Monday, 4th November 2024

ಕಾಡಿನ ನಡುವೆ 120 ಮೆಟ್ಟಿಲು ಕಟ್ಟಿಸಿದವರಾರು ?

ಶಶಾಂಕಣ

shashidhara.halady@gmail.com

ಮುದ್ದಳ ರಾಜನ ಅರಮನೆ ಇದ್ದ ಕೋಟೆಯಲ್ಲಿ ಕೆಲವು ಅಕೇಶಿಯ ಮರಗಳು ಬೆಳೆದಿವೆ. ಮುದ್ದಳನ ಹೆಸರಿನ ಹೋಲಿಕೆ ಇರುವ ‘ಮುದೂರಿ’ ಪ್ರದೇಶದ ಆ ದೇವಾಲಯ ಜೀರ್ಣೋದ್ಧಾರಗೊಂಡಿದೆ. ದೇಗುಲದ ಪಕ್ಕದಲ್ಲಿ ಸರಕಾರಿ ಶಾಲೆ ಇದೆ. ಕೋಟೆ ಹಕ್ಕಲಿಗೂ, ದೇಗುಲಕ್ಕೂ ಮಧ್ಯೆ ವಾರಾಹಿ ಏತ ನೀರಾವರಿಯ ಕಾಲುವೆ ಬಂದಿದ್ದು, ಅದರ ನೀರು ಹರಿಯುತ್ತದೆ.

ನಮ್ಮ ಹಳ್ಳಿಮನೆಯ ಪೂರ್ವದಿಕ್ಕಿನಲ್ಲಿ ಒಂದು ಪುಟ್ಟಗದ್ದೆ ಇದೆ. ಅದರ ಹೆಸರು ‘ಭಟ್ಟರ ಗದ್ದೆ’. ಆದರೆ ನಾವು ಕಂಡಂತೆ ಅದರ ಈಗಿನ ಮಾಲೀಕರು ಶೆಟ್ಟರು! ಶೆಟ್ಟರು ಉಳುಮೆ ಮಾಡುತ್ತಿರುವ ಗದ್ದೆಯನ್ನು ‘ಭಟ್ಟರ ಗದ್ದೆ’ ಎಂದು ಏಕೆ ಕರೆದರು? ಇದು ನಮಗೆ ಅಂದರೆ ಮಕ್ಕಳಿಗೆ ಕುತೂಹಲದ ಪ್ರಶ್ನೆ! ಇಂತಹ ಪ್ರಶ್ನೆಗಳನ್ನು ಇಟ್ಟುಕೊಂಡು ಆಗಾಗ ನಮ್ಮ ಅಮ್ಮಮ್ಮನ ತಲೆ ತಿನ್ನುತ್ತಿದ್ದೆವು. ಅದಕ್ಕೆ ಅವರ ಉತ್ತರವೆಂದರೆ ‘ಹಿಂದೆ ಆ ಗದ್ದೆಯು ಪಂಚಾಂಗ ಬರೆಯುತ್ತಿದ್ದ ಭಟ್ಟರದ್ದೇ ಆಗಿತ್ತು.

ಕಾಲಕ್ರಮೇಣ ಅದನ್ನು ಶೆಟ್ಟರು ಗೇಣಿಗೆ ತೆಗೆದುಕೊಂಡು, ಅದರ ಮಾಲೀಕರೂ ಆದರು’. ಆ ಗದ್ದೆಯ ಒಂದು ಪಕ್ಕದಲ್ಲಿ ತೋಡು, ಇನ್ನೊಂದು ಪಕ್ಕದಲ್ಲಿ ಮಕ್ಕಿ ಗದ್ದೆ, ಪೂರ್ವ ದಿಕ್ಕಿನಲ್ಲಿ ಮೂರುಮುಡಿ ಗದ್ದೆ ಇತ್ತು. ಇವೆಲ್ಲವುಗಳ ಮಾಲೀಕರು ಬೇರೆ ಬೇರೆ. ಆದ್ದರಿಂದಲೇ ಮಧ್ಯದಲ್ಲಿದ್ದುದಕ್ಕೆ ‘ಭಟ್ಟರಗದ್ದೆ’ ಎಂಬ ಹೆಸರು ಏಕೆ ಬಂದಿತ್ತು ಎಂಬ ಕುತೂಹಲ ನಮಗೆ.

