ಬಿ.ವಿ. ನಾಗರಾಜು ಕೆನಡಾ
ಇಡೀ ವಿಶ್ವದ ಆರ್ಥಿಕ ಸ್ಥಿತಿಯನ್ನೇ ಬುಡಮೇಲು ಮಾಡಲು ಹೊರಟಿರುವ ಕರೋನಾ ವೈರಸ್ ಈಗ ನಾಶವಾಗುವ ಕಾಲ ಸನ್ನಿಹಿತ. ಎಲ್ಲರ ಬಯಕೆ-ಪ್ರಾರ್ಥನೆ ಕೂಡ ಇದೆ.
————–
ಕರೋನಾ ವೈರಸ್ ಮಾರಿ ಯಾವಾಗ ತೊಲಗುವೆ – ಎನ್ನುವ ಕೂಗು, ಪ್ರಪಂಚದ ಎಲ್ಲೆಡೆ ಈಗ. ಪ್ರಾಣಭೀತಿ, ಆತಂಕ ತುಂಬಿದ ಮುಖಗಳಲ್ಲಿ ಒಂದೇ ರೀತಿಯ ಕಳೆ. ಸಾವಿನ ಬಾಗಿಲು ಯಾವ ಕ್ಷಣಗಳಲ್ಲಿ ಬಡಿದುಕೊಳ್ಳುತ್ತದೋ ಎಂಬ ಭಯದ ನೆರಳಿನಲ್ಲಿ ಪ್ರತಿ ಕ್ಷಣದ ಬದುಕು. ಪ್ರತಿಯೊಬ್ಬರ ನೆತ್ತಿಯ ಮೇಲೆ ಸಾವಿನ ಕತ್ತಿ. ಇದೆಲ್ಲಿಯ ಮಾರಿ, ಪ್ರಕೃತಿಯ ಕೊಡುಗೆ ಎಂದು ಹೇಳಲಂತೂ ಅಸಾಧ್ಯ. ಮಾನವ ನಿರ್ಮಿತ ಎನ್ನುವ ತರ್ಕಕ್ಕೆ ಹೆಚ್ಚಿನ ಮಹತ್ವ ಇದ್ದೇ ಇದೆ. ಚೀನಾಕ್ಕೆ ಬೈದದ್ದು ಸಾಕು, ಅದರಿಂದ ಏನು ಪ್ರಯೋಜನ ಇಲ್ಲ ಎನ್ನುವ ವಾದಕ್ಕೆ ಜಯ. ನಮ್ಮನ್ನು ನಾವೇ ನಿಂದಿಸಿಕೊಳ್ಳುವ ಕಾಲ. ಮನುಷ್ಯನ ಸಂಶೋಧನೆಗೆ ಇತಿಮಿತಿ ಬೇಡವೇ ಎಂದು ದೂಷಿಸಿಯೂ ಪ್ರಯೋಜನವಿಲ್ಲ. ಸಮಯ ಮೀರಿದೆ, ಈಗ ಉಳಿದಿರುವ ಪ್ರಶ್ನೆ ಎಂದರೆ ಈ ಸಾವಿನ ದವಡೆಯಿಂದ ಪಾರಾಗುವುದು ಹೇಗೆ?.
