Friday, 13th December 2024

ಈಗ ಶುರುವಾಗಲಿದೆ ನಿಜವಾದ ಕರೋನಾ ಪರಿಣಾಮ‌

– ರಂಜಿತ್ ಎಚ್. ಅಶ್ವತ್ಥ

ಇಡೀ ವಿಶ್ವ ಇದೀಗ ಕರೋನಾ ಹೆಸರಲ್ಲಿ ಒಂದಾಗಿದೆ. ಹಲವು ಶತ್ರು ರಾಷ್ಟ್ರಗಳು ಕರೋನಾ ವಿರುದ್ಧ ಹೋರಾಟಕ್ಕೆ ಒಂದಾಗಿವೆ. ಕಣ್ಣಿಗೆ ಕಾಣದ ಶತ್ರುವನ್ನು ಮಟ್ಟ ಹಾಕಲು ಭಾರತ ಸೇರಿದಂತೆ ವಿಶ್ವದ ಎಲ್ಲ ರಾಷ್ಟ್ರಗಳು ಕಳೆದ ಎರಡುಮೂರು ತಿಂಗಳಿನಿಂದ ಸತತ ಹೋರಾಟ ನಡೆಸುತ್ತಲೇ ಇವೆ. ಆದರೂ ಕಡಿಮೆಯಾಗುವ ಲಕ್ಷಣಗಳಿಲ್ಲ.

ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಕರೋನಾಕ್ಕೆೆ ಇಲ್ಲಿಯವರೆಗೆ ಹೆಚ್ಚು ತೊಂದರೆಗೆ ಒಳಗಾಗಿಲ್ಲ. ಇತರೆ ರಾಷ್ಟ್ರಗಳು ಕರೋನಾಕ್ಕೆೆ ಪತರಿಗುಟ್ಟಿಹೋಗಿದ್ದರೂ ಭಾರತ ಮಾತ್ರ ಈಗಲೂ ಕರೋನಾ ಎದುರಿಸಲು ಸಿದ್ಧ ಎನ್ನುವ ಮಾತನ್ನು ಹೇಳುತ್ತಿದೆ. ಇದಕ್ಕೆೆ ಕಾರಣ ದೇಶದಲ್ಲಿ ಆರಂಭಿಕ ಹಂತದಲ್ಲಿಯೇ ಹಾಕಿದ ಲಾಕ್‌ಡೌನ್. ಆದರೆ ಲಾಕ್‌ಡೌನ್‌ನಿಂದ ದೇಶದಲ್ಲಿ ಭಾರಿ ಸಮಸ್ಯೆೆ ಉದ್ಭವಿಸಿದೆ. ಆರ್ಥಿಕವಾಗಿ ದೇಶ ನೆಲಕಚ್ಚಿದೆ. ಈ efffect ಸುಧಾರಿಸಿಕೊಳ್ಳಲು ಹಲವು ವರ್ಷಗಳು ಬೇಕು ಎನ್ನುವ ಮಾತನ್ನು ವಿಶ್ಲೇಷಕರು ಹೇಳುತ್ತಿದ್ದಾರೆ. ಆದರೆ ನಿಜವಾದ ಅರ್ಥದಲ್ಲಿ ಕರೋನಾದ ಹೊಡೆತ ಇಲ್ಲಿಯವರೆಗೆ ದೇಶದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ದೇಶದೆಲ್ಲೆೆಡೆ ಲಾಕ್‌ಡೌನ್ ಸಡಿಲಿಕೆಯಾಗುತ್ತಿರುವುದರಿಂದ, ನಿಜವಾದ ಕರೋನಾ ಎಫೆಕ್‌ಟ್‌ ಮುಂದಿನ ಕೆಲ ತಿಂಗಳಲ್ಲಿ ಗೋಚರವಾಗಲಿದೆ.