ಅದೇ ಗದ್ದೆಯಿದ್ದ ಬೈಲಿನಲ್ಲಿ, ಹೈಕಾಡಿಗೆ ಹೋಗುವ ದಾರಿಯಲ್ಲಿ ಹಾಗೇ ಮುಂದೆ ಸಾಗಿದರೆ, ‘ಉಪಾಯ್ದರ ಬೆಟ್ಟು’ ಎಂಬ ಜಾಗವಿದೆ. ತುಸು ಎತ್ತರದ ಜಾಗದಲ್ಲಿ ನಾಲ್ಕೆಂಟು ಬೈಲು ಗದ್ದೆಗಳು, ಮಕ್ಕಿ ಗದ್ದೆಗಳ ಜಾಗ ಅದು. ಅಲ್ಲೊಂದು ಪುಟ್ಟ
ಗಣಪತಿ ಗುಡಿಯೂ ಇದೆ. ಆದರೆ ಅಲ್ಲಿ ಯಾವ ಉಪಾಧ್ಯ ಅಥವಾ ‘ಉಪಾಯ್ದ’ ಇರಲಿಲ್ಲ. ಉಪಾಧ್ಯರು ಇಲ್ಲದ ಈ ಜಾಗಕ್ಕೆ ‘ಉಪಾಯ್ದರ ಬೆಟ್ಟು’ ಎಂಬ ಹೆಸರು ಹೇಗೆ ಬಂತು ಎಂಬ ಕುತೂಹಲ ಮಕ್ಕಳಿಗೆ. ಪುನಃ ಅಮ್ಮನ ತಲೆ ತಿನ್ನುತ್ತಿದ್ದೆವು.

ಇಂತಹ ಪ್ರಶ್ನೆಗಳಿಗೆ ಅವರು ನೇರವಾಗಿ ‘ಗೊತ್ತಿಲ್ಲ’ ಎಂದು ಹೇಳುತ್ತಿರಲಿಲ್ಲ; ಮಕ್ಕಳ ಕುತೂಹಲ ತಣಿಸಲೆಂದೂ ಏನೋ, ಏನಾದರೊಂದು ಉತ್ತರ ಹೇಳುತ್ತಿದ್ದರು. ‘ಮುಂಚೆ ಅಲ್ಲಿ ಉಪಾಧ್ಯರು ಇದ್ದರು’ ಎಂಬುದು ಅವರ ಉತ್ತರ. ಮುಂಚೆ
ಅಂದರೆ ಯಾವಾಗ ಎಂಬ ನಮ್ಮ ಮತ್ತೊಂದು ಪ್ರಶ್ನೆಗೆ ಸ್ಪಷ್ಟ ಉತ್ತರ ಅವರಿಗೂ ಗೊತ್ತಿರಲಿಲ್ಲ. ನಾವು ನೋಡುವಾಗ ಆ ಉಪಾಯ್ದರ ಬೆಟ್ಟಿನಲ್ಲಿ ಪರಮೇಶ್ವರ ಆಚಾರಿ, ಶೀನ ಆಚಾರಿ ಮತ್ತಿತರ ಕುಟುಂಬಗಳಿದ್ದವು. ಪರಮೇಶ್ವರ ಆಚಾರ್ಯರು
ನಮ್ಮ ಮನೆ ಕಟ್ಟಿಸಿದ ಬಡಗಿ ಮತ್ತು ಮೇಲ್ವಿಚಾರಕ.

ಅದೇ ಉಪಾಯ್ದರ ಬೆಟ್ಟಿನಲ್ಲಿದ್ದ ಶೀನ ಆಚಾರಿ ನಮ್ಮ ಮನೆಗೆ ಒಂದು ಮರದ ಟೇಬಲ್ ಮಾಡಿಕೊಟ್ಟಿದ್ದು ನೆನಪಿದೆ. ಒಳ್ಳೆಯ ಹಳದಿ ಬಣ್ಣದ ಹಲಸಿನ ಮರವನ್ನು ಕೆತ್ತಿ, ಆ ಟೇಬಲ್ ಮಾಡಲು ಶೀನ ಆಚಾರಿಗೆ ಮೂರ‍್ನಾಲಕ್ಕು ವಾರ ಬೇಕಾಗಿತ್ತು. ಒಂದು ಕಳಸಿಗೆ ಅಕ್ಕಿಯನ್ನು ಮಜೂರಿಯಾಗಿ ಪಡೆದು ಶೀನ ಆಚಾರಿ ನಿರ್ಮಿಸಿದ್ದ ಆ ಟೇಬಲ್ ಇಂದಿಗೂ ನಮ್ಮ ಮನೆಯಲ್ಲಿದೆ. ನಾನು ನಾಲ್ಕನೆಯ ತರಗತಿಯಲ್ಲಿದ್ದಾಗ ನನ್ನ ‘ಓದು ಮತ್ತು ಅಧ್ಯಯನ’ಕ್ಕೆ ಅನುಕೂಲವಾಗಲೆಂದು ನಮ್ಮ ಅಮ್ಮಮ್ಮ ಮಾಡಿಸಿದ್ದ ಆ ಟೇಬಲ್, ಈಗ ಟಿ.ವಿ. ಇಡಲು ಉಪಯೋಗಕ್ಕೆ ಬರುತ್ತಿದೆ.

