ನೂರೆಂಟು ವಿಶ್ವ
vbhat@me.com
ಜೀವಮಾನದಲ್ಲಿ ಸ್ವಾಮಿ ವಿವೇಕಾನಂದರಿಗೆ, ರಾಮಕೃಷ್ಣ ಪರಮಹಂಸರಿಗೆ, ಮಹಾತ್ಮ ಗಾಂಧಿಯವರಿಗೆ ಯಾವ ಪ್ರಶಸ್ತಿ ಬಂದಿದೆ? ಸಾಧನೆ ಮಾಡಿ ಪ್ರಶಸ್ತಿ ಪಡೆಯದಿರುವುದೇ
ದೊಡ್ಡ ಸಾಧನೆ. ಮಹಾತ್ಮ ಗಾಂಧಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಕೊಟ್ಟಿದ್ದರೆ ಅವರು ಅದನ್ನು ಪಡೆದ ಎಲ್ಲರ ಸಾಲಿಗೆ ಸೇರಿಬಿಡುತ್ತಿದ್ದರು. ಹತ್ತರಲ್ಲಿ ಹನ್ನೊಂದನೆಯವರಾಗುತ್ತಿದ್ದರು.
ಕೆಲವು ವರ್ಷಗಳ ಹಿಂದೆ ನಾನೊಂದು ವಕ್ರತುಂಡೋಕ್ತಿ ಬರೆದಿದ್ದೆ. ಅದೇನೆಂದರೆ, ‘ಜೀವನದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಕೊಡುತ್ತಾರೆ. ಆದರೆ ಪ್ರಶಸ್ತಿ ಪಡೆದುಕೊಳ್ಳುವುದೇ ನಿಜವಾದ ಸಾಧನೆ’. ಇಂದು ಜೀವನದಲ್ಲಿ ಸಾಧನೆ ಮಾಡುವುದು ದೊಡ್ಡದಲ್ಲ. ನಮ್ಮ ನಡುವೆ ಅಗಾಧ ಸಾಧನೆ ಮಾಡಿದವರು ಅನೇಕರಿದ್ದಾರೆ. ಆದರೆ ಅವರಾರಿಗೂ ಪ್ರಶಸ್ತಿ ಬಂದಿಲ್ಲ. ಅಂದರೆ ಸಾಧನೆ ಮಾಡಿದವರಿಗೆಲ್ಲ ಪ್ರಶಸ್ತಿ ಬಂದೇ ಬರುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ಸಾಧನೆ ಮಾಡಿಯೂ ಪ್ರಶಸ್ತಿ ಪಡೆದುಕೊಂಡಿದ್ದರೆ ಅದು ನಿಜವಾದ ಪ್ರಶಸ್ತಿ.
ಇನ್ನು, ಸಾಧನೆಯನ್ನೇ ಮಾಡದೇ ಪ್ರಶಸ್ತಿ ಪ(ಹೊ) ಡೆದುಕೊಂಡಿದ್ದಾರೆ ಅಂದರೆ ಅದು ಇನ್ನೂ ದೊಡ್ಡ ಸಾಧನೆ. ಅಂದರೆ ಸಾಧನೆಗೂ ಪ್ರಶಸ್ತಿಗೂ ಯಾವುದೇ ಸಂಬಂಧವಿಲ್ಲ. ಇತ್ತೀಚೆಗೆ ನನಗೆ ಸ್ನೇಹಿತರೊಬ್ಬರು ಫೋನ್ ಮಾಡಿ, ‘ನೀವು ನಮ್ಮ ಕಾರ್ಯಕ್ರಮಕ್ಕೆ ಬರಲು ಒಪ್ಪಿದ್ದು ಬಹಳ ಸಂತಸ ತಂದಿದೆ. ದಯವಿಟ್ಟು ನಿಮ್ಮ ಬಯೋಡಾಟಾ ಕಳಿಸಿಕೊಡಿ. ಅಂದು ನಿಮ್ಮನ್ನು ಪರಿಚಯಿಸುವ ಹೊಣೆಗಾರಿಕೆ ನನಗೇ ಕೊಟ್ಟಿದ್ದಾರೆ’ ಎಂದು ಹೇಳಿದರು. ನಾನು ಆಯಿತು ಎಂದೆ. ಅವರ ಕೋರಿಕೆ ಮೇರೆಗೆ ಅದನ್ನು ಕಳಿಸಿಕೊಟ್ಟೆ. ಅದಾದ ಒಂದು ದಿನದ ನಂತರ ನನಗೆ ಅವರೇ ಪುನಃ ಫೋನ್ ಮಾಡಿ, ‘ನಿಮಗೆ ಯಾವುದೇ ಪ್ರಶಸ್ತಿ ಬಂದಿಲ್ಲವಾ? ಏಕೆಂದರೆ ನಿಮಗೆ ಬಂದಿರುವ ಪ್ರಶಸ್ತಿ ಕಾಲಮ್ಮನ್ನು ಬ್ಲಾಂಕ್ ಬಿಟ್ಟಿದ್ದೀರಿ’ ಎಂದು ಹೇಳಿದರು.