ಅನೇಕರು ಕಳೆದ 45 ದಿನಗಳಿಂದ ತಾವು ಮನೆಯಲ್ಲಿಯೇ ಕುಳಿತು ಕರೋನಾ ವಿರುದ್ಧ ಹೋರಾಡಿದ್ದೇವೆ. ಇನ್ನು ಕರೋನಾ ಕೈಯಲ್ಲಿ ನಮ್ಮನ್ನು ಏನು ಮಾಡಿಕೊಳ್ಳಲು ಸಾಧ್ಯವಿಲ್ಲ. ಆಗಿರುವ ಕೊಂಚ ನಷ್ಟವನ್ನು ಮುಂದಿನ ಕೆಲದಿನದಲ್ಲಿ ಸರಿಪಡಿಸಿಕೊಂಡು, ಕರೋನಾ ಬರುವುದಕ್ಕೆ ಮೊದಲಿದ್ದ ಜೀವನ ಶೈಲಿಗೆ ನಾವೆಲ್ಲ ಇನ್ನೆರೆಡು ವಾರದಲ್ಲಿ ಮರಳಬಹುದು ಎನ್ನುವ ಭ್ರಮೆಯಲ್ಲಿದ್ದಾಾರೆ. ಆದರೆ ಇದು ನಿಜವೂ ಸಾಧ್ಯವೇ ಎನ್ನುವುದಕ್ಕೆ ಉತ್ತರ ‘ಇಲ್ಲ’ ಎನ್ನಬಹುದು.
ಯಾಕೆಂದರೆ, ಇದೀಗ ಕರೋನಾ ವಿರುದ್ಧದ ಲಾಕ್‌ಡೌನ್ ಹೋರಾಟವನ್ನು ಕೇಂದ್ರ ಸರಕಾರ ಬಹುತೇಕ ಮುಂದಿನ ವಾರದಲ್ಲಿ ಮುಗಿಸಲಿದೆ. ಬಳಿಕ ಜನರ ತಮ್ಮ ಜಾಗೃತೆಯಲ್ಲಿ, ಸರಕಾರ ಲಸಿಕೆ ತಯಾರಿಸುವತ್ತ ಹಾಗೂ ಕರೋನಾಕ್ಕೆ ತುತ್ತಾದವರಿಗೆ ಸೂಕ್ತ ಆರೈಕೆ ಮತ್ತು ದೇಶದ ಆರ್ಥಿಕತೆಯನ್ನು ಪುನಃ ಮೇಲಕ್ಕೆೆ ಎತ್ತುವುದಕ್ಕೆ ಆಗಬೇಕಿರುವ ಕೆಲಸದತ್ತ ಹೆಚ್ಚು ಗಮನಹರಿಸಲಿದೆ. ಆದ್ದರಿಂದ 17ರ ಬಳಿಕ ಸಾರ್ವಜನಿಕರ ಸಾರಿಗೆ ವ್ಯವಸ್ಥೆಗೂ ಅವಕಾಶ ನೀಡುವ ಮೂಲಕ ಕಳೆದ ಒಂದುವರೆ ತಿಂಗಳಿನಿಂದ ಸ್ತಬ್ಧವಾಗಿದ್ದ ಭಾರತ ಮತ್ತೆ ಎಂದಿನ ಸಹಜ ಸ್ಥಿತಿಗೆ ಏನೋ ಬರಲಿದೆ. ಆದರೆ ಕಳೆದ 45 ದಿನಗಳಲ್ಲಿ ದೇಶದ ಆರ್ಥಿಕ, ಕೈಗಾರಿಕಾ, ಉದ್ಯಮ, ಬಂಡವಾಳ, ಸಾರ್ವಜನಿಕರ ಜನಜೀವನದ ಮೇಲಾಗಿರುವ ಪರಿಣಾಮ ಊಹಿಸಲು ಸಾಧ್ಯವಿಲ್ಲ. ಈಗಿನ್ನು ಲಾಕ್‌ಡೌನ್ ಸಡಿಲಿಕೆ ಪೂರ್ಣಗೊಳ್ಳದಿರುವುದರಿಂದ ಇದರ ಹೊಡೆತ ಏನು ಎನ್ನುವುದು ಅನೇಕರ ಅರಿವಿಗೆ ಬಂದಿರಲಿಕ್ಕಿಲ್ಲ. ಕೆಲವರು ಭಾರತ 10 ವರ್ಷ ಹಿಂದೆ ಹೋಗಿದೆ, ಆರ್ಥಿಕತೆ 20 ವರ್ಷ ಹಿಂದೆ ಹೋಗಿದೆ ಎನ್ನುವ ವಿಶ್ಲೇಷಣೆ ಮಾಡುತ್ತಿದ್ದಾರೆ. ಆದರೆ ನಿಜವಾಗಿ ಏನಾಗಿದೆ ಎನ್ನುವುದು ಎಲ್ಲ ಬಂಧನಗಳು (ಲಾಕ್‌ಡೌನ್) ಸಡಿಲಿಕೆಯಾದ ಬಳಿಕವೇ ತಿಳಿಯಲಿದೆ.