ನಮ್ಮ ಮನೆಯ ಹಿಂಭಾಗದಲ್ಲಿ ಒಂದು ಫರ‍್ಲಾಂಗು ದೂರ ನಡೆದರೆ ‘ಗಾಣದಡಿ’ ಎಂಬ ಜಾಗ ಇದೆ. ಗಾಣದಡಿ ಅಥವಾ ಗಾಣದ
ಅಡಿಯಲ್ಲಿ (ಅಡಿ ಅಂದರೆ ಜಾಗ) ನಾನು ಕಂಡಂತೆ ಎಣ್ಣೆಯ ಗಾಣವೇನೂ ಇರಲಿಲ್ಲ. ಗಾಣದಿಂದ ಎಣ್ಣೆ ತೆಗೆಯುವ ಜನಾಂಗ ದವರೂ ಅಲ್ಲಿಲ್ಲ. ಆದರೆ ವರ್ಷಕ್ಕೊಮ್ಮೆ ಅಲ್ಲಿ ‘ಕಬ್ಬಿನಾಲೆ’ ನಡೆಯುತ್ತಿತ್ತು. ನಮ್ಮ ಬಯಲಿನ ನಾಲ್ಕಾರು ಕೃಷಿಕರು ಬೆಳೆದ ಕಬ್ಬನ್ನು ಅ ಹಾಲು ಮಾಡಿ, ಕೊಪ್ಪರಿಗೆಯಲ್ಲಿ ಕುದಿಸಿ ಬೆಲ್ಲ ಮಾಡುತ್ತಿದ್ದರು. ಆ ಸಮಯದಲ್ಲಿ ಅಲ್ಲಿಗೆ ಹೋದವರಿಗೆಲ್ಲ ಕಬ್ಬಿನ ಹಾಲು ಮತ್ತು ಬೆಲ್ಲ ಸೇವನೆ ಉಚಿತ. ಅದೇ ಗಾಣದಡಿಯಲ್ಲಿ ತಯಾರಿಸಿದ ಮುದ್ದೆ ಬೆಲ್ಲವನ್ನು ಡಬ್ಬಿಗಳ ಲೆಕ್ಕದಲ್ಲಿ ನಮ್ಮ
ಮನೆಯವರು ಖರೀದಿಸುತ್ತಿದ್ದರು. ಅದಕ್ಕೂ ಕೆಲವು ವರ್ಷಗಳ ಮುಂಚೆ ನಮ್ಮ ಅಮ್ಮಮ್ಮ ಕಬ್ಬನ್ನು ಬೆಳೆಸಿ, ಪ್ರತಿವರ್ಷ ಸ್ವಲ್ಪ ಬೆಲ್ಲ ಮಾಡಿಸುತ್ತಿದ್ದರಂತೆ.

ಆದರೆ ಒಮ್ಮೆ ಕಬ್ಬಿನ ಹಾಲನ್ನು ಕುದಿಸಿ ತಯಾರಿಸಿದ ಬಿಸಿಬಿಸಿ ಬೆಲ್ಲ ತುಂಬಿದ ಕೊಬ್ಬರಿಗೆಯನ್ನು ಕೆಳಗೆ ಇಳಿಸುವಾಗ, ಕೊಪ್ಪರಿಗೆ ಉರುಳಿ ಬೆಲ್ಲ ಚೆಲ್ಲಿಹೋಯಿತಂತೆ. ಅದನ್ನು ಕಂಡು ಬೆದರಿದ ಅಮ್ಮಮ್ಮ, ಕಬ್ಬು ಬೆಳೆದು ಬೆಲ್ಲ ಮಾಡುವ ಸಾಹಸಕ್ಕೆ ವಿದಾಯ ಹೇಳಿದರು. ಬಹುಶಃ ಬಹು ಹಿಂದೆ ಅಲ್ಲಿ ನಮ್ಮ ಹಳ್ಳಿಯವರಿಗೆ ಉಪಯೋಗಕ್ಕೆ ಬರುತ್ತಿದ್ದ ಗಾಣವಿದ್ದಿರಬೇಕು.