‘ನನ್ನ ಪರಿಚಯದಲ್ಲಿ ಪ್ರಶಸ್ತಿಗಳನ್ನು ಹೇಳಬೇಕಿಲ್ಲ. ಅದರ ಬಗ್ಗೆ ಪ್ರಸ್ತಾಪಿಸದೇ ಪರಿಚಯಿಸಿ’ ಎಂದೆ. ಆದರೂ ಅವರು ಕೇಳಲಿಲ್ಲ. ‘ನಿಮಗೆ ಹಲವಾರು ಪ್ರಶಸ್ತಿಗಳು ಬಂದಿವೆ ಎಂಬುದು ಗೊತ್ತು. ಆ ಪೈಕಿ ಕೆಲವನ್ನಾದರೂ ಹೇಳಿ’ ಎಂದರು. ಅದಕ್ಕೆ ನಾನು ಹೇಳಿದೆ- ‘ನಮಗೆ ಬಂದಿರುವ ಪ್ರಶಸ್ತಿಗಳನ್ನು ಹೇಳುವುದು ಅಭಿಮಾನದ ವಿಷಯ ಅಲ್ಲ, ಅದು ಅವಮಾನ. ಈ ಎಲ್ಲ ಪ್ರಶಸ್ತಿಗಳನ್ನು ಪಡೆದುಕೊಳ್ಳಲು ಅಥವಾ ಹೊಡೆದುಕೊಳ್ಳಲು ಇವರು ಯಾರ‍್ಯಾರಿಗೆ ದುಂಬಾಲು ಬಿದ್ದಿರಬಹುದು ಎಂಬ ಸಂದೇಹವಾದರೂ ಬರದೇ ಹೋಗುವುದಿಲ್ಲ. ಈ ದಿನಗಳಲ್ಲಿ ಪ್ರಶಸ್ತಿ ಪಡೆದು ಕೊಳ್ಳುವುದೆಂದರೆ ನಮ್ಮ ಬಗ್ಗೆ ಗುಮಾನಿಗೆ ಅವಕಾಶ ನೀಡಿದಂತೆ. ಇವರು ಇಷ್ಟು ಸಾಧನೆ ಮಾಡಿದರೂ ಇವರಿಗೆ ಯಾವುದೇ ಪ್ರಶಸ್ತಿ ಕೊಟ್ಟಿಲ್ಲ ಎಂದು ಹೇಳಿದರೆ ಅದು ನಿಜವಾಗಿಯೂ ಅಭಿಮಾನದಿಂದ ಬೀಗುವ ವಿಷಯವೇ. ಇವರ ಸಾಧನೆ ನೋಡಿ ಈ ಪ್ರಶಸ್ತಿ ಕೊಡಲಾಗಿದೆ ಎಂದು ಹೇಳಿದರೆ ಸಂದೇಹಕ್ಕೆ ಹೊಗೆಯಾಡಲು ಅವಕಾಶ ನೀಡಿದಂತೆ.
ಅಷ್ಟಕ್ಕೂ ಜೀವಮಾನದಲ್ಲಿ ಸ್ವಾಮಿ ವಿವೇಕಾನಂದರಿಗೆ, ರಾಮಕೃಷ್ಣ ಪರಮಹಂಸರಿಗೆ, ಮಹಾತ್ಮ ಗಾಂಧಿಯವರಿಗೆ ಯಾವ ಪ್ರಶಸ್ತಿ ಬಂದಿದೆ? ಸಾಧನೆ ಮಾಡಿ ಪ್ರಶಸ್ತಿ ಪಡೆಯದಿರುವುದೇ ದೊಡ್ಡ ಸಾಧನೆ. ಮಹಾತ್ಮ ಗಾಂಧಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಕೊಟ್ಟಿದ್ದರೆ ಅವರು ಅದನ್ನು ಪಡೆದ ಎಲ್ಲರ ಸಾಲಿಗೆ ಸೇರಿಬಿಡುತ್ತಿದ್ದರು. ಹತ್ತರಲ್ಲಿ ಹನ್ನೊಂದನೆ ಯವರಾಗುತ್ತಿದ್ದರು. ಆದರೆ ಅವರಿಗೆ ಅದನ್ನು ಕೊಡಲಿಲ್ಲ. ಹೀಗಾಗಿ ಅವರು ಆ ಪ್ರಶಸ್ತಿಗಿಂತ ಎತ್ತರದಲ್ಲಿದ್ದಾರೆ. ನೀವು ಲಾಬಿ ಮಾಡದೇ ಪ್ರಶಸ್ತಿ ಪಡೆದರೂ, ಅರ್ಹತೆಯಿಂದಲೇ ಅದನ್ನು ಗಿಟ್ಟಿಸಿದರೂ, ಎಲ್ಲಾ ಒಂದು ಮೂಲೆಯಲ್ಲಿ ಸಣ್ಣ ಅನುಮಾನಕ್ಕಂತೂ ಕಾರಣರಾಗುತ್ತೇವೆ ಎಂಬುದು ಸುಳ್ಳಲ್ಲ. ಆದ್ದರಿಂದ ದಯವಿಟ್ಟು ಪ್ರಶಸ್ತಿ ಬಗ್ಗೆ ಪ್ರಸ್ತಾಪಿಸಲೇಬೇಕು ಅಂದರೆ, ಇವರಿಗೆ ಯಾವುದೇ ಪ್ರಶಸ್ತಿ ಬಂದಿಲ್ಲ ಎಂದು ಹೇಳಿ ಬಿಡಿ, ಮರ್ಯಾದೆಯಾದರೂ ಉಳಿದೀತು.
