Tuesday, 10th December 2024

ಕರೋನಾ ಮುಂದೆ ಕ್ಯಾನ್ಸರ್ ಕೂಡ ಕಮ್ಮಿಯೇನಲ್ಲ !

ಜಯವೀರ ವಿಕ್ರಂ ಸಂಪತ್ ಗೌಡ
ಅರುಣ್ ಜೇಟ್ಲಿ- ಕ್ಯಾನ್ಸರ್
ಮನೋಹರ್ ಪರಿಕ್ಕರ್ – ಕ್ಯಾನ್ಸರ್
ಅನಂತಕುಮಾರ – ಶ್ವಾಸಕೋಶದ ಕ್ಯಾನ್ಸರ್
ರಿಷಿ ಕಪೂರ್ – ಮೂಳೆ ಕ್ಯಾನ್ಸರ್
ಇರ್ಫಾನ್ ಖಾನ್ – ಕ್ಯಾನ್ಸರ್
ಮನಿಷಾ ಕೊಯಿರಾಲಾ – ಕ್ಯಾನ್ಸರ್ (ಸಂಪೂರ್ಣ ಗುಣಮುಖರಾಗಿಲ್ಲ)
ಯುವರಾಜ್ ಸಿಂಗ್ – ಕ್ಯಾನ್ಸರ್ (ಗುಣಮುಖ)
ಅನುರಾಗ್ ಬಸು – ರಕ್ತ ಕ್ಯಾನ್ಸರ್
ಮುಮ್ತಾಜ್ – ಸ್ತನ ಕ್ಯಾನ್ಸರ್
ತಾಹಿರಾ ಕಶ್ಯಪ್ (ಆಯುಷ್ಮಾನ್ ಖುರಾನಾ ಅವರ ಪತ್ನಿ) – ಕ್ಯಾನ್ಸರ್
ರಾಕೇಶ್ ರೋಶನ್ – ಗಂಟಲು ಕ್ಯಾನ್ಸರ್
ಲಿಸಾ ರೇ – ಕ್ಯಾನ್ಸರ್
ರಾಜೇಶ್ ಖನ್ನಾ – ಕ್ಯಾನ್ಸರ್,
ವಿನೋದ್ ಖನ್ನಾ – ಕ್ಯಾನ್ಸರ್
ನರ್ಗಿಸ್ – ಕ್ಯಾನ್ಸರ್
ಫಿರೋಜ್ ಖಾನ್ – ಕ್ಯಾನ್ಸರ್
ಮುತ್ತಪ್ಪ ರೈ – ಮಿದುಳು ಕ್ಯಾನ್ಸರ್
ಈ ಪಟ್ಟಿ ಬೆಳೆಯುತ್ತದೆ …
ಇವರೆಲ್ಲರ ಹೆಸರುಗಳನ್ನೂ ಇನ್ನೊಮ್ಮೆ ಓದಿ, ಇವರೆಲ್ಲ ಗಣ್ಯ ವ್ಯಕ್ತಿಗಳು, ಪ್ರಭಾವಿಗಳು. ಹಣದ ಮೂಲಕವಾದರೆ ಇವರೆಲ್ಲ ಎಂಥ ರೋಗವನ್ನಾದರೂ ಜಯಿಸುವ ಸಾಮರ್ಥ್ಯ ಇರುವವರು. ಇವರೆಲ್ಲರೂ ಆಹಾರ ತಜ್ಞರ ಸಲಹೆಯ ಮೇರೆಗೆ ಯಾವಾಗಲೂ ಆಹಾರವನ್ನು ಸೇವಿಸುವವರು. ಸಿಕ್ಕ ಸಿಕ್ಕಿದ್ದನ್ನೆಲ್ಲಾ ತಿನ್ನದವರು. ಪೌಷ್ಠಿಕ, ಸಂತುಲಿತ ಆಹಾರ ಸೇವಿಸುವವರು. ಯಾವತ್ತೂ  ಬಿಸ್ಲೇರಿ ನೀರನ್ನು ಕುಡಿಯುವವರು. ಇವರಲ್ಲಿ ಕೆಲವರು ಜಿಮ್‌ಗೆ ಹೋಗುವವರು. ಆಗಾಗ ನುರಿತ ವೈದ್ಯರಿಂದ   ದೇಹದ ಎಲ್ಲಾ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವವರು.  ಪ್ರತಿಯೊಬ್ಬರೂ ತಮ್ಮದೇ ಆದ ಉನ್ನತ ಅರ್ಹ ವೈದ್ಯರನ್ನು ಹೊಂದಿದ್ದವರು.  ಸಣ್ಣ ಪುಟ್ಟ ಬೇನೆಗೂ ವಿದೇಶಕ್ಕೆ ಹೋಗಿ ತಪಾಸಣೆ ಮಾಡಿಸಿಕೊಳ್ಳುವ ಸಾಮರ್ಥ್ಯ ಇದ್ದವರು.
