ಶ್ರೀವತ್ಸ ಜೋಶಿ
ಅರಳೆ ರಾಶಿಗಳಂತೆ ಹಾಲ್ಗಡಲ ಅಲೆಯಂತೆ ಆಗಸದೆ ತೇಲುತಿದೆ ಮೋಡ… ನೆರೆನೋಟ ಹರಿದಂತೆ ಪಸರಿಸಿಹ ಗಿರಿಪಂಕ್ತಿ ಹಸಿ ಹಸಿರು ವನರಾಜಿ ನೋಡ… – ಈ ಸಾಲುಗಳನ್ನು ಎಲ್ಲೋೋ ಕೇಳಿದೆಯಂತಲ್ಲ ಎಂದು ನೀವು ನೆನಪಿಗೆ ತಂದುಕೊಳ್ಳಲು ತಲೆ ಕೆರೆಯುವ ಮುನ್ನವೇ ಹೇಳಿಬಿಡುತ್ತೇನೆ- ಇವು ವಿಜಯನಗರದ ವೀರಪುತ್ರ ಸಿನಿಮಾದಲ್ಲಿ ‘ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು… ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು…’ ಚಿತ್ರಗೀತೆ ಆರಂಭವಾಗುವುದಕ್ಕೆ ಮುನ್ನ ಒಂದು ಉಗಾಭೋಗದಂತೆ ಹಾಡಲಾಗಿರುವ ಸಾಲುಗಳು. ನಾಯಕ ನಟ ಆರ್.ಎನ್. ಸುದರ್ಶನ್ ಕುದುರೆಯ ಮೇಲೆ ಕುಳಿತುಕೊಂಡು ವಿಜಯನಗರ ಸಾಮ್ರಾಜ್ಯದ ಪ್ರಕೃತಿ ಸೌಂದರ್ಯ ಸವಿಯುತ್ತ, ಸಂತೋಷದಿಂದ ಹಾಡುತ್ತ ಬರುವ ದೃಶ್ಯ. ಈ ಹಾಡಿನ ಸಾಹಿತ್ಯ ಆರ್.ಎನ್. ಜಯಗೋಪಾಲ್ ಅವರದು. ಸಂಗೀತ ನಿರ್ದೇಶನ ಎಂ.ಎಸ್. ವಿಶ್ವನಾಥನ್-ಟಿ.ಕೆ. ರಾಮಮೂರ್ತಿ ಜೋಡಿಯದು. ಡಾ.ಪಿ.ಬಿ. ಶ್ರೀನಿವಾಸ್ ಅವರ ಮಧುರ ಧ್ವನಿ. ಇಷ್ಟು ಹೇಳಿದ ಮೇಲೆ ಬಹುಶಃ ನಿಮಗೀಗ- ಈ ಅಮರಗೀತೆಯನ್ನು ರೇಡಿಯೊದಲ್ಲಿ ಸಾವಿರಾರು ಬಾರಿ ಕೇಳಿದ್ದು, ಜತೆಯಲ್ಲಿ ಗುನುಗುನಿಸಿದ್ದು, ನೀವೂ ಹಾಡುವ ಖಯಾಲಿಯವರಾದರೆ ಗಾಯನ ಸ್ಪರ್ಧೆಗಳಲ್ಲಿ, ಸ್ಕೂಲ್‌ಡೇಗಳಲ್ಲಿ ಇದನ್ನು ಹಾಡಿದ್ದು, ಪ್ರತಿ ಸಲ ಹಾಡುವಾಗ/ಕೇಳುವಾಗ ರೋಮಾಂಚನಗೊಂಡದ್ದು… ನೆನಪುಗಳು ಒತ್ತರಿಸಿ ಬರುತ್ತಿರಬಹುದು. ಹಾಗಾದರೆ ಈಗೊಂದು ರಸಪ್ರಶ್ನೆ: ಈ ಹಾಡಿನಲ್ಲಿ ‘ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು… ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು… ಅಪಾರ ಕೀರ್ತಿಯೇ…’ ಎಂದು ಪಲ್ಲವಿ ಆದ ಮೇಲೆ, ‘ಮಾತೆ ತುಂಗಭದ್ರೆೆ ಹರಿಯುತಿಹಳು ಇಲ್ಲಿ… ಮಾನವನ ಪಾಪವನು ತೊಳೆವ ಕಲ್ಪವಲ್ಲಿ…’ ಮೊದಲ ಚರಣ ಆರಂಭವಾಗುವ ಮುನ್ನ, ಹಾಗೆಯೇ ‘ದೇವ ವಿರೂಪಾಕ್ಷ ಈವ ನಮಗೆ ರಕ್ಷ… ಜೀವಿಗೆ ತಾ ನೀಡುವನು ಧರ್ಮದ ದೀಕ್ಷ…’ ಎರಡನೆಯ ಚರಣ ಆರಂಭವಾಗುವ ಮುನ್ನವೂ- ಇರುವ ಇಂಟರ್‌ಲ್ಯೂಡ್ ಸಂಗೀತ ಯಾವುದು?