ನನಗೆ ಬಂದ ಪ್ರಶಸ್ತಿಗಳ ಹೆಸರುಗಳನ್ನೆಲ್ಲ ಹೇಳಿ ನಾನೇ ಕೈಯಾರ ನನ್ನ ಮರ್ಯಾದೆ ಕಳೆದುಕೊಳ್ಳಲು ಏಕೆ ಅವಕಾಶ ನೀಡಲಿ?’ ಇಂದು ಅಂಥ ಪರಿಸ್ಥಿತಿ ಬಂದಿದೆ. ನಮಗೆ ಬಂದ ಪ್ರಶಸ್ತಿ,
ಸನ್ಮಾನಗಳನ್ನು ಹೇಳಿಕೊಂಡರೆ ಅದು ನೆಗೆಟಿವ್. ಖಂಡಿತವಾಗಿಯೂ ಅದು ಅಭಿಮಾನದ ಸಂಗತಿಯಲ್ಲ. ನೀವು ಹೆಚ್ಚು ಹೆಚ್ಚು ಪ್ರಶಸ್ತಿ ಪಡೆದುಕೊಂಡಿದ್ದೀರಿ ಎಂದರೆ, ಜನ ನಿಮ್ಮನ್ನು
ಪ್ರಶಸ್ತಿಕೋರ, ಪ್ರಶಸ್ತಿಗೆ ಹಪಹಪಿಸುವವ, ಲಾಬಿ ಮಾಡಿ ಗಿಟ್ಟಿಸಿಕೊಂಡವ, ಹಣ ಕೊಟ್ಟು ಹೊಡೆದುಕೊಂಡವ, ಪ್ರಭಾವ ಬೀರಿ ಪಡೆದುಕೊಂಡವ ಎಂದು ಭಾವಿಸುತ್ತಾರೆ. ಕಾರಣ
ಇಂದು ಪ್ರಶಸ್ತಿಗಳನ್ನು ಈ ಅಂಶಗಳಿಂದಲೇ ಕೊಡಮಾಡುತ್ತಾರೆ.
ನಿಜವಾದ ಸಾಧಕರಿಗೆ ಸರಕಾರಿ ಪ್ರಶಸ್ತಿ ಸಿಗುವುದೇ ಇಲ್ಲ. ಯಾಕೆಂದರೆ ಅವರು ಪ್ರಶಸ್ತಿಗೆ ಅರ್ಜಿ ಹಾಕಿರುವುದಿಲ್ಲ. ದುರ್ದೈವವೆಂದರೆ, ನೀವು ಅರ್ಜಿ ಹಾಕದಿದ್ದರೆ ನಿಮಗೆ ಯಾವ ಸರಕಾರಿ ಪ್ರಶಸ್ತಿಯೂ ಬರುವುದಿಲ್ಲ. ಅರ್ಜಿ ಹಾಕದಿದ್ದರೂ ನಿಮ್ಮನ್ನು ಆಯ್ಕೆ ಮಾಡಿದರೆ, ಅದು ಸ್ವಜನಪಕ್ಷಪಾತ ಎಂದು ಜನರು ಪರಿಗಣಿಸಬಹುದು ಎಂದು ಸರಕಾರ ಭಾವಿಸುತ್ತದೆ. ಹೀಗಾಗಿ ಅರ್ಜಿ ಹಾಕಲೇಬೇಕು ಎಂದು ಸರಕಾರ ಅಪೇಕ್ಷಿಸುತ್ತದೆ. ಆದರೆ ಮಾನ, ಮರ್ಯಾದೆ ಇದ್ದವರು ನನಗೆ ಪ್ರಶಸ್ತಿ ಕೊಡಿ, ಸನ್ಮಾನ ಮಾಡಿ ಎಂದು ಹೇಳುವುದಿಲ್ಲ. ಹೀಗೆ ಮಾಡದಿದ್ದರೆ ಸರಕಾರ ನಿಮಗೆ ಪ್ರಶಸ್ತಿ ಕೊಡುವುದಿಲ್ಲ. ಕರ್ನಾಟಕದಲ್ಲಿ ಸಾಹಿತ್ಯ, ಸಂಸ್ಕೃತಿಗೆ ತಮ್ಮದೇ ಆದ ಕೊಡುಗೆಯಿತ್ತ ಸಾವಿರಾರು ಜನರಿಗೆ ಈಗಲೂ ಸರಕಾರ ಕೊಡಮಾಡುವ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಬಂದಿಲ್ಲ. ಇಂದು ರಾಜ್ಯ, ದೇಶ, ವಿದೇಶಗಳಲ್ಲಿ ಅತ್ಯಂತ ಬೇಡಿಕೆಯಲ್ಲಿರುವ ಕಲಾವಿದರಿಗೆ ಈವರೆಗೆ ಪ್ರಶಸ್ತಿ ಸಿಕ್ಕಿಲ್ಲ.
