Friday, 13th December 2024

ಉಂಡೆಲೆಯಲ್ಲಿ ಜಾತಿ ಶೋಧಿಸುವವರು !

ಹಂಪಿ ಎಕ್ಸ್’ಪ್ರೆಸ್

ಅಗಾಧ ಅನಂತತೆಯ ಹಿಂದೂಧರ್ಮವನ್ನು ‘ಕಾಂತಾರ’ ಚಲನಚಿತ್ರದ ನೆಪವಿಟ್ಟುಕೊಂಡು ‘ಧರ್ಮಹಿಂಸಾತ್ಮಕ’ ವ್ಯಕ್ತಿಯೊಬ್ಬ ಪ್ರಶ್ನಿಸುತ್ತಿದ್ದಾನೆ! ಇವನೇನು ಜಗತ್ತಿನ ಎಲ್ಲ ಜಾತಿ-ಧರ್ಮಗಳನ್ನು ಅಧ್ಯಯನ ಮಾಡಿ ಭಾರತಕ್ಕೆ ಬಂದ ವಿದ್ವಾಂಸನೇ? ಭಾರತದ ಇತಿಹಾಸ-ಪರಂಪರೆಯ ಜ್ಞಾನವೇನಾದರೂ ಇವನಿಗಿದೆಯೇ?

ಒಂದು ಗಂಡು-ಹೆಣ್ಣಿಗೆ ಜೀವನದಲ್ಲಿ ಮಹತ್ವದ ಗಳಿಗೆಯಾಗಿ ಒದಗುವುದು ವಿವಾಹ ಸಮಾರಂಭ. ಇದಕ್ಕೆ ಮುಹೂರ್ತವಿಟ್ಟು ಮಂತ್ರಾಕ್ಷತೆಯೊಂದಿಗೆ ಅಗ್ನಿಸಾಕ್ಷಿಯಾಗಿ ಮಂಗಳಸೂತ್ರ ಕಟ್ಟಿಸಿ, ಸಪ್ತಪದಿ ತುಳಿಸಿ, ಸ್ವರ್ಗಾನು ಬಂಧ ಬೆಸೆಯುವುದು ಬ್ರಾಹ್ಮಣ ಪುರೋಹಿತರು. ಈ ಸಂಬಂಧದ ಶಾಸ್ತ್ರಗಳಿಗೆ ಮಡಿ ಹಾಸಿ, ಪಂಜು ಹಿಡಿದು ನಡೆಸುವ ಮಡಿವಾಳರು, ಮುತ್ತೈದೆಯರಿಗೆ ಬಳೆತೊಡಿಸುವ ಬಳೆಗಾರ, ವೀಳ್ಯದೆಲೆ- ಅಡಕೆ-ಹೂವುಗಳನ್ನು ಒದಗಿಸುವ ಬಲಜಿಗರು, ಮಂಗಳವಾದ್ಯ ನುಡಿಸಿ ನಿರ್ಣಾಯಕ ಗಳಿಗೆಯ ಮಾಂಗಲ್ಯಧಾರಣೆಗೆ ಗಟ್ಟಿಮೇಳದ ಹಿಮ್ಮೇಳ ನೀಡುವ ಓಲಗದವರು, ಕೇಶಾಲಂಕರಿಸುವ ಕ್ಷೌರಿಕರು, ಆಭರಣ ಒದಗಿಸುವ ಅಕ್ಕಸಾಲಿಗರು, ಪಾದರಕ್ಷೆ ನೀಡುವ ಚಮ್ಮಾರರು, ವೈವಿಧ್ಯ ಮಯ ವಸ ನೀಡುವ ದೇವಾಂಗ ಮತದವರು/ ನೇಕಾರರು, ಅದನ್ನು ಸುಂದರವಾಗಿ ಹೊಲಿದುಕೊಡುವ ದರ್ಜಿಗಳು, ಪವಿತ್ರ ಗೋವಿನ ಉತ್ಪನ್ನಗಳ ಧಾರೆ ಹರಿಸುವ ಗೊಲ್ಲರು, ಆಹಾರ ಸಾಮಗ್ರಿ ಒದಗಿಸುವ ಒಕ್ಕಲಿಗರು, ತೈಲ ನೀಡುವ ಗಾಣಿಗರು, ನೆರೆವ ಸಾವಿರಾರು ಮಂದಿಗೆ ಭೋಜನ ತಯಾರಿಸಿ ಬಡಿಸುವ ಬಾಣಸಿಗರು, ಮತ್ತೊಂದು ಪಂಕ್ತಿಯ ಭೋಜನಕ್ಕೆ ಅವಕಾಶ ಕಲ್ಪಿಸುವ ಉಂಡೆಲೆ ಎತ್ತುವವರು ಹೀಗೆ ವೈವಿಧ್ಯಮಯ ಜನರ ಕೊಡುಗೆ ಇರುತ್ತದೆ ಈ ಶುಭಸಂದರ್ಭದಲ್ಲಿ.