ಇದೆಂಥ ತಲೆಹರಟೆ ರಸಪ್ರಶ್ನೆ ಎಂದು ಮುಖ ಸಿಂಡರಿಸಬೇಡಿ. ಪ್ರಶ್ನೆಯ ಉತ್ತರವು ಈ ಲೇಖನದ ಮುಂದುವರಿಕೆಗೆ ವೆರಿ ವೆರಿ ಇಂಪಾರ್ಟೆಂಟು. ನಿಜವಾಗಿಯಾದರೆ ಶೀರ್ಷಿಕೆಯಲ್ಲಿ ಈಗಾಗಲೇ ನೀವು ಅದನ್ನು ಓದಿದ್ದೀರಿ ಕೂಡ. ಇರಲಿ, ಇನ್ನೂಇನ್ನೂ ಸತಾಯಿಸದೆ ನಾನೇ ಹೇಳಿಬಿಡುತ್ತೇನೆ- ಆ ಹಾಡಿನಲ್ಲಿ ಇಂಟರ್‌ಲ್ಯೂಡ್ ಸಂಗೀತ ಯಾವ ವಾದ್ಯಗಳದೂ ಅಲ್ಲ, ನಾಯಕನಟನದೇ ಶಿಳ್ಳೆ! ಹೌದು. ಕುದುರೆ ಮೇಲೆ ಕುಳಿತುಕೊಂಡು ಪ್ರಕೃತಿಸೌಂದರ್ಯ ಸವಿಯುತ್ತ, ಹಾಡುತ್ತ ಬರುವಾಗ ನಾಯಕನಟ ಲಲಲ್ಲಲಾ ಲಲಲ್ಲಲಾ ಲಲಲ್ಲಲಲಲಲಾ… ಎಂದು ಲಯಬದ್ಧವಾಗಿ ಶಿಳ್ಳೆ ಹಾಕುತ್ತಾನೆ. ಅದೊಂದು ಆನಂದದ ಅಭಿವ್ಯಕ್ತಿ. ನೀವು ಗಮನಿಸಿದ್ದೀರೋ ಇಲ್ಲವೋ, ಕನ್ನಡ ಮಾತ್ರವಲ್ಲ ಬೇರೆ ಭಾರತೀಯ ಭಾಷೆಗಳ ಚಲನಚಿತ್ರಗಳಲ್ಲೂ, ಹಿಂದಿಯಲ್ಲಂತೂ ಇನ್ನೂ ಹೆಚ್ಚು, ಶಿಳ್ಳೆಯನ್ನು ಹಾಡಿನ ಆರಂಭ/ಅಂತ್ಯ ಅಥವಾ ಇಂಟರ್‌ಲ್ಯೂಡ್‌ನಲ್ಲಿ, ಬೇರಾವುದೇ ದೃಶ್ಯದ ಹಿನ್ನೆಲೆ ಸಂಗೀತವಾಗಿಯೂ ಪರಿಣಾಮಕಾರಿಯಾಗಿ ಬಳಸಿರುವ ಅನೇಕ ಉದಾಹರಣೆಗಳಿವೆ.
ನಾಯಕನು ನಾಯಕಿಯನ್ನು ಆಕರ್ಷಿಸುವುದಕ್ಕಿರಬಹುದು; ನಾಯಕ ಅಥವಾ ಯಾವುದೇ ಒಂದು ಪೋಷಕ ಪಾತ್ರವಾದರೂ ತನ್ನದೇ ಲೋಕದಲ್ಲಿ ಮುಳುಗಿರುವಾಗ ಗುನುಗುನಿಸುವ ರೀತಿಯಲ್ಲಿರಬಹುದು; ಗಾಢವಾದ ದುಃಖದ ಸನ್ನಿವೇಶದಲ್ಲಿರಬಹುದು, ಗಾಳಿಯಲ್ಲಿ ತೇಲಾಡುವಂತೆ ಸಂತಸ ಉಕ್ಕಿ ಹರಿವ ಸಂದರ್ಭಕ್ಕಿರಬಹುದು, ಪಡ್ಡೆ ಹುಡುಗರು ಮುದ್ದುಮೊಗದ ಹಿರೋಯಿನ್‌ಳನ್ನು ಛೇಡಿಸುವುದಕ್ಕೂ ಇರಬಹುದು- ಸಿನಿಮಾದಲ್ಲಿ ಶಿಳ್ಳೆಯೂ ಒಂದು ಸಂಹವನ ಮಾಧ್ಯಮವೇ! ನೌ ದೋ ಗ್ಯಾರಾಹ್ ಚಿತ್ರದಲ್ಲಿ ‘ಹಮ್ ಹೈ ರಾಹೀ ಪ್ಯಾಾರ್‌ಕೇ ಹಮ್ ಸೇ ಕುಛ್ ನ ಬೋಲಿಯೇ…’ ಹಾಡಿನ ಮೊದಲು ದೇವಾನಂದ್‌ನ ಶಿಳ್ಳೆ, ಅನಾರಿ ಚಿತ್ರದಲ್ಲಿ ‘ಕಿಸೀಕಿ ಮುಸ್ಕುರಾಹಟೋಂ ಪೆ ಹೋ ನಿಸಾರ್… ಜೀನಾ ಇಸೀ ಕಾ ನಾಮ್ ಹೈ…’ ಹಾಡಿನ ಇಂಟರ್‌ಲ್ಯೂಡ್‌ನಲ್ಲಿ ರಾಜ್‌ಕಪೂರ್‌ನ ಶಿಳ್ಳೆ, ಕಟೀ ಪತಂಗ್ ಚಿತ್ರದಲ್ಲಿ ‘ಯೇ ಶಾಮ್ ಮಸ್ತಾನೀ… ಮದ್‌ಹೋಶ್ ಕಿಯೇ ಜಾಯ್…’ ಹಾಡಿನಲ್ಲಿ ರಾಜೇಶ್ ಖನ್ನಾನ ಶಿಳ್ಳೆ, ಫನಾ ಚಿತ್ರದ ‘ಚಾಂದ್ ಸಿಫಾರಿಶ್ ಜೋ ಕರತಾ ಹಮಾರೀ…’ ಹಾಡಿನಲ್ಲಿ ಆಮಿರ್ ಖಾನ್‌ನ ಶಿಳ್ಳೆ, ದಿಲ್ ತೊ ಪಾಗಲ್ ಹೈ ಚಿತ್ರದಲ್ಲಿ ಶಾರುಖ್ ಖಾನ್‌ನ ಶಿಳ್ಳೆ – ನೀವು ಹಿಂದಿ ಚಿತ್ರಗೀತೆಗಳ ರಸಿಕರಾದರೆ ಇವನ್ನೆಲ್ಲ ಕೇಳಿಯೇ ಇರುತ್ತೀರಿ. ಹಿಂದಿ ಚಿತ್ರರಂಗದಲ್ಲಿ ಶಿಳ್ಳೆ ಹಾಡಲಿಕ್ಕೇ ನಾಗೇಶ್ ಸುರ್ವೆ ಎಂಬೊಬ್ಬ ಕಲಾವಿದರಿದ್ದಾರಂತೆ. ಜೂಲಿ ಚಿತ್ರದ ‘ದಿಲ್ ಕ್ಯಾಕರೇ ಜಬ್ ಕಿಸೀಕೋ…’ ಹಾಡಿನಲ್ಲಿರುವ ಶಿಳ್ಳೆಯಿಂದ ಹಿಡಿದು ಕುಛ್ ಕುಛ್ ಹೋತಾ ಹೈ ಚಿತ್ರದಲ್ಲಿ ಕಜೋಲ್ ಹಾಕುವ ಶಿಳ್ಳೆಯೂ ಸೇರಿದಂತೆ ಇದುವರೆಗೆ 1500ಕ್ಕೂ ಹೆಚ್ಚು ಹಾಡುಗಳಲ್ಲಿ ಶಿಳ್ಳೆ ನುಡಿಸಿದ ದಾಖಲೆ ಅವರದು!