ಅದಕ್ಕೆ ಕಾರಣವೇನೆಂದರೆ, ಅವರು ಪ್ರಶಸ್ತಿಗೆ ಅರ್ಜಿ ಹಾಕಿಲ್ಲ. ಅರ್ಜಿ ಹಾಕದಿದ್ದರೂ ಆ ಪ್ರಶಸ್ತಿ ಕೊಟ್ಟರೆ ಅವರ ಮೇಲೆ ವಿಶೇಷ ಮಮತೆ ತೋರಿದ ಆಪಾದನೆಗೆ ಗುರಿಯಾಗಬೇಕಾದೀತೆಂದು ಅಂಥವರಿಗೆ ಯಾರೂ ಕೊಟ್ಟಿಲ್ಲ. ಈ ಬಗ್ಗೆ ಕೇಳಿದ ಬಳಿಕ ಕೆಲವರು ಸಾಧಕರೊಂದಿಗೆ ಈ ಕುರಿತು ಪ್ರಸ್ತಾಪಿಸಿ, ‘ನಿಮಗೆ ರಾಜ್ಯೋತ್ಸವ ಪ್ರಶಸ್ತಿ ಬಾರದಿರುವುದು ಅದಕ್ಕಿಂತ ದೊಡ್ಡ ಪ್ರಶಸ್ತಿ. ನೀವು ಲಾಬಿ ಮಾಡಿಲ್ಲ ಎಂಬುದು ಖಾತ್ರಿ ಆಯಿತು. ಈ ವರ್ಷ ಸರಕಾರ ಅದಾಗಿಯೇ ಕೊಟ್ಟರೂ ಜನರಿಗೆ ಸಂದೇಹ ಬಂದರೂ ಬಂದೀತು’ ಎಂದೆ. ಎಂಥ ಸಂಕಟ ನೋಡಿ. ಸಾಧನೆ ಮಾಡಿಯೂ ಪ್ರಶಸ್ತಿ ಬರದಿದ್ದರೆ ಬೇಸರ. ಬಂದಿತೆನ್ನಿ, ಇನ್ನೂ ಬೇಸರ. ಅಷ್ಟರ ಮಟ್ಟಿಗೆ ಪ್ರಶಸ್ತಿ, ಸನ್ಮಾನಗಳು ಬೆಲೆ, ಪ್ರತಿಷ್ಠೆಗಳನ್ನು ಕಳೆದುಕೊಂಡುಬಿಟ್ಟಿವೆ. ಇವರು ಅಪೂರ್ವ ಸಾಧಕರು. ಆದರೆ ಯಾವುದೇ ಪ್ರಶಸ್ತಿ ಪಡೆದುಕೊಂಡಿಲ್ಲ ಅಥವಾ ಇವರಿಗೆ ಯಾವುದೇ ಪ್ರಶಸ್ತಿ ಕೊಟ್ಟಿಲ್ಲ ಅಥವಾ ಬಂದಿಲ್ಲ ಎಂದು ಹೇಳಿದರೇ ಅದು ನಿಜವಾದ ಗೌರವ.
ರಾಜ್ಯೋತ್ಸವ ಪ್ರಶಸ್ತಿಯನ್ನು ಹೈಕೋರ್ಟಿನ ಕಣ್ಗಾವಲಿನಲ್ಲಿ ಕೊಡುವ ಪರಿಸ್ಥಿತಿ ಬಂದಿದೆ. ನಾಚಿಕೆ, ಮಾನ, ಮರ್ಯಾದೆಗೆ ಬೆಲೆ ಕೊಡುವವರು ಮತ್ತು ಅಂಜುವವರು ಯಾರೂ ಪ್ರಶಸ್ತಿಗೆ
ಆಸೆಪಡುವುದಿಲ್ಲ. ಪ್ರಶಸ್ತಿಯನ್ನು ಪಡೆದರೆ ತನ್ನನ್ನು ಮಿಕ್ಕವರಂತೆ ‘ಕಳ್ಳ’ನನ್ನು ನೋಡುವಂತೆ ಸಂದೇಹದಿಂದ ನೋಡಬಹುದು ಎಂದು ಭಾವಿಸುವಂತಾಗಿದೆ. ಕೆಲವು ಸಂಭಾವಿತರನ್ನು
ಭೇಟಿ ಮಾಡಿ ನಿಮಗೆ ಪ್ರಶಸ್ತಿ ಕೊಡುತ್ತೇವೆ ಎಂದು ಹೇಳಿದರೆ, ಖಂಡಿತವಾಗಿಯೂ ಅವರು ಬೇಡ ಅಂತಾನೇ ಹೇಳುತ್ತಾರೆ. ಟೈಮ್ಸ್ ಆಫ್ ಇಂಡಿಯಾ ಸಂಸ್ಥೆ ಪ್ರತಿವರ್ಷ ಜ್ಞಾನಪೀಠ
ಪ್ರಶಸ್ತಿಯನ್ನು ನೀಡುತ್ತದೆ. ಇದನ್ನು ಭಾರತದ ನೊಬೆಲ್ ಪ್ರಶಸ್ತಿ ಎಂದು ಭಾವಿಸಬಹುದು.