ಈ ಪ್ರಶ್ನೆಯ ಗಡಿ ಬಿಟ್ಟು ಹೊರಗೆ ಇಣುಕಿದಾಗ ಮತ್ತೊೊಂದು ಚಿತ್ರಣ. ಇದೀಗ ವಾಸ್ತವ. ಈಗಂತೂ, ಕ್ವಾರಂಟೈನ್ ನೆಪದಲ್ಲಿ ಮನೆಯ ನಾಲ್ಕು ಗೋಡೆಗಳೆ ಜೈಲು, ಜೇಬಿನಲ್ಲಿ ಕಾಸಿದ್ದರೆ ಧೈರ್ಯ, ಅದಿಲ್ಲದಿದ್ದರೆ ಸರಕಾರದ ನೆರವು ಅಥವಾ ಕೊಡುಗೈ ದಾನಿಗಳ ಪಟ್ಟಿಹಿಡಿದು ಅವರ ಕಡೆ ದಯಾನೀಯ ದೃಷ್ಟಿಗೆ ಬೀಳಬೇಕು ಎನ್ನುವ ಲೆಕ್ಕಾಚಾರ. ಅಡುಗೆ ಮನೆಯಲ್ಲಿ ದವಸ ಧಾನ್ಯ ಇದೆಯೇ? ಇಲ್ಲದಿದ್ದರೆ ಹೇಗೆ, ಸಾಲ, ಮನೆಯ ತಿಂಗಳ ಕಂತು ಕಟ್ಟಲು ಯಾವ ಕಸರತ್ತು ನಡೆಸಬೇಕು ಎನ್ನುವ ಮಸಲತ್ತು. ಒಟ್ಟಿನಲ್ಲಿ ತೇಪೆ ಜೀವನಕ್ಕೆ ಮಾನಸಿಕವಾಗಿ ತಯಾರಾಗುವ ಕಾಲ. ವಿಶ್ವದಾದ್ಯಂತ ಒಂದು ಲಕ್ಷ ಮೀರಿ ಜನ ಹುಳುಗಳಂತೆ ಸತ್ತಿದ್ದಾರೆ. ಇನ್ನೆಷ್ಟು ಮಂದಿಯೋ ಗೊತ್ತಿಲ್ಲ.
*ಅಕಸ್ಮಾತ್ ಸತ್ತರೆ?:
ಸತ್ತಮೇಲೆ ಏನಿದೆ, ಅದರ ಕಲ್ಪನೆ ಕೂಡ ಬೇಡ. ಸತ್ತಮೇಲೆ ಇವಾವ ತಲೆನೋವು ಎಲ್ಲಿದೆ ಅಲ್ಲವೇ? ನೆಂಟರಿಷ್ಟರು ಹತ್ತಿರ ಸುಳಿವುದಿರಲಿ, ಒಡ ಹುಟ್ಟಿದವರು, ಹೆಂಡತಿ – ಗಂಡ ಯಾರೂ ಕೂಡ ಸುಳಿಯುವಂತಿಲ್ಲ. ಹತ್ತುಸಲ ಯೋಚಿಸಿ ಸಂಬಂಧಪಟ್ಟ ವ್ಯವಸ್ಥೆಯ ಅನುಮತಿ ಪಡೆದು ಅಂತಿಮ ದರ್ಶನ ಪಡೆಯುವ ಪರಿಸ್ಥಿತಿ. ನ್ಯೂಯಾರ್ಕ್ ದೃಶ್ಯ ನೋಡಿದರೆ, ನಿತ್ಯ ಸಾಯುವವವರಿಗೆ ಅಳುವವರು ಯಾರು ಎನ್ನುವುದಕ್ಕೆ ಪೂರ್ಣ ಅರ್ಥಸಿಗುತ್ತದೆ. ಒಟ್ಟಿಗೆ ಗುಳಿ ತೋಡಿ ನೂರು-ಇನ್ನೂರು ಹೆಣಗಳನ್ನು ಒಟ್ಟಿಗೆ ಮಣ್ಣಲ್ಲಿ ಸೇರಿಸುವ ಪ್ರಯತ್ನ ದಿಗ್ಭ್ರಾಾಂತಿ ಹುಟ್ಟಿಸಿದರೂ, ಈಗ ಅದೆಲ್ಲ ಸಾಮಾನ್ಯ. ಇದು ಇವತ್ತಿನ ಜಗತ್ತಿನ ಚಿತ್ರಣ. ಇತಿಹಾಸಕ್ಕೆ ಹೊಸ ಅಧ್ಯಾಯ.
ಆದರೆ ಈ ರೋಗದ ಸೋಂಕು ತಗುಲಿ, ಇತರರಿಗೂ ತಗಲಿಸುವುದು ಎಷ್ಟು ಸರಿ? ಸೋಂಕು ಬಾರದ ರೀತಿಯಲ್ಲಿ ಜೀವನ ಶೈಲಿ ಸರಿಹೊಂದಿಸಿಕೊಳ್ಳಲು ಮತ್ತಿನ್ನೇನು ಮಾಡಬೇಕು ಎನ್ನುವಷ್ಟರಲ್ಲಿ ಈ ಮನೆ ಒಳಗಿನ ಜೈಲು ಶಿಕ್ಷೆ ಘೋಷಣೆ ಒಳ್ಳೆಯದೇ ಆಯಿತಲ್ಲವೇ? ಇದೆ ಈಗ ‘ದೊಡ್ಡ ಔಷಧ’ ಅಥವಾ ‘ದಿವ್ಯಔಷಧ’. ಇದನ್ನು ಪಾಲಿಸದೆ ಹೋದಲ್ಲಿ, ಕರೋನಾ ವೈರಸ್‌ನಷ್ಟೇ ದೊಡ್ಡ ವೈರಸ್ ಈ ಮನುಷ್ಯನ ಸ್ವಭಾವ.