ಅಷ್ಟಾದರೂ, ಶಿಳ್ಳೆ ಹಾಕುವುದು ಸಭ್ಯತೆ ಅಲ್ಲ ಎಂಬ ಧೋರಣೆಯೂ ಇದೆ. ತೀರ ಸಂಪ್ರದಾಯಸ್ಥ ಭಾರತೀಯ ಕುಟುಂಬಗಳಲ್ಲಿ ರಾತ್ರಿ ಹೊತ್ತು ಶಿಳ್ಳೆ ಹಾಕಬಾರದು, ಮನೆಯ ಒಳಗೆ ಇರುವಾಗ ಶಿಳ್ಳೆ ಹಾಕಬಾರದು (ಹಾವು ಬರುತ್ತದೆ ಎಂದು ಹೆದರಿಸುವುದು ಬೇರೆ!), ಹೆಂಗಸರು ಶಿಳ್ಳೆ ಹಾಕಬಾರದು ಅಂತೆಲ್ಲ ಶಿಳ್ಳೆ ಕರ್ಫ್ಯೂ ಜಾರಿಗೊಳಿಸುವುದೂ ಇದೆ. ಆದರೇನು ಮಾಡುವುದು ಚಲನಚಿತ್ರಗಳಂತೆ ವಿಧವಿಧ ಸಂದರ್ಭಗಳಲ್ಲಲ್ಲದಿದ್ದರೂ ನಮ್ಮ ಪಾಡಿಗೆ ನಾವು ಏನೋ ಮಾಡ್ಕೊೊಂಡು ನಮ್ಮದೇ ಪ್ರಪಂಚದಲ್ಲಿ ಮುಳುಗಿರುವಾಗ ಹಾಡು ಗುನುಗುನಿಸುವಂತೆಯೇ ಶಿಳ್ಳೆ ಸಂಗೀತ ಕೂಡ ಪರಮಾನಂದ ನೀಡುವಂಥದ್ದು. ಮುಖದ ಮತ್ತು ಮನಸ್ಸಿನ ನಿರಿಗೆಗಳಿಗೆ ಇಸ್ತ್ರಿ ಹಾಕಿ ಅಚ್ಚುಕಟ್ಟುಗೊಳಿಸುವ ಸಾಮರ್ಥ್ಯ ಶಿಳ್ಳೆಗಿದೆ. ನಾನಂತೂ ಕಾರ್ ಡ್ರೈವ್ ಮಾಡುವಾಗ, ಬಟ್ಟೆೆಗಳಿಗೆ ಇಸ್ತ್ರಿ ಹಾಕುವಾಗ, ಅಥವಾ ಏಕಾಂಗಿಯಾಗಿ ಯಾವುದೇ ಕೆಲಸಗಳನ್ನು ಮಾಡುವಾಗ, ಅಷ್ಟೇಕೆ ಈ ಅಂಕಣಬರಹವನ್ನು ಲ್ಯಾಪ್‌ಟಾಪ್‌ನಲ್ಲಿ ಟೈಪ್ ಮಾಡುತ್ತಿರುವಾಗಲೂ- ಚಿತ್ರಗೀತೆ, ಭಾವಗೀತೆ, ಭಕ್ತಿಗೀತೆ ಏನಾದರೊಂದು ಶಿಳ್ಳೆ ಹಾಕುತ್ತಿರುತ್ತೇನೆ. ನಾನೊಬ್ಬನೇ ಕೇಳುಗನೂ ಆದ್ದರಿಂದ ಲಘು ಶಾಸ್ತ್ರೀಯ ಸಂಗೀತದವರೆಗೂ ತಲುಪುತ್ತೇನೆ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಶಿಳ್ಳೆ ನುಡಿಸುತ್ತ ಗಂಟೆಗಟ್ಟಲೆ ಪೂರ್ಣ ಪ್ರಮಾಣದ ಸಂಗೀತ ಕಚೇರಿ ನಡೆಸುವುದರಲ್ಲಿ ಮೂರ್ನಾಲ್ಕು ದಶಕಗಳಿಂದ ವಿಶ್ವವಿಖ್ಯಾತರಾಗಿರುವ ಆಂಧ್ರಪ್ರದೇಶದ ಕೆ.ವಿ. ಶಿವಪ್ರಸಾದ್ ಎಂಬ ಕಲಾವಿದ ನನಗೆ ಅಚ್ಚುಮೆಚ್ಚು. ಅವರ ಶಿಳ್ಳೆ ಸಂಗೀತದ ರೆಕಾರ್ಡಿಂಗ್‌ಗಳು ನನ್ನ ಸಂಗ್ರಹದಲ್ಲಿವೆ. ಹಾಗೆಯೇ ಮೊನ್ನೆ ಜನವರಿ 26ರ ಗಣರಾಜ್ಯದಿನ ವಿಶೇಷವೆಂದು, ಜಗದಗಲ ನೆಲೆಸಿರುವ 50 ಮಂದಿ ಭಾರತೀಯರು (ಇಂಡಿಯನ್ ವ್ಹಿಸ್ಲರ್ಸ್ ಎಸೋಸಿಯೇಶನ್ ಸದಸ್ಯರು) ಸೇರಿ ‘ಮಿಲೇ ಸುರ್ ಮೇರಾ ತುಮ್ಹಾರಾ…’ ಭಾವೈಕ್ಯ ಗೀತೆಯನ್ನು ಶಿಳ್ಳೆಯಲ್ಲಿ ಹಾಡಿ ಜೋಡಣೆ ಮಾಡಿದ ಅದ್ಭುತವಾದೊಂದು ವಿಡಿಯೋವನ್ನು ಯುಟ್ಯೂಬ್‌ನಲ್ಲಿ ನೋಡಿ ನಾನು ಬಹಳವಾಗಿ ಆನಂದಿಸಿದ್ದೇನೆ. ಅದರಲ್ಲಿ ಕೆಲವು ಹೆಂಗಸರೂ ಬಹಳ ಸೊಗಸಾಗಿ ಶಿಳ್ಳೆ ಹಾಕಿದ್ದಾರೆ; ಸಮಾನತೆಯ ಸಮಭಾವವನ್ನು ಸಾರಿದ್ದಾರೆ.