ವಿವಾಹ ಬಂಧನವು ಸ್ವರ್ಗದಲ್ಲಿ ನಿರ್ಣಯವಾಗಿದ್ದರೂ, ಅನೇಕ ಜಾತಿಯವರ ಕೊಡುಗೆ ಮತ್ತು ಪರಿಶ್ರಮದ ಸಮಾಗಮದಲ್ಲಿ ನಡೆಯುವ ಇಂಥ ಕಾರ್ಯಕ್ರಮ ಅನೇಕತೆಯಲ್ಲಿ ಏಕತೆಯ ಸಾಧನೆಯಾಗುವುದಕ್ಕಿರುವ ಒಂದು ಉದಾಹರಣೆಯಷ್ಟೇ. ಇಂಥ ಸಾಂಸ್ಕೃತಿಕ ರಸಾಯನ ಕೇವಲ ಶುಭಕಾರ್ಯಕ್ಕಲ್ಲದೆ, ಹುಟ್ಟಿನಿಂದ ಸಾವಿನವರೆಗಿನ ಎಲ್ಲ ಬಾಬತ್ತುಗಳಿಗೂ ಅವಶ್ಯಕ; ಈ ನಿಟ್ಟಿನಲ್ಲಿ ಸಮಾಜದ ಎಲ್ಲ ಬಾಂಧವರ ಕೊಡುಗೆ ಪ್ರಕೃತಿಯಷ್ಟೇ ಅನಿವಾರ್ಯ.

ಸಕಲ ಜಾತಿ- ಧರ್ಮಗಳ ಕಾರ್ಯಶ್ರಮ ವಿನಿಯೋಗಗೊಂಡರೆ ಮಾತ್ರವೇ ಊರೊಂದರ ಬೆಳವಣಿಗೆ, ಉದ್ಧಾರ ಸಾಧ್ಯ ವಾದೀತು. ಇಂಥ ಸಂಸ್ಕೃತಿ, ಸಾಮಾಜಿಕ ವೈವಿಧ್ಯವನ್ನು ಜಗತ್ತಿನ ಬೇರಾವುದೇ ಮೂಲೆಯಲ್ಲಿ ಕಾಣಲು ಅಸಾಧ್ಯ. ಹಿಂದೂ ಧರ್ಮದಲ್ಲಿ ಕಸುಬು ಆಧರಿತ ಜಾತಿಪದ್ಧತಿಯು ಪ್ರಾಮುಖ್ಯ ಪಡೆದು ವ್ಯಕ್ತಿಯು ಗೌರವಿಸಲ್ಪಡುತ್ತಾನೆಯೇ ಹೊರತು,
ಕೇವಲ ಜಾತಿಯಿಂದಲ್ಲ.