ಇದೆಂಥ ಜೈಲು?
ನನಗೀಗ ಆರು ದಶಕಗಳು ಕಳೆದು ಕೊಸರಿಗೆ ಮತ್ತೆ ನಾಲ್ಕು ಸೇರಿಕೊಂಡಿದ್ದು ಜೀವನದ ಹೊಸದೊಂದು ಹೊಸ್ತಿಲಿಗೆ ಕಾಲಿಟ್ಟುರುವ ಅನುಭವ ಇದ್ದೇ ಇದೆ. ಆದರೆ ನಡೆದು ಬಂದ ದಾರಿ ನೆನಪಾದಾಗ, ನೆನಪಿನ ಸುರುಳಿ ಬಿಚ್ಚಿಕೊಂಡಾಗ ನನಗೇಕೋ, ಕರೋನಾ ವೈರಸ್‌ಗೆ ಒಮ್ಮೆಯಾದರೂ ಧನ್ಯವಾದ ಹೇಳುವ ಮನಸ್ಸು. ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟ ಕರೋನಾ ಬಗೆಗೆ ಹೇಳುತ್ತಿದ್ದೇನೆ ಅಷ್ಟೇ. ಆದರೆ, ಈ ಒಳ ಮರ್ಮ ಅರ್ಥ ಮಾಡಿಕೊಳ್ಳದೆ ಕೇವಲ ಒಂದೇ ದೃಷ್ಟಿಯಲ್ಲಿ ಆಲೋಚಿಸಿ ನಿಂದಿಸುವ ಗುಂಪು ಬೆಳೆದರೆ ಅದಕ್ಕೆ ಹೊಣೆ ಯಾರು?
ವಿಶ್ವವೇ ಒಂದಾಗಿ ಒಕ್ಕೊರಲಿನಲ್ಲಿ ಈ ಸೋಂಕಿಗೆ ಸಾವು ಅಥವಾ ಅಂತ್ಯ ಕೋರುತ್ತಿರುವಾಗ ನಾನೊಬ್ಬ ಮಾತ್ರ ಅದರ ಪರವಾಗಿ ಕೂಗಿದರೆ ನನ್ನನ್ನು ಹುಚ್ಚ ಎಂದು ಕೊಂದು ಹಾಕಿಬಿಟ್ಟರೆ? ಹೌದಲ್ಲವೇ, .. ಅಲ್ಲೂ ಸಾವಿನ ಭಯವೇ? ಆದರೆ, ನಾನು ಸದಾ ನೆನಪು ಮಾಡಿಕೊಳ್ಳುವಂಥ ವೀರ ಸಂಗೊಳ್ಳಿ ರಾಯಣ್ಣ ಅಥವಾ ಕುವೆಂಪು ಆಗಬೇಕು ಎಂದೇನೂ ಪ್ರಯತ್ನಿಸುತ್ತಿಲ್ಲ. ಆದರೂ ಬಲವಾದ ಕೆಲವು ಕಾರಣಗಳಿಗೆ ಕರೋನಾ ವೈರಸ್‌ನ್ನು ಗೆಳೆಯ ಅನಿಸಿಕೊಳ್ಳುವುದೇ ಲೇಸು! ಕಾರಣ ಇಷ್ಟೇ, ಈ ಪೀಡೆ ಕರೋನಾ, ವಿಚಿತ್ರ ರೀತಿಯಲ್ಲಿ ಆತ್ಮಶೋಧನೆಗೆ ಅವಕಾಶ ಮಾಡಿಕೊಟ್ಟಿದೆ. ಹೀಗೆಲ್ಲ ಅನಿಸಿದಾಗಲೇ ಆಲೋಚನೆಗಳ ಗಾಳಿಪಟವು ಬಾಲಂಗೋಚಿ ಇಲ್ಲದೆಯೇ ಬಹು ಎತ್ತರಕ್ಕೆ ನನ್ನನ್ನು ಕೊಂಡೊಯ್ದ ಅನುಭವ ನೀಡಿದಂತಾಗುತ್ತಿದೆ.