ಯಾಕೀಗ ಎಲ್ಲ ಬಿಟ್ಟು ಶಿಳ್ಳೆಯ ಪ್ರಸ್ತಾವ ಪೀಠಿಕೆ ಬಂತೆಂದರೆ, ಪ್ರಸ್ತುತ ಲಾಕ್‌ಡೌನ್ ಗೃಹಬಂಧನದಲ್ಲಿರುವಾಗ ಕಾಲಕ್ಷೇಪಕ್ಕೆೆಂದು ಮೊನ್ನೆ ಒಂದು ಇಂಗ್ಲಿಷ್ ಡಾಕ್ಯುಮೆಂಟರಿ ನೋಡುತ್ತಿದ್ದೆೆ. ಯುರೋಪ್‌ನಲ್ಲಿ ಗ್ರೀಸ್ ದೇಶಕ್ಕೆ ಸೇರಿದ ಏವಿಯಾ ಎಂಬೊಂದು ದ್ವೀಪದಲ್ಲಿರುವ ‘ಏಂಟಿಸ್ ಎಂಬ ಪುಟ್ಟ ಹಳ್ಳಿಯ ಬಗೆಗಿನ ಸಾಕ್ಷ್ಯಚಿತ್ರವದು. ಆ ಹಳ್ಳಿಯ ವಿಶೇಷ ಏನಪ್ಪಾ ಅಂದ್ರೆ- ಅಲ್ಲಿಯ ಜನರು ಶಿಳ್ಳೆಯ ಮೂಲಕವೇ ಪರಸ್ಪರ ಸಂಭಾಷಣೆ ಸಂವಹನ ನಡೆಸುತ್ತಾರೆ! ‘ನಮ್ಮ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆೆಯ ಮತ್ತೂರು ಗ್ರಾಮದಲ್ಲಿ ಎಲ್ಲರೂ ಸಂಸ್ಕೃತದಲ್ಲೇ ಮಾತನಾಡುತ್ತಾಾರೆ’ ಎಂದು ಎಲ್ಲೋೋ ಓದಿದ್ದು ಕೇಳಿದ್ದು ನನಗೆ ತತ್‌ಕ್ಷಣ ಒಮ್ಮೆ ನೆನಪಾಯಿತು. ಗ್ರೀಸ್ ದೇಶದ ಏಂಟಿಸ್ ಹಳ್ಳಿಯವರ ಶಿಳ್ಳೆ ಭಾಷೆಗೆ *ಖ್ಛ್ಟಜಿ ಎಂದು ಹೆಸರೂ ಇದೆಯಂತೆ. ಗ್ರೀಕ್ ಭಾಷೆಯಲ್ಲಿ *್ಛ್ಟಜ್ಢಿಿಟ ಅಂದರೆ ಶಿಳ್ಳೆ ಹಾಕುವುದು ಎಂದರ್ಥವಂತೆ. ಭಾಷಾತಜ್ಞರು ಅದನ್ನೊೊಂದು ಭಾಷೆ ಅಂತ ಒಪ್ಪುವುದಿಲ್ಲವಾದರೂ ಆ ಹಳ್ಳಿಯವರ ಮಟ್ಟಿಗೆ ಅದೇ ಭಾಷೆ. ಅದಕ್ಕೆೆ ತನ್ನದೇ ಆದ ವ್ಯಾಾಕರಣವಿದೆ, ಶಬ್ದಭಂಡಾರವಿದೆ, ವಾಕ್ಯರಚನೆಯ ನಿಯಮಗಳಿವೆ, ಗ್ರೀಕ್ ವರ್ಣಮಾಲೆಯ ಆಲ್ಫಾ, ಬೀಟಾ, ಗ್ಯಾಮ, ಡೆಲ್ಟಾ, ಎಪ್ಸಿಲೊನ್… ಅಕ್ಷರಗಳಿಗೆ ಪ್ರತ್ಯೇಕವಾದ ಶಿಳ್ಳೆ ಸ್ವರಗಳಿವೆ! ಹೊರಗಿನವರಾರಿಗೂ ಅದು ಅರ್ಥವಾಗುವುದಿಲ್ಲ. ಅಷ್ಟೇಕೆ, ಗ್ರೀಸ್ ದೇಶದಲ್ಲೇ ನಗರ ಪ್ರದೇಶಗಳಲ್ಲಿರುವವರಿಗೆ ಅದೇನೆಂದು ಗೊತ್ತಾಾಗುವುದಿಲ್ಲ. ಆದರೆ ಏಂಟಿಸ್ ಹಳ್ಳಿಯವರು- ಬಹುತೇಕ ಕುರುಬರು ಮತ್ತು ಕೃಷಿಕರು – ತಮ್ಮ ದಿನನಿತ್ಯದ ಎಲ್ಲ ವ್ಯವಹಾರಗಳನ್ನೂ ಶಿಳ್ಳೆ ಭಾಷೆಯಲ್ಲೇ ಮಾಡುತ್ತಾರೆ. ಸಾವಿರಾರು ವರ್ಷಗಳಿಂದ, ಅಂದರೆ ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದಿರುವ ಈ ಭಾಷೆಯ ಬಗ್ಗೆೆ ಅವರಿಗೆ ಅಪಾರ ಗೌರವ ಅಭಿಮಾನಗಳೂ ಇವೆ.
