎರಡೂ ಇನ್ನಿಂಗ್ಸ್ ಗಳಲ್ಲಿ ಸೊನ್ನೆ ಸುತ್ತಿದವರು ಸಿಗುತ್ತಾರೆ.

ಆದರೆ ಮೊದಲ ಇನ್ನಿಂಗ್ಸ್ ನಲ್ಲಿ ಗಾಯಗೊಂಡು ಸೊನ್ನೆ ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ ನಿಧನರಾಗಿದ್ದರಿಂದ ಆಡದೇ ಸೊನ್ನೆ. ಅಬ್ದುಲ್ ಅಝೀಜ್ ಪಾಕಿಸ್ತಾನದ ಭರವಸೆಯ ಬ್ಯಾಟ್ಸಮನ್ ಮತ್ತು ವಿಕೆಟ್ ಕೀಪರ್ ಆಗಿದ್ದರು. ಅವರು ಆಡಿದ್ದು ಕೇವಲ ಎಂಟು ಟೆ. ಮೊದಲ ಇನ್ನಿಂಗ್ಸ್ ನಲ್ಲಿ ದಿಲ್ದಾರ್ ಅವನ್ ಎಸೆದ ಆಫ್ ಬ್ರೆಕ್ ಚೆಂಡು ಅಝೀಜ್ ಅವರ ಎದೆಗೆ ಬಡಿಯಿತು.
ತಕ್ಷಣ ಅವರು ಮೈದಾನದಲ್ಲಿ ಮೂರ್ಛೆ ಬೈದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.

ಆದರೆ ಅವರು ಮಾರ್ಗಮಧ್ಯದಲ್ಲಿಯೇ ಪ್ರಾಣ ಕಳೆದುಕೊಂಡರು. ಎರಡನೇ ಇನ್ನಿಂಗ್ಸ್ ನಲ್ಲಿ ಆಡದ ಅವರ ಹೆಸರಿನ ಮುಂದೆ absent ಎಂದು ಬರೆದು, ಮುಂದೆ he was hurt but died ಎಂದು ಅಡಿ ಟಿಪ್ಪಣಿ ಬರೆಯಲಾಗಿದೆ. ಇನ್ನೊಂದು ಸ್ವಾರಸ್ಯಕರ ಸಂಗತಿ. ವಾರ್ವಿಕ್ ಶೈರ್ ಮತ್ತು ವರ‍್ಚೆಸ್ಟರ್ ಶೈರ್ ನಡುವೆ ಪಂದ್ಯ. ವಾರ್ವಿಕ್ ಶೈರ್ ತಂಡದ ಬ್ಯಾಟ್ಸಮನ್ ಸಿ.ಕೆ.ನಾಯುಡು ಹೊಡೆದ ಬಾಲ, ರಿಯಾ ನದಿಯನ್ನು ದಾಟಿ ಹೋಯಿತು. ಅಂದರೆ ಬಂಟ್ಸಮನ್ ಹೊಡೆದ ಚೆಂಡು ಒಂದು ಕೌಂಟಿಯಿಂದ ಮತ್ತೊಂದು ಕೌಂಟಿಗೆ ಹೋಗಿ ಬಿದ್ದಿದ್ದು ಅದೇ ಮೊದಲು.

ಮತ್ತೊಂದು ಪ್ರಸಂಗ. ಆಗ 26, 1976. ಇಂಗ್ಲೆಂಡ್ ಮತ್ತು ವೆ ಇಂಡೀಸ್ ನಡುವೆ ಏಕದಿನದ ಪಂದ್ಯ. ಬ್ಯಾಟ್ಸಮನ್ ಗ್ರಹಾಂ ಬಾಲೋರ್ ಮತ್ತು ಬರ್ನಾರ್ಡ್ ಜೂಲಿಯೆನ್ ಬ್ಯಾಟ್ ಮಾಡುತ್ತಿದ್ದರು. ಬಾಲೋರ್ ಹೊಡೆದ ಚೆಂಡು ಡೀಪ್-ಫೈನ್ ಲೆಗ್ ಕಡೆ ಹೋದಾಗ ವೆಸ್ಟ್ ಇಂಡೀಸ್‌ನ ಮೈಕೆಲ್ ಹೋಲ್ಡಿಂಗ್ ಅದನ್ನು ಹಿಡಿದು ಮಿಂಚಿನ ವೇಗದಲ್ಲಿ ಎಸೆದರು. ಅವರು ಎಸೆದ ಚೆಂಡು ನೇರವಾಗಿ ಒಂದು ಕಡೆಯಿರುವ ವಿಕೆಟ್‌ಗೆ ತಗುಲಿ, ಮತ್ತೊಂದು ಕಡೆಯಿರುವ ವಿಕೆಟ್‌ಗೂ ಬಡಿಯಿತು.