ಗಾಣದಡಿಯ ಸ್ವಲ್ಪ ದೂರದಲ್ಲಿ, ಉತ್ತರದಿಕ್ಕಿನಲ್ಲಿ ‘ಕಂಬಳಗದ್ದೆ’ ಇದೆ. ನಮ್ಮೂರಿನ ಮುದೂರಿ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿರುವ ಕಂಬಳಗದ್ದೆಯು ಒಂದು ಗದ್ದೆಯ ಹೆಸರೂ ಹೌದು, ಒಂದು ಮನೆಯ ಹೆಸರೂ ಹೌದು. ಆ ವಿಶಾಲವಾದ ಕೆಸರುಗzಯಲ್ಲಿ ಕಂಬಳ ನಡೆದದ್ದನ್ನು ನಾವೆಂದೂ ಕಂಡಿರಲಿಲ್ಲ. ನಾಲ್ಕಾರು ಎಕರೆ ವಿಸ್ತೀರ್ಣವಿದ್ದ ಆ ಗದ್ದೆಯನ್ನು ಕಂಬಳಗದ್ದೆ
ಎಂದೇಕೆ ಕರೆಯುತ್ತಿದ್ದರು ಎಂಬ ಕುತೂಹಲ ನಮಗೆ. ಯಥಾಪ್ರಕಾರ ಈ ಪ್ರಶ್ನೆಯೊಂದಿಗೆ ಅಮ್ಮನ ತಲೆ ತಿನ್ನುತ್ತಿದ್ದೆವು.

‘ಅಷ್ಟು ಗೊತ್ತಾತಿಲ್ಯಾ.. ಮುಂಚೆ ಅಲ್ಲಿ ಕಂಬಳ ಆಗುತ್ತಿತ್ತು. ಆದ್ದರಿಂದಲೇ ಅದಕ್ಕೆ ಕಂಬಳಗದ್ದೆ ಎಂಬ ಹೆಸರು’ ಎಂಬುದು
ಅವರ ಉತ್ತರ. ‘ಮುಂಚೆ ಅಂದರೆ ಯಾವಾಗ? ಈಗ ಯಾಕೆ ಕಂಬಳ ಆಗುತ್ತಿಲ್ಲ?’ ಎಂದು ಪ್ರಶ್ನಿಸಿದರೆ, ‘ಮುಂಚೆ ಅಂದರೆ ಇಲ್ಲಿ ಮುದ್ದಳರಾಜ ರಾಜ್ಯಭಾರ ಮಾಡುತ್ತಿದ್ದಾಗ. ಅವರ ರಾಜ್ಯ ನಾಶವಾದ ನಂತರ ಕಂಬಳ ನಿಂತುಹೋಯಿತು’
ಎನ್ನುತ್ತಿದ್ದರು ಅಮ್ಮಮ್ಮ.

ಇಷ್ಟೇ ವಿಶಾಲವಿರುವ, ನಮ್ಮೂರಿಗೆ 2 ಕಿ.ಮೀ. ದೂರದಲ್ಲಿರುವ ಚೋರಾಡಿ ಕಂಬಳಗದ್ದೆಯಲ್ಲಿ ಪ್ರತಿವರ್ಷ ಈಗಲೂ ಕೋಣ ಗಳ ಕಂಬಳ ನಡೆಯುತ್ತಿದೆ. ಯಾವುದೋ ಕಾಲದಲ್ಲಿ ನಮ್ಮೂರಿನ ಈ ಕಂಬಳಗದ್ದೆಯಲ್ಲಿ ಕಂಬಳ ನಡೆದಿರಬೇಕು. ಅಮ್ಮಮ್ಮ ಹೇಳಿದಂತೆ ಮುದ್ದಳ ರಾಜನ ಆಳ್ವಿಕೆ ಮುಗಿದ ನಂತರ ಕಂಬಳ ನಡೆಯುವುದು ನಿಂತುಹೋಗಿರಬಹುದು. ನಮ್ಮ ಮನೆಯ ಪಶ್ಚಿಮಕ್ಕಿರುವ ಈ ಕಂಬಳಗದ್ದೆ ಈಗ ನಾಲ್ಕಾರು ವಿಭಾಗಗಳಾಗಿವೆ.