ಬೆಂಗಳೂರು ನನ್ನ ಹುಟ್ಟೂರು ಅಲ್ಲವೇ… ವಿದೇಶದಲ್ಲಿ ನೆಲೆ ಕಂಡಿದ್ದು 20-22 ವರ್ಷಗಳ ಹಿಂದೆ. ಆದರೆ, ಹುಟ್ಟೂರಿನ ಬಗೆಗೆ ಎಷ್ಟೆೆಲ್ಲಾ ಮಮತೆ ನನಗೆ ಎಂದರೆ, ವರ್ಷದಲ್ಲಿ ಒಮ್ಮೆಯಾದರೂ ಹೋಗದಿದ್ದರೆ ನನ್ನ ಮನಸ್ಸಿಗೆ ಅದೇಕೋ ಕಿರಿಕಿರಿ. ಹೇಗಾದರೂ ಸರಿ ಒಮ್ಮೆ ಹೋಗಲೇ ಬೇಕು ಎನ್ನುವ ಹಟದಿಂದ ಅದನ್ನು ಈಡೇರಿಸುತ್ತಲೇ ಬಂದಿರುವುದು ನನ್ನ ಪುಣ್ಯ.
ವಿದೇಶ ಎಂದಾಗ, ಈ ಅಭಿವೃದ್ಧಿ ರಾಷ್ಟ್ರ ಕೆನಡಾದಲ್ಲಿನ ಪ್ರಕೃತಿಯ ಕೊಡುಗೆ, ಹೊಗೆ ರಹಿತ ವಾಹನಗಳ ಸಂಚಾರ, ಕಲಬೆರಕೆ ಇಲ್ಲದ ಆಹಾರ ಪದಾರ್ಥಗಳ ರಾಶಿ, ವೈದ್ಯಕೀಯ ಸವಲತ್ತು, 24 ಗಂಟೆಗಳ ವಿದ್ಯುತ್, ಪರಿಶುದ್ಧ ಕುಡಿಯುವ ನೀರು, ಗುಣಮಟ್ಟ ಜೀವನ ಶೈಲಿ , ಎಷ್ಟೆೆಲ್ಲಾ ಸೌಲಭ್ಯಗಳು..ಒಂದೇ ಎರಡೇ ..ಅಬ್ಬಬ್ಬಾ ಎನ್ನುವಷ್ಟು ಎಲ್ಲವೂ. ನನ್ನ ಹುಟ್ಟೂರು ಅಥವಾ ಬಿಟ್ಟು ಬಂದ ನೆಲೆಗೆ ಈ ಬದಲಾವಣೆ ಬರುವುದು ಎಂದು? ಎನ್ನುವ ಪ್ರತಿ ಕ್ಷಣದ ಕೊರಗು ಉಸಿರಿನ ಜತೆಗೆ ಬೆರೆತಿರುವುದು ನನ್ನ ದೌರ್ಬಲ್ಯ ಅಥವಾ ನನ್ನ ದುರಾಸೆ ಕಾರಣ ಇರಬೇಕು.