ಆಗ ಬ್ಯಾಟ್ಸಮನ್‌ಗಳಿಬ್ಬರೂ ಪಿಚ್‌ನ ಮಧ್ಯಬಾಗದಲ್ಲಿದ್ದರು. ಎರಡೂ ಅಂಪೈರುಗಳಾದ ಅರ್ಥರ್ ಜೆಪ್ಸನ್ ಮತ್ತು ಡೇವಿಡ್ ಕಾನ್ಸ್ಟಂಟ್ ಸುಮಾರು ಮೂರ್ನಾಲ್ಕು ನಿಮಿಷಗಳ ಕಾಲ ಸಮಾಲೋಚನೆ ನಡೆಸಿದರು. ಇಡೀ ಮೈದಾನದಲ್ಲಿ ಮೌನ. ಯಾವ ತೀರ್ಪು ಬರಬಹುದು ಎಂಬ ಕುತೂಹಲ. ಅಂಥ ಪ್ರಸಂಗ ಹಿಂದೆಂದೂ ಜರುಗಿರಲಿಲ್ಲ. ಕೊನೆಗೆ ಅಂಪೈರುಗಳು ಯಾರೂ ಔಟಲ್ಲ ಎಂದು ಘೋಷಿಸಿಬಿಟ್ಟರು!

ಅದಾದ ಬಳಿಕ ಬಾಲೋರ್ 80 ಬಾಲ್‌ಗೆ 139ರನ್ ಹೊಡೆದರು. ಇಂಥ ರೋಚಕ ಸಂಗತಿಗಳು ಅವೆಷ್ಟೋ.

ಒಂದಾನೊಂದು ಕಾಲದಲ್ಲಿ…

ಮೊನ್ನೆ ದುಬೈಯಿಂದ ಬೆಂಗಳೂರಿಗೆ ಬರುವಾಗ, ವಿಮಾನದಲ್ಲಿ ಪ್ರಯಾಣಿಕರೊಬ್ಬರು ಒಂದು ಸಣ್ಣ ಪುಸ್ತಕ ಓದುತ್ತಿದ್ದರು. ಆ ಪುಸ್ತಕದ ಹೆಸರು – Story Of Once Upon A Time. ಆ ಪುಸ್ತಕವನ್ನು ಒಮ್ಮೆಯಾದರೂ ತೆರೆದು ನೋಡಬೇಕು ಎಂದು ಅನಿಸಿತು. ಅವರು ಆ ಪುಸ್ತಕವನ್ನು ಓದಿ ಇಟ್ಟ ಬಳಿಕ ಅವರಿಂದ ಕೇಳಿ ಪಡೆದು ಕೆಲವು ಪುಟಗಳನ್ನು ತಿರುವಿ ಹಾಕಿದೆ.