ನಮ್ಮ ಪಾದವು ಪರರಿಗೆ ಸೋಕಿದರೆ ಅವರನ್ನು ಮುಟ್ಟಿ ನಮಸ್ಕರಿಸುವ ನಾವು, ಚಮ್ಮಾರನು ನಮ್ಮ ಪಾದರಕ್ಷೆಯನ್ನು
ಹೊಲಿದುಕೊಟ್ಟ ನಂತರ ಆತನ ತಲೆಮುಟ್ಟಿ ನಮಸ್ಕರಿಸಿ ಹಣ ನೀಡಿ ಹೊರಡುತ್ತೇವೆ. ಇದು ನಿಜವಾದ ಹಿಂದುತ್ವ. ನಮ್ಮನ್ನು ಭುವಿಗಿಳಿಸುವ ಸೂಲಗಿತ್ತಿಯಿಂದ ಆರಂಭಿಸಿ, ಅಂತಿಮವಾಗಿ ನಾವು ಹಳ್ಳ ಸೇರುವಾಗ ಕಾಣಬರುವ ವೀರಬಾಹುವರೆಗಿನ ಪ್ರತಿಯೊಬ್ಬರಿಗೂ ಪ್ರಾಮುಖ್ಯ ನೀಡಿರುವುದು ಹಿಂದೂಧರ್ಮದ ವೈಶಿಷ್ಟ್ಯ ಮತ್ತು ಸಮಗ್ರತೆಯ ದ್ಯೋತಕ. ಆದರೆ, ಇಂದು
ಜಾತಿಯನ್ನೇ ಹಿಡಿದಾಡುವ ಅಡ್ಡಕಸುಬಿಗಳಿಂದಾಗಿ ಧರ್ಮ ದಾರಿತಪ್ಪುತ್ತಿರುವುದು ನಮ್ಮ ದೌರ್ಭಾಗ್ಯ.

ಇತಿಹಾಸದ ಶಾಸನಗಳನ್ನು ಅವಲೋಕಿಸಿದಾಗಲೂ ಹಿಂದೂಧರ್ಮದ ಈ ವೈಶಿಷ್ಟ್ಯಕ್ಕೆ ಪುರಾವೆ ಸಿಗುತ್ತದೆ. ಶುಭಕಾರ್ಯ ವೊಂದು ನಡೆದಾಗ, ಅದಕ್ಕೆ ಶ್ರಮವಹಿಸಿದ ಸಮಾಜದ ಎಲ್ಲ ವರ್ಗಗಳಿಗೆ ಯಥೋಚಿತವಾಗಿ ಗೋದಾನ, ಭೂದಾನದಂಥ ದಾನಗಳನ್ನು ನೀಡಿ, ಊರು- ಕೇರಿ, ಗುಡಿ-ಗೋಪುರಗಳನ್ನು ನಿರ್ಮಿಸಿ ಕೊಡುಗೆಯಾಗಿ ನೀಡಿರುವ ‘ರಾಜಧರ್ಮ’ಕ್ಕೆ ಸಾಕ್ಷಿಯಾಗಿವೆ ಈ ಶಾಸನಗಳು.

ವಿಜಯನಗರ ಸಾಮ್ರಾಜ್ಯದ ಕಾಲದ ಶಾಸನಗಳನ್ನು ಅವಲೋಕಿಸಿದರೆ ಇದು ಹೆಚ್ಚಾಗಿ ವೇದ್ಯವಾಗುತ್ತದೆ. ಅದಕ್ಕಾಗಿಯೇ ಅಂದಿನ ಪುರಜನರು ತಮ್ಮನ್ನಾಳುವ ಅರಸರನ್ನು ಸಾಕ್ಷಾತ್ ದೇವರಂತೆ ಕಾಣುತ್ತಿದ್ದರು. ಹರಿಹರ ಬುಕ್ಕರಿಗೆ ಸ್ಮಾರ್ತ ವಿದ್ಯಾರಣ್ಯರ, ಶ್ರೀಕೃಷ್ಣ ದೇವರಾಯರಿಗೆ ಮಾಧ್ವ ವ್ಯಾಸರಾಯರ ಕೃಪಾಶೀರ್ವಾದ ಮತ್ತು ಮಾರ್ಗದರ್ಶನ ದಕ್ಕಿದ್ದು, ಶ್ರೀಕೃಷ್ಣದೇವರಾಯರೊಂದಿಗೆ ವೀರಶೈವರು, ಜೈನರು, ಬೇಡರು, ವಿಶ್ವಕರ್ಮರು, ಕುರುಬರು, ಕುಂಬಾರರು ಹೀಗೆ ಒಂದು ಧರ್ಮದ ಎಲ್ಲ ಜಾತಿಯವರೂ ಒಗ್ಗೂಡಿದ್ದರಿಂದಲೇ ‘ಹಿಂದೂರಾಯ ಸುರತ್ರಾಣ’ ಎಂಬ ಬಿರುದು ಶ್ರೀಕೃಷ್ಣದೇವರಾಯರಿಗೆ ದಕ್ಕುವಂತಾಗಿ, ಅವರ ಆಡಳಿತವು ‘ಸುವರ್ಣಯುಗ’ ಎಂದೇ ವಿಶ್ವಖ್ಯಾತಿ ಪಡೆಯುವಂತಾಯಿತು.