ಸಾಹಿತ್ಯ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ಕೊಡುತ್ತಾರಷ್ಟೆ. ದಿಲ್ಲಿಯ ‘ಹಿಂದುಸ್ಥಾನ್ ಟೈಮ್ಸ’ ಪತ್ರಿಕೆ ಜ್ಞಾನಪೀಠ ಪುರಸ್ಕಾರಕ್ಕೆ ಸಮವಾಗಿ ‘ಸರಸ್ವತಿ ಸಮ್ಮಾನ್’ ಪ್ರಶಸ್ತಿಯನ್ನು ಸ್ಥಾಪಿಸಿತು.ಜ್ಞಾನಪೀಠ ಪ್ರಶಸ್ತಿಗಿಂತ ಸರಸ್ವತಿ ಸಮ್ಮಾನ್ ಪ್ರಶಸ್ತಿ ಜತೆಗೆ ಕೊಡುವ ಹಣ ಅಥವಾ ಗೌರವಧನ ಹೆಚ್ಚು. ‘ಸರಸ್ವತಿ ಸಮ್ಮಾನ್’ ಸಹ ಭಾರತದ ಸಾಹಿತ್ಯ ವಲಯದಲ್ಲಿ ತನ್ನದೇ ಆದ ಘನತೆಯನ್ನು ಹೊಂದಿದೆ. ಈ ಪ್ರಶಸ್ತಿಗೆ ಪಾತ್ರರಾದ ಮೊದಲ ಕನ್ನಡಿಗರೆಂದರೆ ಡಾ. ಎಸ್.ಎಲ್. ಭೈರಪ್ಪ. ಅವರಿಗೆ ಜ್ಞಾನ ಪೀಠ ಬರದಿದ್ದರೇನಂತೆ, ಅದಕ್ಕೆ ಸಮನಾದ ಅಥವಾ ಮಿಗಿಲಾದ ‘ಸರಸ್ವತಿ ಸಮ್ಮಾನ್’ ಬಂತಲ್ಲ ಎಂದು ಎಲ್ಲಾ ಕನ್ನಡಿಗರಿಗೆ ಸಂತಸವಾಯಿತು.
ಅದಾಗಿ ಎರಡು ಮೂರು ವರ್ಷಗಳ ನಂತರ ಈ ಪ್ರಶಸ್ತಿ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಮತ್ತು ರಾಜಕಾರಣಿ ವೀರಪ್ಪ ಮೊಯಿಲಿ ಅವರಿಗೆ ಬಂತು. ಎಲ್ಲಿಯ ಭೈರಪ್ಪ?
ಎಲ್ಲಿಯ ವೀರಪ್ಪ? ಮೊದಲನೆಯವರು ಸರಸ್ವತಿ ಸಮಾನ್ ಪುರಸ್ಕೃತರು ಮತ್ತು ಎರಡನೆಯವರು ಸರಸ್ವತಿ ಸಮ್ಮಾನ್ ವಿಜೇತರು! ಮೊದಲನೆಯವರು ಆ ಪ್ರಶಸ್ತಿ ಪಡೆದುಕೊಂಡವರು ಮತ್ತು ಎರಡನೆಯವರು ಹೊಡೆದುಕೊಂಡವರು! ಇದು ಎಂಥವರಿಗಾದರೂ ಅರ್ಥವಾಗುವಂಥದ್ದು. ನಟಸಾರ್ವಭೌಮ ಎಂಬ ಬಿರುದನ್ನೂ ನೀವು ಒಮ್ಮೆ ಡಾ.ರಾಜ್‌ಕುಮಾರ್ ಅವರಿಗೆ ಕೊಟ್ಟ ನಂತರ ಮತ್ತ್ಯಾರಿಗೂ ಕೊಡಲಾಗುವುದಿಲ್ಲ. ಅದನ್ನು ಅವರ ಯೋಗ್ಯತೆ, ಸಾಮರ್ಥ್ಯ, ಅರ್ಹತೆ ಇರುವವರಿಗಿಂತ ಬೇರೆ ಯಾರಿಗೆ ಕೊಟ್ಟರೂ ಡಾ.ರಾಜ್ ಅವರಿಗೆ ಅಗೌರವ ತೋರಿಸಿದಂತೆ ಅಥವಾ ಆ ಬಿರುದಿನ ಮಹತ್ವವನ್ನು ಕಮ್ಮಿ ಮಾಡಿದಂತೆ. ಭೈರಪ್ಪನವರಿಗೂ ವೀರಪ್ಪ ಮೊಯಿಲಿಗೂ ಯಾವ ಹೋಲಿಕೆ? ಯಾವಾಗ ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ಮೊಯಿಲಿಗೆ ಕೊಟ್ಟರೋ, ಅದರ ಮಹತ್ವವೇ ಹೊರಟು ಹೋಯಿತು. ಇದರಿಂದ ಭೈರಪ್ಪನವರಿಗೂ ತುಸು ಇರುಸು ಮುರುಸು, ಕಸಿವಿಸಿ ಆಗಿರಲಿಕ್ಕೂ ಸಾಕು. ಒಂದು ವೇಳೆ ಈ ಪ್ರಶಸ್ತಿಯನ್ನು ಒಟ್ಟಿಗೆ ಮೊಯಿಲಿ ಅವರ ಜತೆ
ಸ್ವೀಕರಿಸುವಂತಾದರೆ ಖಂಡಿತವಾಗಿಯೂ ಭೈರಪ್ಪನವರು ಅದನ್ನು ತಿರಸ್ಕರಿಸುತ್ತಿದ್ದರು.
