Wednesday, 9th October 2024

2024ಕ್ಕೆ ಬಿಜೆಪಿ ರಣತಂತ್ರ: ಮೋದಿ ಮನಸ್ಸಿನಲ್ಲಿ ಏನಿದೆ ?

ಪ್ರಚಲಿತ

ಎಂ.ಜೆ.ಅಕ್ಬರ್‌, ಹಿರಿಯ ಪತ್ರಕರ್ತ, ರಾಜ್ಯಸಭಾ ಸದಸ್ಯ

ರಾಜ್ಯಗಳಲ್ಲಿ ಯಶಸ್ವಿಯಾದ ರಾಜಕೀಯ ಪಕ್ಷಗಳು ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಹೊರಟಾಗ ನೆಲೆ ಕಳೆದು ಕೊಳ್ಳುತ್ತವೆ ಏಕೆ? ಇತಿಹಾಸವನ್ನು ಕೆದಕಿದರೆ ಆ ರಾಜಕೀಯ ಪಕ್ಷಗಳ ಯೋಚನೆ ಬಹಳ ತೆಳುವಾದ ಗಣಿತವನ್ನು ಆಧರಿಸಿರುವುದು ಕಾಣಿಸುತ್ತದೆ. ಇದು ಕಾಂಗ್ರೆಸ್ ಪಕ್ಷದ ವಿಷಯದಲ್ಲೂ ನಿಜ. ಒಂದು ಕಾಲದಲ್ಲಿ ಆ ಪಕ್ಷವನ್ನು ಅಲು ಗಾಡಿಸುವವರೇ ಇರಲಿಲ್ಲ ಎಂಬುದು ಎಷ್ಟು ನಿಜವಾಗಿತ್ತೋ ಈಗ ನರೇಂದ್ರ ಮೋದಿ ಎಲ್ಲರಿಗಿಂತ ಎತ್ತರಕ್ಕೆ ಬೆಳೆದಿದ್ದಾರೆ ಎಂಬುದೂ ಅಷ್ಟೇ ನಿಜ.

ಎಲ್ಲರಿಗೂ ಗೊತ್ತಿರುವಂತೆ ರಾಜಕೀಯದಲ್ಲಿ ಒಂದು ವಾರವೆಂದರೆ ಬಹಳ ಸುದೀರ್ಘ ಅವಧಿ. ಮಜಾ ಏನು ಅಂದರೆ ರಾಜಕೀಯ ದಲ್ಲಿ ಒಂದು ವರ್ಷವೆಂಬುದು ಬಹಳ ಸಣ್ಣ ಅವಧಿಯೂ ಆಗಬಹುದು. ಬೇಕಾದರೆ ಬಂಗಾಳದಲ್ಲಿ 2021ರಿಂದ ಆರಂಭವಾಗಿ ಉತ್ತರ ಪ್ರದೇಶದಲ್ಲಿ 2022ರ ನಡುವಿನ ಹನ್ನೆರಡು ತಿಂಗಳ ಅವಧಿಯಲ್ಲಾದ ರೋಚಕ ಬದಲಾವಣೆಯನ್ನೇ ನೋಡಿ.

ಭಾರತದ ಪ್ರಜಾಪ್ರಭುತ್ವಕ್ಕೆ ನಾಟಕವೇ ಜೀವಾಳ. ಪ್ರತಿಯೊಂದು ಸಾರ್ವತ್ರಿಕ ಚುನಾ ವಣೆಯೂ ಮುಂದಿನ ನಾಟಕಕ್ಕೆ ವೇದಿಕೆ ಯನ್ನು ಸಿದ್ಧಪಡಿಸುತ್ತದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ 2019ರಲ್ಲಿ ದೊರೆತ ಅದ್ಭುತ ಜಯದ ನಂತರ ಇತ್ತೀಚೆಗೆ ಮುಗಿದ ಪಂಚರಾಜ್ಯ ಚುನಾವಣೆಗಳಲ್ಲಿ ಅದೃಷ್ಟ ಇನ್ನಷ್ಟು ಖುಲಾಯಿಸಿದೆ.

ಯಾವಾಗಲೂ ಎರಡನೇ ಅವಧಿಯ ಅಧಿಕಾರ ಮೊದಲ ಅವಧಿಯದ್ದಕ್ಕಿಂತ ಬಹಳ ಕಷ್ಟ. ಮೋದಿಯವರಿಗೆ ಮೊದಲ ಅವಧಿ ಗಿಂತ ಎರಡನೇ ಅವಧಿಯಲ್ಲಿ ಜನಾದೇಶ ದುಪ್ಪಟ್ಟು ದೊರಕಿದ್ದರೆ, ಜನರಿಗೆ ಅವರ ಮೇಲಿನ ನಿರೀಕ್ಷೆ ಮೂರು ಪಟ್ಟು ಹೆಚ್ಚಾಗಿದೆ. ಗುಜರಾತ್‌ನ ಮುಖ್ಯಮಂತ್ರಿಯಾಗಿ ಮೂರು ಅವಧಿಗೆ ಸತತವಾಗಿ ಅಧಿಕಾರ ನಡೆಸಿದ ಅವರಿಗೆ ಇಂತಹ ನಿರೀಕ್ಷೆ ಗಳನ್ನು ಎದುರಿಸುವುದು ಹೊಸತೇನೂ ಅಲ್ಲ ಬಿಡಿ.

ಆದರೆ, ಕಳೆದ ಮೂರು ವರ್ಷದಲ್ಲಿ ಭಾರತಕ್ಕೆ ಬಂದೆರಗಿದ, ಅಷ್ಟೇಕೆ, ಜಗತ್ತಿಗೇ ಬಂದು ಅಪ್ಪಳಿಸಿದ ಹೊಸ ಸವಾಲಿನ ವಿಷಯ ದಲ್ಲಿ ಅವರಿಗೆ ಹಿಂದಿನ ಯಾವುದೇ ಅನುಭವ ನೆರವಿಗೆ ಬರಲು ಸಾಧ್ಯವಿಲ್ಲ. ಕೋವಿಡ್ ಯಾರ ಕೈಗೂ ನಿಲುಕುವಂಥದ್ದಾಗಿರ ಲಿಲ್ಲ. ಕರೋನಾ ಎಂಬುದು ಆಸ್ಪತ್ರೆಯ ಹಾಸಿಗೆಯಲ್ಲಿ ಸುತ್ತಿಟ್ಟ ಆರ್ಥಿಕ ಬಿಕ್ಕಟ್ಟು.