ಇಂಥ ಅಗಾಧ ಅನಂತತೆಯ ಹಿಂದೂಧರ್ಮವನ್ನು ‘ಕಾಂತಾರ’ ಚಲನಚಿತ್ರದ ನೆಪವನ್ನು ಮುಂದು ಮಾಡಿಕೊಂಡು ‘ಧರ್ಮ
ಹಿಂಸಾತ್ಮಕ’ ವ್ಯಕ್ತಿಯೊಬ್ಬ ಪ್ರಶ್ನಿಸುತ್ತಿದ್ದಾನೆ! ಈ ವ್ಯಕ್ತಿ ಯಾರು? ಇವನೇನು ಜಗತ್ತಿನ ಎಲ್ಲ ಜಾತಿ-ಧರ್ಮಗಳನ್ನು ಅಧ್ಯಯನ ಮಾಡಿ ಭಾರತಕ್ಕೆ ಬಂದ ವಿದ್ವಾಂಸನೇ? ಭಾರತದ ಇತಿಹಾಸ -ಪರಂಪರೆಯ ಜ್ಞಾನವೇನಾದರೂ ಇವನಿಗಿದೆಯೇ? ಅಸಲಿಗೆ
ಈತನೇನು ಸಮಾಜ ಪರಿವರ್ತಕನೇ? ಇತಿಹಾಸಕಾರನೇ? ಇಲ್ಲ.

ಅದ್ಯಾವುದೂ ಅಲ್ಲದ ಈತ ಮಾಡಿದ್ದು ಒಂದೆರಡು ಸಿನಿಮಾ. ಅದೂ ರೌಡಿಸಂ ಚಿತ್ರಗಳಷ್ಟೇ. ಬೆಂಗಳೂರಿನಲ್ಲಿ ಅಕ್ರಮವಾಗಿ
ನೆಲೆಸಿದ್ದ ಬಾಂಗ್ಲಾದೇಶದ ರೊಹಿಂಗ್ಯಾಗಳ ಪರವಾಗಿ ನಿಂತಿದ್ದ ಈತನಿಗಿರುವ ದೊಡ್ಡ ಸಮಸ್ಯೆಯೆಂದರೆ ‘ಬ್ರಾಹ್ಮಣ-ವೈದಿಕ-ಹಿಂದೂ’ ಪದಗಳ ತುರಿಕೆ ಕಾಯಿಲೆ. ಅದ್ಯಾವ ಜನ್ಮದಲ್ಲಿ ಅದ್ಯಾವ ಬ್ರಾಹ್ಮಣರು ಈತನಿಗೆ ಅಪಚಾರವೆಸಗಿದ್ದರೋ
ಗೊತ್ತಿಲ್ಲ, ಈತ ‘ಆಜನ್ಮ ಬ್ರಾಹ್ಮಣದ್ವೇಷಿ’ ಆಗಿಬಿಟ್ಟಿದ್ದಾನೆ. ‘ಕಾಂತಾರ’ ಸಿನಿಮಾ ವೀಕ್ಷಿಸಿದ ನಂತರ ಈತ, ‘ಹಿಂದೂಧರ್ಮದ ಮತ್ತು ವೈದಿಕ ಪರಂಪರೆಯ ಅಸ್ತಿತ್ವವನ್ನು ಬಲಪಡಿಸಿಕೊಳ್ಳುವುದಕ್ಕಾಗಿ ಬುಡಕಟ್ಟು ಜನಾಂಗದವರನ್ನು ಸೇರಿಸಿಕೊಳ್ಳ  ಲಾಗಿದೆ’ ಎಂಬ ಆಣಿಮುತ್ತು ಉದುರಿಸಿಬಿಟ್ಟ.