ಮಹಾತ್ಮ ಗಾಂಧಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಕೊಟ್ಟು ಅದನ್ನು ನಂತರ ರಾಹುಲ್ ಗಾಂಧಿ ಅವರಿಗೆ ಕೊಟ್ಟರೆ ಆ ಪ್ರಶಸ್ತಿಯ ಬೆಲೆಯೇನು? ಅಲ್ಲದೇ ಮಹಾತ್ಮ ಗಾಂಧಿ ಬೆಲೆ ಏನು?
ಪ್ರಶಸ್ತಿಯ ಪಾವಿತ್ರ್ಯ ಹಾಳು ಮಾಡಬೇಕೆಂದರೆ ಅದನ್ನು ಮನಸೋ ಇಚ್ಛೆ ಕಂಡ ಕಂಡವರಿಗೆಲ್ಲ ಕೊಟ್ಟು ಬಿಡಬೇಕು. ಪ್ರತಿವರ್ಷ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ‘ನಾಡಪ್ರಭು ಕೆಂಪೇಗೌಡ’ ಪ್ರಶಸ್ತಿಯನ್ನು ನೀಡುತ್ತದೆ. ಕೆಲ ವರ್ಷ ಈ ಪ್ರಶಸ್ತಿಯನ್ನು ಹೋಗಿ ಹೋಗಿ ಐದುನೂರು ಚಿಲ್ಲರೆ ಜನರಿಗೆ ಸಾಮೂಹಿಕ ವಿವಾಹದಲ್ಲಿ ತಾಳಿ ಹಂಚಿದ ಹಾಗೆ ಹಂಚಿದ ನಿದರ್ಶನಗಳಿವೆ. ಇದರಿಂದ ಪ್ರಶಸ್ತಿ ಪಡೆದ ಕೆಲವರಿಗಾದರೂ ತೀವ್ರ ಮುಜಗರ, ಅವಮಾನ ಆಗಿರಲಿಕ್ಕೆ ಸಾಕು. ಅದಕ್ಕಿಂತ ಹೆಚ್ಚಾಗಿ ಇದು ನಾಡಪ್ರಭು ಕೆಂಪೇಗೌಡರಿಗೆ ಮಾಡಿದ ಅವಮಾನ.
ಅನೇಕ ಸಲ ಆ ಪ್ರಶಸ್ತಿಯನ್ನು ಕಳ್ಳಕಾಕರಿಗೆ, ನಿಂದಿತರಿಗೆ, ತಲೆಹಿಡುಕರಿಗೆ, ಕಂಟಕರಿಗೆಲ್ಲ ಕರೆದು ಹಂಚಿರುವ ಉದಾಹರಣೆಯಿದೆ. ಜನ ಕಚ್ಚಾಡಿ, ಪರದಾಡಿ ಈ ಪ್ರಶಸ್ತಿಯನ್ನು ಎತ್ತಿಕೊಂಡು ಹೋಗುತ್ತಾರೆ. ಪ್ರಶಸ್ತಿಯ ಜತೆ ದುಡ್ಡನ್ನೂ ನೀಡುವುದರಿಂದ, ಪ್ರಶಸ್ತಿಗೆ ಭಾಜನರಲ್ಲದವರೂ ಬಂದು ಅದನ್ನು ಸ್ವೀಕರಿಸಿ ಎದ್ದುಹೋಗಿರುವ ಉದಾಹರಣೆಯಿದೆ. ಇದರಿಂದ ನಿಜವಾಗಿಯೂ ಅರ್ಹರಾದವರಿಗೆ ಆದ ಮುಖ ಭಂಗ ಅಷ್ಟಿಷ್ಟಲ್ಲ. ಯೋಗ್ಯರನ್ನೂ, ಕಳ್ಳಕಾಕರನ್ನೂ ಒಂದೇ ತಕ್ಕಡಿಯಲ್ಲಿಟ್ಟರೆ ಏನಾಗಬೇಡ? ಅಷ್ಟಕ್ಕೂ ಒಂದು ಪ್ರಶಸ್ತಿಯನ್ನು ಅಷ್ಟು ಜನರಿಗೆ ಕೊಡ್ತಾರಾ? ಅದೇನು ಕಲ್ಲು ಹರಳಾ? ಒಂದು ಪ್ರಶಸ್ತಿಯನ್ನು ಹೇಗೆ ಕೊಡಬೇಕು ಎಂದು ಗೊತ್ತಿಲ್ಲದವರು, ಸೂಕ್ಷ್ಮಸಂವೇದನೆ ಇಲ್ಲದವರು ನಮ್ಮ ನಗರವನ್ನು ಆಳುತ್ತಿzರೆ ಅಂದ್ರೆ ಇವರ ನೈತಿಕ ಮಟ್ಟ ಯಾವ ಹಂತಕ್ಕೆ ಹೋಗಿರಬಹುದು? ನಿಜಕ್ಕೂ ಭಯವಾಗುತ್ತದೆ.