ಅದರಿಂದ ಪಡಿಮೂಡಿದ ಚಿತ್ರಗಳು ಮತ್ತು ನೆನಪುಗಳು ಭಯಾನಕ. ಅವು ಜಗತ್ತಿನ ಅಸ್ತಿತ್ವ ಉಳಿಯುತ್ತದೆಯೋ ಇಲ್ಲವೋ ಎಂಬಂತಹ ಅನೂಹ್ಯ ಭಯ ಹುಟ್ಟಿಸಿ ದ್ದವು. ಗಂಗೆಯಲ್ಲಿ ಹೆಣಗಳು ತೇಲಿದವು. ಸ್ಥಳೀಯ ಆರೋಗ್ಯ ಮೂಲಸೌಕರ್ಯಗಳು ಸುಸ್ತಾಗಿ ಮಲಗಿಬಿಟ್ಟವು. ಸ್ಥಳೀಯಾ ಡಳಿತಗಳು ಕೈಚೆಲ್ಲಿದವು.

ಜನರು ಉದ್ಯೋಗ ಕಳೆದುಕೊಂಡರು. ಇವೆಲ್ಲ ಬೆಳವಣಿಗೆಗಳು ಉತ್ತರ ಪ್ರದೇಶದಲ್ಲೂ ಜರುಗಿದವು. ಆದರೆ, ಇವೆಲ್ಲವುಗಳನ್ನು
ಮೀರಿ ಮೋದಿ ತಮ್ಮ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡರು. ಬಡವರ ಆಪದ್ಬಾಂಧವನಂತೆ ಅವರು ಈ ಕಷ್ಟಕಾಲದಲ್ಲಿ ಒದಗಿ ಬಂದರು. ವಿಪತ್ತಿನ ಸಮಯದಲ್ಲಿ ಎಲ್ಲರಿಗೂ ಉಚಿತ ಆಹಾರ ಒದಗಿಸಿದರು. ಜೀವ ಉಳಿಸಿಕೊಳ್ಳುವುದಕ್ಕೆ ಬೇಕಾದ ಕನಿಷ್ಠ
ಅಗತ್ಯವು ಸರಕಾರದಿಂದಲೇ ಲಭಿಸುವಂತೆ ನೋಡಿಕೊಂಡರು.

ಭಾರತದಲ್ಲಿ ಸರಕಾರಗಳು ಒದಗಿಸುವ ಸಾಮಾಜಿಕ ಕಲ್ಯಾಣ ಯೋಜನೆಗಳ ದೊಡ್ಡ ಫಲಾನುಭವಿಗಳು ಮಹಿಳೆಯರೇ ಆಗಿರು ತ್ತಾರೆ. ಏಕೆಂದರೆ ಮನೆಯ ಅಡುಗೆ ಕೋಣೆ ಅವರ ಹದ್ದುಬಸ್ತಿನಲ್ಲಿರುತ್ತದೆ. ಇವತ್ತಿಗೂ ನಮ್ಮ ದೇಶದ ಬಡವರ ಮನೆಗಳಲ್ಲಿ ಎಲ್ಲರಿಗೂ ಆದ ಮೇಲೆ ಕೊನೆಯಲ್ಲಿ ತಾಯಿ ಊಟ ಮಾಡುತ್ತಾಳೆ. ಈ ತಾಯಂದಿರಿಗೆ ಕೋವಿಡ್ ಸಮಯದಲ್ಲಿ ಮೋದಿ ಅಕ್ಷರಶಃ
ಆಪದ್ಬಾಂಧವನಾದರು. ಅದರ ಋಣವನ್ನು ಉತ್ತರ ಪ್ರದೇಶದಲ್ಲಿ ಜನರು ಮತ ನೀಡಿ ತೀರಿಸಿದರು. ನಾಲ್ಕು ರಾಜ್ಯಗಳಲ್ಲಿ ಬಿಜೆಪಿಯ ಅದ್ಭುತ ಜಯವು ಪ್ರಧಾನಿ ನರೇಂದ್ರ ಮೋದಿಯವರ ಬದ್ಧತೆ ಹಾಗೂ ನಾಯಕತ್ವಕ್ಕೆ ದೊರೆತ ಜನಬೆಂಬಲವಲ್ಲದೆ ಮತ್ತೇನೂ ಅಲ್ಲ.

ಆದರೆ 2021ರ ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರು ಮೋದಿಯ ಈ ಜನಪ್ರಿಯತೆ ಯನ್ನು ‘ಮಹಿಳೆ ಮೊದಲು, ಮುಖ್ಯಮಂತ್ರಿ ಆಮೇಲೆ’ ಎಂಬ ಮಂತ್ರದೊಂದಿಗೆ ಬಹಳ ನಾಜೂಕಾಗಿ ಹ್ಯಾಂಡಲ್ ಮಾಡಿದರು. ಅವರ ಜಾಹೀರಾತು ಹಾಗೂ ಹೋರ್ಡಿಂಗ್‌ಗಳಲ್ಲಿ ಈ ಸಂದೇಶವೇ ಎದ್ದು ಕಾಣಿಸುತ್ತಿತ್ತು. ಭಾಷಣಗಳಲ್ಲಿ ಅವರು ವಯಸ್ಸಾದ ಮಹಿಳೆಯರಿಗೆ ತಂಗಿಯಾದರು, ಸಣ್ಣ ವಯಸ್ಸಿನ ಮಹಿಳೆಯರಿಗೆ ಅಕ್ಕನಾದರು.

ಮಮತಾ ಯಾವಾಗಲೂ ಬಡವರ ಜೊತೆ ಗುರುತಿಸಿಕೊಂಡವರು. ಚುನಾವಣೆಯಲ್ಲಿ ಆ ಭಾವನಾತ್ಮಕ ಸಂಬಂಧವನ್ನು ಇನ್ನೊಮ್ಮೆ ಯಶಸ್ವಿಯಾಗಿ ತೋರಿಸಿಕೊಂಡರು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪರ್ಯಾಯ ಪ್ರಧಾನ ಮಂತ್ರಿ ಅಭ್ಯರ್ಥಿಯೆಂದು ಗುರುತಿಸಿಕೊಳ್ಳುವುದಕ್ಕೆ ಅವರ ಈ ವ್ಯಕ್ತಿತ್ವವೇ ಏಕೈಕ ಊರುಗೋಲಾಗಿ ನೆರವಿಗೆ ಬರಬಹುದು. ಆದರೆ, ರಾಷ್ಟ್ರಮಟ್ಟದಲ್ಲಿ ಅವರ ಬೆಂಬಲಿಗರು ಇನ್ನೂ ಈ ವಾದ ಮುಂದಿಟ್ಟಿಲ್ಲ. ಬಹುಶಃ ಇನ್ನೂ ಅವರಿಗೆ ಇಂತಹದ್ದೊಂದು ಯೋಚನೆ ಬಂದಿಲ್ಲದಿರಬಹುದು.