ಕರೋನಾ ಲಾಕ್‌ಡೌನ್‌ನಿಂದ ಮನೆಯ ಕಟ್ಟುವ ಮೇಸ್ತ್ರಿಯಿಂದ ಹಿಡಿದು ಭಾರತ ಶ್ರೀಮಂತ ಉದ್ಯಮಿ ಅಂಬಾನಿ ತನಕ ನಷ್ಟ ಅನುಭವಿಸಿದ್ದಾರೆ. ವಿಶ್ವದೆಲ್ಲೆಡೆ ಕರೋನಾದಿಂದ ಸಂಪೂರ್ಣ ಉದ್ಯಮ ನೆಲಕಚ್ಚಿರುವುದರಿಂದ, ಕೋಟ್ಯಂತರ ರುಪಾಯಿ ವಹಿವಾಟಿನ ಪ್ರಾಜೆಕ್‌ಟ್‌‌ಗಳು ಸದ್ದಿಲ್ಲದೇ ಹಿಂದಕ್ಕೆ ಹೋಗಿವೆ. ಕೈಗಾರಿಕೆಗಳ ಯಂತ್ರ ಸದ್ದು ಮಾಡದೇ ತಿಂಗಳು ಕಳೆಯುತ್ತಾ ಬಂದಿರುವುದರಿಂದ, ಕೈಗಾರಿಕೋದ್ಯಮಿಗಳು ತಲೆ ಮೇಲೆ ಕೈಹೊತ್ತು ಕೂತಿದ್ದಾರೆ. ಕರೋನಾ ಹೊಡೆತಕ್ಕೆ ಸಿಲುಕಿ ನರಳುತ್ತಿರುವ ಸಾಲಿನಲ್ಲಿ ಈ ಕ್ಷೇತ್ರವಿಲ್ಲ ಎನ್ನಲು ಸಾಧ್ಯವಿಲ್ಲ. ಆ ಮಟ್ಟದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಕರೋನಾ ತಿಂದು ಹಾಕಿದೆ. ಇದರ ಪರಿಣಾಮ ಏನು? ಇದರಿಂದ ಜನಸಾಮಾನ್ಯರ ಮೇಲಾಗುವ ಪರಿಣಾಮ ತಿಳಿಯಲು ಇನ್ನೆರೆಡು ತಿಂಗಳು ಅಗತ್ಯ.