ಎಂಥ ಅವಿವೇಕ ಈತನದ್ದು. ಸಮುದ್ರದೊಳಗೆ ನಿಂತು ನದಿಯ ನೀರುಗಳನ್ನು ಬೇರ್ಪಡಿಸುವ ವಿಕೃತ ಮನಸ್ಥಿತಿಯ ಇಂಥವ ರನ್ನು ಸಮಾಜ ಅದರಲ್ಲೂ ಮೊದಲಿಗೆ ಮಾಧ್ಯಮದವರು ನಿರ್ಲಕ್ಷಿಸಿ ದೂರವಿಡಬೇಕಿದೆ. ಇಂಥವರು ತಾವು ಮೈತುಂಬ ಬಟ್ಟೆ ಧರಿಸಿ ಮಾನವಂತರಾಗಿದ್ದೇವೆಂದು ಭಾವಿಸಿರುತ್ತಾರೆ; ಆದರೆ ಪ್ರಜ್ಞಾವಂತರಿಗೆ ಇವರು ಸಾಮಾಜಿಕವಾಗಿ ಬೆತ್ತಲೆಯಾಗೇ ಕಾಣುತ್ತಾರೆ.

ಇಂಥವರ ಮನಸ್ಥಿತಿಯ ಹಿಂದಿರುವ ಹುನ್ನಾರವನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿ. ದೇಶದೆಲ್ಲೆಡೆ ಸಂವಿಧಾನಾತ್ಮಕವಾಗಿ ಜನಾದೇಶ ಪಡೆದು ಅಽಕಾರಕ್ಕೆ ಬರುತ್ತಿರುವ ಬಿಜೆಪಿಯು ರಾಷ್ಟ್ರೀಯತೆಯನ್ನು ಪ್ರತಿಪಾದಿಸುತ್ತ, ಹಿಂದೂಗಳ ಮತ್ತು ಹಿಂದೂಧರ್ಮದ ಭವಿಷ್ಯವನ್ನು ಸುಭದ್ರಗೊಳಿಸುವಲ್ಲಿ ನಿರತವಾಗಿದೆ. ಇದರಿಂದಾಗಿ, ಭಯೋತ್ಪಾದಕರಷ್ಟೇ ಬೆದರಿ ಕಂಗಾಲಾಗಿ ಕೆಲಸವಿಲ್ಲದೆ ಇರುವೆ ಬಿಟ್ಟುಕೊಳ್ಳುತ್ತಿರುವುದು ದೇಶದೊಳಗಿನ ಎಡಪಂಥೀಯರು. ಬಿಜೆಪಿಯನ್ನು ದುರ್ಬಲ ಗೊಳಿಸುವುದು ಇವರ ಮೊದಲ ಸಂಚು.

ಅದಕ್ಕಾಗಿ ಬಿಜೆಪಿಯ ವೋಟ್‌ಬ್ಯಾಂಕ್ ಅನ್ನು ನಾಶಮಾಡಬೇಕು. ಕರ್ನಾಟಕದ ಮಟ್ಟಿಗೆ ಹೇಳಬೇಕೆಂದರೆ, ಬಿಜೆಪಿಗೆ ಬಹುಪಾಲಿನ ಬಲನೀಡಿರುವುದು ಲಿಂಗಾಯತ ಸಮುದಾಯ ಮತ್ತು ಉತ್ತರ ಕರ್ನಾಟಕದ ಮತದಾರರು. ಇಂಥ
ಲಿಂಗಾಯತ-ವೀರಶೈವ ಸಮುದಾಯವನ್ನು ಹಿಂದೂಧರ್ಮದಂದ ಬೇರ್ಪಡಿಸಿ ಪ್ರತ್ಯೇಕ ಧರ್ಮವನ್ನು ಸ್ಥಾಪಿಸುವುದಕ್ಕೆ ದೊಡ್ಡಮಟ್ಟದಲ್ಲಿ ಪ್ರಯತ್ನಕ್ಕಿಳಿದರು.