ನೊಬೆಲ್ ಪ್ರಶಸ್ತಿಯನ್ನು ಪ್ರತಿ ವರ್ಷ ಆರು ಜನರಿಗೆ ಮಾತ್ರ ಕೊಡಲಾಗುತ್ತಿದೆ. ರಸಾಯನ ಶಾಸ್ತ್ರ, ಸಾಹಿತ್ಯ, ಭೌತಶಾಸ್ತ್ರ, ಶಾಂತಿ, ಅರ್ಥಶಾಸ್ತ್ರ ಮತ್ತು ಮೆಡಿಸಿನ್ ಈ ಆರು ಕ್ಷೇತ್ರಗಳಲ್ಲಿ ಅಸಾಧಾರಣ ಸೇವೆ, ಸಾಧನೆ ಮಾಡಿದ ಮಹನೀಯರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ೧೯೦೧ರಿಂದ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್
ನೀಡುತ್ತಾ ಬಂದಿದೆ. ನೊಬೆಲ್ ಶಾಂತಿ ಪ್ರಶಸ್ತಿಯನ್ನು ನಾರ್ವೆಯ ಓಸ್ಲೋದಲ್ಲಿ ನೀಡಿದರೆ, ಉಳಿದವುಗಳನ್ನು ಸ್ಟಾಕ್ ಹೋಮ್‌ನಲ್ಲಿ ನೀಡಲಾಗುತ್ತದೆ. ನೊಬೆಲ್ ಪ್ರಶಸ್ತಿ ಘೋಷಿಸುವ ದಿನಾಂಕದಲ್ಲೂ ಬದಲಾವಣೆ ಆಗುವುದಿಲ್ಲ. ಒಂದು ಪ್ರಶಸ್ತಿಯನ್ನು ಯಾವುದೇ ಕಾರಣಕ್ಕೂ ಮೂರಕ್ಕಿಂತ ಹೆಚ್ಚು ಜನರಿಗೆ ಹಂಚುವುದಿಲ್ಲ.
ಕಳೆದ ೧೨೨ ವರ್ಷಗಳಲ್ಲಿ ಸುಮಾರು ಒಂದು ಸಾವಿರ ಜನರಿಗೆ ಮತ್ತು ಸಂಘಸಂಸ್ಥೆಗಳಿಗೆ ಮಾತ್ರ ಇದನ್ನು ನೀಡಲಾಗಿದೆ. ಪ್ರಶಸ್ತಿ ಘೋಷಿಸಿದ ನಂತರ ಅದಕ್ಕೆ ಭಾಜನರಾದವರು
ತೀರಿಹೋದರೆ ಪ್ರದಾನ ಮಾಡುತ್ತಾರೆ, ಆದರೆ ಯಾರಿಗೂ ಮರಣೋತ್ತರವಾಗಿ ಇದನ್ನು ನೀಡಲಾಗುವುದಿಲ್ಲ. ಎಲ್ಲವೂ ಕರಾರುವಾಕ್ಕು. ಅದಕ್ಕಾಗಿಯೇ ನೊಬೆಲ್ ಪ್ರಶಸ್ತಿ ಪಾವಿತ್ರ್ಯ
ಉಳಿದುಕೊಂಡಿದೆ. ಅದರ ಬಗ್ಗೆ ಇಂದಿಗೂ ಜನರಿಗೆ ಜಗತ್ತಿನಾದ್ಯಂತ ಗೌರವ, ಘನತೆ ಇದೆ. ಪ್ರಶಸ್ತಿಗಳನ್ನು ಪಂಚಕಜ್ಜಾಯ, ಕಲ್ಲು ಸಕ್ಕರೆ, ಶೇಂಗಾಬೀಜದಂತೆ ಹಂಚಬಾರದು. ಅದಕ್ಕೆ ಅದರದೇ ಆದ ಪಾವಿತ್ರ್ಯವಿದೆ.