ಕೋಟ್ಯಂತರ ರುಪಾಯಿ ಲೆಕ್ಕದಲ್ಲಿ ನಷ್ಟ ಅನುಭವಿಸಿರುವ ಬಹುತೇಕ ಕಂಪನಿಗಳು ತಮ್ಮ ಸಂಸ್ಥೆಗಳನ್ನು ಉಳಿಸಿಕೊಳ್ಳುತ್ತಿರುವ ಏಕೈಕ ಮಾರ್ಗವೆಂದರೆ, ಕಾಸ್‌ಟ್‌ ಕಟ್ಟಿಿಂಗ್. ಕಾಸ್‌ಟ್‌ ಕಟ್ಟಿಿಂಗ್ ಮೊದಲ ಹಂತವೇ ಸಂಸ್ಥೆಯಲ್ಲಿರುವ ಉದ್ಯೋಗಿಗಳನ್ನು ಮನೆಗೆ ಕಳುಹಿಸುವುದು. ಸದ್ಯಕ್ಕೆ ಯಾರನ್ನು ಕೆಲಸದಿಂದ ತಗೆಯಬಾರದು ಎನ್ನುವ ಕಟ್ಟುನಿಟ್ಟಿನ ಸೂಚನೆಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ನೀಡಿರುವುದರಿಂದ, ಅನೇಕ ಸಂಸ್ಥೆಗಳು ಹಾಗೂ ಹೀಗೂ ತಮ್ಮ ನೌಕರರನ್ನು ಸಾಕುತ್ತಿದೆ. ಆದರೆ ಇನ್ನು ಅನೇಕ ಸಂಸ್ಥೆಗಳು ಈಗಾಗಲೇ ಸದ್ದಿಲ್ಲದೇ ಈ ಕೆಲಸಕ್ಕೆ ಕೈಹಾಕಿದೆ. ಮುಂದಿನ ದಿನದಲ್ಲಿ ಲಾಕ್‌ಡೌನ್ ಸಡಿಲಿಕೆಯಾಗಿ ಕೆಲ ದಿನ ಕಳೆಯುತ್ತಿದ್ದಂತೆ, ಬಹುತೇಕ ಸಂಸ್ಥೆೆಗಳು ಉದ್ಯೋಗಿಗಳಿಗೆ ‘ಪಿಂಕ್ ಸ್ಲಿಪ್’ ಕೊಡಲು ಶುರು ಮಾಡುವುದರಲ್ಲಿ ಅನುಮಾನವೇ ಇಲ್ಲ. ಒಂದು ವೇಳೆ ಇದನ್ನು ಮಾಡದೇ ಹೋದರೆ, ಸಂಸ್ಥೆೆ ಮುಚ್ಚುವ ಹಂತಕ್ಕೆ ಬರುತ್ತವೆ. ಇದಕ್ಕೆ ಕಾರಣ ಹುಡುಕಿದರೆ ಕರೋನಾದ ಹೊಡೆತಕ್ಕೆ ಮೂರು ತಿಂಗಳು ವ್ಯವಹಾರವೇ ನಡೆದಿಲ್ಲ. ಅಂದರೆ ಆರ್ಥಿಕ ವರ್ಷದ ಒಂದು ತ್ರೈಮಾಸಿಕದಲ್ಲಿ ಕಂಪನಿಗಳಿಗೆ ಬಂದಿರುವ ಮೊತ್ತ ‘ಶೂನ್ಯ’. ಆದರೆ ಖರ್ಚು ಮಾತ್ರ ಎಂದಿನಂತಿದೆ. ಹಾಕಿದ ಬಂಡವಾಳವೂ ಬಾರದೇ ಬರಿ ಕೈಯಲ್ಲಿ ಕುಳಿತಿರುವ ಬಹುತೇಕ ಉದ್ಯಮಿಪತಿಗಳು ಇದೀಗ ಕಾಸ್‌ಟ್‌ ಕಟ್ಟಿಿಂಗ್ ಮೂಲಕ ತಮ್ಮ ನಷ್ಟ ಸರಿದೂಗಿಸಿಕೊಳ್ಳಲು ಮುಂದಾಗುತ್ತಾಾರೆ. ಇದರಿಂದ ಸಹಜವಾಗಿ ದೇಶದಲ್ಲಿ, ರಾಜ್ಯದಲ್ಲಿ ನಿರುದೋಗ್ಯ ಸಮಸ್ಯೆೆ ಹೆಚ್ಚಾಗುತ್ತದೆ. ಆದರೆ ಈ ಯಾವ ಸಮಸ್ಯೆೆಯೂ ಕೇವಲ ಭಾರತದಲ್ಲ. ಇಡೀ ವಿಶ್ವದ್ದು. ಈಗಾಗಲೇ ಯುಕೆ, ಯುಎಸ್‌ಎ ಅಂತಹ ಅಭಿವೃದ್ಧಿ ಹೊಂದಿದ ದೇಶದಲ್ಲಿಯೇ ಲಕ್ಷಾಾಂತರ ಮಂದಿಗೆ ಕೆಲಸವಿಲ್ಲದೇ, ಅವರನ್ನು ಕಂಪನಿಗಳು ಮನೆಗೆ ಕಳುಹಿಸಿವೆ. ಮುಂದಿನ ಕೆಲ ತಿಂಗಳಲ್ಲಿ ಇದು ಭಾರತದಲ್ಲಿಯೂ ಆಗಲಿದೆ.

ಇನ್ನು ಸಾಫ್‌ಟ್‌‌ವೇರ್, ಎಂಎನ್‌ಸಿ ಸಂಸ್ಥೆಗಳು ಈ ರೀತಿ ಕೆಲಸದಿಂದ ತಗೆದು ಹಾಕಿ ದೇಶ ಹಾಗೂ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುವುದು ಒಂದು ಭಾಗವಾದರೆ, ಕರೋನಾ ಹೊಡೆತಕ್ಕೆ ಸಿಲುಕಿ ಊರುಗಳತ್ತ ಹೋಗಿರುವ ಅನೇಕ ವಲಸೆ ಕಾರ್ಮಿಕರಿಂದ ಆಗುವ ಸಮಸ್ಯೆೆ ಮತ್ತೊೊಂದು. ಪ್ರಮುಖವಾಗಿ ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಮೆಟ್ರೋಪಾಲಿಟನ್ ನಗರಗಳಲ್ಲಿ ಕಟ್ಟಡ ಕಾಮಗಾರಿ ಕೆಲಸದಲ್ಲಿ ತೊಡಗಿಕೊಂಡವರು ಹಲವು ರಾಜ್ಯಗಳಿಂದ ಬಂದಿರುವ ವಲಸೆ ಕಾರ್ಮಿಕರು. ಅದರಲ್ಲೂ ಬೆಂಗಳೂರು, ಮುಂಬೈ ನಗರದಲ್ಲಿ ಉತ್ತರ ಭಾರತ ಹಾಗೂ ಈಶಾನ್ಯ ರಾಜ್ಯಗಳಿಂದ ಕೆಲಸ ಅರಸಿ ಬಂದವರ ಸಂಖ್ಯೆ ಸಾಕಷ್ಟಿದೆ. ಈಗ ಈ ರೀತಿ ಕೆಲಸಕ್ಕಾಾಗಿ ಬಂದಿರುವ ಬಹುತೇಕ ವಲಸೆ ಕಾರ್ಮಿಕರು, ಕರೋನಾದ ರುದ್ರನರ್ತನಕ್ಕೆ ಬೆದರಿ, ‘ನಮ್ಮೂರೇ ನಮಗೆ ಚೆಂದ’ ಎಂದು ಕೊಂಡು ತಮ್ಮೂರುಗಳತ್ತ ಮುಖಮಾಡಿದ್ದಾಾರೆ. ಅವರನ್ನು ಸುರಕ್ಷಿತವಾಗಿ ಕಳುಹಿಸುವ ಜವಾಬ್ದಾರಿಯನ್ನು ಸರಕಾರ ಹೊತ್ತಿವೆ ಎನ್ನುವುದು ಬೇರೆ ಮಾತು.

