Tuesday, 17th May 2022

ಎರಡನೇ ದಿನಕ್ಕೆ ಕಾಲಿರಿಸಿದ ಅಂಗನವಾಡಿ ಕಾರ್ಯಕರ್ತೆಯರ ಧರಣಿ

ಹಾಸನ: ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರ ಕಚೇರಿ ಎದುರು ನಡೆಸುತ್ತಿರುವ ಧರಣಿ ಮಂಗಳವಾರ ಎರಡನೇ ದಿನಕ್ಕೆ ಕಾಲಿರಿಸಿದೆ.

ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಕಡ್ಡಾಯ ಮಾಡಬೇಕು. ಐಸಿಡಿಎಸ್‌ ಕೆಲಸ ಹೊರತು ಪಡಿಸಿ ಉಳಿದ ಕೆಲಸ ನಿರ್ಬಂಧಿಸಬೇಕು. ಕನಿಷ್ಠ ವೇತನ ಜಾರಿ ಮಾಡಬೇಕು. ನೌಕರರನ್ನು ಕಾಯಂ ಮಾಡುವ ತನಕ ಕಾರ್ಯಕರ್ತೆಯರಿಗೆ ₹30 ಸಾವಿರ ಮತ್ತು ಸಹಾಯಕರಿಗೆ ₹21 ಸಾವಿರ ವೇತನ ನೀಡಬೇಕು ಎಂದು ಆಗ್ರಹಿಸಿದರು.

ಮಿನಿ ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿಯರನ್ನು ನೀಡಬೇಕು. ಖಾಲಿಯಿರುವ ಸಹಾಯಕಿ ಯರು, ಕಾರ್ಯಕರ್ತೆಯರ ಹುದ್ದೆ ಭರ್ತಿ ಮಾಡಬೇಕು. ಬಜೆಟ್‌ನಲ್ಲಿ ಕಡಿತವಾಗಿರುವ ₹8452.38 ಕೋಟಿ ಹಣ ವಾಪಸ್ ನೀಡಬೇಕು. ಐಸಿಡಿಎಸ್ ಯೋಜನೆಗೆ ಅನುದಾನ ಹೆಚ್ಚಿಸಿ ಮಕ್ಕಳು ಮತ್ತು ಮಹಿಳೆಯರನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.

ಸಹಾಯಕಿಯರು ಮತ್ತು ಕಾರ್ಯಕರ್ತೆಯರ ವೇತನದ ಅಂತರ ಕಡಿಮೆ ಮಾಡಬೇಕು. ಮೊಟ್ಟೆ ಗಳನ್ನು ಕುಕ್ಕುಟೋದ್ಯಮ ಮಹಾ ಮಂಡಳಿಯಿಂದಲೇ ಸರಬರಾಜು ಮಾಡಿ ಮುಂಗಡವಾಗಿ ಹಣ ನೀಡಬೇಕು. ಕೋಳಿ ಮೊಟ್ಟೆ ಖರೀದಿಯಲ್ಲಿ ಆಗಿರುವ ಭ್ರಷ್ಟಾ ಚಾರದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಧರಣಿಯಲ್ಲಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಇಂದ್ರಮ್ಮ, ಜೆ.ಪಿ.ಶೈಲಜಾ, ಜಯಂತಿ, ಅರವಿಂದ್‌ ಇದ್ದರು.

ರಸ್ತೆಯುದ್ದಕ್ಕೂ ಧರಣಿ ಕುಳಿತಿದ್ದ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಕೋವಿಡ್‌ ನಿಯಂತ್ರಣ ನಿಯಮಗಳನ್ನು ಗಾಳಿಗೆ ತೂರಿದ್ದರು. ಮಾಸ್ಕ್‌ ಧರಿಸದೆ, ಅಂತರವನ್ನೂ ಪಾಲಿಸದೆ ಧರಣಿ ಕುಳಿತಿದ್ದರು.