ಮಾತನಾಡುವುದಕ್ಕಿಿಂತ ಶಿಳ್ಳೆಯ ದೊಡ್ಡ ಪ್ರಯೋಜನವೇನೆಂದರೆ ಸುಮಾರು ನಾಲ್ಕು ಕಿಲೊಮೀಟರ್ ದೂರದವರೆಗೂ ಕೇಳಿಸುವ ಶಕ್ತಿ ಅದಕ್ಕಿರುತ್ತದೆ. ಅಂದರೆ, ನಾವು ಎಷ್ಟು ಸಾಧ್ಯವೋ ಅಷ್ಟು ದೊಡ್ಡದಾಗಿ ಬೊಬ್ಬೆೆ ಹಾಕಿದರೂ ಅದಕ್ಕಿಿಂತ ಹತ್ತು ಪಟ್ಟು ದೂರ ಶಿಳ್ಳೆ ಸಾಗಬಲ್ಲದು; ಗುಡ್ಡಗಾಡು ಪ್ರದೇಶಗಳಲ್ಲಿರುವವರಿಗೆ, ವಿಶಾಲ ಹೊಲಗಳ ನಡುವೆ ದೂರದೂರದಲ್ಲಿ ಮನೆಗಳಿರುವವರಿಗೆ ಹೇಳಿ ಮಾಡಿಸಿದಂಥ ಸಂಪರ್ಕ ಸಾಧನ ಅದು.
ಏಂಟಿಸ್ ಹಳ್ಳಿಯಲ್ಲಿ ತಲೆಮಾರುಗಳಿಂದಲೂ ಶಿಳ್ಳೆ ಒಂದು ಸಂವಹನ ಮಾಧ್ಯಮವಾಗಿ ಉಳಿದುಬಂದಿರುವುದು ಬಹುಶಃ ಅದೇ ಕಾರಣದಿಂದ. ಅಲ್ಲಿನವರಿಗೆ ಶಿಳ್ಳೆಯೇ ಇಮೇಲ್, ಎಸ್ಸೆಮ್ಮೆಸ್, ಟ್ವಿಟ್ಟರ್ ಎಲ್ಲವೂ. ಒಬ್ಬ ರೈತ ಇನ್ನೊಬ್ಬ ರೈತನೊಡನೆ ‘ಈ ದಿನ ದ್ರಾಕ್ಷಾರಸ (ವೈನ್) ಲೀಟರ್‌ಗೆ ಎಷ್ಟರಂತೆ ಮಾರಾಟ ಮಾಡಿದೆ?’ ಎಂದು ಕೇಳುವುದಿದ್ದರೂ ಶಿಳ್ಳೆಯಲ್ಲೇ. ಒಬ್ಬ ಗೃಹಿಣಿ ಪಕ್ಕದ್ಮನೆಯಾಕೆಯ ಬಳಿ ‘ನಾಳೆ ನಮ್ಮನೆಯಲ್ಲೇ ಹಬ್ಬ ಆಚರಿಸೋಣ, ನೀವೂ ಬನ್ನಿ’ ಎಂದು ಆಮಂತ್ರಿಸುವುದಿದ್ದರೂ ಶಿಳ್ಳೆಯಲ್ಲೇ. ಆದರೆ ಈಗ ಏಂಟಿಸ್ ಹಳ್ಳಿಯಲ್ಲಿ ಏನಾಗಿದೆಯೆಂದರೆ ಒಟ್ಟು ಜನಸಂಖ್ಯೆೆ 37ಕ್ಕೆ ಇಳಿದಿದೆ. ಯುವ ಪೀಳಿಗೆಯವರು ಉದ್ಯೋಗವನ್ನರಸಿ ದೂರದ ಅಥೆನ್‌ಸ್ ಮತ್ತಿತರ ನಗರಪ್ರದೇಶಗಳಿಗೆ ವಲಸೆ ಹೋಗಿದ್ದಾರೆ. ತೀರ ಮುದುಕರಾದವರಿಗೆ ಹಲ್ಲುಗಳುದುರಿ ಬೊಚ್ಚುಬಾಯಿಯಿಂದಾಗಿ ಶಿಳ್ಳೆ ಹಾಕುವುದಕ್ಕಾಗುತ್ತಿಲ್ಲ. ಹಾಗಾಗಿ ಹತ್ತಿಪ್ಪತ್ತು ಜನರಷ್ಟೇ ಸ್ಫಿರಿಯಾ ಶಿಳ್ಳೆ ಭಾಷೆಯಾಡುವವರು ಏಂಟಿಸ್‌ನಲ್ಲಿ ಉಳಿದುಕೊಂಡಿದ್ದಾರೆ. ಏಂಟಿಸ್ ಹಳ್ಳಿಗೆ ಹೊರಗಿನಿಂದ ಯಾರಾದರೂ ಸಂದರ್ಶಕರು, ಪ್ರವಾಸಿಗರು ಬಂದರೆ ಅವರಿಗೆ ತಮ್ಮ ಭಾಷಾ ಸಂಸ್ಕೃತಿಯನ್ನು ತೋರಿಸಲಿಕ್ಕಾಗಿ ಶಿಳ್ಳೆ ಭಾಷೆಯಲ್ಲೇ ಹಳ್ಳಿಗರು ಮಾತನಾಡುತ್ತಾರೆ. ಆಮೇಲೆ ಬೇಕಿದ್ದರೆ ಗ್ರೀಕ್ ಇಂಗ್ಲಿಷ್ ಮುಂತಾದ ಮಾಮೂಲಿ ಆಧುನಿಕ ಭಾಷೆಗೆ ತರ್ಜುಮೆ ಮಾಡಿ ಹೇಳುತ್ತಾರೆ.