ಇಲ್ಲೊಂದು ವಿಚಿತ್ರವಿದೆ. ಪ್ರಾಯಶಃ ಇದಕ್ಕೆ ಕಾರಣ ಹುಡುಕಲು ಇನ್ನೂ ಸಾಧ್ಯವಾಗಿಲ್ಲ. ರಾಜ್ಯಗಳಲ್ಲಿ ಯಶಸ್ವಿಯಾದ ರಾಜ ಕೀಯ ಪಕ್ಷಗಳು ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಹೊರಟಾಗ ನೆಲೆ ಕಳೆದುಕೊಳ್ಳುತ್ತವೆ ಏಕೆ? ಇತಿಹಾಸವನ್ನು ಕೆದಕಿದರೆ ಆ ರಾಜಕೀಯ ಪಕ್ಷಗಳ ಯೋಚನೆ ಬಹಳ ತೆಳುವಾದ ಗಣಿತವನ್ನು ಆಧರಿಸಿರುವುದು ಕಾಣಿಸುತ್ತದೆ. ಇದು ಕಾಂಗ್ರೆಸ್ ಪಕ್ಷದ ವಿಷಯ ದಲ್ಲೂ ನಿಜ. ಒಂದು ಕಾಲದಲ್ಲಿ ಆ ಪಕ್ಷವನ್ನು ಅಲುಗಾಡಿಸುವವರೇ ಇರಲಿಲ್ಲ ಎಂಬುದು ಎಷ್ಟು ನಿಜವಾಗಿತ್ತೋ ಈಗ ಭಾರತದ ರಾಜಕಾರಣದಲ್ಲಿ ನರೇಂದ್ರ ಮೋದಿ ಎಲ್ಲರಿಗಿಂತ ಎತ್ತರಕ್ಕೆ ಬೆಳೆದಿದ್ದಾರೆ ಎಂಬುದೂ ಅಷ್ಟೇ ನಿಜ.

ಕಾಂಗ್ರೆಸ್ ಪಕ್ಷ ಮಾಡುತ್ತಿರುವ ತಪ್ಪು ಬಹಳ ಸರಳವಾಗಿದೆ. ನಾವು ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷದ ವಿರುದ್ಧ ಒಗ್ಗಟ್ಟಾಗಿ ಸೆಣಸುತ್ತಿಲ್ಲ, ಹಾಗಾಗಿ ಸೋಲುತ್ತೇವೆ ಎಂದು ಬಹಳ ಮುಗ್ಧವಾಗಿ ಕಾಂಗ್ರೆಸಿಗರು ನಂಬುತ್ತಿದ್ದಾರೆ. ಹೆಚ್ಚೆಂದರೆ ಇದೊಂದು ಸಣ್ಣ ಕಾರಣವಷ್ಟೆ. ಇವರು ಸೋಲುವುದು ರಾಜಕೀಯ ಒಗ್ಗಟ್ಟಿನ ಕೊರತೆಯಿಂದಲ್ಲ, ಬದಲಿಗೆ ಆರ್ಥಿಕ ಎಡಬಿಡಂಗಿತನದಿಂದ.
ಇದನ್ನು ಅರ್ಥ ಮಾಡಿಕೊಳ್ಳಲು ಕಾಮನ್ ಸೆನ್ಸ್ ಸಾಕು. ದೇಶದಲ್ಲಿ ಯಾವುದೇ ಮೈತ್ರಿಕೂಟ ಯಶಸ್ವಿಯಾಗಲು ಸಾಮಾನ್ಯ ಆರ್ಥಿಕ ನೀತಿಯೊಂದು ಬೇಕು. ಇದು ಚುನಾವಣೆಯಲ್ಲಿ ನೀಡುವ ಭರವಸೆ ಅಥವಾ ಪಕ್ಷದ ಪ್ರಮುಖ ವೋಟ್ ಬ್ಯಾಂಕನ್ನು
ಮೀರಿದ್ದಾಗಿರಬೇಕು.

ಮೈತ್ರಿಕೂಟದಲ್ಲಿರುವ ಪಕ್ಷಗಳು ಬೇಕಾದರೆ ನಂತರ ತಮ್ಮ ಯೋಜನೆಗಳ ಮಹತ್ವವನ್ನು ತಾವು ಆಳುವ ರಾಜ್ಯದಲ್ಲಿ ಸಾಬೀತು ಪಡಿಸಿ ತೋರಿಸಲಿ. ಪ್ರಧಾನಿ ನರೇಂದ್ರ ಮೋದಿ ಇಡೀ ದೇಶದಲ್ಲಿ ಎಲ್ಲೇ ಹೋದರೂ ಏಕೆ ಗೆಲ್ಲುತ್ತಾರೆ ಅಂದರೆ ಅವರು ಗುಜರಾತ್‌ ನಲ್ಲಿ ಆಡಳಿತ ನಡೆಸುವಾಗ ತಮ್ಮ ಹೆಸರನ್ನು ಅಭಿವೃದ್ಧಿಗೆ ಪರ್ಯಾಯ ಎಂಬಂತೆ ಬಿಂಬಿಸುವಲ್ಲಿ ಯಶಸ್ವಿ ಯಾಗಿದ್ದರು. 2014ರಲ್ಲಿ ಮೋದಿ ಗೆದ್ದರೆ ಗುಜರಾತ್ ಮಾದರಿಯನ್ನು ದೇಶಾದ್ಯಂತ ಜಾರಿಗೆ ತರುತ್ತಾರೆ ಎಂಬ ಬಗ್ಗೆ ಮತದಾರರಿಗೆ ವಿಶ್ವಾಸವಿತ್ತು.

ಆಡಳಿತಾರೂಢ ಸರಕಾರಕ್ಕೆ ಚುನಾವಣೆಯಲ್ಲೊಂದು ಅನುಕೂಲವಿರುತ್ತದೆ. ಅದು ಏನು ಮಾಡುತ್ತಿದೆಯೋ ಆ ಕೆಲಸದ ಮೇಲೆ ಜನರು ಆ ಪಕ್ಷವನ್ನು ಆರಿಸಬೇಕೋ ಬೇಡವೋ ಎಂದು ನಿರ್ಧರಿಸುತ್ತಾರೆ. ಆದರೆ, ವಿಪಕ್ಷವನ್ನು ಅದು ಏನು ಭರವಸೆ ನೀಡುತ್ತದೆ ಯೋ ಅದರ ಮೇಲೆ ಅಳೆಯುತ್ತಾರೆ. ಎರಡನೆಯದು ಮೊದಲನೆಯದಕ್ಕಿಂತ ಸುಲಭವೆಂಬುದು ಭಾವಿಸುವುದು ಖಂಡಿತ ತಪ್ಪು. ಭರವಸೆ ಯಾವತ್ತೂ ವಿಶ್ವಾಸಾರ್ಹವಾಗಿರಬೇಕು.

