Friday, 13th December 2024

ಕರೋನಾ ಕಾಲದಲ್ಲಿ ನಿಮ್ಮ ಎಚ್ಚರ ನಿಮಗಿರಲಿ, ಸರಕಾರವನ್ನು ನಂಬಬೇಡಿ!

ವಿಶ್ವೇಶ್ವರ ಭಟ್

ಕರೋನಾ ಸಂಕಟ ಕಡಿಮೆಯಾಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ ಎಂದುಕೊಳ್ಳುತ್ತಿರುವಾಗಲೇ, ಅದರ ತೀವ್ರತೆ ಇನ್ನಷ್ಟು ಜಾಸ್ತಿಯಾಗುತ್ತಿದೆ.

ಪ್ರತಿದಿನ ಸಾವಿರಾರು ಮಂದಿಗೆ ಕರೋನಾ ವೈರಸ್ ಸೋಂಕುತ್ತಿರುವುದನ್ನು ನೋಡಿದರೆ ಈ ಮಹಾಮಾರಿಯನ್ನು ನಿಯಂತ್ರಿಸಲು ನಾವು ಸಂಪೂರ್ಣವಾಗಿ ವಿಫಲರಾಗಿದ್ದೇವೆ ಎಂದು ಭಾವಿಸಬೇಕಿದೆ.

ಸರಕಾರ ಲಾಕ್ ಡೌನ್ ಘೋಷಿಸುವುದೋ ಇಲ್ಲವೋ, ಜನರೇ ಈಗ ಸ್ವಯಂಪ್ರೇರಣೆಯಿಂದ ಲಾಕ್ ಡೌನ್ ಘೋಷಿಸಿಕೊಂಡು ಮನೆಯಲ್ಲಿ ಉಳಿಯುವುದೊಂದೇ ಮಾರ್ಗ. ಈ ಹಂತದಲ್ಲಿ ಸ್ವಲ್ಪ ಎಡವಿದರೂ ಅಪಾಯ ತಪ್ಪಿದ್ದಲ್ಲ.

ಈ ಸಂದರ್ಭದಲ್ಲಿ ಸರಕಾರವನ್ನು ದೂಷಿಸಿ ಫಲವಿಲ್ಲ. ಕಾರಣ, ಸರಕಾರವಿರುವುದೇ ಹೀಗೆ. ಯಾವುದೇ ಪಕ್ಷ ಅಧಿಕಾರದಲ್ಲಿರಲಿ, ಅದು ವರ್ತಿಸುವ ರೀತಿಯೇ ಹೀಗೆ.

ಅತಿವೃಷ್ಟಿಯಾಗಲಿ, ಅನಾವೃಷ್ಟಿಯಾಗಲಿ, ಕರೋನಾ ಬರಲಿ, ಅಧಿಕಾರದಲ್ಲಿರುವವರು ಪರಿಸ್ಥಿತಿಯನ್ನು ತಮ್ಮ ಲಾಭಕ್ಕೆ ಪರಿವರ್ತಿಸಿಕೊಳ್ಳುವುದು ಹೇಗೆ, ಹಣ ಹೊಡೆಯುವುದು ಹೇಗೆ ಎಂದೇ ಯೋಚಿಸುತ್ತಾರೆ.

Everybody loves good drought ಎಂಬ ಉಕ್ತಿಯನ್ನು ಕೇಳಿರಬಹುದು. ಬರಗಾಲ ಬಂದರೆ ಅದನ್ನು ಎಲ್ಲರೂ ಇಷ್ಟಪಡುತ್ತಾರಂತೆ.

ಬರಗಾಲ ಬಂದಾಗ ಆಯಾ ಪ್ರದೇಶಕ್ಕೆ ಸರಕಾರ ಹೆಚ್ಚಿನ ಹಣ ಬಿಡುಗಡೆ ಮಾಡುತ್ತದೆ. ತಾತ್ಕಾಲಿಕ ವಸತಿ, ಆಹಾರ ಪೂರೈಕೆ ಮಾಡುತ್ತದೆ. ಜಾನುವಾರುಗಳಿಗೆ ಮೇವನ್ನು ಖರೀದಿಸಿ, ಹಂಚುತ್ತದೆ. ರೈತರಿಗೆ ಪರಿಹಾರ ಧನ ನೀಡುತ್ತದೆ. ಈ ಎಲ್ಲಾ ಹಂತಗಳಲ್ಲೂ ಅವ್ಯವಹಾರಕ್ಕೆ, ಅಕ್ರಮಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ. ಅಧಿಕಾರಿಗಳೊಂದಿಗೆ ಶಾಮೀಲಾಗಿ ಹಣ ಲೂಟಿ ಮಾಡಲು ಅಧಿಕಾರದಲ್ಲಿರುವವರಿಗೆ ಇದೊಂದು ಸಕಾಲ.

ತಮ್ಮದೇ ಕಷ್ಟ-ಸಂಕೋಲೆಯಲ್ಲಿರುವಾಗ, ಈ ಅವ್ಯವಹಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳಲು ಸಾಮಾನ್ಯ ಜನರಿಗೆ ವ್ಯವಧಾನವಿರುವುದಿಲ್ಲ.