ಭಾಷಿಗರು ಸತ್ತುಹೋದರೆ ಮುಂದೊಂದು ದಿನ ತಮ್ಮ ಭಾಷೆಯೇ ಸತ್ತುಹೋಗುತ್ತದೆಂಬ ಚಿಂತೆ ಏಂಟಿಸ್ ಹಳ್ಳಿಯವರನ್ನು ಕಾಡುತ್ತಿದೆ. ಅದಕ್ಕೋಸ್ಕರ ಸ್ಥಳೀಯ ಆಡಳಿತ ಮತ್ತು ಗ್ರೀಸ್‌ನ ಕೇಂದ್ರ ಸರಕಾರದ ಮೂಲಕ ಯುನೆಸ್ಕೋಗೆ ಅರ್ಜಿ ಸಲ್ಲಿಸಿ ಸ್ಫಿರಿಯಾ ಶಿಳ್ಳೆ ಭಾಷೆಯನ್ನು ‘ನಶಿಸಿಹೋಗುತ್ತಿರುವ ಭಾಷೆ’ ಎಂದು ಗುರುತಿಸಿ ವಿಶೇಷ ಸ್ಥಾನಮಾನ ಕೊಡುವಂತೆ ಬೇಡಿಕೆಯಿಡುವ ಆಲೋಚನೆಯಲ್ಲಿದ್ದಾರಂತೆ. ಏಕೆಂದರೆ ಗ್ರೀಸ್ ದೇಶದ ಈ ಏಂಟಿಸ್ ಹಳ್ಳಿಯೊಂದೇ ಅಲ್ಲ, ಪ್ರಪಂಚದಲ್ಲಿ ಬೇರೆ ಕೆಲವು ಗುಡ್ಡಗಾಡು ಪ್ರದೇಶಗಳಲ್ಲಿಯೂ ಶಿಳ್ಳೆ ಭಾಷೆಗಳು ಪ್ರಚಲಿತದಲ್ಲಿವೆ. ಆಫ್ರಿಕಾದ ಮೊರೊಕ್ಕೊ ದೇಶದಲ್ಲಿ ಅಟ್ಲಸ್ ಪರ್ವತ ಪ್ರದೇಶದಲ್ಲಿ, ಇಥಿಯೋಪಿಯಾದ ಓಮೊ ಕಣಿವೆ ಪ್ರದೇಶದಲ್ಲಿ, ಹಿಮಾಲಯದ ತಪ್ಪಲಲ್ಲಿ ನೇಪಾಳದ ಕೆಲವು ಭಾಗಗಳಲ್ಲಿ, ಮ್ಯಾನ್ಮಾರ್ ಮತ್ತು ಬ್ರೆಜಿಲ್ ದೇಶಗಳಲ್ಲಿ ಶಿಳ್ಳೆ ಭಾಷೆ ಬಳಸಿ ಸಂವಹನ ಮಾಡುವ ನಿವಾಸಿಗಳಿದ್ದಾರೆ. ಸ್ಪ್ಯಾನಿಷ್ ಕ್ಯಾನರಿ ದ್ವೀಪಗಳ ಲಾ ಗೊಮೆರಾ ಎಂಬ ಪ್ರದೇಶದಲ್ಲಿ ಸಿಲ್ಬೊ ಎಂಬ ಶಿಳ್ಳೆ ಭಾಷೆಗೆ, ಮತ್ತು ಟರ್ಕಿ ದೇಶದ ಕೆಲ ಹಳ್ಳಿಗಳವರು ಬಳಸುವ ‘ಹಕ್ಕಿ ಭಾಷೆ’ಗೂ ಯುನೆಸ್ಕೋ ‘ಮಾಸ್ಟರ್ ಪೀಸ್’ ಎಂಬ ಶಿಫಾರಸು ನೀಡಿದ್ದಿದೆ. ಅವುಗಳ ಸಾಲಿಗೆ ಸ್ಫಿರಿಯಾ ಭಾಷೆಯನ್ನೂ ಸೇರಿಸಬೇಕೆಂದು ಏಂಟಿಸ್ ಹಳ್ಳಿಯವರ ಬಯಕೆ, ಬೇಡಿಕೆ.