2021ರ ಗೆಲುವಿನಿಂದ ಉತ್ತೇಜಿತರಾದ ಮಮತಾ ಬ್ಯಾನರ್ಜಿ ನಂತರದ 12 ತಿಂಗಳ ಕಾಲ ದೇಶಾದ್ಯಂತ ಓಡಾಡಿ ಮುಂದಿನ
ಲೋಕಸಭೆ ಚುನಾವಣೆಗೆ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ತಳಮಟ್ಟದ ಕೆಲಸ ಆರಂಭಿಸಿದರು. ಬ್ರಿಟಿಷರ ಆಳ್ವಿಕೆ ಜನ್ಮ ತಳೆದ ಕೊಲ್ಕತ್ತಾ ಎಂಬ ಊರಿನಿಂದ ಗೋವಾ ಎಂಬ ಹಳೆಯ ಪೋರ್ಚುಗೀಸ್ ಕಾಲೋನಿಗೆ ಇಂಗ್ಲಿಷ್ ಮಾತನಾಡುವ ತಮ್ಮ ದೂತರನ್ನು ಕಳುಹಿಸಿ ದಿಗ್ವಿಜಯ ಸಾಧಿಸುತ್ತೇನೆ ಎಂದುಕೊಂಡರು. ಆದರೆ ನೀವು ದಾರದಿಂದ ಜನರ ಮನಸ್ಸು ಹೊಲಿಯಲು ಸಾಧ್ಯವಿಲ್ಲ.

ಏಕಾಏಕಿ ತಾವೇ ಗೋವಾಕ್ಕೆ ಹೋಗಿ ಓಡಾಡುವ ಬದಲು ಸಂಭವನೀಯ ರಾಜಕೀಯ ಮೈತ್ರಿ ಪಕ್ಷಗಳನ್ನು ಕೊಲ್ಕತ್ತಾ ಶೃಂಗಕ್ಕೆ ಕರೆಸಿ ಸಾಮಾನ್ಯ ಆರ್ಥಿಕ ನೀತಿ ಹಾಗೂ ಸಾಮಾಜಿಕ ನೀತಿಯ ರೂಪರೇಷೆಯ ಬಗ್ಗೆ ಮೆದುಳು ತಿನ್ನುವ ಕೆಲಸವನ್ನು ಅವರು
ಮಾಡಬಹುದಿತ್ತು. ರಾಜಕೀಯದ ಯಶಸ್ಸಿಗೆ ರಾಜಕೀಯವೊಂದೇ ಸಾಲದು ನೋಡಿ. ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳು ನಡೆಯುವುದು ಜನರ ಆಶೋತ್ತರದ ಮೇಲೆ. ಪ್ರಜಾಪ್ರಭುತ್ವವಿರುವ ಎಲ್ಲಾ ದೇಶಗಳಲ್ಲೂ ಇದು ನಿಜ. ನನಗೆ ಅಮೆರಿಕದ ಬಿಲ್ ಕ್ಲಿಂಟನ್ ನೆನಪಾಗುತ್ತಾರೆ.

ಅವರು ಆಗ ಡೆಮಾಕ್ರೆಟಿಕ್ ಪಕ್ಷದ ಯುವ ರಾಜಕಾರಣಿ. 1992ರ ಅಧ್ಯಕ್ಷೀಯ ಚುನಾವಣೆಯ ಪ್ರಚಾರ ಆರಂಭವಾಗಿತ್ತು.
ಅನುಭವಿ ನಾಯಕರಾದ ರಿಪಬ್ಲಿಕನ್ ಪಕ್ಷದ ಜಾರ್ಜ್ ಬುಷ್ (ಸೀನಿಯರ್)ಗಿಂತ ಜನಮತಗಣನೆಯಲ್ಲಿ ಶೇ.20ರಷ್ಟು ಹೆಚ್ಚು
ಮತಗಳಿಂದ ಕ್ಲಿಂಟನ್ ಮೇಲಕ್ಕೆ ಜಿಗಿಯುವಲ್ಲಿ ಯಶಸ್ವಿಯಾಗಿದ್ದರು. ಕ್ಲಿಂಟನ್ ಎಲ್ಲಿಗೆ ಹೋದರೂ ಹೇಳುತ್ತಿದ್ದುದು ಒಂದೇ
ಮಾತು, “It’s the economy, stupid!’ ಅಂದೂ ಮತ ಗಳಿಸಲು ಆರ್ಥಿಕ ಸುಸ್ಥಿರತೆ ಬಹಳ ಮುಖ್ಯವಾಗಿತ್ತು, ಇಂದೂ ಬಹಳ ಮುಖ್ಯವಾಗಿದೆ. ಚುನಾವಣೆಯಲ್ಲಿ ಕೆಲಸ ಮಾಡುವ ಮಂತ್ರವೆಂದರೆ ಐಡಿಯಾ, ಐಡಿಯಾ, ಐಡಿಯಾ. ರಾಜಕೀಯ, ರಾಜಕೀಯ, ರಾಜಕೀಯ ಅಲ್ಲ.

ಇಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಉಳಿದುಕೊಂಡಿರುವ ಏಕೈಕ ಮೌಲ್ಯವೆಂದರೆ ಕನ್ಸಿಸ್ಟೆನ್ಸಿ; ಆ ಪಕ್ಷ ಚುನಾವಣೆ ಯಿಂದ ಚುನಾವಣೆಗೆ ದುರ್ಬಲವಾಗುತ್ತಾ ಹೋಗುತ್ತಿದೆ. ಪ್ರತಿ ಬಾರಿ ಆತ್ಮಾವಲೋಕನ ಸಭೆಯಲ್ಲೂ ಮಹತ್ವ ಕಳೆದುಕೊಂಡಿ ರುವ ಕುಟುಂಬವನ್ನು ಉಳಿಸಲು ಏನಾದರೊಂದು ನೆಪ ಹುಡುಕಲಾಗುತ್ತದೆ. ಬದಲಾವಣೆ ತರುವ ಅಥವಾ ಯೋಚಿಸುವ ಅಥವಾ ಅದಕ್ಕೊಂದು ರಣತಂತ್ರ ರೂಪಿಸುವ ಶಕ್ತಿಯನ್ನು ಪಕ್ಷ ಕಳೆದುಕೊಂಡಿದೆ. ಇದು ನಿಜಕ್ಕೂ ಚೋದ್ಯ. ಏಕೆಂದರೆ ಕಾಂಗ್ರೆಸ್
ಪಕ್ಷದ ಇಂದಿನ ರಾಜಕೀಯ ಶೈಲಿಯ ಮೂಲ ಪ್ರವರ್ತಕರಾದ ಇಂದಿರಾ ಗಾಂಧಿ ಮುಳುಗುತ್ತಿದ್ದ ಪಕ್ಷವನ್ನು ಮೊದಲಿಗೆ 1969ರಲ್ಲಿ ಹಾಗೂ ನಂತರ 1978ರಲ್ಲಿ ಎರಡೆರಡು ಬಾರಿ ಮೇಲೆತ್ತಿದ್ದರು.