Once Upon A Time ಎಂಬ ವಾಕ್ಯವನ್ನು ಯಾರು ಆರಂಭಿಸಿದರು, ಅದು ಹೇಗೆ ಆರಂಭವಾಯಿತು, ಎಲ್ಲರೂ ಕತೆಯನ್ನು ಹೇಳುವಾಗ ಆ ವಾಕ್ಯದಿಂದಲೇ ಯಾಕೆ ಆರಂಭಿಸುತ್ತಾರೆ ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಆ ಕೃತಿಯಲ್ಲಿದೆ.
ಬ್ಯಾಬಿಲೋನಿನ ಸುಲ್ತಾನ ಸರ್ ಫೆರಂಬ್ರಸ್ ಎಂಬಾತ 1380 ರಲ್ಲಿ ಮೊದಲ ಬಾರಿಗೆ Onys oppon a day ಎಂದು
ಹೇಳಿದನಂತೆ. ಇದೇ ಮುಂದೆ Once Upon A Time ಎಂಬ ಬಳಕೆಗೆ ಕಾರಣವಾಯಿತಂತೆ. ಈ ವಿಷಯವನ್ನು ಆP-ರ್ಡ್
ಇಂಗ್ಲಿಷ್ ಪದಕೋಶವೂ ಪ್ರಸ್ತಾಪಿಸಿದೆ. ಮೊಟ್ಟಮೊದಲ ಬಾರಿಗೆ ಆ ಪ್ರಯೋಗಕ್ಕೆ ಸರ್ ಫೆರಂಬ್ರಸ್ನೇ ಕಾರಣ ಎಂದು ಆ
ಪದಕೋಶದಲ್ಲಿ ಹೇಳಲಾಗಿದೆ. ಕತೆ ಹೇಳುವವರಿಗಂತೂ ಅದೇ ಆರಂಭ. ನೀವು ಎಷ್ಟೇ ಕತೆಗಳನ್ನು ಕೇಳಿ, ಎಲ್ಲರೂ ಆ
ವಾಕ್ಯದಿಂದಲೇ ಆರಂಭಿಸಿದರೂ ನೀರಸ ಎನಿಸುವುದಿಲ್ಲ. ಹಾಗೆ ಆರಂಭಿಸಿದಾಗಲೇ ಕತೆ ಶುರುವಾಯಿತು ಎಂದರ್ಥ.

ಒಂದು ವೇಳೆ ಆ ಪದಪುಂಜ ಬಳಸದಿದ್ದರೆ, ಕತೆ ಹೇಳುವವರಲ್ಲಿ ಏನೋ ಐಬು ಇರಬೇಕು ಅಥವಾ ಕತೆ ಇನ್ನೂ ಆರಂಭ ವಾಗಿಲ್ಲ ಎಂದು ಭಾವಿಸುವಂತಾಗಿದೆ. Once Upon A Time ಪ್ರಯೋಗ ಆರಂಭವಾಗಿ ಸುಮಾರು ಮುನ್ನೂರು ವರ್ಷಗಳ ಬಳಿಕ, ಭಾಷಾ ಶಾಸ್ತ್ರಜ್ಞನೊಬ್ಬ ‘ಇದು ಕ್ಲೀಷೆ’ (ಚರ್ವಿತಚರ್ವಣ) ಎಂದು ಹೇಳಿದಾಗ, ‘ಹಾಗಾದರೆ ಕತೆಯನ್ನು ಹೇಗೆ ಆರಂಭಿಸಿಯಬೇಕು ಎಂಬುದನ್ನು ಹೇಳಬಾರದೇ?’ ಎಂದು ಅನೇಕರು ಅವನಿಗೆ ಸವಾಲು ಹಾಕಿದರು.

ಆದರೆ ಆತನಲ್ಲಿ ಉತ್ತರವಿರಲಿಲ್ಲ. ಕೆಲವರು Once Upon A Time ಬಿಟ್ಟು ಬೇರೆ ರೀತಿಯಲ್ಲಿ ಕತೆಯನ್ನು ಹೇಳಲು ಪ್ರಯತ್ನಿಸಿದಾಗ, ಹದಿನೇಳನೇ ಶತಮಾನದ ನಾಟಕಕಾರ ಥಾಮಸ್ ಡೆಕ್ಕರ್, ’’Cannot you begin a tale
to her, with once upon a time….’ ಎಂದು ಹೇಳಿ, ಕತೆ ಆರಂಭಿಸುವುದಾದರೆ ಹಾಗೇ ಆರಂಭಿಸಿ ಎಂದು ಹೇಳಿದನಂತೆ.