ಅದರ ಒಂದು ಮೂಲೆಯಲ್ಲಿ ಪುಟ್ಟ ಅಡಿಕೆತೋಟ ಮಾಡಲಾಗಿದೆ. ಆ ಗದ್ದೆಯ ಒಂದು ಮೂಲೆಯಲ್ಲಿದ್ದ ದೊಡ್ಡ ನೀರಿನ ಗುಮ್ಮಿ ಯಲ್ಲಿ ಕೆಲವು ವಿಗ್ರಹಗಳು ಮುಳುಗಿದ್ದನ್ನು ಕಂಡ ನೆನಪಿದೆ. ನಮ್ಮ ಮನೆಯೆದುರು ಉತ್ತರ ದಿಕ್ಕಿನಲ್ಲಿ ಇನ್ನೊಂದು ಕಂಬಳಗದ್ದೆ ಇದೆ. ಅದನ್ನು ಪ್ರತ್ಯೇಕವಾಗಿ ಗುರುತಿಸಲು ‘ಗುಳಿನಬೈಲು’ ಕಂಬಳಗದ್ದೆ ಎನ್ನುತ್ತಿದ್ದರು. ಈ ಗದ್ದೆ ಸಹ ಕೋಣ ಗಳನ್ನು ಓಡಿಸಿ ಬಳ ನಡೆಸುವಷ್ಟೇ ಉದ್ದವಿದೆ. ಆದರೆ ಅಲ್ಲೂ ಕಂಬಳ ನಡೆದದ್ದನ್ನು ನಾವು ಕಂಡಿಲ್ಲ.

‘ಅಲ್ಲೂ ಮುಂಚೆ ಕಂಬಳ ನಡೆಯುತ್ತಿತ್ತು. ಅದಕ್ಕೇ ಆ ಹೆಸರು. ಆದರೆ ಯಾವಾಗ ಕಂಬಳ ನಿಂತು ಹೋಯ್ತೆಂದು ನನಗೆ ಗೊತ್ತಿಲ್ಲ’ ಎಂಬುದು ಅಮ್ಮ ಮ್ಮನ ವ್ಯಾಖ್ಯಾನ. ಬಹಳಷ್ಟು ಕಾಲ ಈ ಕಂಬಳಗದ್ದೆಯಲ್ಲಿ ಭತ್ತ ಬೆಳೆಯುತ್ತಿದ್ದರು. ಆದರೆ ಆ
ಸುತ್ತಲಿನ ಅಷ್ಟೂ ಜಾಗ ಖರೀದಿಸಿದವರು ಈಗ ಅಡಿಕೆತೋಟ ಬೆಳೆಸಿದ್ದಾರೆ.

ಅದೇ ದಾರಿಯಾಗಿ ಬಯಲಿನಲ್ಲಿ ಇನ್ನೂ ಮುಂದೆ ಹೋದರೆ ‘ಕಟ್ಟಿನ ಗುಂಡಿ’ ಎಂಬ ಮನೆ ಸಿಗುತ್ತದೆ. ಈ ಸ್ಥಳನಾಮದ ವಿಶ್ಲೇಷಣೆ ಸರಳ. ನಮ್ಮ ಮನೆಯ ಎದುರಿನಲ್ಲಿ ಹಾದುಹೋಗುವ ತೋಡು, ಕಟ್ಟಿನ ಗುಂಡಿಯ ಬಳಿ ಹರಿಯುವಾಗ ಸಾಕಷ್ಟು
ವಿಶಾಲವಾಗುತ್ತದೆ. ಆ ಜಾಗದಲ್ಲಿ ತೋಡಿನ ನೀರಿಗೆ ಅಡ್ಡಲಾಗಿ ನವಂಬರ್ ತಿಂಗಳಲ್ಲಿ ಕಟ್ಟಿ ಹಾಕಿ, ನೀರು ಸಂಗ್ರಹಿಸಿ, ಸುಗ್ಗಿಬೆಳೆ ಮತ್ತು ಒಮ್ಮೊಮ್ಮೆ ಕೊಳಕೆ ಬೆಳೆಯನ್ನು ಬೆಳೆಯುವುದರಿಂದಾಗಿ, ನೀರು ನೀಡುವ ಆ ‘ಕಟ್ಟಿನ ಗುಂಡಿ’ ಇಂದಿಗೂ ಅನ್ವರ್ಥ ನಾಮವಾಗಿಯೇ ಉಳಿದಿದೆ.