ಆದರೆ, ಈಗ ಪಂಜಾಬ್‌ನ ದಯನೀಯ ಸೋಲಿನ ಬಗ್ಗೆ ಪ್ರಶ್ನೆ ಕೇಳಿದರೆ ಸೋನಿಯಾ ಗಾಂಧಿ ವಾಸ್ತವಕ್ಕೆ ದೂರವಾದ ಉತ್ತರ
ವನ್ನೇ ನೀಡುತ್ತಾರೆ. ಮುಖ್ಯ ಮಂತ್ರಿ ಹುದ್ದೆಗೆ ಅತ್ಯಂತ ಯೋಗ್ಯವಾಗಿದ್ದ ಅಮರಿಂದರ್ ಸಿಂಗ್ ರನ್ನು ಕಾಂಗ್ರೆಸ್ ಪಕ್ಷ  ಕಿತ್ತು ಹಾಕಿದ್ದರಲ್ಲಿ ಏನೂ ಸಮಸ್ಯೆಯಿಲ್ಲ, ಅವರನ್ನು ಇನ್ನೂ ಮೊದಲೇ ಕಿತ್ತುಹಾಕದೆ ಇದ್ದುದು ಸಮಸ್ಯೆಯಾಯಿತು ಎನ್ನುತ್ತಾರೆ. ಅಕ್ಕಪಕ್ಕ ಕುಳಿತವರೆಲ್ಲ ಭೇಷ್ ಎನ್ನುವಂತೆ ತಲೆ ಅಲ್ಲಾಡಿಸುತ್ತಾರೆ.

ರಾಹುಲ್ ಗಾಂಧಿ ‘ಯುವಕರು’ ಎಂದಾಗಲೆಲ್ಲ ಸುತ್ತಮುತ್ತ ಇರುವವರು ಹೋ ಎಂದು ಕಿರುಚುತ್ತಾರೆ. ಯುವಕರು ಆಡಳಿತದ
ಫಲಾನುಭವಿಗಳು ಎಂಬುದಕ್ಕಿಂತ ಹೆಚ್ಚಾಗಿ ಅವರೇ ಪರಮ ಪೂಜ್ಯರು ಎಂಬಂತೆ ಇವರೆಲ್ಲ ಆಡುತ್ತಾರೆ. ಇದಕ್ಕೆ ಅಮರಿಂದರ್
ಸಿಂಗ್‌ರ ವಿಶ್ಲೇಷಣೆ ಬಹಳ ಖಡಕ್ಕಾಗಿದೆ; ‘ಚುನಾವಣೆಗೆ ಕೆಲವೇ ತಿಂಗಳಿರುವಾಗ ಚಂಚಲ ನವಜೋತ್ ಸಿಂಗ್ ಸಿಧುರನ್ನು ರಾಜ್ಯ
ಕಾಂಗ್ರೆಸ್ ಅಧ್ಯಕ್ಷರನ್ನಾಗಿಯೂ, ಭ್ರಷ್ಟ ಚರಣ್‌ಜಿತ್ ಚನ್ನಿಯನ್ನು ಮುಖ್ಯಮಂತ್ರಿಯಾಗಿಯೂ ಆಯ್ಕೆ ಮಾಡುವ ಮೂಲಕ
ಕಾಂಗ್ರೆಸ್ ಪಕ್ಷ ಪಂಜಾಬ್‌ನಲ್ಲಿ ತನ್ನ ಗೋರಿಯನ್ನು ತಾನೇ ತೋಡಿಕೊಂಡಿತು.

ಆ ಪಕ್ಷ ಕೇವಲ ಪಂಜಾಬ್‌ನಲ್ಲಿ ಮಾತ್ರವಲ್ಲ, ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಹಾಗೂ ಮಣಿಪುರದಲ್ಲೂ ಸೋತಿದೆ. ಈ ನಾಚಿಕೆಗೇಡಿನ ಸೋಲಿಗೆ ಗಾಂಧಿಗಳೇ ನೇರ ಹೊಣೆ. ಅವರ ನಾಯಕತ್ವದಲ್ಲಿ ಜನರು ನಂಬಿಕೆ ಕಳೆದುಕೊಂಡಿದ್ದಾರೆ.’ ಅವರ ಒಂದೊಂದು ವಾಕ್ಯವೂ ಅಪ್ಪಟ ಸತ್ಯ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಅಮರಿಂದರ್ ಸಿಂಗ್ ಈಗ ಹೊರಗಿನವರು. ಕಾಂಗ್ರೆಸ್‌ನಲ್ಲಿ ಹೊಣೆಗಾರಿಕೆ ನಿಗದಿಪಡಿಸುವುದು ಹಾಗಿರಲಿ, ಸೋಲಿನ ಬಗ್ಗೆ ಗಂಭೀರವಾದ ಆತ್ಮಾವಲೋಕನವೇ ನಡೆಯುವುದಿಲ್ಲ.

ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್ ಗಾಂಧಿ ಎಂಬ ತ್ರಿಮೂರ್ತಿಗಳು ಚುನಾವಣೆ ಬಂದಾಗ ಬುದ್ಧಿಜೀವಿ ಗಳು ಮಾತಿನಲ್ಲಿ ಕಟ್ಟಿದ ಬರಡು ಮಂಟಪದಲ್ಲಿ ನಿಂತು ತಾವು ಗಾಳಿಯಲ್ಲಿ ಕೈಬೀಸಿದರೆ ಸಾಕು, ಜನರು ಮತ ಹಾಕಿಬಿಡುತ್ತಾರೆ ಎಂದು ಇವತ್ತಿಗೂ ನಂಬಿದ್ದಾರೆ. ಇದನ್ನು ಒಪ್ಪದವರು ಜಿ-23 ಗುಂಪಿನವರಂತೆ ತಮ್ಮ ತಮ್ಮ ಮನೆಗಳಲ್ಲಿ ಏಕಾಂಗಿಯಾಗಿ ಮರುಗುತ್ತಾರೆ ಅಥವಾ ಅಲ್ಲೊಂದು ಇಲ್ಲೊಂದು ಟ್ವೀಟ್ ಮಾಡಿ ತೃಪ್ತಿಪಡುತ್ತಾರೆ.

ಕಾಂಗ್ರೆಸ್ ಪಕ್ಷದಲ್ಲಿ ಒಂದು ಕುಟುಂಬ ತೋಡಿದ ಖೆಡ್ಡಾದಲ್ಲಿ ಎಲ್ಲರೂ ಕೋಮಾಕ್ಕೆ ಹೋಗಿ ಮಲಗಿಬಿಟ್ಟಿದ್ದಾರೆ. ಮೂಲದಲ್ಲಿ ಆ
ಕುಟುಂಬವೇ ನೆಲೆ ಕಳೆದುಕೊಂಡಿದೆ. ಆದರೆ, ವಾಸ್ತವವನ್ನು ಒಪ್ಪಿಕೊಳ್ಳಲು ಅದು ಸಿದ್ಧವಿಲ್ಲ. ಗಾಂಧಿ ಕುಟುಂಬದ  ಭಟ್ಟಂಗಿ ಗಳನ್ನು ಬಿಟ್ಟರೆ ಭಾರತೀಯರ ಪಾಲಿಗೆ ರಾಹುಲ್ ಗಾಂಧಿ ಅವರು ನರೇಂದ್ರ ಮೋದಿಗೆ ಯಾವ ರೀತಿಯಲ್ಲೂ ಪರ್ಯಾಯ
ನಾಯಕ ಅಲ್ಲ. ಇವತ್ತು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಿಮಗೆ ಕೇಳಿಸುವ ಏಕೈಕ ಸದ್ದು ಅಂದರೆ ಪ್ರತಿ ಬಾರಿಯೂ ಒಬ್ಬೊಬ್ಬ
ನಾಯಕರು ಪಕ್ಷ ತೊರೆದು ಹೋಗುವಾಗ ದಢಾರನೆ ಬಾಗಿಲು ಮುಚ್ಚಿಕೊಂಡು ಹೋಗುವ ಸದ್ದು ಮಾತ್ರ!