ಆದರೆ, ಲಿಂಗಾಯತ-ವೀರಶೈವ ಬಾಂಧವರ ನೆಲಗಟ್ಟನ್ನು ನೈಜವಾಗಿ ಅರಿತಿದ್ದ ‘ನಡೆದಾಡುವ ದೇವರು’ ಶ್ರೀ ಶಿವಕುಮಾರ ಸ್ವಾಮೀಜಿಗಳು, ರಂಭಾಪುರಿ ಶ್ರೀಗಳು, ಸುತ್ತೂರು ಶ್ರೀಗಳ ಜ್ಞಾನದಿಂದಾಗಿ ಅದು ಸಾಧ್ಯವಾಗಲಿಲ್ಲ. ಇನ್ನು ಬಿಜೆಪಿಗೆ ಅತಿದೊಡ್ಡ ವೋಟ್‌ಬ್ಯಾಂಕ್ ಇರುವುದು ಮಲೆನಾಡು ಕರಾವಳಿಯ ಮಂಗಳೂರು ಭಾಗ. ರಾಜ್ಯದಲ್ಲಿ ಹಿಂದೂಪರ ಹೋರಾಟ ವೆಂಬುದು ಇದ್ದರೆ ಅದರ ಶಕ್ತಿ ಈ ಭಾಗಗಳದ್ದೇ. ಅಂಥ ಭಾಗದಲ್ಲಿ ಈಗ, ದಲಿತರು ಬುಡಕಟ್ಟು ಜನಾಂಗ ಎಂಬ ಅಂತರವನ್ನು ಸೃಷ್ಟಿಸಿ ಹಿಂದುತ್ವದ ಶಕ್ತಿಯನ್ನು ಕುಗ್ಗಿಸಿಬಿಟ್ಟರೆ, ಬಿಜೆಪಿಯೊಂದಿಗೆ ಹಿಂದೂಧರ್ಮದ ಶಕ್ತಿಯನ್ನೂ ಕುಗ್ಗಿಸಬಹುದು ಎಂಬ ವಿನಾಶಕಾರಿ ಆಲೋಚನೆಯೇ ಈ ‘ಧರ್ಮಹಿಂಸಕ’ ಪಡೆಯವರದ್ದಾಗಿದೆ.

‘ಕಾಂತಾರ’ ಚಿತ್ರದಿಂದಾಗಿ ಈಗ ದಲಿತರು ನಿರ್ವಹಿಸುವ ದೈವಾರಾಧನೆಗೆ ವಿಶ್ವಮಾನ್ಯತೆ ದೊರಕಿಬಿಟ್ಟಿದೆ. ದೈವಾರಾಧ ನೆಯ ದಿನಗಳಲ್ಲಿ ಮಾತ್ರ ಅವರಿಗೆ ಮಹತ್ವವಿದ್ದ ಕಾಲವು ಈಗ ಬದಲಾಗಿ, ಎಲ್ಲ ಜಾತಿಗಳವರು ಈ ದೈವಾರಾಧನೆಯ ದಲಿತ ಸಮುದಾಯವನ್ನು ಮತ್ತಷ್ಟು ಗೌರವದಿಂದ, ಭಕ್ತಿ-ಪೂಜ್ಯಭಾವದಿಂದ ಕಾಣುವಂತಾಗಿದೆ. ಆದರೆ ಈ ‘ಧರ್ಮಹಿಂಸಕ’
ಪಡೆಯವರು ಅವರನ್ನು ಹಿಂದೂಧರ್ಮದಿಂದ ವಿಂಗಡಿಸಿ ಭೂತಾರಾಧನೆಯಿಂದ ಮುಕ್ತಗೊಳಿಸಿ, ಭೂತಕಾಲಕ್ಕೆ ತಳ್ಳಿ ಮತ್ತೊಮ್ಮೆ ಅವರನ್ನು ಅಸ್ಪೃಶ್ಯರನ್ನಾಗಿಸುವ ಕುತಂತ್ರಕ್ಕೆ ಇಳಿದಂತಿದೆ.