ಆದರೂ ಇವರಲ್ಲಿ ಅನೇಕರು ಈಗಾಗಲೇ ಕ್ಯಾನ್ಸರ್ ವಿರುದ್ಧದ ಸೆಣಸಾಟದಲ್ಲಿ ಸೋತು ಮೃತಪಟ್ಟಿದ್ದಾರೆ. ಇನ್ನು ಕೆಲವರು ಕ್ಯಾನ್ಸರ್ ಎಂಬ ಮಾರಿ ಜತೆ ನಿತ್ಯವೂ ಸೆಣಸುತ್ತಿದ್ದಾರೆ. ಇದು ಅಂತಿಂಥ ಸೆಣಸಾಟವಲ್ಲ. ಇದು ಅನುಕ್ಷಣದ ಹೋರಾಟ. ಅಂತ  ಕೆಲವರು ಕ್ಯಾನ್ಸರ್ ವಿರುದ್ಧ ಸೆಣಸಿ ಜಯಶಾಲಿಗಳಾಗಿದ್ದಾರೆ.
ನಾನು ಈ ಸಂದರ್ಭದಲ್ಲಿ ಕರೋನಾವೈರಸ್ ಬಗ್ಗೆ, ರಾಜಕಾರಣಿಗಳೆಂಬ ವೈರಸ್ ಬಗ್ಗೆ, ಲಾಕ್ ಡೌನ್ ಬಗ್ಗೆ ಬರೆಯುವುದನ್ನು ಬಿಟ್ಟು, ಕ್ಯಾನ್ಸರ್ ಬಗ್ಗೆ ಬರೆಯುತ್ತಿದ್ದೇನೆ. ಕರೋನಾವೈರಸ್ ಬಗ್ಗೆ ಇಡೀ ಜಗತ್ತೇ ತತ್ತರಗೊಂಡಿದೆ. ಒಂದು ಮತ್ತು ಎರಡನೆಯ ಮಹಾಯುದ್ಧ ಮಾಡಿದ ಅವಾಂತರಗಳಿಗಿಂತ ಹೆಚ್ಚಿನ ಘಾಸಿಯನ್ನು ಕರೋನಾವೈರಸ್ ಮಾಡಿದೆ. ಇಡೀ ವಿಶ್ವ ಈ ರೀತಿ ಎಂದೂ ಗಲಿಬಿಲಿಯಾಗಿರಲಿಲ್ಲ. ಇಡೀ ಜಗತ್ತಿನ ಜನಜೀವನವನ್ನು ಒಂದೇ ಹೊಡೆತಕ್ಕೆ ಸ್ತಬ್ಧಗೊಳಿಸಿದ ಅಪಖ್ಯಾತಿ ಕರೋನಾವೈರಸ್ಸಿಗೆ ಸಲ್ಲಲೇಬೇಕು. ಈ ಮಹಾಮಾರಿ ವೈರಸ್ಸಿಗೆ ಔಷಧ ಕಂಡುಹಿಡಿಯುವುದು ಹೇಗೆ ಎಂದು ವಿಶ್ವದ ಎಲ್ಲಾ ದೇಶಗಳು ತಲೆಕೆಡಿಸಿಕೊಂಡಿವೆ. ಇಂದು ಒಬ್ಬರನ್ನು ಮತ್ತೊಬ್ಬರು ಮುಟ್ಟಿಸಿಕೊಳ್ಳುತ್ತಿಲ್ಲ. ಯಾರೂ ಯಾರನ್ನು ಮನೆಗೆ ಕರೆಯುತ್ತಿಲ್ಲ. ಮದುವೆ, ಮುಂಜಿ, ಗೃಹಪ್ರವೇಶಗಳೆಲ್ಲ ಬಂದ್. ಶಾಲೆ, ಕಾಲೇಜು, ಪರೀಕ್ಷೆಗಳೆಲ್ಲ ಬಂದ್. ಜನ ಮನೆಯಿಂದ ಹೊರಗೆ ಹೋಗಲು ಹೆದರುತ್ತಿದ್ದಾರೆ. ಇಲ್ಲಿಯತನಕ ಜಗತ್ತಿನಾದ್ಯಂತ ಊರು ಲಕ್ಷಕ್ಕೂ ಅಧಿಕ ಜನ ಸತ್ತಿದ್ದಾರೆ. ಕರೋನಾಕ್ಕೆ  ಯಾವಾಗ ಕಡಿವಾಣ ಎಂಬುದು ಯಾರಿಗೂ ಗೊತ್ತಿಲ್ಲ.