ಇದನ್ನೇ ಬಳಸಿಕೊಂಡು ಭ್ರಷ್ಟರು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಬರಗಾಲ ಬಂದಾಗ ಸರಕಾರ ದವಸ-ಧಾನ್ಯಗಳನ್ನು ಬಿಡುಗಡೆ ಮಾಡುವುದರಿಂದ, ಇಲಿ, ಹೆಗ್ಗಣಗಳಿಗೂ ಸುಗ್ಗಿ.

ಹೀಗಾಗಿ ಬರಗಾಲ ಬಂದರೆ, ಎಲ್ಲರಿಗೂ ಹಬ್ಬ. ಆದರೆ ಜನಸಾಮಾನ್ಯರು ಮಾತ್ರ ಸಂಕಷ್ಟಕ್ಕೀಡಾಗುತ್ತಾರೆ. ಬರಗಾಲದಿಂದ ನೇರವಾಗಿ ಹಾನಿಗೊಳಗಾದವರಿಗೆ ಚಿಕ್ಕಾಸೂ ಸಿಕ್ಕಿರುವುದಿಲ್ಲ. ಆದರೆ ಅಪಾತ್ರರೆಲ್ಲ ತಿಂದು, ತೇಗಿ, ಮೆರೆಯುತ್ತಾರೆ.

ಕರೋನಾಕ್ಕೂ ಈ ಮಾತು ಅನ್ವಯ. ಇಡೀ ರಾಜ್ಯ, ದೇಶ ಕರೋನಾ ಭೀತಿಯಿಂದ ತತ್ತರಿಸುತ್ತಿದ್ದರೆ, ಸರಕಾರದಲ್ಲಿರುವವರು ಮಾತ್ರ ಹಣ ಹೊಡೆಯುವ ಕಾಯಕದಲ್ಲಿ ನಿರತರಾಗಿದ್ದಾರೆ.

ವೆಂಟಿಲೇಟರ್ , ಪಿಪಿಇ ಕಿಟ್ಸ್, ಮಾಸ್ಕ್, ಸರ್ಜಿಕಲ್ ಗ್ಲೋವ್ಸ್, ಟೆಸ್ಟಿಂಗ್ ಗ್ಲೋವ್ಸ್, ಆಕ್ಷಿಜನ್ ಸಿಲಿಂಡರ್, ಹ್ಯಾಂಡ್ ಸ್ಯಾನಿಟೈಸರ್,ಸಾಬೂನು ಮುಂತಾದವುಗಳ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ದಾಖಲೆ ಸಮೇತ ಮಾಡಿದ ಆರೋಪದಲ್ಲಿ ಹುರುಳಿಲ್ಲದಿಲ್ಲ.

ಈ ರಾಜಕಾರಣಿಗಳು ಮನುಷ್ಯರನ್ನು ಹೂಳುವ ಬಾಬಿನಲ್ಲೂ ಸುಳ್ಳು ಲೆಕ್ಕ ತೋರಿಸಿ, ಹಣ ಹೊಡೆಯಲು ಹಿಂದೆ-ಮುಂದೆ ನೋಡುವುದಿಲ್ಲ.

ಕೋವಿಡ್ ಬಂದ ನಂತರ ಕನಿಷ್ಠ ಎರಡು ಸಾವಿರ ಕೋಟಿ ರುಪಾಯಿ ಅವ್ಯವಹಾರವಾಗಿದೆಯಂತೆ. ಒಂದೆಡೆ ಜನ ಸಾಯುತ್ತಿದ್ದರೆ, ಕೆಲವು ಮಂತ್ರಿಗಳಿಗೆ ಇದು ಹಣ ಹೊಡೆಯಲು ಅದ್ಭುತ ಅವಕಾಶವಾಗಿ ಪರಿಣಮಿಸಿದೆ.

ಪ್ರತಿ ಖರೀದಿಯಲ್ಲೂ ಗೋಲ್ ಮಾಲ್ ಆಗಿರುವ ಸಾಧ್ಯತೆಯಿದೆ. ಲಜ್ಜೆಗೆಟ್ಟವರು ಪ್ರತಿ ಅವಕಾಶವನ್ನೂ ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಾರೆ. ಇಂಥವರಿಂದ ಜನ ಏನನ್ನು ನಿರೀಕ್ಷಿಸಬಹುದು ?

ಹೀಗಾಗಿ ಸರಕಾರವನ್ನು ನಂಬಿಕೊಂಡರೆ, ನಮ್ಮಂಥ ಮೂರ್ಖರು ಯಾರೂ ಇಲ್ಲ. ಸರಕಾರ ಹೇಳುವುದಕ್ಕೂ, ವಸ್ತುಸ್ಥಿತಿಗೂ ಅಜಗಜಾಂತರ ವ್ಯತ್ಯಾಸವಿದೆ. ಸೋಂಕಿತರಿಗಾಗಿ ಸರಕಾರ ವ್ಯವಸ್ಥೆ ಮಾಡಿರುವ ಕ್ವಾರಂಟೈನ್ ಕೇಂದ್ರಗಳ ಸ್ಥಿತಿ ಅತ್ಯಂತ ದಾರುಣವಾಗಿದೆ.

ಇಂಥ ಸಂದರ್ಭದಲ್ಲಿ ನಮ್ಮ ಜಾಗ್ರತೆಯನ್ನು ನಾವೇ ನೋಡಿಕೊಳ್ಳಬೇಕು. ಸರಕಾರವನ್ನು ನಂಬಿದರೆ ಗಳಪಾಶಿ !