ಆದರೀಗ ಈ ರೀತಿ ವಲಸೆ ಬಂದ ಕಾರ್ಮಿಕರು ತಮ್ಮೂರಿಗೆ ವಾಪಸು ಹೋಗುತ್ತಿರುವುದರಿಂದ, ನಗರಗಳಲ್ಲಿ ಕಟ್ಟಡ ಕಾಮಗಾರಿಗೆ ಕಾರ್ಮಿಕರ ಕೊರತೆ ಎದುರಾಗುತ್ತದೆ. ಈ ರೀತಿ ಕಾರ್ಮಿಕರ ಕೊರತೆಯಿಂದ ಮೇಲ್ನೋಟಕ್ಕೆ ಕಟ್ಟಡ ಮಾಲೀಕರಿಗೆ ಸಮಸ್ಯೆಯಾಗುತ್ತದೆ ಎಂದು ಕೊಂಡರೂ, ಒಳಹೊಕ್ಕಿ ನೋಡಿದರೆ ಇದು ದೊಡ್ಡ ಸಮಸ್ಯೆ. ಉದಾಹರಣೆಗೆ ಐದು ಅಂತಸ್ತಿನ ಒಂದು ಮನೆಯನ್ನು ಕಟ್ಟಲು ವರ್ಷದ ಅವಧಿ ಅಗತ್ಯವಿರುತ್ತದೆ. ಆದರೆ ಕಾರ್ಮಿಕರ ಕೊರತೆಯಿಂದ ನಿರ್ಮಾಣ ಕಾಮಗಾರಿ ತಡವಾಗುತ್ತಾ ಸಾಗುತ್ತದೆ. ಈ ರೀತಿ ತಡವಾಗುತ್ತಿದ್ದಂತೆ, ಒಂದು ವರ್ಷದಲ್ಲಿ ಮುಗಿಯಬೇಕಾದ ಕೆಲಸ ಎರಡು ವರ್ಷ ಹಿಡಿಯಬಹುದು. ಆದರೆ ಬ್ಯಾಾಂಕಿನಲ್ಲಿ ಇಂತಿಷ್ಟು ತಿಂಗಳ ಬಳಿಕ ಸಾಲ ಮರುಪಾವತಿಸುತ್ತಾ ಹೋಗಬೇಕು. ಇದರಿಂದ ಮನೆ ಮಾಲೀಕರಿಗೆ ಹೆಚ್ಚುವರಿ ಹೊಡೆತ.

ಇನ್ನು ಖಾಸಗಿ ಕಟ್ಟಡ ಕಾಮಗಾರಿಯ ರೀತಿಯಲ್ಲಿಯೇ ಸರಕಾರಿ ಕಾಮಗಾರಿಗಳು ವಿಳಂಬವಾಗುತ್ತಾ ಸಾಗುತ್ತದೆ. ಇದರಿಂದ ಯೋಜನಾ ವೆಚ್ಚ ಹೆಚ್ಚಾಗುತ್ತಾ ಸಾಗುತ್ತದೆ. ಆದರೆ ಈ ಹೆಚ್ಚುವರಿ ಮೊತ್ತವನ್ನು ಸರಕಾರ ಅನಿವಾರ್ಯವಾಗಿ ಹೋರಬೇಕು. ಈ ರೀತಿ ಯೋಜನಾ ವೆಚ್ಚಕ್ಕೆ ಬೊಕ್ಕಸದ ಹಣವನ್ನು ಹಾಕುತ್ತಾ ಹೋದರೆ, ಇತರೆ ಅಭಿವೃದ್ಧಿ ಯೋಜನೆಗಳಿಗೆ ಇದರ ನೇರ ಪರಿಣಾಮ ಬೀರುವುದರಲ್ಲಿ ಅನುಮಾನವೇ ಇಲ್ಲ.