ಆದರೆ ಅದರ ಪಕ್ಕದಲ್ಲಿರುವ ಮೇಲ್ ಕೊಡಿಗೆ ಮತ್ತು ಕೆಳ ಕೊಡಿಗೆ ಎಂಬ ಜಾಗಗಳ ಪದನಿಷ್ಪತ್ತಿ ಸ್ಪಷ್ಟವಿಲ್ಲ. ಅದೇ ರೀತಿ ನಮ್ಮ ಮನೆ ಹತ್ತಿರ, ಉತ್ತರ ದಿಕ್ಕಿನಲ್ಲಿರುವ ಮುಡಾರಿ, ಪಶ್ಚಿಮ ದಿಕ್ಕಿನಲ್ಲಿರುವ ನೀಕ್ಮಡಿ – ಈ ಎರಡೂ ಮನೆಗಳಿಗೆ ಆ ಹೆಸರು ಏಕೆ
ಬಂತೆಂಬುದು ನನಗೂ ಗೊತ್ತಿಲ್ಲ, ಅಮ್ಮಮ್ಮನಿಗೂ ಗೊತ್ತಿರಲಿಲ್ಲ. ಪುರಾತನ ಕಾಲದಲ್ಲಿ ಬಳಕೆಯಲ್ಲಿದ್ದ ಹಳಗನ್ನಡದಲ್ಲಿ ರೂಪುಗೊಂಡಿರಬಹುದಾದ ಆ ಪದಗಳ ಅರ್ಥ ಇಂದಿನ ತಲೆಮಾರಿನ ಅರಿವಿನಿಂದ ಲುಪ್ತಗೊಂಡಿದೆ.

ಉತ್ತರ ಭಾಗದಿಂದ ಸಾಗಿಬಂದು ಉದ್ದಕ್ಕೂ ಹರಡಿರುವ ಗzಬೈಲು, ನಮ್ಮ ಮನೆಯ ಎದುರು ಪೂರ್ವಕ್ಕೆ ತಿರುಗಿ ಒಂದು ಕಿ.ಮೀ. ದೂರ ಸಾಗುತ್ತದೆ. ಆ ಬೈಲಿನ ಹೆಸರು ‘ಚೇರ್ಕಿ (ಚೇರಿಕೆ) ಬೈಲು’; ಬಯಲಿನ ತುದಿಯಲ್ಲಿ ಎತ್ತರಕ್ಕೆ ಏರಿಕೊಂಡ ಬೆಟ್ಟ ಮತ್ತು ಕಾಡು ಪ್ರದೇಶವಿದ್ದು ಅದನ್ನು‘ಚೇರ್ಕಿ ಹರ’ ಎನ್ನುವುದುಂಟು. ಇಲ್ಲಿ ‘ಹರ’ ಎಂದರೆ ಎತ್ತರವಾದ ಬೆಟ್ಟ ಎಂದರ್ಥ. ಚೇರ್ಕಿ ಹರವೇ ಮುಂದುವರಿದು ದಕ್ಷಿಣ ದಿಕ್ಕಿನಲ್ಲಿ ‘ಬಳ್ಳಿ ಹರ’ವಾಗಿದೆ. ಅದೂ ಎತ್ತರವಾದ ಬೆಟ್ಟವೇ.

ಚೇರ್ಕಿಹರವನ್ನು ಏರಿಹೋದರೆ ತುದಿಯಲ್ಲಿ ನಾಲ್ಕಾರು ಚದರ ಕಿಲೋಮೀಟರ್ ವಿಸ್ತೀರ್ಣದ ‘ಹರನ ಗುಡ್ಡೆ’ ಇದೆ. ಮುರಕಲ್ಲಿನ ಹಾಸು, ಅಲ್ಲಲ್ಲಿ ಮೇಲೆದ್ದ ಮುರಕಲ್ಲಿನ ಒರಟು ಆಕೃತಿಗಳು, ಬರಡು ನೆಲ, ಕುರುಚಲು ಗಿಡ ಮರಗಳು ಹರನ ಗುಡ್ಡೆಯ ಸ್ವರೂಪ. ಚಳಿಗಾಲ ಕಳೆಯುತ್ತಿದ್ದಂತೆ ಅಲ್ಲಿ ಸೊಂಪಾಗಿ ಬೆಳೆಯುವ ‘ಕರಡ’ವು ನಮ್ಮೂರಿನ ಜಾನುವಾರುಗಳ ಪ್ರಮುಖ ಆಹಾರ. ಕರಡವು ಒಂದೆರಡು ಅಡಿ ಎತ್ತರ ಬೆಳೆದಾಗ ಅದನ್ನು ಕಿತ್ತು, ಹೊರೆ ಮಾಡಿ ತಂದು, ಹಟ್ಟಿಯಲ್ಲಿದ್ದ ಗಂಟಿಗೆ
ತಿನ್ನಿಸುವ, ಅದರ ಕಾಲಡಿ ಹರವಿ ಗೊಬ್ಬರ ಮಾಡುವ ಪರಿಪಾಠವಿತ್ತು. ಒಣಗಿದ ಕರಡವನ್ನು ‘ಮನೆ ಹೊದಿಸಲು’, ಚಾವಣಿ ಮುಚ್ಚಲು ಸಹ ಉಪಯೋಗಿಸಲಾಗುತ್ತಿತ್ತು.