ಕರೋನ ಕಣ್ಣಿಗೆ ಕಾಣದ ಮಾರಿ ಎಂಬುದು ಅದರ ಬಗ್ಗೆ ಜನ ಈ ಪ್ರಮಾಣದಲ್ಲಿ ಭಯಪಡುವುದಕ್ಕೆ ಪ್ರಮುಖ ಕಾರಣವಿರಬಹುದು. ಆದರೆ ಕಣ್ಣಿಗೆ ಕಾಣುವ ಮಾರಿ – ಕ್ಯಾನ್ಸರ್ – ಬಗ್ಗೆ ನಮ್ಮ ಧೋರಣೆ ಏನು ? ಹಾಗೆ ನೋಡಿದರೆ, ಕರೋನಾಕ್ಕಿಂತ ಕ್ಯಾನ್ಸರ್ ಯಾವ ರೀತಿಯಲ್ಲೂ ಕಡಿಮೆಯೇನಲ್ಲ. ಕರೋನಾವೈರಸ್ ಸೋಂಕಿದರೆ ವ್ಯಕ್ತಿ ಎರಡು ವಾರಗಳಲ್ಲಿ ಸಾಯುತ್ತಾನೆ. ಕ್ಯಾನ್ಸರ್ ಬಂದರೆ ಹೆಚ್ಚು ಅಂದ್ರೆ ಆರು ತಿಂಗಳಿಗೆ ಸಾಯುತ್ತಾನೆ. ಕರೋನಾ ಸೋಂಕಿದರೆ ವ್ಯಕ್ತಿ ನರಳಿಕೆಯಿಲ್ಲದೆ ಜೀವ ಚೆಲ್ಲುತ್ತಾನೆ. ಆದರೆ ಕ್ಯಾನ್ಸರ್ ಬಂದರೆ ರೋಗಿ ಮಾನಸಿಕವಾಗಿ, ದೈಹಿಕವಾಗಿ ಜರ್ಜರಿತನಾಗಿ ಕೊನೆಗೆ ಮೃತ್ಯುವಿಗೆ ಶರಣಾಗುತ್ತಾನೆ.
ನಾನು ಲಭ್ಯವಿರುವ ಕೆಲವು ಅಂಕಿ-ಸಂಖ್ಯೆಗಳನ್ನು ನಿಮ್ಮ ಮುಂದೆ ಇಡುತ್ತೇನೆ.  ನಾನು ಮಾತಾಡುವುದಕ್ಕಿಂತ ಅವೇ ಮಾತಾಡಲಿ. ಭಾರತದಲ್ಲಿ ವೈದ್ಯಕೀಯ ಸಂಶೋಧನಾ ಮಂಡಳಿ ಎಂಬ ಸಂಸ್ಥೆಯಿದೆ. ಅದರಲ್ಲಿ ಕ್ಯಾನ್ಸರ್ ಸಂಬಂಧಿ ಘಟಕವೊಂದಿದೆ. ಅದು ನಮ್ಮ ದೇಶದ ಕ್ಯಾನ್ಸರ್ ಬಗೆಗಿನ ಎಲ್ಲಾ ಮಾಹಿತಿಯನ್ನು ಕಲೆ ಹಾಕುತ್ತದೆ. ಅದರ ಪ್ರಕಾರ, ಭಾರತದಲ್ಲಿ ಪ್ರತಿದಿನ ಕ್ಯಾನ್ಸರ್ ಗೆ 1300 ಜನ ಸಾಯುತ್ತಾರಂತೆ. ಮುಂದಿನ ಎರಡು ವರ್ಷಗಳಲ್ಲಿ, ಪ್ರತಿದಿನ ಕ್ಯಾನ್ಸರಿನಿಂದ ಸಾಯುವವರ ಸಂಖ್ಯೆ  1650ಕ್ಕೆ ಏರಲಿದೆಯಂತೆ. ಭಾರತದಲ್ಲಿ ಕರೋನಾಕ್ಕೆ ಪ್ರತಿದಿನ ಇಷ್ಟು ಜನ ಸತ್ತಿಲ್ಲ ಎಂಬುದು ಗೊತ್ತಿರಲಿ. ಹಾಗಂತ ಕರೋನಾಕ್ಕೆ ಔಷಧ ಇಲ್ಲ, ಚಿಕಿತ್ಸೆ ಇಲ್ಲ. ಆದರೆ ಕ್ಯಾನ್ಸರಿಗೆ ಔಷಧವೂ ಇದೆ, ಚಿಕಿತ್ಸೆಯೂ ಇದೆ. ಆದರೂ ಕರೋನಾಕ್ಕಿಂತ ಕ್ಯಾನ್ಸರಿಗೆ ಹೆಚ್ಚು ಜನ ಸಾಯುತ್ತಿದ್ದಾರೆ.