ಇನ್ನು ತಮ್ಮೂರಿಗೆ ತೆರಳಿರುವ ವಲಸೆ ಕಾರ್ಮಿಕರ ಎಷ್ಟು ದಿನಕ್ಕೆ ವಾಪಸಾಗುತ್ತಾರೆ ಎನ್ನುವುದು ದೇವರಿಂದಲೂ ಊಹಿಸಲು ಸಾಧ್ಯವಿಲ್ಲ. ಅನೇಕರು ಈ ರೀತಿಯ ಅತಂತ್ರ ಸ್ಥಿತಿಗಿಂತ ನಮ್ಮೂರಲ್ಲಿ ಇರುವುದೇ ಲೇಸೆಂದು ವಾಪಸಾಗದೆಯೂ ಇರಬಹುದು. ಈ ರೀತಿ ಆಗುವುದರಿಂದ ಇಲ್ಲಿರುವ ಕಾರ್ಮಿಕರಿಗೆ ಡಿಮ್ಯಾಾಂಡ್ ಹೆಚ್ಚಾಗಲಿದ್ದು, ಅವರನ್ನು ಸಾಕುವುದು ಮಾಲೀಕರಿಗೆ ಹೊರೆಯಾಗುವುದನ್ನು ತಳ್ಳಿಹಾಕುವಂತಿಲ್ಲ.

ಈ ಎಲ್ಲ ಸಮಸ್ಯೆ ರಿಯಲ್ ಎಸ್ಟೇಟ್ ಉದ್ಯಮಿಗಳದ್ದು ಅಥವಾ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದ ಮಾಲೀಕರದ್ದು. ಆದರೆ ತಮ್ಮೂರಿಗೆ ತೆರಳಿದ ಕಾರ್ಮಿಕರ ಜೀವನವೂ ಹೂವಿನ ಹಾಸಿಗೆಯಲ್ಲ ಎನ್ನುವುದನ್ನು ಮರೆಯುವಂತಿಲ್ಲ. ಕರೋನಾ ಆತಂಕಕ್ಕೆ ಹೋಗಿರುವ ಅನೇಕರು, ತಮ್ಮ ಜೀವನವನ್ನು ಹಳ್ಳಿಗಳ್ಳಲ್ಲಿ ಕಟ್ಟಿಕೊಳ್ಳಲು ನಿರ್ಧರಿಸಿದ್ದಾರೆ. ಆದರೆ ಈ ರೀತಿಯ ನಿರ್ಧಾರದೊಂದಿಗೆ ಹಳ್ಳಿಗೆ ಹೋಗಿರುವ ಜನರಿಗೆ ಜೀವನ ಕಲ್ಪಿಸುವ ಶಕ್ತಿ ನಮ್ಮ ಹಳ್ಳಿಗಳಿಗೆ ಇದೆಯೇ ಎನ್ನುವುದನ್ನು ಯೋಚಿಸಬೇಕಿದೆ. ಭಾರತದ ಗ್ರಾಮಗಳು ಈಗಲೂ ಅನೇಕ ಸಮಸ್ತೆಗಳನ್ನು ಅನುಭವಿಸುತ್ತಿದ್ದು, ಅಲ್ಲಿ ಜೀವನ ಕಟ್ಟಿಕೊಳ್ಳುವುದು ಸುಲಭದ್ದಾಗಿಲ್ಲ. ಕೃಷಿ ಮಾಡಿಕೊಂಡು ಜೀವ ಸಾಗಿಸುತ್ತೇವೆ ಎಂದು ಹೇಳಲು, ಅನೇಕರ ಬಳಿ ಜಮೀನಿರುವುದಿಲ್ಲ. ಇದ್ದರೂ ಅದು ನೀರಾವರಿ ಆಗಿರುವುದಿಲ್ಲ. ಇದೆಲ್ಲ ಇದ್ದರೂ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುವುದಿಲ್ಲ ಎನ್ನುವ ಅಪವಾದವಿದೆ. ಈಗಿರುವ ರೈತರೇ ಕೃಷಿಯನ್ನು ನಡೆಸುವುದು ಕಷ್ಟ ಎನ್ನುತ್ತಿರುವಾಗ, ಹೊಸದಾಗಿ ಹೋಗಿ ಕೃಷಿ ಆರಂಭಿಸುತ್ತೇನೆ ಎನ್ನುವ ಸ್ಥಿತಿ ಇನ್ನಷ್ಟು ದುರ್ಲಬ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.