ಈಗೆ ಹಂಚಿನ ಮಾಡು, ಆರ್‌ಸಿಸಿ ಚಾವಣಿ, ಕಲ್ಲು ಹಾಸಿದ ಬಾಚುಹಟ್ಟಿಗಳು ಜನಪ್ರಿಯಗೊಂಡ ನಂತರ, ಹರನಗುಡ್ಡೆಯ ಕರಡದ ಬಳಕೆ ಹೆಚ್ಚು ಕಡಿಮೆ ನಿಂತೇಹೋಗಿದೆ. ಆ ವಿಶಾಲವಾದ ಬೆಟ್ಟದ ತುಂಬಾ ಈಗ ಸರಕಾರದವರು ‘ಗೋವೆ ಫ್ಲಾಟ್’ ಮಾಡಿದ್ದಾರೆ.

ಚೇರ್ಕಿ ಬೈಲುದಾರಿಯ ಮೂಲಕ ಹರನಗುಡ್ಡೆಯತ್ತ ಸಾಗಿದರೆ, ಆ ಬೆಟ್ಟವನ್ನು ಏರಲು, ಮುರಕಲ್ಲಿನ ಮೆಟ್ಟಿಲುಗಳನ್ನು ಮಾಡಿಸಿರುವುದು ಬಹಳ ಕುತೂಹಲಕಾರಿ ವಿದ್ಯಮಾನ. ನೂರಾರು ವರ್ಷಗಳ ಹಿಂದೆ, ದಟ್ಟಕಾಡಿನ ನಡುವೆ ನಿರ್ಮಿಸಿರುವ ಆ
ಮೆಟ್ಟಿಲುಗಳು ಸುಮಾರು 4 ಅಡಿ ಅಗಲವಿವೆ. ಹೈಕಾಡಿ ಪೇಟೆಗೆ ಸಾಮನು ತರಲು ನಾವೆಲ್ಲ ಆ ಮೆಟ್ಟಿಲುಗಳನ್ನೇರಿ ಹೋಗು ತ್ತಿದ್ದಾಗ, ಎಷ್ಟು ಮೆಟ್ಟಿಲುಗಳಿವೆ ಎಂದು ಲೆಕ್ಕ ಹಾಕಿದ್ದುಂಟು.

ಒಂದೂವರೆ ಅಡಿ ಅಗಲದ, ಒಪ್ಪವಾಗಿ ಕೆತ್ತಿದ ಮುರಕಲ್ಲಿನಿಂದ ತಯಾರಾದ, ದಟ್ಟಕಾಡಿನ ನಡುವೆ ಇದ್ದ ಆ 120 ಮೆಟ್ಟಿಲು ಗಳನ್ನು ಮಾಡಿಸಿದ್ದು ಓರ್ವ ವೇಶ್ಯೆ ಎಂದು ಅಮ್ಮಮ್ಮ ಹೇಳುತ್ತಿದ್ದರು. ಆಕೆ ಅದೆಷ್ಟೋ ಚಿನ್ನದ ನಾಣ್ಯ ವೆಚ್ಚ ಮಾಡಿ, ಜಾತ್ರೆ ಮತ್ತು ಉತ್ಸವದ ವೇಳೆ ದೇವರನ್ನು ಹೊತ್ತು ಸಾಗಿಸುವವರಿಗೆ ಅನುಕೂಲವಾಗಲೆಂದು ಆ ಮೆಟ್ಟಿಲು ಮಾಡಿಸಿದ್ದಳಂತೆ. ಹರನ ಗುಡ್ಡೆಯಲ್ಲಿ ದೇವರನ್ನು ಕೂರಿಸುವ ಎರಡು ಪುರಾತನ ಕಟ್ಟೆಗಳು ಇವೆ.