ಸೋಜಿಗವೆಂದರೆ, ಇದು ಕೇವಲ ಇಂಗ್ಲಿಷ್ ಭಾಷೆಗೆ ಮಾತ್ರ ಸೀಮಿತವಾಗಿಲ್ಲ. ಜಗತ್ತಿನ ಎಲ್ಲಾ ಭಾಷೆಗಳಲ್ಲೂ, ಕತೆ ಆರಂಭ ವಾಗುವುದೇ ಹಾಗೆ. ಕನ್ನಡದಲ್ಲೂ ಒಂದೂರಲ್ಲಿ ಒಬ್ಬನಿದ್ದ.. , ಒಂದಾನೊಂದು ಊರಲ್ಲಿ.., ಒಂದಾನೊಂದು ಊರಲ್ಲಿ ಏನಾಯಿತೆಂದರೆ…, ಒಂದಾನೊಂದು ಕಾಲದಲ್ಲಿ ರಾಜನಿದ್ದ… ಒಂದಾನೊಂದು ಕಾಲದಲ್ಲಿ ಏನಾಯಿತೆಂದರೆ… ಎಂದೇ ಕತೆ ಆರಂಭವಾಗುತ್ತದೆ. ಎಲ್ಲಾ ಭಾಷಿಕರೂ ತಮ್ಮ ಭಾಷಾ ಸೊಗಡಿನಲ್ಲಿ ಇದೇ ರೀತಿಯಲ್ಲಿ ಕತೆಯನ್ನು ಆರಂಭಿಸುತ್ತಾರೆ.
ಇಷ್ಟಾಗಿಯೂ ಯಾರೂ ಇದನ್ನು ಚರ್ವಿತಚರ್ವಣ ಎಂದು ಮೂಗು ಮುರಿಯುವುದಿಲ್ಲ.

ಪದಕೋಶದಲ್ಲಿ ಪದ ಸೇರುವ ಬಗೆ
ಇತ್ತೀಚೆಗೆ ಲಂಡನ್ ಆವೃತ್ತಿಯ ‘ದಿ ಗಾರ್ಡಿಯನ್’ ಓದುವಾಗ, ಪ್ರತಿ ವರ್ಷ ಆಕ್ಸ್ ಫರ್ಡ್ ಪದಕೋಶದಲ್ಲಿ ಹೊಸ ಪದಗಳ ಆಯ್ಕೆ ಕ್ರಮ, ಅದನ್ನು ಸೇರಿಸುವ ವಿಧಾನ ಕುರಿತು ಪ್ರಕಟವಾದ ಒಂದು ಲೇಖನ ನನ್ನ ಗಮನ ಸೆಳೆಯಿತು.

ಒಂದು ಪದವನ್ನು ಪದಕೋಶಕ್ಕೆ ಸೇರಿಸುವಾಗ ಯಾವ ಮಾನದಂಡವನ್ನು ಅನುಸರಿಸುತ್ತಾರೆ ಎಂಬ ಬಗ್ಗೆ ವಿವರಿಸಲಾಗಿತ್ತು. ಮೊದಲನೆಯದಾಗಿ, ಯಾವುದೇ ಪದ ಬಾಯಿಮಾತಿನಗಲಿ, ಪ್ರಿಂಟ್ ಅಥವಾ ಆನ್‌ಲೈನ್ ಮಾಧ್ಯಮದಗಲಿ ಚಾಲ್ತಿಗೆ ಬಂದಿರಬೇಕು. ಆ ಪದವನ್ನು ಆಗಾಗ ಕೇಳುತ್ತಿರಬೇಕು. ವಿಷಯ ಪರಿಣತರು, ಪತ್ರಕರ್ತರು ಮತ್ತು ಗಣ್ಯರು ಅದನ್ನು ಬಳಸಬೇಕು. ಆಗ ಭಾಷಾ ತಜ್ಞರು ಆ ಪದದ ಬಗ್ಗೆ ಕುತೂಹಲ ತಾಳಿ, ಆ ಪದದ ವ್ಯುತ್ಪತ್ತಿ, ಅರ್ಥ, ಬಳಕೆಗಳನ್ನು ದಾಖಲಿಸ ಬೇಕು.