ಕೆಲಸ ಕಡಿತ, ಕಾರ್ಮಿಕರ ಕೊರತೆ, ಸಂಬಳ ಕಡಿತ ಇದೆಲ್ಲ ಒಂದು ಭಾಗವಾದರೆ, ಕರೋನಾದಿಂದ ತಪ್ಪಿಸಿಕೊಳ್ಳುವುದರ ಬಗ್ಗೆಯೂ ನಾವು ಯೋಚಿಸಬೇಕಿದೆ. ಕರೋನಾ ಹೋಗುವ ತನಕ ದೇಶದ ಬಾಗಿಲು ಬಂದ್ ಮಾಡುತ್ತೇವೆ ಎನ್ನುವ ಉದ್ದಟತನವನ್ನು ತೋರಲು ಕೇಂದ್ರದಿಂದ ಆಗುವುದಿಲ್ಲ ಅಥವಾ ಯಾವ ರಾಜ್ಯದಿಂದಲೂ ಸಾಧ್ಯವಿಲ್ಲ. ಒಂದು ದಿನ ಈ ರೀತಿ ಲಾಕ್‌ಡೌನ್ ಮಾಡುವುದರಿಂದಲೇ ಲಕ್ಷಾಾಂತರ ಕೋಟಿ ನಷ್ಟವಾಗುವಾಗ ಇಡೀ ದೇಶವನ್ನು 45 ದಿನ ಲಾಕ್‌ಡೌನ್ ಮಾಡಿ, ಮತ್ತಷ್ಟು ದಿನ ಲಾಕ್‌ಡೌನ್ ಮುಂದುವರಿಸಬೇಕು ಎನ್ನಲು ಸಾಧ್ಯವಿಲ್ಲ. ಅಭಿವೃದ್ಧಿಿ ಹೊಂದಿದ, ವಿಶ್ವದ ದೊಡ್ಡಣ್ಣ ಎನಿಸಿಕೊಂಡ ಅಮೆರಿಕವೇ ಇಡೀ ದೇಶವನ್ನು ಲಾಕ್‌ಡೌನ್ ಮಾಡಲು ಇನ್ನು ಮುಂದಾಗಿಲ್ಲ. ಇದಕ್ಕೆೆ ಕಾರಣ, ಲಾಕ್‌ಡೌನ್‌ನಿಂದ ದೇಶದ ಆರ್ಥಿಕತೆಯಲ್ಲಾಾಗುವ ತಲ್ಲಣವೆಂದು ಬಿಡಿಸಿ ಹೇಳಬೇಕಿಲ್ಲ.

ಆದ್ದರಿಂದ ಕೇಂದ್ರ ಸರಕಾರ ಎರಡು ಬಾರಿ ಲಾಕ್‌ಡೌನ್‌ನ್ನು ಕಟ್ಟುನಿಟ್ಟಾಗಿ ಮಾಡಿ, ಇದೀಗ ಮೂರನೇ ಹಂತದ ಲಾಕ್‌ಡೌನ್ ಅವಧಿಯಲ್ಲಿ. ಹಂತಹಂತವಾಗಿ ದೈನಂದಿನ ಚಟುವಟಿಕೆಗೆ ಅವಕಾಶ ನೀಡುವುದಕ್ಕೆ ಬಳಸಿಕೊಂಡಿದೆ. ಇದೀಗ ಲಾಕ್‌ಡೌನ್ ಸಡಿಲಿಕೆ ಮಾಡಿರುವುದಿರಂದ ಈ ಹಂತದಲ್ಲಿ ಕರೋನಾ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಲಾಕ್‌ಡೌನ್ ಸಡಿಲಿಕೆಯಾಗುತ್ತಿದ್ದಂತೆ, ಕರೋನಾ ಹೋಯಿತು ಎಂದಲ್ಲ. ಇದು ಹೋಗುವುದೂ ಇಲ್ಲ. ಬೇರೆ ಕಾಯಿಲೆಗಳ ರೀತಿಯಲ್ಲಿಯೇ ಕರೋನಾ ಸಹ ನಮ್ಮಲ್ಲಿಯೇ ಉಳಿಯುತ್ತದೆ. ಆದ್ದರಿಂದ ನಾವೀಗ ಮಾಡಬೇಕಿರುವುದು ಕರೋನಾ ಜತೆಯಲ್ಲಿ ನಮ್ಮ ಜೀವನವನ್ನು ಹೊಂದಾಣಿಕೆ ಮಾಡಿಕೊಳ್ಳುವುದು. ಕರೋನಾದಿಂದ ದೂರವಿರಲಿ ನಮ್ಮ ಜೀವನಶೈಲಿಯಲ್ಲಿ ಆಗಬೇಕಿರುವ ಬದಲಾವಣೆಗಳನ್ನು ತಂದುಕೊಂಡು, ಲಸಿಕೆ ಸಿಗುವ ತನಕ ದಿನದೂಡುವ ಕೆಲಸವನ್ನು ಮಾಡಬೇಕಿದೆ.