ಕರ್ನಾಟಕದಲ್ಲಿ ಸಿ.ಎಂ.ಇಬ್ರಾಹಿಂ ಅವರಿಗೂ ಸಾಕಾಗಿಹೋಗಿದೆ ಅಂದರೆ ಯೋಚಿಸಿ ನೋಡಿ. ಹಿಂದೆ ಅಸ್ಸಾಂನ ಹಿಮಂತ ಬಿಸ್ವಾ ಶರ್ಮಾ ಅವರಿಂದ ಹಿಡಿದು ಮಧ್ಯಪ್ರದೇಶದ ಜ್ಯೋತಿರಾದಿತ್ಯ ಸಿಂಧಿಯಾವರೆಗೆ ಇಂತಹುದೇ ನಿರ್ಧಾರ ಕೈಗೊಂಡವರೆಲ್ಲ ಇಂದು ತಮಗೆ ಯೋಗ್ಯವಾದ ಸ್ಥಾನ ಗಳಿಸಿದ್ದಾರೆ.

ರಾಹುಲ್ ಗಾಂಧಿ ತೆಗೆದುಕೊಂಡ ಎಡವಟ್ಟು ನಿರ್ಧಾರಗಳು ಪಂಜಾಬನ್ನು ಅರವಿಂದ ಕೇಜ್ರಿವಾಲ್ ಅವರ ಕೈಗಿತ್ತವು. ಕೇಜ್ರಿ ವಾಲ್‌ರ ರಣತಂತ್ರ ಬಹಳ ಸರಳ: ಬಿಜೆಪಿಯನ್ನು ಎದುರಿಸಬೇಕು ಅಂದರೆ ಕಾಂಗ್ರೆಸ್ಸನ್ನು ಕಿತ್ತೊಗೆಯಬೇಕು. ಯಶಸ್ಸಿನಿಂದಲೇ ಯಶಸ್ಸು ಸಿಗುತ್ತದೆ ಎಂದು ದೃಢವಾಗಿ ನಂಬಿರುವ, ವಿಶ್ವನಾಥ್ ಪ್ರತಾಪ್ ಸಿಂಗ್ ಶೈಲಿಯ ಒಂಟಿ ನಾಯಕ ಕೇಜ್ರಿವಾಲ್. ಅವರ ನಂಬಿಕೆ ನಿಜವೇ ಇರಬಹುದು. ಆದರೆ, ಎಲ್ಲಿಯವರೆಗೆ ಎಂಬುದು ಪ್ರಶ್ನೆ. ದೆಹಲಿಗೆ ಪಂಜಾಬನ್ನು ಸೇರಿಸಲು ಕೇಜ್ರಿವಾಲ್‌ಗೆ ಏಳು ವರ್ಷ ಬೇಕಾಯಿತು. ಮೂರನೇ ರಾಜ್ಯ ಗೆಲ್ಲಲು ಇನ್ನೆಷ್ಟು ವರ್ಷ ಬೇಕಾಗಬಹುದು? ಪ್ರಧಾನಿ ಹುದ್ದೆಗೆ ಏರಬೇಕು ಅಂದರೆ ೧೮ ಲೋಕಸಭಾ ಸ್ಥಾನಗಳಿಗೆ ಪ್ರದಕ್ಷಿಣೆ ಹಾಕಿ ಬಂದರೆ ಸಾಲದು.

ವಿ.ಪಿ.ಸಿಂಗ್ ಉತ್ತರ ಪ್ರದೇಶ ಮತ್ತು ಬಿಹಾರದ ಬಹುತೇಕ ಸ್ಥಳಗಳಿಂದ ತಮ್ಮ ಕೆಲಸ ಆರಂಭಿಸಿದ್ದರು. ನಿಜವಾದ ಸಮಯ ಕ್ಯಾಲೆಂಡರ್‌ಗಿಂತ ಭಿನ್ನವಾದ ಕೋನದಲ್ಲಿರಬಹುದು. ವಿಧಾನಸಭೆ ಚುನಾವಣೆಗಳಲ್ಲಿ ಗೆದ್ದ ಮೇಲೆ ಪ್ರಧಾನಿ ಮೋದಿಗೆ ಇರುವ ಬಹುದೊಡ್ಡ ಸವಾಲೆಂದರೆ 2024ರ ಚುನಾವಣೆಯವರೆಗೆ ಉಳಿದಿರುವ ಸಮಯ. ಕಾಗದದ ಮೇಲೆ ಲೋಕಸಭೆ ಚುನಾವಣೆಗೆ ಇನ್ನೂ ಎರಡು ವರ್ಷವಿದೆ. ಆದರೆ ಸರಿಯಾಗಿ ಆಡಳಿತ ನಡೆಸಲು ಇನ್ನೆಷ್ಟು ಸಮಯ ಉಳಿದಿದೆ ಎಂದು ಲೆಕ್ಕಹಾಕತೊಡಗಿದರೆ ಕ್ಯಾಲೆಂಡರ್ ಚಿಕ್ಕದಾಗಿಬಿಡುತ್ತದೆ.

2023-24ರ ಚುನಾವಣಾ ಋತುವಿಗೆ ಪ್ರಚಾರದ ಕಾರ್ಯ 2023ರ ದೀಪಾವಳಿ ನಂತರ ಶುರುವಾಗುತ್ತದೆ. ಏಕೆಂದರೆ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢಕ್ಕೆ ಮುಂದಿನ ವರ್ಷದ ಚಳಿಗಾಲದಲ್ಲಿ ಚುನಾವಣೆಯಿದೆ. ನಂತರ 2024ರ ಬೇಸಿಗೆಯಲ್ಲಿ ಲೋಕಸಭೆ ಚುನಾವಣೆ.