ಸದರಿ ಪದವನ್ನು ಆಯಾ ದೇಶ, ಪ್ರಾಂತಗಳಲ್ಲಿ ಬಳಸುತ್ತಿzರೆ ಎಂಬುದಕ್ಕೆ ಭಾಷಾ ತಜ್ಞರು ಸಾಮಗ್ರಿ ಸಹಿತ ಪುರಾವೆಗಳನ್ನು ಸಂಗ್ರಹಿಸಬೇಕು. ಯಾವುದೇ ಪದ ಒಂದಕ್ಕಿಂತ ಹೆಚ್ಚಿನ ಅರ್ಥ ಸೃಜಿಸುವಂತಿದ್ದರೆ, ಭಾಷಾ ಪಂಡಿತರು ಆ ಪದದ ಬೇರೆ ಬೇರೆ ಅರ್ಥಗಳಿಗೆ ಸಹಮತ ವ್ಯಕ್ತಪಡಿಸಬೇಕು. ಕನಿಷ್ಠ ಏಳು ಮಂದಿ ಭಾಷಾ ಪಂಡಿತರ ಅಭಿಪ್ರಾಯ ಪಡೆಯುವುದು ಕಡ್ಡಾಯ.

ಅದಾದ ಬಳಿಕ ಆ ಪದಗಳ ಪಟ್ಟಿಯನ್ನು ಆಕ್ಸ್ ಫರ್ಡ್ ಪದಕೋಶ ಸಂಪಾದಕೀಯ ಮಂಡಳಿಗೆ ಸಲ್ಲಿಸಲಾಗುತ್ತದೆ. ಅಲ್ಲಿ
ಒಂದೊಂದೇ ಪದದ ಬಗ್ಗೆ ಕೂಲಂಕಷ ಚರ್ಚೆಯಾಗುತ್ತದೆ. ಕೆಲವು ಸಲ ಒಂದು ಪದದ ಬಗ್ಗೆ ವಾರಗಟ್ಟಲೆ ಚರ್ಚೆಯಾಗುವುದೂ ಉಂಟು. ಸಹಮತ ವ್ಯಕ್ತವಾಗದಿದ್ದರೆ, ಈ ವರ್ಷ ಆ ಪದವನ್ನು ಬಿಟ್ಟು ಪದಕೋಶವನ್ನು ಮುದ್ರಣಕ್ಕೆ ಕಳಿಸುವುದುಂಟು. ಹೀಗೆ ಸಂಪಾದಕೀಯ ಮಂಡಳಿಯ ಮುಂದೆ ಇತ್ಯರ್ಥವಾಗದ ನೂರಾರು ಪದಗಳಿವೆ.

ಸಂಪಾದಕೀಯ ಮಂಡಳಿಯಲ್ಲಿದ್ದವರೆಲ್ಲ ಒಂದು ಪದಕ್ಕೆ ಒಪ್ಪಿಗೆ ಸೂಚಿಸಲೇಬೇಕೆಂದಿಲ್ಲ. ಆದರೆ ಹತ್ತರಲ್ಲಿ ಎಂಟು ಮಂದಿ ಯಾದರೂ ಒಪ್ಪಿಗೆ ಸೂಚಿಸಬೇಕು. ಇಷ್ಟೆ ಆದ ನಂತರವೇ ಒಂದು ಪದವನ್ನು ಶಬ್ದಕೋಶದಲ್ಲಿ ಸೇರಿಸಲಾಗುತ್ತದೆ.
ಉದಾಹರಣೆಗೆ Presstitute ಎಂಬ ಪದ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಅಸಂಖ್ಯ ಮಂದಿ ಬಳಸಿದರೆಂಬ
ಕಾರಣಕ್ಕೆ ಅದನ್ನು ಪದಕೋಶದಲ್ಲಿ ಸೇರಿಸಿಬಿಡುವುದಿಲ್ಲ. ಇಷ್ಟೆ ದ್ರಾವಿಡ ಪ್ರಾಣಾಯಾಮಗಳು ಆಗಲೇಬೇಕು. ಒಂದು
ವೇಳೆ ಯಾವುದೇ ಪದವನ್ನು ಪದಕೋಶದಲ್ಲಿ ಒಮ್ಮೆ ಸೇರಿಸಿದ ನಂತರ, ಯಾವ ಕಾರಣಕ್ಕೂ ಅಲ್ಲಿಂದ ತೆಗೆದುಹಾಕುವುದಿಲ್ಲ.
ಹೀಗಾಗಿ ಈ ಎಚ್ಚರವನ್ನು ತೆಗೆದುಕೊಳ್ಳಲಾಗುತ್ತದೆ. ಯಾವುದೇ ಪದ, ಆಕ್ಸ್ ಫರ್ಡ್ ಪದಕೋಶದಲ್ಲಿ ಜಾಗಪಡೆಯಿತು
ಅಂತಾದರೆ, ಅದು ಅಮರ!