ಮರ್ಯಾದೆ ಇದೆ. ಪ್ರಶಸ್ತಿಗೆ ಆಯ್ಕೆ ಮಾಡುವವರಿಗೆ ಮಾನವಿರಬೇಕು. ಆಯ್ಕೆ ಪ್ರಕ್ರಿಯೆಗೆ ಮಾನದಂಡವಿರಬೇಕು. ಅಪಾತ್ರರಿಗೆ ಈ ಕೆಲಸ ಕೊಡಬಾರದು. ಅಪಾತ್ರರು ಪ್ರಶಸ್ತಿ ಆಯ್ಕೆಯನ್ನೂ ಮಾಡಬಾರದು, ನೀಡಲೂ(ಪ್ರದಾನ) ಬಾರದು. ದುರಂತವೇನೆಂದರೆ, ಇವೆರಡೂ ಕಾರ್ಯವನ್ನು ಮಾಡುತ್ತಿರುವವರು ಅವರೇ ಆಗಿದ್ದಾರೆ. ಹೀಗಾಗಿ ಪ್ರಶಸ್ತಿಗಳೆಲ್ಲ ಮೌಲ್ಯ, ಮಹತ್ವ ಕಳೆದುಕೊಳ್ಳುತ್ತಿವೆ. ಧರ್ಮಸ್ಥಳದ ಧರ್ಮಾಽಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರಿಗೆ ಪ್ರಶಸ್ತಿ ಘೋಷಿಸಬಹುದು. ಆದರೆ ಕೊಡುವವರು ಯಾರು ಎಂಬುದು ಸಹ ಮುಖ್ಯವಾಗುತ್ತದೆ. ರಾಜ್ಯದ
ಮುಖ್ಯಮಂತ್ರಿಗಳಿಗಿಂತ ಕಡಿಮೆ ತೂಕದ, ಸ್ಥಾನಮಾನದ ಯಾರೂ ಅವರಿಗೆ ಪ್ರಶಸ್ತಿ ಕೊಡಬಾರದು. ಮುಖ್ಯಮಂತ್ರಿಗಳಿಗೆ ಅನಾರೋಗ್ಯವೆಂದು ಅಬಕಾರಿ ಸಚಿವರನ್ನು ಕಳಿಸಿಕೊಟ್ಟರೆ ಏನಾದೀತು? ಈ ವಿವೇಕವು ಪ್ರಶಸ್ತಿ ಸಂಘಟಕರಿಗೆ, ಕೊಡುವವರಿಗೆ ಇರಬೇಕು. ಹೀಗಾಗಿ ಪ್ರಶಸ್ತಿ ಕೊಡುವವರು, ಘೋಷಿಸುವವರು, ಪ್ರದಾನ ಮಾಡುವವರು ಯಾರು ಎಂಬುದು ಮುಖ್ಯವಾಗುತ್ತದೆ. ಇದರ ಅರಿವು ಇಲ್ಲದ ಯಾರೇ ಪ್ರಶಸ್ತಿ ಕೊಟ್ಟರೂ, ಇಸಗೊಂಡರೂ ಅದು ಅಪಪ್ರಚಾರವಾಗುತ್ತದೆ, ಯಡವಟ್ಟಾಗುತ್ತದೆ, ಕಮಂಗಿತನವಾಗುತ್ತದೆ.
ಪ್ರಶಸ್ತಿ ತೆಗೆದುಕೊಳ್ಳುವವರಿಗೂ ಇದರ ಪ್ರಜ್ಞೆ ಇರಬೇಕು. ಯಾರೋ ಕೊಡ್ತಾರೆ ಅಂತ ಸ್ವೀಕರಿಸಬಾರದು. ಪ್ರಶಸ್ತಿ ಅಂದರೆ ನಮ್ಮ ವ್ಯಕ್ತಿತ್ವಕ್ಕೆ ಕೊಡುವ ಬೆಲೆ, ಗೌರವ. ಅದನ್ನು ನಾವಾಗಿ ನಾವೇ ಕಳೆದುಕೊಳ್ಳಬಾರದು. ಒಂದು ಪ್ರಶಸ್ತಿ ನಾವ್ಯಾರು ಎಂಬುದನ್ನು ನಿರ್ಧರಿಸುವುದಕ್ಕೆ ಆಸ್ಪದ ನೀಡಬಾರದು. ಲಾಬಿ ಮಾಡಿ ಪ್ರಶಸ್ತಿ ಪಡೆಯುವುದೆಂದರೆ, ಅತ್ತೂ ಕರೆದು ಔತಣ ಮಾಡಿಸಿಕೊಂಡಂತೆ. ಪ್ರಶಸ್ತಿಗಾಗಿ ನಮ್ಮ ಬಯೋಡಾಟವನ್ನು ಬೇರೆಯವರಿಗೆ ಕೊಡುತ್ತಿದ್ದೇವೆಂದರೆ, ನಾವು ಅಷ್ಟರಮಟ್ಟಿಗೆ ಮರ್ಯಾದೆ ಬಿಟ್ಟವರು ಎಂದರ್ಥ.
ಯಾವ ಪ್ರಶಸ್ತಿಯೂ ನಮ್ಮ ಯೋಗ್ಯತೆ ಹೆಚ್ಚು ಮಾಡುವುದಿಲ್ಲ. ಆದರೆ ಅದಕ್ಕಾಗಿ ಆಸೆ ಪಟ್ಟು ಲಾಬಿ ಮಾಡಿ ಪಡೆದರೆ ನಮ್ಮ ಯೋಗ್ಯತೆ ಕಡಿಮೆ ಆಗುವುದಂತೂ ನಿಶ್ಚಿತ. ನಮ್ಮ ಯೋಗ್ಯತೆಯೇ ನಮಗೆ ಆಸ್ತಿ, ಅಲ್ಲ ಸನ್ಮಾನ, ಪ್ರಶಸ್ತಿ!