ಎರಡು ಮಹಾನ್ ಹಿನ್ನಡೆಯನ್ನು ಸರಿಪಡಿಸಿಕೊಳ್ಳಲು ಈ ಏಪ್ರಿಲ್‌ನಿಂದ ಲೆಕ್ಕಹಾಕಿದರೆ ಕೇವಲ 20 ತಿಂಗಳು ಮಾತ್ರ ಸಿಗುತ್ತದೆ. ಕೋವಿಡ್ ಬರುತ್ತದೆ ಎಂದು ಯಾರಿಗೂ ಗೊತ್ತಿರಲಿಲ್ಲ. ಹಾಗೆಯೇ ಉಕ್ರೇನ್ ಯುದ್ಧ ಶುರುವಾಗುತ್ತದೆ ಎಂಬುದೂ ಗೊತ್ತಿರಲಿಲ್ಲ. ಕೋವಿಡ್ ನೀಡಿದ ಆರ್ಥಿಕ ಆಘಾತವನ್ನು ಯುದ್ಧ ತಂದಿತ್ತ ಆರ್ಥಿಕ ಆಘಾತವು ಇನ್ನಷ್ಟು ತೀಕ್ಷ್ಣವಾಗಿಸಿದೆ. ಇವೆರಡೂ ಒಟ್ಟಾಗಿ ಜನಸಾಮಾನ್ಯ ಭಾರತೀಯರಿಗೆ ನಿರುದ್ಯೋಗ ಹಾಗೂ ಬೆಲೆಯೇರಿಕೆಯೆಂಬ ಎರಡು ಪ್ರಬಲ ಆಘಾತ ನೀಡಿವೆ.

ಎಲ್ಲಿ ಹೊಡೆದರೆ ಜೋರಾಗಿ ಏಟಾಗುತ್ತದೆಯೋ ಅಲ್ಲೇ ಈ ಎರಡೂ ಸಂಗತಿಗಳು ಬಡಿದಿವೆ ಎಂಬುದು ಗಮನಾರ್ಹ. ತೈಲ ಬೆಲೆ ಯೇರಿಕೆ ಸಮಸ್ಯೆ ಉಕ್ರೇನ್‌ನ ಪರಿಸ್ಥಿತಿ ಶಾಂತವಾದ ಮೇಲೆ ಸ್ಥಿರವಾಗಬಹುದು. ಆದರೆ, ಆಗಿನ ತೈಲ ದರಗಳು 2021ರ ಡಿಸೆಂಬರ್‌ನ ಮೊದಲ ವಾರಕ್ಕಿಂತ ಸಾಕಷ್ಟು ಹೆಚ್ಚೇ ಇರುತ್ತವೆ. ಈ ಹೊಡೆತದಿಂದ ಗ್ರಾಹಕನನ್ನು ಕಾಪಾಡಲು ಸಾಧ್ಯವಿಲ್ಲ. ಹಾಗೆಯೇ, ಉಚಿತ ಆಹಾರದಂತಹ ತುರ್ತು ಆರ್ಥಿಕ ವೆಚ್ಚ ಸರಿದೂಗಿಸಿಕೊಳ್ಳಲು ಸರ್ಕಾರ ತೈಲದ ಮೇಲಿನ ತೆರಿಗೆಯನ್ನು  ಹೆಚ್ಚಿಸಲೂ ಸಾಧ್ಯವಿಲ್ಲ. ಇನ್ನು, ಕೋವಿಡ್ ನಂತರದ ಆರ್ಥಿಕ ಚೇತರಿಕೆ ಖಂಡಿತ ಸುಲಭವಾಗಿರುವುದಿಲ್ಲ.

ಉಕ್ರೇನ್ ಬಿಕ್ಕಟ್ಟಿನಿಂದ ಅದು ಇನ್ನಷ್ಟು ಕಷ್ಟಕರವಾಗಿದೆ. ನಾವೀಗ ಜಗತ್ತಿನಾದ್ಯಂತ ಆಹಾರ ಧಾನ್ಯಗಳ ಬೆಲೆ ಏರಿಕೆಯಾಗುವು ದನ್ನು ನೋಡುತ್ತಿದ್ದೇವಲ್ಲ, ಇದು ಆರಂಭ ಮಾತ್ರ. ಪಾಶ್ಚಾತ್ಯ ದೇಶಗಳು ವಿಧಿಸಿದ ನಿರ್ಬಂಧಕ್ಕೆ ಸಡ್ಡು ಹೊಡೆದು ರಷ್ಯಾ ಪೆಲಾಡಿಯಮ್ ಮತ್ತು ಟೈಟಾನಿಯಂನಂತಹ ಪ್ರಮುಖ ಲೋಹಗಳನ್ನು ರಫ್ತು ಮಾಡುವುದನ್ನು ನಿಲ್ಲಿಸಿದೆ. ಅದರ ಪರಿಣಾಮ ಕಂಪ್ಯೂಟರ್‌ನಿಂದ ಹಿಡಿದು ಕಾರಿನವರೆಗೆ ಪ್ರತಿಯೊಂದು ಗ್ರಾಹಕ ವಸ್ತುಗಳ ಬೆಲೆಯೂ ಏರಿಕೆಯಾಗಬಹುದು. ಅಮೆರಿಕ ಮತ್ತು ಬ್ರಿಟನ್‌ನಲ್ಲಿ ಹಣದುಬ್ಬರ ಎರಡಂಕಿಯತ್ತ ದಾಪುಗಾಲು ಹಾಕುತ್ತಿದೆ. ಇದು ಆ ದೇಶಗಳಲ್ಲಿ ಕಳೆದ ನಾಲ್ಕು ದಶಕಗಳಲ್ಲಿ ಕಂಡುಕೇಳರಿಯದಿದ್ದ ಸಮಸ್ಯೆ.

ನಮ್ಮ ದೇಶದಲ್ಲಂತೂ ಎಚ್ಚರಿಕೆಯ ಚಿಹ್ನೆಗಳು ಎಲ್ಲೆಂದರಲ್ಲಿ ಕಾಣಿಸುತ್ತಿವೆ. ಮಾರ್ಚ್ 11ರಂದು ವಾಷಿಂಗ್ಟನ್‌ನಲ್ಲಿ ಮಾತನಾ ಡಿದ ಐಎಂಎಫ್ ನ ಮ್ಯಾನೇಜಿಂಗ್ ಡೈರೆಕ್ಟರ್ ಕ್ರಿಸ್ಟಾಲಿನಾ ಜಾರ್ಜಿಯೇವಾ ‘ಭಾರತ ತನ್ನ ಆರ್ಥಿಕತೆಯನ್ನು ಬಹಳ ಚೆನ್ನಾಗಿ ನಿಭಾಯಿಸಿಕೊಂ ಡು ಬಂದಿತ್ತು. ಆದರೆ ಉಕ್ರೇನ್ ಯುದ್ಧದ ನಂತರ ತೈಲ ಬೆಲೆಯಲ್ಲಿ ಉಂಟಾದ ಏರಿಕೆ ಭಾರತದ ಆರ್ಥಿಕತೆ ಮೇಲೆ ಕೆಟ್ಟ ಪರಿಣಾಮ ಬೀರಿದೆ’ ಎಂದರು.