ನಿಮಗೆ ಗೊತ್ತಿರಲಿ, 2012 ರಲ್ಲಿ ಭಾರತದಲ್ಲಿ ಕ್ಯಾನ್ಸರಿಗೆ  4,78,180 ಜನ ಸತ್ತಿದ್ದರು. ಅಂದರೆ ಕರೋನಾವೈರಸ್ಸಿಗೆ ಇಡೀ ಜಗತ್ತಿನಲ್ಲಿ ಇಷ್ಟು ಜನ ಸತ್ತಿಲ್ಲ. ಈ ಸಂಖ್ಯೆಯಲ್ಲಿ ಕರೋನಾ ಕ್ಯಾನ್ಸರನ್ನು ಹಿಮ್ಮೆಟ್ಟಿಸಲಿಕ್ಕಿಲ್ಲ. ಅದೇ ವರ್ಷ 29,34,314 ಮಂದಿಗೆ ಕ್ಯಾನ್ಸರ್ ಪತ್ತೆಯಾಗಿತ್ತು. 2019 ರಲ್ಲಿ 1,762,450 ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿತ್ತು. (ಆ ವರ್ಷ ಅಮೆರಿಕದಲ್ಲೊಂದೇ 6,06,880 ಜನ ಸತ್ತಿದ್ದರು)
ವಿಶ್ವ ಅರೋಗ್ಯ ಸಂಸ್ಥೆ (WHO) ಎಂಬ ಅಂತಾರಾಷ್ಟ್ರೀಯ ಸಂಸ್ಥೆಯೊಂದಿದೆ. ಅದರ ಪ್ರಕಾರ, 2018ರಲ್ಲಿ ಭಾರತದಲ್ಲಿ ಹತ್ತು ಲಕ್ಷದ ಇಪ್ಪತ್ತು ಸಾವಿರ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗಿವೆ. ಇದಕ್ಕಿಂತ ಮುಖ್ಯವಾಗಿ, ಭಾರತದಲ್ಲಿ ಹತ್ತರಲ್ಲಿ ಒಬ್ಬ ವ್ಯಕ್ತಿಯ ಜೀವಿತ ಅವಧಿಯಲ್ಲಿ, ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ ಮತ್ತು ಹದಿನೈದರಲ್ಲಿ ಒಬ್ಬ ವ್ಯಕ್ತಿ ಕ್ಯಾನ್ಸರ್ ಗೆ ಬಲಿಯಾಗುತ್ತಾನೆ. ಇನ್ನೂ ಗಲಿಬಿಲಿ ಹುಟ್ಟಿಸುವ ಸಂಗತಿಯೆಂದರೆ, ಭಾರತದಲ್ಲಿ ಪ್ರತಿ ಎಂಟು ನಿಮಿಷಕ್ಕೆ ಒಬ್ಬಳು ಮಹಿಳೆ ಗರ್ಭಕೋಶದ ಕ್ಯಾನ್ಸರಿನಿಂದ ಸಾಯುತ್ತಾಳೆ. ಇಬ್ಬರ ಪೈಕಿ ಒಬ್ಬಳು ಸ್ತನ ಕ್ಯಾನ್ಸರಿನಿಂದ ಸಾಯುತ್ತಾಳೆ. ಪ್ರಸ್ತುತ ಭಾರತದಲ್ಲಿ ಇಪ್ಪತ್ತೈದು ಲಕ್ಷ ಕ್ಯಾನ್ಸರ್ ರೋಗಿಗಳು ಪ್ರತಿ ದಿನ ಸಾವು – ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಪ್ರತಿ ವರ್ಷ ಕನಿಷ್ಠ ಹತ್ತು ಲಕ್ಷ ಜನ ಈ ರೋಗಕ್ಕೆ ತುತ್ತಾಗುತ್ತಿದ್ದಾರೆ. ಈ ವರ್ಷದ ಕೊನೆಯಲ್ಲಿ ಕ್ಯಾನ್ಸರಿಗೆ ಕನಿಷ್ಠ ಎಂಟು ಲಕ್ಷ ಸಾಯಬಹುದು ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ಸ್ತನ ಕ್ಯಾನ್ಸರ್  ಒಂದರಿಂದಲೇ ಪ್ರತಿ ವರ್ಷ 1,62,500 ಹೆಂಗಸರು ಸಾಯುತ್ತಿದ್ದಾರೆ.
ವಿಶ್ವ ಅರೋಗ್ಯ ಸಂಸ್ಥೆ ಅಂಕಿ-ಸಂಖ್ಯೆಗಳನ್ನು ನೋಡಿದರೆ  ಗಾಬರಿಯಾಗುತ್ತವೆ. ಮುಂದಿನ ಇಪ್ಪತ್ತು ವರ್ಷಗಳಲ್ಲಿ, ಸೂಕ್ತವಾದ ಚಿಕಿತ್ಸೆ, ಔಷಧ ಕಂಡುಹಿಡಿಯದಿದ್ದರೆ,  ಕ್ಯಾನ್ಸರ್ ಪ್ರಮಾಣ ಶೇ.ಅರವತ್ತರಷ್ಟು ಜಾಸ್ತಿಯಾಗುವುದಂತೆ.  ಮುಂದಿನ ಹತ್ತು  ವರ್ಷಗಳ ಅವಧಿಯಲ್ಲಿ ಭಾರತ ಕ್ಯಾನ್ಸರ್ ರೋಗದ ಅಪಾಯಕಾರಿ ಸ್ಥಿತಿಯನ್ನು ಮುತ್ತಲಿದೆ ಎಂದು ವಿಶ್ವ ಅರೋಗ್ಯ ಸಂಸ್ಥೆ ಅಧ್ಯಕ್ಷರು ಎಚ್ಚರಿಸಿದ್ದಾರೆ. ಜನ ಹತ್ತಾರು ಬೇರೆ ಬೇರೆ ವಿಧಗಳಲ್ಲಿ ಸಾಯಬಹುದು.  ಆದರೆ ಕ್ಯಾನ್ಸರ್ ರೋಗ ಮೊದಲ ಐದು ಸ್ಥಾನಗಳಲ್ಲಿದೆ.
ಸಾಮಾನ್ಯವಾಗಿ ತಂಬಾಕು, ಗುಟಖಾ, ಬೀಡಿ ಸೇವನೆಯಿಂದ ಕ್ಯಾನ್ಸರ್ ಬರುತ್ತದೆ ಎಂದು ನಂಬಲಾಗಿತ್ತು. ಆದರೆ ತಮ್ಮ ಜೀವಿತ ಅವಧಿಯಲ್ಲಿ ಇವನ್ನು ಸೇದದವರು, ಸೇವಿಸದವರು ಸಹ ಕ್ಯಾನ್ಸರಿಗೆ ತುತ್ತಾಗುತ್ತಿದ್ದಾರೆ. ಮಹಿಳೆಯರಲ್ಲಿ ಸ್ತನ, ಗರ್ಭಕೋಶದ ಕ್ಯಾನ್ಸರ್ ಗಳಂತೂ ಕಳವಳಕಾರಕ ಪ್ರಮಾಣ ಮುಟ್ಟಿದೆ. ಇತ್ತೀಚಿನ ದಿನಗಳಲ್ಲಿ ರಕ್ತ , ಮೂಳೆ, ಗಂಟಲು, ಶ್ವಾಸಕೋಶ, ಮೂತ್ರಕೋಶ, ಲಿವರ್, ಮಿದುಳು ಕ್ಯಾನ್ಸರ್ ಗಳು ಸಹ ಸಾಮಾನ್ಯವಾಗುತ್ತಿವೆ.