ಗ್ರೀಸ್ ದೇಶದ ಏಂಟಿಸ್ ಹಳ್ಳಿ ಮತ್ತು ಅಲ್ಲಿನ ಸ್ಫಿರಿಯಾ ಶಿಳ್ಳೆ ಭಾಷೆ ನಾನು ನೋಡಿದ ಸಾಕ್ಷ್ಯಚಿತ್ರದ ಮುಖ್ಯ ವಿಷಯವಾದರೂ, ಶಿಳ್ಳೆ ಎಷ್ಟು ಪುರಾತನವಾದದ್ದು ಎಂಬ ವಿವರಣೆಗಳೂ ಕುತೂಹಲಕಾರಿಯಾಗಿದ್ದವು. ಸಾವಿರಾರು ವರ್ಷಗಳ ಹಿಂದಿನಿಂದಲೂ ಪ್ರಪಂಚದ ಬೇರೆಬೇರೆ ಭಾಗಗಳಲ್ಲಿ ಶಿಳ್ಳೆಯ ಮೂಲಕ ಸಂವಹನ ನಡೆಯುತ್ತಿದ್ದ ದಾಖಲೆಗಳಿವೆ. ಗ್ರೀಕ್ ಪ್ರವಾಸಿಗ ಹೆರೋಡೋಟಸ್ ಬರೆದಿರುವ ಪ್ರಕಾರ ಇಥಿಯೋಪಿಯದ ಟ್ರೊಗ್ಲೊಡೈಟ್‌ಸ್ ಮೂಲನಿವಾಸಿಗಳದೊಂದು ವಿಚಿತ್ರ ಭಾಷೆ ಇತ್ತಂತೆ. ‘ಬಾವಲಿಗಳು ಚೀರುವಂತೆ ಮನುಷ್ಯರು ಈ ಭಾಷೆಯಲ್ಲಿ ಮಾತನಾಡುತ್ತಾರೆ, ಪರಸ್ಪರ ವಿಚಾರವಿನಿಮಯ ಮಾಡುತ್ತಾರೆ ಎಂದು ಹೆರೋಡೋಟಸ್ ದಾಖಲಿಸಿದ್ದಾನೆ. ಚೀನಾ ದೇಶದ ಪ್ರಾಚೀನ ಗ್ರಂಥಗಳಲ್ಲೂ ಶಿಳ್ಳೆಯನ್ನು ಸಂಗೀತವಾಗಿ ಮತ್ತು ದೂರಸಂಪರ್ಕ ಭಾಷೆಯಾಗಿ ಬಳಸುತ್ತಿದ್ದುದರ ಬಗ್ಗೆೆ ದಾಖಲೆಗಳಿವೆಯಂತೆ. ಪ್ರಾಚೀನ ಫ್ರಾನ್‌ಸ್‌ನ ಸೇನಾಧಿಕಾರಿಯೊಬ್ಬ- ಜೀನ್ ಡೆ ಬೆಥೆನ್‌ಕೋರ್ಟ್ ಎಂಬಾತ- ಸ್ಪಾನಿಷ್ ರಾಣಿ ಇಸಾಬೆಲ್‌ಳ ಆಡಳಿತದಲ್ಲಿದ್ದ ಕ್ಯಾನರಿ ದ್ವೀಪಗಳ ಮೇಲೆ ದಾಳಿಯಿಟ್ಟು ವಶಪಡಿಸಿಕೊಂಡಾಗ ಸೇನಾಧಿಕಾರಿಯೊಂದಿಗಿದ್ದ ಇಬ್ಬರು ಪಾದ್ರಿಗಳು ಆ ದ್ವೀಪಗಳ ಮೂಲನಿವಾಸಿಗಳು ಬಳಸುತ್ತಿದ್ದ ಸಿಲ್ಬೊ ಭಾಷೆಯ ವೈಶಿಷ್ಟ್ಯವನ್ನು ದಾಖಲಿಸಿದ್ದಾರೆ. ‘ಎರಡು ತುಟಿಗಳನ್ನಷ್ಟೇ ಬಳಸಿ, ಬಾಯಿಯೊಳಗೆ ನಾಲಗೆಯೇ ಇಲ್ಲವೇನೋ ಎಂಬಂತೆ, ಆ ಜನರು ಆಡುವ ಭಾಷೆ ನಿಜಕ್ಕೂ ವಿಚಿತ್ರವಾಗಿದೆ’ ಎಂದು ಅವರು ಬರೆದಿದ್ದಾರೆ. ಎರಡು ತುಟಿಗಳನ್ನಷ್ಟೇ ಬಳಸಿ, ಬಾಯಿಯೊಳಗೆ ನಾಲಗೆಯೇ ಇಲ್ಲವೇನೋ ಎಂಬಂತೆ ಆಡುವ ಭಾಷೆ ಅಂದರೆ ಬೇರಾವುದೂ ಅಲ್ಲ, ನಮಗೆಲ್ಲ ಗೊತ್ತಿರುವ ಶಿಳ್ಳೆ ಭಾಷೆಯೇ.