ಅದೇ ದಿನ ಮುಂಬೈನಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ ಡೆಪ್ಯುಟಿ ಗವರ್ನರ್ ಮೈಕೆಲ್ ಪಾತ್ರಾ ಮಾತನಾಡುವಾಗ ಇತ್ತೀಚಿನ
ಭೂರಾಜಕೀಯ ಬೆಳವಣಿಗೆಗಳಿಂದಾಗಿ ದೇಶದ ಬೆಳವಣಿಗೆಯ ಕತೆ 2013ರಲ್ಲಿ ಇದ್ದಷ್ಟು ದುರ್ಬಲವಾಗಿದೆ ಎಂದು ಹೇಳಿದರು. ಆವತ್ತೇ ದೆಹಲಿಯಲ್ಲಿ ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್ ಎಸ್‌ಒ) ಬಿಡುಗಡೆ ಮಾಡಿದ ಅಂಕಿಅಂಶದಲ್ಲಿ ಕೈಗಾರಿಕಾಭಿವೃದ್ಧಿ
ದರ ಬರೀ ಶೇ.1.3ರಷ್ಟು ಇರುವುದು ಗೋಚರಿಸಿತು. ನಾನಿದನ್ನು ಬರೆಯುತ್ತಿರುವಾಗ ದೇಶದಲ್ಲಿ ನಿತ್ಯ ಬಳಕೆಯಾಗುವ ಜನಪ್ರಿಯ
ಉತ್ಪನ್ನಗಳಾದ ಹಾಲು, ಚಹಾ, ಮೊಬೈಲ್, ನೂಡಲ್ಸ್‌ನಂತಹ ವಸ್ತುಗಳ ದರ ಸರಾಸರಿ ಶೇ.5ರಷ್ಟು ಏರಿಕೆಯಾಗಿರುವ ಸುದ್ದಿ
ಬಂದಿದೆ. ಕಂಪನಿಗಳು ಇದು ಹಣದುಬ್ಬರದ ಪರಿಣಾಮ ಎಂದು ಹೇಳುತ್ತಿವೆ.

ಹಣದುಬ್ಬರದಿಂದ ಇನ್ನಷ್ಟು ಹಣದುಬ್ಬರ ಉಂಟಾಗುತ್ತದೆ. ತಾವು ಕೆಲ ಕಠಿಣ ನಿರ್ಧಾರ ಕೈಗೊಳ್ಳಬೇಕಿದೆ ಎಂಬುದು ಪ್ರಧಾನಿ ನರೇಂದ್ರ ಮೋದಿಗೆ ಗೊತ್ತು. ಅದಕ್ಕೆ ಬೇಕಾದ ರಾಜಕೀಯ ಶಕ್ತಿಯೂ ಈಗ ಅವರ ಬಳಿಯಿದೆ. ತುರ್ತಾಗಿ ಆರ್ಥಿಕತೆ ಚೇತರಿಸಿ ಕೊಳ್ಳುವಂತೆ ಮಾಡಲು ಅವರು ಕೆಲ ಕ್ರಾಂತಿಕಾರಿ ನಿರ್ಧಾರವನ್ನೇ ಕೈಗೊಳ್ಳಬೇಕು. ಬೇಗ ಫಲಿತಾಂಶ ಬರಬೇಕು ಅಂದರೆ ಖಾಸಗಿ ಕ್ಷೇತ್ರದ ಸಹಯೋಗದಲ್ಲಿ ಏನಾದರೂ ಮಾಡಬೇಕು. ಏಕೆಂದರೆ ಖಾಸಗಿಯವರು ಕೆಲಸ ಮಾಡುವಷ್ಟು ವೇಗವಾಗಿ ಸರ್ಕಾರ ಯಾವತ್ತೂ ಮಾಡುವುದಿಲ್ಲ. ಅದರರ್ಥ, ಬೆಳವಣಿಗೆಗೆ ನೀಡುವ ಉತ್ತೇಜನ ಕೇವಲ ಹಣದ ರೂಪದಲ್ಲಿದ್ದರೆ ಸಾಲದು.

ತಾತ್ವಿಕವಾಗಿ ಮತ್ತು ಭೌತಿಕವಾಗಿ ಕೆಲ ಬದಲಾವಣೆ ಆಗ ಬೇಕು. ಜನಸಾಮಾನ್ಯನಾಗಿ ನನ್ನ ಕಡೆಯಿಂದ ಅದಕ್ಕೊಂದು ಸಲಹೆ ಇದೆ:20 ದೊಡ್ಡ ಕಾರ್ಪೊರೇಟ್ ಕಂಪನಿಗಳು ತಲಾ 10000 ಕಡಿಮೆ ವೆಚ್ಚದ ಮಾದರಿ ಮನೆಗಳನ್ನು 12ರಿಂದ 16 ತಿಂಗಳಲ್ಲಿ ದೇಶದ 20 ಅತ್ಯಂತ ಬಡ ಜಿಲ್ಲೆಗಳಲ್ಲಿ ನಿರ್ಮಿಸಿ ಪೂರ್ವನಿರ್ಧರಿತ ಬೆಲೆಗೆ ನೀಡಬಹುದೇ? ಅದಕ್ಕೆ ಶೇ.3ರಿಂದ 4ರಷ್ಟು ತೆರಿಗೆ ರಹಿತ ಲಾಭವನ್ನು ಸರ್ಕಾರ ನೀಡಬೇಕು. ಮನೆಯಿಲ್ಲದವರಿಗೆ ಮನೆ ನಿರ್ಮಿಸಿಕೊಡುವ ಸರಕಾರದ ಯೋಜನೆಗೆ ಇದು ಖಾಸಗಿ ಕ್ಷೇತ್ರದ ಕಡೆಯಿಂದ ವೇಗ ನೀಡುತ್ತದೆ. ಮೊದಲೇ ಹೇಳಿದಂತೆ ಕಾಲ ಬಹಳ ದುಬಾರಿ. ಸರ್ಕಾರ ಒಂದು ಚಿಂತನೆಯನ್ನು ಕಾಗದದ ಮೇಲೆ ತೋರಿಸಿದರೆ ಅದು ಕಾರ್ಯರೂಪಕ್ಕೆ ಬಂದು ಶಂಕುಸ್ಥಾಪನೆ ನೆರವೇರಲು  ಕಡಿಮೆಯೆಂದರೂ ಆರು ತಿಂಗಳು ಬೇಕಾಗು ತ್ತದೆ.

ಕಳೆದ ವರ್ಷ ಚಿಟಿಕೆ ಹೊಡೆಯುವಷ್ಟರಲ್ಲಿ ಮುಗಿದುಹೋಯಿತು ಅಂದುಕೊಂಡರೆ, ಮುಂದಿನ ವರ್ಷ ಅದಕ್ಕಿಂತ ಬೇಗ
ಕಳೆದುಹೋಗುತ್ತದೆ.