ಅಲ್ಲದೆ ಅವರನ್ನು ದಾರಿತಪ್ಪಿಸಿ ಕೈಗೆ ಬಂದೂಕು ಕೊಟ್ಟು ಸರಕಾರದ ಮತ್ತು ಹಿಂದುತ್ವದ ವಿರುದ್ಧ ತಿರುಗಿಬೀಳುವಂಥ ನಕ್ಸಲ್‌ವಾದಕ್ಕೂ ದೂಡುವುದು ಇಂಥವರ ದೂರದ ದುರುದ್ದೇಶವೆಂದರೆ ತಪ್ಪಾಗಲಾರದು. ಹಿಂದೂಧರ್ಮದ ಕೊಂಬೆ ಗಳಾಗಿದ್ದ ಬೌದ್ಧ, ಜೈನ, ಸಿಖ್ ಸಮುದಾಯಗಳನ್ನು ಈಗಾಗಲೇ ‘ಅಲ್ಪಸಂಖ್ಯಾತರ’ ಪಟ್ಟಿಗೆ ಸೇರಿಸಿ ಸಂವಿಧಾನಾತ್ಮಕವಾಗಿ ಹಿಂದೂಧರ್ಮದ ವಿಸ್ತಾರವನ್ನು ಕತ್ತರಿಸಿ ಹಾಕಲಾಗಿದೆ. ಮುಗ್ಧ ಬುಡಕಟ್ಟು ಜನಾಂಗದವರು ಮತ್ತು ದಲಿತ ಸಮುದಾಯ ದವರನ್ನು ಇಸ್ಲಾಂ ಜಿಹಾದಿಗಳು ಇತ್ತೀಚೆಗೆ ‘ನಮ್ಮವರು’ ಎಂದು ಸಂಬೋಧಿಸಿ, ಅವರನ್ನು ಹಿಂದೂಧರ್ಮದ ವಿರುದ್ಧ ‘ಬಳಸಿಕೊಳ್ಳುವ’ ಪ್ರಯತ್ನಕ್ಕಿಳಿದಿದ್ದಾರೆ.

ಅಲ್ಲದೆ, ಪಕ್ಕದ ತೆಲಂಗಾಣದಲ್ಲಿ ಲೋಕಸೇವಾ ಪರೀಕ್ಷೆ ಬರೆಯಲು ಮುಸ್ಲಿಂ ಮಹಿಳೆಯರಿಗೆ ಬುರ್ಖಾ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಿ, ಹಿಂದೂ ಮಹಿಳೆಯರಿಗೆ ಬಳೆ-ಕಿವಿಯೋಲೆ -ಕಾಲ್ಗೆಜ್ಜೆ-ಕಾಲುಂಗುರವಲ್ಲದೆ ತಾಳಿಯನ್ನೂ
ಬಿಚ್ಚಿಟ್ಟು ಪರೀಕ್ಷೆ ಬರೆಯಲು ಸೂಚಿಸಿ ಹಿಂದೂಗಳನ್ನು ಹಿಂಸಿಸುವ ಢೋಂಗಿ ಸರಕಾರವಿದೆ. ವರುಷಕ್ಕೊಮ್ಮೆ ಬರುವ ದೀಪಾವಳಿ ಆಚರಣೆಯ ವೇಳೆ ಪಟಾಕಿಗೆ ದಂಡ ಮತ್ತು ಜೈಲುಶಿಕ್ಷೆ ವಿಧಿಸುವ ಆಮ್ ಆದ್ಮಿ ಸರಕಾರ ದೆಹಲಿಯಲ್ಲಿದೆ. ಇಂಥವರೊಂದಿಗೆ ಈ ‘ಧರ್ಮಹಿಂಸಕ’ರು, ಕಮಲಹಾಸನ್ ರಂಥ ಅವಕಾಶವಾದಿಗಳು, ಬುದ್ಧ- ಬಸವ-ಗಾಂಧಿ ತತ್ತ್ವವೆಂದು ಹೇಳಿಕೊಳ್ಳುವ ಢೋಂಗಿ ರಾಜಕಾರಣಿ ಗಳೂ ಸೇರಿಕೊಂಡು ಅಖಂಡ ಹಿಂದೂಧರ್ಮವನ್ನು ಛಿದ್ರಗೊಳಿಸುವ ಮಾನಸಿಕತೆಗೆ ಒಡ್ಡಿಕೊಂಡಿರುವುದು ದುರ್ದೈವ.