ಈ ಮಾತು ಉಳಿದ ಪದಕೋಶಗಳಿಗೂ ಅನ್ವಯ. ಅಮೆರಿಕದಲ್ಲಿ ಖ್ಯಾತವಾಗಿರುವ ವೆಬ್‌ಸ್ಟರ್ ಪದಕೋಶದ ನಿರ್ಮಾತೃ ನೋಹ ವೆಬ್‌ಸ್ಟರ್ ಕೆಲವು ಪದಗಳ ಬಗ್ಗೆ ತಿಂಗಳಗಟ್ಟಲೆ ಸಂಶೋಧನೆ ಮಾಡುತ್ತಿದ್ದನಂತೆ. ಒಂದು ಪದದ ಅರ್ಥ ಮತ್ತು ಉಚ್ಚಾರದ ಬಗ್ಗೆ ಹತ್ತಾರು ಮಂದಿಯನ್ನು ಕೇಳುತ್ತಿದ್ದನಂತೆ. ಈ ಕುರಿತು ಆತ ಆಗಿನ ಕಾಲದಲ್ಲಿ ಪತ್ರ-ವ್ಯವಹಾರ ಮಾಡುತ್ತಿದ್ದನಂತೆ. ಸಂಸ್ಕೃತ ಸೇರಿದಂತೆ 26 ಭಾಷೆಗಳನ್ನು ಆತ ಕಲಿತಿದ್ದನಂತೆ.

1828 ರಲ್ಲಿ ಮೊದಲ ವೆಬ್ ಸ್ಟರ್ ಪದಕೋಶ ಪ್ರಕಟವಾದಾಗ ಅದರಲ್ಲಿ 70 ಸಾವಿರ ಪದಗಳಿದ್ದವಂತೆ. ಆತ ಅವೆಷ್ಟು ಶ್ರಮವಹಿಸಿ ಆ ಪದಕೋಶವನ್ನು ಸಿದ್ಧಪಡಿಸಿರಬಹುದು ಎಂಬುದನ್ನು ಊಹಿಸಬಹುದು. ಮೊದಲ ಬಾರಿಗೆ 1928 ರಲ್ಲಿ, ಆಕ್ಸ್ ಫರ್ಡ್ ವಿಶ್ವವಿದ್ಯಾಲಯ, ನಾಲ್ಕು ಲಕ್ಷ ಪದಗಳಿರುವ ‘ಆಕ್ಸ್ ಫರ್ಡ್ ಇಂಗ್ಲಿಷ್ ಡಿಕ್ಷನರಿ’ (OED)ಯನ್ನು ಸಿದ್ಧಪಡಿಸಲು ತೆಗೆದುಕೊಂಡ ಅವಧೀ ಸುಮಾರು ಐವತ್ತು ವರ್ಷ! ಯಾವುದೇ ಪದಕೋಶ ಕಂಡಾಗ ಅದನ್ನೊಮ್ಮೆ ಎತ್ತಿಕೊಂಡು, ತಲೆ ಬಾಗಿ ನಮಿಸಬೇಕು ಎಂದು ಹೇಳಿದ್ದು ಸುಮ್ಮನೆ ಅಲ್ಲ.

error: Content is protected !!