ಆಧುನಿಕ ಪಾಶ್ಚಾತ್ಯ ಜಗತ್ತಿನಲ್ಲಿ ಶಿಳ್ಳೆಗೆ ಸ್ಥಾನಮಾನ ಇದೆಯೇ? ಇದೆ. ಬಾತ್‌ರೂಮ್ ಸಿಂಗಿಂಗ್‌ನಂತೆಯೇ ತನ್ನ ಪಾಡಿಗೆ ತಾನು ಗುನುಗುನಿಸುವುದಕ್ಕೆ, ಸಾಕುಪ್ರಾಣಿಗಳೊಂದಿಗೆ ಸಂಭಾಷಿಸುವುದಕ್ಕೆ, ಆಟೋಟಗಳಲ್ಲಿ ತಂಡದ ಸದಸ್ಯರು ಒಬ್ಬರಿಗೊಬ್ಬರು ಗೂಢ ಸಂದೇಶ/ಸಂಜ್ಞೆ ಕೊಡುವುದಕ್ಕೆ ಶಿಳ್ಳೆ ಇಲ್ಲಿಯೂ ಬಳಕೆಯಾಗುತ್ತದೆ. ನ್ಯೂಯಾರ್ಕ್ ನಗರದಲ್ಲಾದರೆ ಟ್ಯಾಕ್ಸಿಯವನನ್ನು ಕರೆಯುವುದಕ್ಕೆ ಶಿಳ್ಳೆ ಬಳಸಿದರೂ ಅದು ಅನಾಗರಿಕ ಅಸಭ್ಯ ಎಂದೆನಿಸಿಕೊಳ್ಳುವುದಿಲ್ಲ. ಟ್ಯಾಕ್ಸಿಯವರು ಅನ್ಯಥಾ ಭಾವಿಸುವುದೂ ಇಲ್ಲ. ಪರಂತು, ಪಡ್ಡೆಹುಡುಗರ ಸ್ಟೈಲ್‌ನಂತೆ ಶಿಳ್ಳೆ ಹಾಕಿದರೆ – ಅದನ್ನಿಲ್ಲಿ ಡ್ಯುವಲ್ ಟೋನ್‌ಡ್ ವುಲ್‌ಫ್ ವ್ಹಿಸಿಲ್ ಎನ್ನತ್ತಾರೆ – ಹೆಂಗಸರು ಮುಜುಗರಕ್ಕೊಳಗಾಗುವ, ಸಿಟ್ಟಿಗೇಳುವ ಸಾಧ್ಯತೆಯಿರುತ್ತದೆ. ಏಕೆಂದರೆ ಶಿಳ್ಳೆಯು ಮನುಷ್ಯರ ನಡುವಿನ ಸಭ್ಯ, ಸುಸಂಸ್ಕೃತ ಸಂಭಾಷಣೆಗೆ ಬಳಕೆಯಾಗುತ್ತದೆಂಬ ಕಲ್ಪನೆ ಇಲ್ಲಿಲ್ಲ. ಅದು ಸಹಜ ಕೂಡ. ನಾಗರಿಕತೆ ಬೆಳೆದು ಹೆಚ್ಚುಹೆಚ್ಚು ಸಂಸ್ಕಾರಯುತ ಶಿಷ್ಟ ಭಾಷೆಗಳನ್ನಾಡುವವರಿಗೆ ಶಿಳ್ಳೆ ಬರಿ ಒಂದು ಶಬ್ದ ಅಷ್ಟೇ. ಭಾಷೆಯ ಸ್ಥಾನವನ್ನೆೆಂದೂ ಅದು ಅಲಂಕರಿಸಲಾರದು, ನಿಭಾಯಿಸಲಾರದು. ಆದರೆ ಗ್ರೀಸ್‌ನ ಏಂಟಿಸ್ ಹಳ್ಳಿಯಂಥ ಪ್ರದೇಶಗಳಲ್ಲಿ ಹಾಗಲ್ಲ. ಅಲ್ಲಿ ಶಿಳ್ಳೆ ಬರಿ ಒಂದು ಶಬ್ದವಲ್ಲ. ಅದೇ ಮುಖ್ಯ ಭಾಷೆ. ಅದೇ ಸಂಸ್ಕೃತಿಯ ಸಮಗ್ರ ರೂಪ. ಶಿಳ್ಳೆ ಭಾಷೆಯಲ್ಲಿ ಮನಸ್ಸಿನ ಭಾವನೆಗಳನ್ನೆಲ್ಲ ವ್ಯಕ್ತಪಡಿಸಲಿಕ್ಕಾಗುವುದು ನಿಜಕ್ಕೂ ಸಾಧ್ಯವೇ ಎಂಬ ಸಂದೇಹ ಬೇರೆಯವರಿಗೇನೋ ಬರಬಹುದು. ಆದರೆ ಏಂಟಿಸ್ ಮಂದಿಗೆ ಹಾಗನಿಸುವುದಿಲ್ಲ. ಅವರು ದುಃಖದ ವಿಚಾರಗಳನ್ನು- ಉದಾಹರಣೆಗೆ ಸಾವಿನ ಸುದ್ದಿಯನ್ನು- ಮಂದ್ರ ಸ್ಥಾಯಿಯ ಶಿಳ್ಳೆಯಲ್ಲಿ ತಿಳಿಸಬಲ್ಲರು. ಸಂತಸ ಸಂಭ್ರಮಗಳ ಸುದ್ದಿಗಳಿಗೆ ತಾರಕ ಸ್ಥಾಯಿಯ ಶಿಳ್ಳೆ ಬಳಸಬಲ್ಲರು. ಶಿಳ್ಳೆ ಮೂಲಕ ಸಂಭಾಷಿಸಿದರೇನೇ ಆತ್ಮೀಯತೆಯ ಭಾವನೆ ಬರುವುದು ಎಂಬ ದೃಢನಂಬಿಕೆ ಅವರದು. ಅದಕ್ಕಾಗಿ ಶತಾಯಗತಾಯ ಹೋರಾಡಿಯಾದರೂ ಶಿಳ್ಳೆ ಭಾಷೆಯನ್ನು ಸಜೀವವಾಗಿ ಇಟ್ಟುಕೊಳ್ಳಬೇಕೆಂಬ ಮಹತ್ವಾಕಾಂಕ್ಷೆ.
ಸರಿ, ಇದೀಗ ಕೋವಿಡ್-19 ವೈರಸ್‌ನಿಂದಾಗಿ ಪ್ರಪಂಚದ ಬಹುಭಾಗವೆಲ್ಲ ಲಾಕ್ ಡೌನ್ ಆಗಿರುವಾಗ, ಗೃಹಬಂಧನದ ಬೇಸರ ಕಳೆಯಲಿಕ್ಕೆ, ಸೋಶಿಯಲ್ ಡಿಸ್ಟೇನ್ಸಿಿಂಗ್ ಕಾಪಾಡಿಕೊಳ್ಳಲಿಕ್ಕೆೆ ನಾವೆಲ್ಲ ಶಿಳ್ಳೆ ಭಾಷೆಯನ್ನಾರಂಭಿಸಿದರೆ ಹೇಗೆ? ಒಂದಿಷ್ಟು ಮನೋರಂಜನೆಯಾದರೂ ಸಿಗಬಹುದು ಎಂದು ನನ್ನ ಅಭಿಪ್ರಾಯ. ನೀವೇನಂತೀರಿ?