ಶತಶತಮಾನಗಳಿಂದ ಇಸ್ಲಾಂ ಭಯೋತ್ಪಾದಕರು ಹಿಂದೂಧರ್ಮದ ಮೇಲೆ ದಾಳಿ ಮಾಡಿ, ಗುಡಿ- ಗೋಪುರಗಳನ್ನು ನಾಶಮಾಡಿ, ಅದರ ಮೇಲೆ ಮಸೀದಿ-ಸಮಾಧಿಗಳನ್ನು ಕಟ್ಟಿ, ಕೋಟ್ಯಂತರ ಹಿಂದೂಗಳ ಮಾರಣಹೋಮ ಮಾಡಿದರು.
ಇನ್ನೊಂದೆಡೆ ಬ್ರಿಟಿಷರು ಬಲವಂತದ ಮತಾಂತರಕ್ಕೆ ಮುಂದಾಗಿ ಹಿಂದೂಗಳನ್ನೇ ಬಳಸಿಕೊಂಡು ಕ್ರಿಶ್ಚಿಯನ್ ಜನಸಂಖ್ಯೆ ಯನ್ನು ಹುಟ್ಟಿಸಿದರು. ಇಷ್ಟಾದರೂ, ಹಿಂದೂಧರ್ಮದ ದ್ಯೋತಕವಾದ ಬರಿಯ ಒಂದು ‘ಕಾಂತಾರ’ ಎಂಬ ಸಿನಿಮಾ ವಿಶ್ವಾದ್ಯಂತ ಈ ಪರಿಯ ಸದ್ದುಮಾಡುತ್ತಿದೆಯೆಂದರೆ, ಇನ್ನು ಈ ‘ಧರ್ಮಹಿಂಸಕ’ ಪುಟಗೋಸಿಗಳದ್ದು ಯಾವ ಲೆಕ್ಕ!

ಅಂದಹಾಗೆ, ‘ಕಾಂತಾರ’ ಚಿತ್ರದ ಓಟವನ್ನು ಗಮನಿಸಿದರೆ ಚಿತ್ರಕ್ಕೆ ‘ದೈವ ಆವಾಹನೆ’ ಆಗಿರುವುದು ಗೋಚರಿಸುತ್ತದೆ.
ಇದರ ಅನುಭೂತಿ ರಿಷಭ್ ಶೆಟ್ಟಿಯೂ ಸೇರಿ ಇಡೀ ತಂಡಕ್ಕೆ ಆಗಿರುವುದು ಸುಳ್ಳಲ್ಲ. ೬೦ ವರ್ಷ ತುಂಬಿದ ದೈವನರ್ತಕರಿಗೆ ಸರಕಾರವು ೨ ಸಾವಿರ ರುಪಾಯಿಗಳ ಮಾಸಾಶನ ಘೋಷಿಸಿರುವುದು ಸಕಾರಾತ್ಮಕ ಬೆಳವಣಿಗೆ. ಇದು ‘ಕಾಂತಾರ’ ಚಿತ್ರ ಮಾಡಿದ ಅದ್ಭುತ ಸಾಮಾಜಿಕ ಪರಿವರ್ತನೆ.