ಎಲ್ಲಕ್ಕಿಿಂತ ಮಿಗಿಲಾಗಿ ಈ ಅದ್ಭುತ ದೇಶದಲ್ಲಿ ಸುಮಾರು 168ಕ್ಕೂ ಮಿಗಿಲಾಗಿ ನಾನಾ ರಾಷ್ಟ್ರಗಳ ಮೂಲ ಹೊಂದಿರುವ ಜನತೆಯ ಸಹಬಾಳ್ವೆಯ ಕೊಡುಗೆ. ಎಲ್ಲೋ ಒಂದೆಡೆ ಕಚ್ಚಾಟದ ಸುಳಿವಿದ್ದರೂ, ಇಂತಹ ಸಹ ಬಾಳ್ವೆ ಭಾರತದಲ್ಲಿ ಈಗೀಗ ತೀವ್ರ ಹದಗೆಡುತ್ತಿರುವುದು ಏಕೆ ಎನ್ನುವ ಪ್ರಶ್ನೆ. ಬೆಂಗಳೂರಿಗೆ ಮೊದಲ ಬಾರಿಗೆ ಅಂದರೆ 20 ವರ್ಷಗಳ ಹಿಂದೆ ಭೇಟಿಕೊಟ್ಟಾಗ, ನನಗೆ ಆ ಹೊಗೆ ತುಂಬಿದ ರಸ್ತೆಗಳು, ಲೆಕ್ಕವಿಲ್ಲದಷ್ಟು ವಾಹನಗಳ ಸಂಚಾರ, ಕಪ್ಪು ಹಿಡಿಯುತ್ತಿದ್ದ ಗಿಡ ಮರಗಳು, ಅನಧಿಕೃತ ಕಟ್ಟಡಗಳು ಕಲಬೆರಕೆಯ ಆಹಾರ ಪದಾರ್ಥಗಳ ಬಗೆಗಿನ ತನಿಖಾ ವರದಿಗಳು, ಕಳ್ಳತನ, ದರೋಡೆ, ಮಾನಭಂಗ ಎಲ್ಲವು ತಲೆಕೆಡಿಸಿ ಮಂಕಾಗಿಸಿದ್ದು ನಿಜ. ಮನೆ ಬಿಟ್ಟು ರಸ್ತೆಗೆ ಇಳಿದಾಗಲೆಲ್ಲ ಅಂಗವಸ್ತ್ರ ಹಿಡಿದು ಮೂಗು ಮುಚ್ಚಿ ಓಡಾಡಿದ ನೆನಪು ಇನ್ನು ಹಚ್ಚ ಹಸಿರು.
ಹಾಗೆಯೇ ವರ್ಷಗಳು ಉರುಳಿದ ಇತ್ತೀಚಿನ ಭೇಟಿ ಸಂದರ್ಭದಲ್ಲೂ ಈ ಎಲ್ಲ ಸಮಸ್ಯೆಗಳ ಬೆಟ್ಟ ಮತ್ತಷ್ಟು ಗಾಬರಿ ಹುಟ್ಟಿಸಿದ್ದು ಸತ್ಯವೇ. ಇವಾವುದರಲ್ಲೂ ಅತಿಶಯೋಕ್ತಿ ಇಲ್ಲ. ಇವಕ್ಕೆ ಪರಿಹಾರವೇ ಇಲ್ಲವೇ, ಪರಿಹಾರ ಎಂದು? ಎನ್ನುವ ಹೊತ್ತಿಗೆ, ಜಾತಿ ಧರ್ಮಗಳ ಸೋಂಕು ಮತ್ತಷ್ಟು ಗಾಢವಾಗಿ ದೇಶದ ಅಸ್ತಿತ್ವವನ್ನೇ ಬುಡಮೇಲು ಮಾಡಲು ಹೊರಟಿದ್ದು ಮತ್ತೊೊಂದು ರೀತಿಯ ಆಘಾತಕರ ಬೆಳವಣಿಗೆ. ಎಲ್ಲೆಲ್ಲೂ ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ವಿನಾಶಕಾರಿ ಬೆಳವಣಿಗಗಳು ನಮ್ಮ ಆಲೋಚನೆಗಳನ್ನೇ ಬದಲಿಸುತ್ತಿದ್ದುದು ಮತ್ತು ದೇಶ ಹೊರಟಿದ್ದ ಜಾಡು ನೋಡುತ್ತಾ ಮಾನಸಿಕ ರೋಗಿಯಾಗಿದ್ದಂತೂ ನಿಜ. ಸ್ನೇಹಿತರಲ್ಲಿ ಮನಬಿಚ್ಚಿ ಮಾತನಾಡಲು ಭಯ. ಎಲ್ಲಿ, ಯಾವ ಕಾರಣಕ್ಕೆ ಒಂದು ವರ್ಗ ಅಥವಾ ಒಂದು ಧರ್ಮಕ್ಕೆ ಸೀಮಿತ ಮಾಡುತ್ತಾರೋ ಎಂಬ ಅಳುಕು. ಒಟ್ಟಿನಲ್ಲಿ ಈ ವ್ಯವಸ್ಥೆಯಲ್ಲಿ ನಾವಿನ್ನು ಬದುಕಿದ್ದೇವೆ ಎನ್ನುವ ಜಿಜ್ಞಾಸೆ.