20ನೇ ಶತಮಾನದಲ್ಲಿ ಕುಗ್ರಾಮವಾಗಿದ್ದ ನಮ್ಮೂರಿನಲ್ಲಿ, ಚಿನ್ನದ ನಾಣ್ಯ ವೆಚ್ಚ ಮಾಡಿ, ಕಾಡಿನ ನಡುವೆ ಮೆಟ್ಟಿಲು ಮಾಡಿಸುವ ಶ್ರೀಮಂತರು ಹಿಂದೆ ಇದ್ದರೆ? ಈ ನಮ್ಮ ಅಚ್ಚರಿಗೆ ಉತ್ತರ- ಹಿಂದೆ ನಮ್ಮ ಹಳ್ಳಿಯನ್ನು ಆಳಿದ್ದ ಮುದ್ದಳ ರಾಜ. ನಮ್ಮ ಊರನ್ನು ಬಹು ಹಿಂದೆ ಮುದ್ದಳ ರಾಜ ಎಂಬಾತ ಆಳುತ್ತಿದ್ದಾಗ, ಮುದೂರಿ ದೇವಾಲಯದ ದೇವರನ್ನು ನಮ್ಮ ಮನೆ ಎದುರಿನ ಬಯಲು ದಾರಿಯಲ್ಲಿ ಉತ್ಸವದ ಸಮಯದಲ್ಲಿ ಹೊತ್ತುಕೊಂಡು ಹೋಗುತ್ತಿದ್ದಾಗ, ಹರನಗುಡ್ಡೆಯ ಮೆಟ್ಟಿಲುಗಳು ಉಪಯೋಗಕ್ಕೆ ಬರುತ್ತಿದ್ದವು.

ಮುದೂರಿ ದೇವಾಲಯಕ್ಕೆ ಕಾಣಿಸುವಂತೆ, ಕೋಟೆ ಹಕ್ಕಲು ಎಂಬ ಎತ್ತರವಾದ ಪಾಳುಬಿದ್ದ ಜಾಗವಿದೆ. ಅಲ್ಲೇ ಮುದ್ದಳ ರಾಜನ ಮಣ್ಣಿನ ಅರಮನೆ ಇತ್ತೆಂದು ನಮ್ಮೂರಿನವರು ಗುರುತಿಸುತ್ತಾರೆ. ಈ ಮುದ್ದಳ ರಾಜನು ಕುಂದಾಪುರದಲ್ಲಿ ಅಳುತ್ತಿದ್ದ ಕುಂತಳ ರಾಜನ ಸೋದರ ನಂತೆ. ಕಾರಣಾಂತರದಿಂದ ಮುದ್ದಳ ರಾಜನ ರಾಜ್ಯವು ಅವನತಿಗೊಂಡಾಗ, ರಾಜ ಪರಿವಾರ ದವರು ಚೇರಿಕೆ ಮೆಟ್ಟಿಲನ್ನು ಏರಿ ಹರನ ಗುಡ್ಡೆಯ ದಾರಿಯಲ್ಲಿ ನಡೆದು ದಕ್ಷಿಣದತ್ತ ಸಾಗಿದರಂತೆ.

ಇಂದು ಮುದ್ದಳ ರಾಜನ ಅರಮನೆ ಇದ್ದ ಕೋಟೆ ಹಕ್ಕಲಿನಲ್ಲಿ ಕೆಲವು ಅಕೇಶಿಯ ಮರಗಳು ಬೆಳೆದಿವೆ. ಮುದ್ದಳನ ಹೆಸರಿನ ಹೋಲಿಕೆ ಇರುವ ‘ಮುದೂರಿ’ ಪ್ರದೇಶದ ಆ ದೇವಾಲಯ ಜೀರ್ಣೋದ್ಧಾರಗೊಂಡಿದೆ. ದೇಗುಲದ ಪಕ್ಕದಲ್ಲಿ ಸರಕಾರಿ ಪ್ರಾಥಮಿಕ ಶಾಲೆ ಇದೆ. ಕೋಟೆ ಹಕ್ಕಲಿಗೂ, ದೇಗುಲಕ್ಕೂ ಮಧ್ಯೆ ವಾರಾಹಿ ಏತ ನೀರಾವರಿಯ ಕಾಲುವೆ ಬಂದಿದ್ದು, ಅದರ ನೀರು ಹರಿಯುತ್ತಿದೆ. ಆ ರಾಜನ ಕಾಲದಲ್ಲೋ, ಅನಂತರವೋ ರೂಢಿಗೆ ಬಂದ ಸ್ಥಳನಾಮಗಳಾದ ಕಂಬಳಗದ್ದೆ, ಗಾಣದಡಿ, ಕಟ್ಟಿನಗುಂಡಿ, ಭಟ್ಟರಗದ್ದೆ- ಇವೆಲ್ಲವೂ ಅನಾಮಿಕ ಸ್ಥಳಗಳಾಗಿ ತಮ್ಮ ಪಾಡಿಗೆ ತಾವು ಇವೆ.