ಒಮ್ಮೆ ಕ್ಯಾನ್ಸರ್ ರೋಗ ಲಕ್ಷಣಗಳು ವ್ಯಕ್ತಿಯಲ್ಲಿ ಕಂಡು ಬಂದರೆ, ಆತ ಸಂಪೂರ್ಣವಾಗಿ ಗುಣಮುಖ ಆಗುವ ಸಾಧ್ಯತೆ ತೀರಾ ಕಡಿಮೆ. ನೂರರಲ್ಲಿ ಹತ್ತು ವ್ಯಕ್ತಿ ಮಾತ್ರ ಬದುಕುಳಿಯಬಹುದು. ಕ್ಯಾನ್ಸರ್ ರೋಗ ಲಕ್ಷಣಗಳು ಆರಂಭಿಕ ಹಂತದಲ್ಲಿ ಕಂಡು ಬಂದರೆ, ರೋಗವನ್ನು ಗುಣಪಡಿಸಬಹುದಾಗಿದೆ. ಎರಡನೇ ಹಂತ ತಲುಪಿದ ನಂತರ ಪತ್ತೆಯಾದರೆ ಅಥವಾ ಎರಡನೇ ಹಂತ ತಲುಪಿದ ನಂತರ ರೋಗಿ ವೈದ್ಯರಲ್ಲಿಗೆ ಹೋದರೆ, ರೋಗ ಗುಣಪಡಿಸುವುದು ಅಸಾಧ್ಯ. ಅಂಥವರಿಗೆ ಅವರು ಬದುಕಿರುವ ತನಕ ಚಿಕಿತ್ಸೆ ನೀಡಬಹುದೇ ಹೊರತು, ಅವರು ರೋಗದಿಂದ ಗುಣಮುಖರಾಗುವ ಸಾಧ್ಯತೆ ತೀರಾ ಕಡಿಮೆ. ಎರಡನೇ ಹಂತ ತಲುಪಿ ಚಿಕಿತ್ಸೆ ಪಡೆದು ಗುಣಮುಖರಾದವರು ಹತ್ತರಲ್ಲಿ ಒಂದೆರಡು ಇರಬಹುದು. ಚಿಕಿತ್ಸೆ ಪಡೆದು ಗುಣಮುಖರಾಗುವ ಹೊತ್ತಿಗೆ ಬದುಕೇ ಹೈರಾಣಾಗಿ ಹೋಗಿರುತ್ತದೆ. ಬದುಕಿದ ವ್ಯಕ್ತಿ ಆರ್ಥಿಕವಾಗಿ, ದೈಹಿಕವಾಗಿ, ಮಾನಸಿಕವಾಗಿ ಸೋತು ಹೋಗಿರುತ್ತಾನೆ.