ಇಲ್ಲೂ ಒಂದು ರಾಜಕೀಯ ವ್ಯವಸ್ಥೆ ಇದೆ. ಚುನಾವಣೆಗಳು ನಡೆಯುತ್ತವೆ. ಚುನಾವಣೆ ನಡೆಯಿತೇ ಎನ್ನುವಮಟ್ಟಿಗೆ ಶಾಂತವಾಗಿ ಮುಗಿಯುತ್ತವೆ. ಬ್ಯಾನರ್‌ಗಳು, ನೂರಾರು ವಾಹನಗಳ ರಸ್ತೆ ಮೆರವಣಿಗೆ, ತಮಟೆಗಳ ಸದ್ದಿಲ್ಲದೇ, ಹಾರ ತುರಾಯಿಗಳ ಆರ್ಭಟಗಳಿಲ್ಲದೆ, ಹಿಂಬಾಲಕರ ಸೇನೆಗಳಿಲ್ಲದೆಯೇ ನಡೆದೇ ಹೋಗುತ್ತವೆ. ವ್ಯಕ್ತಿಪೂಜೆಗೆ ಆಸ್ಪದ ಇಲ್ಲಿಲ್ಲ. ರಾಜಕೀಯ ಪಕ್ಷ ಅಥವಾ ನಾಯಕ ಮಾಡಿದ ಕೆಲಸ ಮತ್ತು ಜನತೆಗೆ ನೀಡಿದ ಸೇವಾ ಕೊಡುಗೆ ನೋಡಿ ಆಯ್ಕೆಗೆ ಇಲ್ಲಿ ಆದ್ಯತೆ. ಎಲ್ಲೂ ಹೆಂಡ ಸಾರಾಯಿ, ಹಣ ಹಂಚಿದ ಸುಳಿವಿಲ್ಲದೆ ಪಕ್ಷ ಅಧಿಕಾರಕ್ಕೆ ಬರುತ್ತದೆ. ಸರಕಾರದ ನಾಯಕತ್ವವಹಿಸಿದ ಪಕ್ಷ ಅಥವಾ ಅಧಿಕಾರದ ಗಾದಿಯಲ್ಲಿ ಕೂತವನು ಏನೇ ಜನಪರ ಕೆಲಸ ಮಾಡಿದಾಗಲೂ, ಅದು ಅವನ ಕರ್ತವ್ಯ ಎಂದು ಪರಿಗಣಿಸುವರೇ ಹೊರತು ಹೆಗಲಮೇಲೆ ಅಥವಾ ತಲೆಯ ಮೇಲೆ ಹೊತ್ತೇನೂ ನಡೆಯುವುದಿಲ್ಲ. ಈ ರೀತಿ ಏಕೆ ನಮ್ಮಲ್ಲಿ ನಡೆದುಕೊಳ್ಳುವುದಿಲ್ಲ ಎನ್ನುವ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಕಾಡಿದಾಗಲೂ ತೆಪ್ಪಗಾಗುವ ಸ್ಥಿತಿ.
ಈಗ ಕರೋನಾ ಸರದಿ. ಹುಳುಗಳಂತೆ ಜನ ಸಾಯುತ್ತಿರುವ ಸಂದರ್ಭದಲ್ಲೂ ಧರ್ಮಗಳ ಗೊಂದಲಗಳು. ಯಾರು ಹೇಗೆ ನಡೆದುಕೊಳ್ಳುತ್ತಿದ್ದಾರೆ. ವಿಶ್ವದ ದೃಷ್ಟಿಯಲ್ಲಿ ಅವರುಗಳು ಹೀಗೆ ಕಾಣುತ್ತಿದ್ದಾರೆ ಎನ್ನುವ ಚಿತ್ರಣವನ್ನು ಈ ಕರೋನಾ ದಿನಗಳು ಎತ್ತಿ ತೋರುತ್ತಿದೆ.