ಹಾಗೇ ನೋಡಿದರೆ ಲಾಕ್‌ಡೌನ್‌ನ್ನು ಸರಕಾರ ಮಾಡಿದ್ದೂ ಸಹ ಕರೋನಾ ದೇಶದ ಜನರಿಗೆ ಅಂಟಿಸದಂತೆ ನೋಡಿಕೊಳ್ಳಬೇಕು ಅಥವಾ ಸಂಪೂರ್ಣವಾಗಿ ಭಾರತದಿಂದಲೇ ಕರೋನಾವನ್ನು ಓಡಿಸಬೇಕು ಎಂದಲ್ಲ. ಬದಲಿಗೆ ಕರೋನಾವನ್ನು ಎದುರಿಸಲು ದೇಶದಲ್ಲಿ ಆಗಬೇಕಿರುವ ಕ್ರಮಗಳನ್ನು ಮಾಡಿಕೊಳ್ಳಲು. ಕೇಂದ್ರ ಸರಕಾರ ಹಾಗೂ ರಾಜ್ಯಗಳು ತಮ್ಮ ಜನರನ್ನು ಕಾಪಾಡಿಕೊಳ್ಳಲು ಕೆಲವು ತಯಾರಿಯನ್ನು ನಡೆಸುವುದಕ್ಕೆ. ಇದೀಗ ಈ ಎಲ್ಲ ತಯಾರಿಯೊಂದಿಗೆ ಕರೋನಾದೊಂದಿಗೆ ಹೋರಾಟಕ್ಕೆ ಅಣಿಯಾಗಿದೆ. ಆದ್ದರಿಂದ ಲಾಕ್‌ಡೌನ್‌ನ್ನು ಹಂತಹಂತವಾಗಿ ಸಡಿಲಿಕೆ ಮಾಡಲಾಗಿದೆ. ಜನರು ಸಹ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಕರೋನಾದಿಂದ ದೂರವಿರಲು ಬೇಕಿರುವ ಜಾಗ್ರತೆಯನ್ನುವಹಿಸಬೇಕಿದೆ.
ಇಡೀ ವಿಶ್ವವನ್ನೇ ಕಾಡಿದ ಕರೋನಾದಿಂದ ಕೇವಲ ಒಂದು ದೇಶ, ಖಂಡ ಅಥವಾ ಒಂದೆರೆಡು ಕೋಟಿ ಜನರ ಜೀವನದ ಮೇಲೆ ಪ್ರಭಾವ ಬೀರಿಲ್ಲ. ಬದಲಿಗೆ ಇಡೀ ವಿಶ್ವವನ್ನು ಈ ಕರೋನಾ Redifine ಮಾಡಿದೆ. ಮುಂದಿನ ದಿನದಲ್ಲಾಗುವ ಸ್ಥಿತ್ಯಂತರವನ್ನು ಮುಂದಿನ ಒಂದೆರೆಡು ವರ್ಷ ಯಾರು ನಿಭಾಯಿಸುತ್ತಾರೋ ಅವರು ಮಾತ್ರ ಈ ರೇಸ್ ಪೂರ್ಣಗೊಳಿಸಲು ಸಾಧ್ಯ. ಆದ್ದರಿಂದ ಈ ಸ್ಥಿತ್ಯಂತರಕ್ಕೆೆ ಹೊಂದಿಕೊಳ್ಳಲು ಹಾಗೂ ಅದನ್ನು ಎದುರಿಸಲು ಮಾನಸಿಕ, ದೈಹಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ನಾವು ಸಜ್ಜಾಗುವುದು ಮಾತ್ರ ಬಾಕಿ ಉಳಿದಿದೆ. ಈ ನಿಟ್ಟಿನಲ್ಲಿ ಯೋಚಿಸಿ ಹೊಂದಾಣಿಕೆ ಮಾಡಿಕೊಳ್ಳದೇ ಬೇರೆ ದಾರಿಯಿಲ್ಲ.