ತನಗೆ ಕ್ಯಾನ್ಸರನಂತೆ ಎಂಬ ಸಂಗತಿ ತಿಳಿಯುತ್ತಿದ್ದಂತೆ ಆತ ಅದೆಷ್ಟೇ ಗಟ್ಟಿಯಾಗಿರಲಿ, ಅವನ ಜಂಘಾಬಲ ಉಡುಗಿಹೋಗಿರುತ್ತದೆ. ಆತ ನಂತರ ಚಿಕಿತ್ಸೆಯಿಂದ ಗುಣಮುಖನಾಗಬಹುದು, ಆದರೆ ಆ ಕ್ಷಣದಲ್ಲಿ ಆತ ತತ್ತರಿಸಿಹೋಗಿರುತ್ತಾನೆ. ಕ್ಯಾನ್ಸರ್ ಪತ್ತೆಯಾಗುತ್ತಿದ್ದಂತೆ, ಬಹುತೇಕ ಜನ ಮಾನಸಿಕ ಆಘಾತದಿಂದಲೇ ತಮ್ಮ ಮರಣ ಶಾಸನ ಬರೆಯಲು ಮುಂದಾಗಿಬಿಡುತ್ತಾರೆ. ಕ್ಯಾನ್ಸರಿಗೆ ಕನ್ನಡದಲ್ಲಿ ‘ಅರ್ಬುದ ರೋಗ’ ಎಂದು ಕರೆಯುತ್ತಾರೆ. ಹಾಗೆಂದರೆ ಗುಣಪಡಿಸಲಾಗದ ರೋಗ ಎಂದರ್ಥ. ಹೀಗಾಗಿ ಅನೇಕರಲ್ಲಿ ಕ್ಯಾನ್ಸರ್ ಬಂತು ಎಂದರೆ, ತಾವು ಬದುಕಿ ಉಳಿಯುವ ಸಾಧ್ಯತೆಯೇ ಇಲ್ಲ ಎಂದು ಅವರಷ್ಟಕ್ಕೇ ಒಂದು ನಿರ್ಧಾರಕ್ಕೆ ಬಂದುಬಿಡುತ್ತಾರೆ. ಆದರೆ ಹಾಗೆ ಭಾವಿಸಬೇಕಿಲ್ಲ. ಆದರೆ ಕ್ಯಾನ್ಸರ್ , ಅಂಥ  ಭಯವನ್ನು ಹುಟ್ಟಿಸಿರುವುದಂತೂ ಸುಳ್ಳಲ್ಲ.
ಈ ಹಿನ್ನೆಲೆಯಲ್ಲಿ, ಇಡೀ ಜಗತ್ತು ಕರೋನಾವೈರಸ್ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಕ್ಯಾನ್ಸರನ್ನೂ ನೋಡುವ ಅಗತ್ಯ ಹಿಂದೆಂದಿಗಿಂತಲೂ ಅವಶ್ಯಕವಾಗಿದೆ. ಕ್ಯಾನ್ಸರ್ ಕರೋನಾಡಾಂಟೆ  ಸೋಂಕು ರೋಗವಲ್ಲ. ಆದರೆ ಅದು ಸೋಂಕು ರೋಗಕ್ಕಿಂತ ವೇಗವಾಗಿ, ವ್ಯಾಪಕವಾಗಿ ಹಬ್ಬುತ್ತಿದೆ.  ಜಗತ್ತಿನ ಮುಂದುವರಿದ ದೇಶಗಳಲ್ಲೇ ಹೆಚ್ಚು ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿವೆ.
ಈ ದೃಷ್ಟಿಯಿಂದ ಗಮನಿಸಿದಾಗ, ಕ್ಯಾನ್ಸರ್ ರೋಗವನ್ನು ಹೊಸ ಬೆಳಕಲ್ಲಿ, ಹೊಸ ದೃಷ್ಟಿಕೋನದಿಂದ ನೋಡುವ ಅಗತ್ಯವಿದೆ. ಕರೋನಾ ಕಡೆ ಗಮನಹರಿಸುವ ಮನಸ್ಸು ಕ್ಯಾನ್ಸರ್ ಕಡೆಗೂ ಗಮನಹರಿಸಬೇಕಿದೆ. ಯಾವುದೇ ರೋಗವಿರಲಿ, ಅದು ಹೆಚ್ಚು, ಇದು ಕಮ್ಮಿ ಎಂಬುದಿಲ್ಲ. ತಲೆ ನೋವು ಬಂದಾಗ ನೆಗಡಿಯೇ ವಾಸಿಯೆನಿಸುತ್ತದೆ. ಹಲ್ಲು ನೋವಿನ ಮುಂದೆ ಕೈ ಗಾಯವೇ ಎಷ್ಟೋ ವಾಸಿ ಎನಿಸುತ್ತದೆ. ಪ್ರತಿ ಕಾಯಿಲೆಯೂ ಅದರದೇ ಆದ ಕಿತ್ತು ತಿನ್ನುವ, ನೋವು ಉಣ್ಣಿಸುವ ಸಾಮರ್ಥ್ಯವಿದೆ. ಈ ಸಂದರ್ಭದಲ್ಲಿ ಜಗತ್ತಿನ ಕಾಳಜಿಯೆಲ್ಲ ಕರೋನಾ ಜಪದಲ್ಲೇ ಕಳೆದುಹೋಗುವುದು ಬೇಡ.
ಕ್ಯಾನ್ಸರ್ ಬಗ್ಗೆ ಸಹ ಕನಿಕರ ಇರಲಿ.