ಆದರೆ, ವಿಶ್ವದಾದ್ಯಂತ ಸರಕಾರಗಳ ಕಠಿಣ ನಿರ್ಧಾರಗಳಿಂದಾಗಿ ಕರೋನಾಗೆ ಅಂತ್ಯ ಗೀತೆ ಹಾಡುವ ಉತ್ಕಟ ಮನಸ್ಥಿತಿ. ಜನತೆಗೆ ಮನೆಯಲ್ಲಿ ಇರಲು ಸೂಚನೆ ಇರುವುದರಿಂದಾಗಿ, ಎಷ್ಟೋ ಮನೆಗಳಲ್ಲಿ ಅಪ್ಪ – ಅಮ್ಮನ ಮುಖಗಳನ್ನು ಅಪರೂಪಕ್ಕೆ ನೋಡುತ್ತಿದ್ದ ಮಕ್ಕಳಿಗೆ ಅಥವಾ ಮನೆಯ ಇತರರಿಗೆ ಒಟ್ಟಿಗೆ ಸೇರಿರುವ ಅವಕಾಶ. ಹಲವು ಮನೆಗಳಲ್ಲಿ ಇದಕ್ಕೆೆ ತದ್ವಿರುದ್ಧವೂ ಆಗಿರಬಹುದು. ಆದರೂ, ಹೊಸ ಬದಲಾವಣೆ. ಇನ್ನು ರಸ್ತೆಗಿಳಿದರೆ ಯಾವ ಹೊಗೆಯ ಕಾಟ ಇಲ್ಲದೆ, ಕೇವಲ ಪ್ರಾಣ ಭಯಕ್ಕೆ, ಕರೋನಾ ಹೆದರಿಕೆಗೆ ಮೂಗಿಗೆ -ಬಾಯಿಗೆ ಮಾಸ್‌ಕ್ ಕಟ್ಟಿಕೊಳ್ಳಬೇಕಾಗಿದೆಯೇ ವಿನಃ ಶ್ವಾಸಕೋಶದ ಕಾಯಿಲೆಗಳಿಗೆ ರಜೆ ಕೊಟ್ಟು, ಸಾವಿನ ಭೀತಿ ಬಿತ್ತಿರುವ ಕರೋನಾ ವೈರಸ್‌ಗಷ್ಟೇ ಈಗ ಈ ಮಾಸ್‌ಕ್! ಅಷ್ಟೇ ಅಲ್ಲ, ಪೆಟ್ರೋಲ್, ಡೀಸೆಲ್‌ಗಳ ಸುಟ್ಟು ಹೊಗೆಯಾಡಿಸುತ್ತಿದ್ದ ವಾಹನಗಳ, ಕಾರ್ಖಾನೆಗಳ ಸೊಲ್ಲಡಗಿದೆ. ವಿಶ್ವದಾದ್ಯಂತ ಅಪಘಾತ-ಅವಘಡಗಳಿಂದಾಗಿ ಸಂಭವಿಸುತ್ತಿದ್ದ ಸಾವು – ನೋವುಗಳು ತಪ್ಪಿವೆ. ಸಾವಿರಾರು ಜೀವಗಳು ಉಳಿಯಿತಲ್ಲ ಎನ್ನುವ ಧನ್ಯತೆಯ ಭಾವ. ಇಷ್ಟೆೆಲ್ಲ ತಪ್ಪಿರುವುದರಿಂದ ದೇಶಕ್ಕೆ ನಾಶದ ಅಂಚಿಗೆ ಈ ಕರೋನಾ ದೂಡುತ್ತಿದೆ ಅನ್ನುವ ಭೀತಿ ಇದ್ದರೂ ಮತ್ತೊೊಂದು ಕಡೆಯಲ್ಲಿ ಸಾವು – ನೋವುಗಳು ತಪ್ಪಿತಲ್ಲ ಅನ್ನುವ ಸಮಾಧಾನ. ವ್ಯವಸ್ಥೆ ಬದಲಿಸಿಕೊಳ್ಳಲು ಆತ್ಮಾವಲೋಕನ ಮಾಡಿಕೊಂಡು, ಶಾಶ್ವತ ಯೋಜನೆಗಳನ್ನು ರೂಪಿಸಲು ಇದೊಂದು ಸುವರ್ಣಾವಕಾಶ.
ಇನ್ನು ಕಳ್ಳತನ, ಕುಡಿತ, ವೇಶ್ಯಾವಾಟಿಕೆ, ಕೊಲೆ, ಸುಲಿಗೆ ಎಲ್ಲಕ್ಕೂ ಒಂದು ವಿಧದಲ್ಲಿ ಕರೋನಾ ವೈರಸ್ ಸಾಮೂಹಿಕ ರಜೆಕೊಟ್ಟಿದೆ. ದುಂದು ವೆಚ್ಚದಲ್ಲಿ ಮದುವೆ ಮುಂಜಿಗಳ ಕಾಟವಿಲ್ಲ , ಉಂಡು ತೇಗುವ ಕೂಟಗಳು ಇಲ್ಲವೇ ಇಲ್ಲ. ಬಾರುಗಳು ಹಾಕಿದ ಬಾಗಿಲುಗಳು ತೆರೆದಿಲ್ಲ. ಇನ್ನು ಕುಣಿದು ಕುಪ್ಪಳಿಸುವ ಮಾತೆಲ್ಲಿಂದ ಬರಬೇಕು. ಇಂತಹ ಅನೇಕ ದೊಡ್ಡ ಕೆಲಸಗಳಿಗೆ ಪೂರ್ಣ ರಜೆ ಈಗ! ಇವೆಲ್ಲದರ ಉಳಿತಾಯ ಒಂದೆಡೆ ಆದರೆ, ಕರೋನಾ ಹೆಸರಿನಲ್ಲಿ ಲೂಟಿ ಆಗುತ್ತದೆಯೇ ಅನ್ನುವ ಭೀತಿ ಇದ್ದೆ ಇದೆ.
ಇನ್ನು ಈಗ, ಮೇಲ್ಜಾತಿ-ಕೆಳಜಾತಿ ಬೇಧವಿಲ್ಲ. ಒಬ್ಬರನ್ನು ಮತ್ತೊಬ್ಬರನ್ನು ಮುಟ್ಟಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಮೇಲ್ಜಾತಿಯವರೂ ಅಸ್ಪಶ್ಯರೇ! ಧನ್ಯವಾದ ಕರೋನಾ ಎಂದು ಹೇಳಬೇಕೆನಿಸಿದರೂ, ಮನುಷ್ಯನ ಪ್ರಾಣ ವಿರೋಧಿ ಕರೋನಾ ವೈರಸ್ ಅಂತ್ಯಗೊಳಿಸುವ ಕೆಲಸ ಆಗಬೇಕಿದೆ. ಇಲ್ಲವಾದಲ್ಲಿ ಮನುಷ್ಯ ವಿರೋಧಿ ಪಟ್ಟಿಗೆ ಸೇರಿಕೊಳ್ಳಬೇಕಾಗುತ್ತದೆ.
ಇಡೀ ವಿಶ್ವದ ಆರ್ಥಿಕ ಸ್ಥಿತಿಯನ್ನೇ ಬುಡಮೇಲು ಮಾಡಲು ಹೊರಟಿರುವ ಕರೋನಾ ವೈರಸ್ ಈಗ ನಾಶವಾಗುವ ಕಾಲ ಸನ್ನಿಹಿತ. ಎಲ್ಲರ ಬಯಕೆ-ಪ್ರಾರ್ಥನೆ ಕೂಡ ಇದೆ. ಆದರೆ, ಮನುಷ್ಯ ನಿರ್ಮಿತ ಅನೇಕ ಸಮಸ್ಯಗಳಿಗೆ-ಗೋಡೆಗಳಿಗೆ ನಿಲುಗಡೆ ಹಾಕಿದ ಕರೋನಾ ವೈರಸ್, ಈಗ ಮನುಷ್ಯನ ಎಲ್ಲ ಆಘಾತಕಾರಿ ಕರ್ಮಗಳಿಗೆ ಇತಿಶ್ರೀ ಹಾಡಿಸಿ, ಹೊಸ ದಾರಿ ತೋರಬೇಕು. ಈಗ ಕರೋನ ಕಾಲ. ಇದರ ಅಂತ್ಯ ಆಗಲೇ ಬೇಕು. ಈ ಅವಧಿಯಲ್ಲಿ ಹೊಸ ಬದಲಾಣೆಗಳು ಮಾನವ ಜನಾಂಗವನ್ನು ಉಳಿಸಬೇಕು. ಮನುಷ್ಯನ ಜ್ಞಾನೋದಯಕ್ಕೆ ಪರ್ವಕಾಲ, ನಾವುಗಳು ಆಶಾವಾದಿಗಳಲ್ಲವೇ, ಮನುಷ್ಯನ – ಬದುಕು ಹಸನಾಗಬೇಕು.